ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ರೂಪದಲ್ಲಿ ಮಂಜೂಷಾ

Last Updated 29 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

‘ಹಿಂದಿನ ಕಾಲದಲ್ಲಿ ಬಳಕೆಯಾಗದ, ಬೇಡದ ಪಾತ್ರೆಯೋ, ಕೃಷಿ ಉಪಕರಣವೋ ಇದ್ದರೆ ಅದನ್ನು ಬಿಸಾಡುವ ಕ್ರಮ ಇರಲಿಲ್ಲ. ಅಟ್ಟದ ಮೇಲೆ ಇಡುವ ವಾಡಿಕೆ ಇತ್ತು. ನಮ್ಮ ಬೀಡಿನ ಅಟ್ಟದ ಮೇಲೆ ಅಂತಹ ಪುರಾತನವಾದ ಹಲವಾರು ವಸ್ತುಗಳಿದ್ದವು’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ವಿಶ್ಲೇಷಿಸುತ್ತಿದ್ದರು.

ಅವರು ಮಾತನಾಡುತ್ತಿದ್ದದು ಧರ್ಮಸ್ಥಳದಲ್ಲಿ ನವೀಕರಣಗೊಂಡ ವಸ್ತುಸಂಗ್ರಹಾಲಯ ‘ಮಂಜೂಷಾ’ ಪರಿಕಲ್ಪನೆಯ ಬಗ್ಗೆ. ‘ಅಟ್ಟದ ಮೇಲಿನ ಒಂದೊಂದೇ ವಸ್ತುಗಳ ಹಿನ್ನೆಲೆಯನ್ನು ಅರಸುತ್ತ ಹೋದರೆ ಇತಿಹಾಸದ ಹತ್ತಾರು ವಿಚಾರಗಳು ಅನಾವರಣಗೊಳ್ಳುತ್ತ ಹೋಗುತ್ತವೆ. ಪೂರ್ವಜರು ಬಾಳಿದ ರೀತಿಯಲ್ಲಿಯೇ ನಮಗೆ ಆದರ್ಶದ ಪಾಠವಿರುತ್ತದೆ. ಈ ಸಂಗ್ರಹ ಕಾರ್ಯಕ್ಕೆ ತಾಳ್ಮೆಯೂ ಬೇಕು’ ಎನ್ನುತ್ತ ಅವರು ಮಂಜೂಷಾದ ಅಮೋಘ ಸಂಗ್ರಹ ಪ್ರಕ್ರಿಯೆಯನ್ನೂ ವಿವರಿಸುತ್ತಿದ್ದರು.

ಹೌದು. ಇದು ಹಳೆಯ ಮಂಜೂಷಾ ವಸ್ತು ಸಂಗ್ರಹಾಲಯವೇ. ಆದರೆ, ಅದನ್ನು ಈಗ ನವೀಕರಣಗೊಳಿಸಲಾಗಿದೆ. ವಿಸ್ತಾರವಾದ ಹಾಲ್‍ನಲ್ಲಿ ಸಾಲಾಗಿ ಜೋಡಿಸಿಟ್ಟು ಹಳೇ ವಸ್ತುಗಳ ಪ್ರದರ್ಶನದ ಮಾದರಿಯಲ್ಲಿದ್ದ ಮಂಜೂಷಾ ಪೂರ್ತಿ ಬದಲಾಗಿದೆ. ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ಸಮಿತಿಯು ರೂಪಿಸಿದ ಮಾನದಂಡಗಳ ಪ್ರಕಾರ ಹೊಸ ₹3.12 ಕೋಟಿ ವೆಚ್ಚದಲ್ಲಿ ಕಟ್ಟಡವನ್ನು ರೂಪಿಸಲಾಗಿದೆ. ಬರೋಬ್ಬರಿ 1.04ಲಕ್ಷ ಚದರ ಅಡಿಯಲ್ಲಿ ಅಪೂರ್ವ ವಸ್ತುಗಳನ್ನು ಕಾಪಿಡಲು ತಕ್ಕ ವ್ಯವಸ್ಥೆ ಕಲ್ಪಿಸಲಾಗಿದೆ.

ವಸ್ತುಗಳ ವರ್ಗೀಕರಣ:ಮ್ಯೂಸಿಯಂನಲ್ಲಿ ಒಂದೆಡೆ ತಾಳೆಗರಿಗಳು ಮತ್ತು ಐತಿಹಾಸಿಕ ಹಸ್ತಪ್ರತಿ, ವೈಷ್ಣವ, ಶೈವ ಗ್ರಂಥ ಮುಂತಾದುವುಗಳ ಪ್ರದರ್ಶನಕ್ಕೆ ತಗ್ಗಾದ ಕಪಾಟುಗಳನ್ನು ಮಾಡಲಾಗಿದೆ. ಅವು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸ್ಪಷ್ಟವಾಗಿ ಗೋಚರಿಸುವಷ್ಟೇ ಎತ್ತರದಲ್ಲಿವೆ. ತೀವ್ರವಾದ ಬೆಳಕು ಬಿದ್ದರೆ ತಾಳೆಗರಿಗಳ ಮೇಲಿರುವ ಅಕ್ಷರಗಳು ಹಾಳಾಗುತ್ತವೆ. ಅದಕ್ಕಾಗಿ 60 ರಿಂದ 70 ಲಕ್ಸ್ ಬೆಳಕಿನ ವಾತಾವರಣದಲ್ಲಿ ಇವುಗಳನ್ನು ಇರಿಸಲಾಗಿದೆ. ಅಷ್ಟೇ ಏಕೆ, ಸಂರಕ್ಷಿತ ವಾತಾವರಣ ಎಂದ ತಕ್ಷಣ ಹವಾನಿಯಂತ್ರಣದ ಮೊರೆ ಹೋಗುವಂತಿಲ್ಲ. ಸಹಜವಾದ ಗಾಳಿಯು ಗ್ಯಾಲರಿಗಳನ್ನು ಪ್ರವೇಶಿಸಲು ಕಿಂಡಿಗಳನ್ನು ರೂಪಿಸಿ ಆದಷ್ಟು ಸಹಜವಾದ ಸಂರಕ್ಷಣಾ ವಿಧಾನಕ್ಕೆ ಒತ್ತುಕೊಡಲಾಗಿದೆ ಎನ್ನುತ್ತಾರೆ ವಸ್ತುಸಂಗ್ರಹಾಲಯದ ನವೀಕರಣ ಯೋಜನೆಯ ಪ್ರಧಾನ ಸಮಾಲೋಚಕರಾದ ರಿತೇಶ್ ಶರ್ಮ.

‘ಮಂಜೂಷಾ ಆರಂಭವಾದಾಗಿನಿಂದ ಅಪೂರ್ವವಸ್ತುಗಳನ್ನು ಭಕ್ತರು ನೀಡುತ್ತಲೇ ಬಂದಿದ್ದಾರೆ. ಆದರೆ ಅವುಗಳ ಪ್ರದರ್ಶನಕ್ಕೆ ಸಾಕಷ್ಟು ಜಾಗವಾಗಲೀ ವ್ಯವಸ್ಥೆಯಾಗಲೀ ಇರಲಿಲ್ಲ. ಇದೀಗ ನವೀಕರಣದ ಸಂದರ್ಭದಲ್ಲಿ 15 ವಿಭಾಗಗಳನ್ನು ಮಾಡಲಾಗಿದ್ದು, 35 ಗ್ಯಾಲರಿಗಳನ್ನು ರೂಪಿಸಲಾಗಿದೆ. ಆದರೂ ಇನ್ನೂ ಶೇ 40ರಷ್ಟು ಪುರಾತನ ವಸ್ತುಗಳು ಸಂಗ್ರಹಾಗಾರದಲ್ಲಿವೆ. ಮುಂದಿನ ದಿನಗಳಲ್ಲಿ ಗ್ಯಾಲರಿಯಲ್ಲಿ ಕೆಲವು ವಸ್ತುಗಳನ್ನು ಬದಲಾಯಿಸುವ ಯೋಚನೆಯೂ ಇದೆ. ಆಗ ವಸ್ತುಸಂಗ್ರಹಾಲಯದ ಬಗ್ಗೆ ನೋಡುಗರಲ್ಲಿ ಕುತೂಹಲವೂ ಉಳಿಯುತ್ತದೆ’ ಎಂದು ಹೆಗ್ಗಡೆ ವಿವರಿಸುತ್ತಾರೆ.

ಶತಮಾನದ ವಸ್ತುಗಳು:ಮಂಜೂಷಾ ಪ್ರವೇಶಿಸುತ್ತಿದ್ದಂತೆಯೇ ಶ್ರೀರಂಗಪಟ್ಟಣದ ಗಂಗಾಧರ ಸ್ವಾಮಿಯ ಪುರಾತನವಾದ ಬೃಹತ್ ರಥ ಸ್ವಾಗತಿಸುತ್ತದೆ. 18ನೇ ಶತಮಾನದಲ್ಲಿ ರೂಪುಗೊಂಡ, ಇದರ ಸೂಕ್ಷ್ಮ ಕರಕುಸುರಿಯ ವೈಭವಕ್ಕೆ ಮನಸ್ಸು ಶರಣಾಗದಿರದು.
ಆದಿಮಾನವರ ಆಯುಧಗಳು, ಹಂಪಿಯಲ್ಲಿ ಉತ್ಖನನ ಸಂದರ್ಭ ದೊರೆತ ಬನವಾಸಿ, ಚಿತ್ರದುರ್ಗದ ಚಂದ್ರವಳ್ಳಿಯಲ್ಲಿ ದೊರೆತ ಕೆಲವು ಕಲ್ಲಿನ ಆಯುಧಗಳು, ವಿಜಯಪುರದಲ್ಲಿ ಲಭ್ಯವಾದ ಮರದ ಪಳಿಯುಳಿಕೆಗಳಿಂದ ಹಿಡಿದು ಲೋಹ ಯುಗದವರೆಗಿನ ಐತಿಹಾಸಿಕ ವಸ್ತುಗಳನ್ನು ಸಾಲಾಗಿ ಜೋಡಿಸಿಡಲಾಗಿದೆ.

ತುಂಬ ಕುತೂಹಲದ ವಿಚಾರವೆಂದರೆ ದೇವರ ಪೂಜಾ ಸಾಮಗ್ರಿಗಳು. ‘ಹಿಂದಿನ ಕಾಲದಲ್ಲಿ ಪೂಜಾ ಪರಿಕರಗಳನ್ನು ಬೃಹತ್ ಪ್ರಮಾಣದಲ್ಲಿ ಏಕರೂಪವಾಗಿ ತಯಾರಿಸುತ್ತಿರಲಿಲ್ಲ. ಯಾರಾದರೂ ಮನೆಯವರು ಅಥವಾ ದೇವಸ್ಥಾನದ ಕಡೆಯಿಂದ ಸೂಚನೆ ದೊರೆತರೆ ಮಾತ್ರ ಪೂಜಾ ಪರಿಕರವನ್ನು ಎರಕ ಹೊಯ್ದು ರೂಪಿಸುತ್ತಿದ್ದರು. ಈ ಎರಕ ಹೊಯ್ಯುವ ಸಂದರ್ಭದಲ್ಲಿ ಕಂಚಿನ ಶಿಲ್ಪಿಯ ಕಲಾತ್ಮಕತೆಗೆ ಅವಕಾಶ ಸಿಗುತ್ತಿತ್ತು. ಉದ್ಧರಣೆಯ ತುದಿಯಲ್ಲಿ ಒಂದು ಹೂವೋ, ಪಂಚಪಾತ್ರೆಗಳ ಅಂಚಿನಲ್ಲಿ ದೇವರ ರೂಪವೋ, ಗಂಟಾಮಣಿಯ ನೆತ್ತಿಯಲ್ಲಿ ನವಿಲಿನ ಜುಟ್ಟೋ ರೂಪುಪಡೆಯುತ್ತಿತ್ತು. ಅಂತಹ ಅಮೋಘವಾದ ವೈವಿಧ್ಯಮಯ ಪೂಜಾ ಪರಿಕರಗಳನ್ನು ಕಂಡು ವಿಸ್ಮಯಪಟ್ಟಿದ್ದೇನೆ’ ಎನ್ನುತ್ತಾರೆ ಹೆಗ್ಗಡೆಯವರು. ನವಾಸ್ತಿ ರಥಾರತಿ, ವೈವಿಧ್ಯಮಯ ಕಾಲುದೀಪ, ಕೈದೀಪ, ಗೋಮುಖ ಜಲದ್ರೋಣಿ.. ಹೀಗೆ ಒಂದು ಗ್ಯಾಲರಿ ಪೂರ್ತಿ ಕಂಚು ಮತ್ತು ಪಂಚಲೋಹದ ಸಂಗ್ರಹವಿದೆ.

ಶಾಸ್ತ್ರೋಕ್ತವಾಗಿ ಸಿದ್ಧಗೊಂಡು ನೂರಾರು ವರ್ಷಗಳ ಕಾಲ ಪೂಜೆ ಪಡೆದ ವಿಗ್ರಹಗಳ ಸಾಲೇ ಇಲ್ಲಿದೆ. ಅವಿಭಕ್ತ ಕುಟುಂಬಗಳು ಕಡಿಮೆಯಾಗುತ್ತಿದ್ದಂತೆಯೇ ಮನೆಯಲ್ಲಿ ದೇವತಾ ವಿನಿಯೋಗ ಕಡಿಮೆಯಾಗುತ್ತದೆ. ಶಾಸ್ತ್ರೋಕ್ತವಾದ ರೀತಿಯಲ್ಲಿ ಪೂಜೆ ಸಲ್ಲಿಸಲು ತಕ್ಕ ಸಾಮರ್ಥ್ಯವಿಲ್ಲದಾಗ ದೇವರನ್ನು ಭಕ್ತರು ಕ್ಷೇತ್ರಕ್ಕೆ ಒಪ್ಪಿಸಿದ್ದುಂಟು. ಅವುಗಳ ಕಲಾಕರ್ಷಣೆ ಮಾಡಿ ವಿಗ್ರಹಗಳನ್ನು ಕಾಪಿಡಲಾಗಿದೆ.

ಶೈವ, ವೈಷ್ಣವ ಮತ್ತು ಜೈನ ಸಂಪ್ರದಾಯದ ವಿಗ್ರಹಗಳ ಮೂರು ಗ್ಯಾಲರಿಗಳು ಇಲ್ಲಿವೆ ಎಂದು ವಿವರಿಸುತ್ತಾರೆ ಕ್ಯೂರೇಟರ್ ಪುಷ್ಪದಂತ. ಚಿನ್ನದ ಲೇಪನದಲ್ಲಿ ಅಂಚುಗಳನ್ನು ಭದ್ರಪಡಿಸಿದ ತಾಳೆಗರಿಗಳ ಸಂಗ್ರಹ, ದಂತದ ಕುಸುರಿ ಮಾಡಿದ ತಾಳೆಗರಿ, ಅಶ್ವಶಾಸ್ತ್ರ, ವೃಷಭೇಂದ್ರ ಪುರಾಣ, ಮಲಯಾಳ ರಾಮಾಯಣ, ಪಂಪನ ಆದಿಪುರಾಣ, ನವಚಕ್ರ ವಿವರ ..ಹೀಗೆ.

ಪುರಾತನ ಸಂಗೀತ ವಾದ್ಯಗಳು:ತಾಳ, ತಂತಿ ಮತ್ತು ನಾದ ವಾದ್ಯಗಳ ಬೃಹತ್ ಸಂಗ್ರಹದಲ್ಲಿ ಅಪರೂಪದ ವಾದ್ಯಗಳಿವೆ. ಶಿವರಾಮ ಕಾರಂತರ ಕಾದಂಬರಿಯಲ್ಲಿ ಬರುವ “ಕಾಡ್ಯ’ ಎಂಬ ತಾಳವಾದ್ಯದ ಮಾದರಿಯನ್ನು ಸಂರಕ್ಷಿಸಿಡಲಾಗಿದೆ. ವಿದೇಶಗಳಿಂದ ತರಿಸಿದ ವಾದ್ಯಗಳ ಸಂಗ್ರಹವೂ ಇದೆ. ಗ್ರಾಮೋಫೋನ್ ವಿಕಾಸ ಹೇಗಾಯಿತು, ಕ್ಯಾಮೆರಾ ಎಂಬುದು ಎಷ್ಟೆಲ್ಲ ರೂಪಗಳನ್ನು ದಾಟಿ ಬಂತು ಎಂಬ ಅಧ್ಯಯನಕ್ಕೆ ಬೇಕಾದ ಎಲ್ಲ ಮಾದರಿಗಳು ಇಲ್ಲಿವೆ. ಸೀಮೆಎಣ್ಣೆಯ ಬುಡ್ಡಿದೀಪ ಬಳಸಿ ರೂಪಿಸಿದ ಪ್ರಾಜೆಕ್ಟರ್‍ನಿಂದ ಹಿಡಿದು ಆಧುನಿಕ ಪ್ರಾಜೆಕ್ಟರ್‍ವರೆಗೆ ಎಷ್ಟೆಲ್ಲ ಮಾದರಿಗಳು ಈಚೆಗಿನ ಎರಡು ಶತಮಾನದಲ್ಲಿ ಬಂದವು ಎಂಬ ಮಾಹಿತಿಗೆ ಒಂದು ಗ್ಯಾಲರಿ ಮೀಸಲಿಡಲಾಗಿದೆ.

ವೆಲ್ಲೂರು, ಚೆನ್ನೈ, ಆಂಧ್ರ ಪ್ರದೇಶದ ವಿವಿಧ ಊರುಗಳಿಂದ ತರಿಸಿಕೊಂಡು ಬರೋಬ್ಬರಿ 70 ಬಾಗಿಲುಗಳ ಸಂಗ್ರಹವಿದೆ. ಶಿಲ್ಪಿಯ ಕಲ್ಪನಾವಿಲಾಸ ಬಾಗಿಲ ಚೌಕಟ್ಟು ಮತ್ತು ಬಾಗಿಲಿನ ಮೇಲೆ ಇಂಚಿಂಚೂ ವ್ಯಾಪಿಸಿ ನೋಡುಗರನ್ನು ದಂಗುಬಡಿಸುವಂತಿದೆ.


ವೈವಿಧ್ಯಮಯ ಪೀಠೋಪಕರಣ:ಪೀಠೋಪಕರಣಗಳ ಸಂಗ್ರಹದಲ್ಲಿಯೂ ವಿಸ್ಮಯಕಾರಿ ಕುರ್ಚಿಗಳಿವೆ. ಕುರ್ಚಿಯಲ್ಲಿ ಕುಳಿತರೇ ಪಕ್ಕದಲ್ಲೇ ಒಂದು ತೂಕದ ಯಂತ್ರ ನೀವೆಷ್ಟು ಕೆಜಿ ತೂಗುತ್ತೀರಿ ಎಂದು ಲೆಕ್ಕ ಹಾಕಲು ಸಿದ್ಧವಾಗಿದೆ. ಈ ಕುರ್ಚಿಯು ಯಾವ ಕಾಲದಲ್ಲಿ ತಯಾರಾಯಿತು, ಇದರ ಬಳಕೆ ಏನು ಎಂಬುದರ ಅಧ್ಯಯನ ನಡೆಯಬೇಕಷ್ಟೆ ಎನ್ನುತ್ತಾರೆ ರಿತೇಶ್ ಶರ್ಮ ಮತ್ತು ಮ್ಯೂಸಿಯಾಲಜಿಯ ನಿವೃತ್ತ ಪ್ರೊಫೆಸರ್ ಎನ್. ಎಸ್. ರಂಗರಾಜು.

ಅಧ್ಯಯನ ನಡೆಸುವವರಿಗೆ ಮಾಹಿತಿಯ ಕಣಜವಾಗಿ, ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಅರಳಿಸುವ ಕೌತುಕ ಕೇಂದ್ರವಾಗಿ ಈ ವಸ್ತು ಸಂಗ್ರಹಾಲಯ ನವೀಕರಣಗೊಂಡಿದೆ. ಮಂಜೂಷಾದಲ್ಲಿರುವ ವಸ್ತುಗಳ ಕ್ಯಾಟಲಾಗ್ ಮಾಡಿರುವುದರಿಂದ ಅಧ್ಯಯನ ಮಾಡುವವರಿಗೆ ಮಾಹಿತಿ ಸಂಗ್ರಹ ಮತ್ತಷ್ಟು ಸುಲಭವಾಗಲಿದೆ. ಈ ಸಂಗ್ರಹಕ್ಕೆ ಹೊಸ ವಸ್ತುಗಳು ಸೇರ್ಪಡೆ ಆಗುತ್ತಲೇ ಇವೆ. ಹೀಗೆ ಒಳಮನೆಯ ವಸ್ತುಪ್ರದರ್ಶನ ನೋಡಿ ಬಂದವರಿಗೆ ಹೊರಭಾಗದಲ್ಲಿ ಹಳೆಯ ಕಾರುಗಳ ಪ್ರದರ್ಶನ ವೀಕ್ಷಿಸಬಹುದು. ಅದಕ್ಕಾಗಿ ಪ್ರತ್ಯೇಕ ಮ್ಯೂಸಿಯಂ ಇದೆ. ಇತ್ತೀಚೆಗಷ್ಟೇ ಆ ಮ್ಯೂಸಿಯಂಗೆ ಭಾರತರತ್ನ ಸರ್. ಸಿ.ವಿ. ರಾಮನ್ ಬಳಸುತ್ತಿದ್ದ ವಾಹನಗಳನ್ನು ಅವರ ಮನೆಯವರು ತಂದು ಒಪ್ಪಿಸಿದ್ದಾರೆ.

ವಸ್ತುಪ್ರದರ್ಶನ ಸುತ್ತಾಡಿ ದಣಿದಿದ್ದರೆ ವಿಶ್ರಾಂತಿಗೆ ಪಕ್ಕದಲ್ಲಿಯೇ ಲಲಿತೋದ್ಯಾನವಿದೆ. ಪ್ರಶಾಂತ ವಾತಾವರಣ ಬೇಕಿದ್ದರೆ ಚಂದ್ರನಾಥ ಬಸದಿಯಿದೆ. ಅಮರವಾದ ತ್ಯಾಗಮೂರ್ತಿಯ ಕಾಣಬೇಕಿದ್ದರೆ ಬೆಟ್ಟದಮೇಲೆ ಬಾಹುಬಲಿಯ ದಿವ್ಯರೂಪವಿದೆ. ಕ್ಷೇತ್ರ ದರ್ಶನದ ಖುಷಿಗೆ ಇನ್ನೇನು ಬೇಕು.

ನ.15ರಿಂದ ಪ್ರವೇಶಾವಕಾಶ
ವಾರದ ಎಲ್ಲ ದಿನಗಳಲ್ಲಿಯೂ ಮಂಜೂಷಾ ತೆರೆದಿರುತ್ತದೆ. ದೊಡ್ಡವರಿಗೆ ಸದ್ಯಕ್ಕೆ ಪ್ರವೇಶ ಶುಲ್ಕ 5 ರೂಪಾಯಿ. ಶಾಲೆ ಮಕ್ಕಳಿಗೆ ಮುಕ್ತ ಪ್ರವೇಶ. ಬೆಳಿಗ್ಗೆ 9ರಿಂದ ರಾತ್ರಿ 8.30ವರೆಗೆ ತೆರೆದಿರುವ ಮಂಜೂಷಾ ಮಧ್ಯಾಹ್ನ 1ರಿಂದ 4ಗಂಟೆಯವರೆಗೆ ಮುಚ್ಚಿರುತ್ತದೆ. ನವೆಂಬರ್ 15ರಿಂದ ನವೀಕೃತ ಮಂಜೂಷಾ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಿದೆ.

ದೇವಸ್ಥಾನದಲ್ಲಿ ದೇವರ ದರ್ಶನದ ಜೊತೆಗೆ ಜ್ಞಾನದರ್ಶನಕ್ಕೆ ಅವಕಾಶವಾಗಲಿ ಎಂಬ ಉದ್ದೇಶದಿಂದ ಮಂಜೂಷಾ ವಸ್ತುಸಂಗ್ರಹಾಲಯವನ್ನು ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT