ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ

Last Updated 6 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಬೆಳಗಿನ ವಾಯುವಿಹಾರವನ್ನು ಅಂದು ಸ್ವಲ್ಪ ಬೇಗನೇ ಮುಗಿಸಿ ನಮ್ಮ ಮಾಮೂಲಿ ಬೈಠಕ್‌ ಜಾಗದಲ್ಲಿ ಕೆಲಕ್ಷಣ ಕುಳಿತು ಮನೆಕಡೆ ಹೋಗುವುದೆಂದು ನಿರ್ಧರಿಸಿ ಅಲ್ಲಿಗೆ ತೆರಳಿದೆ. ಸ್ವಲ್ಪ ಬೇಗ ಆದ್ದರಿಂದ ನಮ್ಮ ನಿತ್ಯ ವಾಕಿಂಗಿಗರು (ವಾಕಿಂಗ್‌ ಮಾಡುವವರು) ಇನ್ನೂ ಬಂದಿರಲಿಲ್ಲ. ಅಲ್ಲಿ ಇಬ್ಬರು ಕುಳಿತು ಮಾತನಾಡುತ್ತಿದ್ದರು. ಅವರ ಮಾತುಕತೆ ಹೀಗೆ ಸಾಗಿತ್ತು. ‘ಬಹಳ ದಿನದ ನಂತ್ರ ಒಂದು ವ್ಯಾಪಾರ ಕುದುರಿದೆ, ದೊಡ್ಡ ಡೀಲ್‌. ಎರಡೂ ಕಡೆ ಡೀಲ್‌ ಪಕ್ಕಾ ಆಗಿದೆ. ಅಡ್ವಾನ್ಸ್‌ ಕೂಡ ಮಾಡ್ಸಿ ಆಗಿದೆ. ಆಷಾಢ ಮುಗಿದ ತಕ್ಷಣ ರಿಜಿಸ್ಟ್ರಿ ಮಾಡಿಸಬೇಕು. ಬೇರೆ ಯಾರಿಗೂ ಕೈ ಹಾಕೋದಕ್ಕೆ ಅವಕಾಶವಿಲ್ಲ’ ಎಂದು ಒಬ್ಬರು ಸ್ವಲ್ಪ ಮೇಲು ದನಿಯಲ್ಲಿ ಹೇಳಿದಾಗ ಜೊತೆಯಲ್ಲಿ ಇದ್ದ ಇನ್ನೊಬ್ಬರು...‘ಸರಿ, ಬುಡು ನೀನು ಹಿಡಿದ್ರೆ ಸರಿಯಾಗಿಯೇ ಹಿಡೀತೀಯಾ, ಹೆಂಗೆ ಪರ್ಸಟೇಜೋ...? ಅಥವಾ ಡೈರೆಕ್ಟ್‌ ಡೀಲಾ..?’ ಎಂದು ಕೇಳಿದರು...‘ಅದೆಲ್ಲಾ ಆಮ್ಯಾಲೆ ನೋಡೋಣ.. ಈಗ ಆ ತಾಯಿ ಕಣ್ಣು ಬುಟ್ಟವಳೆ ರಿಜಿಸ್ಟ್ರಿ ಆದಕೂಡ್ಲೆ ಪೂಜೆ ಮಾಡ್ಸಿ ದೊಡ್ಡ ಕಾಣಿಕೆಯನ್ನ ಅರ್ಪಿಸಬೇಕು. ಸರಿ ಹೊತ್ತಾಯ್ತು ನಡಿ..’ ಎಂದು ಅವರು ಹೇಳಿದರು. ಇಬ್ಬರೂ ಅಲ್ಲಿಂದ ಹೊರಟರು.

ಅವರ ಮಾತನ್ನು ಆಲಿಸುತ್ತ ಕುಳಿತಿದ್ದ ನನಗೂ ಹೊತ್ತಾಯ್ತು ಎಂದು ಎನಿಸಿ ಇನ್ನೂ ಕುಳಿತರೆ ನಮ್ಮ ಮಾಮೂಲಿ ಸ್ನೇಹಿತರು ಬಂದು ಬಿಟ್ಟರೆ ಮತ್ತಷ್ಟು ತಡವಾಗಬಹುದೆಂದು ಅಲ್ಲಿಂದ ಸರಸರನೆ ಹೊರಟುಬಿಟ್ಟೆ. ಮನೆ ಕಡೆ ಹೆಜ್ಜೆ ಹಾಕುತ್ತಾ ಹಾಗೆ ಯೋಚಿಸಿದೆ. ನನಗೆ ಅವರ ಡೀಲ್, ಪರ್ಸಂಟೇಜ್‌, ವ್ಯಾಪಾರ, ಇತ್ಯಾದಿ ಬಗ್ಗೆ ಆಶ್ಚರ್ಯ, ಆಸಕ್ತಿ ಯಾವುದೂ ಆಗಲಿಲ್ಲ. ಏಕೆಂದರೆ ಈಗ ಸರ್ವೇಸಾಮಾನ್ಯವಾಗಿ ಎಲ್ಲಾ ಕಡೆ ನಿತ್ಯ ನಡೆಯುವಂಥಾದ್ದೆ. ಅದರಲ್ಲೂ ನಗರ ಪ್ರದೇಶಗಳಲ್ಲಂತೂ ಇದು ದೊಡ್ಡ ಉದ್ಯಮವಾಗಿಯೇ ಬೆಳೆದು ಅಸಂಖ್ಯ ಜನರು ಇದರಲ್ಲಿ ತೊಡಗಿಕೊಂಡಿದ್ದಾರೆ. ಇಲ್ಲಿ ವ್ಯಾಪಾರ–ಹಣಗಳಿಕೆ ಮಾತ್ರ ಮುಖ್ಯ ಉಳಿದದ್ದು ನಗಣ್ಯ. ಇರಲಿ ಸಂತೋಷ. ಅವರು ‘ಪೂಜೆ ಮಾಡ್ಸಿ ದೊಡ್ಡ ಕಾಣಿಕೆ ಅರ್ಪಿಸಬೇಕು’ ಎಂದ ಮಾತು ನನ್ನನ್ನು ಯೋಚಿಸುವಂತೆ ಮಾಡಿತು.

ಪೂಜೆ ಮಾಡುವುದಾಗಲಿ ಕಾಣಿಕೆ ಅರ್ಪಿಸುವುದಾಗಲಿ ಇವೆಲ್ಲ ನಮ್ಮ ದೈನಂದಿನ ಚಟುವಟಿಕೆಗಳ ಒಂದು ಅಂಗ. ‘ನಂಬಿದವರು ದೇವರೇ ಇಂಬು ಕೊಡೆಂದು’ ಪ್ರಾರ್ಥಿಸುತ್ತಾರೆ. ಅವರವರ ನಂಬಿಕೆ ಅನುಸಾರವಾಗಿ ದೇವರಿಗೆ ನಡೆ‌‌ದುಕೊಳ್ಳುತ್ತಾರೆ. ನಮ್ಮ ಆಧ್ಯಾತ್ಮ ಚಿಂತಕರು, ಸಾಧಕರು ‘ದೇವರಿಗೆ ಒಂದು ಹೂವಿನ ಎಸಳು ಅರ್ಪಿಸಿದರೂ ಸಾಕು. ದೇವರಿಗೆ ತೃಪ್ತಿಯಾಗುತ್ತದೆ. ಎಂದಿರುವ ಉದಾಹರಣೆಗಳಿವೆ, (ದೇವರೂ ಇದ್ದಾನೋ –ಇಲ್ಲವೋ ಎಂಬುದು ಅವರವರ ಚಿಂತನೆಗೆ ಬಿಟ್ಟ ವಿಚಾರ). ದೇವರಿಗೆ ಧನ, ಕನಕಾದಿ, ಅರ್ಪಿಸುವ ಅಬ್ಬರದ, ಆಡಂಬರದ ಪೂಜೆ, ಆಚರಣೆ ಅಗತ್ಯವಿಲ್ಲ ಎಂದು ಸರಳ ಭಕ್ತಿ ಮಾರ್ಗದ ಸಂತ–ಸಾಧಕರು ಸಾರಿದ್ದಾರೆ. ಆದರೆ ಇಲ್ಲಿ ದೇವರಿಗೆ ದೊಡ್ಡ ಕಾಣಿಕೆ ಎಂದರೇನು?, ಅದರ ಅಗತ್ಯವಿದೆಯೇ? ಎಂಬುದು ನನ್ನನ್ನು ಕಾಡಲಾರಂಭಿಸಿತು.

ನಂಬಿಕೆ ಮಾನವ ಮೂಲಭೂತ ಮಾನಸಿಕದ್ರವ್ಯ ಅದು ನಮ್ಮ ಬದುಕನ್ನು ಯಾವತ್ತೂ ಅನೂಚಾನವಾಗಿ ನಿಯಂತ್ರಿಸುತ್ತಾ ಬಂದಿದೆ. ನಾಗರಿಕತೆ ಬೆಳೆದಂತೆಲ್ಲಾ, ಜನಸಂಖ್ಯೆ ಜಾಸ್ತಿಯಾದಂತೆಲ್ಲ ಹಳ್ಳಿಗಳು ಪಟ್ಟಣಗಳಾಗಿ, ಪಟ್ಟಣಗಳು ನಗರಗಳಾಗಿ, ನಗರಗಳು ಮಹಾನಗರಗಳಾಗಿ ಬೆಳೆದಂತೆಲ್ಲ ಬದುಕು ವ್ಯಾಪಾರಿಕರಣಗೊಂಡ ಹಾಗೇನೆ ನಂಬಿಕೆಗಳು ವ್ಯಾಪಾರಿಕರಣದ ಸರಕಾಗಿ ಮಾರ್ಪಾಡಾಗಿವೆ. ಹಾಗಾಗಿ ಒಳ್ಳೆಯ ಕೆಲಸ ಹಾಗೂ ಬೇರೆಯವರಿಗೆ ಕೇಡು ಉಂಟುಮಾಡುವ ಕೆಲಸ ಮತ್ತು ಸ್ವಾರ್ಥ ಸಾಧನೆಗಾಗಿಯೂ ‘ದೇವರೇ ಇಂಬು ಕೊಡು’ ಎಂದು ಪ್ರಾರ್ಥಿಸುವ ಪರಿ ಪುರಾತನವಾದದ್ದು.

ಗ್ರಾಮೀಣ ಪ್ರದೇಶಗಳಲ್ಲಿ ನಮ್ಮ ಗ್ರಾಮೀಣಿಗರು ತಾವು ನಂಬಿದ ದೇವರು, ದೈವಗಳಿಗೆ ಶ್ರದ್ಧೆ ನಂಬಿಕೆಯಿಂದ ಪೂಜೆ, ಹರಕೆ, ಬಲಿ ಸಲ್ಲಿಸುತ್ತಾರೆ. ಇಲ್ಲಿ ಭಕ್ತಿ, ಪರಂಪರೆಯ ಹೆಸರಿನಲ್ಲಿ ವೈಜ್ಞಾನಿಕ ಜ್ಞಾನದ ಕೊರತೆಯ ಹಿನ್ನೆಲೆಯಲ್ಲಿ ಇಂಥ ಆಚರಣೆಗಳು ನಡೆಯುತ್ತಿದ್ದರೆ ನಗರ, ಮಹಾನಗರಗಳಲ್ಲಿ ಎಲ್ಲರೂ ಎಲ್ಲವನ್ನೂ ತಿಳಿದಿದ್ದರೂ ಅರಿವಿನ ಕೊರತೆ ಇಲ್ಲದಿದ್ದರೂ ನಂಬಿಕೆಗಳು ಮೇಲುಗೈ ಸಾಧಿಸಿವೆ. ಹಾಗೆಯೆ ಮಹಾನಗರಗಳಲ್ಲಿ ದೇವರುಗಳು ಅತ್ಯಂತ ಶ್ರೀಮಂತವಾಗುತ್ತಾ ಸಾಗಿವೆ. ‘ಜನ ಮರುಳೋ– ಜಾತ್ರೆ ಮರುಳೋ’ ಅನ್ನೋ ಸ್ಥಿತಿ ನಮ್ಮ ವಿದ್ಯಾವಂತರನ್ನೂ ಆವರಿಸಿದೆ ಎಂಬುದು ನನ್ನ ಅನಿಸಿಕೆ. ಎಲ್ಲಾದಕ್ಕಿಂತಲೂ ಹೆಚ್ಚಾಗಿ ನಮ್ಮ ವ್ಯಾಪಾರ ಹಾಗೂ ರಾಜಕೀಯ ಕ್ಷೇತ್ರಗಳಿಗೆ ಇನ್ನಿಲ್ಲದ ಪ್ರಾಧಾನ್ಯತೆ ಇದೆ.

ನಮ್ಮನ್ನಾಳುವ ಜನಪ್ರತಿನಿಧಿಗಳು ಬಹುವಾಗಿ ನಂಬಿಕೆಯ ದಾಸರಾಗಿ ಹೋಗಿದ್ದಾರೆ. (ಅದು ಮೂಢನಂಬಿಕೆಯಾಗಿದ್ದರೂ ಅದಕ್ಕೆ ನಂಬಿಕೆಯ ಆವರಣ) ವೈಯಕ್ತಿಕವಾಗಿ ನಂಬುವುದರ ಜೊತೆಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿಯೂ ಪೂಜೆ, ವಾಸ್ತು ಇತ್ಯಾದಿಗಳನ್ನು ನೆರವೇರಿಸುವುದು ಯಾವುದರ ಧ್ಯೋತಕ?’ ‘ಚುನಾವಣೆಗಳಲ್ಲಿ ಮತದಾರನೇ ದೇವರು’ ಎನ್ನುತ್ತಲೇ ಕೋಟ್ಯಂತರ ಹಣ ಖರ್ಚು ಮಾಡಿ ಗೆದ್ದು ಗದ್ದುಗೆ ಹಿಡಿದ ಮೇಲೆ ‘ಎಲ್ಲ ದೇವರ ಕೃಪೆ’ ಎನ್ನುತ್ತಾ ಲಕ್ಷ–ಲಕ್ಷ ಬೆಲೆ ಬಾಳುವ ಚಿನ್ನ, ಬೆಳ್ಳಿಯ ಕಿರೀಟ ಮಂಟಪಗಳನ್ನು ದೇವರಿಗೆ ಅರ್ಪಿಸುವ–ಅರ್ಪಿಸಿರುವ ಉದಾಹರಣೆಗಳು ಸಾಕಷ್ಟು ಇವೆ. ದೇವರಿಗೆ ಮೇಲೆ ಹೇಳಿದ ಹಾಗೇ ಹೂವಿನ ಒಂದು ಎಸಳು ಸಾಕು ಎನ್ನುವ ಮಾತು ‘ಪುರಾಣ ಹೇಳೋದಕ್ಕೆ – ಬದನೆಕಾಯಿ ತಿನ್ನೋದಕ್ಕೆ’ ಎನ್ನುವಂತಾಗಿದೆ. ಹಾಗಾಗಿ ದೇವರುಗಳು ಸಹ (ಪೂಜಾರಿಗಳು ಸೇರಿದಂತೆ) ಧನಕನಕಾಧಿಗಳಿಂದ, ಅಲಂಕಾರ ಭೂಷಿತರಾಗಿ, ನಿತ್ಯವೂ ಹೈಟೆಕ್ ದೇವರುಗಳಾಗುತ್ತಿದ್ದಾರೆ. ದೇವರು, ದೇವಸ್ಥಾನಗಳಿಗೆ ಅರ್ಪಿಸುವ ಹಣದಲ್ಲಿ ಒಂದಿಷ್ಟು ಹಣವನ್ನು ಸಮಾಜಕ್ಕಾಗಿ ವಿನಿಯೋಗಿಸಿದರೆ ಕೆಲ ಬಡವರಿಗೆ ಒಂದು ಹೊತ್ತಿನ ಊಟವಾದರೂ ಸಿಗಬಹುದು.

‘ಯಾರದ್ದೋ ದುಡ್ಡು ಎಲ್ಲಮನ ಜಾತ್ರೆ’ ಅನ್ನೋ ಹಾಗೆ ಸರ್ಕಾರವನ್ನು ವಂಚಿಸಿ ಬೆಲೆಯಲ್ಲಿ ಒಂದು ಪೈಸೆಯನ್ನೂ ಸಹ ಬಿಡದೆ ವ್ಯಾಪಾರ ಮಾಡುತ್ತ (ಎಲ್ಲರೂ ಹಾಗೆ ಇಲ್ಲದಿರಬಹುದು) ಹಣವನ್ನು ಪೇರಿಸಿ ಆಗಾಗ ದೇವರ ಹುಂಡಿಗೆ ಹಣ ಸುರಿದು ಕೃತಾರ್ಥರಾಗುವ ವ್ಯಾಪಾರಿಗಳಾಗಲೀ, ಲಂಚದ ಹಣದಲ್ಲಿ ಗುಡಿ ಕಟ್ಟಿಸಿ ಪಾರಾಯಣ ಮಾಡುತ್ತ ದೈವಭಕ್ತರೆನಿಸಿಕೊಳ್ಳುವ ಅಸಂಖ್ಯ ಮಂದಿಗೂ ಹಾಗೂ ಮೊನ್ನೆ ದಾರಿ ಬದಿಯಲ್ಲಿ ವಾಕಿಂಗ್‌ ವೇಳೆ ಡೀಲ್‌ ಬಗ್ಗೆ ಮಾತನಾಡುತ್ತಿದ್ದ ಆಗೊಮ್ಮೆ – ಈಗೊಮ್ಮೆ ದಲ್ಲಾಳಿಯ ರೂಪದಲ್ಲಿ ಪರ್ಸೆಂಟೇಜ್‌ ಪಡೆಯುವ ಆ ವ್ಯಕ್ತಿಗೂ ವ್ಯತ್ಯಾಸವಿಲ್ಲವೆಂದು ನನಗೆ ಅನ್ನಿಸುತ್ತದೆ ನೀವೇನಂತೀರಿ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT