ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದಯವಾಗಲಿ ಹೀಗೆ ನಮ್ಮ ಚೆಲುವ ಕನ್ನಡ ನಾಡು

Last Updated 27 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಈ ಗ್ರಾಮ ಪಂಚಾಯಿತಿಯ ಹತ್ತಾರು ಹಳ್ಳಿಗಳ ಜನ ಅಪಘಾತವಾಗಿಯೋ ಅಥವಾ ಯಾವುದೋ ಶಸ್ತ್ರಚಿಕಿತ್ಸೆಗೆ ಒಳಗಾಗಿಯೋ ಡಾಕ್ಟರು ಸೂಚಿಸಿದ ರಕ್ತಕ್ಕಾಗಿ ಅಲೆಯಬೇಕಾಗಿಲ್ಲ. ಅವರು ಗ್ರಾಮ ಪಂಚಾಯತಿಗೆ ಒಂದು ಫೋನ್ ಮಾಡಿದರೆ ಸಾಕು.

ಅಲ್ಲಿ ರಕ್ತದಾನ ಮಾಡಲು ಸಿದ್ಧರಾಗಿರುವ 380 ಜನರಲ್ಲಿ ಯಾರಾದರೊಬ್ಬರು ಬಂದು ರಕ್ತ ನೀಡುತ್ತಾರೆ. ಈ 380 ಜನರಲ್ಲಿ ಯಾರು ಯಾವ ರಕ್ತದ ಗುಂಪಿಗೆ ಸೇರಿದ್ದಾರೆ, ಅವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿಗಳ ಮಾಹಿತಿಗಳಿರುವ ಪಟ್ಟಿಯನ್ನು ಗ್ರಾಮ ಪಂಚಾಯತಿಯ ಮುಂದೆಯೇ ಪ್ರಕಟಿಸಲಾಗಿದೆ.

ಬೇರೆಲ್ಲ ಕಡೆ ಬಹುಪಾಲು ವರ್ಷಕ್ಕೆ ಎರಡು ಗ್ರಾಮಸಭೆಗಳು ತರಾತುರಿಯಲ್ಲಿ ಮತ್ತು ಹೆಸರಿಗೆ ಮಾತ್ರ ನಡೆದರೆ ಇಲ್ಲಿನ ಗ್ರಾಮಪಂಚಾಯತಿಯ ವ್ಯಾಪ್ತಿಯ ಮೂಲೆ ಮೂಲೆಯ ಹಳ್ಳಿಗಳಲ್ಲಿ ವರ್ಷಕ್ಕೆ 16 ಗ್ರಾಮಸಭೆಗಳು ನಡೆಯುತ್ತವೆ.

ವರ್ಷಕ್ಕೆ 2 ಗ್ರಾಮಸಭೆಗಳು ನಡೆಯುವಾಗ ಗ್ರಾಮಸ್ಥರಿಂದ ವರ್ಷಕ್ಕೆ 15-20 ಲಕ್ಷದ ಕಾಮಗಾರಿಗಳಿಗೆ ಮನವಿ ಬರುತ್ತಿದ್ದರೆ, ಇಲ್ಲಿನ ಎಲ್ಲಾ ಹಳ್ಳಿಗಳಲ್ಲಿ ಗ್ರಾಮಸಭೆ ನಡೆದು ಎಲ್ಲ ಜನರೂ ಗ್ರಾಮಸಭೆಯಲ್ಲಿ ಭಾಗವಹಿಸುವುದರಿಂದ ಒಂದು ಕೋಟಿಗೂ ಹೆಚ್ಚು ಮೌಲ್ಯದ ಕಾಮಗಾರಿಗಳಿಗೆ ಮನವಿ ಬರುತ್ತದೆ ಮತ್ತು ಈ ಮನವಿಗಳು ಕಾರ್ಯರೂಪಕ್ಕೆ ಬರುತ್ತವೆ.

ಕೇವಲ 200ರಷ್ಟಿದ್ದ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ  ಕೆಲಸ ಬಯಸಿ ಬರುತ್ತಿದ್ದ ಕಾರ್ಮಿಕರ ಸಂಖ್ಯೆ ಈಗ 680ಕ್ಕೆ ಏರಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೈತರ ಹಳ್ಳದ ದಂಡೆ, ತೋಟಗಳಲ್ಲಿ ಕಾಲುವೆಗಳ ದಂಡೆ, ಗದ್ದೆಗಳ ಅಂಚು ಇವುಗಳನ್ನೆಲ್ಲ ಭದ್ರಪಡಿಸಿದ್ದರಿಂದ ಹೆಚ್ಚು ಮಳೆ ಬಂದು ಆಗುವ ಹಾನಿ ಸಂಬಂಧ ಪರಿಹಾರ ಕೇಳಿ, ಇಡೀ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರಿಂದ ಅರ್ಜಿಗಳೇ ಬರುವುದು ನಿಂತಿದೆ.
 
ಈ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲಸಿನಹಳ್ಳಿ ಕೆರೆಯನ್ನು ಉದ್ಯೋಗಖಾತ್ರಿ ಯೋಜನೆಯಲ್ಲಿ ಅಣಿಗೊಳಿಸಲಾಗಿದ್ದು, ವಿದ್ಯುತ್ ಅಗತ್ಯವಿಲ್ಲದೆ ಸರಳ ಗ್ರ್ಯಾವಿಟಿ ಪವರ್ ತಂತ್ರಜ್ಞಾನದಿಂದ ರೈತರ 25 ಎಕರೆ ಅಡಿಕೆ ತೋಟಗಳಿಗೆ ವರ್ಷಪೂರ್ತಿ ನೀರು ಒದಗಿಸಲಾಗುತ್ತಿದೆ.

ಇದಕ್ಕೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾರ್ಮಿಕರಿಗೆ ನೀಡಿದ ಕೂಲಿಯ ಮೊತ್ತ 3 ಲಕ್ಷ ರೂಪಾಯಿಗಳಾದರೆ, ಈಗ ತಮ್ಮ ಈ ತೋಟಗಳಿಂದ ರೈತರಿಗೆ ಪ್ರತಿವರ್ಷ ದೊರಕುತ್ತಿರುವ ಆದಾಯ ಸರಿಸುಮಾರು 20-25 ಲಕ್ಷ ರೂಪಾಯಿಗಳು. ತಾಲ್ಲೂಕು ಕೇಂದ್ರಕ್ಕೆ ಹೊಂದಿಕೊಂಡಂತೆ ನಗರದ ಸೆರಗಿನಲ್ಲಿಯೇ ಇರುವ ಈ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ  ಒಂದೇ ಒಂದು ಮದ್ಯದ ಅಂಗಡಿಯಿಲ್ಲ.

ಇದು ಸಂಪೂರ್ಣ ಪಾನಮುಕ್ತ ಗ್ರಾಮ ಪಂಚಾಯತಿ. ಮದ್ಯದ ಅಂಗಡಿ ತೆರೆಯಲು ಹಣದ ಥೈಲಿಗಳೊಂದಿಗೆ ಪಂಚಾಯ್ತಿಯಿಂದ ನಿರಪೇಕ್ಷಣಾ ಪತ್ರ ಕೇಳಲು ಬಂದ ಪ್ರಭಾವಿಗಳಿಗೆ ಮುಲಾಜಿಲ್ಲದೆ ಹೊರಬಾಗಿಲು ತೋರಿಸಲಾಗಿದೆ. ಕೆಲವು ಜನರು ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ತೊಡಗಿದಾಗ ಹಳ್ಳಿಗಳ ಸಾವಿರಾರು ಮಹಿಳೆಯರೊಂದಿಗೆ ಬೃಹತ್ ಪ್ರತಿಭಟನೆ ನಡೆಸಿ ಅದನ್ನು ಬಂದ್ ಮಾಡಿಸಲಾಗಿದೆ.
 
ಈ ಹೋರಾಟ ತಾಲ್ಲೂಕಿನ ಇತರ ಭಾಗಗಳಲ್ಲೂ ಹೋರಾಟದ ಕಿಡಿ ಹೊತ್ತಿಸಿದೆ.
ಮೇಲಿನ ಪವಾಡಗಳೆಲ್ಲ ನಡೆದಿದ್ದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿಯಲ್ಲಿ. ಇದರ ಹಿಂದಿರುವ ಕನಸುಗಾರ, ಕಳೆದ ಮೂರು ವರ್ಷಗಳಿಂದ ಪಂಚಾಯ್ತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಎಚ್.ಪಿ.ಅನಿಲ್ ಕುಮಾರ್.

ಗ್ರಾಮ ಪಂಚಾಯತಿಗೆ ಅಧ್ಯಕ್ಷನಾಗಿ ಆಯ್ಕೆಯಾದ ನಂತರ ಅನಿಲ್ ಮೊದಲು ಮಾಡಿದ ಕೆಲಸವೆಂದರೆ ಇಲ್ಲಿ ಅನಿವಾರ್ಯವಾಗಿ ಕಡಿಮೆ ಮೊತ್ತದ ಗೌರವಧನ ಪಡೆದು ಕೆಲಸ ಮಾಡುತ್ತಿದ್ದ ಅಟೆಂಡರ್, ನೀರುಗಂಟಿ, ಬಿಲ್ ಕಲೆಕ್ಟರ್ ಅವರ ಸೇವೆಯನ್ನು ಕಾಯಂಗೊಳಿಸಿ 4ರಿಂದ 6 ಸಾವಿರದವರೆಗೆ ಸಂಬಳ ನೀಡಲಾರಂಭಿಸಿದ್ದು.

ಮುಂದೆ ಅನಿಲ್ ಗಮನ ಹರಿಸಿದ್ದು ಕುಡಿಯುವ ನೀರಿನ ವ್ಯವಸ್ಥೆಯ ಕಡೆ. ಈಗ ಗ್ರಾಮ ಪಂಚಾಯತಿಯ ಪ್ರತಿಯೊಂದು ಹಳ್ಳಿಗೂ ನೀರಿನ ವ್ಯವಸ್ಥೆಯಿದೆ. ಹಾಗೆಂದು ನೀರಿಗಾಗಿ ದೊಡ್ಡ ದೊಡ್ಡ ಯೋಜನೆಗಳೇನೂ ಇಲ್ಲಿಲ್ಲ. ಹಳ್ಳಿಗಳಲ್ಲಿಯೇ ಸಿಗುವ ನೀರಿನ ಮೂಲಗಳನ್ನು ಬಳಸಿಕೊಂಡು, ಯಾರಿಗೂ ತೊಂದರೆಯಾಗದಂತೆ, ಪರಿಸರಕ್ಕೂ ಧಕ್ಕೆಯಾಗದಂತೆ ಅದನ್ನು ಬಳಸಿಕೊಳ್ಳಲಾಗಿದೆ.

ಮಹಾತ್ಮ ಗಾಂಧೀ ಉದ್ಯೋಗ ಖಾತ್ರಿ ಯೋಜನೆಯನ್ನು ಅತಿಹೆಚ್ಚು ಸದ್ಬಳಕೆ ಮಾಡಿಕೊಂಡ ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಇದೂ ಒಂದು. ಕಳೆದ ಮೂರು ವರ್ಷಗಳಲ್ಲಿ ಒಂದೂಕಾಲು ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಮೌಲ್ಯದ ಕಾಮಗಾರಿ ಇಲ್ಲಿ ನಡೆದಿದೆ. `ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ ಅಭಿವೃದ್ಧಿ ಕಾರ್ಯಗಳಿಗೆ ಬೇರೆ ಅನುದಾನವೇ ಬೇಕಾಗಿಲ್ಲ~ ಎಂದು ಆತ್ಮವಿಶ್ವಾಸದಿಂದ ನುಡಿಯುವ ಅನಿಲ್ ಅದನ್ನು ತಮ್ಮ ಕೃತಿಗಳ ಮೂಲಕ ಸಾಧಿಸಿ ತೋರಿಸಿದ್ದಾರೆ.

ಮೇಲಿನ ಕುರುವಳ್ಳಿಯ ಬಂಡೆ ಇಡೀ ರಾಜ್ಯದಲ್ಲಿ ಗುಣಮಟ್ಟಕ್ಕೆ ಹೆಸರಾದದ್ದು. ಇಲ್ಲಿಂದ ಹೊರರಾಜ್ಯಗಳಿಗೂ ಕಲ್ಲುಗಳು ಹೋಗುತ್ತವೆ. ಅತ್ತುತ್ತಮ ಗುಣಮಟ್ಟದ ಮರಳು ಕ್ವಾರಿಗಳು ಇಲ್ಲಿವೆ. ಆದರೆ ನ್ಯಾಯವಾಗಿ ಸ್ಥಳೀಯ ಪಂಚಾಯ್ತಿಗೆ ಸಿಗಬೇಕಾದ ಈ ಸಂಪನ್ಮೂಲಗಳಿಂದ ಬರುವ ಅಪಾರ ತೆರಿಗೆ ಹಣವನ್ನು ಸರ್ಕಾರ ಯಾವುದಾವುದೋ ನೆಪ ಹೇಳಿ ತಾನೇ ಕಬಳಿಸುತ್ತಿದೆ. ಇದನ್ನು ಪಂಚಾಯ್ತಿಗೆ ದೊರಕಿಸಿಕೊಳ್ಳಲು ಅನಿಲ್ ಇನ್ನಿಲ್ಲದ ಕಾನೂನು ಹೋರಾಟ ನಡೆಸಿದ್ದಾರೆ.

ಈ ಗ್ರಾಮ ಪಂಚಾಯಿತಿಯ ಮುಖ್ಯವಾದ ಆದಾಯಮೂಲ ತೆಂಗಿನ ತೋಟದಿಂದ ಬರುತ್ತದೆ. ಇದು ಪ್ರತಿವರ್ಷ ಒಬ್ಬರೇ ಗುತ್ತಿಗೆದಾರರಿಗೆ ಸಾಮಾನ್ಯ ಮೊತ್ತಕ್ಕೆ ನವೀಕರಣಗೊಳ್ಳುತ್ತಿತ್ತು. ಅನಿಲ್ ಇದನ್ನು ಬಹಿರಂಗ ಹರಾಜಿಗೊಳಪಡಿಸಿ ಪಂಚಾಯ್ತಿಗೆ ಒಂದೂವರೆ ಲಕ್ಷದಷ್ಟು ಹೆಚ್ಚುವರಿ ಆದಾಯ ತಂದಿದ್ದಾರೆ. ಮಾಂಸದ ಅಂಗಡಿಗಳನ್ನು ಕೋಳಿ ಅಂಗಡಿಗಳನ್ನು ಬಹಿರಂಗ ಹರಾಜಿಗೆ ಒಳಪಡಿಸಿದ್ದರಿಂದ ಎಂಬತ್ತು ಸಾವಿರ ಅಧಿಕ ಆದಾಯ ಬಂದಿದೆ.

ಕಲ್ಲುಬಂಡೆಯ ತೆರಿಗೆ ಹಣವನ್ನು ಪಂಚಾಯ್ತಿಗೆ ವಂಚಿಸಿ ಸರ್ಕಾರ ಪಡೆಯುತ್ತಿದ್ದರೂ ಬಂಡೆ ಮಾಲೀಕರ ಮನ ಒಲಿಸಿ ಅವರಿಂದ 2 ಲಕ್ಷ ರೂಪಾಯಿಗಳಷ್ಟು ವೆಚ್ಚದ ರಸ್ತೆ ಕಾಮಗಾರಿಗಳನ್ನು ಮಾಡಿಸಿಕೊಳ್ಳಲಾಗಿದೆ.

ಸಾಮಾನ್ಯವಾಗಿ ರಾಜ್ಯ  ಹೆದ್ದಾರಿಯ ಬದಿಯ ಚರಂಡಿಗಳನ್ನು ಸ್ವಚ್ಛ ಮಾಡುವುದೇ ಅಪರೂಪ. ಈ ಚರಂಡಿಗಳು ಕಸ ಕಡ್ಡಿಗಳಿಂದ, ಬಳಸಿ ಎಸೆಯಲಾದ ಪ್ಲಾಸ್ಟಿಕ್ಕುಗಳಿಂದ ತುಂಬಿರುತ್ತದೆ. ಆದ್ದರಿಂದಲೇ ಮಳೆ ಬಂದ ತಕ್ಷಣ ನೀರು ನಿಂತು ರಸ್ತೆಯ ಓಡಾಟವೇ ಸ್ಥಗಿತಗೊಳ್ಳುತ್ತದೆ. ಆದರೆ ರಾಜ್ಯ ಹೆದ್ದಾರಿಗಳನ್ನು ಕಾಲಾನುಕಾಲಕ್ಕೆ ಸ್ವಚ್ಛಗೊಳಿಸಲು ಮತ್ತು ಸುಸ್ಥಿತಿಯಲ್ಲಿಡಲು ಸರ್ಕಾರ ಪ್ರತಿವರ್ಷ ಒಂದು ಕಿಲೋಮೀಟರ್‌ಗೆ 22 ಸಾವಿರ ರೂಪಾಯಿ ಖರ್ಚು ಮಾಡುತ್ತದೆ.
 
ಈ ವಿಚಾರ ಸಾಮಾನ್ಯರಿಗಿರಲಿ, ಬಹುಪಾಲು ಗ್ರಾಮ ಪಂಚಾಯತಿಗಳಿಗೇ ಗೊತ್ತಿಲ್ಲ. ಈ ಹಣವೆಲ್ಲಾ ಖೊಟ್ಟಿ ಬಿಲ್ಲುಗಳ ಮೂಲಕ ಗುತ್ತಿಗೆದಾರರ ಮತ್ತು ಅಧಿಕಾರಿಗಳ ಜೇಬು ಸೇರುತ್ತದೆ. ಅನಿಲ್ ಇಲ್ಲಿ ಅದಕ್ಕೆ ಅವಕಾಶ ಕೊಟ್ಟಿಲ್ಲ. ಮೇಲಿನ ಕುರುವಳ್ಳಿಯಿಂದ ಕುವೆಂಪು ಅವರ ಕುಪ್ಪಳ್ಳಿ ನೋಡಿಕೊಂಡು ಕೊಪ್ಪದವರೆಗೆ ಸಾಗುವಾಗಿನ ರಾಜ್ಯ ಹೆದ್ದಾರಿ ಅದಕ್ಕೇ ಅಷ್ಟು ಚಂದವಾಗಿದೆ.

`ಸ್ವಾಸ್ಥ್ಯ ಭೀಮಾ~ ಯೋಜನೆಯ ಬಗ್ಗೆಯೂ ಹೆಚ್ಚಿನ ಗ್ರಾಮ ಪಂಚಾಯತಿಗಳಿಗೆ ಅರಿವಿಲ್ಲ. ಅನಿಲ್ ತಮ್ಮ ಪಂಚಾಯತಿ ವ್ಯಾಪ್ತಿಯ ಅನೇಕರಿಗೆ ಈ ಯೋಜನೆಯ ಮೂಲಕ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು 9 ಸರ್ಕಾರಿ ಶಾಲೆಗಳಿವೆ. ಎಲ್ಲ ಕಡೆಯಂತೆ ಇಲ್ಲಿಯೂ ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳತ್ತ ಈ ಶಾಲೆಗಳ ಮಕ್ಕಳ ವಲಸೆ ಆರಂಭವಾಯಿತು. ಇದನ್ನು ತಡೆಯಲು ದಾನಿಗಳ ನೆರವು ಪಡೆದು ಇಲ್ಲಿನ ಪ್ರತಿಯೊಂದು ಶಾಲೆಗೂ ಟೀವಿ ಹಾಗೂ ವಿ.ಸಿ.ಪಿಗಳನ್ನು ನೀಡಿ ಆ ಮೂಲಕ ಅವರಿಗೆ ಇಂಗ್ಲಿಷ್ ಭಾಷೆ ಕಲಿಯಲು ಹೆಚ್ಚುವರಿ ಪಾಠಗಳನ್ನು ಮಾಡಲು ಆರಂಭಿಸಲಾಯಿತು.

ಹಲವಾರು ಪ್ರತಿಷ್ಠಿತ ಖಾಸಗಿ ಶಾಲೆಗಳಿರುವ ತೀರ್ಥಹಳ್ಳಿ ಪಟ್ಟಣ ಸಮೀಪದಲ್ಲಿದ್ದರೂ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಈಗಲೂ 50ರಿಂದ 70 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.

ಗ್ರಾಮ ಪಂಚಾಯ್ತಿಯೇ ಮುತುವರ್ಜಿ ವಹಿಸಿ ಅಂಗನವಾಡಿಗಳಿಗೆ ಮೂರು ಚಕ್ರದ ಪುಟ್ಟ ಸೈಕಲ್, ಕುದುರೆಗಾಡಿ ಮತ್ತು ನವನವೀನ ಆಟಿಕೆಗಳನ್ನು ನೀಡಿದ್ದರಿಂದ ಕಾನ್ವೆಂಟುಗಳಿಗೆ ಸೇರಿದ್ದ ಅನೇಕ ಮಕ್ಕಳು ಅಂಗನವಾಡಿಗಳಿಗೆ ಮರಳಿದ್ದಾರೆ ಎಂದು ಅನಿಲ್ ಹೇಳುವಾಗ ಅಂಗನವಾಡಿ ಮಕ್ಕಳ ಮುಗ್ಧ ನಗೆಯೇ ಅವರ ಮುಖದ ತುಂಬ ಹರಡಿರುತ್ತದೆ.

ಅನಿಲ್ ಅವರಿಗೆ ಜೀವನ ನಿರ್ವಹಿಸಬಹುದಾದಷ್ಟು ಕೃಷಿ ಜಮೀನಿದೆ. ಇಲ್ಲಿ ಬರುವ ಆದಾಯವನ್ನು ಮಿಗಿಸಿ ಅದನ್ನು ಸಾರ್ವಜನಿಕ ಬದುಕಿಗೆ ಬಳಸುತ್ತಾರೆ. ಊರವರಿಗೆ ಏನು ಸಮಸ್ಯೆಯಾದರೂ ಅದರ ಪರಿಹಾರಕ್ಕೆ ಸರ್ಕಾರದ ಕಡೆ ನೋಡುತ್ತ ಕುಳಿತುಕೊಳ್ಳದೆ ಮೊದಲು ಅಲ್ಲಿಗೆ ಧಾವಿಸಿ ತನ್ನ ಹಾಗೂ ಸಮುದಾಯದ ನೆರವನ್ನು ಅನಿಲ್ ಸಂತ್ರಸ್ತರಿಗೆ ದೊರಕಿಸಿಕೊಡುತ್ತಾರೆ.

ಸಿಡಿಲು ಹೊಡೆದು ಅಂಧ ಬಚ್ಚಪೂಜಾರಿಯವರ ಮನೆ ನಾಶವಾದಾಗ, ಸುರಿಯುವ ಮಳೆಯಲ್ಲಿಯೇ ತಾನೂ ಒಬ್ಬ ಕಾರ್ಮಿಕನಾಗಿ ಹಂಚು ಹೊದಿಸಿಕೊಟ್ಟ ಇವರ ಕಾಳಜಿಯನ್ನು ಪಂಚಾಯ್ತಿಯ ಪ್ರತಿಯೊಬ್ಬರೂ ಹನಿಗಣ್ಣಾಗಿ ನೆನೆಸಿಕೊಳ್ಳುತ್ತಾರೆ.

ತಾಲ್ಲೂಕಿನ ವ್ಯಕ್ತಿಯೊಬ್ಬ ಸಿಂಗಲ್ ನಂಬರ್ ಜುಗಾರಿಯ ಚಟಕ್ಕೆ ಬಿದ್ದು ಧಾರವಾಡದಲ್ಲಿ ಆರೋಗ್ಯ ಹದಗೆಡಿಸಿಕೊಂಡು ಭಿಕ್ಷೆ ಬೇಡುತ್ತಿರುವ ಸಂಗತಿ ತಿಳಿದು ಅಲ್ಲಿಗೆ ಹೋಗಿ ಆತನನ್ನು ಕರೆದುಕೊಂಡು ಬಂದು, ಚಿಕಿತ್ಸೆ ಮತ್ತು ಆಶ್ರಯ ನೀಡಿ ಆತನನ್ನು ಮನುಷ್ಯನನ್ನಾಗಿ ಮಾಡಿದ್ದನ್ನೂ ಅವರು ಇದರೊಂದಿಗೆ ಪ್ರಸ್ತಾಪಿಸುವುದನ್ನು ಮರೆಯುವುದಿಲ್ಲ. ಆಗಾಗ ರಕ್ತದಾನ ಶಿಬಿರ ನಡೆಸುವ ಅನಿಲ್ ಸ್ವತಃ 54 ಬಾರಿ ರಕ್ತದಾನ ಮಾಡಿದ್ದಾರೆ.

ಬೇರೆ ಗ್ರಾಮ ಪಂಚಾಯತಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ನಾವು ಅನುಸರಿಸಲು ಮಾದರಿಯಾಗಬಹುದಾದ ಯೋಜನೆಗಳೇನಾದರೂ ಅಲ್ಲಿವೆಯೇ ಎಂದು ತಿಳಿಯಲು ಅವರು ತಮ್ಮ ಪಂಚಾಯ್ತಿಯ ಸದಸ್ಯರನ್ನೆಲ್ಲ ಕರೆದುಕೊಂಡು ತಮ್ಮ ಸ್ವಂತ ಹಣದಲ್ಲಿ ಮೈಸೂರು, ಮಂಡ್ಯ ಜಿಲ್ಲೆಗಳಿಗೆ ಅಧ್ಯಯನ ಪ್ರವಾಸ ಹೋಗಿ ಬಂದಿದ್ದಾರೆ.

ತಮ್ಮ ಗ್ರಾಮ ಪಂಚಾಯತಿಯಲ್ಲಿ `ಬಸವ ಇಂದಿರಾ~ ಹಾಗೂ `ಇಂದಿರಾ ಅವಾಜ್~ ಯೋಜನೆಗಳಡಿಯಲ್ಲಿ ನೂರಾರು ಜನ ಫಲಾನುಭವಿಗಳಿದ್ದರೂ ಅವರಿಗೆ ನಿವೇಶನ ಇಲ್ಲದೆ ಇದ್ದುದರಿಂದಾಗಿ ಯೋಜನೆಯ ಫಲ ಅವರಿಗೆ ಕನ್ನಡಿಯ ಗಂಟಾಗಿತ್ತು. ಇವರಲ್ಲದೇ ನಿವೇಶನ ರಹಿತ ಬಡವರು ಸಾಕಷ್ಟು ಜನರಿದ್ದರು.

ಈ ಅಧ್ಯಯನದ ಸಂದರ್ಭದಲ್ಲಿ ಮೈಸೂರು ಜಿಲ್ಲೆಯ ಚನ್ನಪಟ್ಟಣದಲ್ಲಿ ತಹಶೀಲ್ದಾರರು ನೀಡುವ ಹಕ್ಕುಪತ್ರಗಳಿಲ್ಲದೆ ಗ್ರಾಮ ಪಂಚಾಯತಿಗಳೇ ನೀಡುವ ಡಿಮ್ಯಾಂಡ್ ಪತ್ರದ (ನೆಲಬಾಡಿಗೆ ಆಧಾರದ ಮೇಲೆ ನಿವೇಶನ ಹಂಚಿಕೆ ಮಾಡುವ ವಿಧಾನ) ಆಧಾರದಲ್ಲಿ 12 ಸಾವಿರ ಜನರಿಗೆ ನಿವೇಶನ ನೀಡಿದ್ದನ್ನು ಕಂಡು ಅವರು ಬೆಚ್ಚಿಬಿದ್ದರು.

ಇದುವೇ ತೀರ್ಥಹಳ್ಳಿಯಲ್ಲಿ `ನಮಗೂ ಡಿಮ್ಯಾಂಡ್ ಪತ್ರದ ಮೇಲೇಯೇ ನಿವೇಶನ ಹಂಚಲು ಅವಕಾಶ ನೀಡಿ, ಇಲ್ಲವೇ ಹಕ್ಕುಪತ್ರ ಕೊಡಿ~ ಎಂಬ ಆಗ್ರಹದ ಅಹೋರಾತ್ರಿ ಪ್ರತಿಭಟನೆಗೆ ಕಾರಣವಾಯಿತು. ಸಾವಿರಾರು ಜನರ ಪ್ರತಿಭಟನೆಗೆ ಬೆದರಿದ ಜಿಲ್ಲಾಧಿಕಾರಿಗಳು ಜಿಲ್ಲಾಕೇಂದ್ರದಿಂದ ತಮ್ಮ ದಂಡಿನ ಸಮೇತ ತೀರ್ಥಹಳ್ಳಿಗೆ ಬರುವುದು ಅನಿವಾರ್ಯವಾಯಿತು.

ಈಗ 300 ಮಂದಿ ಕಡುಬಡವರಿಗೆ ನಿವೇಶನಗಳನ್ನು ಕೊಡಲು ವಿಶಾಲವಾದ ಜಾಗವನ್ನು ಗ್ರಾಮ ಪಂಚಾಯತಿ ಸಿದ್ಧ ಮಾಡಿಟ್ಟುಕೊಂಡಿದ್ದು ಅದಕ್ಕೆ ಹಕ್ಕುಪತ್ರಗಳನ್ನು ನೀಡಲು ಜಿಲ್ಲಾಡಳಿತ ಮುಂದಾಗಿದೆ.

ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ ವ್ಯಾಪಕವಾಗುತ್ತಿರುವುದನ್ನು, ಸಮುದಾಯದ ಒಳಿತಿಗೆ ತುಡಿಯುವ ಮನಸ್ಸುಗಳ ಜಾಗದಲ್ಲಿ ವ್ಯಕ್ತಿವಾದ ವೇಗವಾಗಿ ಆಕ್ರಮಿಸಿಕೊಳ್ಳುತ್ತಿರುವುದನ್ನು, ಜನರಲ್ಲಿ ವೈಚಾರಿಕತೆ ಮಾಯವಾಗಿ ಅಂಧಶ್ರದ್ಧೆ, ಧರ್ಮಾಂಧತೆ ತುಂಬಿಕೊಳ್ಳುತ್ತಿರುವುದನ್ನು ನೋಡುತ್ತ ದುಗುಡಗೊಳ್ಳುವ ಅನಿಲ್ ಇವುಗಳಿಗೆಲ್ಲ ಪರಿಹಾರವೇನು ಎಂದು ಚಿಂತಿಸುತ್ತಾರೆ.
 
ಆ ಚಿಂತನೆಯ ಫಲವಾಗಿ ಈ ಬಾರಿಯ ರಾಜ್ಯೋತ್ಸವವನ್ನು (ನವೆಂಬರ್ 2) ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದಾರೆ. ತೀರ್ಥಹಳ್ಳಿಯ ಮುಖ್ಯ ವೃತ್ತದಲ್ಲಿ ರಾಷ್ಟ್ರಕವಿ ಕುವೆಂಪು, ತನ್ನ ಪಂಚಾಯತಿಯ ವೃತ್ತದಲ್ಲಿ ತತ್ವಬದ್ಧ ರಾಜಕಾರಣಿ ಕಡಿದಾಳು ಮಂಜಪ್ಪ ಅವರ ಪುತ್ಥಳಿಗಳನ್ನು ಅನಾವರಣಗೊಳಿಸುವ, ಕುವೆಂಪು ಅವರ `ವಿಚಾರಕ್ರಾಂತಿಗೆ ಆಹ್ವಾನ~ ಕೃತಿಯ ಸಾವಿರ ಪ್ರತಿಗಳನ್ನು ಊರವರಿಗೆ ಹಂಚುವ, ಕಾಗೋಡು ಚಳವಳಿಯ ನೇತಾರ ಎಚ್. ಗಣಪತಿಯಪ್ಪ, ಅಕ್ಷರಸಂತ ಹರೇಕಳ ಹಾಜಬ್ಬ, ಜನಪರ ಹೋರಾಟಗಾರ ಟಿ.ಆರ್. ಕೃಷ್ಣಪ್ಪ ಅವರನ್ನು ಅಭಿನಂದಿಸುವ ಹಾಗೂ ಅವರ ಬದುಕು, ಚಿಂತನೆ, ಹೋರಾಟಗಳನ್ನು ಜನರಿಗೆ ಪರಿಚಯಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಇದರೊಂದಿಗೆ ತನ್ನ ಪಂಚಾಯತಿಯಿಂದ ಕುವೆಂಪು ಜನ್ಮಸ್ಥಳ ಕುಪ್ಪಳ್ಳಿವರೆಗಿನ ರಾಜ್ಯ ಹೆದ್ದಾರಿಯುದ್ದಕ್ಕೂ ನಾಡಿನ ಸಾಹಿತಿಗಳ ಭಾವಚಿತ್ರ, ಹಾಗೂ ಅವರ ಸಂದೇಶಗಳನ್ನು ಹೊತ್ತ ಶಾಶ್ವತ ಫಲಕಗಳನ್ನು ಸ್ಥಾಪಿಸುತ್ತಿದ್ದಾರೆ. ಇವೆಲ್ಲ ಕಾರ್ಯಗಳಿಗೆ ವಿಶ್ರಾಂತ ಲೋಕಾಯುಕ್ತ, ನ್ಯಾಯಮೂರ್ತಿ ಎನ್ ಸಂತೋಷ ಹೆಗಡೆ, ರೈತ ಮುಖಂಡ ಕಡಿದಾಳು ಶಾಮಣ್ಣ ಸಾಕ್ಷಿಯಾಗುತ್ತಿದ್ದಾರೆ.

ತಮ್ಮ ಕನಸು ಮತ್ತು ಯೋಜನೆಗಳಿಗೆ ಪಂಚಾಯತಿಯ ಇತರ ಸದಸ್ಯರ ಸಹಕಾರದ ಬಗ್ಗೆ ಪ್ರಶ್ನಿಸಿದರೆ ಅನಿಲ್ ಭಾವುಕರಾಗುತ್ತಾರೆ. `ನಜೀರಸಾಬರು ಎಚ್ಚರಿಸಿದ್ದಂತೆ ನಾವು ನಮ್ಮ ಗ್ರಾಮ ಪಂಚಾಯತಿಗೆ ಪಕ್ಷ ರಾಜಕಾರಣವನ್ನು ತರಲಿಲ್ಲ.

ನಮ್ಮ ಪಂಚಾಯತಿ ಒಂದು ಕುಟುಂಬವಿದ್ದಂತೆ. ಅವರು ನನ್ನ ಹೆಗಲಿಗೆ ಹೆಗಲು ಕೊಟ್ಟಿದ್ದರಿಂದಲೇ ಈ ಕೆಲಸಗಳೆಲ್ಲ ಸಾಕಾರವಾಯಿತು.~ ಎಂದು ತಮ್ಮ ಸದಸ್ಯರನ್ನು ಹೆಮ್ಮೆ-ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ. ಅವರ ಮಾತು ಗಾಂಧಿ ಪ್ರತಿಪಾದಿಸಿದ ಸ್ವರಾಜ್ಯದ ಪರಿಕಲ್ಪನೆಗೆ ಹತ್ತಿರ ಇದ್ದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT