ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಕ್ಸ್‌ಪಿಯರ್‌ಗೆ ಬಾಹ್ಯಾಕಾಶ ಯೋಗ

Published 30 ಡಿಸೆಂಬರ್ 2023, 23:30 IST
Last Updated 30 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಆಕೆ ಕಾಲೇಜಿನಲ್ಲಿ ಓದುತ್ತಿದ್ದಾಗ ಶೇಕ್ಸ್‌ಪಿಯರ್‌ನ ನಾಟಕಗಳಿಂದ ತುಂಬಾ ಪ್ರಭಾವಿತಳಾಗಿದ್ದಳು. ಬೀಳ್ಕೊಡುಗೆ ಸಮಾರಂಭದ ದಿನ ಆಡಿದ ‘ರೋಮಿಯೋ ಜೂಲಿಯೆಟ್’ ನಾಟಕದಲ್ಲಿ ಜೂಲಿಯೆಟ್ಟಳ ಪಾತ್ರ ಮಾಡಿದ್ದಳು. ನಾಟಕ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿತ್ತು. ಮರುದಿನ ಕಾಲೇಜಿನ ನೋಟಿಸ್‌ ಬೋರ್ಡಿನಲ್ಲಿ ಕೈಯಲ್ಲಿ ಬರೆದ ಅವಳ ಚಿತ್ರದ ಜೊತೆ ‘ಕ್ಯಾಂಪಸ್ ಜೂಲಿಯೆಟ್’ ಎಂಬ ಅಡಿಬರಹವಿದ್ದ ಪೋಸ್ಟರ್ ರಾರಾಜಿಸುತ್ತಿತ್ತು. ರಾತ್ರೋರಾತ್ರಿ ಜನಪ್ರಿಯಳಾಗಿದ್ದ ಹುಡುಗಿ, ‘ಶೇಕ್ಸ್‌ಪಿಯರ್‌ನಿಂದಾಗಿ ಇಷ್ಟೊಂದು ಖ್ಯಾತಿ ಸಿಕ್ಕಿದೆ, ಆತನಿಗೆ ನನ್ನ ಉಪಕಾರ ಸಲ್ಲಿಸುವುದು ಹೇಗೆ?’ ಎಂದು ಅಪ್ಪನನ್ನು ಕೇಳಿದಳು. ಮಗಳೇ, ‘ಜನ ತಮಗೆ ಬೇಕಾದ ಖ್ಯಾತಿ, ಪದವಿ ಸಿಕ್ಕ ಸಂತಸಕ್ಕೆ ಪಾರಿವಾಳ, ಪಟಾಕಿ, ಗಾಳಿಪಟ ಹಾರಿಸುತ್ತಾರೆ, ಕೆಲವರು ಬಣ್ಣದ ಬಲೂನು ಹಾರಿಬಿಡುತ್ತಾರೆ. ನೀನು ಹಾಗೆಯೇ ಮಾಡು’ ಎಂದ.

‘ಬರೀ ಬಲೂನು ಏಕೆ? ನನಗೆ ಪ್ರಸಿದ್ಧಿ ತಂದು ಕೊಟ್ಟ ನಾಟಕಕಾರನ ಚಿತ್ರವನ್ನೇ ಆಕಾಶಕ್ಕೆ ಹಾರಿಬಿಡುತ್ತೇನೆ’ ಎಂದು ನಿರ್ಧರಿಸಿದ ಹುಡುಗಿ ಶೇಕ್ಸ್‌ಪಿಯರ್‌ನ ಚಿತ್ರಕ್ಕೆ ಬಣ್ಣದ ಬಲೂನು ಕಟ್ಟಿ ದಿಗಂತದ ಅಂಚಿಗೆ ಹಾರಿಬಿಟ್ಟಳು.

ನಾನ್ನೂರು ವರ್ಷಗಳ ಹಿಂದೆ ಮಹಾನ್ ನಾಟಕಕಾರನ ನಾಟಕಗಳ ಸಂಗ್ರಹ ಪ್ರಕಟವಾಗಿತ್ತು (1623ರ ನವೆಂಬರ್ 8). ಶೇಕ್ಸ್‌ಪಿಯರ್‌ ಮರಣಿಸಿದ ಏಳು ವರ್ಷಗಳ ನಂತರ ಆತನ ಸ್ನೇಹಿತರೆಲ್ಲ ಸೇರಿದರು. ಶೇಕ್ಸ್‌ಪಿಯರ್‌ ಬರೆದ ಹಾಸ್ಯ, ದುಃಖಾಂತ್ಯ, ಇತಿಹಾಸ ಆಧರಿತ 37 ನಾಟಕಗಳ ಪೈಕಿ 36 ಅನ್ನು ಸಂಕಲಿಸಿ ಒಂಬೈನೂರು ಪುಟಗಳ 750 ಪ್ರತಿಗಳನ್ನು ಪ್ರಕಟಿಸಿದ್ದರು. ಇದರ ಸವಿನೆನಪು ಮತ್ತು ನಾಟಕಕಾರನ ಗೌರವಾರ್ಥವಾಗಿ ಶೇಕ್ಸ್‌ಪಿಯರ್‌ ಚಿತ್ರವಿರುವ ಪುಸ್ತಕದ ಮೊದಲ ಒಳಪುಟ ಮತ್ತು ‘ಎ ಮಿಡ್‌ಸಮ್ಮರ್ ನೈಟ್ಸ್ ಡ್ರೀಮ್ಸ್’ ನಾಟಕದಲ್ಲಿ ನಾಯಕ ಮಾಡುವ ಭಾಷಣದ ಸಾಲುಗಳಿರುವ ಪುಟವನ್ನು ಬಿಸಿ ಹವೆಯ ಬಲೂನುಗಳಲ್ಲಿಟ್ಟು ಭೂಮಿಯ ವಾತಾವರಣದ ಅಂಚಿನವರೆಗೂ ಹಾರಿಸಲಾಗಿದೆ. ಇದೇ 16 ನಿಮಿಷಗಳ ಕಿರುಚಿತ್ರವಾಗಿಯೂ ರೂಪುಗೊಂಡಿದೆ.

ಏನಿದರ ವಿಶೇಷ?

ಬ್ರಿಟಿಷ್ ಚಲನಚಿತ್ರ ನಿರ್ಮಾಪಕ ಜಾಕ್‌ಜೆರ್ಸ್‌ ತನ್ನ ಕಿರು ಚಲನಚಿತ್ರಗಳಿಗೆ ಸಮಕಾಲೀನ ವಿಷಯಗಳನ್ನು ಆಯ್ದುಕೊಳ್ಳಲು ನಿರ್ಧರಿಸಿದಾಗ ಜೇಮ್ಸ್ ವೆಬ್ ಟೆಲಿಸ್ಕೋಪಿನ ಚಮತ್ಕಾರಿ ಚಿತ್ರಗಳು, ಭಾರತದ ಇತ್ತೀಚಿನ ಚಂದ್ರ, ಸೂರ್ಯಯಾನಗಳ ಬಾಹ್ಯಾಕಾಶ ವಿಜ್ಞಾನ ಸಾಧನೆ, ಕೃತಕ ಬುದ್ಧಿಮತ್ತೆ, ಕೋವಿಡ್ ಉಪಟಳ, ರಷ್ಯಾ – ಉಕ್ರೇನ್ ಯುದ್ಧ ಇತ್ಯಾದಿ ವಿಷಯಗಳು ಆತನ ಮನಸ್ಸು ತುಂಬಿದವು. ಇದನ್ನೇ ಹಿನ್ನೆಲೆಯಾಗಿಟ್ಟುಕೊಂಡು ಮಹಾನ್ ನಾಟಕಕಾರನಿಗೆ ಗೌರವ ಸಲ್ಲಿಸಿದರೆ ಹೇಗೆ? ಎಂಬ ಯೋಚನೆಯನ್ನು ಚಿತ್ರತಂಡಕ್ಕೆ ಹೇಳಿದಾಗ, ‘ಹೌದಲ್ಲ, ಇದು ತುಂಬಾ ವಿಶೇಷವಾಗಿದೆ, ಮಾಡಿಯೇ ಬಿಡೋಣ’ ಎಂದರು.

ಶೇಕ್ಸ್‌ಪಿಯರ್‌ ನಾಟಕಗಳೆಲ್ಲ ಜೀವನದ ಪ್ರತಿಬಿಂಬಗಳೆ. ಮೊದಲ ಪುಸ್ತಕ ಪ್ರಕಟವಾದಾಗ, ಯೂರೋಪಿನಲ್ಲಿ ಪ್ಲೇಗ್ ಸಾಂಕ್ರಾಮಿಕ ತಂಡವಾಡುತ್ತಿತ್ತು. ಜನ ಅಟ್ಲಾಂಟಿಕ್ ಸಾಗರ ದಾಟಿ ಉತ್ತರ ಅಮೆರಿಕದ ಕಡೆ ವಲಸೆ ಹೊರಟಿದ್ದರು. ಅಂದಿನ ದಿನಗಳಲ್ಲಿದ್ದ ಮಾರಕ ಪಿಡುಗು, ಇಮಿಗ್ರೇಶನ್‌ನ ಸಮಸ್ಯೆ, ಸಾಮಾಜಿಕ ಬಿಕ್ಕಟ್ಟು, ಪ್ರಭುತ್ವವನ್ನು ಪ್ರಶ್ನಿಸುವ ಗುಣ ಈಗಲೂ ಹೊಸ ರೂಪದಲ್ಲಿ ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಿವೆ. ನಾಲ್ಕು ಶತಮಾನಗಳ ಹಿಂದೆ ಇದ್ದಂತಹ ವಿಷಮ ಪರಿಸ್ಥಿತಿ ಈಗಲೂ ಇದೆ. ತಾನು ತಯಾರಿಸಿರುವ ಆರು ಕಿರುಚಿತ್ರಗಳು ಆರು ವೈವಿಧ್ಯಮಯ ವಿಷಯಗಳನ್ನೊಳಗೊಂಡಿದ್ದರೂ ಅವೆಲ್ಲ ಶೇಕ್ಸ್‌ಪಿಯರ್‌ನ ನಾಟಕ ಮತ್ತು ಪದ್ಯಗಳನ್ನೇ ಪ್ರತಿಬಿಂಬಿಸುತ್ತವೆ ಎಂಬುದು ಜೆರ್ಸ್‌ನ ಮಾತು.

ಒರಿಜಿನಲ್ ಚಿತ್ರವೇ ಬೇಕು

ಒಂದು ಸಿನಿಮಾದಲ್ಲಿ ನಾಟಕಕಾರನ ಚಿತ್ರವನ್ನು ಬಾಹ್ಯಾಕಾಶಕ್ಕೆ ಕಳಿಸುವ ವಿಲಕ್ಷಣ ಯೋಚನೆ ಬಂದಾಗ ಮೇಲೆ ಹೋಗುವ ಚಿತ್ರ ಆತನ ಪುಸ್ತಕದಲ್ಲಿರುವ ಚಿತ್ರವೇ ಆದರೆ ಅದು ನಿಜವಾದ ಗೌರವ ಎಂಬ ಸಲಹೆ ಬಂತು. ನಾಲ್ಕುನೂರು ವರ್ಷಗಳ ಹಿಂದೆ ಪ್ರಕಟಗೊಂಡಿದ್ದ ಪುಸ್ತಕಗಳು ಎಲ್ಲಿವೆ, ಯಾರ ಬಳಿ ಇವೆ, ಅನುಮತಿ ಯಾರು ಕೊಡುತ್ತಾರೆ ಎಂಬ ಪ್ರಶ್ನೆಗಳು ಎದುರಾದವು. ಲಂಡನ್‌ನ ಗ್ಲೋಬ್ ಥಿಯೇಟರ್‌ನ ಶೇಕ್ಸ್‌ಪಿಯರ್‌ ಅಧ್ಯಯನ ಕೇಂದ್ರದ ಮುಖ್ಯಸ್ಥ ಹಾಗೂ ಸಾಹಿತ್ಯ ಸಂಶೋಧಕ ವಿಲ್ ಟೋಶ್ ಜೆರ್ಸ್‌ನನ್ನು ಕರೆದು ‘ಇಗೋ ನಿಮಗೆ ಬೇಕಾದ ಚಿತ್ರ ಇಲ್ಲಿದೆ’ ಎಂದು ಒಂದು ಪ್ರತಿಯನ್ನು ನೀಡಿಯೇ ಬಿಟ್ಟರು. ಅದರಿಂದ ಶೇಕ್ಸ್‌ಪಿಯರ್‌ನ ಭಾವಚಿತ್ರವಿರುವ ಪುಸ್ತಕದ ಮೂಲ ಹಾಳೆಗೆ ಫ್ರೇಮ ಹಾಕಿ, ‘ಎ ಮಿಡ್‌ಸಮ್ಮರ್ ನೈಟ್ಸ್ ಡ್ರೀಮ್ಸ್’ ನಾಟಕದ ‘ಲವರ್ಸ್‌ ಅಂಡ್ ಮ್ಯಾಡ್‌ಮೆನ್’ ಭಾಷಣದ ಛಾಯಾಪ್ರತಿ ತಯಾರಿಸಿ, ಎರಡನ್ನೂ ಬಿಸಿ ಗಾಳಿಯ ಬಲೂನಿನಲ್ಲಿಟ್ಟು ಭೂಮಿಯಿಂದ ಒಂದು ನೂರು ಕಿ.ಮೀ. ಎತ್ತರಕ್ಕೆ ಕಳಿಸುವಲ್ಲಿ ತಂಡ ಯಶಸ್ವಿಯಾಯಿತು. ಮೇಲೆ ಹೋಗಿರುವ ಬಿಸಿಹವೆಯ ಬಲೂನಿನಲ್ಲಿ ಕ್ಯಾಮೆರಾ, ಜಿಪಿಎಸ್ ಟ್ರ್ಯಾಕರ್‌ಗಳಿವೆ.

ಸಿನಿಮಾದಲ್ಲೇನಿದೆ?

ಚಲನಚಿತ್ರಗಳನ್ನು ‘ಇನ್ವರ್ಸ್‌ ಫಿಲ್ಸ್ಮ್ಸ್‌ಸಂಸ್ಥೆ ನಿರ್ಮಿಸಿದೆ. ಪ್ರತಿ ಕಿರುಚಿತ್ರದಲ್ಲೂ ಯಶಸ್ವಿ ಕವಿತೆಗಳನ್ನು ಆಯಾ ಥೀಮ್‌ಗೆ ಹೊಂದುವಂತೆ ವಾಚಿಸಲಾಗಿದೆ. ಒಂದು ಸಿನಿಮಾದಲ್ಲಿ ಉಕ್ರೇನಿನ ಯುದ್ಧದಲ್ಲಿ ನೊಂದ ನಾಗರಿಕರಲ್ಲಿ ಜೀವನದ ಕುರಿತು ಆತ್ಮವಿಶ್ವಾಸ ತುಂಬಲು ಹೆನ್ರಿ ಗಿ ನಾಟಕದ ‘ಬ್ಯಾಂಡ್ ಆಫ್ ಬ್ರದರ್ಸ್’ ಭಾಷಣವನ್ನು ಬಳಸಿಕೊಂಡಿರುವುದು ಮನನೀಯವಾಗಿದೆ. ಕೋವಿಡ್‌ನ ದಿನಗಳಲ್ಲಿ ಜನ ಕುಟುಂಬದ ಪ್ರೀತಿ ಪಾತ್ರರಿಂದ ದೂರವಿರುವ ಸಂದರ್ಭದಲ್ಲಿ ಅನುಭವಿಸಿದ ಏಕಾಂಗಿತನದ ಕುರಿತು ಮತ್ತು ಸಾವಿನ ದವಡೆಯಿಂದ ಪಾರಾಗಿ ಸಹಜ ಜೀವನಕ್ಕೆ ಮರಳಿದಾಗ ಅದಕ್ಕೆ ಸರಿಯಾಗಿ ಹೊಂದುವಂತೆ ಟೆಂಪೆಸ್ಟ್ ನಾಟಕದ ‘ಅವರ್ ರಿವೆಲ್ಸ್ ನೌ ಆರ್ ಎಂಡೆಡ್’ ಎಂಬ ಭಾಷಣ ಹದವಾಗಿ ಬಳಕೆಗೊಂಡಿದೆ. ಇನ್ನೊಂದು ಸಿನಿಮಾದಲ್ಲಿ ಜನ ನಿರಾಶ್ರಿತರಾಗಿ ಹೊಸ ನೆಲೆಗೆ ಗುಳೆ ಹೋಗುವುದನ್ನು ಪರಿಣಾಮಕಾರಿಯಾಗಿ ಚಿತ್ರಿಸಲು ಶೇಕ್ಸ್‌ಪಿಯರ್‌ನ ಆಡದೇ ಇರುವ ನಾಟಕದ ಸಾಲುಗಳನ್ನು ಹಿನ್ನೆಲೆ ಧ್ವನಿಯಾಗಿ ಬಳಸಲಾಗಿದೆ. ಎಲ್ಲ ಮಾತುಗಳು ‘ಡಾಕ್ಟರ್ ಹೂ’ ಸಿನಿಮಾದಲ್ಲಿ ನಾಲ್ಕನೆಯ ವೈದ್ಯನ ಪಾತ್ರದಲ್ಲಿ ಅಭಿನಯಿಸಿದ್ದ ನಟ ಟಾಂ ಬಕರ್‌ನ ಧ್ವನಿಯಲ್ಲಿವೆ. ಇನ್ವರ್ಸ್ ಫಿಲ್ಮ್ಸ್‌ಸಂಸ್ಥೆ ತನ್ನ ಎಲ್ಲ ಆರು ಕಿರು ಸಿನಿಮಾಗಳನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಈಗಾಗಲೇ ಬಿಡುಗಡೆಗೊಳಿಸಿದೆ.

ದಶಕದ ಹಿಂದೆ ನಮ್ಮ ಶಾಲೆ – ಕಾಲೇಜುಗಳ ಇಂಗ್ಲಿಷ್ ಪಠ್ಯದಲ್ಲಿ ಶೇಕ್ಸ್‌ಪಿಯರ್‌ ಬರೆದ ನಾಟಕ - ಪದ್ಯಗಳು ಓದಿನ ಭಾಗವಾಗಿ ಇದ್ದೇ ಇರುತ್ತಿದ್ದವು. ತರಗತಿ ಕೋಣೆಗಳಿಂದ ರಂಗವೇರುತ್ತಿದ್ದ ಅನೇಕ ನಾಟಕಗಳು ನಮ್ಮನ್ನೇ ಬದಲಾಯಿಸಿಬಿಡುವಷ್ಟು ಪರಿಣಾಮಕಾರಿಯಾಗಿರುತ್ತಿದ್ದವು. ಈಗ ನಮ್ಮ ಎಲ್ಲಾ ಪಠ್ಯಗಳಿಂದ ಶೇಕ್ಸ್‌ಪಿಯರ್‌ ಮಾಯವಾಗಿರುವ ಸುದ್ದಿ ಇದೆ. ಬಾಹ್ಯಾಕಾಶಕ್ಕೆ ಹೋಗಿದ್ದೇ ಕಾರಣವಿರಬಹುದೇ?

ಶೇಕ್ಸ್‌ಪಿಯರನ ಮೊದಲ ಫೋಲಿಯೊ
ಶೇಕ್ಸ್‌ಪಿಯರನ ಮೊದಲ ಫೋಲಿಯೊ
ವಿಲಿಯಂ ಶೇಕ್ಸ್‌ಪಿಯರ್‌ ಸದಾಕಾಲವೂ ಸಹೃದಯರ ಬದುಕಿನಲ್ಲಿ ಪ್ರವಹಿಸುತ್ತಿರುತ್ತಾರೆ. ಅವರ ಚಿತ್ರ ಹೊತ್ತ ಬಲೂನು ಅಂತರಿಕ್ಷದಲ್ಲಿ ತೇಲುತ್ತಿದ್ದರೆ ಅವರನ್ನು ಕುರಿತ ಕಿರುಚಿತ್ರವು ಸಮಕಾಲೀನ ಅನುಸಂಧಾನಕ್ಕೂ ಸಾಕ್ಷಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT