ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳ ದನಿಗೂ ಅವಕಾಶವಿದ್ದರೆ...

Last Updated 28 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ವೈವಾಹಿಕ ಅತ್ಯಾಚಾರ ಅಪರಾಧವಾದರೆ ವಿವಾಹ ಸಂಬಂಧವೇ ಅಸ್ಥಿರವಾಗುತ್ತದೆ. ಪತಿಗೆ ಕಿರುಕುಳ ನೀಡಲು ವಿವಾಹಿತ ಮಹಿಳೆಯರಿಗೆ ಸುಲಭವಾದ ಅಸ್ತ್ರ ದೊರೆತಂತಾಗುತ್ತದೆ. ಹಾಗಾಗಿ, ವೈವಾಹಿಕ ಅತ್ಯಾಚಾರವನ್ನು ಅಪರಾಧವಾಗಿ ಪರಿಗಣಿಸಬಾರದು’ ಎಂದು ಕೇಂದ್ರ ಸರ್ಕಾರ ಕಳೆದ ವರ್ಷ ದೆಹಲಿ ಹೈಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಆಗ ಅದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು, ಈಗಲೂ ಆಗುತ್ತಲಿದೆ.

ವೈವಾಹಿಕ ಅತ್ಯಾಚಾರವೆಂದರೇನು?

ಪತ್ನಿಯ ಸಮ್ಮತಿಯಿಲ್ಲದೆಯೂ ಅವಳ ಇಚ್ಛೆಗೆ ವಿರುದ್ಧವಾಗಿ ಬಲಾತ್ಕಾರದಿಂದ ಲೈಂಗಿಕ ಸಂಪರ್ಕ ನಡೆಸುವುದು. ಅದಕ್ಕೆ ಪತ್ನಿಯ ಒಪ್ಪಿಗೆಯನ್ನು ಏಕೆ ಕೇಳುವುದು? ಗಂಡನಿಗೆ ಬಯಕೆಯಾದರೆ ಸಹಕರಿಸಬೇಕಾದುದು ಪತ್ನಿಯ ಧರ್ಮ ಎನ್ನುತ್ತದೆ ಭಾರತೀಯ ಸಂಪ್ರದಾಯ. ಅದು ಆ ಕಾಲ. ಈ ಕಾಲದಲ್ಲಿ ನನ್ನ ದೇಹದ ಮೇಲೆ ತನ್ನದೇ ಹಕ್ಕು. ನಾನು ಅವನಂತೆಯೇ ದುಡಿಯುತ್ತೇನೆ, ದಣಿಯುತ್ತೇನೆ, ನನಗೂ ಅನೇಕ ಒತ್ತಡಗಳಿರುತ್ತವೆ. ಕೆಲವು ಸಂದರ್ಭಗಳಲ್ಲಿ ನನಗೆ ಬೇಡ ಅನ್ನಿಸುತ್ತದೆ. ಅದನ್ನು ನಯವಾಗಿಯೇ ಅನುನಯಿಸಿ ಹೇಳುತ್ತೇನೆ. ಆದರೆ ಅವನು ಅದನ್ನು ಧಿಕ್ಕರಿಸಿ ತನ್ನ ದೇಹದ ಮೇಲೆ ಅತಿಕ್ರಮಣ ಮಾಡಿದರೆ ಅದು ಅತ್ಯಾಚಾರವಾಗುತ್ತದೆ. ಆ ಸಂದರ್ಭದಲ್ಲಿ ನನಗೆ ಕಾನೂನಿನ ರಕ್ಷಣೆ ಬೇಕಾಗುತ್ತದೆ. ಆದರೆ ಭಾರತೀಯ ದಂಡ ಸಂಹಿತೆಯಲ್ಲಿ ಅಂತಹದೊಂದು ಕಲಂ ಇಲ್ಲವಲ್ಲ ಎಂದು ಘಾಸಿಗೊಂಡ ಮಹಿಳೆ ಪ್ರಶ್ನಿಸುತ್ತಿದ್ದಾಳೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಮೇನಕಾ ಗಾಂಧಿಯೇ ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್ ಅಪರಾಧದ ಅಡಿಯಲ್ಲಿ ತರುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬೇರೆ ದೇಶಗಳಲ್ಲಿ ವೈವಾಹಿಕ ಅತ್ಯಾಚಾರದ ಬಗೆಗಿನ ನಿಲುವುಗಳನ್ನು ಅವಲೋಕಿಸಿದರೂ ಅದು ಕೂಡ ಅಷ್ಟೇನೂ ಆಶಾದಾಯಕವಾಗಿಲ್ಲ. ಹೆಣ್ಣು ಗಂಡಸಿನ ಖಾಸಗಿ ಆಸ್ತಿ, ಉಪಭೋಗದ ವಸ್ತು ಎಂಬ ಪುರುಷ ಮನಸ್ಥಿತಿ ಜಗತ್ತಿನ ಎಲ್ಲೆಡೆ ಇದೆ. ಆದರೂ 106 ದೇಶಗಳಲ್ಲಿ ವೈವಾಹಿಕ ಅತ್ಯಾಚಾರವೆಂಬುದು ಶಿಕ್ಷಾರ್ಹ ಅಪರಾಧ. ಇವುಗಳಲ್ಲಿ 32 ದೇಶಗಳಲ್ಲಿ ಇದು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿದೆ.

ಭಾರತೀಯ ಸಂಸ್ಕೃತಿಯಲ್ಲಿ ಮದುವೆಯೆಂಬುದು ಏಳೇಳು ಜನ್ಮಗಳ ಅನುಬಂಧ. ಇದರ ಮುಖ್ಯ ಉದ್ದೇಶ ಸಂತಾನವನ್ನು ಪಡೆಯುವುದೇ ಆಗಿತ್ತು. ಹಾಗಾಗಿ ಇಲ್ಲಿ ದಂಪತಿ ಮಿಲನಕ್ಕೂ ಒಂದು ಶುಭ ಮೂಹೂರ್ತವಿದೆ. ಮುಂದೆಯೂ ದಾಂಪತ್ಯನಿಷ್ಠೆ ಎಂಬುದು ಬಹುಮುಖ್ಯ. ಆದರೆ ಇದು ಪತ್ನಿಯಾದವಳಿಗೆ ಮಾತ್ರ. ಗಂಡನಾದವನು ಎಷ್ಟು ಮದುವೆಯನ್ನಾದರೂ ಮಾಡಿಕೊಳ್ಳಬಹುದು. ಎಷ್ಟು ಹೆಂಗಸರೊಡನೆಯಾದರೂ ಸಂಬಂಧ ಇಟ್ಟುಕೊಳ್ಳಬಹುದು ಆದರೆ ಹೆಂಡತಿ ಪತಿವ್ರತೆಯಾಗಿರಲೇಬೇಕು. ಸಪ್ತಪದಿ ತುಳಿಯುವಾಗ ಪರಸ್ಪರ ಸಮಾನತೆಯ, ಬದ್ಧತೆಯ ಏನೇ ಮಂತ್ರಪಠಣವಾಗಿರಲಿ ವಾಸ್ತವದಲ್ಲಿ ಪತ್ನಿಯಾದವಳು ಎಂದೂ ಗಂಡನ ಸಹವರ್ತಿನಿಯಲ್ಲ. ಮಹಿಳೆ ತನ್ನ ಅಸೌಖ್ಯದ, ದಣಿದ ದಿನಗಳಲ್ಲಿ ‘ಇಂದು ಬೇಡ’ ಎಂದು ಹೇಳಲು ಸಾಧ್ಯವಾದರೆ ಅದು ಅನುಕೂಲಕರ ದಾಂಪತ್ಯ.

ಗಂಡನಾದವನು ಸಂವೇದನಾಶೀಲನಾಗಿದ್ದರೆ ಅರ್ಥ ಮಾಡಿಕೊಳ್ಳುತ್ತಾನೆ. ಕೆಲವೊಮ್ಮೆ ಇಬ್ಬರಿಗೂ ಆಪ್ತ ಸಲಹೆ ಕೂಡ ಬೇಕಾಗಬಹುದು. ಆದರೆ ಎಷ್ಟು ಜನ ಗಂಡಂದಿರು ಕೌನ್ಸೆಲಿಂಗ್‌ಗೆ ಬರಲು ಒಪ್ಪುತ್ತಾರೆ? ದೈಹಿಕ ಹಿಂಸೆ ಅನುಭವಿಸುತ್ತಾ  ಒಳಗೊಳಗೆ ಬೇಯುತ್ತಿದ್ದ ಮಹಿಳೆ ಕೊನೆಗೊಮ್ಮೆ ಸಿಡಿದು ನಿಂತರೆ ಆಗ ಅವಳಿಗೆ ಕಾನೂನಿನ ನೆರವು ಬೇಕಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT