ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಜನರ ಒಡಲುರಿಯಿಂದ

Last Updated 24 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

‘ಗಾಯಗೊಳಿಸದೇ ಕತ್ತರಿಸಬಲ್ಲ, ಅದನ್ನು ಪ್ರಯೋಗಿಸಿದವರ ಗೌರವ ಹೆಚ್ಚಿಸುವಂತಹ, ಇತಿಹಾಸದಲ್ಲಿಯೇ ಸರಿಸಾಟಿಯಿಲ್ಲದ ಶಸ್ತ್ರ- ಅಹಿಂಸೆ...’ ಎಂದು ವ್ಯಾಖ್ಯಾನಿಸಿದ ಮಾರ್ಟಿನ್ ಲೂಥರ್ ಕಿಂಗ್, ಗಾಂಧೀಜಿಯ ಆಶಯಗಳನ್ನು ಜೀವಿಸಿದವರು. ಕಪ್ಪು ಜನರ ವಿಮೋಚನೆಯ ಹಾಗೂ ಸರ್ವರ ಸಹಭಾಗಿತ್ವದ ಸಮಾನತೆಯ ಸಮಾಜದ ಕನಸಿನ ಹಾದಿಯಲ್ಲಿ ನಡೆದ ಮಹಾನ್ ಮಾನವತಾವಾದಿ ಅವರು. ‘ವಾಷಿಂಗ್ಟನ್ ಚಲೋ’ ಹೆಸರಿನ ಸಮಾವೇಶದಲ್ಲಿ ಕಪ್ಪು ಜನರನ್ನುದ್ದೇಶಿಸಿ ಅವರು ಮಾಡಿದ ಚಾರಿತ್ರಿಕ ಭಾಷಣಕ್ಕೆ (1963ರ ಆಗಸ್ಟ್ 28) ಈಗ ಭರ್ತಿ ಐವತ್ತು ವರ್ಷ. ಈ ಭಾಷಣದಲ್ಲಿನ ಮಾತುಗಳು ಈಗಲೂ ಕಾವು ಉಳಿಸಿಕೊಂಡಿರುವುದು ಪುಳಕವನ್ನೂ, ಲೂಥರ ಕಿಂಗ್ ಅವರ ಕನಸುಗಳು ಅಪೂರ್ಣವಾಗಿ ಇರುವುದು ವಿಷಾದವನ್ನೂ ಏಕ ಕಾಲದಲ್ಲಿ ಉಂಟು ಮಾಡುತ್ತದೆ.

೧೯೬೩ನೇ ಇಸವಿಯ ಆಗಸ್ಟ್ ೨೮. ‘ನೀಗ್ರೊಗಳಿಗೆ ಅವರ ಜನ್ಮದತ್ತ ಹಕ್ಕುಗಳನ್ನು ನೀಡುವ ತನಕ ಅಮೆರಿಕದಲ್ಲಿ ನೆಮ್ಮದಿಯಾಗಲೀ, ಶಾಂತಿಯಾಗಲೀ ನೆಲಸಲು ಸಾಧ್ಯವಿಲ್ಲ. ನ್ಯಾಯದ ಪ್ರಖರ ದಿನ ಉದಯಿಸುವವರೆಗೆ ಬಂಡಾಯದ ಸುಂಟರಗಾಳಿ ದೇಶದ ಅಡಿಪಾಯವನ್ನು ಅಲ್ಲಾಡಿಸುತ್ತಲೇ ಇರುತ್ತದೆ. ಅನ್ಯಾಯ, ಅನೀತಿಯ ಜನಾಂಗೀಯ ಹೂಳು ನೆಲದಿಂದ ಭ್ರಾತೃತ್ವದ ಗಟ್ಟಿ ನೆಲದ ಮೇಲೆ ನಮ್ಮ ದೇಶವನ್ನು ಎತ್ತಿ ನಿಲ್ಲಿಸುವ ಕಾಲ ಕೂಡಿ ಬಂದಿದೆ...

ನನಗೆ ಒಂದು ಕನಸಿದೆ.
ನನ್ನ ನಾಲ್ಕು ಪುಟ್ಟ ಮಕ್ಕಳು ತಮ್ಮ ಚರ್ಮದ ಬಣ್ಣದಿಂದಲ್ಲದೇ ಗುಣನಡತೆಯಿಂದ ಮಾನ್ಯತೆ ಪಡೆಯುವ ದೇಶದಲ್ಲಿ ಮುಂದೊಂದು ದಿನ ಬಾಳಬೇಕೆಂಬ ಕನಸು ನನ್ನದು.

ನನಗೆ ಒಂದು ಕನಸಿದೆ.
ದೂರದ ಅಲಬಾಮಾದಲ್ಲಿನ ಕಪ್ಪು ಬಾಲಕರು ಮತ್ತು ಬಾಲಕಿಯರು ಬಿಳಿಯ ಬಾಲಕರು ಮತ್ತು ಬಾಲಕಿಯರೊಂದಿಗೆ ಸೋದರ-ಸೋದರಿಯರಂತೆ ಕೈ ಜೋಡಿಸಲು ಸಾಧ್ಯವಾಗುವಂತಹ ದಿನ ಬರಲೆಂಬುದು ನನ್ನ ಕನಸು.

ನನಗೆ ಇನ್ನೊಂದು ಕನಸಿದೆ...’ 
ವಾಷಿಂಗ್ಟನ್‌ನ ಲಿಂಕನ್ ಸ್ಮಾರಕದ ಅಡಿ ಮೆಟ್ಟಿಲ ಮೇಲೆ ನಿಂತು ಹೀಗೆ ನಿರರ್ಗಳವಾಗಿ ಕನಸುಗಳ ಬಗ್ಗೆ ಮಾತನಾಡುತ್ತಿದ್ದವರು ನಾಗರಿಕ ಹಕ್ಕು ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ (ಜೂ). ಅದು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರ ಬೃಹತ್ ಸಮಾವೇಶ. ಎದೆಯಾಳದ ಭಾವನೆಗಳು ಮಾತಿನ ರೂಪ ತಾಳಿದಂತಿದ್ದ ಅವರ ಭಾಷಣದಲ್ಲಿ ಇದ್ದದ್ದು ವಿಷಾದದ ಛಾಯೆ, ಮಾನವೀಯ ತುಡಿತ ಹಾಗೂ ಸಮಾನತೆಯ ಹಂಬಲ. ವೇದನೆಯಲ್ಲಿ ಅದ್ದಿ ತೆಗೆದಂತಿದ್ದ ಒಂದೊಂದು ಮಾತೂ ಅಮೆರಿಕದ ಜನತೆಯ ಅಂತರಾತ್ಮವನ್ನೇ ಬಡಿದೆಬ್ಬಿಸುವಂತಿದ್ದವು.

ಅಬ್ರಹಾಂ ಲಿಂಕನ್ ಗುಲಾಮಗಿರಿಗೆ ವಿಮೋಚನೆ ಘೋಷಿಸಿ ಶತಮಾನ ತುಂಬಿತ್ತು. ಅದರ ದ್ಯೋತಕವಾಗಿ ಕಪ್ಪುವರ್ಣೀಯರು ಉದ್ಯೋಗ ಮತ್ತು ಸ್ವಾತಂತ್ರ್ಯಕ್ಕಾಗಿ ‘ವಾಷಿಂಗ್ಟನ್ ಚಲೋ’ ಹಮ್ಮಿಕೊಂಡಿದ್ದರು. ಪ್ರತಿ ವಲಯದಲ್ಲಿ, ಪ್ರತಿ ಹಂತದಲ್ಲಿ ತುಳಿತಕ್ಕೆ ಒಳಗಾಗುತ್ತಿದ್ದ ತನ್ನ ಜನರ ನೋವಿಗೆ ಪ್ರಬಲ ದನಿಯಾಗಿದ್ದರು ಕಿಂಗ್. 

ಅಮೆರಿಕ ನೀಡಿದ ಸ್ವಾತಂತ್ರ್ಯ- ಸಮಾನತೆಯ ಭರವಸೆಗಳನ್ನು ಪ್ರಾಮಿಸರಿ ನೋಟ್ಸ್‌ಗೆ ಹೋಲಿಸುತ್ತಾ, ‘ನೀಗ್ರೊಗಳಿಗೆ ಅಮೆರಿಕ ಕೆಟ್ಟ ಚೆಕ್ ನೀಡಿದೆ. ಅದನ್ನೀಗ ನಗದು ಮಾಡಿಕೊಳ್ಳಲು ನಾವಿಲ್ಲಿಗೆ ಬಂದಿದ್ದೇವೆ... ನ್ಯಾಯದ ಬ್ಯಾಂಕ್ ದಿವಾಳಿ ಎದ್ದಿದೆ ಎಂದು ನಂಬಲು ನಾವು ಸಿದ್ಧರಿಲ್ಲ... ನಮ್ಮ ಮಕ್ಕಳ ವ್ಯಕ್ತಿತ್ವವನ್ನೇ ಶೂನ್ಯವಾಗಿಸುವಂತಹ, ಅವರ ಘನತೆಯನ್ನೇ ಕಿತ್ತುಕೊಂಡಂತಹ ‘ಬಿಳಿಯರಿಗೆ ಮಾತ್ರ’ ಎಂಬ ನಾಮಫಲಕಗಳು ಎಲ್ಲಿಯ ತನಕ ಕಾಣಿಸುತ್ತವೆಯೋ ಅಲ್ಲಿಯವರೆಗೆ ನಮಗೆ ನೆಮ್ಮದಿ ಇಲ್ಲ. ನ್ಯಾಯ ನೀರಿನಂತೆ, ಸದ್ವರ್ತನೆ ಪ್ರಬಲ ತೊರೆಯಂತೆ ಹರಿದು ಬರುವತನಕ ನಮಗೆ ಸಮಾಧಾನವಿಲ್ಲ...’– ಅತೀಂದ್ರಿಯ ಶಕ್ತಿ ಮೈಹೊಕ್ಕಂತೆ ಅವರು ಮಾತನಾಡಿದ್ದರು.

ಸಭಿಕರ ಕಣ್ಣು ತೇವಗೊಂಡಿದ್ದವು. ದೂರದರ್ಶನದ ಮೂಲಕ ಕಾರ್ಯಕ್ರಮ ವೀಕ್ಷಿಸಿದ ಲಕ್ಷಾಂತರ ಜನರ ಮೈಮನಗಳಲ್ಲಿ ಮಿಂಚಿನ ಸಂಚಾರ. ಆ ಜನರಲ್ಲಿ ಅಧ್ಯಕ್ಷ ಜಾನ್ ಎಫ್ ಕೆನಡಿ ಕೂಡ ಸೇರಿದ್ದರು. ಬೆಳಗಾಗುವುದರಲ್ಲಿ ೩೨ ವರ್ಷದ ಕಿಂಗ್ ಎಲ್ಲರ ಮನೆ-ಮನಗಳನ್ನು ಹೊಕ್ಕಿದ್ದರು. 

ಬಿಳಿಯರ ಸರಪಳಿಯಲ್ಲಿ ಸಿಕ್ಕು ಆಫ್ರಿಕಾದಿಂದ ಅಮೆರಿಕ ಸೇರಿದ ಕಪ್ಪುವರ್ಣೀಯರನ್ನು ಲಿಂಕನ್ ನೂರು ವರ್ಷಗಳ ಹಿಂದೆ ಗುಲಾಮಗಿರಿಯಿಂದ ಮುಕ್ತಗೊಳಿಸಿದ್ದರು. ಆದರೆ ತಲತಲಾಂತರದಿಂದ ತಮ್ಮ ಚಾಕರಿ ಮಾಡುತ್ತಿದ್ದವರನ್ನು ಸಮಾನವಾಗಿ ಕಾಣಲು ಬಿಳಿಯರಿಗೆ ಸಾಧ್ಯವಾಗಲಿಲ್ಲ. ತಮ್ಮನ್ನು ಮನುಷ್ಯರೆಂದೇ ಪರಿಗಣಿಸದ ಸಮಾಜದಲ್ಲಿ ಕಪ್ಪುವರ್ಣೀಯರ ಬದುಕು ದುರ್ಬರವಾಗಿತ್ತು. ಬಿಳಿಯರ ಧಾಷ್ಟ್ಯ ಹಾಗೂ ದಬ್ಬಾಳಿಕೆಯಲ್ಲಿ ಆತ್ಮದ ಬೆಳಕೇ ಕಳೆದುಹೋಗಿತ್ತು. ಅವರ ನೋವು, ಅವಮಾನಗಳು ನಾಗರಿಕ ಹಕ್ಕು ಚಳವಳಿಯಾಗಿ ರೂಪು ಪಡೆದದ್ದು ೨೦ನೆಯ ಶತಮಾನದಲ್ಲಿ.

ವಾಷಿಂಗ್ಟನ್‌ನಲ್ಲಿ ಅಂದು ಲೂಥರ್ ಕಿಂಗ್ ಮಾಡಿದ ಭಾಷಣ ಹೋರಾಟದ ತೀವ್ರತೆಯನ್ನು ಹೆಚ್ಚಿಸಿತ್ತು, ಅನೇಕರ ಕಣ್ಣು ತೆರೆಸಿತ್ತು. ಅದುವರೆಗೆ ಗಲಭೆಯ ಚಿತ್ರಗಳನ್ನು ವೈಭವೀಕರಿಸುತ್ತಿದ್ದ ಮಾಧ್ಯಮಗಳು ಮತದಾನದ ಹಕ್ಕು, ಉದ್ಯೋಗ ಹಾಗೂ ಗೌರವಗಳ ಕುರಿತು ಬರೆಯತೊಡಗಿದವು. ಆ ದಿನದ ನ್ಯೂಯಾರ್ಕ್ ಟೈಮ್ಸ್ ವರದಿ ಹೀಗಿತ್ತು: ‘ಎಲ್ಲರಿಗಿಂತ ಉತ್ಕೃಷ್ಟವಾಗಿ ಮಾತನಾಡಿದ ಡಾ. ಕಿಂಗ್, ಲಿಂಕನ್ ಹಾಗೂ ಗಾಂಧಿಯ ಸಂಕೇತದಂತೆ ತೋರುತ್ತಿದ್ದರು. ಪ್ರತಿಭಟನಾಕಾರರು ತಮ್ಮ ದೂರದ ನಡಿಗೆ ಸಾರ್ಥಕವಾಯಿತೆಂಬ ಭಾವದಲ್ಲಿ ತಮ್ಮೂರಿನತ್ತ ಹೆಜ್ಜೆ ಹಾಕಿದ್ದರು...’

ನಿಜ, ಭಾರತದ ಸ್ವಾತಂತ್ರ್ಯ ಹೋರಾಟದ ನೆನಪನ್ನು ಮರುಕಳಿಸುವಂತಿತ್ತು ‘ವಾಷಿಂಗ್ಟನ್ ಚಲೋ’. ಕಿಂಗ್ ಸುತ್ತ ನೆರೆದ ಅನೇಕರ ತಲೆಯ ಮೇಲೆ ಗಾಂಧೀ ಟೋಪಿಯಿತ್ತು. ಕಿಂಗ್ ಸಹಚರ ಆಂಡ್ರ್ಯೂ ಯಂಗ್ ಹೇಳುತ್ತಾರೆ: ‘ವಾಷಿಂಗ್ಟನ್ ಚಲೋ- ದಂಡೀಯಾತ್ರೆಯ ಪ್ರತಿರೂಪದಲ್ಲಿ ಹಮ್ಮಿಕೊಂಡಿದ್ದು. ನಮ್ಮ  ಘೋಷಣೆ, ಹೋರಾಟದ ವಿಧಾನ... ಪ್ರತಿಯೊಂದಕ್ಕೂ ಗಾಂಧೀಜಿಯೇ ಸ್ಫೂರ್ತಿಯಾಗಿದ್ದರು’.

ಈ ಐತಿಹಾಸಿಕ ಘಟನೆ ನಡೆದ ಮರುವರ್ಷವೇ ಅಧ್ಯಕ್ಷ ಲಿಂಡನ್ ಜಾನ್ಸನ್– ವ್ಯಕ್ತಿಯ ಜನಾಂಗ, ಬಣ್ಣ, ಮೂಲದೇಶ, ಧಾರ್ಮಿಕ ನಂಬಿಕೆ ಹಾಗೂ ಲಿಂಗ ತಾರತಮ್ಯಕ್ಕೆ ವಿದಾಯ ಹೇಳುವ ನಾಗರಿಕ ಹಕ್ಕು ಕಾಯ್ದೆಗೆ ಸಹಿ ಹಾಕಿದರು. ಈ ಸಾಧನೆಯ ಕೇಂದ್ರದಲ್ಲಿ ಲೂಥರ್ ಕಿಂಗ್ ನಿಂತಿದ್ದರು. ‘ಟೈಮ್’ ಪತ್ರಿಕೆಯ ವಾರ್ಷಿಕ ವ್ಯಕ್ತಿ ಗೌರವಕ್ಕೆ ಪಾತ್ರರಾದ ಅವರು ಸಂದರ್ಶನವೊಂದರಲ್ಲಿ ಹೇಳಿದ್ದು: ‘ನನ್ನ ಬದುಕನ್ನು ಕ್ರಿಯಾತ್ಮಕವಾಗಿ ರೂಪಿಸುವಲ್ಲಿ ಅತ್ಯಧಿಕ ಪ್ರಭಾವ ಬೀರಿದವರು ಮಹಾತ್ಮ ಗಾಂಧಿ’.
ಅಂದಹಾಗೆ, ಅಹಿಂಸೆಯ ಹತ್ಯಾರ ಕಿಂಗ್ ಕೈ ಸೇರಿದ್ದು ಹೇಗೆ?

ಕತ್ತಲಲ್ಲಿ ಕಂಡ ದೀಪ
ತಂದೆಯಂತೆ ಚರ್ಚ್‌ನಲ್ಲಿ ಮಿನಿಸ್ಟರ್ / ಪಾದ್ರಿ ಆಗಿ ಕಾಯಕ ಆರಂಭಿಸಿದ ಮಾರ್ಟಿನ್ ಲೂಥರ್ ಕಿಂಗ್ (ಜೂ), ಜನರಲ್ಲಿ ಸಮಾನತೆಯ ತತ್ವ ಬಿತ್ತಲು ಚರ್ಚ್ ಅತ್ಯುತ್ತಮ ವೇದಿಕೆಯೆಂದೇ ನಂಬಿದ್ದರು. ಸಮಾಜದ ದಮನಕಾರಿ ನೀತಿ ಅವರ ಮನಸ್ಸನ್ನು ತಣ್ಣಗೆ ಕೊರೆಯುತ್ತಿತ್ತು.

ಬೆಂಥಾಮ್ ಮತ್ತು ಮಿಲ್‌ರ ಬಹುಜನ ಕಲ್ಯಾಣ ಸಿದ್ಧಾಂತ; ಮಾರ್ಕ್ಸ್ ಮತ್ತು ಲೆನಿನ್‌ರ ಕ್ರಾಂತಿಕಾರಿ ಕಾರ್ಯಾಚರಣೆ; ರೂಸೋನ ನಿಸರ್ಗಕ್ಕೆ ಮರಳಿ ಎಂಬ ಆಶಾವಾದ; ಫ್ರೆಡ್‌ರಿಚ್ ನೀತ್ಸೆಯ ಸೂಪರ್‌ಮ್ಯಾನ್ ತತ್ವ... ಇವು ಯಾವೂ ಅವರಿಗೆ ನೈತಿಕ ಹಾಗೂ ಬೌದ್ಧಿಕ ಸಮಾಧಾನ ನೀಡಲಿಲ್ಲ. ಸತ್ಯ ಹಾಗೂ ನ್ಯಾಯಕ್ಕಾಗಿ ಹೋರಾಡುವ ಹಂಬಲ ಅವರಲ್ಲಿ ತೀವ್ರವಾಗಿತ್ತು. ಆದರೆ ದ್ವೇಷದ ವಿಷ, ಸಾವಿನ ನೋವು ಬೇಕಿರಲಿಲ್ಲ. ಸಾವು- ನೋವುಗಳಿಲ್ಲದೆ ನ್ಯಾಯಕ್ಕಾಗಿ ಹೋರಾಡುವುದು ಹೇಗೆ?... ಕಿಂಗ್ ಮನಸ್ಸು ಹೊಯ್ದಾಡುತ್ತಿತ್ತು. ಜೀಸಸ್ ಹೇಳಿದ ತತ್ವಬೋಧನೆಗಳು ವೈಯಕ್ತಿಕ ಮಟ್ಟದಲ್ಲಿ ಮಾತ್ರ ಸಾಧ್ಯ. ರಾಷ್ಟ್ರಮಟ್ಟದ ಜನಾಂಗೀಯ ಹೋರಾಟದಲ್ಲಿ ಬೇರೆಯದೇ ವಾಸ್ತವಿಕ ವಿಧಾನ ಬೇಕಾದೀತು ಎಂಬ ಯೋಚನೆ ನಿದ್ದೆಗೆಡಿಸಿತ್ತು.

ಭಾರತದ ಪ್ರವಾಸ ಮುಗಿಸಿ ಬಂದಿದ್ದ ಡಾ. ಜಾನ್ಸನ್‌ ಎನ್ನುವವರ ಧರ್ಮೋಪನ್ಯಾಸ ಕೇಳಲು ೨೧ರ ಹರಯದ ಕಿಂಗ್ ಫಿಲಡೆಲ್ಫಿಯಾಗೆ ಬಂದಿದ್ದರು. ಉಪನ್ಯಾಸದುದ್ದಕ್ಕೂ ಪ್ರಸ್ತಾಪವಾದದ್ದು ಗಾಂಧೀಜಿಯ ವಿಚಾರ. ಕಿಂಗ್ ಅದೆಷ್ಟು ಪ್ರಭಾವಿತರಾದರೆಂದರೆ ಕಾರ್ಯಕ್ರಮದ ಅರ್ಧದಲ್ಲೇ ಎದ್ದು ಗಾಂಧೀಜಿಯ ಪುಸ್ತಕಗಳನ್ನು ಹುಡುಕಿ ಹೊರಟರು. ಆವರೆಗೆ ಗಾಂಧೀಜಿ ಬಗ್ಗೆ ಕೇಳಿದ್ದರೂ ಗಂಭೀರವಾಗಿ ಅಧ್ಯಯನ ಮಾಡಿರಲಿಲ್ಲ. ಕ್ರೈಸ್ತಧರ್ಮದ ಪ್ರೀತಿಯ ಸಾರವನ್ನು ಗಾಂಧೀಜಿಯ ಅಹಿಂಸಾ ಮಾರ್ಗದಲ್ಲಿ ಕಂಡುಕೊಂಡ ಕಿಂಗ್, ‘ಇತಿಹಾಸದಲ್ಲಿ ನಡೆದ ಅಪೂರ್ವ ಗಾಂಧಿ ಪ್ರಯೋಗ’ಕ್ಕೆ ಬೆರಗಾಗಿಬಿಟ್ಟರು.

‘ಓದುತ್ತಾ ಹೋದಂತೆ ಗಾಂಧೀಜಿ ಆಳವಾಗಿ ನನ್ನಲ್ಲಿ ಇಳಿಯತೊಡಗಿದರು. ನನ್ನ ಅನುಮಾನಗಳೆಲ್ಲ ಮಾಯವಾಗಿದ್ದವು. ಅವರ ದಂಡೀಯಾತ್ರೆ, ಉಪವಾಸ ಸತ್ಯಾಗ್ರಹಗಳು ನನ್ನನ್ನು ಅಲುಗಾಡಿಸಿಬಿಟ್ಟವು. ಸತ್ಯಾಗ್ರಹದ ಪರಿಕಲ್ಪನೆ ತೀವ್ರವಾಗಿ ಸೆಳೆಯಿತು. ಅಹಿಂಸೆಯ ಅಗಾಧತೆಯನ್ನೂ ಪ್ರೀತಿಯ ನೈತಿಕತೆಯನ್ನೂ ವೈಯಕ್ತಿಕ ಮಟ್ಟಕ್ಕೂ ಮಿಗಿಲಾಗಿ ಪ್ರಬಲ, ಪರಿಣಾಮಕಾರಿ ಸಾಮಾಜಿಕ ಶಕ್ತಿಯನ್ನಾಗಿ ಪರಿವರ್ತಿಸಿದ ಗಾಂಧೀಜಿಯ ಹೆಜ್ಜೆ ಇತಿಹಾಸದಲ್ಲೇ ಮೊದಲು’- ತಮ್ಮ ಮೇಲಿನ ಗಾಂಧೀಜಿಯ ಪ್ರಭಾವವನ್ನು ಹೀಗೆ ದಾಖಲಿಸುವ ಲೂಥರ್ ಕಿಂಗ್ ಅವರಿಗೆ, ಬಂದೂಕು, ಬಾಂಬ್‌ಗಳ ನೆರವಿಲ್ಲದೆ ಸತ್ಯ ಹಾಗೂ ಅಹಿಂಸೆಯ ಬಲದಿಂದ ಕಪ್ಪು ವರ್ಣೀಯರ ನಾಗರಿಕ ಹಕ್ಕುಗಳಿಗಾಗಿ ಹೋರಾಡುವುದು ಸಾಧ್ಯವೆನ್ನಿಸಿತು.

ಅಮೆರಿಕದ ಕೆಲವು ಆಫ್ರಿಕನ್ ಮುಖಂಡರು ೧೯೩೦ರ ದಶಕದಲ್ಲೇ ಗಾಂಧೀಜಿಯ ವಿಧಾನಗಳನ್ನು ತಮ್ಮಲ್ಲಿ ಅಳವಡಿಸುವುದರ ಕುರಿತು ಚಿಂತನೆ ನಡೆಸಿದ್ದರು. ಸತ್ಯಾಗ್ರಹಿಗಳನ್ನು ಭೇಟಿಯಾಗಲು ಭಾರತಕ್ಕೂ ಬಂದಿದ್ದರು.

ಬ್ರಿಟಿಷ್ ಶಕ್ತಿಯ ವಿರುದ್ಧ ಭಾರತದಲ್ಲಿ ನಡೆಯುತ್ತಿದ್ದ ಬೃಹತ್ ಪ್ರಮಾಣದ ಸ್ವಾತಂತ್ರ್ಯ ಸಂಗ್ರಾಮದ ತಂತ್ರಗಳನ್ನು ಅಮೆರಿಕದ ಅಲ್ಪಸಂಖ್ಯಾತ ಕಪ್ಪು ವರ್ಣೀಯರನ್ನು ಸಮಾಜದ ಪ್ರಮುಖ ವಾಹಿನಿಗೆ ಸೇರ್ಪಡೆ ಮಾಡುವಂತಹ ಹಕ್ಕು ಹೋರಾಟಕ್ಕೆ ಬೆಸೆದುಕೊಳ್ಳುವುದು ಹೇಗೆಂಬ ಜಿಜ್ಞಾಸೆ ಆರಂಭವಾಗಿತ್ತು. ಆದರೆ ಭಾರತೀಯ ಸತ್ಯಾಗ್ರಹಿಗಳಂತೆ ತ್ಯಾಗ- ಬಲಿದಾನಗಳ ಮನೋಭೂಮಿಕೆಯನ್ನು ಕಪ್ಪುವರ್ಣೀಯರಲ್ಲಿಯೂ ಸಿದ್ಧಗೊಳಿಸಬೇಕಿತ್ತು. ಕ್ಷಾತ್ರ ಸ್ವಭಾವದ ಕರಿಯರಲ್ಲಿ ಅಹಿಂಸೆಯ ಪಾಠ ಕಲಿಸುವುದು ಸುಲಭವಾಗಿರಲಿಲ್ಲ. ಹೀಗಾಗಿ ಗಾಂಧೀಜಿಯಂತಹ ಒಬ್ಬ ಪ್ರಬಲ ನಾಯಕನಿಗಾಗಿ ಆ ನೆಲ ಕಾಯುತ್ತಿತ್ತು...

ವಸಾಹತು ಅಧಿಕಾರ ಧಿಕ್ಕರಿಸಲು, ಅದರ ಅಕ್ರಮ ನಡೆಗಳನ್ನು ಎತ್ತಿತೋರಿಸಲು ಹಾಗೂ ಬ್ರಿಟಿಷ್ ಸರ್ಕಾರದ ಜನವಿರೋಧೀ ನೀತಿಗಳಿಗೆ ಸವಾಲೊಡ್ಡಲು ಗಾಂಧೀಜಿ  ಸಿಕ್ಕ ಪ್ರತಿ ಅವಕಾಶವನ್ನೂ ಬಳಸಿಕೊಂಡರು. ಕಿಂಗ್ ಎದುರಿಗೆ ಅಂಥದೊಂದು ಅವಕಾಶ ಒದಗಿಬಂದಿತ್ತು. ಅದೇ ‘ಮಾಂಟಗೊಮೆರಿ ಬಸ್ ಪ್ರಕರಣ’.

ಸಾರ್ವಜನಿಕ ಬಸ್‌ನಲ್ಲಿ ಪಯಣಿಸುವಾಗ ಮುಂದಿನ ಆಸನದಲ್ಲಿ ಕಪ್ಪುವರ್ಣೀಯರು ಕುಳಿತುಕೊಳ್ಳುವಂತಿರಲಿಲ್ಲ. ಹಾಗೊಮ್ಮೆ ಕುಳಿತರೂ ಬಿಳಿಯರು ಬಂದರೆ ಜಾಗ ಬಿಟ್ಟುಕೊಡಬೇಕಿತ್ತು. ರೋಸಾ ಪಾರ್ಕ್ಸ್ ಎಂಬ ಕಪ್ಪುಮಹಿಳೆ ಬಿಳಿಯ ಪ್ರಯಾಣಿಕನಿಗೆ ತನ್ನ ಆಸನ ಕೊಡಲು ನಿರಾಕರಿಸಿದಾಗ ಆಕೆಯನ್ನು ಬಂಧಿಸಲಾಯಿತು. ಈ ಅವಮಾನವನ್ನು ಸಾಮೂಹಿಕ ಆಂದೋಲನವನ್ನಾಗಿ ಪರಿವರ್ತಿಸಿದ ಕಿಂಗ್, ಚಳವಳಿಯ ರೂಪು-ರೇಷೆಯಲ್ಲಿ ಅಹಿಂಸೆಯ ತಂತ್ರಗಳನ್ನು ಅಳವಡಿಸಿಕೊಂಡರು.

ರಾಜ್ಯದ ಸಾರಿಗೆ ವ್ಯವಸ್ಥೆಯನ್ನು ಕಪ್ಪುವರ್ಣೀಯರು ಬಹಿಷ್ಕರಿಸಿದರು. ಪ್ರತಿಭಟನೆಕಾರರು ಬಂಧನ, ಬೆದರಿಕೆಗಳಿಗೆ ಬಗ್ಗಲಿಲ್ಲ. ಹೋರಾಟ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆಯಿತು. ಬಸ್ ಪ್ರಯಾಣಿಕರಲ್ಲಿ ಬಹುತೇಕರು ಕಪ್ಪುವರ್ಣೀಯರೇ ಇದ್ದುದರಿಂದ ಕಂಪೆನಿಗೆ ಆರ್ಥಿಕ ನಷ್ಟ ಎದುರಾಯಿತು. ಕೊನೆಗೆ ಸುಪ್ರೀಂಕೋರ್ಟ್ ಸಾರ್ವಜನಿಕ ಬಸ್‌ಗಳಲ್ಲಿನ ತಾರತಮ್ಯವನ್ನು ಅಸಂವಿಧಾನಿಕವೆಂದು ಘೋಷಿಸುವ ಮೂಲಕ ಚಳುವಳಿ ಯಶಸ್ಸು ಕಂಡಿತು. ‘

ಅಹಿಂಸೆಯ ಕುರಿತು ನನಗಿದ್ದ ಪ್ರಶ್ನೆಗೆ ನಾನು ಓದಿದ್ದ ಎಲ್ಲ ಪುಸ್ತಕಗಳಿಗಿಂತ ನಿಖರ ಉತ್ತರವನ್ನು ಮಾಂಟಗೊಮೆರಿ ಅನುಭವ ನೀಡಿತು. ಪ್ರಜ್ಞಾಪೂರ್ವಕ ವಿಧಾನಕ್ಕಿಂತಲೂ ಮಿಗಿಲಾಗಿ ಅಹಿಂಸೆಯು ನನ್ನ ಜೀವನದ ಬದ್ಧತೆಯಾಯಿತು’ ಎನ್ನುತ್ತಾರೆ ಕಿಂಗ್.

ನಾಗರಿಕ ಹಕ್ಕು ಚಳವಳಿ ಅಮೆರಿಕದಲ್ಲಿ ಹೀಗೆ ತನ್ನ ಸ್ಪಷ್ಟ ಹೆಜ್ಜೆ ಇಟ್ಟಿತ್ತು. ಇಷ್ಟು ಅಗಾಧ ಪ್ರಮಾಣದಲ್ಲಿ ಇಷ್ಟು ದೀರ್ಘಕಾಲ ನಡೆದ ಚಳವಳಿ ಕಪ್ಪು ವರ್ಣೀಯರನ್ನು ಮಾತ್ರ ಒಗ್ಗೂಡಿಸುವುದರ ಜೊತೆಗೆ ರಾಷ್ಟ್ರದ ಗಮನವನ್ನೂ ಸೆಳೆದಿತ್ತು. ಕಿಂಗ್ ಪ್ರಶ್ನಾತೀತ ನೇತಾರರಾಗಿ ಹೊರಹೊಮ್ಮಿದ್ದರು. ಇಲ್ಲಿಂದ ಆರಂಭವಾದ ಹೋರಾಟದ ಅಹಿಂಸಾ ಜೈತ್ರಯಾತ್ರೆ ಕಿಂಗ್ ಅವರನ್ನು ಒಂದು ವಿಜಯದಿಂದ ಮತ್ತೊಂದಕ್ಕೆ ಕರೆದೊಯ್ಯಿತು.

ಪ್ರಬಲ ಅಸ್ತ್ರದ ಪ್ರಭಾವೀ ನಾಯಕ
‘ಮಾರ್ಟಿನ್ ನಾಯಕತ್ವದ ಮೇಲೆ ಗಾಂಧೀಜಿಯ ಜೀವನ-ಬೋಧನೆಗಳ ಪ್ರಭಾವ ಅಪಾರವಾದದ್ದು’- ಎನ್ನುತ್ತಾರೆ ಕಿಂಗ್ ಪತ್ನಿ ಕೊರೆಟ್ಟಾ. ಕಿಂಗ್ ಕೂಡ ರಾಜಕೀಯ ಕಾರ್ಯಾಚರಣೆಗೆ ಆಧ್ಯಾತ್ಮಿಕತೆಯನ್ನು ಬೆಸೆದರು. ಸತ್ಯ, ಕರುಣೆ ಹಾಗೂ ಪರಹಿತ ಚಿಂತನೆಗಳು ಗಾಂಧೀಜಿಯಂತೆ ಅವರಿಗೂ ಮಾನಸಿಕ ದೃಢತೆಯನ್ನು ನೀಡಿದ್ದವು.
ಅಹಿಂಸಾ ಹಾದಿಯ ಸತ್ಯಾಗ್ರಹ ತನ್ನ ಉದ್ದೇಶದ ಈಡೇರಿಕೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.

ಆದರೆ ಪ್ರಾಣಕ್ಕೆ, ಆಸ್ತಿಪಾಸ್ತಿಗೆ ಹೆಚ್ಚಿನ ಹಾನಿ ಸಂಭವಿಸಲಾರದು. ಬದ್ಧ ದ್ವೇಷಕ್ಕೆ- ಕೆಟ್ಟ ಭಾವನೆಗಳಿಗೆ ಇಲ್ಲಿ ಜಾಗವಿರುವುದಿಲ್ಲ. ಗಟ್ಟಿ ಮನಸ್ಸಿನ ಸಂಯಮಿಗೆ ಮಾತ್ರ ಅಹಿಂಸೆಯ ಹಾದಿ ಸಾಧ್ಯ. ಹಿಂಸೆಗೆ ಹೆಸರಾದ ಕಪ್ಪುವರ್ಣೀಯರಿಗೆ ಅಹಿಂಸಾ ತತ್ವವೇ ಹೊಸತು. ತುಳಿತದಿಂದ ತಪ್ತಗೊಂಡಿದ್ದ ಅವರಲ್ಲಿ ಆಕ್ರೋಶ ತುಂಬಿತ್ತು. ತಮ್ಮ ಸ್ವಭಾವಕ್ಕೆ ತದ್ವಿರುದ್ಧವಾದ ಅಹಿಂಸೆಯ ಕಾರ್ಯಾಚರಣೆಗೆ ಒಗ್ಗುವುದು ಅವರಿಗೆ ಕಷ್ಟದ ಕೆಲಸವಾಗಿತ್ತು. ಅದಕ್ಕಾಗಿ ಕಿಂಗ್ ತರಬೇತಿ ತರಗತಿಗಳನ್ನು ನಡೆಸಿದರು.

ಹೋರಾಟದ ಹಾದಿಯಲ್ಲಿ ಕಿಂಗ್ ೨೫ಕ್ಕೂ ಹೆಚ್ಚು ಬಾರಿ ಬಂಧನಕ್ಕೊಳಗಾದರು. ಭೀಕರ ಇರಿತಕ್ಕೂ ಒಳಗಾದರು. ಅವರ ಮನೆಯ ಮೇಲೆ ಬಾಂಬ್ ದಾಳಿಯಾಯಿತು. ಸಾವಿನ ಬೆದರಿಕೆಗಳು ನಿರಂತರವಾಗಿದ್ದವು. ಇವನ್ನೆಲ್ಲಾ ಲೆಕ್ಕಿಸದ, ಹೋರಾಟದ ಹಾದಿಯಿಂದ ವಿಚಲಿತರಾಗದ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಒಲಿದು ಬಂದಿತ್ತು. ಆ ಸಂದರ್ಭದಲ್ಲಿ ೩5 ವರ್ಷದ ಅವರು ಉದ್ಘರಿಸಿದ್ದು– ‘ಗಾಯಗೊಳಿಸದೇ ಕತ್ತರಿಸಬಲ್ಲ, ಅದನ್ನು ಪ್ರಯೋಗಿಸಿದವರ ಗೌರವ ಹೆಚ್ಚಿಸುವಂತಹ, ಇತಿಹಾಸದಲ್ಲಿಯೇ ಸರಿಸಾಟಿಯಿಲ್ಲದ ಶಸ್ತ್ರ- ಅಹಿಂಸೆ...’.

‘ಮಹಾತ್ಮ ಗಾಂಧೀಜಿಯಂತಹ ಜನರನ್ನು ಜಗತ್ತು ಇಷ್ಟಪಡುವುದಿಲ್ಲ. ಈ ಜಗತ್ತು ಕ್ರಿಸ್ತ ಹಾಗೂ ಲಿಂಕನ್ನರಂಥವರನ್ನೂ ಇಷ್ಟಪಡುವುದಿಲ್ಲ. ಭಾರತಕ್ಕೆ ತನ್ನ ಜೀವಮಾನ ಶ್ರಮಿಸಿದ ಗಾಂಧಿಯನ್ನು ಕೊಂದೇಬಿಟ್ಟರು. ಅಹಿಂಸೆಯನ್ನೇ ಉಸಿರಾಗಿಸಿಕೊಂಡಿದ್ದ ವ್ಯಕ್ತಿ ಹಿಂಸೆಯ ಕೈಯಲ್ಲಿ ಹತರಾದರು, ಪ್ರೀತಿಯೇ ಜೀವಾಳವಾಗಿದ್ದ ವ್ಯಕ್ತಿ ದ್ವೇಷಕ್ಕೆ ಬಲಿಯಾದರು.

ಯಾವ ಕಾರಣಕ್ಕೆ ಗಾಂಧಿಯನ್ನು ಕೊಂದರೋ ಅದೇ ಕಾರಣಕ್ಕೆ ಲಿಂಕನ್ನರನ್ನು ಹತ್ಯೆಗೈದರು. ಇದೇ ಇತಿಹಾಸದ ದಾರಿ ಎಂದೆನಿಸುತ್ತದೆ...’ ಎಂದು ಗಾಂಧೀಜಿಯ ಬಗೆಗೆ ಭಾವಪರವಶರಾಗಿ ಮಾತನಾಡುತ್ತಿದ್ದ ಕಿಂಗ್ ತಾವೂ ಅದೇ ಸಾಲಿಗೆ ಸೇರಿಕೊಂಡರು. ಪೌರಕಾರ್ಮಿಕರ ಪರಿಸ್ಥಿತಿ ಸುಧಾರಣೆಗಾಗಿ ನಡೆಯುತ್ತಿದ್ದ ಪ್ರತಿಭಟನೆಗೆ ಬೆಂಬಲ ನೀಡಲು ಟೆನೆಸ್ಸಿಗೆ ಬಂದಾಗ ಹಂತಕನ ಗುಂಡಿಗೆ ಬಲಿಯಾದಾಗ ಅವರಿಗಿನ್ನೂ ೩೯ರ ಹರಯ.

ಕನಸು ನನಸಾಯಿತೆ?
ಪ್ರತಿಯೊಬ್ಬರ ಎದೆಯಲ್ಲಿ ಬೆಚ್ಚಗಿನ ಕನಸಾಗಿ, ಹೋರಾಟದ ಬೆಳಕಾಗಿ ಮುನ್ನಡೆಸಿದ ಮಾರ್ಟಿನ್ ಲೂಥರ್ ಕಿಂಗ್ ಅವರ ‘ಐ ಹ್ಯಾವ್ ಎ ಡ್ರೀಮ್’ ಮಾತುಗಳು ಸರ್ವಕಾಲಕ್ಕೂ ಸ್ಫೂರ್ತಿದಾಯಕ. ‘ಗಾಂಧೀಜಿ ಇರದೇ ಇದ್ದರೆ ಅವರ ಸಂದೇಶ ಅಮೆರಿಕ ಹಾಗೂ ಜಗತ್ತಿಗೆ ತಲುಪದೇ ಇದ್ದಿದ್ದರೆ ನಾನಿಂದು ನಿಮ್ಮೆದುರು ಅಮೆರಿಕದ ಅಧ್ಯಕ್ಷನಾಗಿ ನಿಲ್ಲುವುದು ಸಾಧ್ಯವೇ ಇರಲಿಲ್ಲ’ -ಎಂದು ಅಮೆರಿಕದ ಪ್ರಥಮ ಕಪ್ಪುವರ್ಣೀಯ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದ ವೇಳೆಯಲ್ಲಿ ನಮ್ಮ ಸಂಸತ್ತನ್ನು ಉದ್ದೇಶಿಸಿ ಹೇಳಿದ್ದರು. ಇಂದು ಅಮೆರಿಕ ಬಹಳಷ್ಟು ಬದಲಾಗಿದೆ.

ಕಪ್ಪುವರ್ಣೀಯರಿಗೆ ಸಮಾನ ಹಕ್ಕು ದಕ್ಕಿದೆ. ಶಾಲೆ, ಬಸ್ಸು, ಪಾರ್ಕ್, ನ್ಯಾಯಾಲಯ... ಎಲ್ಲವೂ ಮುಕ್ತವಾಗಿ ತೆರೆದುಕೊಂಡಿವೆ. ಇವನ್ನೆಲ್ಲಾ ನೋಡಿದರೆ ಲೂಥರ್ ಕಿಂಗ್ ಕನಸು ನನಸಾದಂತೆ ತೋರುತ್ತದೆ. ಆದರೆ ಇತ್ತೀಚೆಗೆ ನಡೆದ ಕಪ್ಪು ಯುವಕ ಟ್ರಾವನ್ ಮಾರ್ಟಿನ್‌ನ ಕೊಲೆ ಹಾಗೂ ಅದಕ್ಕೆ ಸಂಬಂಧಿಸಿದ ಘಟನಾವಳಿಗಳು ಜನಾಂಗೀಯ ಧೋರಣೆ ಇನ್ನೂ ಉಸಿರಾಡುತ್ತಿದೆ ಎಂಬ ಅನುಮಾನ ಹುಟ್ಟಿಸುತ್ತದೆ.

ಕಪ್ಪುವರ್ಣೀಯರನ್ನು ಕೆಲವೆಡೆ ತುಚ್ಛವಾಗಿ, ಇನ್ನೂ ಕೆಲವೆಡೆ ಗೂಂಡಾಗಳಂತೆ ನೋಡಲಾಗುತ್ತಿದೆ. ಟ್ರಾವನ್ ಮಾರ್ಟಿನ್ ಬಿಳಿಯನೊಬ್ಬನ ಕೈಯಲ್ಲಿ ಹತನಾದದ್ದು ಇಂತಹ ವಿಕೃತ ಮನಸ್ಸಿನಿಂದ. ಕಿಂಗ್ ಒಮ್ಮೆ ಹೇಳಿದ್ದರು: ‘ನಮ್ಮ ಮಹಾನಗರಗಳ ಇಲಿ ಮುತ್ತಿಕೊಂಡಿರುವ ಕೊಳಚೆ ಪ್ರದೇಶಗಳಲ್ಲಿ ಕಳೆದೆರಡು ವರ್ಷಗಳಿಂದ ಓಡಾಡುತ್ತಿರುವ ನನಗೆ ನನ್ನ ಕನಸು ಮಸುಕಾದಂತೆ ಭಾಸವಾಗುತ್ತಿದೆ. ಗಾಳಿಯೂ ಪ್ರವೇಶಿಸಲಾಗದ ಬಡತನದ ಪಂಜರದಲ್ಲಿ ಹತಾಶೆಯ ನಿರುದ್ಯೋಗಿ ಜನ ಉಸಿರುಗಟ್ಟಿ ಬೆವರುತ್ತಿರುವುದನ್ನು ಕಂಡಾಗ ನನ್ನ ಕನಸು ಮಸುಕಾದಂತೆ ನೋವಾಗುತ್ತಿದೆ...’.

‘ನಾವಿಂದು ಪ್ರತ್ಯೇಕತೆಯೊಂದಿಗೆ ಸಮಾನತೆ ಸಾಧಿಸಿದ್ದೇವೆ. ನಾವು ಸುಖಾಸುಮ್ಮನೆ ಬಲಿಪಶುಗಳಾಗುತ್ತಿರುವುದಕ್ಕೆ ಈ ಘಟನೆ ಉದಾಹರಣೆ ಅಷ್ಟೆ’ ಎನ್ನುತ್ತಾರೆ ವಿದ್ಯಾರ್ಥಿಯಾಗಿದ್ದಾಗ ಚಳವಳಿಯಲ್ಲಿ ಧುಮುಕಿದ್ದ ದಕ್ಷಿಣ ಕರೊಲಿನಾದ ಚಾರ್ಲ್ಸ್ ಡೆಲ್ಮಾಂಟ್ ಲಿಯೊನಾರ್ಡ್.

ವರ್ಣಬೇಧ ನೀತಿಯ ಸಂಪೂರ್ಣ ಮೂಲೋತ್ಪಾಟನೆ ಕಷ್ಟಸಾಧ್ಯ. ಕಾನೂನುಗಳು ಆಚರಣೆಗಳನ್ನು ಬದಲಿಸಬಲ್ಲವು, ಆದರೆ ಮನಸ್ಸುಗಳನ್ನು ಬದಲಿಸಲಾರವು. ಮನಸ್ಸುಗಳು ಬದಲಾಗಲು ಸೂಕ್ತ ಸಂಸ್ಕಾರ ಬೇಕು. ಲೂಥರ್ ಕಿಂಗ್ ಅಂತಹ ಬೇರುಮಟ್ಟದ ಬದಲಾವಣೆಗೆ ಕೈ ಹಾಕಿದ್ದರು. ಆದರೆ ಅವರ ಕನಸು ಸಂಪೂರ್ಣ ನನಸಾಗಿಲ್ಲ. ‘ಬ್ಯಾಡ್ ಚೆಕ್’ ಇನ್ನೂ ಪೂರ್ತಿ ನಗದಾಗಿಲ್ಲ.

ನಮ್ಮ ಮಹಾನಗರಗಳ ಇಲಿ ಮುತ್ತಿಕೊಂಡಿರುವ ಕೊಳಚೆ ಪ್ರದೇಶಗಳಲ್ಲಿ ಕಳೆದೆರಡು ವರ್ಷಗಳಿಂದ ಓಡಾಡುತ್ತಿರುವ ನನಗೆ ನನ್ನ ಕನಸು ಮಸುಕಾದಂತೆ ಭಾಸವಾಗುತ್ತಿದೆ. ಗಾಳಿಯೂ ಪ್ರವೇಶಿಸಲಾಗದ ಬಡತನದ ಪಂಜರದಲ್ಲಿ ಹತಾಶೆಯ ನಿರುದ್ಯೋಗಿ ಜನ ಉಸಿರುಗಟ್ಟಿ ಬೆವರುತ್ತಿರುವುದನ್ನು ಕಂಡಾಗ ನನ್ನ ಕನಸು ಮಸುಕಾದಂತೆ ನೋವಾಗುತ್ತಿದೆ... - ಮಾರ್ಟಿನ್ ಲೂಥರ್ ಕಿಂಗ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT