ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೂಡಿದಾರದ ಸುತ್ತಣ ಚೂಜಿಗಳು

Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಒಂದು – ಕೂದಲು
ಎದೆಯ ಬಲೂನಿಗೆ
ಗುರಿಗಾಮಿ ಚೂಜಿನೋಟದ ಮೊನೆ:
ತಿಂದು ತೇಗಿದಷ್ಟು ಬಾಯಗಾಯಗಳು
ಲಾವಣ್ಯಕ್ಕೆ ಲಂಗೋಟಿ ತೊಡಿಸಿದಂತೆ
ಹೆಗಲೇರುವ ಅಪ್ಪನ ಕಾಮಲೆಗೆ
ಅವ್ವನ ಅಂಕುಶದ ಭಯವಿಲ್ಲ...

ಅತ್ತತ್ತ ಇತ್ತಿತ್ತ
ಆತ್ಮಕಾಮಿಯ ವಿಟತನವ ಕಂಡು
ಗರತಿ ಇಲಿ ಪುಟನೆಗೆದಂತಾಯಿತು!
ಎರಡು – ಜಡೆ
ಕ್ಯಾಬರೆಯ ಬೆತ್ತಲೆ ಬಣ್ಣಗಳಲ್ಲಿ
ಸಾವಿಗೊಂದು ಸ್ವಯಂವರ ಏರ್ಪಡಿಸಿವೆ;

ಬೆಂಕಿಗುಲಾಬಿ ಮುಡಿಸುವ
ಹರಾಮೀ ಹಗಲ ದೆವ್ವಗಳು
ಶೂ-ಸೆಂಟು ಹಾಕಿಕೊಂಡು
ಮುದಿಯ ರಾತ್ರಿಗೆ
ಹರೆಯದ ಕನಸೊಂದು ತೊಡೆಗಂಟಿದೆ
ಮೊಲೆಹಾಲ ಬೆಣ್ಣೆಗೆ ತೇಗುವ
ಜೋಕುಮಾರರಿಗೆ ಮೀಸೆಯಿಲ್ಲ,
ಕಾಮಾಟಿಪುರದ ಕಾರ್ಖಾನೆಗಳಲ್ಲಿ
ಗಂಡಸುತನಕ್ಕೆ ಗೆದ್ದಲು ಹತ್ತಿದೆ!

ಸೀಳುನೋಟದ ನರಿಗಳಿಗೆ
ಮಸಾಲೆ ವಾಸನೆಯದೊಂದೇ ಧ್ಯಾನ;
ಮೊಸರಿಗೆ ಹುಳಿ ಹಿಂಡುವ
ಕೈಗಳಿಗೆ ಎಂಜಲು ಮೆತ್ತಿಕೊಂಡಿದೆ
ಹರೆಯಕ್ಕಂಟಿದ ಮುಪ್ಪಿನ ಹಾಗೆ!
ಮೂರು – ಮಿಕ
ಹದಿನೆಂಟರ ನೆರಳು ನೆಕ್ಕುವ ನಾಲಿಗೆಗೆ
ಮೈಯೆಲ್ಲ ನಾಗಸಂಪಿಗೆ ಚಿತ್ತಗಳ ಬಿತ್ತನೆ;
ಮೈಯ ಮಣ್ಣಿನಲ್ಲಿ ಬೀಜಗಳು ಮೊಳೆಯೇನು?
ಮೊಳಕೆ ಕನಸಿಗೊಂದು

ಹುಸಿ ಮೈಥುನ್ಯದಾಲಿಂಗನದ ಗೈರಾತಿ!
ಶೀಲದ ಚೀಲದಲ್ಲೀಗ
ಹೆಡೆನಾಗರ ಮೊಟ್ಟೆಗಳು ಭರ್ತಿಯಾಗಿವೆ
ಸೆರಗಿನಲ್ಲಿ ಕೆಂಡ ಕಟ್ಟಿಕೊಂಡು
ನೋವಿಗೆ ಮಲಾಮು ಹುಡುಕುವ ಕಣ್ಣಿಗೆ
ಕಂಡದ್ದು: ಮಲಾಮಿನದ್ದೇ ಗಾಯಗಳು!
ಅಂಟಿಕೊಂಡಿದ್ದ ಸೂತಕ ಮಾಯೆಗಳೆಂಬ
ವೈರಾಣುಗಳನ್ನು ಹರಾಜಿಗಿಟ್ಟಿದ್ದೇನೆ
ಉಟ್ಟು ನೋಡೊಮ್ಮೆ ಈ ಸೀರೆಗಳ ಸಂಕಟಗಳನ್ನು:

ಪರಾಕುಗಳಲ್ಲಿ ಮುಚ್ಚಿಹೋದ
ಕಣ್ಣುಗಳಾದರೂ ತೆರೆದಾವು!
ನಾಲ್ಕು – ಶೂನ್ಯ
ಹೊಲಿಗೆಗೆ ನಿವೃತ್ತಿಯಿತ್ತ ಚೂಜಿಗಳಿಗೆ
ಚುಚ್ಚುವುದೊಂದೆ ಪೂರ್ಣಾವಧಿ ವೃತ್ತಿಯೀಗ...
ಅಪ್ಪಂದಿರು ಗೆಣೆಯರಾದ ಹಾಗೆ
ಅವ್ವಂದಿರು ಅವಾಕ್ಕಾಗಿದ್ದು
ಪತಿಯಂಬ ಡಂಭಕದ ಮುಂದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT