ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಂದು ರಾಮ ಸೀತಾ ಕಲ್ಯಾಣ

Published 20 ಜನವರಿ 2024, 23:32 IST
Last Updated 20 ಜನವರಿ 2024, 23:32 IST
ಅಕ್ಷರ ಗಾತ್ರ

ಜಗತ್ತಿನಲ್ಲಿ ಅಸಂಖ್ಯಾತ ರಾಮಾಯಣಗಳಿವೆ. ಮೂಲದಲ್ಲಿ ವಾಲ್ಮೀಕಿ ಬರೆದ ರಾಮಾಯಣಕ್ಕೆ ಭಾರತದ ಅಥವಾ ಜಗತ್ತಿನ ಉದ್ದಗಲಕ್ಕೂ ಪಸರಿಸಿದ ‘ಜನಪದ ವಾಲ್ಮೀಕಿಯರು’ ತಮ್ಮ ತಮ್ಮ ಪರಿಸರಕ್ಕೆ ಅನುಸರಿಸಿ ಮೂಲ ರಾಮಾಯಣವನ್ನು ಮೂಲಕ್ಕೆ ಚ್ಯುತಿ ಬಾರದಂತೆ ಪುನರ್ಲೇಖನ ಮಾಡಿದರು. ಆ ಸಂದರ್ಭಗಳಲ್ಲಿ ಈ ಜನಪದ ವಾಲ್ಮೀಕಿಯರು ತಾವು ಪುನರ್‌ರಚಿಸಿದ ರಾಮಾಯಣದಲ್ಲಿ ತಮ್ಮ ಪ್ರತಿಭೆಯನ್ನು ಮೆರೆದರು. ಪ್ರಖ್ಯಾತ ಕವಿಗಳೂ ಭಾರತದ ವಿವಿಧ ಪ್ರದೇಶಗಳ ರಾಮಾಯಣಗಳನ್ನು ಸಂಗ್ರಹಿಸಿದ ಎ.ಕೆ. ರಾಮಾನುಜನ್‌ ಅವರು ‘ಜಗತ್ತಿನಲ್ಲಿ ಮೂರುನೂರು ರಾಮಾಯಣಗಳಿವೆ’ ಎಂದು ಹೇಳಿದರು; ಆ ಹೆಸರಿನಲ್ಲಿಯೇ ಅವರು ಕೃತಿಯನ್ನು ಪ್ರಕಟಿಸಿದರು. ಒಂದು ಸಂದರ್ಭದಲ್ಲಿ ಯು.ಆರ್‌. ಅನಂತಮೂರ್ತಿಯವರು ‘ಜಗತ್ತಿನಲ್ಲಿ ಕನಿಷ್ಠ ಮೂರು ಸಾವಿರವಾದರೂ ರಾಮಾಯಣಗಳಿವೆ’ ಎಂದು ಹೇಳಿದ್ದರು. ಅಂತರರಾಷ್ಟ್ರೀಯ ಖ್ಯಾತಿಯ ಇನ್ನೊಬ್ಬ ಸಂಶೋಧಕರಾದ ರಾ.ಚಿಂ. ಢೇರೆಯವರು ‘ಭಾರತದ ಜನಸಂಖ್ಯೆ ಎಷ್ಟಿದೆಯೋ ಅಷ್ಟು ರಾಮಾಯಣಗಳಿವೆ. ಇಲ್ಲಿಯ ಪ್ರತಿ ಮನೆಯೂ ರಾಮಾಯಣದ ಒಂದು ಕೃತಿಯೇ’ ಎಂದು ಹೇಳಿದ್ದರು.

ಮಹಾಭಾರತದ ಮೂಲ ಹೆಸರು ‘ಜಯ’. ವ್ಯಾಸರು ಅದನ್ನು ‘ಜಯ’ ಅನ್ನುವ ಹೆಸರಿನಲ್ಲಿ ಬರೆದರು. (ಅರ್ಜುನನ ಅನೇಕ ಹೆಸರುಗಳಲ್ಲಿ ‘ಜಯ’ ಅನ್ನುವುದು ಒಂದು ಹೆಸರು) ಮುಂದೆ ಭಾರತದಾದ್ಯಂತ ಇರುವ ‘ಜನಪದ ವ್ಯಾಸರು’ ಈ ‘ಜಯ’ದಲ್ಲಿ ತಮ್ಮ ತಮ್ಮ ಪ್ರದೇಶಗಳ ಕಥೆಗಳನ್ನು ಸೇರಿಸಿದರು. ಈ ಜನಪದ ವ್ಯಾಸರು ಕೆಲವೊಮ್ಮೆ ಮಹಾಭಾರತದ ಘಟನೆಗಳು ತಮ್ಮ ಊರಿನಲ್ಲಿಯೇ ನಡೆಯಿತೆಂಬಂತೆ ಚಿತ್ರಿಸಿರುವುದು ಅವರ ಅಗಾಧ ಪ್ರತಿಭೆಗೆ ಸಾಕ್ಷಿ. ಹೀಗೆ ಇಡಿಯ ಭಾರತದ ಕಥೆಗಳು ‘ಜಯ’ಕ್ಕೆ ಸೇರ್ಪಡೆಯಾದುದರಿಂದ ಮುಂದೆ ‘ಜಯ’ವೇ ‘ಮಹಾಭಾರತ’ವಾಯಿತು.

ಕೋಲೆ ಬಸವರಾಟ

ನಾನು ಚಿಕ್ಕವನಿದ್ದಾಗ ಅಂದರೆ ಅರವತ್ತರ ದಶಕದಲ್ಲಿ ನಮ್ಮ ಓಣಿಗೆ ಅನೇಕ ಜನ ಕೋಲೆ ಬಸವರಾಟದ ಜನರು ದಂಡು ದಂಡಾಗಿ ಬರುತ್ತಿದ್ದರು. ಮೂಲತಃ ಈ ಕೋಲೆ ಬಸವರು ಗೊಲ್ಲರು. ತಾವು ಯಾದವ ಕುಲಕ್ಕೆ ಸೇರಿದವರೆಂದು ಅವರು ಹೇಳಿಕೊಳ್ಳುತ್ತಾರೆ. ಇವರ ಆರಾಧ್ಯದೈವ ಜುಂಜಪ್ಪ. ಈ ಜುಂಜಪ್ಪನು ಬಸವರೂಪವನ್ನು ತಾಳಿ ತಮಗೆ ಅವನನ್ನು ಪಾಲನೆ ಮಾಡಲು ಹೇಳಿದ್ದಾನೆಂದು ಅವರ ನಂಬುಗೆ. ಹೀಗಾಗಿ ಬಸವನನ್ನು (ಆಕಳು, ಹಸು, ಗೂಳಿ, ಕಪಿಲೆ) ತಮ್ಮ ಜೀವನಕ್ಕೆ ಒಗ್ಗಿಸಿಕೊಂಡು ಅವರ ಮೂಲಕ ಜನರಿಗೆ ಮನರಂಜನೆಯನ್ನು ಒದಗಿಸುತ್ತ ತಮ್ಮ ಜೀವನ ನಿರ್ವಹಣೆಯನ್ನು ಮಾಡುತ್ತಿರುವುದಾಗಿಯೂ ಅವರು ಹೇಳುತ್ತಾರೆ. ಹುಬ್ಬಳ್ಳಿಯ ಮರಾಠ ಗಲ್ಲಿಯಲ್ಲಿರುವ ಡೆಕ್ಕನ್ ಟಾಕೀಸಿನ ಹಿಂಭಾಗದಲ್ಲಿ ಜುಂಜಪ್ಪನ ಗುಡಿ ಇದ್ದು, ಈ ಜನರು ಟೋಳಿ ಟೋಳಿಯಾಗಿ ಅಲ್ಲಿಗೆ ಬಂದು ನೆಲೆಸುತ್ತಿದ್ದರು.

ಈ ಗೊಲ್ಲರು ಪ್ರಾಣಿ ಸಂವಹನವನ್ನು ಒಂದು ಕಲೆಯಾಗಿ ಮಾರ್ಪಡಿಸಿಕೊಂಡವರು. ಬೇರೆ ಬೇರೆ ಪ್ರದೇಶಗಳಲ್ಲಿ ವಾಸ ಮಾಡುವ ಈ ಗೊಲ್ಲರು ಅಥವಾ ಕೋಲೆ ಬಸವರಾಟದ ಜನರು ಆಯಾ ಪ್ರದೇಶಕ್ಕೆ ಅನುಗುಣವಾದ ಆಟಗಳನ್ನು ತಾವು ಸಾಕಿಕೊಂಡಿರುವ ಆಕಳು, ಎತ್ತು, ಗೂಳಿ ಮುಂತಾದ ಪ್ರಾಣಿಗಳಿಂದ ಪ್ರದರ್ಶಿಸುತ್ತಿದ್ದರು. ಎಲ್ಲೆಡೆಗೆ ಅವರು ತಪ್ಪದೇ ಆಡುವ ಆಟ ‘ಶ್ರೀರಾಮ ಸೀತಾ ಕಲ್ಯಾಣ ಮಹೋತ್ಸವ’ವೇ ಆಗಿದೆ. ಈ ಆಟವನ್ನು ಭಾರತದ ಎಲ್ಲ ಕೋಲೆ ಬಸವರು ಪ್ರಾಂತ ಮತ್ತು ಭಾಷಾಭೇದವೆನ್ನದೇ ಆಡುತ್ತಾರೆ.

ನಾನು ನೋಡಿದ ‘ಶ್ರೀರಾಮ ಸೀತಾ ಕಲ್ಯಾಣ ಮಹೋತ್ಸವ’ದ ಆಟದಲ್ಲಿ ಸೂತ್ರಧಾರನು ರಾಮಾಯಣದ ಕಥೆಯನ್ನು ಕೂಡಿದ ಜನರಿಗೆ ಹೇಳುತ್ತಾನೆ. ಈ ಪ್ರದರ್ಶನವು ಬೀದಿ ನಾಟಕದಂತೆ ಅನಾವರಣಗೊಳ್ಳುತ್ತದೆ. ಹಿಂದಿನ ಕಾಲದಲ್ಲಿ ಈ ಆಟಗಳು ರಾತ್ರಿಯ ವೇಳೆಯಲ್ಲಿ ಹಿಲಾಲು ಬೆಳಕಿನಲ್ಲಿ ನಡೆಯುತ್ತಿದ್ದವಂತೆ.

ಬಸವನೇ ರಾಮ, ಹಸುವೇ ಸೀತೆ

‘ಶ್ರೀರಾಮ ಸೀತಾ ಕಲ್ಯಾಣ ಮಹೋತ್ಸವ’ ಆಟದಲ್ಲಿ ರಾಮ, ಲಕ್ಷ್ಮಣ ಮತ್ತು ಸೀತೆ ಪಾತ್ರಗಳ ರೂಪದಲ್ಲಿ ಒಂದು ಬಸವ (ಗೂಳಿ), ಮರಿಬಸವ ಮತ್ತು ಒಂದು ಹಸು ಇರುತ್ತದೆ. ಸೂತ್ರಧಾರ ಹಾಗೂ ಇನ್ನಿಬ್ಬರು ಅವನಿಗೆ ಸಹಾಯಕ ಪುರುಷ ಪಾತ್ರದವರು ಇರುತ್ತಾರೆ. ಆರಂಭದಲ್ಲಿ ಸೂತ್ರಧಾರನು ಆಟದ ಮೈದಾನವನ್ನು ಶಹನಾಯಿ ಊದುತ್ತ ಒಂದು ರೌಂಡ್ ಹೊಡೆಯುತ್ತಾನೆ. ನಂತರ ಕೂಡಿದ ಜನರಿಗೆ ‘ನಾವು ಅಯೋಧ್ಯೆಯಿಂದ ಬಂದಿದ್ದೇವೆ. ನಮ್ಮ ರಾಮನಿಗೆ ಹೆಣ್ಣು ನೋಡುವುದಕ್ಕೆ. ಇಡಿಯ ಭಾರತ ತಿರುಗಾಡಿದರೂ ನಮಗೆ ಎಲ್ಲಿಯೂ ಯೋಗ್ಯ ಹೆಣ್ಣು ಸಿಗಲಿಲ್ಲ. ಆಕಾಶವಾಣಿಯೊಂದು ನಿಮ್ಮ ರಾಮನಿಗೆ ಈ ಊರಿನಲ್ಲಿ (ಊರಿನ ಹೆಸರು) ಯೋಗ್ಯ ಹೆಣ್ಣು ಇದೆಯೆಂದು ಹೇಳಿದ್ದರಿಂದ ಇಲ್ಲಿಗೆ ಬಂದಿದ್ದೇವೆ. ನಮ್ಮ ರಾಮನಿಗೆ ಹೆಣ್ಣು ಕೊಡುವ ದಯಾಳು ತಂದೆ ತಾಯಿಗಳು ದಯಮಾಡಿ ಮುಂದೆ ಬರಬೇಕು’ ಎಂದು ಹೇಳುತ್ತಾನೆ. ಆಗ ಸೀತೆಯ ಕಡೆಯವನು ಮುಂದೆ ಬಂದು ‘ನಾನು ಜನಕ ಮಹಾರಾಜನು, ನಿಮ್ಮ ರಾಮನಿಗೆ ನಾನು ನನ್ನ ಮಗಳು ಸೀತೆಯನ್ನು ಕೊಡುವೆ’ ಎಂದೆನ್ನುತ್ತಾನೆ.

ಆಗ ಸೂತ್ರಧಾರನು, ‘ಬರೀ ಒಣ ಒಣ ಬಂದು ಹೆಣ್ಣು ಕೊಡ್ತೇನೆಂದರೆ ಆಗುವುದಿಲ್ಲ. ಮೊದಲು ಬೀಗರಿಗೆ ಚಹಾ ಪಾಣಿ ನಾಷ್ಟಾದ ವ್ಯವಸ್ಥೆ ಮಾಡ್ರಿ’ ಎಂದು ಹೇಳುತ್ತಾನೆ. ಜನಕ ಮಹಾರಾಜನು ‘ಆಯ್ತು; ಚಹಾ ಪಾಣಿ ವ್ಯವಸ್ಥೆ ಮಾಡಿದ್ದೇನೆ’ ಎಂದು ಹೇಳುತ್ತ ಶಹನಾಯಿ ಊದುತ್ತ ಮೈದಾನವನ್ನು ಒಂದು ಸುತ್ತ ತಿರುಗುತ್ತಾನೆ. ಸೂತ್ರಧಾರನು, ‘ನಿಮ್ಮ ಚಹಾ ಪಾಣಿಯಿಂದ ನಾವು ಖುಷ್ ಆದೆವು. ಈಗ ನಮ್ಮ ರಾಮನಿಗೆ ನೀವು ಏನೇನು ವಸ್ತುಗಳನ್ನು ಕೊಡುವಿರೋ ಎಲ್ಲ ಜನರಿಗೆ (ದೈವದವರಿಗೆ) ಹೇಳಿರಿ’ ಎಂದು ಕೇಳುತ್ತಾನೆ. ಸೀತೆಯ ತಂದೆಯಾದವನು ‘ರಾಮನಿಗೆ ವರದಕ್ಷಿಣೆಯೆಂದು ಎರಡು ಸಾವಿರ ಬೆಳ್ಳಿಯ ನಾಣ್ಯಗಳು, ಜೊತೆಗೆ ಅಂಗಿ, ಧೋತರ, ಕೋಟು, ರುಮಾಲು, ಟೈಮ್ ನೋಡಲು ವಾಚ್, ರೆಕಾರ್ಡ್ ಕೇಳಲು ರೇಡಿಯೊ, ಬಿಸಿಲಲ್ಲಿ ಹಾಕಿಕೊಳ್ಳಲು ಕಪ್ಪು ಗಾಗಲ್, ಬಂಗಾರದ ಚೈನ್ - ಇಷ್ಟು ವಸ್ತು ಕೊಡುತ್ತೇನೆ’ ಎಂದು ಹೇಳುತ್ತಾನೆ. ಜನಕ ಮಹಾರಾಜನಾದವನು ಸೀತೆ (ಹಸು)ಯ ಕಡೆಗೆ ನೋಡಿದಾಗ ಅದು ‘ಹುಂ’ ಎಂದು ಗೋಣು ಅಲುಗಾಡಿಸುತ್ತದೆ. ನಂತರ ಜನಕ ಮಹಾರಾಜ ಪಾತ್ರಧಾರಿಯು ‘ಈಗ ನಮ್ಮ ಸೀತೆಗೆ ನೀವೇನು ಹಾಕುತ್ತೀರಿ?’ ಎಂದು ಕೇಳುತ್ತಾನೆ. ಅದಕ್ಕೆ ಸೂತ್ರ ಧಾರನು ‘ಧಾರಿ ಸೀರೆ, ಎಂಟು ಪೈಠಣದ ಸೀರೆಗಳು, ಕುಬಸ, ಇಲಕಲ್ಲ ಸೀರೆ, ಕಿವಿಗೆ ವಜ್ರದ ಬೆಂಡೋಲೆಗಳು, ಮೂಗಿಗೆ ಮುತ್ತಿನ ನತ್ತು, ಕಾಲಿಗೆ ಬೆಳ್ಳಿಯ ಚೈನ್‌ಗಳು ಹಾಕುತ್ತೇವೆ’ ಎಂದು ಹೇಳುತ್ತಾನೆ. ಅದಕ್ಕೆ ಜನಕ ಮಹಾರಾಜನು ಒಪ್ಪಿಕೊಂಡು ‘ಹಾಗಾದ್ರೆ ಲಗ್ನವನ್ನು ಈಗಲೇ ಇಲ್ಲೇ ದೈವದವರ ಸಮಕ್ಷಮದಲ್ಲಿ ಮಾಡಿ ಮುಗಿಸೋಣ’ ಎಂದೆನ್ನುತ್ತಾನೆ.

ಅಷ್ಟರಲ್ಲಿ ಸೀತೆಯಾದ ಕಪಿಲೆ, ಜನಕ ಮಹಾರಾಜ ಪಾತ್ರಧಾರಿಗೆ ತಿವಿಯುತ್ತದೆ. ಏಕೆಂದು ಆತ ತನ್ನ ಕಿವಿಗಳನ್ನು ಅದರ ಬಾಯಿಗೆ ಒಡ್ಡುತ್ತಾನೆ. ಅನಂತರ ‘ನಮ್ಮ ಸೀತೆ ನಿಮ್ಮ ರಾಮನನ್ನು ಏಕಾಂತದಲ್ಲಿ ಮಾತನಾಡಬೇಕೆಂದು ಬಯಸಿದ್ದಾಳೆ’ ಎಂದು ಹೇಳುತ್ತಾನೆ. ಸೂತ್ರಧಾರನು ‘ಆಗಲಿ’ ಎಂದು ರಾಮ-ಸೀತೆ (ಬಸವ ಮತ್ತು ಹಸು) ಇಬ್ಬರನ್ನೂ ಮೂಲೆಗೆ ಕರೆದುಕೊಂಡು ಹೋಗಿ ತಾನು ದೂರ ನಿಲ್ಲುತ್ತಾನೆ. ಎರಡೂ ಪ್ರಾಣಿಗಳು ಪರಸ್ಪರ ಮಾತನಾಡಿದಂತೆ ಅಭಿನಯಿಸುತ್ತವೆ. ರಾಮ (ಬಸವ) ಸೀತೆ (ಹಸು)ಗೆ ಕಿವಿಯಲ್ಲಿ ಏನೋ ಹೇಳುತ್ತದೆ. ಆಗ ಹಸುವು ಸಿಟ್ಟಾಗಿ ಸೆಟಗೊಂಡಂತೆ ರಾಮನನ್ನು ಬಿಟ್ಟು ಈ ಕಡೆ ಬಂದು ಕೆಳಮುಖ ಮಾಡಿ ನಿಲ್ಲುತ್ತದೆ. ಆಗ ಜನಕ ಪಾತ್ರಧಾರಿಯು ‘ನಮ್ಮ ಸೀತೆಗೆ ನಿಮ್ಮ ರಾಮ ಲೈಕ್ ಆಗಿಲ್ಲವಂತೆ. ಆತ ಅವಳ ವಯಸ್ಸಿಗಿಂತ ಡಬ್ಬಲ್ ವಯಸ್ಸಿನವನಿದ್ದಾನಂತೆ. ಜೊತೆಗೆ ಕಪ್ಪಗಿದ್ದಾನಂತೆ. ಮುಂದಿನ ಒಂದೆರಡು ಹಲ್ಲು ಬಿದ್ದಿವೆಯಂತೆ. ಒಟ್ಟಿನಲ್ಲಿ ಈ ಮನುಷ್ಯ ಬೇಡವೆಂದು ಆಕೆ ಹಟ ಹಿಡಿದಿದ್ದಾಳೆ’ ಎಂದು ಹೇಳುತ್ತಾನೆ. ಇದನ್ನು ಕೇಳಿದ ಸೂತ್ರಧಾರನು ‘ಈಗಾಗಲೇ ನೀವು ಹೆಣ್ಣು ಕೊಡಲು ಒಪ್ಪಿಕೊಂಡಿದ್ದೀರಿ. ಈಗ ಹೀಗೆ ಸಡನ್ನಾಗಿ ಮುರಿದುಕೊಂಡರೆ ಅದು ನ್ಯಾಯವೇ? ನೀವು ಹೀಗೆ ಮಾಡಿದರೆ ನಾವು ನಿಮ್ಮ ಸೀತೆಯನ್ನು ಯಾರಿಗೆ ಲಗ್ನ ಮಾಡಿಕೊಡುತ್ತೀರೆಂಬುದನ್ನು ನೋಡಿಕೊಳ್ಳುತ್ತೇವೆ’ ಎಂದು ಜಬರ್ದಸ್ತಾಗಿ ಹೇಳುತ್ತಾನೆ. ಜನಕ ರಾಜನ ಪಾತ್ರಧಾರಿಯು, ‘ನಮ್ಮ ಸೀತೆಯನ್ನು ಮದುವೆ ಮಾಡಿಕೊಳ್ಳಲು ದಿಲೀಪಕುಮಾರ, ರಾಜಕುಮಾರ ಮುಂತಾದವರು ಬಂದಿದ್ದರು. ಅವರ‍್ಯಾರೂ ಸೀತೆಗೆ ಒಪ್ಪಿಗೆಯಾಗಲಿಲ್ಲ’ ಎಂದು ಹೇಳುತ್ತಾನೆ. ರಾಮ ಪಾತ್ರಧಾರಿ ಬಸವ ಮುಖ ಕೆಳಗೆ ಹಾಕಿ ವಿಷಣ್ಣವಾಗಿ ಸುಮ್ಮನೆ ನಿಂತಿರುತ್ತದೆ. ಆಗ ಸೂತ್ರಧಾರನು ‘ರಾಮಾ, ನೀನೇನೂ ಕಾಳಜಿ ಮಾಡಬೇಡ. ಅವರು ಹೆಣ್ಣು ಕೊಡುತ್ತೇವೆಂದು ಈಗಾಗಲೇ ಈ ದೈವದವರ ಎದುರು ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಏನಾದರೂ ತಕರಾರು ಮಾಡಿದರೆ ನಾವು ಸೀತೆಯನ್ನು ಹಗ್ಗದಿಂದ ಕಟ್ಟಿಕೊಂಡು ಹೋಗೋಣ. ಅಷ್ಟು ದೂರ ಅಯೋಧ್ಯೆಯಿಂದ ನಾವು ಬಂದಿದ್ದೇವೆ. ಈಗ ಇವರು ಹುಡುಗಾಟ ಮಾಡಿದರೆ ನಮಗೂ ಕೋರ್ಟು ಕಚೇರಿ, ಪೊಲೀಸರು ಇದ್ದಾರೆ’ ಎಂದು ಹೆದರಿಸುತ್ತಾನೆ. ಅವನ ಮಾತಿಗೆ ಹೆದರಿದ ಜನಕ ಮಹಾರಾಜನ ಪಾತ್ರಧಾರಿ ‘ಆಯ್ತು, ನಾವು ಹೆಣ್ಣುಕೊಡಲು ತಯಾರಿದ್ದೇವೆ. ನೀವು ನಮ್ಮ ಸೀತೆಯನ್ನು ಅಯೋಧ್ಯೆಯ ರಾಣಿಯನ್ನಾಗಿ ಮಾಡಬೇಕು’ ಎಂದು ಕರಾರನ್ನು ಹಾಕುತ್ತಾನೆ. ಈ ಸಂದರ್ಭದಲ್ಲಿ ವಿವಾಹ ನಾಟಕದ ವಿವಿಧ ಸನ್ನಿವೇಶಗಳೂ ಬರುತ್ತವೆ. ಗಂಡ ಹೆಂಡಿರ ಮುನಿಸು, ಮಧ್ಯಸ್ಥಗಾರರ ಸಮಾಧಾನ, ಪರಸ್ಪರ ರಾಜಿಯಾಗುವುದು - ಹೀಗೆ ಸನ್ನಿವೇಶಗಳು ಅಲ್ಲಿದ್ದ ಜನರಿಗೆ ಸಾಕಷ್ಟು ಮನರಂಜನೆ ನೀಡುತ್ತವೆ.

ಕೊನೆಗೆ ಜನಕ ಮಹಾರಾಜನ ಪಾತ್ರಧಾರಿಯು ಸೀತೆಯ ಬಳಿ ಬಂದು ‘ನೋಡು ಸೀತಮ್ಮ, ರಾಮ ದೇವರು ನಿನ್ನನ್ನು ಮದುವೆಯಾಗಲು ಇಲ್ಲಿಯವರೆಗೆ ಬಂದಿದ್ದಾರೆ. ನಿನ್ನನ್ನು ಅಯೋಧ್ಯೆಯ ರಾಣಿಯನ್ನಾಗಿ ಮಾಡುತ್ತೇನೆಂದು ದೈವದೆದುರು ಆಣೆ ಮಾಡಿದ್ದಾರೆ. ಅದನ್ನು ಒಪ್ಪಿಕೋ’ ಎಂದು ಕೇಳುತ್ತಾನೆ. ಆಗ ಸೀತೆಯಾದ ಹಸು ಗೋಣನ್ನು ಅಲುಗಾಡಿಸಿ ಒಪ್ಪಿಗೆ ನೀಡುತ್ತದೆ.

ಧಾರೆಯೆರೆಯುವ ಸಂದರ್ಭದಲ್ಲಿ ಸೀತೆ ನಾಚಿಕೆಯಿಂದ ತಲೆ ತಗ್ಗಿಸಿಕೊಂಡು ಮೆಲ್ಲ ಮೆಲ್ಲನೆ ಬಂದು ರಾಮನ ಪಕ್ಕದಲ್ಲಿ ನಿಲ್ಲುತ್ತದೆ. ಧಾರೆಯ ಸೂಚನೆಯಾಗಿ ಮಂಗಲವಾದ್ಯ, ಶಹನಾಯಿ, ನಾದಸ್ವರ, ಡೋಲು ಬಾರಿಸಿದ ಬಳಿಕ ಸೀತೆ, ರಾಮನ ಸುತ್ತಲೂ ಐದು ಸಲ ಪ್ರದಕ್ಷಿಣೆ ಹಾಕಿ ಪಕ್ಕದಲ್ಲಿ ಬಂದು ನಿಲ್ಲುತ್ತದೆ. ಸೂತ್ರಧಾರನು ‘ಇಲ್ಲಿಗೆ ಶ್ರೀ ರಾಮ ಸೀತೆ ಕಲ್ಯಾಣ ಮಹೋತ್ಸವವು ಮುಗಿಯಿತು. ಈಗ ಮದುವೆಗೆ ಬಂದ ಜನರು ಆಹೇರು ಮಾಡಬೇಕು’ ಎಂದು ಘೋಷಿಸುತ್ತಾನೆ. ನಂತರ ಶಹನಾಯಿ ಬಾರಿಸುತ್ತ ಸೂತ್ರಧಾರ, ರಾಮ, ಸೀತೆ, ಜನಕ ಮಹಾರಾಜನ ಪಾತ್ರಧಾರಿ ಹೀಗೆ ಎಲ್ಲರೂ ಜನರೆಡೆಗೆ ಹೋಗಿ ಅವರಿಂದ ಆಹೇರುಗಳನ್ನು ಸ್ವೀಕರಿಸುತ್ತಾರೆ.

ಈ ಆಟವನ್ನು ಆಡುವ ಸಮುದಾಯದವರು ಮೂಕ ಪ್ರಾಣಿಗಳಾದ ಗೂಳಿ, ಆಕಳು, ಹಸು ಮುಂತಾದವುಗಳಿಗೆ ಹದವಾಗಿ ತರಬೇತಿ ನೀಡಿರುತ್ತಾರೆ. ಇದು ಸುಲಭದ ಕೆಲಸವಲ್ಲ. ಈ ಮೂಕ ಪ್ರಾಣಿಗಳು ಸಂತೋಷ, ಸಿಟ್ಟು, ಸೆಡವು ಮುಂತಾದ ಭಾವಗಳನ್ನು ಬಲು ಸಮರ್ಥವಾಗಿ ಅಭಿನಯಿಸುತ್ತವೆ. ಸೂತ್ರಧಾರನು ಕಾಲಕ್ಕೆ ತಕ್ಕಂತೆ ಅಥವಾ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಅಲ್ಲಿ ಮಾತುಗಳನ್ನು ಹೇಳುವ ಚತುರ ಆಗಿರಬೇಕಾಗುತ್ತದೆ. ಈ ಕೋಲೆ ಬಸವರಾಟವನ್ನು ಆಡುವವರು ಒಂದು ಹಳ್ಳಿಯಲ್ಲಿ ನಾಲ್ಕಾರು ದಿನವಿದ್ದು ಅನಂತರ ಮುಂದಿನ ಊರಿಗೆ ಹೊರಡುತ್ತಾರೆ. 

ಕಲೆ: ಶೇಖರ ಬಳ್ಳಾರಿ
ಕಲೆ: ಶೇಖರ ಬಳ್ಳಾರಿ

ಭಿನ್ನ ಸ್ವರೂಪ

ರಾಮಾಯಣಕ್ಕೂ ಮೂರು ಹೆಸರುಗಳಿವೆ. ‘ರಾಮಾಯಣ’ವೆನ್ನುವುದು ಅಯೋಧ್ಯೆಯಿಂದ ಲಂಕೆಯವರೆಗಿನ ರಾಮಾದಿಗಳ ಸಂಚಾರವನ್ನು ಸೂಚಿಸುವ ಹೆಸರು. ‘ಸೀತಾಚರಿತ’ ಮತ್ತು ‘ರಾವಣವಧಾ’ ಎನ್ನುವುದು ರಾಮಾಯಣದ ಹೆಸರುಗಳೇ. ಭಾರತದ ಉದ್ದಗಲಕ್ಕೂ ಬೇರೆ ಬೇರೆ ಸ್ವರೂಪದ ರಾಮಾಯಣಗಳೂ ಇವೆ. ಜನಪದರರು ರಾಮಾಯಣದ ಮೂಲ ಕಥೆಗೆ ಚ್ಯುತಿ ಬಾರದಂತೆ ಕಥೆಗಳನ್ನೂ ಪ್ರಸಂಗಗಳನ್ನೂ ಚಿತ್ರಿಸಿದುಂಟು. ಬೈಲಹೊಂಗಲದ ಹಳ್ಳಿಯೊಂದರಲ್ಲಿ ನಾನು ಕೇಳಿದ ರಾಮಾಯಣದಲ್ಲಿ ಲಕ್ಷ್ಮಣನೇ ಸೀತಾ ಸ್ವಯಂವರವನ್ನು ಗೆಲ್ಲುತ್ತಾನೆ. ಸ್ವಯಂವರದ ಪಣವಾದರೂ ಎಂತಹದು? ಜನಕನ ರಾಜ್ಯದಲ್ಲಿ ವಿಪುಲ ಪ್ರಮಾಣದಲ್ಲಿ ಅಸಂಖ್ಯಾತ ಕಾಗೆಗಳಿರುತ್ತವೆ. ಈ ಕಾಗೆಗಳು ಜನರಿಗೆ ವಿಪರೀತ ತೊಂದರೆ ಕೊಡುತ್ತಿರುತ್ತವೆ. ‘ಈ ಕಾಗೆಗಳನ್ನು ನಾಶಪಡಿಸುವವರಿಗೆ ನಾನು ನನ್ನ ಮಗಳಾದ ಸೀತೆಯನ್ನು ಮದುವೆ ಮಾಡಿ ಕೊಡುವೆ’ನೆಂದು ಜನಕ ಡಂಗುರ ಸಾರುತ್ತಾನೆ. ಅಲ್ಲಿಗೆ ವಿಹಾರಾರ್ಥಿಗಳಾಗಿ ಬಂದಿದ್ದ ರಾಮ ಲಕ್ಷ್ಮಣರು ಈ ಚಾಲೆಂಜನ್ನು ಸ್ವೀಕರಿಸುತ್ತಾರೆ. ಇಬ್ಬರ ಕೈಗಳಲ್ಲೂ ಗುಲೇಲ್‌ಗಳಿವೆ. ಈ ಗುಲೇಲ್‌ಗಳ ಸಹಾಯದಿಂದ ಇಬ್ಬರೂ ಕಾಕ ನಾಶಕ್ಕೆ ಪ್ರವರ್ತರಾಗುತ್ತಾರೆ. ರಾಮನಿಗಿಂತ ಹೆಚ್ಚು ಕಾಗೆಗಳನ್ನು ಕೊಂದವನು ಲಕ್ಷ್ಮಣ. ಹೀಗಾಗಿ ಜನಕನು ತನ್ನ ಮಗಳನ್ನು ಲಕ್ಷ್ಮಣನಿಗೆ ಮದುವೆ ಮಾಡಿಕೊಡಲು ತಯಾರಾದಾಗ ಲಕ್ಷ್ಮಣನು ‘ರಾಮ ನನಗೆ ಅಣ್ಣ. ಅವನ ಮದುವೆ ಮೊದಲು ಆಗಬೇಕು’ ಎಂದು ಹೇಳಿ ಮದುವೆಗೆ ರಾಮನನ್ನು ಒಪ್ಪಿಸುತ್ತಾನೆ. ಹೀಗೆ ರಾಮ ಸೀತೆಯರ ಕಲ್ಯಾಣ ಮಹೋತ್ಸವ ನಡೆಯುತ್ತದೆ. ಈ ರೀತಿಯ ಅನೇಕ ವಿಭಿನ್ನ ಕಥೆಗಳು ಭಾರತದ ಉದ್ದಗಲಕ್ಕೂ ಸಿಗುತ್ತವೆ. ಅಲ್ಲಲ್ಲಿಯ ಲೋಕಲ್ ಪರಿಸ್ಥಿತಿಗೆ ಅನುಗುಣವಾಗಿ ಕಥೆಯನ್ನು ರಚಿಸಿದಂತೆ ಅಥವಾ ಪಾತ್ರಗಳನ್ನು ಸೃಷ್ಟಿಸಿದಂತೆ ಕಂಡುಬರುತ್ತದೆ. ಕಥೆಯ ವಸ್ತು ಒಂದೇ; ಆದರೆ ನೋಟ ಅನೇಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT