ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಕೆ ಅನಾಕರ್ಷಕನಾಗುವ ಸುಖ

ಕವನ ಸ್ಪರ್ಧೆ –2014; ತೀರ್ಪುಗಾರರ ಮೆಚ್ಚುಗೆ ಪಡೆದ ಕವನ
Last Updated 29 ನವೆಂಬರ್ 2014, 19:30 IST
ಅಕ್ಷರ ಗಾತ್ರ

ದಿನೇ ದಿನೇ ಅನಾಕರ್ಷಕನಾಗುತಿರುವ
ಅರಿವು ಒಳಗೆ ಅಂಕುರಿಸುತ್ತಿದೆ
ಬಂದುನಿಂತಿದ್ದೇನೆ
ನನ್ನಿರುವು ಅಮುಖ್ಯವಾಗುವ
ಹೊತ್ತಿಗೆ
ನನ್ನ  ನಡೆ ನುಡಿ ಚಹರೆ ಕ್ಲೀಷೆಯಾದ
ಗಳಿಗೆಗೆ ಪಕ್ಕಾಗುತ್ತಿದ್ದೇನೆ
ಯಾರೂ ಇತ್ತೀಚೆಗೆ ನನ್ನನ್ನು ಕೇಳದಿದ್ದಾಗ
ನನ್ನೊಳಗಿನ ನಿಜದ ಕರೆ ಕೇಳ ಹೋದೆ
ಪರರಿಗೆ ಅರುಚಿಗೊಂಡ ನಾನು
ಈ ಒಳಗನ್ನು ರುಚಿಸಗೊಳಿಸ ಹೋದೆ
ಅನಾಕರ್ಷಣೆಯ ಕಟುಸತ್ಯ
ಊಳುತ್ತಿದೆ ಹಾಳುಬಿದ್ದ ಹೊಲಮನವನ್ನು
ಮೊದಲೆಲ್ಲಾ ಹೀಗಿರಲಿಲ್ಲ
ಮಾತು ಮಾತಿಗೆ ಮೋಹಕ್ಕೊಳಗಾದೆ
ಮೆಚ್ಚುಗೆಯ ಬಲೆಗಳಲ್ಲಿ ಮಿಕವಾದೆ
ಹೊಗಳಿಕೆಯ ಶೂಲಗಳಲ್ಲಿ ಸಿಲುಕಿದೆ
ಪರಾಕುಗಳ ಹಾಸಿನಮೇಲೆ ನಡೆದೆ
ತಾರೀಫುಗಳ ಕೊಳದಲ್ಲಿ ಬಿದ್ದೆ
ಅವರ ಇಷ್ಟದ ಬೆಚ್ಚಗಿನ ಗೂಡಿನೊಳಗೆ
ತಣ್ಣನೆಯ ನಿದ್ದೆ
ನಿಂತರೆ ಕೂತರೆ ಸೋನೆಸುರಿಸುತ್ತಿದ್ದ
ಅವರ ಮಾತ ಹಿತ
ಸೊಂಪಾಗಿ ಬೆಳೆಯುತ್ತಿದ್ದೆ
ಒಳಗನ್ನು ಮರೆತಿದ್ದೆ
ಒಳಗಣ್ಣ ಅಗಲಿದ್ದೆ
ಬರೀ ಹೊರವಸಂತನನ್ನು ಅಪ್ಪಿ
ಒಳ ಅಗ್ನಿಯನ್ನು, ಬಿರಿದ ನೆಲವನ್ನು
ಮೂದಲಿಸಲನುವಾದರು
ದೂರಿ ದೂರ ಹೋದವರು
ನನ್ನನ್ನು ನನಗೆ ಹತ್ತಿರ ತಂದರು
ಹೊರ ಅನಾಕರ್ಷಕನಾಗುತ್ತಲೇ
ಒಳದೋಷಗಳ ರಾಶಿ ಹಾಕಿಕೊಂಡೆ
ಹೊರ ಅರುಚಿಗೊಳ್ಳುತ್ತಲೇ
ಒಳ ರಸರುಚಿಗಳ ಹರವಿಕೊಂಡೆ
ಕಡೆಗಣಿಸಿದವರಿಗೆ ಋಣಿ ನಾನು
ಕಡಗೋಲನ್ನು ಕರುಣಿಸಿದರು
ಅವರ ಅವಜ್ಞೆಗೆ ಶರಣು
ನನಗೆ ನನ್ನನ್ನು ದೊರಕಿಸಿಕೊಟ್ಟರು

ಪ್ರೀತಿಸುತ್ತಿದ್ದವರ ದ್ವೇಷ
ದ್ವೇಷಿಸಿದವರ ಪ್ರೀತಿ
ಅರ್ಥವಾಗುತ್ತಿದೆ ತಡವಾಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT