ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡಿತ್ಯ ಕಲಾಸಾಧಕರಿಬ್ಬರ ಸಪ್ತತಿ– ಷಷ್ಟ್ಯಬ್ದಿ

Last Updated 29 ಜುಲೈ 2017, 19:30 IST
ಅಕ್ಷರ ಗಾತ್ರ

ವಿದ್ವತ್ತಿನ ‘ಮಹಾಬಲ’

ಸಿದ್ದಾಪುರ ದಂಟಕಲ್‌ನಲ್ಲಿ ಹುಟ್ಟಿ ಬೆಳೆದ ಮಹಾಬಲೇಶ್ವರ ಅವರು ಕಿಬ್ಬಳ್ಳಿ, ಶಿರಸಿಯಲ್ಲಿ ಪ್ರಾಥಮಿಕ, ಪದವಿ ಪಡೆದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಸ್ನಾತಕೋತ್ತರ ಪದವಿ ಪಡೆದರು. ಆಗ ಸಂಸ್ಕೃತ ಮಹೋನ್ನತ ವಿದ್ವಾಂಸರೆನಿಸಿದ ಪ್ರೊ.ಕೃಷ್ಣಮೂರ್ತಿ, ಡಿ.ಎನ್‌. ಶಾನಭಾಗ, ಮೋಡಕ್‌ರ ಶಿಷ್ಯರಾಗುವ ಭಾಗ್ಯ. ಜತೆಗೆ ಆಗ ಬೆಳೆಯುತ್ತಿದ್ದ ನವ್ಯ ಸಾಹಿತ್ಯ ಚಳವಳಿಯ ವಾತಾವರಣದ ಪ್ರಭಾವ. ಊರಲ್ಲಿ ಶಿರಸಿ ಪ್ರದೇಶದ ಹಿರಿಯ ತಾಳಮದ್ದಳೆ ಕಲಾವಿದರಾದ ತನ್ನ ಮಾವ ದಂಟಕಲ್‌ ಗಣಪತಿ ಪಟೇಲ್‌, ಹಸಿರುಗೋಡು ಲಕ್ಷ್ಮೀನಾರಾಯಣ ಹೆಗಡೆ, ಕೆರೆಮನೆ ವೆಂಕಟಾಚಲ, ಕೆರೆಕೈ ಕೃಷ್ಣಭಟ್ಟ, ವಿ.ಟಿ. ಶೀಗೇಹಳ್ಳಿ ಅವರಂತಹ ಹಿರಿಯರ ಒಡನಾಟ. ಕೆರೆಮನೆ ಹೆಗಡೆ ಬಂಧುಗಳ ನಿಕಟತೆಯ ಮಹಾಭಾಗ್ಯ. ಕಲಾರಹಸ್ಯದ ಕಲಿಕೆ. ಯಕ್ಷಗಾನ ಅವಧೂತ ಹೊಸ್ತೋಟ ಭಾಗವತರ ಗುರುತ್ವದಲ್ಲಿ ಹೆಜ್ಜೆ, ವೇಷ, ಆವೇಶ, ಕುಣಿತ ಅಭಿನಯ ಇನ್ನೇನು ಬೇಕು, ಒಬ್ಬ ಬಹುವಿಧ ಸಾಧಕನಿಗೆ ಅಸ್ತಿವಾರ?

ಈ ಎಲ್ಲವನ್ನೂ  ಅರಗಿಸಿ, ಬಳಸಿ, ಬೆಳೆಸಿ ತನ್ನದಾದ ವಿಧಾನವನ್ನು ಬಿಡದೆ ಒಳ್ಳೆಯ ಕಾಯಕಗಳಲ್ಲಿ ತೊಡಗಿ ಆ ಹಿನ್ನೆಲೆಗಳನ್ನು ಸಾರ್ಥಕಗೊಳಿಸಿದರು. ಧಾರವಾಡದ ದಿನಗಳಲ್ಲಿ ನಾವು ಕೆ.ಯು.ಡಿ. ಹಾಸ್ಟೆಲ್‌ನ ಸಹವಾಸಿಗಳು, ಸಹ ಯಕ್ಷ ಸಂಚಾರಿಗಳು.

ಸಿದ್ದಾಪುರ, ಮಹಾತ್ಮಾ ಗಾಂಧಿ ಶತಾಬ್ದಿ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಬಳಿಕ ಪ್ರಾಂಶುಪಾಲರಾಗಿ ಮೂರೂವರೆ ದಶಕ ಸೇವೆ ಸಲ್ಲಿಸಿ, ಆಮೇಲೆ ಶಿರಸಿಯಲ್ಲಿ ವಾಸ. ಈ ನಾಲ್ಕೂವರೆ ದಶಕಗಳ ಅವಧಿಯಲ್ಲಿ ಶಾಸ್ತ್ರ, ಕಲೆ, ಸಾಹಿತ್ಯ, ವಿದ್ವತ್‌ ಕ್ಷೇತ್ರಗಳಲ್ಲಿ ಗಣನೀಯವಾದ ಪರಿಶ್ರಮ. ದರ್ಶನ ಶಾಸ್ತ್ರದಲ್ಲಿ ಪ್ರಭುತ್ವ ಗಳಿಕೆ. ಸಜ್ಜನ, ಪಾಪದವರಾದ ಇವರಿಂದ ಪ್ರಿನ್ಸಿಪಾಲರ ಹುದ್ದೆ ನಿಭಾಯಿಸುವುದು ಸಾಧ್ಯವೇ ಎಂಬ ಪ್ರಶ್ನೆಗೆ ಎಡೆಯಿರುವ ವ್ಯಕ್ತಿತ್ವವಿದ್ದೂ, ಆಡಳಿತ, ಅಕಾಡೆಮಿಕ್ಸ್‌, ಎರಡರಲ್ಲೂ ಅತ್ಯಂತ ಯಶಸ್ವಿ ಆದರು.

ಎಂ.ಎ. ಹೆಗಡೆ ಒಬ್ಬ ಪಂಡಿತ ಕಲಾವಿದ

ಮುಖ್ಯವಾಗಿ ಅವರು ವಿದ್ವಾಂಸ. ಹಲವು ಗ್ರಂಥ ರಚನೆ, ಅಲಂಕಾರ ತತ್ವ, ಸೌಂದರ್ಯ ಲಹರಿ, ಕೆರೆಮನೆ ಮಹಾಬಲ ಹೆಗಡೆ, ಉತ್ತರ ಕನ್ನಡ ಪ್ರಸನ್ನ ಸಾಹಿತ್ಯ, ಕೃತಿಗಳು, ಡಾ.ಎಂ. ಪ್ರಭಾಕರ ಜೋಶಿ ಜೊತೆ ಬರೆದ ಭಾರತೀಯ ತತ್ವಶಾಸ್ತ್ರ ಪ್ರವೇಶ, ಕುಮಾರಿಲ ಭಟ್ಟ, ಇವು ಒಳ್ಳೆಯ ಅಧ್ಯಯನ ಪ್ರವೇಶಿಕೆಗಳು. ಶಬ್ದ ಮತ್ತು ಜಗತ್ತು, ಭಗವದ್ಭಕ್ತಿರಸಾಯನಂ, ಸಿದ್ಧಾಂತ ಬಿಂದು, ಪರಮಾನಂದ ಸುಧಾ, ಧ್ವನ್ಯಾಲೋಕ ಮತ್ತು ಲೋಚನ ಅಭಿನಯ ದರ್ಪಣ– ಈ ಶಾಸ್ತ್ರೀಯ ಅನುವಾದ ಕೃತಿಗಳು ಹೆಗಡೆ ಅವರ ಪಾಂಡಿತ್ಯ ವಿಚಿಕಿತ್ಸಕ ದೃಷ್ಟಿ, ತಾಳ್ಮೆಯ ಅಧ್ಯಾಪನ, ಬಗೆದು ಅಗೆದು ನೋಡುವ ವಿವರಣಾ ಸಾಮರ್ಥ್ಯ, ಈ ಅನುವಾದಗಳಲ್ಲಿ ಅದರ ಟಿಪ್ಪಣಿಗಳಲ್ಲಿ ಕಾಣುತ್ತದೆ. ಈಗ ಅವರು ಕೆರೆಕೈ ಉಮಾಕಾಂತ ಭಟ್ಟರ ಜತೆ ಮಹಾನ್‌ ಕೃತಿ ಅಭಿನವ ಭಾರತೀ ವ್ಯಾಖ್ಯಾನದ ಅನುವಾದ ಮಾಡುತ್ತಿದ್ದಾರೆ. ಬಾಲರಾಮಾಯಣ, ಪ್ರತ್ಯಭಿಜ್ಞಾವಿಮರ್ಶಿನಿ, ಶೈವ ಸಿದ್ಧಾಂತ ಕೃತಿ ಕೊನೆಯ ಹಂತದಲ್ಲಿದೆ. ಐನೂರಕ್ಕೂ ಮಿಕ್ಕಿ ಬಿಡಿ ಲೇಖನಗಳನ್ನು ಬರೆದಿದ್ದಾರೆ. ಹೆಗಡೆ ಅವರ ಒಟ್ಟು ಬರವಣಿಗೆ, ಸುಮಾರು ಆರೆಂಟು ಸಾವಿರ ಪುಟ. ಬಹುಪಾಲು ಮೌಲಿಕ. ಶಾಸ್ತ್ರ ಸಾಹಿತ್ಯಗಳ ಕುರಿತು ಅಪವ್ಯಾಖ್ಯಾನ, ಅಪಪ್ರಚಾರಗಳು ಹರಡುತ್ತಿರುವ ಈ ಕಾಲದಲ್ಲಿ ಇವರ ಕೆಲಸ ಬಹಳಷ್ಟು ಮಹತ್ವ ಹೊಂದಿದೆ. ಆವೇಶ, ಮೌಢ್ಯ, ಅತಿರೇಕಗಳಿಲ್ಲದ, ಅರ್ಥೈಸುವಿಕೆ ಹೆಗಡೆ ವಿಧಾನ.

ತಾಳಮದ್ದಲೆಗಳಲ್ಲಿಯೂ ಬಹುಕಾಲದಿಂದ ಅವರು ಭಾಗವಹಿಸುತ್ತಿದ್ದಾರೆ. ಸೌಮ್ಯ ಗಂಭೀರ, ಸಂಭಾಷಣಾ ಶೀಲ ಅರ್ಥ ಅವರದು. ಸಂಧಾನದ ಧರ್ಮರಾಜ, ಕರ್ಣಪರ್ವದ ಶಲ್ಯ, ಕಚದೇವಯಾನಿಯ ಶುಕ್ರ, ಹಾಗೆಯೇ ವಸಿಷ್ಠ, ವಾಮನ, ಶ್ರೀರಾಮ, ಆಂಜನೇಯ ಇವು ಅವರ ಕೆಲವು ಮುಖ್ಯ ಅರ್ಥಗಳು. ವಾಸುದೇವ ಸಾಮಗರ ಸಂಯಮಂ ತಂಡದ ಸದಸ್ಯರಾಗಿ ತಿರುಗಾಟ ನಡೆಸಿದ್ದಾರೆ. ಕ್ರಮಬದ್ಧ ನಾಟ್ಯ ಸಹಿತ ವೇಷ ಮಾಡುವ ಎಂ.ಎ., ಅವರು ಶಂಭು ಹೆಗಡೆ ಅವರ ಇಡಗುಂಜಿ ಮೇಳದಲ್ಲೂ, ಇತರ ತಂಡಗಳಲ್ಲೂ, ಅಭಿನಯಿಸಿದ್ದಾರೆ. ಯಶಸ್ವಿ ನಟನೆನಿಸಿದ್ದಾರೆ. ಒಳ್ಳೆಯ ರೂಪ, ಹದವಾದ ಆಯವುಳ್ಳವರು.

ರಾಜಾ ಕರಂಧಮ, ವಿಜಯೀವಿಶ್ರುತ, ವಜ್ರ ಕಿರೀಟ, ದಶಕುಮಾರ – ಮುಂತಾಗಿ ಇಪ್ಪತ್ತೈದು ಯಕ್ಷಗಾನ ಪ್ರಸಂಗಗಳ ಲೇಖಕರು. ಸಲೀಸಾದ ಪದ್ಯ ರಚನೆ ಇವರದು. ಹಲವು ಸಂಕಲನ, ಸಂಚಿಕೆ, ಅಭಿನಂದನ ಗ್ರಂಥಗಳಲ್ಲಿ ಸಂಪಾದಕರ ಸಂಸ್ಥೆಗಳ ಮಾರ್ಗದರ್ಶಿ. ಹಸ್ತಪ್ರತಿ ಸಂರಕ್ಷಣೆ, ಗ್ರಂಥ ಸಂಪಾದನೆಗಳಲ್ಲೂ ದುಡಿದಿದ್ದಾರೆ. ಸಭೆ, ಸಮ್ಮೇಳನ, ಉತ್ಸವ, ಕೌಟುಂಬಿಕ, ಮಿತ್ರ ಬಳಗಗಳಲ್ಲೂ ಸಕ್ರಿಯರು.

ಕಲ್ಕೂರ ಶೇಣಿ ಪುರಸ್ಕಾರ, ಪ್ರೊ. ಹಿರಿಯಣ್ಣ ತತ್ವಶಾಸ್ತ್ರ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಚಿಟ್ಟಾಣಿ ಪ್ರಶಸ್ತಿ, ಸದಾನಂದ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಸಂದಿವೆ.

ಹಪಹಪಿ ಇಲ್ಲದ, ಸೌಮ್ಯ ಸ್ವಭಾವ, ಅತಿ ನಿರೀಕ್ಷೆಯಿಲ್ಲದ, ಬದುಕು, ಸದಭಿರುಚಿ, ಸೂಕ್ಷ್ಮ ಗ್ರಹಣ, ಪ್ರದರ್ಶಕತ್ವವಿರದ ಮೈತ್ರಿ, ಔದಾರ್ಯ, ಆರೋಗ್ಯಯುತ ಖಚಿತವಾದ ಅರಿವಿನಿಂದ ಪುಟಗೊಂಡ ವಿಮರ್ಶಾದೃಷ್ಟಿ, ಮೃದು ಆದರೆ ದೃಢವಾದ ನಿಲುಮೆ, ನಿರ್ಭೀತ ಅಭಿವ್ಯಕ್ತಿ, ಸದಾ ಸಂತೃಪ್ತಿ, ವಿನೋದ ಪ್ರಿಯ ಕಲಾಸಾಹಿತ್ಯ ಆಸಕ್ತಿ, ಸ್ವಭಾವ ರೂಪಿ ನೈಜ, ಒಡನಾಟಕ್ಕೆ ಯೋಗ್ಯರಾದ ವ್ಯಕ್ತಿ. ವ್ಯಕ್ತಿತ್ವದಂತೆಯೇ ಸುಂದರವಾದ ಅಕ್ಷರಗಳನ್ನು ಹೊಂದಿರುವ ಸಜ್ಜನಿಕೆಯ, ಉತ್ತಮ ಸಹವರ್ತಿ. ಪತ್ನಿ ಸಾವಿತ್ರಿ. ಸಂಗೀತ ವಿದ್ವಾಂಸರಾದ ಮಗಳು ಬಕುಳಾ. ಅಳಿಯ ಪಂಡಿತ ಶ್ರೀಪಾದ ಹೆಗಡೆ, ಉನ್ನತ ಉದ್ಯೋಗಿ, ಪುತ್ರ ವಿನಾಯಕರ ಜೊತೆ ಶಿರಸಿ ನಿವಾಸಿ. ಎಪ್ಪತ್ತರಲ್ಲೂ ಹುರುಪು ಉಲ್ಲಾಸ ಇರುವ ಹೆಗಡೆ, ಆಸಕ್ತಿಯ ಕ್ಷೇತ್ರಗಳೆಲ್ಲದಕ್ಕೂ ಇನ್ನಷ್ಟು ಕೊಡುಗೆ ನೀಡಬಲ್ಲ ಬಲಶಾಲಿ.

ತಾಳಮದ್ದಲೆಯ ‘ಮೇಲ್ಕೋಟೆ’

ಶಿರಸಿ ಬಳಿಯ ವಿದ್ವಾನ್‌ ಉಮಾಕಾಂತ ಭಟ್ಟರು ಅರ್ಥಗಾರಿಕೆ, ಸಂಸ್ಕೃತ ವಿದ್ವತ್ತು, ನ್ಯಾಯಶಾಸ್ತ್ರ, ಅಧ್ಯಾಪನ, ವಾಕ್ಯಾರ್ಥ ಕ್ಷೇತ್ರಗಳಲ್ಲಿ ಹೆಸರು ಪಡೆದ ಬಹುಮುಖಿ ಹಿರಿಯ ಪ್ರಭಾವಿ ಯಕ್ಷಗಾನ ಅರ್ಥದಾರಿ. ಸಂಸ್ಕೃತ ಹಿಂದಿ ಪ್ರಚಾರವ್ರತಿ ವಿದ್ವಾಂಸ. ಕೃಷಿಕ ಕೆರೆಕೈ ಕೃಷ್ಣ ಭಟ್ಟರ ಅರ್ಹ ಪುತ್ರ.

ಕೆರೆಕೈ ಮತ್ತು ಶಿರಸಿಯಲ್ಲಿ ಆರಂಭಿಕ ಶಿಕ್ಷಣ. ಮೈಸೂರಿನಲ್ಲಿ ಕಾಲೇಜು ಮತ್ತು ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಷ್‌ ಎಂ.ಎ. ಈ ಕಾಲಕ್ಕೆ ವಿಶಾಲ ಸಂಪರ್ಕ, ಜ್ಞಾನಕ್ಕೆ ವಿಕಾಸದ ವಾತಾವರಣ. ಇಂಗ್ಲಿಷ್‌ನ ಪದವಿಗಾಗಿ ಕಲಿತರೂ ಜತೆಗೆ ನ್ಯಾಯಶಾಸ್ತ್ರ, ವಿದ್ವತ್‌, ವ್ಯಾಕರಣ, ಸಾಹಿತ್ಯ ಅಧ್ಯಯನ ಮಾಡಿದವರು. ಯೋಗಿ ಮಹಾಚಾರ್ಯ ರಾಮಭದ್ರಾಚಾರ್ಯರಿಂದ ಸಂಸ್ಕೃತದ ಕಡೆಗೇ ಹೆಚ್ಚು ಸೆಳೆತ, ಮುಂದೆ ಅದೇ ಮುಖ್ಯ. ಮೇಲುಕೋಟೆ ಸಂಶೋಧನಾ ಕೇಂದ್ರದಲ್ಲಿ, ಬಳಿಕ ಸಂಸ್ಕೃತ ಕಾಲೇಜಿನಲ್ಲಿ ನ್ಯಾಯಶಾಸ್ತ್ರ ಅಧ್ಯಾಪನ, ಆಗ, ಮಹೋಪಾಧ್ಯಾಯ ಅರೆಯರ್ ರಾಮಶರ್ಮ ಸಹಿತ ಅನೇಕ ಶ್ರೇಷ್ಠ ವಿದ್ವಾಂಸರ ಸಂಸರ್ಗ. ಜತೆಗೆ ಹಿಂದಿ ಮತ್ತು ಭಾಷಾ ಶಾಸ್ತ್ರದ ಅಧ್ಯಯನ, ಪದವಿ.

ಆಗಲೇ ಶಿರಸಿಯ ತಾಳಮದ್ದಳೆಯ ಸಮೃದ್ಧ ವಾತಾವರಣದ ಸೆಳೆತವೂ ಇತ್ತು. ತಂದೆಯ ಗುರುತ್ವವಾದರೂ ಮಗನ ಅಭಿವ್ಯಕ್ತಿ ವಿಧಾನ ಬೇರೆ. ಇಪ್ಪತ್ತರ ಹರೆಯದಲ್ಲಿ ಸಾಗರದ ಶಿರವಂತೆಯಲ್ಲಿ ದೊಡ್ಡ ಮಟ್ಟದ ಕೂಟದಲ್ಲಿ ಭಾಗಿಯಾದಾಗಲೂ ಅದು ಗಂಭೀರ ಆಸಕ್ತಿ ಆಗಿರಲಿಲ್ಲ. ನಾಲ್ಕಾರು ವರ್ಷದ ಬಳಿಕ, ಆಸಕ್ತಿ ಚಿಗುರಿತು. ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ತಾಳಮದ್ದಳೆಗಳ ಬಹಳ ಬೇಡಿಕೆಯ ಪ್ರಸಿದ್ಧರಲ್ಲಿ ಇವರೂ ಒಬ್ಬರಾದರು. ದಕ್ಷಿಣ ಕನ್ನಡದ ವೇದಿಕೆಗಳೇ ಇವರಿಗೆ ದೊಡ್ಡ ಉಠಾವ್ ನೀಡಿದ್ದು. ಶೇಣಿಯವರಿಂದ ತೊಡಗಿ ಇಂದಿನ ಕಿರಿಯರ ತನಕ ಸಹವರ್ತಿಗಳ ಜತೆಗೆ ಅವರವರ ಮಟ್ಟ, ವಿಧಾನ, ಪ್ರದೇಶಗಳಿಗೆ ಹೊಂದಿ ಅರ್ಥಗಾರಿಕೆ ರೂಪಿಸಿ ಮಂಡಿಸುವ ಉಮಾಕಾಂತ, ಮೇಲುಕೋಟೆಯವರೆಂದೇ ಪ್ರಸಿದ್ಧರು. ಆ ಶಬ್ದವೂ ಅನ್ವರ್ಥವಾಯಿತು. ಪ್ರಭಾವೀ ಕಂಠ, ಒಳ್ಳೆಯ ವಿಚಾರ ಸಂಗ್ರಹ, ಸಶಕ್ತವಾದ  ಭಾಷಾ ಶೈಲಿ, ವಸ್ತು ಉಪಸ್ಥಿತಿ, ಮೊನಚಾದ ವಾಕ್ಯರಚನೆಗಳಿಂದಲೂ, ಪುರಾಣದ ಪಾತ್ರಕಥೆ ಸನ್ನಿವೇಶಗಳಿಗೆ ವಿಚಿತ್ರ ರೂಪಕಾತ್ಮಕ ವ್ಯಾಖ್ಯಾನ ನೀಡಬಲ್ಲ ಸಾಮರ್ಥ್ಯದಿಂದಲೂ, ಮೇಲ್ಮಟ್ಟದ ಸಂವಾದ ಕೌಶಲ, ಕವಲಾಗಿ ಅರಳುವ ಅಲಂಕಾರಗಳಿಂದಲೂ ಉಮಾಕಾಂತರು ‘ಮೇಲ್ಕೋಟೆ’ ಹೌದು. ಇವರ ತಾಂತ್ರಿಕ ಪರಿಣತಿ ಉತ್ಕೃಷ್ಟವಲ್ಲದಿದ್ದರೂ ವಿವಿಧ ವಿಷಯ ಸಮನ್ವಯ ಮತ್ತು ಜೀವಂತ ಕಲಾದೃಷ್ಟಿಯಿಂದ ಇವರ ಅರ್ಥಗಾರಿಕೆ ಜನಪ್ರಿಯವಾಗಿದೆ. ಭೀಷ್ಮ, ಭರತ, ಕರ್ಮಬಂಧನದ ಕೃಷ್ಣ, ಜರಾಸಂಧ ವಧೆಯ ಕೃಷ್ಣ, ಜರಾಸಂಧ, ಮಯೂರಧ್ವಜ, ನಿರ್ಯಾಣದ ರಾಮ, ಶಂಕರ ವಿಜಯದ ಶಂಕರಾಚಾರ್ಯ, ಕರ್ಣ ಪರ್ವದ ಕರ್ಣ , ಬಲಿ, ಶುಕ್ರ, ಇವು ಇವರ ಕೆಲವು ಪ್ರಮುಖ ಪ್ರಸಿದ್ಧ ಅರ್ಥಗಳು.

ಇವರು ಮುಖ್ಯವಾಗಿ ಕಲಾವಿದ– ಪಂಡಿತ. ಅಂದರೆ ಪಾಂಡಿತ್ಯ ಕಲೆಗೆ ಅಡಿಯಾಳಾಗಿರಬೇಕು ಎಂದು ನಂಬಿದವರು. ದೊಡ್ಡ ಪ್ರಮಾಣದ ವಿಷಯ ಪಾಂಡಿತ್ಯ ಇದ್ದಾಗಲೂ ಅಗತ್ಯವಿಲ್ಲದೆ ಅದನ್ನು ಅವರು ತರುವುದಿಲ್ಲ. ಸಂಭಾಷಣೆಗೆ ಒದಗುವವರು. ಚುರುಕು – ವಿನೋದ–ಟಾಸಿಂಗ್‌ಗಳಿಗೆ  ಸ್ಪಂದಿಸುವವರು. ಚರ್ಚಾ ಪ್ರಧಾನ ವಾಗ್ಮಿ ಅಲ್ಲದಿದ್ದರೂ ಅಗತ್ಯ ಬಿದ್ದರೆ ಸೆಟೆದು ನಿಲ್ಲಬಲ್ಲರು. ವಾದವನ್ನೂ, ಅತಿವಾದವನ್ನೂ ಮಾಡಬಲ್ಲರು– ಬಹುವಿರಳವಾಗಿ.

ಹದವಾದ ದೇಹ, ಗಡ್ಡವಿದ್ದ ಉರುಟು ಮುಖ, ಪ್ರಸನ್ನ ಗಂಭೀರ ಮುಖಮುದ್ರೆ ಒಳ್ಳೆಯ ಹಾವಭಾವ, ಸ್ವರ, ಪ್ರತಿಕ್ರಿಯೆಗಳಿಂದ ಇವರ ಉಪಸ್ಥಿತಿ ಪರಿಣಾಮಕಾರಿ. ಇವರೊಬ್ಬ ಸಂವೇದನ ಶೀಲ ಪ್ರತಿಭಾ ಪ್ರಶಂಸಕ ಸಹಕಲಾವಿದ. ಹಲವೆಡೆ ವಾಕ್ಯಾರ್ಥ ಗೋಷ್ಠಿಗಳಲ್ಲಿ ಭಾಗವಹಿಸುವ ತರ್ಕ ವಿದ್ವಾಂಸರಾದರೂ ಆ ರೀತಿಯನ್ನು ಅವರು ಅರ್ಥದಲ್ಲಿ ತರುವುದು ವಿರಳ. ಒಳ್ಳೆಯ ಸಹವರ್ತಿ, ಮೆಚ್ಚಿನ, ಮೆಚ್ಚುವ ಗೆಳೆಯ. ಸರಳ, ಜಾಗೃತ ಮತ್ತು ಸಮನ್ವಯಶೀಲ ಸ್ವಭಾವದ ಕೆರೆಕೈ ಇಕ್ಕಟ್ಟು ಬಿಕ್ಕಟ್ಟುಗಳನ್ನು ನಿರ್ವಹಿಸಬಲ್ಲ ಸಮರ್ಥ.

‘ಮಾತಿನ ವೇಷ’ದ ಬೇಡಿಕೆಯಿಂದ ಯಕ್ಷಗಾನ ಆಟಗಳಲ್ಲಿಯೂ ವೇಷ ಮಾಡಿ, ಅಭಿನಯಿಸಿದ್ದಾರೆ. ಮೇಘದೂತ, ನಾಗಾನಂದ ಯಕ್ಷಗಾನಗಳನ್ನು ಬರೆದಿದ್ದಾರೆ. ‘ಸದಾತನ’ ಇವರ ಸಂಸ್ಕೃತಿ, ಸಾಹಿತ್ಯ ಪ್ರಬಂಧಗಳ ಒಳ್ಳೆಯ ಸಂಕಲನ. ವಿವಿಧ ವಿಷಯಗಳಲ್ಲಿ ಪ್ರೇರಕ ಬರಹಗಳು ಇರುವಂಥದ್ದು. ಪಾಂಡಿತ್ಯ ಭಾರವಿಲ್ಲದ ಬರವಣಿಗೆ ಇವರ ರೀತಿ. ನ್ಯಾಯ ನಿಬಂಧ ಮಾಲಾ, ಗೀತ ಗೋವಿಂದ ಭಾಷ್ಯ, ಸಿದ್ಧವಾಗಿವೆ. ಪ್ರೊ. ಎಂ. ಎ. ಹೆಗಡೆ ಅವರೊಂದಿಗೆ ಭಟ್ಟರು ಗೈಯ್ಯುತ್ತಿರುವ  ಅಭಿನವ ಭಾರತೀ- ನಾಟ್ಯ ಶಾಸ್ತ್ರ ವ್ಯಾಖ್ಯಾನವು ಒಂದು ಮಹತ್ವಾಕಾಂಕ್ಷಿ ಕೃತಿ. ನೀನಾಸಂ ಗ್ರಂಥ ಯೋಜನೆಯಲ್ಲಿ ಬರಲಿದೆ.

ಛಂದೋಬದ್ಧ ಕವಿತೆ ಉಳಿದು ಬೆಳೆಯಬೇಕೆಂಬ ಉದ್ದೇಶದಿಂದ ‘ಛಂದಸ್ಪತೀ’ ಷಾಣ್ಮಾಸಿಕ ಪತ್ರಿಕೆಯನ್ನು ಹಟದಿಂದ ಒಂದು ಅಭಿಯಾನವಾಗಿ ಪ್ರಕಟಿಸುತ್ತಿದ್ದಾರೆ. ಸಂಸ್ಕೃತದಲ್ಲಿ ನಿರಾಯಾಸವಾಗಿ ಛಂದೋಬದ್ಧ ಕವಿತಾ ರಚನೆ ಮಾಡಬಲ್ಲ ಕೆರೆಕೈ, ಅದರಲ್ಲಿ ಪ್ರಯೋಗಾತ್ಮಕ ದೃಷ್ಟಿಯನ್ನೂ ಹೊಂದಿದ್ದಾರೆ.

ಪ್ರಾಚೀನ ನಾಟ್ಯಶಾಸ್ತ್ರ ಪರಂಪರೆಯ ‘ಶೃಂಗ ನಾಟ್ಯ’ ಪ್ರಕಾರವನ್ನು ಮೈಸೂರು ಡಾ. ಆರ್‌. ಸತ್ಯನಾರಾಯಣ – ವಿ. ನಂದಕುಮಾರ್‌ ಜೊತೆ ಸೇರಿ ಪುನರುಜ್ಜೀವನ ಮಾಡಿ, ಅದರಲ್ಲಿ ಪಾತ್ರವನ್ನೂ ವಹಿಸಿದ್ದಾರೆ. ಇಂತಹ ಕೆಲವು ಪ್ರಯೋಗಗಳ ಯೋಜನೆ ಮಾಡುತ್ತಿದ್ದಾರೆ. ನಾಡಿನಾದ್ಯಂತ ಕಮ್ಮಟ, ಗೋಷ್ಠಿಗಳಲ್ಲಿ ಸಂಪನ್ಮೂಲರಾಗಿ ಒದಗಿದ್ದಾರೆ.

ಪತ್ನಿ ಸುನಂದಾ, ಮಕ್ಕಳು ಜಯಂತ, ರಘುರಾಮರ ಜೊತೆ ಸೊಗಸು ಸಂಸಾರಿಯಾಗಿರುವ ಕೃಷಿಕ  ಕೆರೆಕೈ. ಅರುವತ್ತರಲ್ಲಿ ಉತ್ಸಾಹ, ಆರೋಗ್ಯ , ದುಡಿಮೆ, ಕ್ರಿಯಾಶಕ್ತಿಯಿಂದ ತುಂಬಿ ಸಕ್ರಿಯವಾಗಿದ್ದಾರೆ. ಉಮಾಕಾಂತರ ಸಾಹಿತ್ಯದ ಅತ್ಯುತ್ತಮ ಕೃತಿಗಳು ಈಗ ಬರಬೇಕು. ಕಲೆಯಲ್ಲೂ ಅವರು ಹೊಸ ಎತ್ತರಗಳನ್ನು ಅಳೆಯಬೇಕು. ನೂತನ ವತ್ಸರಚಕ್ರ ಸಂಕ್ರಮಿಸಬೇಕು.

(ಪ್ರೊ. ಎಂ.ಎ. ಹೆಗಡೆ)

(ಲೇಖಕರು – ಪ್ರಸಿದ್ಧ ಅರ್ಥದಾರಿ, ಕಲಾವಿಮರ್ಶಕ, ಸಂಶೋಧಕ, ಲೇಖಕ, ಸಂಘಟಕ. ಸಂಸ್ಕೃತಿ ಚಿಂತಕರು. ವಾಣಿಜ್ಯ, ಅರ್ಥಶಾಸ್ತ್ರ, ತತ್ವಶಾಸ್ತ್ರ, ಶಿಕ್ಷಣಗಳಲ್ಲಿ ತಜ್ಞ. ಸಾಂಸ್ಕೃತಿಕ ಸಾಮಾಜಿಕ ಕಾರ್ಯಕರ್ತ. ಮೇಲಿನ ಇಬ್ಬರು ಕಲಾವಿದರ ದೀರ್ಘ ಒಡನಾಡಿ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT