ದೆಹಲಿಯ ಮಂಡಿಹೌಸ್ ಒಂದು ಸಾಂಸ್ಕೃತಿಕ ತಾಣ. ಬೆಂಗಳೂರಿನ ಟೌನ್ ಹಾಲ್ನ ಸುತ್ತಮುತ್ತಲಿನ ಪರಿಸರವಿದ್ದಂತೆ. ಸಾಹಿತ್ಯ, ಕಲೆ, ಸಂಗೀತ, ನಟನೆ ಕುರಿತ ಕನಸುಗಣ್ಣಿನ ಹುಡುಗ–ಹುಡುಗಿಯರ ನೆಲೆಯಿದು. ಇಲ್ಲಿಯೇ ಆಸುಪಾಸಿನಲ್ಲಿ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ, ಸಾಹಿತ್ಯ ಅಕಾಡೆಮಿ, ಸಂಗೀತ ಮತ್ತು ನಾಟಕ ಅಕಾಡೆಮಿ, ಲಲಿತಕಲಾ ಅಕಾಡೆಮಿ, ಶ್ರೀರಾಮ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ತ್ರಿವೇಣಿ ಥಿಯೇಟರ್, ಎಲ್ಟಿಜಿ ಥಿಯೇಟರ್, ಕಾಮಿನಿ ಥಿಯೇಟರ್, ದೂರದರ್ಶನ... ಹೀಗೆ ಹಲವಾರು ಸೃಜನಶೀಲ ಕೇಂದ್ರಗಳು ಸಿಗುತ್ತವೆ.

ಇಲ್ಲಿ ನಿರಂತರ ನಾಟಕ, ಚಿತ್ರಕಲಾ ಪ್ರದರ್ಶನಗಳು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ನಡೆಯುತ್ತಲೇ ಇರುವವು. ಇಲ್ಲಿ ಕಲಿತ ಅನೇಕರು ತಮ್ಮ ಕಲಾ ಜೀವನದಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿದ್ದಾರೆ. ಈ ಶ್ರೀರಾಮ್ ಸೆಂಟರ್ನ ಎದುರು ದೊಡ್ಡದೊಂದು ಮರವಿದೆ. ಆ ಮರದ ಕೆಳಗೆ ಕಳೆದ ಮೂವತ್ತು ವರ್ಷಗಳಿಂದ ಪುಸ್ತಕ ಮಾರಾಟ ಮಾಡುತ್ತಿರುವ ಹೆಣ್ಣುಮಗಳು ಸಂಜನಾ ತಿವಾರಿ. ಮಂಡಿಹೌಸ್ನ ಎಲ್ಲಾ ಕಲಾಪ್ರಿಯರಿಗೆ ಈಕೆ ಸಂಜನಾ ದೀದಿ (ಅಕ್ಕ). ಎಳೆಯರಲ್ಲಿ ಅನೇಕರು ತಮ್ಮ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಂಡದ್ದು ಇಲ್ಲಿನ ಪುಸ್ತಕಗಳಿಂದ. ಇಲ್ಲಿ ನಡೆಯುವ ಹರಟೆಗಳಿಂದ. ಯಾವುದನ್ನು ಓದಬೇಕು? ಹೇಗೆ ಓದಬೇಕು? ಎಂಬ ಬೀದಿಬದಿಯ ಚರ್ಚೆಗಳಿಂದ. ಹಿಂದಿ ಸಾಹಿತ್ಯದ ಮುಖ್ಯ ಕೃತಿಗಳು ಇಲ್ಲಿ ಲಭ್ಯ. ಮುಖ್ಯವಾಗಿ ಕಾವ್ಯ, ನಾಟಕ, ಕಥೆ, ಕಾದಂಬರಿ, ಆತ್ಮಕಥೆ ಮತ್ತು ಕೆಲ ವಿಮರ್ಶೆಯ ಪುಸ್ತಕಗಳು. ಬೆಳಿಗ್ಗೆ ಹತ್ತು ಗಂಟೆಗೆ ಆರಂಭವಾಗುವ ಈ ಬೀದಿಬದಿಯ ಪುಸ್ತಕದಂಗಡಿ ರಾತ್ರಿ ಹತ್ತು ಗಂಟೆಯ ತನಕ ತೆರೆದಿರುತ್ತದೆ. ಇದಕ್ಕಾಗಿ ಸಂಜನಾ ದೀದಿ ನಿತ್ಯ ಇಪ್ಪತ್ತೈದು ಕಿಲೋಮೀಟರ್ ಪ್ರಯಾಣ ಮಾಡಿ ತಮ್ಮ ಪುಸ್ತಕಗಳ ಗಂಟಿನೊಂದಿಗೆ ಇಲ್ಲಿಗೆ ಬಂದು ತಂಗುವರು. ರಸ್ತೆಯಲ್ಲಿ ಪುಸ್ತಕಗಳನ್ನು ಹರವಿಕೊಂಡು ಕೂರುವರು. ಹಿಂದಿಯ ಪ್ರಸಿದ್ಧ ಲೇಖಕರು, ರಂಗಭೂಮಿಯ ಕಲಾವಿದರು ಎಲ್ಲರಿಗೂ ಸಂಜನಾ ದೀದಿ ಎಂದರೆ ಎಲ್ಲಿಲ್ಲದ ಅಕ್ಕರೆ ಮತ್ತು ಗೌರವ.

ಸಂಜನಾ ದೀದಿಯ ಈ ಪಯಣ ಸರಳವೇನಾಗಿರಲಿಲ್ಲ. ಆಕೆ ಬಿಹಾರಿನ ಸಿವಾನ್ ಊರಿನವರು. ಹತ್ತನೇ ತರಗತಿ ಓದುತ್ತಿರುವಾಗಲೇ ರಾಧೇಶ್ಯಾಮ್ ತಿವಾರಿ ಜೊತೆ ಲಗ್ನ. ಪತಿ ಕೂಡ ಹಿಂದಿಯ ಕವಿ. ಜೀವನ ಸಾಗಿಸಲು ಇಬ್ಬರೂ ಬಂದಿದ್ದು ದೆಹಲಿಗೆ. ರಾಧೇಶ್ಯಾಮ್ ತಿವಾರಿಯವರು ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರು. ಓದಿನ ಹುಚ್ಚು ಹತ್ತಿಸಿಕೊಂಡಿದ್ದ ಸಂಜನಾ ಮೊದಲು ಕೆಲಸಕ್ಕೆ ಸೇರಿದ್ದು ಹಿಂದಿಯ ಪ್ರತಿಷ್ಠಿತ ವಾಣಿ ಪ್ರಕಾಶನದಲ್ಲಿ ಪುಸ್ತಕ ಮಾರಾಟಗಾರ್ತಿಯಾಗಿ. ಅಲ್ಲಿ ಕೆಲಸ ಮಾಡುವ ಉದ್ದೇಶವೇ ಹೊಸ ಹೊಸ ಪುಸ್ತಕಗಳನ್ನು ಓದಬಹುದಲ್ಲ ಎಂಬ ಕಾರಣಕ್ಕಾಗಿ. ಆದರೆ ಇದು ಕಷ್ಟವಾಗುತ್ತಿತ್ತು. ಕೊನೆಗೆ ತಾನೇ ಪುಸ್ತಕಗಳ ಮಾರಾಟಗಾರ್ತಿಯಾಗಿ ಶ್ರೀರಾಮ್ ಸೆಂಟರಿನ ಕಾಲುದಾರಿಯ ಮೇಲೆ ಕುಳಿತುಬಿಟ್ಟರು. ನಿಧಾನಕ್ಕೆ ಜನ ಜಮಾವಣೆ ಆಗ ತೊಡಗಿದರು. ಪುಸ್ತಕಗಳು ಮಾರಾಟವಾಗ ತೊಡಗಿದವು. ಜೊತೆಗೆ ಕಷ್ಟಗಳು ಕೂಡ ಹೆಚ್ಚಾದವು. ಶ್ರೀರಾಮ್ ಸೆಂಟರಿನ ಆಡಳಿತಾಧಿಕಾರಿ ಇಲ್ಲಿಂದ ಎತ್ತಂಗಡಿ ಮಾಡುವಂತೆ ದಬಾಯಿಸಿದರು. ದೆಹಲಿ ಕಾಪೋರೇಷನ್ನಿನವರು ಪುಸ್ತಕಗಳನ್ನು ಗಂಟುಮೂಟೆ ಕಟ್ಟಿಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದರು. ಸಂಜನಾ ಯಾರಿಗೂ ಜಗ್ಗಲಿಲ್ಲ. ಮಂಡಿಹೌಸ್ನ ಲೇಖಕರು, ಕಲಾವಿದರು ಆಕೆಯ ಬೆನ್ನಿಗೆ ನಿಂತಿದ್ದರು. ಇದರಿಂದ ಮೂವತ್ತು ವರ್ಷವಾದರೂ ಆಕೆ ತನ್ನ ನೆಲೆಯನ್ನು ಬದಲಾಯಿಸಲಿಲ್ಲ. ಇಲ್ಲಿನ ಲೇಖಕರು ಕಲಾವಿದರೆ ತನ್ನ ಕುಟುಂಬ, ಮಂಡಿಹೌಸ್ ತನ್ನ ನಿಜವಾದ ಮನೆ ಎನ್ನುತ್ತಾರೆ ಸಂಜನಾ.

ಗಂಡನ ಚಿಕ್ಕ ವೇತನ ಮತ್ತು ತನ್ನ ಗಳಿಕೆಯಿಂದಲೇ ಸಂಜನಾ ಮಕ್ಕಳನ್ನು ಓದಿಸಿದರು. ಮಗ ಈಗ ಒಳ್ಳೆಯ ವೈದ್ಯ. ಮಗಳು ಸಂಸ್ಥೆಯೊಂದರಲ್ಲಿ ವಿಜ್ಞಾನಿ. ಅಳಿಯ ಐಪಿಎಸ್ ಅಧಿಕಾರಿ. ಕೂತು ತಿನ್ನಲು, ತಿರುಗಾಡಲು ಯಾವ ಕೊರತೆಯೂ ಇಲ್ಲ. ಆದರೆ ತಾನು ಮತ್ತು ತನ್ನ ಮಕ್ಕಳು ಮಂಡಿಹೌಸ್ನ ಈ ರಸ್ತೆಯಿಂದಲೇ ಎದ್ದು ಬಂದಿದ್ದರಿಂದ ಆಕೆಗೆ ಕೊನೆ ಉಸಿರುರುವವರೆಗೂ ಇಲ್ಲಿಯೇ ಪುಸ್ತಕಗಳನ್ನು ಮಾರುವ ಆಸೆ. ಸಾವು ಮಾತ್ರ ತನ್ನನ್ನು ಈ ಮರದ ನೆರಳಿನಿಂದ ದೂರ ಮಾಡಬಹುದು ಎನ್ನುತ್ತಾರೆ. ದೆಹಲಿಯ ಚಳಿ, ಬಿಸಿಲು, ಮಳೆಯ ಆಟಾಟೋಪ ಗೊತ್ತಿದ್ದವರಿಗೆ ಬೀದಿ ಬದಿಯ ಪುಸ್ತಕ ವ್ಯಾಪಾರದ ಕಷ್ಟ ಸುಖಗಳು ಬೇಗ ಗೊತ್ತಾಗುತ್ತವೆ. ಆಕೆ ಹೇಳುವುದು ಇವ್ಯಾವುದು ಕಷ್ಟವೇ ಅಲ್ಲ. ನಾನು ಹಣ ಗಳಿಸಲಿಕ್ಕಿಲ್ಲ. ಆದರೆ ನನ್ನ ಮಕ್ಕಳು ಒಳ್ಳೆಯ ವಿದ್ಯಾವಂತರಾದರು. ಅನೇಕ ಲೇಖಕರು ಕಲಾವಿದರು ಪ್ರೀತಿ ತೋರಿದರು. ಹೊಸಬರು ವಿಶ್ವಾಸವಿಟ್ಟರು. ಇದಕ್ಕಿಂತ ದೊಡ್ಡ ಸುಖ ಜೀವನದಲ್ಲಿ ಏನಿದೆ? ಅಂತ ನೆಮ್ಮದಿಯ ನಗೆ ಸೂಸಿದರು.

ಇದಿಷ್ಟೇ ಆಗಿದ್ದರೆ ಎಲ್ಲರಂತೆ ಸಂಜನಾ ಕೂಡ ಅನ್ನಬಹುದಿತ್ತು. ಆಕೆ ಇನ್ನಷ್ಟು ಹೊಸ ಕನಸು ಕಂಡರು. ತನ್ನ ಚಿಕ್ಕ ಸ್ಥಳದಲ್ಲಿಯೇ ಹೊಸ ಕವಿಗಳನ್ನು ಕರೆಸಿ ಕವಿತೆ ಓದಿಸಿದರು. ಕೆಲವೊಮ್ಮೆ ಭಾಷಣ. ಇಲ್ಲಿ ಸೇರುವ ಜನ ಕಂಡು ಹಿರಿಯ ಲೇಖಕರು ಕೂಡ ಕಾರ್ಯಕ್ರಮದ ಭಾಗವಾಗತೊಡಗಿದರು. ಹಿಂದಿಯ ಪ್ರಸಿದ್ಧ ಕವಿ ಮಂಗಲೇಶ್ ದಬರಾಲ್ ಬಂದು ಕವಿತೆ ಓದಿ ಎಳೆಯರೊಂದಿಗೆ ಹರಟಿದರು. ಮಾನವ್ ಕೌಲ್ ಬಂದು ತಮ್ಮ ರಂಗಭೂಮಿಯ ಅನುಭವಗಳನ್ನು ಹಂಚಿಕೊಂಡರು. ಈಗ ಆಕೆಗೆ ಜನ ಜಂಗುಳಿಯನ್ನು ಸಂಭಾಳಿಸುವುದು ಕಷ್ಟವಾಗತೊಡಗಿತ್ತು. ನಂತರ ಕೆಲವರ ಸಹಕಾರದಿಂದ ಪಕ್ಕದಲ್ಲೇ ಇರುವ ತ್ರಿವೇಣಿ ಥಿಯೇಟರನ್ನು ಒಂದು ದಿನದ ಬಾಡಿಗೆ ಪಡೆದು ಕಾರ್ಯಕ್ರಮಗಳನ್ನು ನಡೆಸತೊಡಗಿದರು. ತಿಂಗಳಿಗೆ ಒಂದಿಲ್ಲೊಂದು ಕಾರ್ಯಕ್ರಮ ನಡೆಯುತ್ತಲೇ ಇರುತ್ತವೆ. ಮುಖ್ಯವಾಗಿ ಹೊಸಬರ ಕಾವ್ಯ ವಾಚನ, ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ. ಈಗ ಈ ಕಾರ್ಯಕ್ರಮದ ಒಟ್ಟು ಹೆಸರು ‘ಸ’ ಸೆ ಸಂಜನಾ ಸಾಹಿತ್ಯೋತ್ಸವ್. ಹೊಸ ತಲೆಮಾರಿನ ಲೇಖಕರಿಗೆ ಇದೊಂದು ಮುಖ್ಯ ವೇದಿಕೆ. ಕಾರ್ಯಕ್ರಮದ ಜೊತೆಗೆ ಪುಸ್ತಕ ಮಾರಾಟ ಮತ್ತು ಪ್ರದರ್ಶನ. ಆಕೆ ಮಾತ್ರ ವೇದಿಕೆಯ ಮೇಲೆ ಕೂರುವುದಿಲ್ಲ. ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಳ್ಳುವುದರಲ್ಲಿ ವ್ಯಸ್ತರು.

ಮಂಡಿಹೌಸ್ನ ಸಾಂಸ್ಕೃತಿಕ ವಾತಾವರಣವನ್ನು ಶ್ರೀಮಂತಗೊಳಿಸಿದ್ದು ಸಂಜನಾ ದೀದಿಯ ಬೀದಿಬದಿಯ ಕನಸುಗಳು. ಸಂಜನಾ ದೀದಿ ಕೆಲ ದಿನಗಳಿಂದ ದುಃಖದಲ್ಲಿದ್ದರು. ಇದಕ್ಕೆ ಕಾರಣ ಅವರ ಕಣ್ಣೆದುರೇ ಬೆಳೆದ ತರುಣ ಲೇಖಕ ಇರ್ಷಾದ್ ಖಾನ್ ಸಿಕಂದರ್ನ ಅಕಾಲಿಕ ಸಾವು. ಆತನ ನೆನಪಿನಲ್ಲಿ ಒಂದು ಕಾರ್ಯಕ್ರಮ ಸಂಘಟಿಸಿದರು. ಈಗ ತನಗೆ ಪರಿಚಿತವಿರುವ ಲೇಖಕರು, ಕಲಾವಿದರು, ಪತ್ರಕರ್ತರ ಬಳಿ ಆಕೆ ಹಣ ಸಂಗ್ರಹಿಸಿ ಇರ್ಷಾದ್ ಖಾನ್ ಸಿಕಂದರ್ ಅವರ ಬಡಕುಟುಂಬಕ್ಕೆ ನೆರವಾಗುವ ಕಾರ್ಯದಲ್ಲಿ ತೊಡಗಿದ್ದಾರೆ.

ತನ್ನಂತೆಯೇ ದೆಹಲಿಗೆ ಹೊಸ ಕನಸುಗಳನ್ನು ಹೊತ್ತು ಬರುವ ತರುಣ–ತರುಣಿಯರಿಗೆ ಸಂಜನಾ ದೀದಿಯ ಮಡಿಲಲ್ಲಿ ಸದಾ ಆಸರೆಯಿದೆ. ಆಕೆ ಪುಸ್ತಕ ಮಾರಾಟಕ್ಕಾಗಿ ಯಾರನ್ನೂ ನೇಮಿಸಿಕೊಂಡಿಲ್ಲ. ಒಬ್ಬಂಟಿಯಾಗಿ ತನ್ನ ಕೆಲಸ ತಾನು ಮಾಡುವುದರಲ್ಲಿಯೇ ಸುಖವಿದೆ ಎನ್ನುತ್ತಾರೆ. ಸಾಹಿತ್ಯೋತ್ಸವ ಮಾಡುವಾಗ ಎಲ್ಲೆಲ್ಲಿಂದಲೋ ನೆರವು ಹರಿದು ಬರುತ್ತದೆ. ಆಕೆಗೇ ಅಚ್ಚರಿ. ದೆಹಲಿ ತನಗೆ ಕೊಟ್ಟಿರುವುದನ್ನು ಹಿಂತಿರುಗಿಸಲು ಈ ಜನ್ಮ ಸಾಲದೆನ್ನುತ್ತಾರೆ ಸಂಜನಾ. ದೆಹಲಿಯ ಋಣದ ಭಾರ ಬೇಗ ಕಳೆಯುವುದಿಲ್ಲ ಅಂತ ಕಣ್ಣಂಚಿನಲ್ಲಿ ಜಾರುವ ಹನಿಯನ್ನು ತಡೆದುಕೊಂಡರು. ಸಂಜನಾ ದೀದಿಯ ಸಾಹಸಗಳು ಈಗ ಮಂಡಿಹೌಸ್ನ ಹೆಮ್ಮಯ ಸಂಗತಿಗಳಾಗಿಬಿಟ್ಟಿವೆ. ⇒v

ಪ್ರಕಾಶನದತ್ತ...

ಸಂಜನಾರ ಕನಸು ಕಾಲಕಳೆದಂತೆ ಬೆಳೆದವು. ಪ್ರತಿಷ್ಠಿತ ಸಂಸ್ಥೆಗಳು ಹೊಸಬರ ಕೃತಿಗಳನ್ನು ಪ್ರಕಟಿಸುವುದಿಲ್ಲ. ಹೊಸಬರು ಬೆಳೆಯುವುದು ಇತರರ ಗಮನಕ್ಕೆ ಬರುವುದು ಹೇಗೆ? ಆಗ ಸಂಜನಾ ಸಾಲ ಮಾಡಿ ಹೊಸಬರ ಪುಸ್ತಕಗಳ ಪ್ರಕಟಣೆಗೆ ಇಳಿದರು. ಸ್ವತಃ ಒಂದು ಪ್ರಕಾಶನ ಸಂಸ್ಥೆ ಸ್ಥಾಪಿಸಿದರು. ಆ ಪ್ರಕಾಶನ ಸಂಸ್ಥೆಯ ಹೆಸರು ‘ಸಂಜನಾ ಬುಕ್ಸ್’. ಇಲ್ಲಿಯವರೆಗೆ ಅವರು ಪ್ರಕಟಿಸಿದ ಪುಸ್ತಕಗಳ ಸಂಖ್ಯೆ ಎರಡನೂರು ದಾಟಿದೆ. ಈಗ ಒಂದು ಪ್ರತಿಭಾವಂತರ ಪಡೆಯೇ ಸಂಜನಾ ದೀದಿಯ ಹಿಂದಿದೆ. ಸಾಹಿತ್ಯೋತ್ಸವದ ರೂಪುರೇಷೆಗಳನ್ನು ಹಾಕುವುದು ಸಂಘಟಿಸುವುದು ನಡೆಸುವುದು ಈ ಗುಂಪು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.