ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಚಂದ್ರ ತೇಜಸ್ವಿ: ‘ನಿರುತ್ತರ’ ಎಂಬ ಮಾಯಾಲೋಕ

Published 19 ಆಗಸ್ಟ್ 2023, 23:30 IST
Last Updated 19 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ನರೇಂದ್ರ ರೈ ದೇರ್ಲ

ಮೂಡಿಗೆರೆಯ ಕಾಡು, ಕಾಫಿ ತೋಟದ ನಡುವೆ ಇರುವ ‘ನಿರುತ್ತರ’ದಲ್ಲಿ ತೇಜಸ್ವಿ ಇಲ್ಲದೆ ಒಂದೂವರೆ ದಶಕ. ಅವರ ಪತ್ನಿ ರಾಜೇಶ್ವರಿ ಇಲ್ಲದೆ ಒಂದೂವರೆ ವರ್ಷ. ತೇಜಸ್ವಿಯವರ ಪರಿಸರ ಬರಹದ ಶಕ್ತಿಕೇಂದ್ರವೇ ಆಗಿತ್ತು ಈ ‘ನಿರುತ್ತರ’. ಅದರ ಸುತ್ತಲಿನ ತೋಟವನ್ನು ಇತ್ತೀಚೆಗೆ ಗಮನಿಸಿ, ಅನುಭವಿಸಿ ಬಂದ ಓದುಗ ಒಡನಾಡಿಯ ಲೇಖನವಿದು.

ಬರಹದ ದಾರಿಯಲ್ಲಿ ಪೂರ್ಣಚಂದ್ರ ತೇಜಸ್ವಿಯವರನ್ನು ಅರ್ಥೈಸುವುದಕ್ಕೂ ಬದುಕಿನ ದಾರಿಯಲ್ಲಿ ತಿಳಿಯುವುದಕ್ಕೂ ವ್ಯತ್ಯಾಸವಿದೆ. ಈ ಎರಡನೆಯ ಭಾಗ್ಯವನ್ನು ಹೆಚ್ಚು ಗಮನಿಸಿ, ಅನುಭವಿಸಿದವನು ನಾನು. ತೇಜಸ್ವಿಯವರು ನೇರಾನೇರವಂತೆ, ಓದುಗರೊಂದಿಗೆ ಹೆಚ್ಚು ಬೆರೆಯುವುದಿಲ್ಲವಂತೆ, ಮೌನಿಯಂತೆ ಎಂದೆಲ್ಲಾ ಹಿಂದೆ ಮಾತನಾಡುವವರನ್ನು ಕೇಳಿದ್ದೇನೆ, ನೋಡಿದ್ದೇನೆ. ಆದರೆ ನಿಜವಾಗಿ ತೇಜಸ್ವಿಯವರು ಹಾಗಿರಲಿಲ್ಲ. ಅವರು ದಿನದ ಸಮಯವನ್ನು ಹಾಳಾಗಲು ಬಿಡುತ್ತಿರಲಿಲ್ಲ. ಜಗಲಿ ಹರಟೆ ಅವರಿಗೆ ಇಷ್ಟವಿರಲಿಲ್ಲ. ಅವರು ಕಾಡು, ಕಾಫಿ ತೋಟವನ್ನು ಆಯ್ಕೆ ಮಾಡಿಕೊಂಡು ‘ನಿರುತ್ತರ’ವನ್ನು ತನಗೆ ಬೇಕಾದಂತೆ ಕಟ್ಟಿಕೊಂಡದ್ದೇ ಅದಕ್ಕೆ. ಜನಾರಣ್ಯದ ಮಧ್ಯೆ ತಾನು ಕಳೆದು ಹೋಗಬಾರದೆಂಬ ಹಠಕ್ಕೆ!

ಹಾಗೆ ನೋಡಿದರೆ ಇವತ್ತಿಗೂ ದಿನದ ಇಪ್ಪತ್ನಾಲ್ಕು ಗಂಟೆ ಪೂರ್ಣ ಒದಗುವುದು ಈ ನೆಲದ ಕೃಷಿಕರಿಗೇ. ಅಲ್ಲಿ ಅವರು ಸಮಯದೊಂದಿಗೇ ಬಾಳುತ್ತಾರೆ. ನಾಗರಿಕ ಜಗತ್ತಿನಿಂದ ದೂರವಾಗಿ ತೇಜಸ್ವಿ ‘ನಿರುತ್ತರ’ವನ್ನು ಕಟ್ಟಲು ಬಲವಾದ ಕಾರಣ ಇದೊಂದೇ. ಅದು ಪ್ರಶ್ನೆ, ಉತ್ತರ ಎರಡೂ ಇಲ್ಲದ ಜಾಗ ಮತ್ತು ಆ ನಿರುದ್ವಿಗ್ನ ಏಕಾಂತದಲ್ಲಿ ತನಗೆ ತಾನೇ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವ ಜಾಗ. ತೇಜಸ್ವಿ ‘ನಿರುತ್ತರ’ದಲ್ಲಿ ಇದ್ದಷ್ಟು ದಿನ ಅದನ್ನೇ ಮಾಡಿದ್ದು ಮತ್ತು ಹೆಚ್ಚು ನೈತಿಕವಾಗಿ ಬದುಕಿದ್ದು. ಅವರ ಶಿಷ್ಯ ಶಿವ ಈಗಲೂ ತೇಜಸ್ವಿ ಮುದ್ದಿಸಿಟ್ಟು ಹೋಗಿರುವ ಹಸಿರನ್ನು ಹಾಗೆಯೇ ನಳನಳಿಸುವಂತೆ ನೋಡಿಕೊಳ್ಳುತ್ತಿದ್ದಾರೆ.

ಮನುಷ್ಯ ಹೆಚ್ಚು ನೈತಿಕವಾಗಿ ಬಾಳಲು ನೆಲ, ಕಾಡು, ಹಸಿರು, ಕೆಸರು ಕೊಡುವಷ್ಟು ಪಾಲು ನಗರ, ಮಹಾನಗರಗಳು ಇವತ್ತು ಕೊಡಲಾರವು. ಮೋಸ, ವಂಚನೆ, ಹುಸಿ ನಗುಗಳಿಗೆ ಪಟ್ಟಣ ಹೆಚ್ಚು ಅವಕಾಶ ಮಾಡಿ ಕೊಡುತ್ತದೆ. ಅಲ್ಲಿ ಮನುಷ್ಯ ಹೆಚ್ಚು ಮಾತನಾಡಬೇಕಾಗುತ್ತದೆ. ತೇಜಸ್ವಿ ಹಾಗಲ್ಲ, ಅವರು ಹೆಚ್ಚು ಮಾತನಾಡಿದ್ದು, ಬಾಳಿದ್ದು ಕೀಟ, ಪತಂಗ, ನಾಯಿ, ಮೀನು, ಹಕ್ಕಿ, ಉಡ, ಇರುವೆಗಳೊಂದಿಗೆ. ಪ್ಯಾರ, ವೆಂಕ್ಟ, ಮಂದಣ್ಣ, ಬಿರಿಯಾನಿ ಕರಿಯಪ್ಪ ಮುಂತಾದ ನೆಲದುಡಿಮೆಯ ಆಳುಗಳೊಂದಿಗೆ. ನಗರ ಇಡುವ ಹೆಜ್ಜೆಯಡಿಯಲ್ಲಿ ಅವರು ಏನೂ ಹುಡುಕಲಿಲ್ಲ. ಅವರಿಗೆ ತಮ್ಮ ಕಾಫಿ ತೋಟದ ಮೂಲೆ ಮೂಲೆಯೂ ವಿಸ್ಮಯದ ಆಕರಗಳೇ. ಕೃಷಿಕರ ಬದುಕು ಯಾವಾಗಲೂ ಹೀಗೆಯೇ, ದಿನಾ ನಡೆಯುವ ಅದೇ ಗದ್ದೆಯ ಬದು, ಕೆರೆಯ ದಂಡೆ, ತೆಂಗು ಕಂಗುಗಳ ಬುಡ, ಮುಳ್ಳುಬೇಲಿಯ ಮೇಲೆ ಕೂತ ಕಪ್ಪೆ, ತೆನೆಯಿಂದ ಉರುಳುವ ಮಂಜುನೀರು ಎಲ್ಲವೂ ಏನಾದರೂ ಕೊಡುತ್ತಲೇ ಇರುತ್ತವೆ!

ಎಷ್ಟೋ ಬಾರಿ ‘ದೇರ್ಲ, ಒಂದೈದು ನಿಮಿಷ... ಈಗ ಬಂದೆ. ಇಲ್ಲೇ ಕೂತಿರಿ’ ಎಂದು ನಿರುತ್ತರದ ಜಗಲಿಯಲ್ಲಿ ಕೂರಿಸಿ ತೇಜಸ್ವಿ ಎಲ್ಲೂ ಹೋಗದೆ ಅದೇ ಜಗಲಿಯಲ್ಲಿ ಸುತ್ತಾಡಿದ್ದನ್ನು ನಾನು ಗಮನಿಸಿದ್ದೇನೆ. ತೇಜಸ್ವಿ ಕಾಡಿಗೋ, ಕೆರೆದಂಡೆಗೋ, ತೋಟಕ್ಕೋ ಇಳಿಯದೆ ನನಗೆ ಕಾಣುವಷ್ಟೇ ದೂರದಲ್ಲಿ ಅದ್ಯಾವುದೋ ಜೇಡರ ಬಲೆ ಮುಂದೆ ಧ್ಯಾನಸ್ಥನಾದುದನ್ನು ಗಮನಿಸಿದ್ದೇನೆ. ಇಂಥ ಮರೆಯುವ ಶಕ್ತಿಯನ್ನು ಹಳ್ಳಿ, ತೋಟವಲ್ಲದೆ ಒತ್ತಡದ ತ್ರಿಶಂಕು ಮಹಾನಗರ ಕೊಡಲು ಸಾಧ್ಯವೇ?

ತೇಜಸ್ವಿ ಇದ್ದಬದ್ದ ಮರಗಳನ್ನು ತೆಗೆದು ಮಟ್ಟಸ ಸವರಿ ಮನೆ ಕಟ್ಟಲಿಲ್ಲ. ಮರಗಳ ನಡುವೆಯೇ ಅವುಗಳನ್ನು ಮುಟ್ಟದೆ ‘ನಿರುತ್ತರ’ವನ್ನು ಕಟ್ಟಿದರು. ಮರದ ಗೆಲ್ಲು ಮನೆ ಮಾಡಿಗೆ ತಾಗಬಾರದು, ಬೇರು ಒಳಗಡೆ ನುಸುಳಬಾರದು, ಚಾವಣಿಗೆ ಗೆದ್ದಲು ಹತ್ತಬಾರದು, ಮನೆ ಸುತ್ತ ಅಂಗಳ ಬೇಕು, ಅಂಗಳ ಸುತ್ತ ನರಿ ನಾಯಿಗಳು ನುಸುಳದಂತೆ ಗೋಡೆ, ಗೇಟು ಬೇಕು, ನೆಲದ ಮೇಲೆ ಸಿಮೆಂಟು ಇಂಟರ್‌ಲಾಕ್ ಹಾಕಬೇಕು- ಇದ್ಯಾವುದೂ ತೇಜಸ್ವಿಯವರಿಗೆ ಮುಖ್ಯವಾಗಲೇ ಇಲ್ಲ. ಅವರ ಮನೆ ಹಿಂದೆ ಮುಂದೆ ಭಾಗಶಃ ನವನಾಗರಿಕತೆಯ ಕುರುಹುಗಳೂ ಇಲ್ಲ. ಈ ಕಾರಣಕ್ಕಾಗಿಯೇ ಮರಬಿದ್ದು, ಗೆದ್ದಲು ಹಿಡಿದು ಅವರು ಆಗಾಗ ಮನೆ ರಿಪೇರಿ ಮಾಡಿಸಬೇಕಾಯಿತು. ಭೂಮಿಯಾಳದ ಬೇರು ನುಸುಳಿ ಸಿಮೆಂಟು, ನೆಲ, ಜಗಲಿ ಮುರಿಯುವುದು ಇದ್ದೇ ಇದೆ. 

ಪೂರ್ಣಚಂದ್ರ ತೇಜಸ್ವಿ
ಪೂರ್ಣಚಂದ್ರ ತೇಜಸ್ವಿ

ಸಾಮಾನ್ಯವಾಗಿ ಮನೆ ಕಟ್ಟುವಾಗ ಪಾಯಕ್ಕೆ ಕಲ್ಲಿಡುವ ಮೇಸ್ತ್ರಿಯಿಂದ ಹಿಡಿದು ಮಾಡಿಗೆ ಹಂಚು ಇಡುವ ಆಚಾರಿಯವರೆಗೆ ಸಲಹೆ ಸೂಚನೆ ಕೊಡುವವರು ನೂರಾರು ಜನ. ಸುಮ್ಮನೆ ರಿಕ್ಷಾದಲ್ಲಿ ಎರಡು ಚೀಲ ಸಿಮೆಂಟು ತಂದು ಹಾಕುವ ಡ್ರೈವರ್ ಕೂಡ ಒಂದೈದು ನಿಮಿಷ ಹೊಸಮನೆಯ ಪಾಯದಲ್ಲಿ ನಿಂತು ಸಲಹೆ ಕೊಡುತ್ತಾನೆ. ಕೇಳುವ ಜಾಯಮಾನ ತೇಜಸ್ವಿಯವರದ್ದಲ್ಲ. ಅವರು ಕಟ್ಟಿದ್ದು ಅವರ ಮನೆ. ಆದುದರಿಂದ ಆ ಮನೆಗೆ ಆಯಪಾಯ, ವಾಸ್ತು ಯಾವುದೂ ಇಲ್ಲ. ಸಮೃದ್ಧ ಗಾಳಿ ಬೆಳಕು, ವಿಶಾಲವಾದ ಹಜಾರ, ಜಗಲಿ ಎಲ್ಲದಕ್ಕಿಂತ ಹೆಚ್ಚು ಏಕಾಂತಕ್ಕೆ ಅಗತ್ಯವಿರುವುದೆಲ್ಲ ಅಲ್ಲಿದೆ. ಅದಕ್ಕಿಂತ ಹೆಚ್ಚು ಹೊರಗಡೆಯಿಂದಲ್ಲ, ನಿರುತ್ತರದ ಒಳಗಡೆಯಿಂದ ಹೊರಗಡೆ ನೋಡಬೇಕು. ಕಾಣಿಸುವ ನಿಬಿಡ ಹಸಿರು, ಕೆರೆ, ತೊರೆ, ಗಿಡಮರ ಬಳ್ಳಿಗಳು ಎಲ್ಲವೂ ಚೆಂದ ಚೆಂದ....

‘ನಿರುತ್ತರ’ದ ಪೋರ್ಟಿಕೊ ತುಂಬಾ ವಿಶಾಲವಾದುದು ಮತ್ತು ಪಾರದರ್ಶಕವಾದುದು. ಗಾಜಿನ ಕಿಟಕಿಯಿಂದ ಹೊರಗಡೆಯ ಕಾಡು, ಅಲ್ಲಿ ನಡೆಯುವ ನಿಸರ್ಗಕ್ರಿಯೆಯ ಸಮೀಪದರ್ಶನ ಮಾಡಿಸುವ ಏಕಾಂತವಿದು. ಎಷ್ಟೋ ಬಾರಿ ಹಕ್ಕಿ ಕೀಟಗಳು ನೇರವಾಗಿ ಬಂದು ಇಲ್ಲೊಂದು ಮನೆಯಿದೆ, ಕಿಟಕಿ ಗಾಜು ಇದೆ ಎಂಬುದನ್ನು ಮರೆತು ಕನ್ನಡಿಗೆ ಡಿಕ್ಕಿ ಹೊಡೆಯುತ್ತವೆ. ಗಂಗೆಹುಳು, ಇಂಬಳ, ಚೆರಟೆ ಜಗಲಿಗೆ ಹತ್ತಿ ಹರಿದಾಡುತ್ತವೆ. ಇದ್ದಕ್ಕಿದ್ದಂತೆ ಅಳಿಲು ಕಂಬದ ಮೇಲೆ ಹರಿದಾಡಿ ಮಾಯವಾಗುತ್ತದೆ. ಓಂತಿ ಅದ್ಯಾವುದೋ ಕಾಡು ಹಾವು ಜಗಲಿಯ ಗಿಡಗಳ ಮೇಲೆ ಹರಿದಾಡುತ್ತವೆ. ನೀರು ಬಾವಲಿ ಟ್ಯೂಬ್‌ಲೈಟ್ ಮೇಲೆಯೇ ಮಣ್ಣು ತಂದು ಗೂಡು ಕಟ್ಟಿದೆ. ಜಗಲಿಗೆ ದಿನಾ ಬೀಳುವ ಹೂವು, ತರಗೆಲೆ ಅವುಗಳನ್ನೆಲ್ಲಾ ಗುಡಿಸಿ ಸ್ವಚ್ಛ ಮಾಡಬೇಕಾದ ದಿನವಹೀ ಕೆಲಸ- ಇದೆಲ್ಲ ಕಾರಣಗಳಿಗೆ ನಗರಮುಖಿಗಳಿಗೆ ಇಂಥ ಮನೆಗಳಲ್ಲಿ ಬದುಕುವವರು ಅತಿಮಾನುಷರಾಗಿ ಕಾಣಿಸುತ್ತಾರೆ!

ತೇಜಸ್ವಿಯವರಲ್ಲಿ ಎರಡು ಸಮಯಗಳಿದ್ದವು. ಒಂದು ಅವರು ಬರೆಯುವ ಸಮಯ. ಇನ್ನೊಂದು ಬಾಳುವ ಸಮಯ. ಇವೆರಡಕ್ಕೂ ಕಾಡು ಅವರಿಗೆ ಪೂರಕವಾಗಿಯೇ ಇತ್ತು. ತೇಜಸ್ವಿಯವರ ಯಾವುದೇ ಕೃತಿಗಳನ್ನು ನೋಡಿ, ಪ್ರಬಂಧ, ಕತೆ, ಕಾದಂಬರಿ ಅವುಗಳಲ್ಲಿ ಬರುವ ಗರಿಷ್ಠ ಪಾತ್ರಗಳು ಕಾಫಿ ತೋಟದ ಕೆಲಸ, ಖರೀದಿ, ರಿಪೇರಿ ದುಡಿಮೆಗೆಂದು ‘ನಿರುತ್ತರ’ಕ್ಕೆ ಬಂದು ಹೋಗುವ ಪಾತ್ರಗಳೇ. ನಮ್ಮ ಮನೆಗಳಿಗೂ ಅಂತಹದ್ದೇ ಪಾತ್ರಗಳು ಬರುತ್ತವೆ. ಆದರೆ ಅವುಗಳ ಬಗ್ಗೆ ಅವರು ನೀಡುವ ಒಳಸುರಿಗಳ ಬಗ್ಗೆ ಬರೆಯಬಹುದೆಂದು ನಮಗೆ ಅನಿಸುವುದೇ ಇಲ್ಲ. ಹಾಗಂತ ತೇಜಸ್ವಿ ಹೊರಗಡೆ ನೋಡದವರೆಂದಲ್ಲ, ಅವರಿಗೆ ಮಂದಣ್ಣನೊಂದಿಗೆ ವಿಜ್ಞಾನಿ ಕರ್ವಾಲೋ ಕೂಡ ಗೊತ್ತು!

ಹಾರುವ ಓತಿಯ ಜತೆಗಿನ ಪ್ರಯಾಣವನ್ನೇ ಗಮನಿಸಿ. ಅಲ್ಲಿ ಮಂದಣ್ಣ ಮತ್ತು ಕರ್ವಾಲೋ ಜತೆ ಜತೆಯಾಗಿಯೇ ಸಾಗುತ್ತಾರೆ. ಕರ್ವಾಲೋ ದೃಷ್ಟಿ ಮೇಲ್ಮುಖ. ಅವರು ಓತಿಯನ್ನು ಮರದ ಮೇಲೆ ಹುಡುಕುತ್ತಾರೆ. ವಿಜ್ಞಾನ ಯಾವಾಗಲೂ ಹಾಗೆಯೇ ಮೇಲೆ ಮೇಲೆ ನೋಡುತ್ತದೆ. ಮಂದಣ್ಣ ಭಾಗಶಃ ನೆಲ ನೋಡಿಕೊಂಡೇ ಕಾಡಿನುದ್ದಕ್ಕೂ ಮಣ್ಣಿನ ಮೇಲೆಯೇ ನಡೆಯುತ್ತಾನೆ. ಈ ದೇಶದ ನಾಟಿ ಯಾವಾಗಲೂ ಹಾಗೆಯೇ ನೆಲಮುಖಿ. ಮಂದಣ್ಣ-ಕರ್ವಾಲೋ ಮೂಲಕ ತೇಜಸ್ವಿ ನೆಲ ಮತ್ತು ಆಕಾಶವನ್ನು ಮಲೆನಾಡಿನ ದಟ್ಟ ಕಾಡೊಳಗಡೆ ಜೋಡಿಸುತ್ತಾರೆ. ಸಾಮಾನ್ಯರಿಗೆ ಪಶ್ಚಿಮ ಘಟ್ಟದ ದಟ್ಟಾರಣ್ಯದೊಳಗೆ ಪೊದೆ, ತರಗೆಲೆಯ ಹಾಗೆ, ಹಸಿರು ಪೊದೆಯೊಳಗೆ ನೆಲವೂ ಕಾಣಿಸುವುದಿಲ್ಲ, ಆಕಾಶವೂ ಕಾಣಿಸುವುದಿಲ್ಲ. ಹಸಿರಿಗೆ ಎಲ್ಲವನ್ನೂ ಮುಚ್ಚುವ ಶಕ್ತಿ ಇದೆ.

ಇವೆರಡನ್ನೂ ಜೋಡಿಸುವ ತೇಜಸ್ವಿ ಸಾದ್ಯಂತವಾಗಿ ಆಕಾಶವನ್ನು ನೋಡಬಲ್ಲರು. ತರಗೆಲೆಯ ಹಾಸಿಗೆಯನ್ನು ಬಗೆದು ಕಾಡೊಳಗಡೆಯ ಒಂದು ಹಿಡಿ ಮಣ್ಣು ಹಿಡಿದು ಅಲ್ಲಿರುವ ಅಸಂಖ್ಯಾತ ಕ್ರಿಮಿಕೀಟಗಳ ಕತೆ ಹೇಳಬಲ್ಲರು. ಆಕಾಶಕಾಯ, ಭೂಮಿಯಡಿಯ ಖನಿಜ, ಮರದ ತೊಗಟೆಗಂಟಿದ ಕರ್ಕಶ ಶಬ್ದ ಮಾಡುವ ಜೀರುಂಡೆ ಬೇಡ ಬಿಡಿ, ತನ್ನ ಬೇಟೆಕೋವಿಯ ಗುರುಬಿಂದುವಿನ ಮೇಲೆ ಕೂತು ಅದ್ಯಾವುದೋ ಅನಾಮಿಕ ಕೀಟದ ಬಗ್ಗೆ ಹತ್ತಾರು ಪುಟ ಬರೆಯಬಲ್ಲರು.

ತೇಜಸ್ವಿ ಈ ಮಣ್ಣು, ಈ ಕೀಟ, ಈ ನಕ್ಷತ್ರ, ಈ ಆಕಾಶಕಾಯಗಳ ಕತೆ ಕಲಿತದ್ದು ತರಗತಿಯೊಳಗಡೆಯಲ್ಲ. ಸಸ್ಯಶಾಸ್ತ್ರ, ಕೀಟಶಾಸ್ತ್ರ, ಭೂಗೋಳ, ಜೀವವಿಜ್ಞಾನ ಇವು ಯಾವುದನ್ನೂ ಅವರು ತರಗತಿಯೊಳಗಡೆ ಗಂಭೀರವಾಗಿ ಓದಿದವರಲ್ಲ. ಅವರ ನಿರುತ್ತರ, ಸುತ್ತಲಿನ ತೋಟ, ಮೂಡಿಗೆರೆ, ಸುತ್ತಲಿನ ರೈತರು, ಕೃಷಿ ಕಾರ್ಮಿಕರು, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಇಲಾಖೆಯ ಅಧಿಕಾರಿಗಳು, ಅರಣ್ಯ ಇಲಾಖೆಯ ಗಾರ್ಡುಗಳು, ರಸ್ತೆಗೆ ಡಾಂಬರು ಹಾಕುವವರು, ಮಂಗ ಕುಣಿಸುವವರು, ಬಿರಿಯಾನಿ ಮಾಡುವವರು, ಹಳೆ ಚಪ್ಪಲಿ-ಬಾಟ್ಲಿ ಖರೀದಿ ಮಾಡುವವರು, ಮರ ಕಸಿ ಮಾಡುವವರು, ಕಾಫಿ ಕೊಯ್ಯುವವರು... ಎಲ್ಲರೂ ಅವರಿಗೆ ಮಾಹಿತಿ ಮೂಲಗಳೇ.

ನನಗೆ ಎಷ್ಟೋ ಬಾರಿ ಟಿ.ಎನ್. ಸೀತಾರಾಂ ಅವರ ಧಾರಾವಾಹಿ ನೋಡುವಾಗ ಪರದೆಯ ಮೇಲೆ ಕಾಣಿಸುವ ಪ್ರತಿಯೊಂದು ಪಾತ್ರ ಕೂಡ ಬೌದ್ಧಿಕವಾಗಿ ಬುದ್ಧಿವಂತರಾಗಿಯೇ ಕಾಣಿಸುವುದು. ಕಾರಣ ಈ ಎಲ್ಲಾ ಪಾತ್ರಗಳಿಗೂ ಸಂಭಾಷಣೆ ಬರೆಯುವುದು ಸೀತಾರಾಂ ಅವರೇ. ತೇಜಸ್ವಿಯವರ ಚಿತ್ರಣಗಳು ಹಾಗಲ್ಲ. ಅವರ ಬಹುಪಾಲು ಪಾತ್ರಗಳು ನೆಲದ ಮೇಲೆಯೇ ನಿಂತು ಮಾತನಾಡುತ್ತವೆ. ಕನ್ನಡದಲ್ಲಿ ‘ಪುಗುವುದು’ ಎಂಬ ಶಬ್ದವೊಂದಿದೆ. ಒಳಗೊಳ್ಳುವುದು ಎಂದು ಈ ಪದದ ಅರ್ಥ. ಸ್ವಂತ ಲೇಖಕನಿಗೆ ಮಣ್ಣಿನೊಂದಿಗೆ ಪುಗುವ ಶಕ್ತಿ ಇದ್ದಾಗ ಮಾತ್ರ ಪಾತ್ರಗಳು ನೆಲದ ಮೇಲೇ ನಿಲ್ಲಲು ಸಾಧ್ಯ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT