ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಿಗೆ ಬೆಂಕಿ...

ಮಕ್ಕಳ ಕಥೆ
Last Updated 21 ಮೇ 2016, 19:51 IST
ಅಕ್ಷರ ಗಾತ್ರ

ಕಾಡು ಅಂದ್ರೆ ಕಾಡು
ಕಾಡು ಇದ್ರೆ ನಾಡು
ಕಾಡು ಅಂದ್ರೆ ಬೀಡು
ಕಾಡು ಇದ್ರೆ ಗೂಡು

ಎಂಬ ಹಾಡು ರೇಡಿಯೋದಿಂದ ಕೇಳಿ ಬರುತ್ತಿತ್ತು. ಸುಶ್ರಾವ್ಯವಾದ ಈ ಹಾಡನ್ನು ಕೇಳುತ್ತಿದ್ದ ಅಜ್ಜನಿಗೆ ಮಕ್ಕಳ ಗದ್ದಲದಿಂದ ಬೇಸರವಾಗಿ, ‘ಏಯ್‌ ಇಲ್ಲಿ ಬರ್ರೋ, ಕಾಡಿನ ಕುರಿತಾಗಿ ಹಾಡು ಬರುತ್ತಿದೆ ಕೇಳ್ರಿ’ ಎಂದು ಕೂಗಿದ. ಅಜ್ಜನ ಮಾತಿಗೆ ಮಕ್ಕಳು ಸುಮ್ಮನಾದರು. ರೇಡಿಯೋದ ಹಾಡು ಸ್ಪಷ್ಟವಾಗಿ ಕೇಳತೊಡಗಿತು.

ಕಾಡಿನಿಂದ ಜೀವನ
ಕಾಡಿನಿಂದ ಪಾವನ
ಕಾಡಿನಿಂದ ಮಳೆ
ಮಳೆಯಿಂದ ಬೆಳೆ

ಹಾಡು ತೇಲುತ್ತಾ  ಬರುತ್ತಿತ್ತು. ಅಜ್ಜ ಮತ್ತು ಮಕ್ಕಳು ಸಂತೋಷದಿಂದ ಹಾಡನ್ನು ಕೇಳುತ್ತಿದ್ದರು. ಹಾಡಿನ ಲಯ ಮಕ್ಕಳ ಮನಸ್ಸನ್ನು ಹಿಡಿದಿಟ್ಟಿತು. ಮಕ್ಕಳ ಕಣ್ಣುಗಳಲ್ಲಿ ಬೆರಗು ಮೂಡಿತು. ಹಾಡು ತೇಲುತ್ತಾ ಬರುತ್ತಿತ್ತು.

ಕಾಡಿನ ವಿನಾಶ
ಜೀವದ  ಪಾಶ
ಕಾಡೊಂದು ಕೋಶ
ನಾಡಿಗೆ ಯಶ
ಹಾಡು ಮುಗಿಯಿತು. ‘ಕಾಡು ಅಂದ್ರೆ ಏನಜ್ಜ!’ ಮಕ್ಕಳು ಪ್ರಶ್ನೆ ಕೇಳಿದರು.

‘‘ನೋಡಿ ಮಕ್ಕಳೇ, ನೀವೆಲ್ಲಾ ನಾಡಿನಲ್ಲಿ, ನಗರದಲ್ಲಿ ಹುಟ್ಟಿ ಬೆಳೆದಿದ್ದೀರಿ. ಕಾಡು ಅಂದ್ರೆ ಭಯಂಕರವಾಗಿರ್‍ತದೆ. ಸುಂದರವಾಗಿರ್‍ತದೆ. ಹುಲಿ, ಚಿರತೆ, ಸಿಂಹ, ಆನೆ, ಜಿಂಕೆ, ಕಡವ, ಮೊಲ, ನಾಯಿ, ನರಿ, ಸಾರಂಗ, ಮುಳ್ಳಂದಿ, ಕಾಡಂದಿ, ಗಿಳಿ, ಗೊರವಂಕ, ನವಿಲು– ಹೀಗೆ ಅನೇಕ ಪ್ರಾಣಿಗಳು ಕಾಡಿನಲ್ಲಿ ಇರುತ್ತವೆ. ದಟ್ಟವಾದ ಗಿಡಗಳಿರುತ್ತವೆ.

ಆ ಗಿಡಗಳು ಎಂಥವೆಂದರೆ ಎತ್ತರೆತ್ತರ ಬೆಳೆದಿರುತ್ತವೆ. ಕಾಡು ಸಾವಿರಾರು ಹೆಕ್ಟೆರ್‌ ಪ್ರದೇಶದಲ್ಲಿ ಹಬ್ಬಿಕೊಂಡಿರುತ್ತದೆ. ಇಂಥ ಕಾಡಿಗೆ ‘ರಕ್ಷಿತ ಅರಣ್ಯ’ ಅಂತ ಹೇಳ್ತಾರೆ. ಅಲ್ಲಿ ಜನರು ವಾಸ ಮಾಡುವುದಿಲ್ಲ. ಕಾಡಿನಲ್ಲಿ ಪ್ರಾಣಿಗಳು, ಪಕ್ಷಿಗಳು, ಹಕ್ಕಿಗಳು ಹಾಯಾಗಿ ಇರುತ್ತವೆ.

ಮಳೆಗಾಲದಲ್ಲಿ ಕಾಡು, ಗಿಡ ಮರಗಳಾಗಿ, ಹಸಿರಿನ ಛಾವಣಿ ಹೊದಿಸಿದಂತೆ ಕಂಡು ಬರುತ್ತದೆ. ತಂಪಾಗಿರುತ್ತದೆ. ಮಳೆಗಾಲದಲ್ಲಿ ಕಾಡನ್ನು ನೋಡುವುದೇ ಒಂದು ತರದ ಸಂತೋಷ’’. ‘‘ನಮ್ಮ ಊರಲ್ಲಿಯೂ ಗಿಡ – ಮರಗಳಿವೆಯಲ್ಲ. ಕಾಡು ಹೀಗೆ ಇರುತ್ತದಾ’’ ಎಂದು ಶಿವು ಕೇಳಿದ.

‘‘ನೋಡು ಶಿವು, ಊರಲ್ಲಿ ಅಲ್ಲೊಂದು ಇಲ್ಲೊಂದು ಮರ ಇರುತ್ತದೆ ಅಷ್ಟೇ. ಕಾಡಿನಲ್ಲಿ ಬರೀ ಮರಗಳೇ ಇರುತ್ತವೆ’’ ಎಂದ ಅಜ್ಜ.
‘‘ಕಾಡಿನಿಂದಲೇ ನಾಡು ಎಂದು ಹಾಡು ಕೇಳಿದೆವಲ್ಲ, ಅದು ನಿಜ. ಕಾಡಿನಿಂದಲೇ ನಮಗೆ  ಏನೆಲ್ಲಾ ಸಿಗುತ್ತದೆ, ಹೌದಾ ಅಣ್ಣಾ!’’ ಎಂದು ಶಿವು ಪ್ರಶ್ನೆ ಹಾಕಿದ.
‘‘ಹ್ಞೂಂ... ಮಗ ಕಾಡಿನಿಂದಲೆ ನಾಡು ಇರೋದು.

ಕಾಡು ಇರದಿದ್ದರೆ ನಾಡೇ ಇಲ್ಲ’’ ಎನ್ನುವ ಅಜ್ಜನ ಮಾತಿಗೆ– ‘‘ಹೌದಾ! ಹ್ಞಾಂ...’’ ಎಂದವು ಮಕ್ಕಳು.
‘‘ಅಜ್ಜಾ ಅಜ್ಜಾ, ಮೊನ್ನೆ ಟೀವಿಯಲ್ಲಿ ‘ಕಾಡಿಗೆ ಬೆಂಕಿ’ ಎಂದು ತೋರಿಸುತ್ತಿದ್ದರು. ಕಾಡಿಗೆ ಬೆಂಕಿ ಹೇಗೆ ಬೀಳುತ್ತದೆ. ಬೆಂಕಿ ತಾನಾಗಿ ಬೀಳುತ್ತೇನು?’ ಮಕ್ಕಳ ಪ್ರಶ್ನೆ ಮುಂದುವರಿಯಿತು.

‘‘ಮಕ್ಕಳೇ ಒಳ್ಳೆಯ ಪ್ರಶ್ನೆ. ಕಾಡಿಗೆ ಬೆಂಕಿ ತಾನಾಗಿ ಬೀಳೋದು ಕಡಿಮೆ. ಕೆಲ ಕಿಡಿಗೇಡಿಗಳು ಬೇಕೆಂದೇ ಕಾಡಿಗೆ ಬೆಂಕಿಯನ್ನು ಹಾಕುತ್ತಾರೆ. ಬೇಸಿಗೆ ಕಾಲದಲ್ಲಿ ಗಿಡ–ಮರಗಳಿಂದ ಎಲೆಗಳು ಉದುರುತ್ತವೆ. ಗಿಡಗಳು, ಮುಳ್ಳುಕಂಟಿಗಳು ಒಣಗಿರುತ್ತವೆ.  ಆಗ ಯಾರಾದರೂ ಕಡ್ಡಿ ಗೀರಿದರೋ, ಬೀಡಿ – ಸಿಗರೇಟ್‌ ಸೇದಿ ಬಿಸಾಡಿದರೋ, ಬೆಂಕಿ ಹತ್ತಿಕೊಳ್ಳುತ್ತದೆ. ಗಾಳಿಯಂತೂ ಬೀಸುತ್ತಿರುತ್ತೆ. ಸುಡು ಬಿಸಿಲು ಬೇರೆ.

ಹೀಗಾಗಿ ಬೆಂಕಿ ಧಗ್ಗನೆ ಹತ್ತಿ ಉರಿಯತೊಡಗುತ್ತದೆ. ಗಾಳಿ ಹೆಚ್ಚಾದಂತೆಲ್ಲಾ ಬೆಂಕಿ ಹಬ್ಬುತ್ತಾ ಹಬ್ಬುತ್ತಾ ಇಡೀ ಕಾಡನ್ನು ನಾಶ ಮಾಡಿಬಿಡುತ್ತದೆ. ಕಾಡಿನಲ್ಲಿಯ ಪ್ರಾಣಿಗಳು ಓಡಿ ಹೋಗಲಾರದೆ ಸತ್ತು ಹೋಗುತ್ತವೆ. ಅಪಾರ ಗಿಡ–ಮರಗಳು ಸುಟ್ಟು ಬೂದಿಯಾಗುತ್ತವೆ. ಹಸಿರನಿಂದ ಕಂಗೊಳಿಸುತ್ತಿದ್ದ ಕಾಡು, ಮರ ಹೊತ್ತು ಉರಿದಂತೆ ಕಾಣುತ್ತದೆ’’ ಎಂದನು ಅಜ್ಜ.

‘‘ಕಾಡಿಗೇಕೆ ಬೆಂಕಿ ಹಚ್ಚುತ್ತಾರೆ?’’
‘‘ಬೀಡಿ  ಸಿಗರೇಟು ಆರಿಸಬೇಕೆನ್ನುವುದು ತಿಳಿಯುವುದಿಲ್ಲೇನು? ಅಂಥರನ್ನು ಹಿಡಿದು ಹೊಡೆಯಬೇಕು. ಪೊಲೀಸರಿಗೆ ಕೊಡಬೇಕು’’ ಎಂದವು ಮಕ್ಕಳು.
‘‘ಅಜ್ಜಾ  ಕಾಡು ಸುಟ್ಟು ಬೂದಿಯಾಯ್ತು ಅಂತೀಯಲ್ಲಾ, ಮತ್ತೇನು ಮಾಡಬೇಕು’’.

‘‘ನೋಡಿ ಮಕ್ಕಳೇ, ಮತ್ತೆ ಸಸಿಗಳನ್ನು ಹಚ್ಚಬೇಕು. ಸಸಿ ಹಚ್ಚಬೇಕಾದರೆ ಮಳೆಗಾಲ ಬರುವವರೆಗೆ ಕಾಯಬೇಕು. ಮಳೆ ಬೀಳಬೇಕು. ಅದಕ್ಕೂ ತಗ್ಗುಗಳನ್ನು ತೋಡಬೇಕು. ಮಳೆ ಬಿದ್ದ ಮೇಲೆ ಸಸಿಗಳನ್ನು ಹಚ್ಚಬೇಕು. ಎಂದರೆ ಸಸಿಗಳು ಗಿಡವಾಗಿ, ಮರವಾಗಿ ಬೆಳೆಯುತ್ತವೆ. ಮತ್ತೆ ಅವು ಬೆಳೆದು ದೊಡ್ಡವು ಆಗಬೇಕಾದರೆ ಹತ್ತಾರು ವರ್ಷಗಳೇ ಬೇಕು’’ ಎಂದು ಹೇಳಿದನು ಅಜ್ಜ.

ಸಸಿಯನ್ನು ಹಚ್ಚೋಣ
ಮರ – ಗಿಡ ಬೆಳೆಸೋಣ
ಪರಿಸರ ಉಳಿಸೋಣ
ಕಾಡು ಬೆಳೆಯಲಿ ಅನ್ನೋಣ
ಎಂದು ಮಕ್ಕಳೆಲ್ಲಾ ಒಟ್ಟುಗೂಡಿ ಹಾಡತೊಡಗಿದರು. ಅಜ್ಜನಿಗೆ ಖುಷಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT