ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ರಾಜ್ಯ ಆಳುವವರ ಬಗ್ಗೆ ಜಿಗುಪ್ಸೆ ಹುಟ್ಟಿದ ಆ ಕ್ಷಣ ಬೈಲೈನ್ ಗುಂಗಿನಿಂದ ಹೊರಬಂದೆ'

Last Updated 19 ಆಗಸ್ಟ್ 2019, 2:42 IST
ಅಕ್ಷರ ಗಾತ್ರ

ದಾವಣಗೆರೆ ಮತ್ತು ಕಲಬುರ್ಗಿಯ ಗ್ರಾಮೀಣ ಪ್ರದೇಶಗಳನ್ನು ಸುತ್ತಾಡಿ ಫೋಟೊಗ್ರಫಿ ಮಾಡಿರುವ ಪಿ.ಎಸ್.ಕೃಷ್ಣಕುಮಾರ್ ಪ್ರಸ್ತುತ'ಪ್ರಜಾವಾಣಿ' ಬೆಂಗಳೂರು ಕಚೇರಿಯಲ್ಲಿ ಛಾಯಾಗ್ರಾಹಕರಾಗಿದ್ದಾರೆ. ತಮ್ಮನ್ನು ಅತಿಯಾಗಿ ಕಾಡುವ ಚಿತ್ರಗಳ ಬಗ್ಗೆ ಅವರ ಬರಹ ಇಲ್ಲಿದೆ. ಅಂದಹಾಗೆ ಇಂದು (ಆ.19) ವಿಶ್ವ ಫೋಟೊಗ್ರಫಿ ದಿನ.

---

ಒಂದು ಚಿತ್ರ ಸಾವಿರ ಶಬ್ದಕ್ಕೆ ಸಮ...

-ಇದು ನಮ್ಮ ಛಾಯಾಚಿತ್ರ ಪತ್ರಿಕೋದ್ಯಮದಲ್ಲಿರುವ ಮಿತ್ರರಿಗೆ ಯಾವತ್ತೂ ತಿಳಿದಿರುವ ವಾಕ್ಯ. 2003ರಿಂದ ಪತ್ರಿಕಾ ಛಾಯಾಗ್ರಾಹಕನಾಗಿ ಈ ಕ್ಷೇತ್ರದಲ್ಲಿ ಇದ್ದೇನೆ. ಕರ್ನಾಟಕದ ಹಲವು ಜಿಲ್ಲೆಗಳನ್ನು ಕ್ರಮಿಸಿದ್ದೇನೆ. ದಾವಣಗೆರೆ ಹಾಗೂ ಕಲಬುರ್ಗಿ ಬ್ಯೂರೋದಲ್ಲಿ ಕೆಲಸ ಮಾಡಿದಾಗ ಅನೇಕ ಮರೆಯಲಾಗದ ಅನಭವಗಳು ಆಗಿವೆ. ನೆಗೆಟಿವ್‌ ಫಾರ್ಮೇಟ್‌ನ ಕೊನೆಯ ದಿನಗಳವು, ಅಂದು ನಾವು ಲೆಕ್ಕ ಹಾಕಿ ಚಿತ್ರಗಳನ್ನು ತೆಗೆಯುತ್ತಿದ್ದೆವು. ಆದರೆ ನಂತರ ಡಿಜಿಟಲ್‌ ಕ್ಯಾಮೆರಾ ಕೈಗೆ ಬಂದ ನಂತರ ನಮ್ಮ ಕೆಲಸಕ್ಕೆ ಒಂದು ಹೊಸ ಅಸ್ತ್ರ ಸಿಕ್ಕಂತೆ ಆಯಿತು.

ಬಿಸಿಲ ನಾಡಿನ ನೀರಿನ ಬವಣೆ...

ರಾಜಧಾನಿಗೆ ಬರುವ ಮುನ್ನ ನಾಲ್ಕು ವರ್ಷ ಕರ್ನಾಟಕದ ಉತ್ತರ ಭಾಗ ಕಲಬುರ್ಗಿಯಲ್ಲಿ ಕೆಲಸ ಮಾಡುವ ಅವಕಾಶ. ಪಟ್ಟಣದಲ್ಲಿರುವ ನಮಗೆ ನೀರಿನ ಮೌಲ್ಯ ತಿಳಿಯಬೇಕಾದರೆ ಬಿಸಿಲ ನಾಡು ಕಲಬುರ್ಗಿಯ ಹಳ್ಳಿಗಳಿಗೆ ಭೇಟಿ ನೀಡಬೇಕು. ಅದೇ ರೀತಿ ಸುದ್ದಿಗಾಗಿ ಜಿಲ್ಲೆಯ ಹಲವು ಹಳ್ಳಿಗಳಿಗೆ ಭೇಟಿ ನೀಡಿದ್ದೆ. ಅದೇ ರೀತಿ ಪಕ್ಕದ ಯಾದಗಿರಿ ಜಿಲ್ಲೆಯ ಕೆಲವು ಹಳ್ಳಿಗಳಿಗೆ ಭೇಟಿ ನೀಡಿದ್ದೆ. ಈ ಹಳ್ಳಿಯ ಹೆಣ್ಣು ಮಕ್ಕಳು ನಿಜವಾಗಿಯೂ ಶಾಪಗ್ರಸ್ಥರೆನ್ನಬಹುದು. ತಮ್ಮ ದೈನಂದಿನ ದಿನಚರಿಯಲ್ಲಿ ಹೆಚ್ಚಿನ ಭಾಗ ಅವರು ನೀರಿಗಾಗಿ ಕಳೆಯುತ್ತಾರೆ.

ಶಹಾಪೂರ ತಾಲ್ಲೂಕಿನ ನಂದಿಹಳ್ಳಿ ಗ್ರಾಮದ ಹೆಣ್ಣು ಮಕ್ಕಳು ಬತ್ತಿದ ನದಿಯಲ್ಲಿ ಮರಳನ್ನು ಅಗೆದು ನೀರಿನ ಒಸರಿಗೆ ಗಂಟೆ ಗಟ್ಟಲೆ ಕಾಯುತ್ತಾ ಒಂದು ಕೊಡ ನೀರು ತುಂಬಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ ಚಿತ್ರ ತೆಗೆಯುತಿದ್ದಾಗ ನನ್ನ ತಲೆಯೊಳಗೆ ಕೇವಲ ಪೇಜ್‌ ಒನ್ ಬೈಲೈನ್‌ ಮಾತ್ರ ಓಡಾಡುತಿತ್ತು. ಅಲ್ಲಿದ್ದ ಸಣ್ಣ ಬಾಲಕಿ ನನ್ನ ಬಳಿ ಇದ್ದ ಬಿಸ್ಲರಿ ಬಾಟಲಿ ನೀರು ಕುಡಿದು ಸಂತಸ ಪಟ್ಟಾಗ ನನಗೆ ನಮ್ಮ ರಾಜ್ಯಆಳುವವರ ಬಗ್ಗೆ ಜಿಗುಪ್ಸೆ ಹುಟ್ಟಿಕೊಂಡಿತು. ಸ್ವಾತಂತ್ರ್ಯ ಬಂದು ಅರ್ಧ ಶತಮಾನಕ್ಕಿಂತಲೂ ಹೆಚ್ಚು ಕಳೆದಿದೆ, ಆದರೂ ಇಂದಿಗೂ ಹಳ್ಳಿಗೆ ಜನರ ದಾಹ ನೀಗಿಸಲು ನೀರು ತಲುಪಿಸಲು ಆಗಿಲ್ಲ ನಮ್ಮ ಸರ್ಕಾರಗಳಿಗೆ. ನಂತರ ಚಿತ್ರದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅಲ್ಲಿಯ ಜನರೊಂದಿಗೆ ಅವರ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಾ ಬೈಲೈನ್‌ ಗುಂಗಿನಿಂದ ಹೊರ ಬಂದೆ.

ನಾನು ಈ ಫೋಟೊ ತೆಗೆದು ಸುಮಾರು 8 ವರ್ಷಗಳಾಗಿವೆ. ಆದರೆಇಂದಿಗೂ ಕೆಲವೊಮ್ಮೆ ಆ ಜನರು ನೀರಿಗಾಗಿ ಪಡುವ ಕಷ್ಟಗಳನ್ನು ನೆನೆದಾಗಯಾವುದೋ ಒಂದು ಶೂನ್ಯ ಮನದಲ್ಲಿ ಆವರಿಸಿಕೊಳ್ಳುತ್ತದೆ.

ಹಳ್ಳಿಗೆ ಹಳ್ಳಿಯೇ ಬೆಂಕಿಗೆ...

ಅದು ದಾವಣಗೆರೆಯಲ್ಲಿ ಕೆಲಸದ ದಿನಗಳು. ದಾವಣಗೆರೆಯಿಂದ ಹತ್ತು ಕಿ.ಮೀ. ದೂರದ ಹಳ್ಳಿ ಕಂಚಿಕೆರೆ. ಅಲ್ಲಿ ಬಣವೆಗೆ ಬಿದ್ದ ಬೆಂಕಿ ಇಡೀ ಊರನ್ನೆ ತನ್ನ ಕೆನ್ನಾಲೆಗೆ ಆಪೋಶನ ಪಡೆದಿತ್ತು. ಆ ಸಂದರ್ಭದಲ್ಲಿ ಆ ಊರಿಗೆ ಹೋಗಿ ತೆಗೆದ ಸುದ್ದಿ ಚಿತ್ರಗಳು ನನಗೆ ನನ್ನ ವೃತ್ತಿ ಜೀವನದಲ್ಲಿ ಒಂದು ಒಳ್ಳೆಯ ಹೆಸರು ತಂದು ಕೊಟ್ಟಿತು. ಸತತ ಒಂದು ವಾರ ಅಲ್ಲಿಗೆ ನಿತ್ಯ ಹೋಗಿ ಪರಿಸ್ಥಿತಿಯ ಚಿತ್ರಣ ಸೆರೆ ಹಿಡಿದಿದ್ದೆ. ಇಂದಿಗೂ ಅಲ್ಲಿಯ ನನ್ನ ಮಿತ್ರರು ಆ ಚಿತ್ರಗಳನ್ನು ನೆನಪಿನಲ್ಲಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT