ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಪೃಶ್ಯ

ಕಥೆ
Last Updated 15 ಜೂನ್ 2013, 20:00 IST
ಅಕ್ಷರ ಗಾತ್ರ

ಇಂಥದ್ದೊಂದು ಪರಿಸ್ಥಿತಿ ಎದುರಾಗುತ್ತದೆ ಎಂದು ರಾಂಭಟ್ಟರು ನಿರೀಕ್ಷಿಸಿರಲಿಲ್ಲ; ಹಿಂದಿನಿಂದ ರೂಢಿಸಿಕೊಂಡು ಬಂದಿದ್ದ ಸಂಪ್ರದಾಯ, ಬೆಳೆಸಿಕೊಂಡು ಬಂದಿದ್ದ ಗೌರವ, ಮರ‌್ಯಾದೆಗಳಿಗೆ ಕುಂದುಂಟಾಗುವ ಘಟನೆ ನಡೆದಿತ್ತು. ಪ್ರಪಂಚದಲ್ಲಿ ಬ್ರಾಹ್ಮಣ ಜಾತಿಯೇ ಶ್ರೇಷ್ಠ ಎನ್ನುವ ಭಾವ ಪ್ರತಿಯೊಂದು ಮಾತು ವರ್ತನೆಗಳಲ್ಲಿ ಹೊರಹೊಮ್ಮುತ್ತಿದ್ದ ರಾಂಭಟ್ಟರ ಒಬ್ಬಳೇ ಮಗಳು ಅದ್ಯಾವುದೋ ಬೇರೆ ಜಾತಿಯ ಹುಡುಗನೊಬ್ಬನನ್ನು ಪ್ರೀತಿಸಿ ಮದುವೆಯಾಗುವುದಾಗಿ ಪಟ್ಟು ಹಿಡಿದು ಅವರ ಅಹಂಗೆ ಬಲವಾದ ಪೆಟ್ಟುಕೊಟ್ಟಿದ್ದಳು.

“ಬ್ರಾಹ್ಮಣ ಜಾತಿಯಲ್ಲಿ ಹುಟ್ಟಕ್ಕೆ ಪುಣ್ಯ ಮಾಡಿರಕ್ಕು, ನಮ್ಮ ಪೂರ‌್ವಜರು ಅದೆಷ್ಟು ಜನ್ಮಗಳಲ್ಲಿ ಮಾಡಿದ ಪುಣ್ಯದ ಫಲವೋ ಏನೋ, ಈ ಜನ್ಮದಲ್ಲಿ ನಾವು ಬ್ರಾಹ್ಮಣರಾಗಿ ಹುಟ್ಟಿದ್ಯ, ಅಂಥಾದ್ರಲ್ಲಿ ನೀನು ಈ ಜಾತಿಯ ಗೌರವ ಉಳಿಸೋ ಅಂಥ ಕೆಲಸ ಮಾಡದ್ ಬಿಟ್ಟು ಬೇರೆ ಜಾತಿಯವನನ್ನ ಕಟ್ಕ್ಯತ್ತಿ ಅಂಥ ಹೇಳ್ತ್ಯಲ್ಲ, ನಿನ್ನ ಬುದ್ಧಿಗಿಷ್ಟು! ನಾವು ಬ್ರಾಹ್ಮಣರು ದೇವ್ರಿಗೆ ತುಂಬಾ ಹತ್ರ ಆದೋರು, ಬ್ರಾಹ್ಮಣೋಸ್ಯ ಮುಖಮಾಸೀತ್ ಬಾಹೂ ರಾಜನ್ಯ ಕತಃ ಊರೂ ತದಸ್ಯ ಯದ್ವೈಶಃ ಪದ್ಭ್ಯಾಗ್ಂ ಶೂದ್ರೋ ಅಜಾಯತ್...

ಹಾಗಂತ ಯರ್ಜುವೇದದಲ್ಲೇ  ಹೇಳಿದ್ದು” ಎಂದು ಪುರುಷ ಸೂಕ್ತದ ಶ್ಲೋಕ ಪಠಿಸಿ ವಾದ ಮಾಡಿದರೂ ಬಿ.ಎ. ಓದಿ ಟೀವಿ ಚಾನೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಗಳು ಒಪ್ಪುವುದಕ್ಕೆ ತಯಾರಿರಲಿಲ್ಲ. “ಅವನು ತನಗಿಷ್ಟ ಆಯ್ದ, ಜಾತಿ ಯಾವುದಾದ್ರೇನು? ಪ್ರೀತಿ ಮುಖ್ಯ” ಅಂಥ ಭಾಷಣ ಬಿಗಿದಿದ್ದಳು.

“ಮಾಂಸ-ಮಡ್ಡಿ ತಿನ್ನೋರ್ ಜೊತೆ ಜೀವನ ಮಾಡದು ಅಂದ್ರೇನು? ಹಿಂದು ಮುಂದು ಗೊತ್ತಿಲ್ಲದ ಜನ, ಕುಡಿಯದು, ಸಿಗರೇಟು ಸೇದದು, ಇನ್ನೂ ಏನೇನ್ ಚಟಗಳಿರ‌್ತ ಯಾರಿಗ್ ಗೊತ್ತು? ಈಗ ಎಲ್ಲ ಚೊಲೋ ಅನ್ನುಸ್ತು, ಪ್ರೀತಿಯ ಹುಚ್ಚು ಹಿಂಗೆಲ್ಲ ಮಾತಾಡುಸ್ತು, ಆದ್ರೆ ಮುಂದೆ ಪಶ್ಚಾತ್ತಾಪ ಪಡಕ್ಕಾಗ್ತು ನೋಡು” ಎಂದು ಮಗಳ ಮನಸ್ಸನ್ನು ಬದಲಾಯಿಸಲು ರಾಂಭಟ್ಟರು ಶತಪ್ರಯತ್ನ ಮಾಡುತ್ತಿದ್ದರು. ಆದ್ರೆ ಮಗಳು ಹಿಡಿದ ಪಟ್ಟು ಸಡಿಲಿಸುವಂತೆ ಕಾಣುತ್ತಿರಲಿಲ್ಲ.

“ಬ್ರಾಹ್ಮಣರೇನು ಕುಡಿಯದೇ ಇಲ್ಯ್? ಇಸ್ಪೀಟ್ ಆಡದೇ ಇಲ್ಯ್? ಮೂಲೆಮನೆ ಪಂಕಜನ್ನ ಗಂಡ, ಜುಟ್ಟು-ಜನಿವಾರ ಇರೋಂವ ಅವಳನ್ನ ಎಷ್ಟು ಸುಖವಾಗಿ ಬಾಳಿಸ್ತಿದ್ದ ಅಂಥ ನಾನೂ ನೋಡಿದ್ದಿ, ಹಂಗೆ ಫ್ರೆಂಡ್ಸ್ ಜೊತೆ ಸೇರ್ಕ್ಯಂಡು ಜನಿವಾರ ತೆಗೆದಿಟ್ಟು ಮೂಳೆ ಜಗಿಯೋರನ್ನೂ ನೋಡಿದ್ದಿ, ನಿಂಗೆ ಹೊರಗಿನ ಜಗತ್ತೇ ಗೊತ್ತಿಲ್ಲೆ, ಈ ಹೂಗೊಪ್ಪಲೇ ದೊಡ್ ಪ್ರಪಂಚ ಅನ್ಕಂಯ್ದೆ, ಎಲ್ಲ ಜಾತೀಲೂ ಒಳ್ಳೆಯವರೂ ಇರ‌್ತ, ಕೆಟ್ಟವರೂ ಇರ‌್ತ, ನಾವ್ ನಾವ್ ಪಡ್ಕೊಂಡು ಬಂದಿದ್ದಷ್ಟೆ”, ಸರಳ ಸತ್ಯವನ್ನು ಹೇಳಿ ರಾಂಭಟ್ಟರ ವೇದಜ್ಞಾನಕ್ಕೇ ಸವಾಲೆಸೆದಿದ್ದಳು ಮಗಳು.

“ಆದ್ರೂ ನಮ್ ವಂಶ ಅಂದ್ರೇನು? ಊರಲ್ಲಿ ನಮಗೆಂಥಾ ಗೌರವ-ಮರ‌್ಯಾದೆ ಇದ್ದು, ಇಂಥವ್ರ ಮಗಳೇ ಹಿಂಗೆ ಅಂಥಾದ್ರೆ ನಾವ್ ತಲೆ ಎತ್ಕೊಂಡು ತಿರಗದು ಹ್ಯಾಂಗೆ?” ಕಡೇ ಅಸ್ತ್ರ ಪ್ರಯೋಗಿಸಿದ್ದರು ರಾಂಭಟ್ಟರು.

“ಆಡೋರು ಆಡ್ಕ್ಯತ್ತ, ಯಾರ‌್ಯಾರಿಗೋ ಹೆದ್ರಿ ನಾವ್ ಜೀವನ ಮಾಡಕ್ಕಾಗ್ತ? ಪ್ರತಿಷ್ಠೆಗೆ ಪ್ರೀತೀನ ಬಲಿ ಕೊಡಕ್ಕಾಗ್ತ? ನಾನು ಮದ್ವೆ ಅಂಥ ಆಗದಾದ್ರೆ ಅವನನ್ನೇ”- ಇನ್ನೇನೂ ಹೇಳುವುದಕ್ಕೆ, ಯೋಚಿಸುವುದಕ್ಕೆ ಅವಕಾಶವೇ ಇಲ್ಲ ಎಂಬಂತೆ ಮಗಳು ಮಾತು ಮುಗಿಸಿದ್ದಳು.
ಆ ರಾತ್ರಿ ಮಲಗಿದ ರಾಂಭಟ್ಟರಿಗೆ ನಿದ್ರೆ ಹತ್ತಲಿಲ್ಲ, ಬರೀ ಕೆಟ್ಟ ಯೋಚನೆಗಳು. “ಕೆಲಸಕ್ಕೆ ಕಳಿಸಿದ್ದೇ ತಪ್ಪಾತು, ಡಿಗ್ರಿ ಮುಗೀತಿದ್ದಂಗೆ ಹುಡುಗನ್ನ ಹುಡುಕಿ ಮದ್ವೆ ಮಾಡ್‌ಬಿಡಕ್ಕಾಗಿತ್ತು, ಅವಾಗ ಇಂಥ ಪರಿಸ್ಥಿತಿನೇ ಬತ್ತಿರ‌್ಲೆ”.

ಪಕ್ಕದಲ್ಲಿ ಮಲಗಿದ್ದ ಹೆಂಡತಿ ಹೇಳಿದರು, “ಆಗಿದ್ದಾತು, ಈಗ ಮುಂದೆ ಎಂಥುದು ಹೇಳಿ ಯೋಚ್ನೆ ಮಾಡಿ, ನಾವಾಗಿ ಮದ್ವೆ ಮಾಡಿಕೊಡದಿದ್ರೆ ಇಷ್ಟೆಲ್ಲ ಮಾತಾಡ್ದೋಳು ಇನ್ನೊಂದಿನ ಮದ್ವೆ ಮಾಡ್ಕ್ಯಂಡು ಮುಂದೆ ಬಂದ್ ನಿತ್ಕಳದಿಲ್ಲೆ ಅಂಥ ಏನ್ ಗ್ಯಾರಂಟಿ? ಅವಾಗ ಇನ್ನೂ ಅವಮಾನ, ಅದ್ರ ಬದಲು ನಾವಾಗೇ ಮದ್ವೆ ಮಾಡಿಕೊಡೋದು ವಾಸಿ, ಕೊನೆಗೂ ಮಗಳು ಚೆನಾಗಿದ್ರೆ ಆತು, ನಂಗಂತೂ ಇರೋ ಒಬ್ಳು ಮಗಳನ್ನ ಬಿಟ್ಟಿರಕ್ಕಾಗದಿಲ್ಲೆ”.

ಹೆಂಡತಿ ಸುಲೋಚನ ಒಳ್ಳೇದನ್ನೇ ಯೋಚಿಸಿ ಹೇಳಿದ್ದಳು. ರಾಂಭಟ್ಟರು ಅಸಹಾಯಕತೆಯಲ್ಲಿ ಸಿಲುಕಿ ಒದ್ದಾಡಿದ್ದರು. ಮುಂದೊಂದು ತಿಂಗಳಲ್ಲಿ ರಾಂಭಟ್ಟರ ಮನೆ ಮುಂದೆ ದೊಡ್ಡ ಚಪ್ಪರ ಎದ್ದು ನಿಂತಿತ್ತು; ಮಾವಿನ ತೋರಣ, ನಡುವೆ ಹೂಗೊಂಚಲುಗಳ ಅಲಂಕಾರ ಮದ್ವೆ ಮನೆಗೆ ಕಳೆ ತಂದಿತ್ತು. ಊರವರು, ನೆಂಟರು ಬಂದು ನೆರೆದಿದ್ದರು. ಸಡಗರ-ಸಂಭ್ರಮ; ಸುಲೋಚನ ಪೀತಾಂಬರ ಬಣ್ಣದ ದೊಡ್ಡಂಚಿನ ರೇಷ್ಮೆ ಸೀರೆ ಉಟ್ಟು ತುರುಬಿಗೆ ಮಲ್ಲಿಗೆ ಮೊಗ್ಗಿನ ಮಾಲೆ ಮುಡಿದು ಅವಸರದಲ್ಲಿ ಓಡಾಡುತ್ತಿದ್ದಳು.

ರಾಂಭಟ್ಟರು ಮಾತ್ರ ತುಟಿಯಂಚಿನಲ್ಲಿ ಬಲವಂತವಾಗಿ ನಗು ತುಳುಕಿಸಿಕೊಂಡು ಬಂದವರನ್ನು ಸ್ವಾಗತಿಸುತ್ತಿದ್ದರು. ಮದ್ವೆಯ ಶಾಸ್ತ್ರ-ಸಂಪ್ರದಾಯಗಳ ಭರಾಟೆಯಲ್ಲಿ ಮದುಮಗ ಕಕ್ಕಾಬಿಕ್ಕಿಯಾದಂತೆ ಕಾಣುತ್ತಿದ್ದ. ನಡುನಡುವೆ ಪುರೋಹಿತರು ಹಂಗಲ್ಲ ಹಿಂಗೆ ಎಂದು ತಿದ್ದುತ್ತಿದ್ದರು.

ಗಂಡಿನ ಕಡೆಯವರು ಮಾತನಾಡುವ ರೀತಿ, ಅವರ ನಡವಳಿಕೆಗಳನ್ನೆಲ್ಲ ನೋಡಿ ತಮ್ಮ ನೆಂಟರಿಷ್ಟರಿಗೆಲ್ಲ ಅವರು ನಮ್ಮೊರಲ್ಲ, ಇತರೆ ಜಾತಿಯವರು ಎನ್ನುವ ಅನುಮಾನ ಬಂದುಬಿಡುತ್ತದೋ ಎನ್ನುವ ಅಳುಕು; ನಾಲ್ಕು ಜನ ಗುಂಪುಗೂಡಿ ಮಾತಾಡುತ್ತಿದ್ದರೆ ಇದೇ ವಿಷಯ ಇರಬಹುದಾ? ಎನ್ನುವ ಚಡಪಡಿಕೆ ರಾಂಭಟ್ಟರಿಗೆ. ಬಂದ ನೆಂಟರೆಲ್ಲರ ಬಳಿ “ಬೀಗರು ಬ್ರಾಹ್ಮಣರೇ, ಆದ್ರೆ ಮಹಾರಾಷ್ಟ್ರ ಕಡೆಯೋರು, ಅಲ್ಲಿಂದ ತುಂಬ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದೋರು, ಅವ್ರ ಶಾಸ್ತ್ರ-ಪದ್ಧತಿಗಳು ನಮಗಿಂತ ಬೇರೆ” ಎಂದು ಅವರು ಕೇಳದಿದ್ದರೂ ಸಮಜಾಯಿಷಿ ಕೊಡುತ್ತಿದ್ದರು. 

ಅಂಥೂ ಮನಸ್ಸಿಲ್ಲದ ಮನಸ್ಸಿನಿಂದ ರಾಂಭಟ್ಟರ ಮಗಳ ಮದ್ವೆ ಮುಗಿದಿತ್ತು; ವರ ತಮ್ಮ ಪೈಕಿಯದ್ದೇ ಆಗಿದ್ದರೆ ಮರುದಿನದ ಗೃಹಪ್ರವೇಶಕ್ಕೆ ಬಸ್ ಮಾಡಿಸಿಕೊಂಡು ದೊಡ್ಡ ದಿಬ್ಬಣ ಕರೆದುಕೊಂಡು ಹೋಗಿ ತಮ್ಮ ನೆಂಟರಿಗೆಲ್ಲಾ ಬೀಗರ ಮನೆಯ ಪರಿಚಯ ಮಾಡಿಸಿ ಬೀಗುತ್ತಿದ್ದರು. ಆದರೆ ಈಗ ಅಂತಹ ಸನ್ನಿವೇಶ ಇಲ್ಲ. ಎಲ್ಲವೂ ಅವರ ಇಂಗಿತ ಮೀರಿ ನಡೆದಿದ್ದು. ಹಾಗಾಗಿ ಮನೆಯವರನ್ನು ಬಿಟ್ಟು ಹತ್ತಿರದ ನೆಂಟರಿಗೇ ದಿಬ್ಬಣಕ್ಕೆ ಆಹ್ವಾನವಿಲ್ಲ.

ಕೇಳಿದವರಿಗೆಲ್ಲ `ಬೆಂಗಳೂರಿನಿಂದ ತುಂಬಾ ದೂರ, ಅಷ್ಟು ದೊಡ್ಡದಾಗಿ ಬೇರೆ ಮಾಡುತ್ತಿಲ್ಲ' ಎಂದು ಏನೋ ಒಂದು ಸಬೂಬು ಹೇಳಿ ಖಾರದ ಕಾಳು ಸಿಹಿಕಾಳುಗಳ ಪೊಟ್ಟಣ ಕೊಟ್ಟು ಸಾಗಹಾಕಿದ್ದರು.

ಮಗಳ ಹಟಕ್ಕೆ ಸೋತು ಬೇರೆ ಜಾತಿಯವರೊಂದಿಗೆ ಸಂಬಂಧ ಬೆಳೆಸಿದ್ದ ರಾಂಭಟ್ಟರ ಮುಖದಲ್ಲಿ ಮದುವೆ ಮುಗಿಸಿದ ಸಂತೃಪ್ತಿ, ನಿರಾಳತೆ ಇರಲಿಲ್ಲ. ಏನನ್ನೋ ಕಳೆದುಕೊಂಡ ಭಾವ, ಮನಸ್ಸಿಗೆ ಕಿರಿಕಿರಿ. ಮಡಿ ಮೈಲಿಗೆ ಎಂದು ಹಾರಾಡುತ್ತಿದ್ದವರು ನಂತರದ ದಿನಗಳಲ್ಲಿ ಮಾತು ಕಡಿಮೆ ಮಾಡಿ ಮೆದುವಾಗಿದ್ದರು. ಪುತ್ರ ಸಂತಾನವಿಲ್ಲದ ತಮ್ಮನ್ನು ಕಡೇಗಾಲದಲ್ಲಿ ನೋಡಿಕೊಳ್ಳೋರ‌್ಯಾರು? ತಮ್ಮ ಕಾಲಾನಂತರ ಪಿಂಡ ಹಾಕಿ ವೈದಿಕ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋಗೋರ‌್ಯಾರು? ಅನ್ನೋ ಕೊರಗು ಕಾಡುತ್ತಿತ್ತೇನೋ? ಶಾಸ್ತ್ರ-ಆಚಾರ-ವಿಚಾರ ಎಂದು ಗಂಟೆಗಟ್ಟಲೆ ಕೊರೆಯುತ್ತಿದ್ದವರು ಇತ್ತೀಚೆಗೆ ಮೌನಕ್ಕೆ ಶರಣಾಗುತ್ತಿದ್ದರು.

ಮೊನ್ನೆ ವಿಶ್ವನಾಥ ಬಂದು ಡಿಗ್ರಿ ಓದುತ್ತಿದ್ದ ಚಿದಂಬರ ರಾಯರ ಮೊಮ್ಮಗಳು ಬಸ್ ಕಂಡಕ್ಟರ್ ಜೊತೆ ಓಡಿಹೋದ ಸುದ್ದಿ ಹೇಳಿದಾಗಿನಿಂದ ತಮ್ಮ ಮಗಳೇ ಎಷ್ಟೋ ವಾಸಿ ಅನ್ನಿಸಿತ್ತು. `ಈಗೊಂದ್ ತಿಂಗಳ ಹಿಂದೇನೇ ಮಗಳ ಓಡಾಟ-ಸುತ್ತಾಟದ ಗುಸುಗುಸು ಗೊತ್ತಾಗಿ ಕಾಲೇಜು ಬಿಡಿಸಿ ಮನೇಲೇ ಇರಿಸಿಕೊಂಡಿದ್ವಡ, ಆದ್ರೂ ಮನೆಯವ್ರ ಕಣ್ಣಿಗೆ ಮಣ್ಣೆರಚಿ ಮಗಳು ಪರಾರಿ! ಆ ಪದ್ಮಾವತಿಗೆ ಸರೀ ಆತು, ಇನ್ನೊಬ್ರ ಮನೆ ಸುದ್ದಿಗೆ ಕಾಲು ಬಾಲ ಸೇರ‌್ಸಿ ಹೇಳ್ಕೊಂಡು ತಿರುಗಿದಂಗಲ್ಲ, ಈಗ ಅದ್ಯಾವ ಮುಖ ಹೊತ್ಕೊಂಡು ಮಾತಾಡಕ್ಕೆ ಬತ್ತು ನಾನು ನೋಡ್ತಿ' ಎಂದರು ಸುಲೋಚನ. ತಾನಾಗೇ ಯಾರಿಗೂ ಕೇಡು ಬಯಸುವಷ್ಟು ಕೆಟ್ಟವಳಲ್ಲ ಸುಲೋಚನ; ಆದ್ರೆ ತನ್ನ ಸುದ್ದಿಗೆ ಬಂದವರಿಗೆ, ತನಗಾಗದವರಿಗೆ ಕೆಟ್ಟುದಾದ್ರೆ ಖುಷಿಪಡದಿರುವಷ್ಟು ಒಳ್ಳೆಯವಳೂ ಅಲ್ಲ! ರಾಂಭಟ್ಟರು ಒಳಗೊಳಗೇ ಯೋಚಿಸಿ ನಕ್ಕಿದ್ದರು.
                                                                       
                                                                             ***
ಮನಸ್ಸಿನಲ್ಲಿ ಬೇಸರ ಮಡುಗಟ್ಟಿದ್ದರೂ ಮೊದಲ ದೀಪಾವಳಿಗೆ ಮಗಳು ಅಳಿಯ ಮನೆಗೆ ಬಂದಾಗ ರಾಂಭಟ್ಟರು ಉಪಚಾರದಲ್ಲೇನೂ ಕಡಿಮೆ ಮಾಡಲಿಲ್ಲ. ತಾವೇ ಪೇಟೆಗೆ ಹೋಗಿ ಸೀರೆ, ಶರ್ಟ್ ಪೀಸ್, ಪ್ಯಾಂಟ್‌ಪೀಸ್‌ಗಳನ್ನು ತಂದಿದ್ದರು. ಹಿಂದೆಯೇ ಇದ್ದು ಅಳಿಯನ ಬೇಕುಬೇಡಗಳನ್ನು ವಿಚಾರಿಸಿಕೊಳ್ಳುತ್ತಿದ್ದರು. ನಡುನಡುವೆ ತಮ್ಮ ಮನೆಯ, ತಮ್ಮೂರಿನ ರೀತಿ-ರಿವಾಜುಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದ ಅಳಿಯ ಮಂಜಿನ ಕಾನು, ಹೆಂಚಿನ ಮನೆ, ಎದುರಿಗಿರುವ ಅಡಿಕೆ ತೋಟದ ಆಹ್ಲಾದಕರ ಪರಿಸರದ ತಂಪನ್ನು ಅನುಭವಿಸುತ್ತಿದ್ದ.

ಇದುವರೆಗೂ ತಿಂದಿರದ ಮಲೆನಾಡಿನ ವಿಶಿಷ್ಟ ತಿಂಡಿಗಳ ಸವಿಯನ್ನು ಗಟ್ಟಿಮೊಸರು ತುಪ್ಪದೊಂದಿಗೆ ಆಸ್ವಾದಿಸುತ್ತಿದ್ದ. ಅಳಿಯನಿಗಾಗಿ ಸುಲೋಚನ ಮಾಮೂಲಿಯಾಗಿ ಯಾವಾಗಲೂ ಹಬ್ಬಕ್ಕೆ ಮಾಡುವ ಹೂರಣದ ಹೋಳಿಗೆಯ ಜೊತೆಗೆ ವಿಶೇಷ ತಿಂಡಿಯಾದ `ತೊಡೆದವ್ವ'ನನ್ನೂ ಮಾಡಿಸಿದ್ದಳು. ಗರಿಗರಿಯಾಗಿ ಮುಟ್ಟಿದರೆ ಪುಡಿ ಪುಡಿಯಾಗುವ ಹೊಸ ರುಚಿ ಅಳಿಯನಿಗೆ ಇಷ್ಟವಾಗಿ ಒಂದೆರಡು ಜಾಸ್ತಿಯೇ ತಿಂದಿದ್ದ. ಹೊಸ ಜಾಗ, ಹೊಸ ಸಂಬಂಧ, ಸಂಕೋಚ ಮಾಡಿಕೊಂಡಾನೆಂದು ಸುಲೋಚನ ಕೂಡಾ ಸ್ವಲ್ಪ ಅತಿಯಾಗಿಯೇ ಒತ್ತಾಯ ಮಾಡಿ ಬಡಿಸುತ್ತಿದ್ದರು.

ದೀಪಾವಳಿ ಹಬ್ಬದ ಬೆಳಿಗ್ಗೆ ರಾಂಭಟ್ಟರು ಅಳಿಯನಿಗೆ ಎಣ್ಣೆ ಹಚ್ಚುವುದಕ್ಕೆಂದೇ ಶೂದ್ರ ಮಂಜನನ್ನು ಕರೆಸಿದ್ದರು. ಆತ ಇಡೀ ಮೈಗೆ ಎಣ್ಣೆ ಹಚ್ಚಿ ಉಜ್ಜುತ್ತಾ ತಲೆಯಲ್ಲಿ ಕೈಯಾಡಿಸಿ ಹಿತವಾಗಿ ತಿಕ್ಕುತ್ತಿದ್ದರೆ ಆ ಸುಖ ಅನುಭವಿಸುವುದಕ್ಕಿಂತಲೂ ಬರೀ ಮೈಯಲ್ಲಿ ಕುಳಿತುಕೊಂಡಿದ್ದಕ್ಕಾಗಿ ಅಳಿಯನಿಗೆ ನಾಚಿಕೆಯಾಗುತ್ತಿತ್ತು. ಒಮ್ಮೆ ಮುಗಿದಿದ್ದೇ ಕೊತಕೊತ ಕುದಿಯುತ್ತಿದ್ದ ಹಂಡೆಯ ಬಿಸಿನೀರಿನಲ್ಲಿ ಹದವಾದ ಸ್ನಾನವಾಯಿತು.

ಅಳಿಯಂದ್ರು ಸ್ನಾನ ಮುಗಿಸಿಕೊಂಡು ಬರುವ ಹೊತ್ತಿಗೆ ಗೋಪೂಜೆಗೆ ಎಲ್ಲ ತಯಾರಾಗಿತ್ತು; ಬಿಳಿಯ ದನಕ್ಕೆ ಬಣ್ಣ ಬಣ್ಣದ ಚುಕ್ಕೆ ಇಟ್ಟು ಚೆಂಡು ಹೂವಿನ ಮಾಲೆ ಹಾಕಿ ಸಿಂಗರಿಸಿದ್ದರು. ಅದರ ಕೋಡಿಗೆ ಹೊಳೆಯುವ ಟೇಪು ಅಂಟಿಸಿ ಉಲ್ಲನ್ನಿನ ಕುಚ್ಚು ಇಳಿಬಿಟ್ಟಿದ್ದರು, ಕೊರಳಿಗೆ ಘಲ್‌ಘಲ್ ಎನ್ನುವ ಗಗ್ಗರ ಕಟ್ಟಿದ್ದರು. “ಗೋವು ಅಂದ್ರೆ ನಮ್ಮ ಧರ್ಮದಲ್ಲಿ ದೇವತೆ ಇದ್ದಂತೆ. ದಿನಾ ಹಾಲು ಕೊಟ್ಟು ಸಲಹೋ ಗೋಮಾತೆಯನ್ನು ದೀಪಾವಳಿ ಹಬ್ಬದಲ್ಲಿ ಪೂಜಿಸಿ ಕೈ ಮುಗೀತೀವಿ” ಎಂದು ರಾಂಭಟ್ಟರು ಗೋವಿನ ಮಹತ್ವದ ಬಗ್ಗೆ ಹೇಳುತ್ತಿದ್ದಾಗ ದನದ ಮಾಂಸವನ್ನು ಎಷ್ಟೋ ಬಾರಿ ಚಪ್ಪರಿಸಿಕೊಂಡು ತಿಂದಿದ್ದ ಅಳಿಯನಿಗೆ ಒಳಗೊಳಗೇ ತಳಮಳವಾಗಿತ್ತು.

`ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕತಾನಿಚ, ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಂ ಪದೇ ಪದೇ' ಎನ್ನುವ ಮಂತ್ರಘೋಷದೊಂದಿಗೆ, ಎಲ್ಲರೂ ಹೂ ಅಕ್ಷತೆ ಹಾಕಿ ಕೈ ಮುಗಿಯುತ್ತಿದ್ದರೆ ಅಳಿಯನಿಗೆ ಇಡೀ ಪರಿಸರಕ್ಕೆ, ಪಾತ್ರಗಳಿಗೆ ತಾನೊಬ್ಬನೇ ಅಸ್ಪೃಶ್ಯನಂತೆ ಭಾಸವಾಯಿತು.

ಪೂಜೆಯ ನಂತರ ರಾಂಭಟ್ಟರು ಅಳಿಯನಿಗೆ ಬಿಳಿ ಪಂಚೆ ಉಡಿಸಿ, ಹೊದೆಯಲು ಬಂಗಾರದಂಚಿನ ಶಲ್ಯ ಕೊಟ್ಟು ದೇವಸ್ಥಾನಕ್ಕೆ ಕರೆದುಕೊಂಡು ಹೊರಟರು. “ದೇವಸ್ಥಾನ ಸಮೀಪದ ವೃತ್ತದಲ್ಲಿ ಬಾಸಿಂಗ ಕಟ್ಟಿ ಸಿಂಗರಿಸಿದ ಎತ್ತುಗಳ ಮೆರವಣಿಗೆ ಬರತ್ತೆ, ನೋಡೋದಕ್ಕೆ ಎರಡು ಕಣ್ಣು ಸಾಲದು, ಅಷ್ಟು ಚೆನ್ನಾಗಿರತ್ತೆ, ನಂತರ ಅಲ್ಲಿ ಪೂಜೆ ಮಾಡಿಸಿಕೊಂಡು ಬಂದು ಮನೇಲಿರೋ ಪಿಠಾರಿ, ಗುದ್ದಲಿ ಪಿಕಾಸಿ ಮುಂತಾದ ಆಯುಧಗಳಿಗೆಲ್ಲ ಪೂಜೆ ಮಾಡಬೇಕು, ಅದಾದ ನಂತರವೇ ಹೋಳಿಗೆಯೂಟ” ಎಂದು ವಿವರಿಸುತ್ತಿದ್ದರು.

ಇವರು ಅಲ್ಲಿಗೆ ಬರುವ ಹೊತ್ತಿಗಾಗಲೇ ದೇವಸ್ಥಾನದ ವೃತ್ತದ ಬಳಿ ಹಣ್ಣು-ಕಾಯಿ ಬುಟ್ಟಿಯೊಡನೆ ಊರಿನ ಜನರೆಲ್ಲ ಜಮಾಯಿಸಿದ್ದರು. ಇವರು ಹೋಗುತ್ತಲೇ ಊರವರು ಅಳಿಯನ ಬಳಿ ಬಂದು ಕುಶಲೋಪರಿ ವಿಚಾರಿಸಿ ಅವನ ಊರು, ತಂದೆಯ ಹೆಸರು, ಉದ್ಯೋಗದ ಬಗ್ಗೆ ಕೇಳುತ್ತಿದ್ದರೆ ಬಹುಪಾಲು ಪ್ರಶ್ನೆಗಳಿಗೆ ರಾಂಭಟ್ಟರೇ ಅಳಿಯನ ಪರವಾಗಿ ಉತ್ತರಿಸಿಬಿಟ್ಟರು. ಆಗಲೇ ಅಳಿಯನಿಗೆ ತನ್ನ ಮಾವ ತನ್ನ ಬಗೆಗಿನ ಎಷ್ಟೋ ವಿಷಯಗಳನ್ನು ಊರವರಿಂದ, ನೆಂಟರಿಂದ ಮುಚ್ಚಿಟ್ಟಿದ್ದಾರೆಂಬುದು ಅರಿವಿಗೆ ಬಂದು ಮುಜುಗರವಾಯಿತು.

ಪೂಜೆ ಮುಗಿಸಿ ಮನೆಗೆ ಬಂದು ಗಡದ್ದಾಗಿ ಊಟವೂ ಆಯಿತು. ಮಹಡಿಯಲ್ಲಿ ಮಲಗಿದ್ದ ಅಳಿಯನಿಗೆ ಹೊಟ್ಟೆ ಬಿರಿಯುವಂತೆ ಉಂಡಿದ್ದರೂ ನಿದ್ರೆ ಹತ್ತಲಿಲ್ಲ, ಎಂಥದ್ದೋ ಇರಿಸುಮುರಿಸು. ಕಪ್ಪನೆ ಮಿರಿಮಿರಿ ಮಿಂಚುತ್ತಿದ್ದ ಮರದ ತೊಲೆಗಳನ್ನು ನೋಡುತ್ತಾ ಮಲಗಿದ್ದ. ಸ್ವಲ್ಪ ಹೊತ್ತಿನ ನಂತರ ಎದ್ದು ಕೆಳಗೆ ಬಂದರೆ ದನಕರುಗಳನ್ನು ಮೇಯಿಸಲು ಕರೆದುಕೊಂಡು ಹೋಗಿದ್ದ ಪಕೀರ ಅವುಗಳನ್ನು ಹೊಡೆದುಕೊಂಡು ಬಂದು ಕೊಟ್ಟಿಗೆಗೆ ಕಟ್ಟುತ್ತಿದ್ದ.

ಒಂದು ದನ ಮಾತ್ರ ಅವನ ಮಾತು ಕೇಳದೆ ಪೆಂಗನಂತೆ ಅತ್ತಿತ್ತ ನೆಗೆಯುತ್ತಿತ್ತು. ಒಂದು ಕೈಯಲ್ಲಿ ಅಡಿಕೆಗೊನೆ ಸಿಂಗಾರಗಳನ್ನು ಹಿಡಿದುಕೊಂಡಿದ್ದ ಪಕೀರ ಕೊನೆಗೂ ಅದನ್ನು ಹಿಡಿದು ಹರಸಾಹಸದಿಂದ ಎಳೆದುಕೊಂಡು ಬರುತ್ತಿದ್ದನಾದರೂ ಅದರ ಆರ್ಭಟಕ್ಕೆ ಅವನ ಬಲ ಸಾಕಾಗುತ್ತಿರಲಿಲ್ಲ. ದಣಪೆ ಬಳಿ ನಿಂತು ನೋಡುತ್ತಿದ್ದ ಅಳಿಯ ಅವನ ಬಳಿ ಹೋಗಿ ಇನ್ನೇನು ಹಗ್ಗಕ್ಕೆ ಕೈ ಹಾಕಿ ಸಹಾಯ ಮಾಡಬೇಕೆನ್ನುವಷ್ಟರಲ್ಲಿ, “ಅಳಿಯಂದ್ರೇ ನಿಲ್ಲಿ, ಅವನನ್ನ ನೀವು ಹಂಗೆಲ್ಲ ಮುಟ್ಟಿಸಿಕೊಳ್ಳೋ ಹಾಗಿಲ್ಲ. ಅವನು ಕೆಳಜಾತಿಗೆ ಸೇರ‌್ದೋನು” ಎಂದು ರಾಂಭಟ್ಟರು ಕೂಗಿದರು.

ಮಾವನ ಮಾತು ಕೇಳಿದ್ದೇ ತಡ ದಂಗಾಗಿ ನಿಂತುಬಿಟ್ಟ ಅಳಿಯ ಒಂದು ಕ್ಷಣ ಬೆಚ್ಚಿದ. `ಅವನು ಕೆಳಜಾತಿಗೆ ಸೇರ‌್ದೋನು' ಎನ್ನುವ ಅವರ ಮಾತು ಹಾಗೇ ಕಿವಿಯಲ್ಲಿ ಗುಂಯ್ಗುಡುತ್ತಿರುವಾಗ ಹತ್ತಿರ ಬಂದ ರಾಂಭಟ್ಟರು ಹೆಗಲ ಮೇಲೆ ಕೈ ಇಟ್ಟು, ತುಂಬ ಶಾಂತವಾಗಿ, “ಗಾಬರಿಯಾಗ್ಬೇಡಿ, ಅವನು ಅಸ್ಪೃಶ್ಯ” ಅಂದರು. ಅರ್ಥವಾಗದೆ ಅಳಿಯ ಪಿಳಿಪಿಳಿ ಕಣ್ ಬಿಟ್ಟಿದ್ದನ್ನು ಗಮನಿಸಿ ಉಗುಳುನುಂಗಿ “ಅಂದ್ರೆ... ಎಸ್.ಸಿ.ಗಳು ಅಂಥಾರಲ್ಲ ಅವ್ರ, ಆ ಜಾತಿಗೆ ಸೇರಿದವರನ್ನ ನಾವೆಲ್ಲ ಮುಟ್ಟಿಸಿಕೊಳ್ಳೋ ಹಾಗಿಲ್ಲ, ಮೈಲಿಗೆಯಾಗತ್ತೆ” ಎಂದು ಮುಂದುವರೆಸಿದರು.

ಮಾವನ ಮಾತು ಕೇಳುತ್ತಾ ನಡೆಯುತ್ತಿದ್ದ, ಸ್ವತಃ ಅದೇ ಜಾತಿಗೆ ಸೇರಿದ ಅಳಿಯನ ಕಾಲುಗಳಲ್ಲಿ ಶಕ್ತಿಯೇ ಉಡುಗಿಹೋದಂತಾಗಿ, ಮೈ ಮನಸ್ಸುಗಳನ್ನು ಇಡಿಯಾಗಿ ಅದೇನೋ ನೋವು ಆವರಿಸಿದಂತಾಗಿತ್ತು. ಅವಮಾನವಾದಂತೆ ಮುಖ ಕಪ್ಪಿಟ್ಟು, ಹೆಗಲ ಮೇಲಿದ್ದ ಕೈಯನ್ನು ಬಿಸಾಕಿ `ನಾನೂ ಅಸ್ಪೃಶ್ಯ, ನಾನೂ ಅದೇ ಜಾತಿಗೆ ಸೇರ‌್ದವನು, ನನ್ನನ್ಯಾಕೆ ಮುಟ್ಟಿಸಿಕೊಳ್ತೀರಾ' ಎಂದು ಕೂಗಿ ಕೂಗಿ ಹೇಳಬೇಕೆನಿಸುವಷ್ಟು ಸಿಟ್ಟು ಕೊತಕೊತನೆ ಕುದಿಯುತ್ತಿತ್ತು, ಆದರೆ ಗಂಟಲಿನಿಂದ ಧ್ವನಿ ಹೊರಹೊಮ್ಮಲೇ ಇಲ್ಲ. ಎಲ್ಲ ಕನಸಿನಲ್ಲಿ ನಡೆಯುತ್ತಿರುವಂತೆ, ಕೆಟ್ಟ ಕನಸು ಬಿದ್ದಂತೆ ಮೈ ಬೆವತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT