ಪಶ್ಚಿಮ ಘಟ್ಟಗಳ ಮೇಲೆ ಅವ್ಯಾಹತವಾಗಿ ಪ್ರಹಾರಗಳು ನಡೆಯುತ್ತಿರುವ ಈ ದಿನಗಳಲ್ಲಿ ಪಶ್ಚಿಮ ಘಟ್ಟಗಳ ಅಧ್ಯಯನಕ್ಕಾಗಿ ತಮ್ಮ ಜೀವವನ್ನೇ ಮೀಸಲಿಟ್ಟಿದ್ದ ದೇಶದ ಅತಿ ಮುಖ್ಯ ಪರಿಸರ ವಿಜ್ಞಾನಿಯನ್ನು ಕಳೆದುಕೊಂಡಿದ್ದು ಪರಿಸರ ಮತ್ತು ಪಶ್ಚಿಮಘಟ್ಟಗಳ ಕುರಿತು ಚಿಂತನೆ ಮಾಡುತ್ತಿರುವ ಜನರಿಗೆ ಬಲು ದೊಡ್ಡ ಅಘಾತ.

ಇಡೀ ಪಶ್ಚಿಮ ಘಟ್ಟಗಳಿಗಾಗಿಯೇ ಬದುಕಿದ್ದ ಜೀವವದು. ಅದು ಕೇವಲ ಕುರುಡು ಪ್ರೀತಿಯಾಗಿರಲಿಲ್ಲ. ಬದಲಿಗೆ ಇಡೀ ಪಶ್ಚಿಮ ಘಟ್ಟಗಳನ್ನೂ ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ಘಟ್ಟಗಳು ತಮ್ಮೊಡಲಲ್ಲಿ ಸಲಹುತ್ತಿದ್ದ ಅಪಾರ ಜೀವ ರಾಶಿಯನ್ನೂ ಅಧ್ಯಯನ ಮಾಡಿ ಇದರ ಉಳಿವಿಲ್ಲದೆಯೇ ಭಾರತಕ್ಕೆ ಉಳಿವಿಲ್ಲ, ಈ ಭೂಗೋಳಕ್ಕೆ ಉಳಿವಿಲ್ಲ ಎಂದು ಸ್ಪಷ್ಟವಾದ ನಿರ್ಣಯಕ್ಕೆ ಬಂದ ನಂತರ ತಾಳಿದ ನಿಲುವಾಗಿತ್ತದು.

ಅಮೆರಿಕದಿಂದ ಜೀವವಿಜ್ಞಾನ, ಪರಿಸರ ವಿಕಾಸವಾದಗಳಲ್ಲಿ ಉನ್ನತ ವ್ಯಾಸಂಗ ಮುಗಿಸಿ ಭಾರತಕ್ಕೆ ಅವರು ಮರಳುವಾಗ ಮಿತ್ರರನೇಕರು ಹಿಂದೆಳೆಯಲು ಪ್ರಯತ್ನಿಸಿದ್ದರು. 'ಅಲ್ಲೇನಿದೆ ಭಾರತದಲ್ಲಿ? ಒಂದು ಒಳ್ಳೆಯ ನೌಕರಿಯೂ ಸಿಗಲಿಕ್ಕಿಲ್ಲ, ಅಧ್ಯಯನಕ್ಕೆ ಅವಕಾಶವೂ ಸಿಗಲಿಕ್ಕಿಲ್ಲ' ಎಂದು. ಆದರೆ ತನಗೇನು ಸಿಗುತ್ತದೆ ಎನ್ನುವುದಕ್ಕಿಂತ ತಾನೇನು ಮಾಡಬೇಕು ಎಂಬುದನ್ನೇ ಮುಖ್ಯವಾಗಿರಿಸಿಕೊಂಡು ಪತ್ನಿ ಸುಲೋಚನಾರೊಂದಿಗೆ ಭಾರತಕ್ಕೆ ಮರಳಿದರು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ(ಐಐಎಸ್ಸಿ)ಸುಲೋಚನಾ ಅವರಿಗೆ ಸಂದರ್ಶನಕ್ಕೆ ಕರೆ ಬಂದಾಗ ಅವರು ಮ್ಯಾಥಮ್ಯಾಟಿಕ್ ಬಯೋಲಾಜಿ ತಜ್ಞ ತಮ್ಮ ಪತಿಗೂ ಅವಕಾಶವಿದೆಯೇ ಎಂದು ಕೇಳಿದಾಗ ನಿರ್ದೇಶಕರಾಗಿದ್ದ ಸತೀಶ್ ಧವನ್ ಇಬ್ಬರನ್ನೂ ಒಟ್ಟಿಗೇ ಕೆಲಸಕ್ಕೆ ತೆಗೆದುಕೊಂಡರು.

ಐಐಎಸ್ಸಿಗೆ ಬಂದ ಗಾಡ್ಗೀಳರು ಮತ್ತೆ ಹಿಂದಿರುಗಿ ನೋಡಲಿಲ್ಲ. ಇಲ್ಲಿ ತಮ್ಮ ಕೆಲಸ ಮಾಡುತ್ತಲೇ ತಮ್ಮ ಪ್ರೀತಿಯ ಪಶ್ಚಿಮಘಟ್ಟಗಳ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತ ನಡೆದರು. ಪರಿಸರ ಕ್ಷೇತ್ರಕ್ಕೆ ಅವರ ಕೊಡುಗೆ ಒಂದೇ, ಎರಡೇ ? ಬಂಡೀಪುರದ ಆನೆಗಳ ಹಿಂಡಿನಿಂದ ಆರಂಭವಾದ ಅಧ್ಯಯನ, ಹಾಗೆಯೇ ಕೇರಳದ ಶಾಂತಕೊಳ್ಳ, ದಾಂಡೇಲಿಯ ಬಿದಿರು, ಕಾಡನ್ನೇ ನಂಬಿ ಬದುಕುತ್ತಿರುವ ಗೌಳಿ, ಕುಣಬಿ ಜನಾಂಗಗಳು, ಗೋವಾ ಮಹಾರಾಷ್ಟ್ರದಲ್ಲಿ ಹಬ್ಬಿದ ಸಹ್ಯಾದ್ರಿಯನ್ನು ದಾಟಿ, ಗುಜರಾತಿನ ತುದಿಯವರೆಗೂ ಹೋಗುತ್ತದೆ. ಅತ್ತಿ, ಆಲ, ಔದುಂಬರ, ಬಸರಿ, ಅರಳಿಯಂಥ ವರ್ಷವಿಡೀ ಹೂಹಣ್ಣು ಕೊಡುವ ಬೃಹತ್ ಮರಗಳಷ್ಟೇ ಮುಖ್ಯ ಪುಟ್ಟ ಕಣಜೀರಿಗೆ ಕೂಡಾ ಅವರಿಗೆ. ಆನೆಗಳಷ್ಟೇ ಮುಖ್ಯ ಪುಟ್ಟ ಇರುವೆಯೂ ಕೂಡ. ಮೀನುಗಳಷ್ಟೇ ಮುಖ್ಯ ಹಾರುವ ಪಕ್ಷಿಗಳೂ ಕೂಡ. ಈ ವೈವಿಧ್ಯಮಯ ಪ್ರಪಂಚದಲ್ಲಿ ಪ್ರತಿಯೊಂದು ಜೀವಿಗೂ ತನ್ನದೇ ಆದ ಸ್ಥಾನ ಮತ್ತು ಮಾನ ಎರಡೂ ಇವೆಯೆಂದು ಪ್ರತಿಪಾದಿಸಿದವರು ಪ್ರೊ. ಗಾಡ್ಗೀಳರು.

ಬುಟ್ಟಿ ಹೆಣೆಯುವ ಮೇದಾರರು ತಮ್ಮ ಜೀವನವೇ ನಾಶವಾಗುತ್ತಿದೆಯೆಂದು ಅಂದಿನ ಹಣಕಾಸು ಮಂತ್ರಿಗಳಾಗಿದ್ದ ಎಂ.ವೈ.ಘೋರ್ಪಡೆಯವರಿಗೆ ಮುತ್ತಿಗೆ ಹಾಕಿದಾಗ ಅವರು ಬಿದಿರಿನ ಸ್ಥಿತಿಗತಿಯನ್ನು ಅಧ್ಯಯನ ಮಾಡಲು ಪ್ರೊ. ಗಾಡ್ಗೀಳರನ್ನೇ ನೇಮಿಸುತ್ತಾರೆ. ದಾಂಡೇಲಿ ಕಾಗದ ಕಾರ್ಖಾನೆ, ಸುತ್ತಲಿನ ಬಿದಿರಿನ ಕಾಡನ್ನು ನೋಡುತ್ತ ಹೋಗುವ ಗಾಡ್ಗೀಳ್ ಕಾರ್ಖಾನೆ ಮಾಡುತ್ತಿದ್ದ ಬಿದಿರಿನ ನಾಶವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಾರೆ. ಅಗ್ಗದ ಬೆಲೆಗೆ ಸಿಕ್ಕ ಅಮೂಲ್ಯ ಸಂಪತ್ತನ್ನು ಕಾರ್ಖಾನೆ ಮನಬಂದಂತೆ ಕೊಚ್ಚಿಹಾಕುತ್ತಿದ್ದ ಪರಿಯನ್ನು ಬಹಳ ನೋವಿನಿಂದ ಬರೆಯುತ್ತಾರೆ. 'ಬಿದಿರೆಲ್ಲ ಖರ್ಚಾದ ನಂತರ ಏನು ಮಾಡುತ್ತೀರಿ?' ಗಾಡ್ಗೀಳರ ಪ್ರಶ್ನೆಗೆ, 'ಇದಲ್ಲದಿದ್ದರೆ ಇನ್ನೊಂದು' ಎಂದು ಅಲಕ್ಷ್ಯದಿಂದ ಕಾರ್ಖಾನೆಯ ವ್ಯವಸ್ಥಾಪಕರು ಉತ್ತರಿಸುವ ಪರಿ ನಮ್ಮನ್ನು ಕೂಡ ದಂಗಾಗಿಸುತ್ತದೆ.

ಜೀವ ವಿಜ್ಞಾನದ ಅಧ್ಯಯನ ಮಾಡುತ್ತ ಮಾಡುತ್ತ ಗಾಡ್ಗೀಳರು ಇಂದಿನ ಅಭಿವೃದ್ಧಿಯ ನೀತಿ ಸುತ್ತಲಿನ ಜನರನ್ನು ಒಳಗೊಳ್ಳುತ್ತಿಲ್ಲ, ಜನರನ್ನು ಬಿಟ್ಟು ಅಭಿವೃದ್ಧಿ ಹೇಗೆ ಎಂದು ಪ್ರಶ್ನಿಸಿಕೊಳ್ಳತೊಡಗಿದರು. ಸುಸ್ಥಿರ ಅಭಿವೃದ್ಧಿ ಆಗಬೇಕೆಂದರೆ ಅದರಲ್ಲಿ ಜನರೂ ಇರಬೇಕೆಂಬ ನಿರ್ಧಾರಕ್ಕೆ ಬಂದು ಅದನ್ನೇ ಪ್ರತಿಪಾದಿಸತೊಡಗಿದರು. ಕೇರಳದ ಶಾಂತಕೊಳ್ಳದಲ್ಲಿ ವಿದ್ಯುತ್ ಉತ್ಪಾದನೆಗೆ ಸರಕಾರ ಹೊರಟಾಗ ಅದಕ್ಕೆ ಬಂದ ಪ್ರತಿರೋಧವನ್ನು ನೋಡಿ ಶಾಂತಕೊಳ್ಳದ ಅಧ್ಯಯನ ಕೈಗೊಳ್ಳುತ್ತಾರೆ ಪ್ರೊ.ಗಾಡ್ಗೀಳ್. ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತು ಮತ್ತು ಪ್ರೊ.ಗಾಡ್ಗೀಳರ ವರದಿಗಳ ಆಧಾರದ ಮೇಲೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಯೋಜನೆಯನ್ನು ತಡೆಹಿಡಿಯುತ್ತಾರೆ.

ಕೊಂಕಣ ರೈಲಿನ ಬಗ್ಗೆ, ಭೋಪಾಲ್ ದುರಂತದ ಬಗ್ಗೆ ಕೂಡ ನಿಜವಾದ ಸ್ಥಿತಿಯೇನೆಂದು ಗಾಡ್ಗೀಳರು ಸತ್ಯನಿಷ್ಠವಾದ ವರದಿಗಳನ್ನು ಸಲ್ಲಿಸಿದರೂ ಅಲ್ಲೆಲ್ಲೂ ಆ ವರದಿಗಳಿಗೆ ಮಾನ್ಯತೆ ಸಿಗಲಿಲ್ಲ. ಅದೇ ರೀತಿ ʻಪಶ್ಚಿಮ ಘಟ್ಟಗಳ ಪರಿಸರ ಪರಿಣತರʼ ವರದಿಗೂ ಯಾವುದೇ ಮಾನ್ಯತೆ ಸಿಗಲಿಲ್ಲ. ಜನಪರವಾದ ಮತ್ತು ಪರಿಸರ ವಿರೋಧಿ ಕಾರ್ಖಾನೆಗಳ ವಿರುದ್ಧ ಸಲ್ಲಿಸಿದ್ದ ಆ ವರದಿಗಳು ಸಹಜವಾಗಿಯೇ ಉನ್ನತ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಸ್ವಹಿತಾಸಕ್ತರ ಕೈಯಲ್ಲಿ ಸಿಕ್ಕು ಮೂಲೆ ಸೇರಿದ್ದು ಈಗ ಇತಿಹಾಸ. ಗಾಡ್ಗೀಳ್ ವರದಿ ಇಡೀ ದೇಶದಲ್ಲಿಯೇ ಚರ್ಚಿತವಾದರೂ ಸರ್ಕಾರ ಅದನ್ನು ಬಿಡುಗಡೆ ಕೂಡ ಮಾಡಲಿಲ್ಲ, ಯಾರ ಕೈಗೂ ಅದು ತಲುಪದಂತೆ, ಅದರೊಳಗೆ ಏನು ಬರೆದಿದೆ ಎಂದು ತಿಳಿಯದಂತೆ ನೋಡಿಕೊಂಡಿತು. ಅಲ್ಲದೇ, ಕಸ್ತೂರಿರಂಗನ್ ಅವರಿಂದ ಇನ್ನೊಂದು ವರದಿ ಮಾಡಿಸಿತು. ಆದರೆ ಆಗಲೇ ಬಹುಚರ್ಚಿತ ವಿಷಯವಾಗಿದ್ದ ಪಶ್ಚಿಮ ಘಟ್ಟಗಳು, ಅಲ್ಲಿ ಪ್ರಹಾರ ಮಾಡುತ್ತಿರುವ ಬಲಿಷ್ಠ ಬಾಹುಗಳ ಕಾರಣದಿಂದಾಗಿ ಘಟ್ಟಗಳ ಉಳಿವಿಗಾಗಿ ಬರೆದ ಯಾವುದೇ ವರದಿಯನ್ನೂ ಸ್ವೀಕರಿಸಗೊಡಲಿಲ್ಲ.

ಅಂದು ʻಪಶ್ಚಿಮ ಘಟ್ಟ ಉಳಿಸಿʼ ಎಂಬ ಪಾದಯಾತ್ರೆಗೆ ಪ್ರೊ. ಗಾಡ್ಗೀಳರ ಅಧ್ಯಯನಗಳು ಬೆಂಬಲವಾಗಿದ್ದವು. ಇಂದು ಮತ್ತೆ ʻಪಶ್ಚಿಮ ಘಟ್ಟ ಉಳಿಸಿʼ ಎಂದು ಪಾದಯಾತ್ರೆ, ಜನಜಾಗೃತಿ ಮಾಡುವ ಅವಶ್ಯಕತೆ ಇರುವಾಗಲೇ ಪ್ರೊಫೆಸರ್ ಅವರು ಜೀವನಕ್ಕೆ ವಿದಾಯ ಹೇಳಿದ್ದು ಮಾತ್ರ ತುಂಬಲಾಗದ ನಷ್ಟ. ಕೇವಲ ಎರಡು ತಿಂಗಳ ಹಿಂದೆಯಷ್ಟೇ ತೀರಿಕೊಂಡ ಪತ್ನಿ ಪ್ರೊ. ಸುಲೋಚನಾರನ್ನು ಇಷ್ಟುಬೇಗ ಸೇರಿಕೊಳ್ಳುವುದರ ಮೂಲಕ ಗಾಡ್ಗೀಳರು ಜೊತೆಗಾತಿಯ ಮೇಲಿನ ಪ್ರೇಮವನ್ನು ಕೂಡ ಜಗತ್ತಿಗೆ ಸಾರಿದ್ದಾರೆ. ಪಶ್ಚಿಮ ಘಟ್ಟಗಳ ಉಳಿವಿಗೆ ಕೆಲಸ ಮಾಡುವುದೊಂದೇ ಅವರಿಗೆ ನಾವೆಲ್ಲ ಸಲ್ಲಿಸಬಹುದಾದ ದೊಡ್ಡ ನಮನ.

ಮಾಧವ ಗಾಡ್ಗೀಳ್ ನಿಧನ

ಪುಣೆ (ಪಿಟಿಐ): ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಅವಿರತವಾಗಿ ಶ್ರಮಿಸಿದ, ದೇಶದ ಹೆಸರಾಂತ ಪರಿಸರ ವಿಜ್ಞಾನಿ ಮಾಧವ ಧನಂಜಯ ಗಾಡ್ಗೀಳ್ (83) ಬುಧವಾರ ರಾತ್ರಿ ಪುಣೆಯಲ್ಲಿ ನಿಧನರಾದರು.

‘ಅಲ್ಪಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ’ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ ಪುತ್ರ, ಪುತ್ರಿ ಇದ್ದಾರೆ. ಹವಾಮಾನ ವಿಜ್ಞಾನಿಯಾಗಿದ್ದ ಪತ್ನಿ ಸುಲೋಚನಾ ಗಾಡ್ಗೀಳ್ 2025ರ ಜುಲೈನಲ್ಲಿ ಮೃತಪಟ್ಟಿದ್ದರು. ‘ಭಾರತದ ಪರಿಸರ ಸಂಶೋಧನೆ ಮತ್ತು ಸಂರಕ್ಷಣಾ ನೀತಿ’ ರೂಪಿಸುವಲ್ಲಿ ಗಾಡ್ಗೀಳ್ ಮಹತ್ವದ ಪಾತ್ರ ವಹಿಸಿದ್ದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿರುವ (ಐಐಎಸ್ಸಿ) ಪರಿಸರ ವಿಜ್ಞಾನ ಕೇಂದ್ರದ ಸ್ಥಾಪಕರಾಗಿ, ‘ಗಾಡ್ಗೀಳ್ ಆಯೋಗ’ ಎಂದೇ ಹೆಸರಾಗಿದ್ದ ‘ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿಯ (ಡಬ್ಲ್ಯುಜಿಇಇಪಿ) ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಗಾಡ್ಗೀಳ್ ಅವರು ಜೀವವೈವಿಧ್ಯ ಸಂರಕ್ಷಣೆಯಲ್ಲಿ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯ ಚಾಂಪಿಯನ್ ಆಗಿದ್ದರು. ಕೇರಳದ ಸೈಲೆಂಟ್ ವ್ಯಾಲಿ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು
ಜೈರಾಮ್ ರಮೇಶ್, ಕಾಂಗ್ರೆಸ್ ಮುಖಂಡ

ಕೇರಳದ ಮಳೆಕಾಡು ಆಂದೋಲನ ಸೇರಿದಂತೆ ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯಲ್ಲಿ ಗಾಡ್ಗೀಳ್ ಅವರ ಕೊಡುಗೆಯನ್ನು ಕೃತಜ್ಞತೆಯಿಂದ ಸ್ಮರಿಸುತ್ತೇವೆ
ಪಿಣರಾಯಿ ವಿಜಯನ್, ಕೇರಳ ಸಿಎಂ

‘ಜನರ ವಿಜ್ಞಾನಿ’ ಎಂದೇ ಹೆಸರಾಗಿದ್ದ ಗಾಡ್ಗೀಳ್ ಅವರು ಪರಿಸರ ಸಮತೋಲನಕ್ಕಾಗಿ ಇಡೀ ಬದುಕನ್ನೇ ಮುಡುಪಾಗಿಟ್ಟಿದ್ದರು. ಅವರ ಮಹತ್ಕಾರ್ಯಗಳು ಹಲವು ತಲೆಮಾರುಗಳಿಗೆ ಸ್ಫೂರ್ತಿದಾಯಕ.
ದೇವೇಂದ್ರ ಫಡಣವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ

ಬದುಕಿನ ಪ್ರಮುಖ ಘಟ್ಟಗಳು

l ಪುಣೆಯ ಪ್ರಸಿದ್ಧ ಕುಟುಂಬದಲ್ಲಿ ಗಾಡ್ಗೀಳ್ ಅವರು 1942ರ ಮೇ 24ರಂದು ಜನಿಸಿದರು. ಹೆಸರಾಂತ ಅರ್ಥಶಾಸ್ತ್ರಜ್ಞ, ಗೋಖಲೆ
ಇನ್ಸ್ಟಿಟ್ಯೂಟ್ನ ಮಾಜಿ ನಿರ್ದೇಶಕ ಧನಂಜಯ ರಾಮಚಂದ್ರ ಗಾಡ್ಗೀಳ್ ಅವರ ತಂದೆ. ತಾಯಿ ಪ್ರಮೀಳಾ ಗಾಡ್ಗೀಳ್.

l 1963ರಲ್ಲಿ ಫರ್ಗ್ಯೂಸನ್ ಕಾಲೇಜಿನಿಂದ ಜೀವಶಾಸ್ತ್ರದಲ್ಲಿ ಪದವಿ, 1965ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1969ರಲ್ಲಿ ಪಿಎಚ್.ಡಿ ಅಧ್ಯಯನಕ್ಕಾಗಿ ಹಾರ್ವರ್ಡ್ ವಿಶ್ವದ್ಯಾಲಯ ಸೇರಿದ ಅವರು, ಅಲ್ಲಿ ಗಣಿತ, ಪರಿಸರ ವಿಜ್ಞಾನ ಮತ್ತು ಪ್ರಾಣಿಗಳ ನಡವಳಿಕೆ ಕುರಿತು ಅಧ್ಯಯನ ನಡೆಸಿದರು.

l ಹಾರ್ವರ್ಡ್ ವಿಶ್ವದ್ಯಾಲಯದಿಂದ ಪಿಎಚ್.ಡಿ ಪಡೆದು, 1971ರಲ್ಲಿ ಭಾರತಕ್ಕೆ ಮರಳಿದ ಗಾಡ್ಗೀಳ್, ಪುಣೆಯ ಅಗರ್ಕರ್ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನ ಅಧಿಕಾರಿಯಾಗಿ ಸೇರಿದರು. ಅಲ್ಲಿ ಎರಡು ವರ್ಷ ಕಾರ್ಯನಿರ್ವಹಿಸಿದರು.

l 1973ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯನ್ನುಸೇರಿದರು. ಬಳಿಕ ಪರಿಸರ ವಿಜ್ಞಾನಗಳ ಕೇಂದ್ರ, ಸೆಂಟರ್ ಫಾರ್ ಥಿಯರಿಟಿಕಲ್ ಸ್ಟಡೀಸ್ ಸ್ಥಾಪಿಸುವ ಮೂಲಕ ಭಾರತದಲ್ಲಿ ಆಧುನಿಕ ಪರಿಸರ ವಿಜ್ಞಾನ ಸಂಶೋಧನೆಗಳಿಗೆ ಅಡಿಗಲ್ಲು ಹಾಕಿದರು.

l ಜೀವವೈವಿಧ್ಯದ ದೃಷ್ಟಿಯಿಂದ ದುರ್ಬಲವಾದ ಭಾರತದ ವಿವಿಧ ಪ್ರದೇಶಗಳ ಅಧ್ಯಯನಕ್ಕಾಗಿ ಸರ್ಕಾರ ರಚಿಸಿದ್ದ ತಜ್ಞರ ಸಮಿತಿಯ ಅಧ್ಯಕ್ಷರಾಗಿ ಗಾಡ್ಗೀಳ್ ಕಾರ್ಯನಿರ್ವಹಿಸಿದ್ದರು.

l ಜನಸಂಖ್ಯೆ ಹೆಚ್ಚಳ, ಹವಾಮಾನ ವೈಪರೀತ್ಯ, ಮಾನವ ಹಸ್ತಕ್ಷೇಪ, ಅವೈಜ್ಞಾನಿಕ ಅಭಿವೃದ್ಧಿ ಚಟುವಟಿಕೆಗಳಿಂದ ಪಶ್ಚಿಮ ಘಟ್ಟಗಳ ಮೇಲಾಗುತ್ತಿರುವ ಪರಿಣಾಮ ಕುರಿತು ಅವರು ಅಧ್ಯಯನ ನಡೆಸಿದ್ದರು.

l ಡಬ್ಲ್ಯುಜಿಇಇಪಿ ಅಧ್ಯಕ್ಷರಾಗಿದ್ದ ಗಾಡ್ಗೀಳ್, 2010ರಲ್ಲಿ ಪಶ್ಚಿಮ
ಘಟ್ಟದ ಬಹು ದೊಡ್ಡ ಭಾಗವನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಘೋಷಿಸುವಂತೆ ಶಿಫಾರಸು ಮಾಡಿ ಮಹತ್ವದ ವರದಿ ಸಲ್ಲಿಸಿದ್ದರು.

l ಗಾಡ್ಗೀಳ್ ವರದಿಯು ತೀವ್ರ ಚರ್ಚೆಗೆ ಕಾರಣವಾದರೂ ಇದನ್ನು ಭಾರತದ ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಮೈಲಿಗಲ್ಲು ಎಂದೇ ಗುರುತಿಸಲಾಗಿದೆ.

l ಗಾಡ್ಗೀಳ್ ಅವರು ಪ್ರಧಾನಿಯವರ ವೈಜ್ಞಾನಿಕ ಸಲಹಾ ಮಂಡಳಿ, ರಾಷ್ಟ್ರೀಯ ಸಲಹಾ ಸಮಿತಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಸೇರಿದಂತೆ ಹಲವು ರಾಷ್ಟ್ರೀಯ, ಅಂತರರಾಷ್ಟ್ರೀಯ ಉನ್ನತ ಮಟ್ಟದ ಸಮಿತಿಗಳಲ್ಲೂ ಕಾರ್ಯನಿರ್ವಹಿಸಿದ್ದರು.

l ಐಐಎಸ್ಸಿಯಿಂದ 2004ರಲ್ಲಿ ನಿವೃತ್ತರಾದ ಗಾಡ್ಗೀಳ್ ಅವರು ಬಳಿಕ ಪುಣೆಯ ಅಗರ್ಕರ್ ಸಂಶೋಧನಾ ಕೇಂದ್ರ ಮತ್ತು ಗೋವಾ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ, ಶೈಕ್ಷಣಿಕ ಕಾರ್ಯ ಮುಂದುವರಿಸಿದರು.

l ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಗಾಡ್ಗೀಳ್ ಅವರು ನಡೆಸಿದ ಪ್ರಯತ್ನಗಳಿ
ಗಾಗಿ 2024ರಲ್ಲಿ ವಿಶ್ವಸಂಸ್ಥೆಯು ಅವರಿಗೆ ‘ಚಾಂಪಿಯನ್ ಆಫ್ ದ ಅರ್ಥ್’ ಪುರಸ್ಕಾರ ನೀಡಿ ಗೌರವಿಸಿತ್ತು.

l 1981ರಲ್ಲಿ ಪದ್ಮಶ್ರೀ, 2006ರಲ್ಲಿ ಪದ್ಮವಿಭೂಷಣ, ಶಾಂತಿ ಸ್ವರೂಪ ಭಟ್ನಾಗರ್ ಪುರಸ್ಕಾರ, ವೋಲ್ವೊ ಪರಿಸರ ಪ್ರಶಸ್ತಿ, ಟೇಲರ್ ಪರಿಸರ ಸಾಧಕ ಪ್ರಶಸ್ತಿ ಸೇರಿದಂತೆ ಗಾಡ್ಗೀಳ್ ಅವರಿಗೆ ಹಲವು
ರಾಷ್ಟ್ರೀಯ, ಅಂತರರಾಷ್ಟ್ರೀಯ ಪುರಸ್ಕಾರಗಳು ಲಭಿಸಿವೆ.

l ಸಂಶೋಧಕ ಹಾಗೂ ಬರಹಗಾರರೂ ಆಗಿದ್ದ ಗಾಡ್ಗೀಳ್ ಅವರು, ‘ದಿಸ್ ಫಿಶರ್ಡ್ ಲ್ಯಾಂಡ್’ ಮತ್ತು ‘ಎಕಾಲಜಿ ಆ್ಯಂಡ್ ಈಕ್ವಿಟಿ’ ಸೇರಿದಂತೆ ಹಲವು ಕೃತಿಗಳಿಗೆ ಸಹ ಲೇಖಕರಾಗಿದ್ದಾರೆ. 250ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಅವರು ಮಂಡಿಸಿದ್ದರು.

l ಪರಿಸರ ಸಂರಕ್ಷಣೆ ಕುರಿತು ಇಂಗ್ಲಿಷ್ ಮತ್ತು ಮರಾಠಿ ಪತ್ರಿಕೆಗಳಲ್ಲಿ ಅವರು ನಿಯಮಿತವಾಗಿ ಅಂಕಣಗಳನ್ನು ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.