ಕುವೆಂಪು ಕವಿ ಪ್ರತಿಭೆ ವಸಂತ ಋತುವನ್ನು ಕರ್ಣಚೈತ್ರವಾಗಿ ಆಲಿಸಿದೆ. ವಸಂತ ಋತುವಿನ ಗತಿಶೀಲತೆಗೆ ಹಕ್ಕಿಗಳು ಪ್ರತೀಕವಾಗಿವೆ. ವಸಂತ ಋತುವನ್ನು ಇದುವರೆಗೆ ಅನುಭವಿಸಿ ವರ್ಣಿಸಿದ ಕವಿಗಳಿಗಿಂತ ಭಿನ್ನವಾಗಿ- ಪಕ್ಷಿಗಳ ನಾದಾನುಭವದಲ್ಲಿ ಲೀನವಾಗಿ ಆ ಋತುವನ್ನು ‘ಕರ್ಣಚೈತ್ರ’ ಎಂದು ಕರೆದಿದ್ದಾರೆ. ಅದು ವಸಂತ ಋತುವಿನ ಕರ್ಣಾನಂದ ರಸತತ್ವವನ್ನು ಆಸ್ವಾದಿಸಿ ಕಾವ್ಯದಲ್ಲಿ ಪ್ರಕಟಿಸಿದ ಆಹ್ಲಾದ. ಪಕ್ಷಿಗಳು ಆ ಋತುವಿನ ಧ್ವನಿಯಾಗಿ, ಪ್ರಕೃತಿಯ ಸಂವಹನ ಧಾತುವಾಗಿರುವ ಕಲ್ಪನಾ ಸೌಂದರ್ಯ ಕಾವ್ಯದಲ್ಲಿ ಹೊಸತು.