ಕರಾವಳಿಯ ಕಾಂತಾವರ ತನ್ನ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ರಾಜ್ಯದ ಗಮನ ಸೆಳೆದಿರುವ ಒಂದು ಪುಟ್ಟ ಗ್ರಾಮ. ‘ಕನ್ನಡ ಸಂಘ’, ‘ಅಲ್ಲಮಪ್ರಭು ಪೀಠ’, ‘ಮುದ್ದಣ ಕಾವ್ಯ ಪ್ರಶಸ್ತಿ’, ‘ವರ್ಧಮಾನ ಪ್ರಶಸ್ತಿ‘, ‘ಕಾಂತಾವರ ಪುರಸ್ಕಾರ’, ‘ಸುವರ್ಣ ರಂಗ ಸಮ್ಮಾನ್’– ಹೀಗೆ, ಕಾಂತಾವರದಲ್ಲಿ ಕನ್ನಡ ನಾಡು ನುಡಿಯ ನಿತ್ಯೋತ್ಸವ. ಇದರ ಹಿಂದಿನ ರೂವಾರಿ
ಡಾ. ನಾ. ಮೊಗಸಾಲೆ.

೧೪ ಕಾದಂಬರಿ, ೮ ಕವನ ಸಂಕಲನ, ೪ ಕಥಾ ಸಂಗ್ರಹ, ೫ ವೈದ್ಯಕೀಯ ಗ್ರಂಥಗಳು, ಗ್ರಂಥ ಸಂಪಾದನೆ, ‘ಬಯಲ ಬೆಟ್ಟ’ ಆತ್ಮಕಥನ– ಹೀಗೆ ಬರವಣಿಗೆಯ ಸಮೃದ್ಧಿಯ ಮೂಲಕ ನಾಡಿಗೆ ಪರಿಚಿತರು. ದಶಕಗಳಿಂದ ಸಾಹಿತ್ಯ, ಸಂಘಟನೆ, ವೈದ್ಯಕೀಯ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ, ಮುಖ್ಯವಾಗಿ ಕನ್ನಡದ ಪರಿಚಾರಿಕೆಯಲ್ಲಿ ಗುರ್ತಿಸಲಾಗುವ ಮೊಗಸಾಲೆಯವರಿಗೆ ಆಗಸ್ಟ್ ೨೭ರಂದು 70 ವರ್ಷ ತುಂಬುತ್ತಿದೆ.

ಈ ಸಂದರ್ಭದಲ್ಲಿ ಶಿವಮೊಗ್ಗ ಕರ್ನಾಟಕ ಸಂಘ ಕಾಂತಾವರಕ್ಕೆ ಬಂದು ಮೊಗಸಾಲೆಯವರ ಕರ್ಮಭೂಮಿಯಲ್ಲಿಯೇ ಅವರನ್ನು ಸನ್ಮಾನಿಸಿ ಗೌರವಿಸಲಿದೆ. ಈ ವಿಶೇಷ ಸಂದರ್ಭದಲ್ಲಿ ‘ಸಾಪ್ತಾಹಿಕ ಪುರವಣಿ’ಗಾಗಿ ಮೊಗಸಾಲೆ ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ನಿಮ್ಮ ಹೆಸರಿನ ಜತೆಗೆ ಮೊಗಸಾಲೆ ಸೇರಿಕೊಂಡಿದೆ. ಏನಿದು ಮೊಗಸಾಲೆ?
ಮೊಗಸಾಲೆ ಒಂದು ತುಳು ಶಬ್ದ. ಕರಾವಳಿಯಲ್ಲಿ ದೊಡ್ಡ ಮನೆಗಳ ವಿಶಾಲ ಮುಖ ಚಾವಡಿಯನ್ನು ಮೊಗಸಾಲೆ ಎನ್ನುವರು. ನನ್ನ ಕುಟುಂಬದ ಹಿರಿಯರ ಕಾಲದ ಮನೆಯಲ್ಲಿ ಇಂತಹ ಮೊಗಸಾಲೆ ಇತ್ತಂತೆ. ಅದರ ಕಾರಣದಿಂದ ಆ ಪ್ರದೇಶಕ್ಕೇ ಮೊಗಸಾಲೆ ಎಂಬ ಹೆಸರು ಬಂತು. ಇಂದು ಕೇರಳದ ಭಾಗವಾಗಿರುವ ಅಚ್ಚಗನ್ನಡದ ಪ್ರದೇಶ ಕಾಸರಗೋಡಿನ ಕೋಳ್ಯೂರು, ವರ್ಕಾಡಿ ಗ್ರಾಮದ ಒಂದು ಊರು ಇದು.

ನನ್ನ ಹಿರಿಯರದ್ದು ಯಕ್ಷಗಾನ ಹಿನ್ನೆಲೆಯುಳ್ಳ ಕುಟುಂಬ. ತುಳು ಸಂಶೋಧಕ ವೆಂಕಟ್ರಾಜ ಪುಣಿಂಚಿತ್ತಾಯರು ಯಕ್ಷಗಾನ ತಾಳಮದ್ದಲೆಯ ಪ್ರಕಾರ ಹುಟ್ಟಿದ್ದೇ ಮೊಗಸಾಲೆಯಲ್ಲಿ ಎನ್ನುತ್ತಾರೆ. ಯಕ್ಷಗಾನ ವಾಲ್ಮೀಕಿ ಪಾರ್ತಿಸುಬ್ಬನೂ ಮೊಗಸಾಲೆಗೆ ಆಗಾಗ ಬರುತ್ತಿದ್ದನೆಂದು ಕೆಲವು ಸಂಶೋಧಕರು ಉಲ್ಲೇಖಿಸಿದ್ದಾರೆ. ಆದರೆ ನನ್ನ ಕಾಲಕ್ಕೆ ಎಲ್ಲ ಸರ್ವನಾಶವಾಗಿ ಜೋಪಡಿ ಮನೆಯ ಬಡತನಕ್ಕೆ ನಮ್ಮ ಕುಟುಂಬ ಜಾರಿತ್ತು.

ನಿಮ್ಮ ಬಾಲ್ಯ ಮತ್ತು ಬರವಣಿಗೆ ಚಿಗುರೊಡೆದ ಬಗೆ?
ಕಡು ಬಡತನದ ನಡುವೆ ಹೈಸ್ಕೂಲು ಸೇರಿದ್ದೇ ಒಂದು ಸಾಹಸ. ಪಾರ್ತಿಸುಬ್ಬನ ‘ಪಂಚವಟಿಯ ನೋಡಿ ನಿರ್ಮಲ ನದಿ ಸಮೀಪದಿ...’ ಎಂಬ ಯಕ್ಷಗಾನದ ಹಾಡನ್ನು ಗುನುಗುತ್ತಾ, ಚಕ್ರಕೋಡಿ ಮನೆಯಲ್ಲಿದ್ದ ಪುಟ್ಟತ್ತೆ ತಾಳೆಗರಿಯಲ್ಲಿದ್ದ ಭಾರತದ ‘ಶ್ರೀವನಿತೆಯರಸನೇ... ವಿಮಲ ರಾಜೀವ ಪೀಠನ ಪಿತನೇ...’ ಎಂದು ರಾಗವಾಗಿ ಕಾವ್ಯ ಪಾರಾಯಣ ಮಾಡುತ್ತಿದ್ದುದನ್ನು ಕಿವಿತುಂಬಿಕೊಳ್ಳುತ್ತಾ ಬೆಳೆದೆ.

ಜತೆಗಿದ್ದುದು ಶಾಲೆಯ ಕನ್ನಡ ಪಂಡಿತರ ಪ್ರೀತಿ, ಪ್ರೋತ್ಸಾಹ. ನಾನು ಕವಿತೆ ಬರೆಯತೊಡಗಿದೆ. ಮೊದಲ ಕವಿತೆ ೧೯೫೯ರಲ್ಲಿ ಪ್ರಕಟಗೊಂಡಿತು. ಪುತ್ತೂರಿನಿಂದ ಪ್ರಕಟಗೊಳ್ಳುತ್ತಿದ್ದ ಮಾಂಬಾಡಿ ವೆಂಕಟ್ರಮಣ ಭಟ್ಟರ ಸಂಪಾದಕತ್ವದ ‘ಭಾರತಿ’ ಪತ್ರಿಕೆಯಲ್ಲಿ. ಭಾರತ ಮತ್ತು ಚೀನಾ ನಡುವಿನ ಯುದ್ಧ ಸಂದರ್ಭದಲ್ಲಿ ‘ಚೀನಾ–ರಷ್ಯಾಗಳೆಂಬ ಮದದಂತಿ ಎರಡಿಹವು ಹಾನಿಗೈಯಲು ಜಗಕೆ’ ಎಂದು ಆರಂಭಗೊಳ್ಳುವ ಈ ಕವಿತೆ ಅನೇಕರ ಮೆಚ್ಚುಗೆಗೆ ಪಾತ್ರವಾಗಿ ಇನ್ನಷ್ಟು ಬರೆಯಲು ಪ್ರಚೋದಿಸಿತು.

ಆಯುರ್ವೇದದ ಕಡೆಗೆ ಒಲವು ಮೂಡಿದ್ದು ಯಾಕೆ?
ಕನ್ನಡ ಅಥವಾ ಇಂಗ್ಲಿಷ್ ಎಂ.ಎ. ಮಾಡಬೇಕೆಂದಿದ್ದೆ. ಆದರೆ ಒದಗಿ ಬಂದದ್ದು ಆಯುರ್ವೇದ. ಉನ್ನತ ಶಿಕ್ಷಣಕ್ಕೆ ಖರ್ಚು ಮಾಡಲು ದುಡ್ಡಿರಲಿಲ್ಲ. ಆ ಸಮಯದಲ್ಲಿ ಉಡುಪಿಯ ಸುಗುಣೇಂದ್ರತೀರ್ಥ ಸ್ವಾಮಿಗಳ ನೆರವಿಂದ ಉಚಿತ ಶಿಕ್ಷಣ ಪಡೆದೆ. ಆಗಲೂ ಉಡುಪಿಯಿಂದ ಪ್ರಕಟಗೊಳ್ಳುತ್ತಿದ್ದ ‘ಕಲಾವೃಂದ’ ಪತ್ರಿಕೆಗೆ ಹಾಗೂ ‘ಭವ್ಯವಾಣಿ’, ‘ರಾಯಭಾರಿ’, ‘ಯುಗಪುರುಷ’ ಮೊದಲಾದ ಪತ್ರಿಕೆಗಳಿಗೆ ಬರೆಯುತ್ತಿದ್ದೆ. ಆಗ ಬನ್ನಂಜೆ ಗೋವಿಂದಾಚಾರ್ಯ, ಯು.ಕೆ.ವಿ. ಆಚಾರ್ಯ, ಫಲಿಮಾರು ಮಠದಿಂದ ಪೀಠತ್ಯಾಗ ಮಾಡಿದ ಕುಮುದಾತನಯ, ಈಶ್ವರಯ್ಯರಂತವರ ಸಂಪರ್ಕ ಸಲಹೆ ಮಾರ್ಗದರ್ಶನಗಳು ಒದಗಿ ಓದು-ಬರವಣಿಗೆಯನ್ನು ಹೆಣೆದುಕೊಳ್ಳಲು ಸಾಧ್ಯವಾಯಿತು.

ಮೊಗಸಾಲೆಯಿಂದ ಕಾಂತಾವರಕ್ಕೆ ಪ್ರವೇಶ ಹೇಗಾಯಿತು?
ಅದೊಂದು ಆಕಸ್ಮಿಕ. ಕಾಂತಾವರ ನನ್ನ ಆಯ್ಕೆಯಲ್ಲ. ಆಯುರ್ವೇದ ಪದವಿ ಮುಗಿಸಿದ ಬಳಿಕ ಕಾಂತಾವರ ಎಂಬ ಹಳ್ಳಿಯ ಆರೋಗ್ಯಕೇಂದ್ರಕ್ಕೆ ಅರ್ಜಿ ಹಾಕಿದೆ. ಸಿಗುತ್ತೆ ಅಂತ ಕನಸಲ್ಲೂ ಎಣಿಸಿರಲಿಲ್ಲ. ಆಗ ಮೋಹನದಾಸ ಅಡ್ಯಂತಾಯರು ಬೋರ್ಡ್ ಅಧ್ಯಕ್ಷರಾಗಿದ್ದರು. ಬಂದವರಲ್ಲಿ ಕಡು ಬಡತನ ಮೂಲದ ನಾನು ಬೇಗ ಊರು ಬಿಟ್ಟು ಹೋಗುವ ಸಂಭವವಿಲ್ಲ. ಮಾತ್ರವಲ್ಲ ಒಳ್ಳೆಯ ಅಂಕಗಳೂ ಇದ್ದವು. ಇದನ್ನು ನೋಡಿ ನನ್ನನ್ನೇ ಆಯ್ಕೆ ಮಾಡಿದರು. ೧೯೬೫ ನವೆಂಬರ್ ೧ರಂದು ಕಾಂತಾವರದ ನನ್ನ ಬದುಕು ತೆರೆದುಕೊಂಡಿತು. ಬರವಣಿಗೆಯಿಂದಾಗಿ ನನ್ನ ವೃತ್ತಿಯಲ್ಲಿ ವಿಶೇಷ ಗೌರವವೂ ದೊರೆಯಿತು.

ಆ ಕಾಲದಲ್ಲಿ ಕಾಂತಾವರದಲ್ಲಿ ಏನೂ ಇರಲಿಲ್ಲ. ‘ನವಭಾರತ’ ಪತ್ರಿಕೆಯೊಂದು ಸಂಜೆಯಾಗುವಾಗ ಬರುತ್ತಿತ್ತು. ಆದರೆ ಜಾತಿವ್ಯವಸ್ಥೆ ಬಲವಾಗಿ ಬೇರೂರಿತ್ತು. ಊರ ಪ್ರಸಿದ್ಧ ಕಾಂತಾವರ ದೇವಾಲಯದ ಅಂಗಣಕ್ಕೆ ಬಿಲ್ಲವರಿಗೆ ಪ್ರವೇಶವಿರಲಿಲ್ಲ. ಸ್ಥಾನಿಕರಿಗೆ ಅಡ್ಡಪಂಕ್ತಿ ಹಾಕಲಾಗುತ್ತಿತ್ತು. ಬ್ರಾಹ್ಮಣರ ಮನೆಗೂ ಹಾಗೆಯೇ. ಬಿಲ್ಲವರಿಗೆ, ಬಂಟರಿಗೆ ಇತರ ದಲಿತರಿಗೆ ಪ್ರವೇಶ ಇರಲಿಲ್ಲ. ಆ ದಿನಗಳಲ್ಲಿ ಸಮಾಜದ ಈ ಅನಿಷ್ಟದ ವಿರುದ್ಧ ಹೋರಾಡಬೇಕೆನಿಸಿತು.

ಆಗ ಮದುವೆಯೂ ಆಗಿ ಮಾವನಿಂದಲೂ ನನ್ನ ಪ್ರಗತಿಪರ ಧೋರಣೆಗೆ ಬೆಂಬಲ ಸಿಕ್ಕಿತು. ಮನೆಯೊಳಗೆ ಇತರ ಜಾತಿಯವರನ್ನು ಕರೆದುಕೊಂಡು ಬಂದೆ. ಮಕ್ಕಳನ್ನು ಅಬ್ರಾಹ್ಮಣರ ಸಂಪರ್ಕದಲ್ಲಿ ಬೆಳೆಸಿದೆ. ಮನುಷ್ಯ ಮುಖ್ಯ, ಜಾತಿ ಅಲ್ಲ ಎಂದು ಪ್ರತಿಪಾದಿಸುತ್ತಿದ್ದ ನನ್ನ ಹೆಂಡತಿ ಅವರು ಊಟ ಮಾಡಿದ ಎಲೆಯನ್ನು ಸುತಾರಾಂ ಅವರಲ್ಲಿ ತೆಗೆಯಲು ಬಿಡದೇ ತಾನೇ ತೆಗೆಯುತ್ತಿದ್ದಳು. ಅಂದಿನ ಸಾಮಾಜಿಕ ಸ್ಥಿತಿಯಲ್ಲಿ ಇವೆಲ್ಲಾ ಕ್ರಾಂತಿಕಾರಿ ಸಂಗತಿಗಳೇ. ಕಾಂತಾವರದ ದೇವಸ್ಥಾನಕ್ಕೆ ಬಿಲ್ಲವರ ಪ್ರವೇಶದ ಹೋರಾಟವೂ ಯಶಸ್ವಿಯಾಯತು.. ಬಂಟರೊಂದಿಗೆ, ಬಿಲ್ಲವರೊಂದಿಗೆ, ಇತರ ಜಾತಿಯವರೊಂದಿಗಿನ ಸಾಮೀಪ್ಯ ‘ಉಲ್ಲಂಘನೆ’ಯಂತಹ ಬೃಹತ್ ಕಾದಂಬರಿ ಬರೆಯುವುದಕ್ಕೆ ಕಾರಣವಾಯಿತು.

ಕಾಂತಾವರ ಕನ್ನಡ ಸಂಘ ಸ್ಥಾಪನೆಯ ಹಿಂದಿನ ಉದ್ದೇಶ?
ಆರಂಭದಲ್ಲಿ ಒಂದು ರೈತ ಯುವಕ ಮಂಡಲವನ್ನು ಕಾಂತಾವರದಲ್ಲಿ ಸ್ಥಾಪಿಸಿದೆ. ಅದರ ಮೂಲಕ ಕೆಲವು ಚಟುವಟಿಕೆಗಳು ನಡೆದರೂ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಆ ದಿನಗಳಲ್ಲಿ ಮಾರಣ್ಣ ಮಾಡ, ವಿಠಲ ಬೇಲಾಡಿ, ದಿವಾಕರರಾವ್ ಮೊದಲಾದವರ ಬೆಂಬಲ ಸಿಕ್ಕಿತು. ಆಗ ಚಿಗುರಿದ ಕನಸು ಕಾಂತಾವರ ಕನ್ನಡ ಸಂಘ. ಮೇ 26, ೧೯೭೬ರಲ್ಲಿ ಈ ಸಂಘ ಅಧಿಕೃತವಾಗಿ ಬಾಗಿಲು ತೆರೆಯಿತು.

ನಾನು ಹೈಸ್ಕೂಲಿನಲ್ಲಿರುವಾಗ ಕಯ್ಯಾರರ ಕವಿತೆ ‘ಐಕ್ಯಗಾನ’ವನ್ನು ಹೋದಲ್ಲೆಲ್ಲಾ ಹೇಳುತ್ತಿದ್ದ ಸಾಹಿತ್ಯ ಪ್ರೇಮಿ ರಾಜಕಾರಣಿ ಬಿ.ಎಂ. ಇದಿನಬ್ಬರ ಪರಿಚಯವಾಯಿತು. ಕಾಂತಾವರವೆಂಬ ಮೂಲೆಯ ಗ್ರಾಮದಲ್ಲಿ ನಾನು ದ್ವೀಪವಾಗಬಾರದು. ನನ್ನ ಒಂಟಿತನದಿಂದ ಪಾರಾಗಬೇಕೆಂಬ ಸ್ವಂತದ ಅಭಿಲಾಷೆಯೇ ಈ ಸಂಘದ ಹುಟ್ಟಿಗೆ ಕಾರಣ. ಈ ವೇದಿಕೆಯ ಮೂಲಕ ಸಮಾನ ಆಸಕ್ತರು, ಚಿಂತನೆಯುಳ್ಳವರು ಜತೆಗೂಡಿ ಚಿಂತನೆಯನ್ನು ಹಂಚಿಕೊಳ್ಳಬೇಕೆಂಬ ಹಂಬಲವೇ ಸಂಘದ ಮೂಲ ಆಶಯ.

ಸಂಘದ ಪ್ರಮುಖ ಚಟುವಟಿಕೆಗಳೇನು?
ಕನ್ನಡದ ಮೊದಲ ಸಾಹಿತ್ಯ ಪ್ರಶಸ್ತಿಯನ್ನು ಆರಂಭಿಸಿದ ಹೆಗ್ಗಳಿಕೆ ಕನ್ನಡ ಸಂಘದ್ದು. ೧೯೭೯ರಲ್ಲಿ ಆರಂಭಗೊಂಡ ಮುದ್ದಣ ಸ್ಮಾರಕ ಕಾವ್ಯ ಪ್ರಶಸ್ತಿ ಇಂದು ನಾಡಿನ ಪ್ರತಿಷ್ಠಿತ ಗೌರವವಾಗಿ ಮೂಡಿಬಂದಿದೆ. ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ ಕನ್ನಡ ನಾಡು ನುಡಿಗೆ ಅನುಪಮ ಸೇವೆ ಸಲ್ಲಿಸಿದ ಹಿರಿಯರ ವ್ಯಕ್ತಿಚಿತ್ರ ಪುಸ್ತಕ ಪ್ರಕಟಣೆ ನಡೆದಿದೆ. ಈಗಾಗಲೇ ಈ ಮಾಲಿಕೆಯಲ್ಲಿ ೫೦ಕ್ಕೂ ಅಧಿಕ ಕೃತಿಗಳು ಪ್ರಕಟವಾಗಿವೆ.

ತಿಂಗಳಿಗೊಂದು ಉಪನ್ಯಾಸ ಕಾರ್ಯಕ್ರಮ, ಆ ಉಪನ್ಯಾಸಗಳ ವಾರ್ಷಿಕ ಸಂಗ್ರಹ ‘ನುಡಿಹಾರ’ ಅಲ್ಲದೇ ಬೃಹತ್ ಗ್ರಂಥ ಪ್ರಕಟಣೆ, ವಿಚಾರಗೋಷ್ಠಿ, ಸಾಧಕರ ಸನ್ಮಾನ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ನಿರಂತರ ನಡೆಯುತ್ತಿವೆ. ಹರಿಕೃಷ್ಣ ಪುನರೂರು, ಸಿ.ಕೆ. ಪಡಿವಾಳ್, ಕುಲ್ಯಾಡಿ ಮಾಧವರಾಯರು ಮೊದಲಾದವರ ಸಹಕಾರ ಸ್ಮರಣೀಯ.

ಕರ್ನಾಟಕ ಏಕೀಕರಣದ ನೇತಾರ ಕೆ.ಬಿ. ಜಿನರಾಜ ಹೆಗ್ಡೆ ಜನ್ಮಶತಮಾನೋತ್ಸವದ ನೆನಪಿಗೆ ಕನ್ನಡ ಭವನದ ಸ್ಥಾಪನೆ ಕನ್ನಡ ಸಂಘದ ಮಹತ್ವದ ಕಾರ್ಯಗಳಲ್ಲಿ ಒಂದು. ಇದರೊಂದಿಗೆ ವರ್ಧಮಾನ ಪ್ರಶಸ್ತಿ ಪೀಠದ ಮೂಲಕ ಕನ್ನಡ ಅತ್ಯುತ್ತಮ ಕೃತಿಗಳನ್ನು ಗುರುತಿಸಿ ವರ್ಧಮಾನ ಪ್ರಶಸ್ತಿಗಳನ್ನು ನೀಡುವ ಕಾರ್ಯವೂ ನಡೆಯುತ್ತಿದೆ. ಮೊದಲ ವರ್ಧಮಾನ ಕಂಬಾರರ ‘ಜೈಸಿದ್ಧ ನಾಯ್ಕ’ ಕೃತಿಗೆ ಬಂತು. ಇಂದು ವರ್ಧಮಾನ ಕನ್ನಡದ ಗುಣಮಟ್ಟದ ಪ್ರಶಸ್ತಿ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಅಲ್ಲಮನ ಕುರಿತ ಆಸಕ್ತಿ ಯಾಕೆ ಹುಟ್ಟಿತು?
ವಯಸ್ಸಾಗುತ್ತಾ ಬಂದಂತೆ ಅಲ್ಲಮನ ದೃಷ್ಠಿ ಬದುಕಿಗೆ ಹತ್ತಿರ ಅನ್ನಿಸಿತು. ಬದುಕಿನ ದ್ವಂದ್ವವನ್ನು ಮೀರುವುದಕ್ಕೆ ಅಲ್ಲಮನಲ್ಲಿ ದಾರಿಗಳಿವೆ ಅನ್ನಿಸಿದೆ. ಅಲ್ಲಮನದ್ದು ನಿಶ್ಶಬ್ದದ ಬದುಕು. ಕೆಲವರು ಕೇಳುತ್ತಾರೆ. ಇದೆಲ್ಲಾ ಮುಂದೆ ಉಳಿಯುತ್ತದಾ? ಯಾಕೆ ಬೇಕು ಎಂದೆಲ್ಲಾ. ಇಂಥವರಿಗೆ ಉತ್ತರ ಕೊಡಬೇಕಿಲ್ಲ ಎಂದು ಕಲಿಸಿಕೊಟ್ಟವನೇ ಅಲ್ಲಮ. ಯಾವುದೂ ಉಳಿಯೋದೂ ಇಲ್ಲ. ಉಳಿಯಬೇಕೂಂತಲೂ ಇಲ್ಲ. ಅಲ್ಲಮಪೀಠದ ಮೂಲಕ ಈ ಅರಿವನ್ನು ವಿಸ್ತರಿಸೋದು ಮುಖ್ಯ.

ನಿಮ್ಮನ್ನು ವಿಮರ್ಶಕರು, ಸಮಾಜ ಸರಿಯಾಗಿ ಗುರುತಿಸಿದೆ ಅಂತ ಅನ್ನಿಸುತ್ತಿದೆಯಾ?
ಎಲ್ಲಾ ಕಾಲದಲ್ಲೂ ವಿಮರ್ಶೆ ಒಂದು ದ್ವೀಪವೇ. ಅಷ್ಟಕ್ಕೂ ನಮ್ಮ ಕಾಲದಲ್ಲಿಯೇ ಎಲ್ಲವೂ ಸಿಗಬೇಕೆನ್ನುವ ಹಟ ಯಾಕೆ. ಬಸವಣ್ಣ, ಅಲ್ಲಮನನ್ನು ನಾವು ಈಗ ಅಧ್ಯಯನ ಮಾಡ್ತಾ ಇಲ್ಲ್ವಾ? ಇನ್ನು ಯಾವತ್ತಾದರೂ ಯಾವುದಾದರೂ ವಿಮರ್ಶಕನ ಕೈಗೆ ಸಿಕ್ಕಾಗ ಒಳ್ಳೆಯ ಗೌರವ ಬಂದೀತು. ವಿಮರ್ಶೆಗಿಂತ ಬರೆದಾಗ ಸಿಗುವ ಸುಖ ದೊಡ್ಡದು. ಹುಲ್ಲಿಗೂ ಕೂಡ ಒಂದು ದ್ರಾವಣ ಸುಖವೆನ್ನುವುದಿದೆ. ಅದು ಸೃಷ್ಟಿಕ್ರಿಯೆಯಿಂದ ಒದಗುವಂತಾದ್ದು. ಪ್ರತಿಯೊಬ್ಬ ಬರಹಗಾರನಿಗೂ ಈ ತಾಯ್ತನದ ಆನಂದ ಸಿಕ್ಕೇ ಸಿಗುತ್ತದೆ. ಅದಕ್ಕಿಂತ ದೊಡ್ಡದು ಯಾವುದಿದೆ ಹೇಳಿ.

ನಿಮ್ಮ ಇತ್ತೀಚೆಗಿನ ಬರವಣಿಗೆಯ ಕುರಿತು.
ಇಂದು ನನ್ನ ಜೀವನವೇ ಸಂಘಟನೆ ಮತ್ತು ಬರವಣಿಗೆ. ಈಗ ‘ಮುಖಾಂತರ’ ಎಂಬ ಕಾದಂಬರಿ ಬರೆಯುತ್ತಿದ್ದೇನೆ. ನಮ್ಮ ಸುತ್ತಲಿನ ಪ್ರಕೃತಿಯ ರಹಸ್ಯವನ್ನು ಬರವಣಿಗೆಯ ಮೂಲಕ ಅರಿಯುವ ಪ್ರಯತ್ನದಲ್ಲಿದ್ದೇನೆ. ಸತ್ಯವನ್ನು ಬಂಗಾರದ ಕರಂಡಿಕೆಯಲ್ಲಿ ಮುಚ್ಚಿಡಲಾಗಿದೆ ಎಂದು ನಮ್ಮ ಹಿರಿಯರು ಹೇಳಿದ್ದರು. ನನಗನ್ನಿಸುತ್ತದೆ; ಮುಚ್ಚಿಟ್ಟದ್ದು ಮಾತ್ರವಲ್ಲ. ಕೆಳಗೆ ಆ ಬಂಗಾರದ ಪಾತ್ರೆಗೆ ಬೆಂಕಿ ಇಡಲಾಗಿದೆ. ಅದರ ಕಾವಿಗೆ ಕರಂಡಿಕೆಯ ಮುಚ್ಚಳ ಕುಣಿಯುತ್ತಿದೆ ಅಂತ. ‘ಮುಖಾಂತರ’ ಕಾದಂಬರಿ ನನ್ನ ಈ ಅರಿವಿನ ಅಭಿವ್ಯಕ್ತಿ ಅನ್ನಿಸಿದೆ.

ಇನ್ನು ಇತ್ತೀಚೆಗೆ ಕೆಲವು ಕವಿತೆಗಳನ್ನು ಬರೆದಿದ್ದೇನೆ– ‘ಮನದ ಮುಂದಿನ ಮಾಯೆ’ ಎಂಬ ಶೀರ್ಷಿಕೆಯಲ್ಲಿ. ದೇಹದ ಭಾಷೆ ಬೇರೆ, ಕಾವ್ಯದ ಭಾಷೆ ಬೇರೆ. ಒಬ್ಬ ಎಂಬತ್ತರ ಮನುಷ್ಯನಿಗೆ ೧೯ರ ತರುಣಿಯಲ್ಲಿ ಕಾಮಾಪೇಕ್ಷೆ ಉಂಟಾಗಿ ಹುಡುಗಿ ಅದನ್ನು ನಿರಾಕರಿಸಿದಾಗ ನೋವಿನಿಂದ ಸಾಯುತ್ತಾನೆ. ಆಗ ಆ ಹುಡುಗಿಗೆ ಛೇ.. ಆ ಮನುಷ್ಯನ ಅಪೇಕ್ಷೆಯನ್ನು ಈಡೇರಿಸಿದ್ದರೆ ಅಂತ ಅನ್ನಿಸುತ್ತದೆ.

ಇದು ದೇಹಭಾಷೆ. ಈ ಕಥೆ ಕೇಳಿದ ಇನ್ನೊಬ್ಬಳು ಹುಡುಗಿ ಇಂತಹದ್ದೇ ಸಂದರ್ಭ ಬಂದಾಗ ಪಾಪ ಸಾಯಲಿ ಎಂದು ಒಪ್ಪಿಕೊಳ್ಳುತ್ತಾಳೆ. ಆಗ ಮುದುಕನಿಗೆ ಇವಳನ್ನು ಬಯಸೋದು ತಪ್ಪು ಅಂತ ಮನಸ್ಸಲ್ಲಿ ಬರೋದು ಕಾವ್ಯ ಭಾಷೆ. ಇವುಗಳ ಜಿಜ್ಞಾಸೆ ಇತ್ತೀಚೆಗಿನ ನನ್ನ ಕವಿತೆಗಳ ಒಲವು. ಲಕ್ಷ್ಮೀಶ ತೋಳ್ಪಾಡಿಯವರು ಈ ಕವಿತೆಗಳನ್ನು ಓದಿ ಅಲ್ಲಮ ನಿಮಗೆ ಒಲಿದಿದ್ದಾನೆ ಎಂದಿದ್ದಾರೆ.

ಇವತ್ತಿನ ಕನ್ನಡ ಸಾಂಸ್ಕೃತಿಕ ಲೋಕದ ಬಗೆಗೆ..
ಇವತ್ತಿನ ಪಕ್ಷ ರಾಜಕಾರಣಕ್ಕೆ ಹೋಲಿಸಿದರೆ ಸಾಂಸ್ಕೃತಿಕ ರಾಜಕಾರಣ ಕೆಟ್ಟು ಹೋಗಿಲ್ಲ ಅನ್ನಿಸುತ್ತದೆ. ಸಾಂಸ್ಕೃತಿಕ ಲೋಕದಲ್ಲಿ ಸೈದ್ಧಾಂತಿಕ ನಿಷ್ಠೆ ಇದೆ. ಅಸಹನೆ, ಅಸೂಯೆ, ತಮಗಿಂತ ಭಿನ್ನ ಧೋರಣೆಯ ವಿಚಾರಗಳ ಖಂಡನೆ, ತಮ್ಮ ವಿಚಾರಗಳ ಹೊಗಳಿಕೆ, ಗುಂಪುಗಾರಿಕೆ ಎಲ್ಲಾ ಕಾಲದಲ್ಲೂ ಇತ್ತು. ಪ್ರಗತಿಪರ ಲೇಖಕರನ್ನು, ಅನಕೃ ಅವರನ್ನು ಕಾದಂಬರಿಕಾರರೇ ಅಲ್ಲ ಎಂದು ಹೇಳಿದವರಿಲ್ಲವೇ.. ಇವತ್ತು ಮಾಧ್ಯಮಗಳಿಂದಾಗಿ ಈ ಸಂಗತಿ ಹೆಚ್ಚು ಜನರಿಗೆ ತಿಳಿಯುತ್ತಿದೆ, ಅಷ್ಟೇ. ಅಂತರಂಗದಲ್ಲಿ ಅದು ಆರೋಗ್ಯಪೂರ್ಣವಾಗಿಯೇ ಇದೆ ಅನ್ನಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.