ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಗಮವೇ ಸ್ಥಾವರವಾಗಿ ಈಗ

Last Updated 17 ಜನವರಿ 2015, 19:30 IST
ಅಕ್ಷರ ಗಾತ್ರ

ಎತ್ತಿತಂದಿಟ್ಟದ್ದಾದರೂ
ಕದಲಲಾರೆ ಎಂಬಂತೆ
ಸ್ಥಾವರ ಬುದ್ಧ
ನನ್ನ ಬೆಡ್‌ರೂಮಿನ ಶೋಕೇಸಿನಲ್ಲಿ
ನಾನಿಲ್ಲದಿರುವಾಗಲೂ ಇರುವ
ಇಡೀ ದಿನ ಅವನನ್ನು ಮರೆತಂತೆ
ಅಥವಾ ಆತ್ಮವೇ ಇಲ್ಲದಂತೆ
ಇರುವ ಮತ್ತು ಬದುಕನ್ನು ಸಂ – ಭೋಗಿಸುವ
ನನ್ನನ್ನು ಧಿಕ್ಕರಿಸಿ ಇರಲು ಬದ್ಧ
ಎನುವಂತೆ
ಒಂದು ಬೆಳಗ್ಗೆ ಅಸ್ವಸ್ಥಗೊಂಡು
ಬಿದ್ದುಕೊಂಡಾಗ ಹಾಸಿಗೆಯಲ್ಲಿ
ಕೇಳಬೇಕೆನಿಸುವ ಭಾವ ಹುಟ್ಟಿ
ಪ್ರತಿಮೆಗೆ ದೃಷ್ಟಿನೆಟ್ಟು
ಕೇಳಿದೆ:
ಇದೆಯೇ ಆತ್ಮ ಅಥವಾ ಪುನರ್ಜನ್ಮ?
ಮೌನ ಮೆರೆವ ತುಟಿಯಲ್ಲಿ ಆತ
ಉತ್ತರವೂ ನಗುವೂ ಆಗದೇ ಇದ್ದ
ಜಂಗಮನಾಗಿ ಬಾರದೇ
ವಾರದ ಮೇಲೆ ಮಾತಿನ ನಡುವೆ
ಆತ್ಮವೇ ಇಲ್ಲ ಎನ್ನುವಿರೇನು ನೀವು
ಎಲ್ಲವನ್ನೂ ಮರೆತು?
ಕೇಳಿದಳು ನನ್ನವಳು ಬಿಗಿದಪ್ಪಿ
ಇಲ್ಲ ಎನಲಾಗಲಿಲ್ಲ
ಉಂಟು ಎಂದೂ ಕೂಡಾ!
ಆ ಹೊತ್ತಿಗೆ ದೂರದಲ್ಲೆಲ್ಲೋ ಮಿಂಚು ಮಿಂಚಿ
ಸಂಜೆ ಬಿಸಿಲಿನ ನಡುವೆ ತುಂತುರು ಮಳೆ
ತತ್ ಕ್ಷಣ ಹೊರಗಿನ ಕಾಮನಬಿಲ್ಲು ನಿಧಾನ
ಒಳಗಿನ ಪ್ರತಿಮೆಯ ಮೇಲೆ ಬಿದ್ದು
ಜಂಗಮವೇ ಸ್ಥಾವರವಾದಂತೆ ಈಗ
ಕಣ್ಣ ಕನ್ನಡಿಯಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT