ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೆಂಪು ಪದ ಸೃಷ್ಟಿ | ದೊರೆನಿರಿಗೆ

Published 24 ಆಗಸ್ಟ್ 2024, 23:30 IST
Last Updated 24 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ದೊರೆನಿರಿಗೆ

ದೊರೆನಿರಿಗೆ (ನಾ.) ರಾಜನಿಗೆ ತಕ್ಕಂಥ ಮರ್ಯಾದೆ, ರೀತಿ, ರಾಜಮರ್ಯಾದೆ

ಮಾವ ಮಾರೀಚನು ತನ್ನ ಆಶ್ರಮಕ್ಕೆ ದೊರೆ ರಾವಣನು ಬಂದಾಗ, ರಾಜನನ್ನು ಉಪಚರಿಸುವ ಪದ್ಧತಿ, ರೀತಿ ಅನುಸರಿಸಿದನು. ಅದನ್ನು ತಿಳಿಸಲು ಕುವೆಂಪು ಅವರು ‘ದೊರೆನಿರಿಗೆ’ ಪದ ರೂಪಿಸಿ ಹೀಗೆ ಪ್ರಯೋಗಿಸಿದ್ದಾರೆ:

‘ದೊರೆಯನುಪಚಪರಿಸಿದನು ದೊರೆನಿರಿಗೆಯಿಂ’ (2.1 : 204)

ಗಂಡುಗಂಡ

ಗಂಡುಗಂಡ (ನಾ). ಕಠಿಣವಾದ ಕೆನ್ನೆ, - ಕಪೋಲ

ವಾಲಿ ಮತ್ತು ಮಾಯಾವಿ ಮಹಾಗುಹೆ ಪ್ರವೇಶಿಸಿ ಹೋರಾಡುತ್ತ ಹತ್ತು ವರ್ಷಗಳು ಕಳೆಯುವವು. ಗುಹೆಯ ಬಾಗಿಲಿನಲ್ಲಿ ಅಣ್ಣ ವಾಲಿಗಾಗಿ ಕಾಯುತ್ತಿದ್ದ ಸುಗ್ರೀವ ಗುಹೆಯಿಂದ ಹೊರಬಂದ ನೊರೆಯ ನೆತ್ತರು ನೋಡುತ್ತಾನೆ. ವಾಲಿ ಸತ್ತಿರಬಹುದೆಂದು ಭಾವಿಸಿಕೊಂಡು ಗುಹೆಯ ಬಿಲದ ಬಾಯಿಗೆ ಗಂಡು ಹೆಬ್ಬಂಡೆಯನ್ನು ಜಡಿದು ಕಿಷ್ಕಿಂಧೆಗೆ ಹಿಂದಿರುಗುತ್ತಾನೆ.

ಮಾಯಾವಿಯನ್ನು ಸಂಹರಿಸಿ ಬಂದ ಸಾಹಸಿ ವಾಲಿ ಬಂದು ನೋಡುತ್ತಾನೆ. ಸುತ್ತಲೂ ಕತ್ತಲೆ ಕವಿದು, ದಾರಿತೋರದಾಗಿ ಗುಹೆಯ ಗಂಟಲಿಗೆ ಬಂಡೆ ತುರುಕಿರುವುದು ಕಾಣುತ್ತಾನೆ. ಅದನ್ನು ರುದ್ರ ಅಟ್ಟಹಾಸದಿಂದ ಕೂಗಿ ಗರ್ಜಿಸಿ ತಳ್ಳುತ್ತಾನೆ. ಆಗ ಅದು ಸಿಡಿದ ರೀತಿಯನ್ನು ಕುವೆಂಪು ಅವರು ಒಂದು ಉಪಮಾನದಿಂದ ಚಿತ್ರಿಸಿದ್ದಾರೆ. ಮುಚ್ಚಿದ ಶೀಸೆಯನ್ನು ಕಾಯಿಸಲು ಅದರ ಮುಚ್ಚಳ ತಟಿಲ್ಲೆಂದು ಸಿಡಿಯುವ ರೀತಿ ಅದು ಸಿಡಿಯಿತು!

ಅದರಿಂದ ಸಿಡಿದ ಬಂಡೆ ವಾಲಿಯ ಕಠಿಣವಾದ ಕೆನ್ನೆಗೆ ಸಿಡಿಯಿತು. ಅವನ ಗಡುಸಾದ ಬಿರುಸಿನ ಕೆನ್ನೆಯನ್ನು ಕವಿ ಚಿತ್ರಿಸುವಾಗ ಹೊಸಪದ ‘ಗಂಡುಗಂಡ’ ಸೃಷ್ಟಿಸಿದ್ದಾರೆ. ‘ಗಂಡು’ ಪದದ ಅರ್ಥ ಬಿರುಸು, ಗಟ್ಟಿ. ಗಂಡಯೆಂದರೆ ಕಪೋಲ, ಕೆನ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT