ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀಬ್ರಾ ಮತ್ತು ನರಿ

Last Updated 16 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಒಂದಾನೊಂದು ಕಾಡಿನಲ್ಲಿ ಒಂದು ಜೀಬ್ರಾ ಮತ್ತು ಒಂದು ನರಿ ಗೆಳೆತನದಿಂದ ಕೂಡಿದ್ದವು. ತಮಾಷೆಯಾಗಿ ಕಾಡಿನಲ್ಲಿ ಅಲೆದಾಡುತ್ತಿದ್ದವು.
ಕಾಲ ಇದ್ದ ಹಾಗೇ ಇರುವುದಿಲ್ಲ ಅಲ್ಲವೇ. ಕಾಡಿನ ಅಂಚಿನಲ್ಲಿದ್ದ ನಗರವನ್ನು ಜೀಬ್ರಾ ಒಮ್ಮೆ ಕತ್ತೆತ್ತಿ ನೋಡಿತು. ನಗರದ ನಾಲ್ಕು ರಸ್ತೆ ಕಡೆ ತನ್ನ ಮೈಮೇಲಿದ್ದ ಕರಿ ಬಿಳಿ ಬಣ್ಣದ ಪಟ್ಟೆಗಳನ್ನು ಜನರು ರಸ್ತೆ ಮೇಲೆ ಬಳಿದಿದ್ದರು. ಜನ ಅದನ್ನು `ಜೀಬ್ರಾ ಕ್ರಾಸ್', `ಜೀಬ್ರಾ ಕ್ರಾಸ್' ಎಂದೇ ಹೇಳುತ್ತಿದ್ದರು. ಆಗಲೇ ಜೀಬ್ರಾಕ್ಕೆ ಸ್ವಲ್ಪ ಜಂಭ ಬಂದುಬಿಟ್ಟಿತು.

ನರಿಯ ಬಳಿ ಬಂದು, `ನರಿಯಣ್ಣ, ನರಿಯಣ್ಣ ನಿನಗಿಂತ ನಾನೇ ಹೆಚ್ಚು' ಎಂದಿತು.

`ಅದು ಹೇಗೆ?' ಎಂದು ನರಿ ಬಾಲ ಬೀಸಿತು.

`ಅಲ್ಲಿ ನೋಡಲ್ಲಿ, ಎಲ್ಲಾ ಜನರೂ ರಸ್ತೆ ದಾಟಬೇಕಾದರೆ ನನ್ನ ಹೆಸರೇ ಹೇಳಿಕೊಂಡು `ಜೀಬ್ರಾ ಕ್ರಾಸ್, ಜೀಬ್ರಾ ಕ್ರಾಸ್' ಎಂದು ಜಪ ಮಾಡುತ್ತಾ ರಸ್ತೆ ದಾಟುತ್ತಾರೆ. ನಾನು ಜನರ ಬಾಯಲ್ಲಿ ಈಗ ಪ್ರಸಿದ್ಧನಾಗಲಿಲ್ಲವೇ? ನಾನೇ ನಿನಗಿಂತ ಹೆಚ್ಚಾಗಲಿಲ್ಲವೇ?' ಎಂದು ತನ್ನ ಉದ್ದ ಕಿವಿಗಳನ್ನು ಅಲ್ಲಾಡಿಸಿತು.

`ನರಿ ಕ್ರಾಸ್, ನರಿ ಕ್ರಾಸ್ ಅಂತ ಜನ ಹೇಳಲಾರರು. ಏನಾದರೂ ಉಪಾಯ ಮಾಡಬೇಕಲ್ಲ. ಜೀಬ್ರಾದ ಜಂಭ ಅಡಗಿಸಬೇಕಲ್ಲ ಎಂದು ನರಿ ತನ್ನ ಮುಂಗಾಲಿನಿಂದ ತಲೆ ಪರ ಪರ ಕೆರೆದುಕೊಂಡಿತು.

ಒಂದು ಉಪಾಯ ನರಿಯ ತಲೆಗೆ ಹೊಳೆದೇಬಿಟ್ಟಿತು. ಮಾರನೇ ದಿನ ಜೀಬ್ರಾ ಭೇಟಿಯಾದಾಗ, `ಅಣ್ಣಯ್ಯಾ ನಿನಗಿಂತ ನಾನೇ ಹೆಚ್ಚು' ಎಂದು ತಗಾದೆ ತೆಗೆಯಿತು ನರಿ.

`ಅದು ಹೇಗೆ?' ಎಂದಿತು ಜೀಬ್ರಾ.

`ನಿಂದು ಜೀಬ್ರಾ ಕ್ರಾಸ್ ರಸ್ತೆಗೆ ಮಾತ್ರ ಸೀಮಿತವಾಗಿ ಕೆಲವು ಕಡೆ ಅನ್ವಯಿಸುತ್ತದೆ. ನಾನಾದರೋ ಎಲ್ಲೆಲ್ಲೂ ಇದ್ದೇನೆ. ಶಾಲಾ, ಕಾಲೇಜುಗಳಲ್ಲಿ, ಗ್ರಂಥಾಲಯಗಳಲ್ಲಿ, ಪುಸ್ತಕದ ಅಂಗಡೀಲಿ, ಜನರ ಬಾಯಲ್ಲಿ, ವಕೀಲರು, ವೈದ್ಯರು, ಕವಿಗಳು, ಗುರುಗಳು ಹೀಗೆ ಎಲ್ಲರ ಕೈನಲ್ಲೂ ಇರುತ್ತೇನೆ. ನನ್ನ ಎತ್ತಿ, ಓದಿ, ಕಣ್ಣಿಗೊತ್ತಿಕೊಂಡು ಸ್ಮರಿಸುತ್ತಾರೆ' ಎಂದಿತು ನರಿ.

`ಭಲೆ, ಭಲೇ! ಏನೆಂದು?' ಎಂದು ಕೇಳಿತು ಜೀಬ್ರಾ.
`ಡಿಕ್ಷ-ನರಿ' ಎಂಬ ಪುಸ್ತಕದ ಹೆಸರೇ (ನಿಘಂಟು) ನಾನು' ಎಂದು ನಕ್ಕು ನರಿ ಗೆದ್ದಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT