ಸಹನಾ ಹೆಗಡೆ
‘ಬೇನ್, ಮಗಳಿಗೆ ಹೊಸ ಸೈಕಲ್ ತಗೊಂಡ್ರಲ್ಲ. ಹಳೆದನ್ನ ನಂಗೆ ಕೊಡಿ. ಪಗಾರದಲ್ಲಿ ಮುರಿದುಕೊಳ್ಳಿ.’

‘ಇನ್ನು ಸೈಕಲ್‌ನಲ್ಲೇ ಬರ್ತೀಯಾ ಹೇಗೆ?’

ಆರೇಳು ವರುಷಗಳಿಂದ ಮನೆಗೆಲಸ ಮಾಡಿಕೊಂಡಿದ್ದ, 64–65 ವಯಸ್ಸಿನ ದೀವಾಲಿಬೇನ್‌ಗೆ ಛೇಡಿಸಿದ್ದೆ.

‘ಇಲ್ಲ ಬೇನ್, ಅದು... ನನ್ನ ಮೊಮ್ಮಗಳಿಗೆ.’

ವಾರದ ಹಿಂದಷ್ಟಯೇ ಅಜ್ಜಿಯ ಜೊತೆ ಬಂದಿದ್ದ ಆ ಪುಟ್ಟ ಹುಡುಗಿ, ಇದ್ದಷ್ಟೂ ಹೊತ್ತು ಹೊರಗೆ ನನ್ನ ಮಗಳ ಹಳೆ ಸೈಕಲ್ಲನ್ನು ನೇವರಿಸುತ್ತಲೇ ಇದ್ದಳಲ್ಲ... ‘ಸರಿ, ತಗೊಂಡು ಹೋಗು’ ಎಂದುಬಿಡಬೇಕಾಗಿತ್ತು. ಆದರೆ ‘ಸಾಹೇಬರನ್ನು ಕೇಳಿ ಹೇಳುತ್ತೇನೆ’ ಎಂದುಬಿಟ್ಟೆ.

ರಾತ್ರಿಯೋ ಮರುದಿನವೋ ವಿಷಯವನ್ನು ಎತ್ತಿದ್ದೇ, ‘‘ಹೊಸ ಸೈಕಲ್ ತಗೋಂಡ್ವಲ್ಲ ಅವನು, ‘ಯಾವಾಗಾದ್ರೂ ಈ ಕಡೆ ಬರ್ತಾ ಹಳೆದನ್ನು ತಂದ್ಕೊಡಿ ಸಾರ್. ಐನೂರು ರೂಪಾಯಿ ಕಡಿಮೆ ಮಾಡ್ತೀನಿ,’ ಅಂದಿದಾನೆ. ನೆನಪು ಮಾಡಿದ್ದು ಒಳ್ಳೇದಾಯ್ತು ನೋಡು” ಕಂಪ್ಯೂಟರ್‌ನಿಂದ ಕಣ್ಣುಕೀಳದೇ ಹೇಳಿಯಾಯಿತು ಸಾಹೇಬರು.

ವಾರದ ಕೊನೆಯಲ್ಲಿ ಸೈಕಲ್ ಮನೆಬಿಟ್ಟು ಹೋಗಿಯೂ ಆಯಿತು. ಹೊಸ ಸೈಕಲ್ ತುಳಿಯುತ್ತ ಬೀಗುತ್ತ ಮಗಳು, ಕ್ಯಾಂಪಸ್ ತುಂಬ ಓಡಾಡುತ್ತಿದ್ದರೆ ಖುಷಿಪಡಬೇಕಾಗಿದ್ದ ನನಗೋ ಹೊಟ್ಟೆಯಲ್ಲಿ ಅದೇನೋ ಹೇಳಲಾರದ ಸಂಕಟ.

ವರ್ಷ ಕಳೆಯುವಷ್ಟರಲ್ಲಿ, ಉದ್ಯೋಗದ ನಿಮಿತ್ತ ದೀರ್ಘಕಾಲ ಗುಜರಾತಿನ ಆನಂದ್‌ನಲ್ಲಿ ವಾಸವಾಗಿದ್ದ ನಾವು, ಮಣ್ಣಿನ ವಾಸನೆಯನ್ನರಸಿ ಬೆಂಗಳೂರಿಗೆ ಬಂದೆವು. ಶಾಲೆ, ಓದು, ಪರೀಕ್ಷೆ, ಆಟೋಟ, ಗೆಳೆಯ–ಗೆಳತಿಯರೆಂದು ಕಳೆದ ಮಕ್ಕಳು ಬಿಟ್ಟು ಹೋದ ಬಾಲ್ಯ ಬಾಲ್ಕನಿಯಲ್ಲಿ ಸೈಕಲ್ಲಾಗಿ ನಿಂತಿತ್ತು.

ಈಗ ಸೈಕಲ್, ಮನೆಯಿಂದ ದೂರವಿರುವ ಮಕ್ಕಳನ್ನು ಕ್ಷಣಕ್ಷಣಕ್ಕೂ ನೆನಪಿಸುವುದೊಂದೇ ಅಲ್ಲ, ಎದೆಯಾಳದಲ್ಲಿ ಹುಗಿದ ಹಳೆಯ ನೋವೊಂದನ್ನು ಮತ್ತೆ ಮತ್ತೆ ಕೆದಕುತ್ತಲೂ ಇರುತ್ತದೆ.

‘ಯಾಕೋ ಸಂತೋಷ, ಇಷ್ಟು ಲೇಟು? ದಿನಾ ಹೀಗೇ ಮಾಡ್ತೀಯಾ’ ಅಂದು, ಬೆಳಬೆಳಿಗ್ಗೆ ಸಾಹೇಬರ ದನಿಯಲ್ಲಿ ಅಸಹನೆಯ ತಾಂಡವ.

‘ದೂರದಿಂದ ಬರಬೇಕಲ್ಲ ಸರ್. ಮನೆ ಹತ್ತಿರ ಬಸ್ ಬರಲ್ಲ. ನಡಕೊಂಡೇ ಬರ್ಬೇಕು’ – ಟ್ರಾಫಿಕ್ ಜಾಮ್‌ನಿಂದಾಗಿ ಸಾಹೇಬರ ತಲೆ ಇನ್ನಷ್ಟು ಬಿಸಿಯಾಗಲಿಕ್ಕಿದೆ ಎನ್ನುವುದನ್ನು ಅರಿತಿರುವ ಕಾರ್ ಡ್ರೈವರ್, ಇಂತಹ ಹೊತ್ತಿನಲ್ಲಿ ಯಾವ ಧ್ವನಿಯಲ್ಲಿ ಮಾತನಾಡಬೇಕೆಂಬುದನ್ನು ನನಗಿಂತ ಚೆನ್ನಾಗಿ ಬಲ್ಲ.

ಸಂಜೆ, ಕಾರಿನ ಕೀ ಇಡಲು ಬಂದವನಿಗೆ, ಬಾಲ್ಕನಿಯಲ್ಲಿದ್ದ, ಮಗನ ದುಬಾರಿ ಬೆಲೆಯ ಗೇಯರ್ಡ್ ಸೈಕಲ್‌ನ ಕೀ ಕೊಟ್ಟು, ‘ತಗೊಂಡೋಗು. ನಾಳಿಂದ ಇದರಲ್ಲೇ ಬಾ. ಮಾರಬೇಡ ಅಷ್ಟೇ. ಉಪಯೋಗಿಸಿ ಆದಮೇಲೆ ಮನೆಯಲ್ಲಿ ತಮ್ಮಂದಿರು ಅವರಿವರು ಇದ್ದರೆ ಅವರಿಗೆ ಕೊಡು’ ಎಂದು ಕಳುಹಿಸಿಬಿಟ್ಟೆ.

ಪುಟ್ಟ ಬಾಲಕಿಯ ಬಟ್ಟಲು ಕಂಗಳಲ್ಲಿ ಮಿನುಗಿದ ಕನಸಿಗೆ ಅಂದು ಇಷ್ಟೇ ಇಷ್ಟು ನೀರೆರೆಯಲಾರದೆ ಅಸಹಾಯಕತೆಯಿಂದ ಒದ್ದಾಡಿದ, ಇಂದಿನವೆರೆಗೂ ಅಪರಾಧಿ ಭಾವದಲ್ಲಿ ತೊಳಲಾಡುತ್ತಲೇ ಇರುವ ನನಗೆ ಇಂದು, ಕೊಡುವ ಧೈರ್ಯ ಬಂದಿದ್ದಾದರೂ ಹೇಗೆ? ಅದೂ ಹೇಳದೇ ಕೇಳದೇ.

ಪ್ರತಿ ಪೈಸೆಗೂ ಬೆಲೆಯಿದೆ ಎನ್ನುವ, ಶ್ರಮದ ಗಳಿಕೆಯನ್ನು ಗೌರವಿಸುವ ನನಗೆ ಅಂದು ಆ ಐನೂರು ರೂಪಾಯಿ ದೊಡ್ಡ ಮೊತ್ತವೇ ಆಗಿದ್ದರೂ ಒಂದೊಮ್ಮೆ ಅದನ್ನು ಭರಿಸಿದ್ದರೆ ನಮ್ಮ ಬದುಕಿನಲ್ಲಿ ಅಂತಹುದೇನು ವ್ಯತ್ಯಾಸವಾಗುತ್ತಿತ್ತು? ಆಕಾಶವೇನೂ ತಲೆಯ ಮೇಲೆ ಬೀಳುತ್ತಿರಲಿಲ್ಲವಲ್ಲ.

ಒಬ್ಬ ದುಡಿಯುವ ಮಹಿಳೆಯಾಗಿದ್ದಲ್ಲಿ ನನ್ನ ವರ್ತನೆ ಹಾಗಿರುತ್ತಿತ್ತೇ? ಇಷ್ಟು ವರ್ಷದ ಮೇಲೆ, ಸಂಬಂಧವೇ ಇರದ ಇನ್ನಾರಿಗೋ ಸೈಕಲ್ ಕೊಟ್ಟ ತಕ್ಷಣ ಅಪರಾಧಿ ಭಾವದಿಂದ ಮುಕ್ತಳಾಗಿಬಿಡುವೆನೇ? ಒಳಗಣ ಗಾಯಕ್ಕೆ ಇದು ಯಾವ ಮುಲಾಮು?

ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣುಮಕ್ಕಳನ್ನು ಮದುವೆ ಮಾಡುವ ಸಂಪ್ರದಾಯ ಅವರಲ್ಲಿತ್ತು. ಆ ಮಗುವಿನ ತಾಯಿಯೂ ಎಳೆಪ್ರಾಯದವಳೇ ಇದ್ದಳು. ಎಷ್ಟೋ ಬಾರಿ ನಾನೇ ಅಜ್ಜಿಗೆ ಹೇಳಿದ್ದಿದೆ, ಮೊಮ್ಮಕ್ಕಳನ್ನು ಚೆನ್ನಾಗಿ ಓದಿಸು ಅಂತ. ‘ನಮ್ಮಲ್ಲಿ ಇದು ಕಷ್ಟ ಬೇನ್, ಹುಡುಗಿಗೆ ವಯಸ್ಸಾದರೆ ಆಮೇಲೆ ಯಾರೂ ಮದುವೆ ಮಾಡ್ಕೊಳ್ಳಲ್ಲ’ ಎನ್ನುತ್ತಿದ್ದಳು.

ಆಗ ಹತ್ತೋ ಹನ್ನೊಂದೋ ವಯಸ್ಸಿನವಳಾಗಿದ್ದ ಆ ಹುಡುಗಿಯನ್ನು ಹೆಚ್ಚೆಂದರೆ ಒಂದೆರಡು ವರ್ಷದಲ್ಲಿ ಮದುವೆ ಮಾಡಿಯೇ ಮಾಡಿರುತ್ತಾರೆ. ಈಗಂತೂ ಅವಳು ಮೈತುಂಬ ಸೀರೆಯುಟ್ಟು, ತಲೆತುಂಬ ಸೆರಗು ಹೊದ್ದು, ಗಂಡಸರ ನೆರಳು ಸೋಕಿದರೂ ಮುಖದ ಮೇಲೆ ಮುಸುಕೆಳೆದುಕೊಳ್ಳುತ್ತಿದ್ದ ತನ್ನ ತಾಯಿ, ಅಜ್ಜಿಯರನ್ನು ಚಾಚೂ ತಪ್ಪದೆ ಅನುಕರಿಸುತ್ತಿದ್ದಿರಬೇಕು.

ಒಂದೆರಡು ಮಕ್ಕಳ ತಾಯಿಯೂ ಆಗಿರಬಹುದು. ತಾನು ಚಲಾಯಿಸಲಾರದ ಸೈಕಲ್ ಅನ್ನು ತನ್ನ ಮಕ್ಕಳಿಗೆ ತೆಗೆಸಿಕೊಡುವ ಕನಸು ಕಾಣುತ್ತಿರಬಹುದು. ದೇವರ ದಯೆಯಿಂದ ಉತ್ತಮ ಆರ್ಥಿಕ ಪರಿಸ್ಥಿತಿಯಲ್ಲಿದ್ದರೆ ಅಂತಹದೊಂದು ಸೈಕಲ್ಲನ್ನು ತೆಗೆಸಿಕೊಟ್ಟಿರಲೂಬಹುದು. ಎಲ್ಲ ತಾಯಿಯರಂತೆ ಮಗಳ ನಗುವಿನಲ್ಲಿ ತೃಪ್ತಿ ಕಂಡುಕೊಂಡಿರಲೂಬಹುದು.

ಅಂತಹ ಒಂದು ಸಾಮಾಜಿಕ ಪರಿಸರದಲ್ಲಿ, ಪುಟ್ಟ ಹುಡುಗಿಯೊಬ್ಬಳ ಸೈಕಲ್ ಚಲಾಯಿಸುವ ಆಸೆಗೆ, ಅದರಿಂದಾಗಿ ದೊರೆಯಬಹುದಾಗಿದ್ದ ಖುಷಿಗೆ ಎಂತಹ ಮಹತ್ವ ಇದ್ದಿರಬಹುದು? ನನ್ನಂತೆ ಬದುಕಿನ ಹಿನ್ನೆಲೆಯಿರುವ ಯಾರೂ ಕಲ್ಪನೆಯಲ್ಲಿಯೂ ಅದರ ಬೆಲೆ ಕಟ್ಟಲು ಸಾಧ್ಯವಿಲ್ಲ.

ಕಾರು, ಸ್ಕೂಟರ್‌ಗಳನ್ನು ಚಲಾಯಿಸುವ ಮಹಿಳೆಯರು ಒಂದು ರೀತಿಯ liberating feeling ಅನ್ನು ಅನುಭವಿಸುತ್ತಾರಂತೆ. ಸೈಕಲ್ ಚಲಾಯಿಸಲು ಆಸೆಪಟ್ಟಿದ್ದ ಆ ಪುಟ್ಟ ಹುಡುಗಿಗೆ ಅದು ಒಂದು ಬಾಲಸಹಜ ಬಯಕೆಯಾಗಿದ್ದಿರಬಹುದು. ಆದರೆ, ಅವಕುಂಠನ ಪದ್ಧತಿಯಲ್ಲೇ ಬದುಕನ್ನು ಪೂರಾ ಕಳೆದ, ಕಳೆಯಲಿರುವ ಅವಳ ತಾಯಿಗೋ ಅಜ್ಜಿಗೋ ಮಗಳ, ಮೊಮ್ಮಗಳ ಸೈಕಲ್ ಸವಾರಿಯು ಅಂತಹದೊಂದು liberating ಕ್ಷಣದ ಅನುಭವವನ್ನು ತಂದುಕೊಡಲಿತ್ತೇ?

ಸೈಕಲ್, ಸ್ಕೂಟರ್, ಕಾರು ಎಲ್ಲವನ್ನೂ ಚಲಾಯಿಸಿಯೂ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಬಲತೆಗಳನ್ನು ಪಡೆದೂ ನಾನು ಇಂದಿಗೂ ಕಾಯುತ್ತಿರುವ ಆ liberating ಕ್ಷಣವಾದರೂ ಯಾವುದು?’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.