ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ, ಪ್ರವೃತ್ತಿ ಎರಡಕ್ಕೂ ನ್ಯಾಯ ಒದಗಿಸಿದ ಸಮರ್ಥ ಲೇಖಕ

Published 15 ಅಕ್ಟೋಬರ್ 2023, 0:30 IST
Last Updated 15 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

ಇತ್ತೀಚೆಗೆ ನಮ್ಮನ್ನಗಲಿದ ಗುಂಬಳ್ಳಿ ನರಸಿಂಹಮೂರ್ತಿ ರಂಗನಾಥ ರಾವ್ (1942-2023) ಪತ್ರಿಕೋದ್ಯಮ ಮತ್ತು ಸಾಹಿತ್ಯ ರಂಗದ ಹಿರಿಯ ಸಾಧಕರಾಗಿ ನಮಗೆಲ್ಲ ಬಹು ಪ್ರಿಯರಾದವರು. ಪತ್ರಿಕೋದ್ಯಮ ಜೀವನ ವೃತ್ತಿಯಾದವರು ಸಾಹಿತ್ಯರಂಗದಲ್ಲಿ ಮಹತ್ವದ ಸಾಧನೆ ಮಾಡುವುದು ಕಷ್ಟಸಾಧ್ಯ ಎಂಬ ಅಪವ್ಯಾಖ್ಯೆಯನ್ನು ಸುಳ್ಳಾಗಿಸಿದವರಲ್ಲಿ ಜಿ.ಎನ್.ಆರ್ ಮುಖ್ಯರು. ನಮ್ಮಂಥ ಅನೇಕ ಲೇಖಕರನ್ನು ಬೆಳೆಸಿದ ಜಿ.ಎನ್.ಆರ್ ಅವರದ್ದು ಜಾತ್ಯತೀತವಾದ ವ್ಯಕ್ತಿತ್ವ. ಜೀವನಮುಖತ್ವ ಅವರ ವ್ಯಕ್ತಿತ್ವದ ಪ್ರಧಾನ ಲಕ್ಷಣವೆನ್ನಬಹುದು. ಸ್ವಭಾವತಃ ಗಂಭೀರ ವ್ಯಕ್ತಿ. ಮಾತು ಕಮ್ಮಿ. ಆದರೆ ಅವರದ್ದು ಕ್ರಿಯಾಶೀಲ ವ್ಯಕ್ತಿತ್ವ. ತಾತ್ವಿಕವಾಗಿ ನಿಜವಾದ ಗಾಂಧಿವಾದಿ. ಬಡತನವನ್ನು ಒಂದು ಮೌಲ್ಯವಾಗಿ ಪರಿಗಣಿಸಿದವರು. ಹಳೆಯ ಪೀಳಿಗೆಯ ಕಡೆಂಗೋಡ್ಲು, ಆನಂದಕಂದ, ವೀರಕೇಸರಿ, ಡಿವಿಜಿಯವರಂತೆ ಪತ್ರಿಕೋದ್ಯಮ ಮತ್ತು ಸಾಹಿತ್ಯ ಸಾಧನೆಯಲ್ಲಿ ಸಮತೂಕದ ಮೌಲಿಕ ಬರಹಗಳನ್ನು ರಚಿಸಿ ವೃತ್ತಿ ಮತ್ತು ಪ್ರವೃತ್ತಿಗೆ ಸಮಾಸಮ ನ್ಯಾಯ ದೊರಕಿಸುವ ಮೂಲಕ ಹಳೆಯ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸಿದವರು.

ಆರಂಭದ ಹಂತದಲ್ಲಿ ‘ತಾಯಿನಾಡು’, ‘ಸಂಯುಕ್ತ ಕರ್ನಾಟಕ’ ಪತ್ರಿಕೆಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಜಿ.ಎನ್.ಆರ್ ಆನಂತರ ‘ಪ್ರಜಾವಾಣಿ’ ಪತ್ರಿಕಾಗುಂಪಿನಲ್ಲಿ ಮೂವತ್ತು ವರ್ಷಗಳಷ್ಟು ದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದವರು. ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ತಮ್ಮ ವೃತ್ತಿ ಜೀವನದ ಶಿಖರವನ್ನು ತಲಪಿದ ಜಿ.ಎನ್.ಆರ್ , ಪತ್ರಿಕೋದ್ಯಮದ ಒತ್ತಡದಲ್ಲೂ ಸಾಹಿತ್ಯ ನಿರ್ಮಿತಿಯ ಹೊಣೆಗಾರಿಕೆಗೆ ಯಾವತ್ತೂ ವಿಮುಖರಾದವರಲ್ಲ. ಪತ್ರಿಕೋದ್ಯಮಕ್ಕೆ ನೂರಕ್ಕೆ ನೂರು ಕೊಟ್ಟುಕೊಂಡು, ಪತ್ರಿಕೋದ್ಯಮಕ್ಕೆ ಪೂರಕವಾಗುವಂಥ ಸಾಹಿತ್ಯವನ್ನು ನಿರಂತರವಾಗಿ ರಚಿಸಿದವರು. 2006ರಲ್ಲಿ ಪ್ರಕಟವಾದ ಅವರ ಪತ್ರಿಕೋದ್ಯಮ ಕುರಿತ ಸಮಗ್ರ ಸಂಪುಟ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಒಂದು ಆಕರ ಗ್ರಂಥವೆಂದೇ ಪರಿಗಣಿತವಾಗಿದೆ. ನಿವೃತ್ತಿಯ ನಂತರ ಭಾರತೀಯ ವಿದ್ಯಾಭವನದಲ್ಲಿ ಮತ್ತು ಸರ್ಕಾರಿ ಕಲಾ ಕಾಲೇಜಿನಲ್ಲಿ ಪತ್ರಿಕೋದ್ಯಮವನ್ನು ಅವರು ಬೋಧಿಸಿದರೆಂಬುದನ್ನು ನಾವಿಲ್ಲಿ ಸ್ಮರಿಸಲೇಬೇಕಾಗಿದೆ.

ಇನ್ನು ವಿಮರ್ಶಕರಾಗಿ, ಅನುವಾದಕರಾಗಿ ಸಾಹಿತ್ಯ ರಂಗಕ್ಕೆ ಜಿ.ಎನ್.ಆರ್ ಕೊಟ್ಟಂಥ ಕೊಡುಗೆಯನ್ನು ನಾವು ಮರೆಯುವಂತೆಯೇ ಇಲ್ಲ. ಅವರು ಕಾವ್ಯ, ಕಥೆ, ನಾಟಕ, ಪ್ರಬಂಧ, ಮಕ್ಕಳ ಸಾಹಿತ್ಯದ ರಚನೆಯನ್ನು ಮಾಡಿರುವರಾದರೂ ವಿಮರ್ಶೆ ಮತ್ತು ಅನುವಾದ ರಂಗದಲ್ಲಿ ಅವರ ಕೊಡುಗೆ ಅನನ್ಯವೆನ್ನಬಹುದು. ‘ಹೊಸ ತಿರುವು’, ‘ಮಾಸ್ತಿಯವರ ನಾಟಕಗಳು’, ‘ಒಳನೋಟ’, ‘ಅನ್ಯೋನ್ಯ’, ‘ಗುಣದೋಷ’ ಅವರ ಮುಖ್ಯ ವಿಮರ್ಶಾ ಕೃತಿಗಳು. ‘ಸಮುಚ್ಚಯ’ ಅವರ ಆಯ್ದ ವಿಮರ್ಶಾಸಂಪುಟ. ಸಾಹಿತ್ಯವನ್ನು ಅರ್ಥೈಸುವುದು, ಓದುಗರಿಗೆ ತಲಪಿಸುವುದು, ಹಾಗೂ ಸೃಜನಶೀಲ ವಾತಾವರಣವನ್ನು ನಿರ್ಮಾಣ ಮಾಡುವುದು ಜಿ.ಎನ್.ಆರ್ ಅವರ ಬರವಣಿಗೆಯ ಮುಖ್ಯ ಆಶಯ. ನವ್ಯದ ವಿಜೃಂಭಣೆಯ ಕಾಲದಲ್ಲಿ ಜಿ.ಎನ್.ಆರ್ ಸಾಹಿತ್ಯ ರಚನೆ ಪ್ರಾರಂಭಿಸಿದವರು. ಅವರ ಸಣ್ಣ ಕಥೆಗಳಲ್ಲಿ ನವ್ಯದ ಪ್ರಭಾವ ದಟ್ಟವಾಗಿಯೇ ಇದೆ. ವಿಶ್ಲೇಷಣೆಗೆ ನವ್ಯ ಕಾದಂಬರಿಗಳನ್ನೇ ವಿಶೇಷವಾಗಿ ಆರಿಸಿಕೊಂಡಿದ್ದರೂ ಮಾಸ್ತಿಯವರ ನಾಟಕಗಳನ್ನು ಕುರಿತು ಒಂದು ಗ್ರಂಥವನ್ನೇ ರಚಿಸಿರುವುದು ಅವರ ಮುಕ್ತ ಮನೋಧರ್ಮಕ್ಕೆ ಸಾಕ್ಷಿಯಾಗಿದೆ. ಜಿ.ಎನ್.ಆರ್ ಅವರ ವಿಮರ್ಶೆ ಅವರ ಮುಕ್ತ ಮನಸ್ಸನ್ನು ತೋರಿಸುವಂತಿದೆ. ಗಿರಿಯವರ ‘ಗತಿ ಸ್ಥಿತಿ’ ಬಗ್ಗೆ ಎಷ್ಟು ಉತ್ಸಾಹದಿಂದ ಅವರು ಬರೆಯುತ್ತಾರೋ ಅಷ್ಟೇ ಉತ್ಸಾಹದಿಂದ ಕುಂವಿ ಅವರ ಅರಮನೆಯ ಬಗ್ಗೆಯೂ ಬರೆಯುತ್ತಾರೆ. ಈ ಸಮತೋಲ ಅವರ ವಿಮರ್ಶಾವ್ಯಕ್ತಿತ್ವದ ‘ಇನ್ಬಿಲ್ಟ್’ ಅಂಶವಾಗಿದೆ.

ಜಿ.ಎನ್.ಆರ್ ಅವರ ಮಹೋನ್ನತ ಸಾಧನೆಯೆಂದರೆ ಅವರ ಅನುವಾದ ಸಾಹಿತ್ಯ. ಬೇರೆ ಬೇರೆ ದೇಶದ ಲೇಖಕರು, ಬೇರೆ ಬೇರೆ ಸಂಸ್ಕೃತಿಯ ಲೇಖಕರು, ಬೇರೆ ಬೇರೆ ಭಾಷಾವಲಯದ ಲೇಖಕರು-ಅವರ ಅಂತಃಕರಣವನ್ನು ಜಿ.ಎನ್.ಆರ್ ಅದೆಷ್ಟು ಸೂಕ್ಷ್ಮವಾಗಿ ಗ್ರಹಿಸುತ್ತಾರೆ ಎಂಬುದು ಆಶ್ಚರ್ಯ ಉಂಟು ಮಾಡುತ್ತದೆ. ‘ದಿ ಕಕೇಷಿಯನ್ ಚಾಕ್ ಸರ್ಕಲ್’ (ಮೂಲ: ಬ್ರೆಕ್ಟ್), ‘ಕಾಫ್ಕಾನ ಕಥೆಗಳು’,
‘ಅಂತಿಗೊನೆ’ (ಮೂಲ: ಜೀನ್ ಆನ್ವಿ), ‘ಓ ಹೆನ್ರಿಯ ಕಥೆಗಳು’, ‘ಮಹಾಪ್ರಸ್ಥಾನ’ (ಟಾಲ್‌ಸ್ಟಾಯ್ ಕಥೆಗಳ ಅನುವಾದ), ಶೇಕ್ಸ್‌ಪಿಯರನ ‘ರೋಮಿಯೋ ಜೂಲಿಯಟ್’, ಜೆನ್ ಅನುವಾದ, ಖಲೀಲ್ ಗಿಬ್ರಾನ್ ಅನುವಾದ, ರಾಮಚಂದ್ರ ಗುಹಾ ಅವರ ‘ಬಾಪು ನಂತರದ ಭಾರತ’, ರಾಜ ಮೋಹನ ಗಾಂಧಿಯವರ ‘ಮೋಹನ ದಾಸ ಒಂದು ಸತ್ಯ ಕಥೆ’ (ಜಿ.ಎನ್.ಆರ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ ದೊರಕಿಸಿದ ಕೃತಿ), ಎಲ್.ಎಸ್.ಶೇಷಗಿರಿರಾಯರ ‘ಇಂಗ್ಲಿಷ್ ಮಹಾಭಾರತ’ದ ಕನ್ನಡಾನುವಾದ ಒಂದೊಂದೂ ವಿಶೇಷ ಉಲ್ಲೇಖಕ್ಕೆ ಅರ್ಹವಾದ ಕೃತಿಗಳು.

ಡಾ ಯು.ಆರ್ ಅನಂತಮೂರ್ತಿ ಅವರು ಜಿ.ಎನ್.ಆರ್ ಅವರ ವಿಮರ್ಶೆ ಮತ್ತು ಅನುವಾದಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ‘ರಂಗನಾಥರಾಯರು ಅರೋಚಿಗಳೂ ಆಗದೆ, ಸತೃಣಾಭ್ಯ ವ್ಯವಹಾರಿಯೂ ಆಗದೆ, ಸದ್ದುಗದ್ದಲವಿಲ್ಲದೆ ವಿಮರ್ಶೆಯಲ್ಲಿ ಕನ್ನಡ ಗದ್ಯವನ್ನು ಬೆಳೆಸಿದ್ದಾರೆ. ಇವರು ಪಡೆದ ಗದ್ಯದ ಹದ ಮತ್ತು ಶಿಸ್ತು ಟಾಲ್‌ಸ್ಟಾಯ್ ಕಥೆಗಳ ಅನುವಾದದಲ್ಲಿ ಅವರಿಗೆ ಒದಗಿಬಂದಿದೆ’.

ಕುಟುಂಬ ಜೀವಿಯಾದ ಜಿ.ಎನ್.ಆರ್ ತಾವು ತುಂಬ ಹಚ್ಚಿಕೊಂಡಿದ್ದ ತಮ್ಮ ಪತ್ನಿ ಸರಳ ಅವರ ನಿಧನದ ನಂತರ ಅವರ ಹೆಸರಿನಲ್ಲಿ ಟ್ರಸ್ಟ್ ಒಂದನ್ನು ಪ್ರಾರಂಭಿಸಿ, ಸಮರ್ಥ ಮಹಿಳಾ ಲೇಖಕಿಯರನ್ನು ಗುರುತಿಸಿ ಪ್ರಶಸ್ತಿ ನೀಡುವ ಮಹತ್ತರಕಾರ್ಯವನ್ನು ನಿರ್ವಹಿಸಿದ್ದನ್ನು ನಾವು ಸ್ಮರಿಸಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT