ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖನ: ಎಡಗೈ ರೇಖೆಗಳ ಕಲಾಸೆಲೆ

Published 19 ನವೆಂಬರ್ 2023, 0:12 IST
Last Updated 19 ನವೆಂಬರ್ 2023, 0:12 IST
ಅಕ್ಷರ ಗಾತ್ರ

ಎಡಗೈನಲ್ಲಿ ರೇಖೆಗಳನ್ನು ಬಿಡಿಸುವ ಮೂಲಕ‌ ಕಲಾರಚನೆಗೆ ಹೊಸ ಆಯಾಮ ಒದಗಿಸಿದ್ದಾರೆ ಹಿರಿಯ ಕಲಾವಿದ ಪ.ಸ.ಕುಮಾರ್.

ಅಪಘಾತ, ಅದರಿಂದ ಬಲಗೈಗೆ ಆದ ಪೆಟ್ಟು, ಬಲಗೈನಲ್ಲಿ ‌ಚಿತ್ರ ಬಿಡಿಸಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ– ಈ ಎಲ್ಲಾ ಸವಾಲುಗಳನ್ನು ದಿಟ್ಟವಾಗಿ ಎದುರಿಸುತ್ತಲೇ ಎಡಗೈನಲ್ಲಿ ರೇಖೆಗಳನ್ನು ಎಳೆಯುತ್ತ ಈ ಕಲಾಕೃತಿಗಳದ್ದೇ ಸಂಗ್ರಹವನ್ನು ಅವರು ಹೊರತಂದಿದ್ದಾರೆ. ಇವುಗಳ ಪ್ರದರ್ಶನಕ್ಕೆ ಒತ್ತಾಸೆಯಾಗಿ ನಿಂತಿದ್ದು ಕಲಾ ಇತಿಹಾಸಕಾರರಾದ ಡಾ. ಪ್ರಮೀಳಾ ಲೋಚನ್‌.

ಪ.ಸ.ಕುಮಾರ್‌

ಪ.ಸ.ಕುಮಾರ್‌

ಬದುಕಿನ ಅನಿವಾರ್ಯಕ್ಕೆ ಕಟ್ಟುಬಿದ್ದು ಆರಂಭಿಸಿದ ಎಡಗೈ ಚಿತ್ರರಚನೆಯ ಪ್ರಯೋಗವು ಆರಂಭದಲ್ಲಿ ದೈಹಿಕ ನೋವು, ಮಾನಸಿಕ ಆತಂಕಗಳನ್ನು ನೀಗಲು ಇದ್ದ ಕಿರುಹಾದಿಯಾಗಿತ್ತು. ಇದೇ ಬರುಬರುತ್ತ ಹೊಸ ಕಾಲ್ದಾರಿಯಾದ ಬಗೆಯನ್ನು ಅವರು ಹೇಳಿಕೊಳ್ಳುತ್ತಾ ಹೋದರು.

‘ಪೆಟ್ಟಾದ ಬಲಗೈಗೆ ಮತ್ತೆ ಕಸುವು ಬರಬಹುದು ಅಥವಾ ಬಾರದೆಯೂ ಇರಬಹುದು ಎಂದು ವೈದ್ಯರು ಹೇಳಿದಾಗ, ಅಲ್ಲಿಯವರೆಗೆ ರೇಖೆಗಳನ್ನು ನಂಬಿಕೊಂಡು ಬದುಕುತ್ತಿದ್ದ ನನಗೆ ಆತಂಕ ಶುರುವಾಯಿತು. ಚಿಕ್ಕಮಕ್ಕಳು, ಸಂಸಾರ ಇವೆಲ್ಲವನ್ನೂ ನಿಭಾಯಿಸುವುದು ಹೇಗೆ ಎನ್ನುವ ಪ್ರಶ್ನೆಯಲ್ಲಿಯೇ ಎಡಗೈಯಲ್ಲಿ ಪೆನ್ನು ಹಿಡಿದು ರೇಖೆ ಬಿಡಿಸಲು ಆರಂಭಿಸಿದೆ. ಬಲಗೈಗೆ ಮೊದಲಿನಿಂದಲೂ ತರಬೇತಿ ಸಿಕ್ಕಿರುತ್ತದೆ. ಜತೆಗೆ ಮಿದುಳಿನ ಮಾರ್ಗದರ್ಶನವಿರುತ್ತದೆ. ಎಡಗೈ ಹಾಗಲ್ಲ. ಆರಂಭದಲ್ಲಿ ಮೂರು ವಾರ ರೇಖೆಗಳು ರಚ್ಚೆ ಹಿಡಿದ ಮಗುವಿನಂತೆ ಅಡ್ಡಾದಿಡ್ಡಿ ಓಡುತ್ತಿದ್ದವು. ಆಗ ಮೂಡುತ್ತಿದ್ದ ರೇಖೆಗಳು ಬೇರೆ ಏನನ್ನೋ ಹೇಳುತ್ತಿವೆ ಎನಿಸಿತು’.

‘1998ರ ಸಮಯದಲ್ಲಿ ಎಡಗೈನಲ್ಲಿಯೇ ಪೂರ್ಣವಾಗಿ ‘ಆ್ಯಕ್ಸಿಡೆಂಟ್‌’ ಎನ್ನುವ ಕಲಾಕೃತಿ ಮೂಡಿಬಂತು. ನಡೆದ ಘಟನೆಯನ್ನು ಯಥಾವತ್ತಾಗಿ ಚಿತ್ರಿಸಲು ಬಯಸಿದ್ದೆ. ಆಮೇಲೆ ಸಾವು, ಅದರೆಡೆಗಿರುವ ಅವ್ಯಕ್ತ ಭಯ ತೀವ್ರವಾಗಿ ಕಾಡಿತು. ಇದು ‘ಬೆಕ್ಕು ಹಾಗೂ ಅಲೆಗಳ ಹಾವು, ಅದರ ಬಾಯಿಯಲ್ಲಿ ಹೋಗುತ್ತಿರುವ ಮನುಷ್ಯ’ ಕಲಾಕೃತಿಗಳನ್ನು ರಚಿಸುವಂತೆ ಪ್ರೇರೇಪಿಸಿದವು.’

‘ಎಡಗೈಗಿರುವ ರಚನಾ ಶಕ್ತಿಯ ಕುರಿತು ತುಸು ಅರಿವು ಮೂಡುತ್ತಿದ್ದಂತೆ ಬಲಗೈ ಸರಿಹೋಯಿತು. ಆದರೆ, ರಚನೆಯಲ್ಲಿ ಎಡಗೈಗೆ ಇರುವ ವಿಶಿಷ್ಟ ಗುಣ ಬಲಗೈಗೆ ಬರುವುದಿಲ್ಲ. ಎಡಗೈ ಅಂಕೆಯಲ್ಲಿ ಇರುವುದಿಲ್ಲ, ನಿಜ. ರೇಖೆ ಬಿಡಿಸುವಾಗ ಅಳತೆ–ಅನುಪಾತಗಳನ್ನು ಮೀರಿ ಹೋಗಿರುತ್ತದೆ. ಆದರೆ, ಎಡಗೈನಲ್ಲಿ ಮೂಡುವ ರೇಖೆಗಳು ತಮ್ಮನ್ನು ತಾವೇ ರೂಪಿಸಿಕೊಳ್ಳುವ ಪರಿಗೆ ಬೆರಗಾದೆ. ಈ ರೇಖೆಗಳಲ್ಲಿ ಅನಾಟಮಿ ಹುಡುಕಲಾಗದು; ಅವುಗಳಿಗೆ ಸ್ವಂತಿಕೆ ಇದೆ. ಈ ವಿಚಾರ ನನ್ನನ್ನು ಹಿಡಿದಿಟ್ಟಿತು. ಈ ಕೌಶಲವನ್ನು ಜೋಪಾನ ಮಾಡಬೇಕು ಅನಿಸಿತು.’

ಕನಸುಗಳ ಗಮ್ಮತ್ತು, ಹುಂಜದ ಗತ್ತು

ಪ.ಸ.ಕುಮಾರ್‌ ಅವರ ‘ಕ್ಯಾಚ್‌ ದ ಮೂನ್‌’ ಸರಣಿ ಕಲಾಕೃತಿಗಳಲ್ಲಿರುವ ಚಂದ್ರಮ ಮಧ್ಯವರ್ಗದ ಜನರು ಕಾಣುವ ಕನಸಿನ ರೂಪಕ. ಮಿತಿಗಳ ನಡುವೆ ಹಲವು ಕನಸು ಕಾಣುತ್ತ ಭೃಂಗದ ಬೆನ್ನೇರಿ ಹೊರಟವರ ರೂಪಕಗಳಂತಿವೆ ಈ ಕಲಾಕೃತಿಗಳು. ಇನ್ನು ಇದೇ ಸರಣಿಯಲ್ಲಿ ‘ಮೂನ್‌ ಸೆಲ್ಲರ್‌’ ಎನ್ನುವ ಪಾತ್ರವೊಂದನ್ನು ಕಾಣಬಹುದು. ಕನಸುಗಳನ್ನು ಮಾರುವ ಮೋಡಿಗಾರನೇ ಈ ಮೂನ್‌ ಸೆಲ್ಲರ್‌. ಸಾಧನೆಗಳಿಗೆ ಕನಸುಗಳೇ ಪ್ರೇರಣೆಯಲ್ಲವೇ. ಕನಸು ಮಾರಲು ಒಬ್ಬ ಮೋಡಿಗಾರನಿದ್ದರೆ ಎನ್ನುವ ಪರಿಕಲ್ಪನೆಯಲ್ಲಿ ಈ ಮೂನ್‌ ಸೆಲ್ಲರ್‌ ಸೃಷ್ಟಿಯಾಗಿದ್ದಾನೆ.

ಈ ಸಂಗ್ರಹದ ಕಲಾಕೃತಿಗಳಲ್ಲಿ ಹುಂಜ ಹಾಗೂ ನಾಯಿಯನ್ನು ಸಾಮಾನ್ಯವಾಗಿ ನೋಡಬಹುದು. ಇದಕ್ಕೆ ಅವರು ನೀಡುವ ವಿಶ್ಲೇಷಣೆ ಹೀಗಿದೆ: ‘ಹುಂಜಕ್ಕಿರುವ ಗತ್ತು, ಗೈರತ್ತೇ ಬೇರೆ. ಅದು ನಿಂತುಕೊಳ್ಳುವ ಭಂಗಿಯಲ್ಲಿ ಅಹಂ ಇರುತ್ತದೆ. ಆ ಭಂಗಿಯೇ ನನ್ನನ್ನು ಆಕರ್ಷಿಸುತ್ತದೆ. ಯಾವಾಗಲೂ ಅದು ಆಕ್ರಮಣಶೀಲ ವಾಗಿರುತ್ತದೆ. ಹಣ್ಣು ಮಾರುವವರು, ನಾಯಿ, ಹುಂಜ ಇವೆಲ್ಲವೂ ಶ್ರೀಸಾಮಾನ್ಯರ ಬದುಕಿನ ಚಿತ್ರಣವನ್ನು ವಿಶಿಷ್ಟವಾಗಿ ಕಟ್ಟಿಕೊಡುತ್ತವೆ’.

ಬರಿಯ ರೇಖಾಚಿತ್ರಗಳೇ ಮೂಡಿದವಲ್ಲ ಅನಿಸಿದಾಗ ಅಕ್ರಿಲಿಕ್‌ ಕಡೆಗೂ ಹೊರಳಿದ್ದಾರೆ. ರೇಖೆಗಳ ನಡುವೆ ಗಾಢ ಕಪ್ಪು ಬಣ್ಣವನ್ನು ಬಳಸಿ ಏಕತಾನತೆಯನ್ನು ಮುರಿದಿದ್ದಾರೆ. ತೆಳು ರೇಖೆಗೆ ಸಂವಾದಿಯಾಗಿ ಗಾಢ ಕಪ್ಪು ಬೆರೆಸಿ ಹೊಸ ಕಲಾಸೂಕ್ಷ್ಮವೊಂದನ್ನು ತೆರೆದಿಟ್ಟಿದ್ದಾರೆ. ಪೋಟ್ರೇಟ್‌ಗಳ ವಿಚಾರದಲ್ಲಿಯೂ ಚೌಕಟ್ಟು ಮುರಿದಿದ್ದಾರೆ. ಇಲ್ಲಿಯೂ ಎಡಗೈಗಿರುವ ಅನೂಹ್ಯ ಕಲಾಶಕ್ತಿಯನ್ನು ಬಳಸಿಕೊಂಡಿರುವುದು ವಿಶೇಷ.

ಸತತ ಅಭ್ಯಾಸದಿಂದಾಗಿ ಎಡಗೈಯೂ ಬಲಗೈನಂತೆ ಪಳಗಿಬಿಟ್ಟರೆ ಎಂಬ ಭಯ ಪ.ಸ. ಕುಮಾರ್‌ ಅವರಿಗೆ ಇದ್ದೇ ಇದೆ. ಅದು ಪಳಗಿಬಿಟ್ಟರೆ ತನ್ನ ವಿಶಿಷ್ಟತೆಯನ್ನು ಕಳೆದುಕೊಂಡು ಬಿಡುತ್ತದೆ. ಪಳಗಿತು ಎನಿಸಿದಾಗೆಲ್ಲ ಮೂರು–ನಾಲ್ಕು ತಿಂಗಳು ಎಡಗೈಗೆ ವಿರಾಮ ಕೊಡುತ್ತೇನೆ ಎನ್ನುವ ಅವರು, ‘ಎಡಗೈಯಲ್ಲಿ ಚಿತ್ರ ರಚನೆ ಎಂಬುದು ಕಸರತ್ತಲ್ಲ. ಅದರ ವಿಶೇಷ ಗುಣದ ಕಾರಣಕ್ಕಾಗಿ ಎಡಗೈಯಲ್ಲಿ ಚಿತ್ರ ಬರೆಯುವುದನ್ನು ಪ್ರೀತಿಸುತ್ತೇನೆ’ ಎಂದು ಕೈಗಳ ಕಲಾವಂತಿಕೆಯ ಸೂಕ್ಷ್ಮಗಳನ್ನು ಹಂಚಿಕೊಂಡರು.

27ರವರೆಗೆ ಪ್ರದರ್ಶನ

ಕಲಾವಿದ ಪ.ಸ. ಕುಮಾರ್ ಅವರು ಎಡಗೈಯಲ್ಲಿ ಚಿತ್ರಕಲೆ ಬಿಡಿಸಲು ದೊಡ್ಡ ಕಾರಣವೊಂದಿದೆ. ಹಾಗೆ ಅವರು ಕ್ಯಾನ್ವಾಸ್‌ ಮೇಲೆ ಅಕ್ರಿಲಿಕ್‌ ಬಳಸಿ ಮಾಡಿದ ನಾಲ್ಕು ಕಲಾಕೃತಿಗಳೂ ಸೇರಿ ಒಟ್ಟು 85 ಕಲಾಕೃತಿಗಳು ಪ್ರದರ್ಶಿತವಾಗುತ್ತಿವೆ. ಬೆಂಗಳೂರಿನ ವಸಂತನಗರದ ಆರ್ಟ್‌ಹೌಸ್‌ನಲ್ಲಿ ಈ ಕಲಾಪ್ರದರ್ಶನ ನವೆಂಬರ್‌ 27ರವರೆಗೆ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT