ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡುವೆ, ಹಾಡುವೆನಯ್ಯಾ

Last Updated 11 ಮೇ 2013, 20:00 IST
ಅಕ್ಷರ ಗಾತ್ರ

ಶರಣ ಚಳವಳಿಯ ಅಪೂರ್ವ ಘಟನೆಗಳ ಗುಚ್ಛ ಹನ್ನೆರಡನೇ ಶತಮಾನ. ಸಮಾಜದ ಜೊತೆ ಜೊತೆಗೆ ಧರ್ಮದ ಕಣ್ಣು ತೆರೆದುಕೊಂಡ ಕಾಲವದು. ಆಂದೋಲನ ಅಂದಿನ ಸಾಂಸ್ಕೃತಿಕ ವಲಯವನ್ನೂ ಒಳಗೊಂಡು ಬೆಳೆದದ್ದು ವಿಶೇಷ. ಬಸವಾದಿ ಪ್ರಮಥರು ಪಾಲ್ಗೊಂಡಿದ್ದ ಚಳವಳಿಯಲ್ಲಿ ಹಲವು ಸಂಗೀತಗಾರರೂ ಇದ್ದರು. ಸಕಲೇಶ ಮಾದರಸ, ಅಲ್ಲಮಪ್ರಭು, ಕಿನ್ನರಿ ಬೊಮ್ಮಯ್ಯ, ಢಕ್ಕೆಯ ಮಾರಯ್ಯ ಹೀಗೆ ಆ ಕಾಲದ ವಚನ ಸಂಗೀತಕಾರರ ಪಟ್ಟಿ ಬೆಳೆಯುತ್ತದೆ.

ಬಸವಣ್ಣ ಕೂಡ ಸಂಗೀತಗಾರರಾಗಿದ್ದರು ಎಂಬುದು ಅನೇಕರಿಗೆ ಗೊತ್ತಿಲ್ಲ. ತಾವೊಬ್ಬ ಸಂಗೀತಗಾರ ಎಂದು ಅವರೂ ಹೇಳಿಕೊಂಡಿಲ್ಲ. ಆದರೆ ಅವರ ಸಮಕಾಲೀನರು ರಚಿಸಿದ ವಚನಗಳಲ್ಲಿ ಈ ಬಗ್ಗೆ ಉಲ್ಲೇಖವಿದೆ.

ಬಸವಣ್ಣ ಸಂಗೀತ ಬಲ್ಲವರಾಗಿದ್ದರು ಎಂಬುದನ್ನು ಹರಿಹರ ಸೊಗಸಾಗಿ ವರ್ಣಿಸುತ್ತಾನೆ. ತನ್ನ ಬಸವರಾಜ ದೇವರ ರಗಳೆಯಲ್ಲಿ `ನೆನೆನೆನೆದು ಪುಳಕಿಸುತೆ ಗೀತವಂ ಪಾಡುತಂ' ಎಂದು ಬಸವಣ್ಣನವರು ಹಾಡಿನ ಮೂಲಕ ಶಿವಪೂಜೆ ಮಾಡುತ್ತಿದ್ದುದಾಗಿ ವರ್ಣಿಸಿದ್ದಾನೆ. ಆಗ ಅವರು ಅನೇಕ ರಾಗಗಳನ್ನು ಹಾಡುತ್ತಿದ್ದರೆಂದು ವಿವರಿಸಿದ್ದಾನೆ.

ಆ ರಗಳೆಯ ಕೆಲವು ಸಾಲುಗಳನ್ನು ಗಮನಿಸಿ: `...ಲಲಿತ ಬಂಗಾಳದಿಂದೊಲಿದು ನಿಮ್ಮಂ ಹಾಡಿ, ದೇಶಿ ಗುಜ್ಜರಿಗಳಿಂದೀಶ ನಿಮ್ಮಂ ಹಾಡಿ, ದೇಶಾಕ್ಷಿಗೌಳದೆ ಮಹೇಶ ನಿಮ್ಮಂ ಹಾಡಿ, ಬತ್ತೀಸ ರಾಗದಿಂ ಕೂರ್ತು ನಿಮ್ಮಂ ಹಾಡಿ...'. ಇಲ್ಲಿ ಲಲಿತ, ಬಂಗಾಳ, ದೇಶಿ ಮೊದಲಾದ ರಾಗಗಳು ಇಂದಿಗೂ ಕರ್ನಾಟಕಿ ಸಂಗೀತದಲ್ಲಿ ಬಳಕೆಯಲ್ಲಿವೆ. ಪಾಲ್ಕುರಿಕೆ ಸೋಮನಾಥನು ಬಸವಣ್ಣನವರನ್ನು `ಕವಿ ಪಂಡಿತ ಗಾಯಕ ಚಕ್ರವರ್ತಿ' ಎಂದಿದ್ದಾನೆ. ಅವರು ಗಾಯನವನ್ನೂ ಪ್ರೀತಿಸುತ್ತಿದ್ದರು ಎಂಬುದಕ್ಕೆ ಅನೇಕ ವಚನಗಳಲ್ಲಿ ಬರುವ `ಹಾಡುವೆ' ಎಂಬ ಪದ ಬಳಸಿರುವುದು ಸಾಕ್ಷಿ. ಆದ್ದರಿಂದ `ಪಂಡಿತ' ಎಂಬ ಉಪಾಧಿ ಅವರ ಸಂಗೀತಜ್ಞಾನಕ್ಕೂ ಅನ್ವಯ. ಬಸವಣ್ಣನವರ ಹಲವು ವಚನಗಳೇ ಅವರೊಳಗೊಬ್ಬ ನಾದಲೋಲ ಇದ್ದನೆಂಬುದರ ಪ್ರತೀಕ.

ನಾಲಗೆ ದಣಿಯದು...
`ಕಿಂಚಿತ್ ಗೀತವೊಂದು ಅನಂತಕೋಟಿ ಜಪಕ್ಕೆ ಸಮಾನ' ಎಂಬ ವಚನದ ಸಾಲು ಸಂಗೀತ ಸೃಜಿಸುವ ಆನಂದದ ಪ್ರತಿಪಾದಕ. ಭಕ್ತಿಯ ಅಭಿವ್ಯಕ್ತಿಗೆ ಶ್ರೇಷ್ಠ ಮಾಧ್ಯಮ ಸಂಗೀತ ಎಂಬುದು ಬಸವಣ್ಣನವರ ಅರಿವಿಗೆ ನಿಲುಕಿದ ಸತ್ಯ. `ಹಾಡಿ ನಾಲಗೆ ದಣಿಯದು' ಎಂದು ಹೇಳುವ ಉದ್ದೇಶವೂ ಅದೇ. `ರಾಗ ರಂಜನೆಯ ಉತುಪತಿ ಸ್ಥಿತಿಲಯ ನಿನಗೆಂದಾದುವು. ರಾಗರಂಜನೆಯ ಪೂಜೆ ಎನ್ನ ಮನ' ಎನ್ನುವಲ್ಲಿ ಸಂಗೀತದ ಮೂಲಕ ಶಿವಪೂಜೆ ಸಾಧ್ಯ ಎಂಬ ಭಾವವಿದೆ. `ಆನಂದದಿಂದ ಆಡುವೆ ಹಾಡುವೆನಯ್ಯಾ... ಎನ್ನ ಮನವೊಲಿದು ಭಕ್ತಿಯ ಮಾಡುವೆ' ಎಂದು ಕೂಡಲಸಂಗಮನಲ್ಲಿ ಅನುರಕ್ತರಾಗುತ್ತಾರೆ.

ಕೆಲವು ವಚನಗಳಲ್ಲಿ ಬಸವಣ್ಣನವರು ಸಂಗೀತಶಾಸ್ತ್ರವನ್ನು ಬಹು ಸೂಕ್ಷ್ಮವಾಗಿ ಉಲ್ಲೇಖಿಸುತ್ತಾರೆ. `ತಾಳ ಮಾನ ಸರಸವನರಿಯೆ' ಎಂಬ ಸಾಲು ಸಂಗೀತಶಾಸ್ತ್ರದ ದೃಷ್ಟಿಯಿಂದ ಮಹತ್ವದ್ದು. ತಾಳಕ್ಕೆ ತಕ್ಕಂತೆ ಹಾಡುವ ಮತ್ತು ಅದರಲ್ಲಿ ಲಯ ಚಮತ್ಕಾರ ತೋರುವ ಹಾಡುಗಾರಿಕೆಯನ್ನು ಈ ವಚನ ವಿವರಿಸುತ್ತದೆ. ಇದು ಒಬ್ಬ ಪ್ರಬುದ್ಧ ಸಂಗೀತಗಾರನಿಗಷ್ಟೆ ಸಾಧ್ಯವಾಗುವ ಶೈಲಿ. ಕರ್ನಾಟಕಿ ಮತ್ತು ಹಿಂದುಸ್ತಾನಿ ಸಂಗೀತಗಳೆರಡರಲ್ಲಿಯೂ ಲಯದೊಂದಿಗೆ ಸರಸವಾಡುತ್ತ ಹಾಡಿಗೆ ರಂಗು ತುಂಬುವವರು ಈಗಲೂ ವಿರಳ. ಅಂಥ ವಿರಳ ಸಂಗೀತವನ್ನು `ನಾನರಿಯೆ' ಎನ್ನುವಲ್ಲಿ ಅವರಿಗಿರುವ ಸಂಗೀತ ಜ್ಞಾನ ಅಭಿವ್ಯಕ್ತಗೊಳ್ಳುತ್ತದೆ. `ಓಜೆ ಬಜಾವಣೆಯ ಲೆಕ್ಕವನರಿಯೆ' ಎಂಬುದು ಇದೇ ವಚನದ ಇನ್ನೊಂದು ಸಾಲು.

ದೇಗುಲಗಳಲ್ಲಿ ನುಡಿಸುವ ಮಂಗಳವಾದ್ಯಗಳನ್ನು ಸೂಕ್ಷ್ಮವಾಗಿ ಕೇಳಿದರೆ, ವಾದ್ಯಗಳ ಬಜಾವಣೆ (ನುಡಿಸುವಿಕೆ) ಎಷ್ಟೊಂದು ಕಾಲಬದ್ಧ ಎಂಬುದರ ಅರಿವಾಗುತ್ತದೆ. ಕಾಲಖಂಡದಲ್ಲಿ ಮಾತ್ರೆಗಳನ್ನು ವಿಂಗಡಿಸಿಕೊಂಡು ವಾದ್ಯಗಳನ್ನು ನುಡಿಸುವುದು ವಾದ್ಯಕಾರನ ಲೆಕ್ಕಾಚಾರ ಮತ್ತು ಜಾಣ್ಮೆಯನ್ನು ಅವಲಂಬಿಸಿರುತ್ತದೆ. ಈ ಕ್ರಿಯೆಯನ್ನೇ ಬಸವಣ್ಣನವರು ತಮ್ಮ ವಚನದಲ್ಲಿ ದಾಖಲಿಸುತ್ತಾರೆ.

ಒಂದು ವಚನದಲ್ಲಿ ಬಸವಣ್ಣನವರು ಅರವತ್ನಾಲ್ಕು ವಿದ್ಯೆಗಳನ್ನು ಪಟ್ಟಿ ಮಾಡುತ್ತಾರೆ. ಈ ವಚನದಲ್ಲಿಯ ಗಾಂಧರ್ವವಿದ್ಯೆ, ವೀಣಾವಿದ್ಯೆ ಮತ್ತು ಭರತವಿದ್ಯೆಗಳು ಸಂಗೀತಕ್ಕೆ ಸಂಬಂಧಿಸಿದವು. `ಚೌಷಷ್ಟಿ ವಿದ್ಯೆಗಳನ್ನು ಕಲಿತವನೆಂದೆನಿಸಕೊಳ್ಳುವನಲ್ಲದೆ ಲಿಂಗಭಕ್ತನೆನಿಸಿಕೊಳ್ಳುವುದಿಲ್ಲ' ಎಂಬ ಸಾಲು ಸಂಗೀತದ ಮಹತ್ವವನ್ನು ಸಾರುತ್ತದೆ. ಅಷ್ಟೇ ಅಲ್ಲ ಅವರು `ಆನು ಒಲಿದಂತೆ ಹಾಡುವೆನಯ್ಯ' ಎನ್ನುತ್ತ ನಾದದ, ಸಾಹಿತ್ಯದ, ಜೊತೆಗೆ ಲೌಕಿಕದ ಕಟ್ಟುಗಳನ್ನು ಮೀರಿದವರು. 

ಕಾಯವ ದಂಡಿಗೆಯ ಮಾಡಯ್ಯ
ಬಸವಣ್ಣನವರ ವಚನಗಳಲ್ಲಿ ಅನೇಕ ವಾದ್ಯಗಳ ಬಿಂಬವಿದೆ. ಇವುಗಳಿಂದ ಆ ಕಾಲದ ವಾದ್ಯಗಳು ಮತ್ತು ಅವುಗಳ ಬಳಕೆ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುತ್ತದೆ. `ಟೀವಕ ಟಿಂಬಕವನಾಡಿಸುತ್ತಿದ್ದಿತಯ್ಯ' ಎಂಬ ವಚನದ `ಟೀವಕ' ವಾದ್ಯವು ಇಂದಿನ `ಏಕತಾರಿ'. ಏಕತಂತ್ರಿ ವೀಣಾ ಎಂಬುದರ ಅಪಭ್ರಂಶ ರೂಪವೇ `ಏಕತಾರಿ'. ಏಕತಾರಿ `ಟಿಂವ್ ಟಿಂವ್' ಎಂದು ನಾದಹೊರಡಿಸುವ ಕಾರಣವಾಗಿ `ಟೀವ್ವಕ್ಕಿ' ಎಂದೂ ಹಳ್ಳಿಗರು ಕರೆಯುವುದುಂಟು. (ಟೀವಕ್ಕಿ ಎಂಬುದು ಪಕ್ಷಿಯ ಹೆಸರೂ ಹೌದು.) `ಆಡಿದಡೇನು' ಹಾಡಿದಡೇನು.....ಆಡದೇ ನವಿಲು ಹಾಡದೇ ತಂತಿ' ಎಂಬುದನ್ನು ಇಲ್ಲಿ ಗಮನಿಸಬೇಕು.

ಹನ್ನೆರಡನೆಯ ಶತಮಾನದ ವೀಣೆಯಂಥ ತಂತುವಾದ್ಯದ ಚಿತ್ರಣ ಇಲ್ಲಿದೆ. ಕರ್ನಾಟಕಿ ಸಂಗೀತದ ಅನೇಕ ಕೃತಿಗಳಿಗೆ ಈಗಲೂ ವೀಣೆ ಆಧಾರ. ಅಲ್ಲದೆ ಆ ಕಾಲದಲ್ಲಿ ವೀಣೆಯೊಂದಿಗೆ ಸಹಗಾಯನ ಮಾಡುತ್ತಿದ್ದುದನ್ನೂ ಇದು ದಾಖಲಿಸುತ್ತದೆ.

`ಎನ್ನ ಕಾಯವ ದಂಡಿಗೆಯ ಮಾಡಯ್ಯ' ಎಂಬ ವಚನದ ಸಾಲಿನಲ್ಲಿ ಒಂದು ವಾದ್ಯದ ಸ್ಪಷ್ಟರೂಪ ವ್ಯಕ್ತವಾಗುತ್ತದೆ.
ಮನುಷ್ಯನ ದೇಹವನ್ನು ವಾದ್ಯದೊಂದಿಗೆ ಸಮೀಕರಿಸಿ, ಇಡೀ ದೇಹವನ್ನೇ ಸಂಗೀತಮಯಗೊಳಿಸುವ ಅಪರೂಪದ ರೂಪಕ ಇದು. ತಮ್ಮ ದೇಹದ ಪ್ರತಿಯೊಂದು ಅಂಗವೂ ಸಂಗೀತದ ವಾದ್ಯವೊಂದರ ಭಾಗವಾಗುವ ಮತ್ತು ಆ ಮೂಲಕ ನಾದಮಯವಾಗುವ ಆಶಯವನ್ನು ಬಸವಣ್ಣ ಅಭಿವ್ಯಕ್ತಿಸಿದ್ದಾರೆ

 ಕಾಯ ದಂಡಿಗೆಯಾಗಿ, ಶಿರವು ಸೋರೆಯಾಗಿ, ನರಗಳು ತಂತಿಯಾಗಿ, ಬೆರಳುಗಳು ಕಡ್ಡಿಯಾಗಿ ಮಾರ್ಪಟ್ಟ ಆ ತಂತುವಾದ್ಯವನ್ನು (ಬಹುಶಃ ವೀಣೆ) ಉರದಲೊತ್ತಿ ಬಾರಿಸುವಂತೆ ಕೂಡಲಸಂಗಮನಲ್ಲಿ ಪ್ರಾರ್ಥಿಸುತ್ತಾರೆ. ಶಿವನು ಪಾರ್ವತಿಯ ಅಂಗಸೌಷ್ಟವವನ್ನು ಆಧರಿಸಿ ವೀಣೆಯನ್ನು ರೂಪಿಸಿದನಂತೆ! ಬಸವಣ್ಣನವರ ದಂಡಿಗೆ  `ಶರಣಸತಿ-ಲಿಂಗ ಪತಿ'ಯ ಧ್ಯೋತಕ. ದೇಹವನ್ನು ವೀಣೆಗೆ ಸಮೀಕರಿಸಿಕೊಳ್ಳುವ ವಿಚಾರ ಹದಿಮೂರನೇ ಶತಮಾನದ ಸಂಗೀತಶಾಸ್ತ್ರಕಾರ ಶಾಂರ್ಙ್ಗದೇವನ ಸಂಗೀತ `ರತ್ನಾಕರ'ದಲ್ಲಿಯೂ ವ್ಯಕ್ತವಾಗಿದೆ. ಪ್ರಾಚೀನಕಾಲದಲ್ಲಿ ವೀಣೆಯನ್ನು ಕಡ್ಡಿಗಳ ಸಹಾಯದಿಂದ ನುಡಿಸುವುದು ರೂಢಿಯಲ್ಲಿತ್ತು. ಮಹಿಳೆಯೊಬ್ಬಳು ವೀಣೆಯನ್ನು ಕಡ್ಡಿಯಿಂದ ನುಡಿಸುತ್ತಿರುವ ಮೂರ್ತಿಯೊಂದು ಸಾಂಚಿಯಲ್ಲಿದೆ.

ಈ ವಚನದಲ್ಲಿ ಬರುವ `ಬತ್ತೀಸ ರಾಗಗಳ' ಉಲ್ಲೇಖವೂ ಸಂಗೀತ ಶಾಸ್ತ್ರದ ದೃಷ್ಟಿಯಿಂದ ಮುಖ್ಯ. ಬತ್ತೀಸ (ಮೂವತ್ತೆರಡು) ರಾಗಗಳು ಬಹುಶಃ ಭಾರತೀಯ ಸಂಗೀತದ ಮೂಲ ರಾಗಗಳು. ನಾರದನು ತನ್ನ ಸಂಗೀತ ಮಕರಂದದಲ್ಲಿ (8ನೆಯ ಶತಮಾನ) ರಾಗಗಳಲ್ಲಿ ಎರಡು ವಿಭಾಗಗಳನ್ನಾಗಿ ಮಾಡಿ ಮೊದಲಭಾಗದಲ್ಲಿ ಎಂಟು ಮುಖ್ಯ ರಾಗಗಳನ್ನೂ ಇಪ್ಪತ್ನಾಲ್ಕು ಚಿಕ್ಕರಾಗಗಳನ್ನೂ ಗುರುತಿಸಿದ್ದಾನೆ. ಇವು ಒಟ್ಟು ಮೂವತ್ತೆರಡು ರಾಗಗಳು.

ಎರಡನೆಯ ಭಾಗದಲ್ಲಿ ಈತ ಒಟ್ಟು ನಲವತ್ತೆರಡು ರಾಗಗಳನ್ನು ಉಲ್ಲೇಖಿಸುತ್ತಾನೆ. ಮೊದಲಭಾಗದ ಮೂವತ್ತೆರಡು ರಾಗಗಳೇ ಸಂಗೀತದ ಪ್ರಾಚೀನತಮ ರಾಗಗಳಾಗಿರಬಹುದು. ಹನ್ನೆರಡನೇ ಶತಮಾನದಲ್ಲಿ ಮೊದಲ ಭಾಗದ ಈ ಮೂವತ್ತೆರಡು ರಾಗಗಳಿಗೆ ಪ್ರಾಮುಖ್ಯತೆ ಇದ್ದಿರಬಹುದು. ಇವುಗಳನ್ನೇ ಬಸವಣ್ಣನವರು `ಬತ್ತೀಸ' ರಾಗಗಳೆಂದು ಹೇಳಿರಬಹುದು.

ನಾದಪ್ರಿಯ ಶಿವನಲ್ಲ
ಹಾಡಿಗಿಂತಲೂ ಭಕ್ತಿಯೇ ಮುಖ್ಯವಾಗಿದ್ದರೂ ಬಸವಣ್ಣ ಸಂಗೀತವನ್ನು ಬಿಟ್ಟುಕೊಡಲಿಲ್ಲ. `ಆಡುತ್ತ ಹಾಡುತ್ತ ಭಕ್ತಿಯ ಮಾಡಬಹುದು ಲಿಂಗಕ್ಕೆ' ಎನ್ನುವುದು ಭಕ್ತಿಯ ಅಭಿವ್ಯಕ್ತಿಗೆ ಸಂಗೀತ ಸಾಧನವಾಗಿತ್ತು ಎಂಬುನ್ನು ನೆನಪಿಸುತ್ತದೆ. `ಅರಿವನ್ನಕ್ಕರ ಹಾಡಿ ಹೊಗಳುವೆ'  ಎನ್ನುವಾಗಲೂ `ಹಾಡಿದೊಡೆ ಎನ್ನೊಡೆಯನ ಹಾಡುವೆ' ಎನ್ನುವಾಗಲೂ ಇದೇ ಭಾವ ಹೊಮ್ಮುತ್ತದೆ.   

ಇಷ್ಟಾದರೂ ಬಸವಣ್ಣನವರಿಗೆ ರಾಗಗಳ ಬಂಧನವಿರಲಿಲ್ಲ. ಧರ್ಮದ ಚೌಕಟ್ಟನ್ನು ದಾಟಿದಂತೆ ಸಂಗೀತಶಾಸ್ತ್ರದ ಚೌಕಟ್ಟನ್ನೂ ಅವರು ಮೀರಿದ್ದರು. ಗೀತವಾಗದೆಯೂ ಭಕ್ತಿ ತಲುಪಬಲ್ಲದು ಎಂಬ ದೃಷ್ಟಿ ಅವರದಾಗಿತ್ತು. `ಗೀತ ಬಲ್ಲಾತ ಜಾಣನಲ್ಲ, ಮಾತ ಬಲ್ಲಾತ ಜಾಣನಲ್ಲ' ವಚನವನ್ನು ಗಮನಿಸಿ. ಗೀತ ಬಲ್ಲಾತ ಎಂದರೆ ಸಂಗೀತ ಬಲ್ಲವನು ಎಂದರ್ಥ.

ಇಲ್ಲಿನ `ಗೀತ' ಎಂಬ ಶಬ್ದ ಪ್ರಯೋಗ ಸಂಗೀತದ ದೃಷ್ಟಿಯಿಂದ ಮುಖ್ಯ. ಇದಕ್ಕೆ ಪೂರಕವಾಗಿ ಬಸವಣ್ಣನವರ `ಗೀತವ ಹಾಡಿದೊಡೇನು' ಎಂಬುದನ್ನೂ  ಗಮನಿಸಬಹುದು. ಈ ಎಲ್ಲ ಪ್ರಯೋಗಗಳು `ಗೀತ' ಎಂಬುದು ಹಾಡುವ ಪ್ರಕಾರ ಎನ್ನುತ್ತವೆ. `ಗೀತೆ' ಎಂಬ ಗಾಯನ ಪ್ರಕಾರವನ್ನು ಮತಂಗನು (ಕ್ರಿ.ಶ. 5ನೇ ಶತಮಾನ) ತನ್ನ `ಬೃಹದ್ದೇಶಿ' ಎಂಬ ಗ್ರಂಥದಲ್ಲಿ ವಿವರಿಸಿರುವುದನ್ನು ಅನೇಕ ವಿದ್ವಾಂಸರು ಉಲ್ಲೇಖಿಸುತ್ತಾರೆ.

ಬಸವಣ್ಣನವರ `ಲೌಕಿಕರ ಕಂಡು ಆಡುವೆ ಹಾಡುವೆ, ತಾರ್ಕಿಕರ ಕಂಡು ಆಡುವೆ ಹಾಡುವೆ' ಎಂದಿದ್ದಾರೆ. ಅಲ್ಲದೆ `ನಾದಪ್ರಿಯ ಶಿವನಲ್ಲ' `ನಾದವ ನುಡಿಸಿದ ರಾವಳಂಗೆ ಅರೆ ಆಯುಷ್ಯವಾಯಿತ್ತು' ಎಂಬ ಸಾಲುಗಳ ಮೂಲಕ `ಹಾಡುವಿಕೆ'ಗಿಂತ ಭಕ್ತಿಯೇ ಮುಖ್ಯ ಎಂದಿದ್ದಾರೆ.

ಬಸವಣ್ಣನವರು ಸಂಗೀತವನ್ನು ಅನಾಹತನಾದದ ದರ್ಶನಕ್ಕಾಗಿ ಬಳಸುತ್ತಾರೆಯೇ ವಿನಾ ಲೌಕಿಕವಿಚಾರಕ್ಕಾಗಿ ಅಲ್ಲ. ಅನಾಹತ ನಾದದ ಆಂತರ್ಯವನ್ನು `ಮುಟ್ಟುವ ತೆರನರಿಯದನ್ನಕ್ಕ' (ಅದೇ ವಚನ) ಎಂದು ಪ್ರಶ್ನಿಸಿಕೊಳ್ಳುತ್ತಲೇ ತಮ್ಮ ಸಾಧನೆಯ ಪಥದಲ್ಲಿ ಮುಂದಡಿಯಿಡುತ್ತಾರೆ. ಕಿವಿಯೊಳಗಿನ ಕಿವಿಯಿಂದ ಅನಾಹತ ನಾದದ ಆನಂದ ಪಡೆಯಲು ತವಕಿಸುತ್ತಾರೆ. ಅನಾಹತ ನಾದವನ್ನು ಅಂತರಂಗದಲ್ಲಿ ಆವಿಷ್ಕರಿಸಿಕೊಳ್ಳಲು `ಅರಿವನ್ನಕ್ಕರ ಹಾಡಿದೆ' ಎಂದು ಹಂಬಲಿಸುತ್ತಾರೆ. ಆ ಅನಾಹತ ನಾದವೇ ಕೂಡಲಸಂಗಮದೇವ!

ಹಾಡಾಗಿ ವಚನ...
ವಚನಗಳನ್ನು ಹಾಡಲಾಗದು ಎನ್ನುವುದು ಬಹುಕಾಲದವರೆಗೆ ನಾದಲೋಕದ ನಂಬುಗೆಯಾಗಿತ್ತು. ಇದಕ್ಕೆ ಕೊನೆ ಹಾಡಿದ್ದು ಸಾಹಿತಿ ಅ.ನ. ಕೃಷ್ಣರಾಯರು. ಪಂಡಿತ್ ಮಲ್ಲಿಕಾರ್ಜುನ ಮನ್ಸೂರರನ್ನು ಪ್ರೇರೇಪಿಸಿ ಅವರು ವಚನಗಳನ್ನು ಹಾಡುವಂತೆ ಮಾಡಿದರು. ಅದಕ್ಕೂ ಮೊದಲು ಪಂಚಾಕ್ಷರಿ ಗವಾಯಿಗಳು ವಚನಗಳನ್ನು ಹಾಡುತ್ತಿದ್ದರು. ಹನ್ನೆರಡನೆಯ ಶತಮಾನದಲ್ಲಿ ವಚನಗಳನ್ನು ಹಾಡುತ್ತಿದ್ದರೆಂಬುದಕ್ಕೆ ಆಧಾರಗಳಿವೆ.

ವಚನ, ಸ್ವರವಚನ, ಸ್ವರಪದ, ಪದಂಗಳ ಗೀತ ಇವೆಲ್ಲವೂ ಹಾಡು ಎಂಬುದಕ್ಕೆ ಪರ್ಯಾಯ ಪದಗಳು. ವಚನಕಾರರು ಬಹುಶಃ ವಚನಮಾಧ್ಯಮವನ್ನು ಸಂಗೀತ ಪ್ರಸ್ತುತಿಗೆ ಬಳಸಿ ಕೊಂಡವರಲ್ಲ. ಅದಕ್ಕಾಗಿ ಅವರು ಸ್ವರವಚನಗಳನ್ನು ಅವಲಂಬಿಸಿದ್ದರು. ವಚನಗಳ ಉದ್ದೇಶ ಆಧ್ಯಾತ್ಮಿಕ ನೆಲೆಯದಾಗಿತ್ತು. ಶರಣರು ಭಾವನೆಗಳನ್ನು ಕಲಾತ್ಮಕಗೊಳಿಸಲು ಹೊರಟವರಲ್ಲ, ಬದುಕನ್ನು ಕಲಾತ್ಮಕಗೊಳಿಸಲು ಹೊರಟ ಸಂತರು. ಹೀಗೆ ಬದುಕನ್ನು ಕಲಾತ್ಮಕಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಸಂಗೀತವನ್ನು ಭಕ್ತಿಯ ಅಭಿವ್ಯಕ್ತಿಗೆ ಆಯ್ದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT