ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರುಣತೆಯ ಕೋಮಲ ಅಭಿವ್ಯಕ್ತಿ

Published 24 ಫೆಬ್ರುವರಿ 2024, 23:30 IST
Last Updated 24 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

‘ಗುಲ್ಜಾರ್’ ಅಂದರೆ ಅರಬ್ಬಿಯಲ್ಲಿ ಅರಳಿದ ಹೂಗಳ ತೋಟ. ಆದರೆ ಅವರ ಕಾವ್ಯದಲ್ಲಿ ಹೂವುಗಳ ಶವಯಾತ್ರೆಯೂ ಇದೆ. ಗುಂಡಿಗೆ ಎದೆಯೊಡ್ಡಿ ಮನೆಯ ಹೊಸ್ತಿಲ ಮೇಲೆ ಬಿದ್ದ ಸತ್ಯಶೋಧಕ ಗುರುವಿನ ರಕ್ತಸಿಕ್ತ ದೇಹವೂ ಇದೆ. ಹುತಾತ್ಮ ಸೈನಿಕನ ಸಮವಸ್ತ್ರವನ್ನು ಮತ್ತೆ ಮತ್ತೆ ತೊಳೆವ ವಿಧವೆ ಹೆಣ್ಣುಮಗಳಿದ್ದಾಳೆ. ಸ್ವಾತಂತ್ರೋತ್ತರ ಭಾರತದ ಬಹುಮುಖಿ ಸಂಕಟ ಹಾಗೂ ದಾರ್ಶನಿಕ ಕನಸುಗಾರಿಕೆಗಳನ್ನು ತಮ್ಮ ಕಾವ್ಯದಲ್ಲಿ ಬಿತ್ತಿ ಬೆಳೆದು ‘ಗುಲ್ಜಾರ್’ ಪದಕ್ಕೆ ಹೊಸ ಅರ್ಥವಂತಿಕೆಯನ್ನು ತುಂಬಿದರು. ಕೋಮಲ ಭಾಷೆಯ ಮಾರ್ದವ ಮನಸ್ಸು ಬದುಕಿನ ಕಠೋರತೆಗೆ ಬೆಚ್ಚಿ ಪಲಾಯನ ಮಾಡುವುದು ಒಂದು ಸಾಧ್ಯತೆ. ಬದುಕಿನ ದಾರುಣತಗಳೆಲ್ಲವನ್ನೂ ಮಾರ್ದವ ಮನಸ್ಸು ಕೋಮಲ ಭಾಷೆಯಲ್ಲಿಯೇ ಧ್ಯಾನಸ್ಥವಾಗಿ ಅಭಿವ್ಯಕ್ತಿಸುವುದು ಇನ್ನೊಂದು ಸಾಧ್ಯತೆ. ಈ ಎರಡನೆಯ ಸಾಧ್ಯತೆಯ ಮೂಲಕ ಕಾವ್ಯಭಾಷೆಗೆ ಹೊಸ ಆಯಾಮ ನೀಡಿ ಉರ್ದುವಿಗೆ ಜ್ಞಾನಪೀಠ ಪ್ರಶಸ್ತಿಯ ಗೌರವವನ್ನು ಸಂದಾಯ ಮಾಡಿದ್ದಾರೆ.

‘ಗುಲ್ಜಾರ್’ ಕಾವ್ಯನಾಮ. ಹೆಸರು ಸಂಪೂರ್ಣಸಿಂಗ್‌ ಕಾಲ್ರಾ. ತಂದೆ ಮಖಾನ್ ಸಿಂಗ್ ಕಾಲ್ರಾ ವ್ಯಾಪಾರಿ. ಮುಖವೂ ನೆನಪಿರಲಾರದಷ್ಟು ಮೊದಲೇ ತೀರಿಹೋದ ತಾಯಿ ಸುಜನ್ ಕೌರ್. ಹುಟ್ಟಿದ್ದು ಆಗಸ್ಟ್‌ 18, 1936. ಈಗಿನ ಪಾಕಿಸ್ತಾನದ ಜೇಲಂ ಜಿಲ್ಲೆಯ ದೀನಾ ಎಂಬ ಹಳ್ಳಿಯಲ್ಲಿ. ಮಲತಾಯಿ ಮಲಸಹೋದರರ ಬಳಕೆಯ ವಸ್ತುವಾಗಿದ್ದ ಸಂಪೂರ್ಣಸಿಂಗ್ ಘಾಸಿಗೊಂಡಿದ್ದ. ಇದಕ್ಕಿಂತಲೂ ಭೀಕರ ದೇಶ ವಿಭಜನೆಯ ಹಿಂಸಾಕಾಂಡ. ರಸ್ತೆಯಲ್ಲಿ ಕಾಲಕೆಳಗೇ ತೂರಿ ಬರುವ ಹೆಣಗಳು. ಕಂಡದ್ದಕ್ಕೆಲ್ಲ ಬೆಂಕಿ ಇಟ್ಟು ಸಿಕ್ಕದ್ದನ್ನೆಲ್ಲ ಲೂಟಿ ಮಾಡುವ ಗಲಭೆಕೋರರು. ಅತ್ಯಾಚಾರಕ್ಕೊಳಗಾದ ಹೆಣ್ಣುಗಳ ಆಕ್ರಂದನ, ಇರಿದು ಕೊಂದ ಮೇಲೂ ದೇಹಗಳನ್ನು ತುಂಡು ಮಾಡಿ ಬಿಸಾಕಿ ಬೀದಿ ನಲ್ಲಿಯಲ್ಲಿ ಕೈತೊಳೆವ ಗಂಡಸರು, ಅರೆಬೆಂದ ದೇಹ, ಬಿಡಿಬಿಡಿ ಅಂಗಾಂಗಗಳನ್ನು ಹೊತ್ತೊಯ್ಯುವ ಕಸ ತುಂಬುವ ಲಾರಿಗಳು... ಇಂಥ ದುರ್ದಿನಗಳಲ್ಲೂ ಅಪ್ಪ ಮಖಾನ್ ಸಿಂಗ್ ಮತ್ತು ಅವನ ಮುಸ್ಲಿಂ ಗೆಳೆಯರು ಪರಸ್ಪರ ರಕ್ಷಣೆ ನೀಡುತ್ತ ಮನುಷ್ಯತ್ವವನ್ನು ಉಸಿರಾಡುತ್ತಿದ್ದರು. ಬಾಲ್ಯದಲ್ಲಿ ಕಂಡ ಈ ಕ್ರೌರ್ಯ ಮತ್ತು ಮಾನವೀಯತೆ ಗುಲ್ಜಾರ್ ಅವರನ್ನು ಕವಿಯಾಗಿ ರೂಪಿಸಿದವು.

ಎಸ್ಸೆಸ್ಸೆಲ್ಸಿ ಪಾಸು ಮಾಡಿ ಸದಾ ಸಾಹಿತ್ಯದ ಗುಂಗಿನಲ್ಲಿದ್ದ ಸಂಪೂರ್ಣನನ್ನು ಬಡ ಸಾಹಿತಿಯಾದಾನೆಂಬ ಆತಂಕದಲ್ಲಿ ಮಖಾನ್‌ ಸಿಂಗ್ ಮುಂಬೈನಲ್ಲಿ ವ್ಯಾಪಾರಿಯಾಗಿದ್ದ ಹಿರಿಯ ಮಗ ಜಸ್ಮಿರ್‌ನಿಗೆ ಒಪ್ಪಿಸುತ್ತಾರೆ. ಅಣ್ಣನ ವ್ಯವಹಾರಕ್ಕೆ ದುಡಿಯುತ್ತ ರಾತ್ರಿ ಬೀದಿಬೀದಿಗಳನ್ನು, ಉದ್ಯಾನಗಳನ್ನು ಸುತ್ತುತ್ತ, ಸಂಗೀತ ಕಛೇರಿ, ಚಿತ್ರಕಲಾ ಪ್ರದರ್ಶನಗಳಿಗೆ ಲಗ್ಗೆ ಇಡುತ್ತ, ಗಜಲ್, ಶಾಹಿರಿ ಹಾಗೂ ಕವಿತೆಗಳನ್ನು ಬರೆಯುತ್ತ ಹೆಸರು ಮಾಡುತ್ತಿರುವಾಗಲೇ ಭಾರತದ ಸಾಂಸ್ಕೃತಿಕ ಬದುಕಿಗೆ ಹೊಸ ತಿರುವು ನೀಡಿದ ಪ್ರಗತಿಶೀಲ ಬರಹಗಾರರ ಒಕ್ಕೂಟ ಹಾಗೂ ಭಾರತೀಯ ಜನಕಲಾ ಮಂಡಳಿಗಳ ಸಂಪರ್ಕ ಒದಗಿ ಬಂತು.

ಸರ್ದಾರ್ ಜಾಫರಿ, ಕೃಷ್ಣಚಂದರ್, ಕೈಫಿ ಆಜ್ಮಿ, ಫೈಜ್ ಅಹಮದ್ ಫೈಜ್, ಸಾಹಿರ ಲುದಿಯಾನ್ವಿಯವರಂಥ ಹಿರಿಯರ ಒಡನಾಟದಲ್ಲಿ ಓದುವ, ಬರೆಯುವ ಉತ್ಸಾಹ ಮುಗಿಲಿಗೇರಿತು. ತೀವ್ರ ಸಂವೇದನಾಶೀಲ ಮನಸ್ಸಿಗೆ ಸಿಕ್ಕ ಸಮಾಜವಾದಿ ಚಿಂತನೆಯ ತಾತ್ವಿಕ ಸ್ಪರ್ಶ ಅವರ ಸೃಜನಶೀಲ ವ್ಯಕ್ತಿತ್ವದ ಚಿಮ್ಮು ಹಲಗೆಯಾಯಿತು. ಅದೇ ವೇಳೆಗೆ ಪಂಜಾಬಿ ಸಾಹಿತ್ಯದ ಪ್ರಸಿದ್ಧ ಲೇಖಕರಾದ ಗುರುವೆಲ್ ಸಿಂಗ್ ಪನ್ನು, ರಾಜೆಂದ್ರಸಿಂಗ್ ಬೇಡಿ, ಬಲರಾಮ ಸಿನ್ಹಾ ಅವರೊಂದಿಗೆ ಸ್ನೇಹ ಬೆಳೆದು ಸಾಹಿತ್ಯವೇ ತನ್ನ ಕರ್ಮಭೂಮಿ ಎಂಬುದನ್ನು ಖಚಿತಪಡಿಸಿಕೊಂಡರು.

ಮನೆ ಬಿಟ್ಟು ಸುದರ್ಶನ ಭಕ್ಷಿಯವರ ವಿಚಾರೆ ಗ್ಯಾರೇಜಿನಲ್ಲಿ ಕಾರುಗಳ ಕಿತ್ತು ಹೋದ ಭಾಗಕ್ಕೆ ಬಣ್ಣ ಬಳಿಯುವ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಕಾರುಗಳ ನಿಜ ಬಣ್ಣಕ್ಕೆ ಸರಿಹೊಂದುವ ಬಣ್ಣವನ್ನು ಸಿದ್ಧಪಡಿಸುವ ಹಾಗೂ ಅದನ್ನು ಅಚ್ಚುಕಟ್ಟಾಗಿ ಬಳಿಯುವ ಕಲೆ ಪಾರಂಗತನಾಗುವುದರೊಂದಿಗೆ ಬದುಕಿನ ಕಿತ್ತು ಹೋದ ಭಾಗಗಳಿಗೆ ಕಾವ್ಯಕುಂಚದಲ್ಲಿ ಬಣ್ಣ ಬಳಿಯುವ ಕಲೆಯಲ್ಲೂ ಪರಿಣತರಾದರು. ಹೃದಯಸ್ಪರ್ಶಿ ಶಾಯರಿ, ಗಜಲ್, ಭಾವಗೀತೆಗಳನ್ನು ಬರೆದು ಹೆಸರು ಮಾಡಿದ್ದ ಗುಲ್ಜಾರ್ ಅವರನ್ನು ದೇಬು ಸೇನ್ ಬಿಮಲ್‌ರಾಯ್ ಅವರಿಗೆ ಭೇಟಿ ಮಾಡಿಸುತ್ತಾರೆ.

ಎಸ್.ಡಿ. ಬರ್ಮನ್ ಸಂಗೀತ ನಿರ್ದೇಶನದಲ್ಲಿ ‘ಬಾಂದಿನಿ’ ಸಿನಿಮಾಕ್ಕೆ ‘ಮೋರಾ ಗೊರಾ ಅಂಗ ಲಯಿ ಲೇ’ ಎಂಬ ಗೀತೆ ಬರೆಯುವ ಮೂಲಕ ಆರಂಭವಾದ ಅವರ ಸಿನಿ ಪಯಣ ಸಂಗೀತ ನಿರ್ದೇಶನ, ಚಿತ್ರ ನಿರ್ದೇಶನ, ಚಿತ್ರಕಥೆ ರಚನೆ, ಚಿತ್ರ ನಿರ್ಮಾಣಗಳಿಗೂ ವ್ಯಾಪಿಸಿತು. ‘ಹಮ್ ಕೋ ಮನ್ ಕಿ ಶಕ್ತಿ ದೇನಾ ಮನ್ ವಿಜಯ ‘ ಮೇರಾ ಕುಛ್ ಸಾಮಾನ್; ದಿಲ್‌ ಢೂಂಡತಾ ಹೈ,’ ‘ಛಂಯಾ, ಛಂಯಾ,’ ಮೊದಲಾದ ಹಾಡುಗಳು ಜನಪದಗೀತೆಗಳ ಹಾಗೆ ಜನರ ನಾಲಿಗೆಯ ಮೇಲಿವೆ. ಆಂಧಿ, ಮಾಸೂಮ್‌, ಮಾಚಿಸ್‌, ಹುತುತು, ಪರಿಚಯ್‌ದಂತಹ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 

ಪ್ರತಿ ಕ್ಷೇತ್ರದಲ್ಲೂ ಅದ್ಭುತ ಸಾಧನೆ ಮಾಡಿ ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದದ್ದು ಅವರ ವ್ಯಕ್ತಿತ್ವದ ಗುಣಾತ್ಮಕತೆಗೆ ಸಾಕ್ಷಿ. ಆ ಕಾಲದ ಪ್ರಸಿದ್ಧ ನಟಿ ಮೀನಾಕುಮಾರಿಯ ಸಂಕಟದ ಗಳಿಗೆಯಲ್ಲಿ ಅವರ ಅತ್ಯಾಪ್ತ ಸ್ನೇಹಿತರಾಗಿದ್ದ ಗುಲ್ಜಾರ್‌, ಅವರ ನಿಧನದ ನಂತರ 1973ರಲ್ಲಿ ರೂಪದರ್ಶಿ ನಟಿ ರಾಖಿಯನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಮಗಳು ಮೇಘನಾ ಕೂಡ ಚಿತ್ರ ನಿರ್ದೇಶಕಿ, ನಿರ್ಮಾಪಕಿಯಾಗಿದ್ದಾರೆ.

‘ತೋಬಾ ತೇಕಸಿಂಗ್‌ನನ್ನು ನೋಡಬೇಕು ವಾಘಾದ ಗಡಿಯಲ್ಲಿ, ಅವನಿನ್ನೂ ನಿಂತೇ ಇದ್ದಾನೆ ಮಂಟೋ ಬಿಟ್ಟು ಹೋದ ಜಾಗದಲ್ಲಿ’ ಎನ್ನುವ ಗುಲ್ಜಾರ್, ಸಾದತ್ ಹಸನ್ ಮಂಟೋ ಯಾವುದನ್ನು ಕಥೆಗಳಲ್ಲಿ ತರಲು ಯತ್ನಿಸಿದರೋ ಅದನ್ನು ಕಾವ್ಯದಲ್ಲಿ ಅಭಿವ್ಯಕ್ತಿಸಲು ಹಾತೊರೆದರು. ‘ನನ್ನದೆಲ್ಲವನ್ನೂ ಎತ್ತಿಕೊಂಡು ಬಂದೆ ಸರಹದ್ದಿನ ಈ ಬದಿಗೆ, ನನ್ನ ರುಂಡವನ್ನು ಕತ್ತರಿಸಿಟ್ಟರು ಆ ಬದಿಗೆ , ಅವರಿಗೆ ನನ್ನನ್ನಗಲಿ ಇರಲು ಸಾಧ್ಯವಿಲ್ಲ’, ಎಂಬಂಥ ದಿಕ್ಕೆಡಿಸಿಬಿಡುವ ಕವಿತೆಗಳನ್ನು ಗುಲ್ಜಾರ್ ಬರೆದಿದ್ದಾರೆ.

‘ಅದೇನು ಮಾಡಿತ್ತು ಪಾಪ ಒಂಬತ್ತರ ಹಸುಗೂಸು ಕೆಂಡಗಣ್ಣಿನ ಗುಂಪು ಕೊಚ್ಚಿ ಹಾಕಿತು’ ಹೀಗೆ ದೇಶ ವಿಭಜನೆಯ ಕಾಲದ ಹಿಂಸೆಯ ಅಸಂಖ್ಯ ಆಯಾಮಗಳನ್ನು ದರ್ಶಿಸುತ್ತ ಮಾನವೀಯತೆಗಾಗಿ ಮೊರೆ ಇಡುತ್ತದೆ ಅವರ ಕಾವ್ಯ. ಮಾನವ ಸಂಬಂಧಗಳ ದುರಂತದ ನಿರ್ವಚನ ಹಾಗೂ ಅವುಗಳನ್ನು ನೇಯುವ ಕನಸುಗಾರಿಕೆ ಅವರ ಸೃಜನಶೀಲತೆಯ ಕೇಂದ್ರ ಕಾಳಜಿಗಳಾಗಿವೆ. ಗುಲ್ಜಾರ್‌ ಮಹಿಳಾ ಶೋಷಣೆಯ ಆಯಾಮಗಳನ್ನೂ ಚಿತ್ರಿಸಿದ್ದಾರೆ. ‘ಒಬ್ಬಳು ನಿಶ್ಯಕ್ತ ಹೆಣ್ಣುಮಗಳು. ನಾಲ್ವರು ಬಲಿಷ್ಠ ಗಂಡಸರು. ಗೋಡೆಗೆ ಆನಿಸಿ ಅತ್ಯಾಚಾರ ಮಾಡಿಬಿಟ್ಟರು’ ಎಂಬಂಥ ತಲ್ಲಣದ ಚಿತ್ರಗಳಿವೆ. ಬದುಕಿನ ಮೂಲ ಚೂಲಗಳನ್ನು ಶೋಧಿಸುವ, ಕಾಲದ ನಿರಂತರತೆಯನ್ನು ನಿರ್ವಚಿಸುವ, ಪ್ರಕೃತಿ ನಾಶದ ಬಗ್ಗೆ ನೋಯುವ, ಮಾನವ ಸಂಬಂಧಗಳ ಆರ್ದ್ರ ನೆಲೆಗಳನ್ನು ಶೋಧಿಸುವ ಬಹುಮುಖಿ ಆಶಯದ ಗುಲ್ಜಾರ್ ಅವರ ಕಾವ್ಯಕ್ಕೆ ಜ್ಞಾನಪೀಠ ಸಂದಿರುವುದು ನಿಜವಾಗಿಯೂ ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT