ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಕ್ಕಿನ ಮರಿಗಳು

Last Updated 7 ನವೆಂಬರ್ 2015, 19:32 IST
ಅಕ್ಷರ ಗಾತ್ರ

ನನಗಾಗ ಹದಿನೈದು ವರ್ಷ. ಆಗ ನನಗೆ ಸಾಣಿಕಟ್ಟಾದಲ್ಲಿರುವ ನಮ್ಮ ದೊಡ್ಡಪ್ಪನ ಮನೆಗೆ ಹೋಗುವುದೆಂದರೆ ತುಂಬಾ ಖುಷಿ. ಶಾಲೆಗೆ ರಜೆ ಬಿತ್ತೆಂದರೆ ಸಾಕು, ತಡಮಾಡದೆ ದೊಡ್ಡಪ್ಪನ ಮನೆಗೆ ಹೋಗುತ್ತಿದ್ದೆ. ಸಾಣಿಕಟ್ಟಾ ಕರಾವಳಿಯ ಒಂದು ರಮ್ಯವಾದ ಸ್ಥಳ. ಹೊಳೆಯ ಹತ್ತಿರವೇ ನಮ್ಮ ದೊಡ್ಡಪ್ಪನ ಮನೆ. ಹೊಳೆಯ ದಂಡೆಯ ಮೇಲೆ ಏಕಾಂಗಿಯಾಗಿ ಕುಳಿತು, ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುವುದೆಂದರೆ ನನಗೆ ಎಲ್ಲಿಲ್ಲದ ಆನಂದ.

ಎಂದಿನಂತೆ ಆ ವರ್ಷವೂ ಬೇಸಿಗೆಯ ರಜೆ ಬಂತು. ದೊಡ್ಡಪ್ಪನ ಮನೆಗೆ ಹೋಗಲು ತಂದೆಯವರಿಂದ ಹಣ ಪಡೆದುಕೊಂಡು ಬಸ್ಸನ್ನು ಹತ್ತಿದೆ. ಸಾಣಿಕಟ್ಟಾವನ್ನು ತಲುಪುವ ಹೊತ್ತಿಗೆ ಸೂರ್ಯ ಪಶ್ಚಿಮ ದಿಕ್ಕಿನ ಗುಡ್ಡದಲ್ಲಿ ಮರೆಯಾಗತೊಡಗಿದ್ದ. ದೊಡ್ಡಪ್ಪನ ಮನೆಯನ್ನು ಪ್ರವೇಶಿಸುವಾಗ ದೊಡ್ಡಮ್ಮ ಎದುರಾದಳು. ‘ಅರೆರೆ! ಬಾ ಮಗ ಬಾ’ ಎಂದು ಅತಿ ಸಂತೋಷದಿಂದ ನನ್ನನ್ನು ಸ್ವಾಗತಿಸಿ, ಕುಳಿತುಕೊಳ್ಳಲು ಚಾಪೆ ಹಾಸಿಕೊಟ್ಟು, ಚಹಾ ಮಾಡಿ ತಂದಳು. ಚಹಾ ಕುಡಿಯುತ್ತಾ ‘ದೊಡ್ಡಪ್ಪ ಎಲ್ಲಿಗೆ ಹೋಗಿದ್ದಾನೆ?’ ಎಂದು ಕೇಳಿದೆ. ‘ಪಳ್ದಿಗೆ ಮೀನು ಹಿಡಿಲಿಕ್ಕೆ ಹೊಳೆಗೆ ಹೋಗಿದ್ದಾರೆ’ ಎಂದಳು ದೊಡ್ಡಮ್ಮ.

ಮನೆಯಲ್ಲಿ ದೊಡ್ಡಮ್ಮಳ ಮಗಳು ಶಕುಂತಲಳೂ ಇದ್ದಂತೆ ಕಾಣಲಿಲ್ಲ. ಏಕೆಂದರೆ, ನನ್ನ ಮಾತು ಕೇಳಿದರೆ ಸಾಕು ಅವಳು ಸಂತೋಷದಿಂದ ಚಿಮ್ಮಿ ಬಂದು ಮಾತನಾಡಿಸುತ್ತಿದ್ದಳು. ನಾನೆಂದರೆ ಅವಳಿಗೆ ಅಷ್ಟು ಪ್ರೀತಿ. ‘ದೊಡ್ಡಮ್ಮ, ಶಕು ಎಲ್ಹೋಗಿದ್ದಾಳೆ?’ ಎಂದು ಕೇಳಿದೆ. ‘ಇಲ್ಲೇ ಗೆಳತಿ ಮನೆಗೆ ಹೋಗಿದ್ದಾಳೆ’ ಎಂದಳು ದೊಡ್ಡಮ್ಮ. ಸ್ವಲ್ಪ ಸಮಯ ಕಳೆದ ಮೇಲೆ ಶಕುಂತಲ ಬಂದಳು. ನನ್ನನ್ನು ನೋಡಿದ್ದೇ ಆನಂದದಿಂದ ‘ಏನಣ್ಣಾ, ಯಾವಾಗ ಬಂದಿ? ಮನೆಯಲ್ಲೆಲ್ಲರೂ ಆರಾಮವಾಗಿದ್ದಾರೆ ಹೇಗೆ?’ ಎಂದು ಕೇಳಿದಳು.

‘ಈಗ ಬಂದೆ. ಮನೆಯಲ್ಲೆಲ್ಲರೂ ಆರಾಮವಾಗಿದ್ದಾರೆ’ ಎಂದೆ. ‘ಹೊಳೆಯ ಹತ್ತಿರ ತಿರ್ಗಾಡ್ಕೊಂಡು ಬರೋಣವೆ?’ ಎಂದು ಕೇಳಿದೆ. ‘ಹ್ಞೂ’ ಎಂದು ಒಪ್ಪಿದಳು ಶಕು. ದೊಡ್ಡಮ್ಮ ‘ಬೇಗ ಬಂದ್ಬಿಡಿ, ಸಂಜೆಯಾಗಿದೆ’ ಎಂದಳು. ಇಬ್ಬರೂ ಹೊಳೆಯತ್ತ ಹೆಜ್ಜೆ ಹಾಕಿದೆವು. ಆಗಷ್ಟೇ ಇಳಿತದ ಸಮಯವಾದ್ದರಿಂದ ಹೊಳೆಯಲ್ಲಿ ನೀರು ಬತ್ತಿಹೋಗಿತ್ತು. ಬಹಳಷ್ಟು ದೂರದವರೆಗೆ ನದಿಯ ನೆಲ ಕಾಣಿಸುತ್ತಿತ್ತು. ಅಲ್ಲಲ್ಲಿ ಕಲಗದ ಹೆಟ್ಟೆಗಳು ಕಾಣಿಸುತ್ತಿದ್ದವು. ‘ಛೆ! ಶಕು, ಭರತವಿದ್ದರೆ ಚೆನ್ನಾಗಿತ್ತು.... ಹೊಳೆಯಲ್ಲಿ ನೀರು ತುಂಬಿರುವಾಗ ದಂಡೆಯ ಮೇಲೆ ನಡೆಯುವ ಮಜಾನೆ ಬೇರೆ’ ಎಂದೆ.

‘ಅಯ್ಯೋ! ಅದಕ್ಕೇನು? ನಾಳೆ ಭರತದ ಸಮಯಕ್ಕೇ ಹೊಳೆಗೆ ಬರೋಣ’ ಎಂದು ಸಮಾಧಾನ ಹೇಳಿದ ಶಕು, ‘ಏಯ್! ನೀನು ಮೊನ್ನೆಯೇ ಬರಬೇಕಿತ್ತು’ ಎಂದಳು. ‘ಯಾಕೆ? ಏನು ಮೊನ್ನೆಯ ವಿಶೇಷ?’– ಕುತೂಹಲದಂದ ಕೇಳಿದೆ. ‘ನನ್ನ ಗೆಳತಿ ಸುಧಾ ಬಂದಿದ್ದಳು.... ಏನು ಮಜಾ ಆಯ್ತು ಗೊತ್ತಾ?’ ‘ಏನಾಯ್ತು?’

‘ಅಮದಳ್ಳಿಯಿಂದ ನಾಗೇಶಣ್ಣ ಬಂದಿದ್ದ. ಅಂವ ಅಮ್ಮನ ಸೀರೆ ತಲೆಯಿಂದ ಕಾಲವರೆಗೂ ಹೊದ್ದುಕೊಂಡು ಮಲಗಿದ್ದ. ಅಘನಾಶಿನಿಯಿಂದ ಬಂದ ಸುಧಾ ಮಲಗಿದ್ದು ನಾನೇ ಅಂದುಕೊಂಡು ಸೀರೆ ಜಗ್ಗಿದರೆ, ನಾಗೇಶಣ್ಣ! ಅವಳಿಗೆ ನಾಗೇಶಣ್ಣನ ಪರಿಚಯವಿಲ್ಲವಲ್ಲ, ಹೊರಗೆ ಓಡಿ ಬಂದು ನನ್ನ ಕೂಗಿದಳು. ನಾನು ಹಿತ್ತಿಲಿನಿಂದ ಓಡೋಡಿ ಬರುವಷ್ಟರಲ್ಲಿ ಅವಳ ಮುಖ ಭಯದಿಂದ ತುಂಬಿಕೊಂಡಿತ್ತು. ವಿಷಯ ತಿಳಿದ ಮೇಲೆ ನಾನು ನಕ್ಕಿದ್ದೇ ನಕ್ಕಿದ್ದು. ಅವಳೂ ನಕ್ಕಳು. ದಿನವಿಡೀ ಅದನ್ನೇ ನೆನೆಸಿಕೊಂಡು ನಕ್ಕು ನಕ್ಕು ಹಣ್ಣಾದೆವು ಗೊತ್ತಾ?’

‘ಅವರಿಬ್ಬರೂ ಎಲ್ಲಿಗೆ ಹೋದರು?’

‘ಸುಧಾ ಅವರೂರಿನ ಸುಗ್ಗಿ ಹಬ್ಬಕ್ಕೆ ಕರೆಯಲು ಬಂದಿದ್ದಳು. ಅವತ್ತೇ ಸಂಜೆ ಹೋದಳು. ನಾಗೇಶಣ್ಣ ನಿನ್ನೆ ಹೋದ. ಅವನಿಗೆ ಬೋಟಿಗೆ ಕರೆ ಬಂತಂತೆ...’ ಹೀಗೆ ಅದೂ ಇದೂ ಮಾತನಾಡುತ್ತ ಹೊಳೆಯ ದಂಡೆಯ ಮೇಲೆ ತಿರುಗಾಡಿಕೊಂಡು ಮನೆ ಸೇರಿದಾಗ ಕತ್ತಲಾಗಿತ್ತು. ಆಗಲೇ ದೊಡ್ಡಮ್ಮ ಚಿಮಣಿ ದೀಪವನ್ನು ಹಚ್ಚಿದ್ದಳು. ಮೀನು ಹಿಡಿಯಲು ಹೊಳೆಗೆ ಹೋಗಿದ್ದ ದೊಡ್ಡಪ್ಪನೂ ಅಷ್ಟೊತ್ತಿಗೆ ಬಂದ. ಸಾಕಷ್ಟು ಮೀನುಗಳು ಅವನ ಕೊಲಿಯಲ್ಲಿ ಚಟಪಟ ಸದ್ದು ಮಾಡುತ್ತಿದ್ದವು. ನನ್ನನ್ನು ನೋಡಿದವ ಸಂತೋಷದಿಂದ ‘ಏನ್ ಮಗಾ, ಯಾವಾಗ್ಬಂದಿ? ಮನೇಲೆಲ್ಲಾ ಆರಾಮ ಅವ್ರೇನೋ’ ಎಂದು ಕೇಳಿದ.

‘ಆವಾಗಲೇ ಬಂದೆ. ಮನೆಯಲ್ಲೆಲ್ಲಾ ಆರಾಮವಾಗಿದ್ದಾರೆ’ ಎಂದೆ. ದೊಡ್ಡಪ್ಪ ದೊಡ್ಡಮ್ಮನ ಕಡೆ ತಿರುಗಿ, ‘ಮಗಾ ಹಸಿದಿರಬೇಕು. ಘನಾ ಕಾಂಗಳಸೆ ಮೀನು ಸಿಕ್ಕೀದು. ಬೇಗ ಬೇಗ ಪಳ್ದಿ ಮಾಡು’ ಎಂದು ಮನೆಯಿಂದ ಹೊರಗೆ  ಹೋಗತೊಡಗಿದ. ‘ಮತ್ತೆ ಎಲ್ಲಿಗೆ ಹೋಗ್ತೀರಿ? ಮಗ ಈಗಷ್ಟೇ ಬಂದಿದ್ದಾನೆ.... ಮಾತನಾಡುತ್ತ ಕುಳಿತುಕೊಳ್ಳಬಾರದೆ?’ ಎಂದಳು ದೊಡ್ಡಮ್ಮ.

‘ಇಲ್ಲ ನಂಗೆ ಕೆಲ್ಸ ಅದೆ, ನಾಳೆ ಮಾತನಾಡಿದರಾಯಿತು’ ಎಂದು ದೊಡ್ಡಪ್ಪ ಏನೋ ಘನಂದಾರಿ ಕೆಲಸ ಇರುವ ಹಾಗೆ ಗಡಬಿಡಿಸಿ ನಡೆದ. ದೊಡ್ಡಪ್ಪ ಎಲ್ಲಿಗೆ ಹೋಗ್ತಾನೆ ಅಂತ ನಂಗೆ ಗೊತ್ತಿತ್ತು. ನಾನು ಸುಮ್ಮನೆ ಕುಳಿತೆ. ‘ನೋಡು ಮಗಾ, ಹೆಂಡ ಕುಡೀಲಿಕ್ಕೆ ಹೇಗೆ ಓಡ್ತಾರೆ ಅಂತ.... ದುಡಿದದ್ದೆಲ್ಲಾ ಸಾರಾಯಿಗೆ ಖರ್ಚು ಮಾಡಿದ್ರೆ ಬದುಕು ಹೇಗೆ....’– ದೊಡ್ಡಮ್ಮ ಏನೇನೋ ಹೇಳುತ್ತ ಅಡುಗೆ  ಮಾಡತೊಡಗಿದಳು. ಅವರದು ಚಿಕ್ಕ ಮನೆ. ಹೆಚ್ಚು ಕಡಿಮೆ ಗುಡಿಸಲೇ. ಅದಕ್ಕೆ ಹಂಚು ಹೊದೆಸಿರುವುದರಿಂದ ಹಂಚಿನಮನೆ ಎನ್ನಬಹುದು. ಅಲ್ಲೇ ಅಡುಗೆ, ಅಲ್ಲೇ ಊಟ, ಅಲ್ಲೇ ಅಭ್ಯಾಸ, ಅಲ್ಲೇ ಮಲಗುವುದು.

ದೊಡ್ಡಮ್ಮನನ್ನು ಕಂಡು ಪಾಪ ಅನ್ನಿಸಿತು. ತದಡಿಯಲ್ಲಿ ಮೀನು ಹೊರುವ ಕೆಲಸ ಮಾಡಿ ಮನೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಳು. ದೊಡ್ಡಪ್ಪನ ದುಡಿತ ಹೆಚ್ಚುಕಡಿಮೆ ಸಾರಾಯಿ ಇಸ್ಪೀಟಿಗೇ ಮೀಸಲಾಗಿತ್ತು. ದೊಡ್ಡಮ್ಮ ಗಡದ್ದಾಗಿ ಮೀನಿನ ಸಾರನ್ನು ಮಾಡಿ ಊಟ ಬಡಿಸತೊಡಗಿದಳು. ಸಾರಾಯಿ ಕುಡಿಯಲು ಹೋಗಿದ್ದ ದೊಡ್ಡಪ್ಪನೂ ಬಂದು ಊಟಕ್ಕೆ ಕುಳಿತ. ದೊಡ್ಡಮ್ಮ ಬಡಿಸಲು ನಿಂತಿದ್ದಳು. ಅಷ್ಟರಲ್ಲಿ ಎಲ್ಲಿಂದಲೋ ಎರಡು ಬೆಕ್ಕಿನ ಮರಿಗಳು ಇದ್ದಕ್ಕಿದ್ದಂತೆ ಓಡಿ ಬಂದವು. ಬಂದಿದ್ದೇ ಎರಡೂ ಮರಿಗಳು ನನ್ನ ತಾಟಿಗೆ ಬಾಯಿ ಹಾಕಲು ಬಂದವು. ನಾನು ಅವುಗಳನ್ನು ತಡೆದು, ಒಂದು ಬದಿಯಲ್ಲಿ ನನ್ನ ತಾಟಿನ ಸ್ವಲ್ಪ ಅನ್ನ ಮತ್ತು ಮೀನು ಹೋಳುಗಳನ್ನು ಹಾಕಿದೆ. ಎರಡೂ ತಿನ್ನತೊಡಗಿದವು.

‘ದೊಡ್ಡಮ್ಮ, ಇವು ಯಾರ ಬೆಕ್ಕಿನ ಮರಿಗಳು?’ ಎಂದು ಕೇಳಿದೆ. ದೊಡ್ಡಮ್ಮ ಉತ್ತರಿಸಬೇಕೆನ್ನುವಷ್ಟರಲ್ಲಿ ಶಕುಂತಲ , ಆ ಬೆಕ್ಕಿನಮರಿಗಳ ಕಥೆಯನ್ನು ಹೇಳತೊಡಗಿದಳು. ‘ಅಣ್ಣಾ, ಹಿಂದೆ ನಮ್ಮ ದೊಡ್ಡ ಬೆಕ್ಕು ಇತ್ತಲ್ಲ, ಅದರ ಮರಿಗಳಿವು. ದೊಡ್ಡ ಬೆಕ್ಕು ಹ್ಯಾಗೇನೊ ಗದ್ದೇಲಿ ಸತ್ತು ಬಿದ್ದಿತ್ತು...’

‘ಅಯ್ಯೋ ಪಾಪ! ತಬ್ಬಲಿ ಮರಿಗಳು’ ಎಂದೆ ಕನಿಕರದಿಂದ. ಇನ್ನೂ ಸ್ವಲ್ಪ ಅನ್ನ ಆ ಮರಿಗಳಿಗೆ ಹಾಕಿದೆ. ನಾನು ಮನೆಯಲ್ಲಿ ಸಾಕಿದ ಬೆಕ್ಕಿನ ಮರಿ ಮತ್ತು ಗಿಳಿಯ ನೆನಪಾಯಿತು. ನನಗೆ ಪ್ರಾಣಿಗಳೆಂದರೆ ತುಂಬ ಪ್ರೀತಿ. ನಾನು ಸಾಕಿದ ಬೆಕ್ಕಿನ ಮರಿ ಮತ್ತು ಗಿಳಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದೆ. ಊರಿನಿಂದ ದೊಡ್ಡಪ್ಪನ ಮನೆಗೆ ಬರುವಾಗ ಆ ಪ್ರಾಣಿಗಳ ಜವಾಬ್ದಾರಿಯನ್ನು ನನ್ನ ಅಣ್ಣನಿಗೆ ವಹಿಸಿಕೊಟ್ಟು ಬಂದಿದ್ದೆ.

‘ಯಾಕೋ ಸುಮ್ಮನೆ ಕುಂತ್ಬಿಟ್ಟಿ? ಊಟ ಮಾಡು’ ಎಂದು ದೊಡ್ಡಮ್ಮ  ಹೇಳಿದಾಗಲೇ ನನ್ನ ಯೋಚನಾ ಲಹರಿಗೆ ಅಂತ್ಯವಾಯ್ತು.  ‘ಏನಿಲ್ಲ’ ಎಂದು ಊಟ ಮಾಡತೊಡಗಿದೆ. ನಾನು ಹಾಕಿದ್ದ ಅನ್ನವನ್ನು ಮುಗಿಸಿದ ಬೆಕ್ಕಿನ ಮರಿಗಳು ದೊಡ್ಡಪ್ಪನ ತಾಟಿಗೆ ಬಾಯಿ ಹಾಕಿದವು. ಸಾರಾಯಿ ಕುಡಿದಿದ್ದ ದೊಡ್ಡಪ್ಪ ಕೋಪದಿಂದ, ‘ಈ ದರಿದ್ರ ಬೆಕ್ಕಿನ ಮರಿಗಳು ಉಂಬುಕೇ ಕೊಡುವುದಿಲ್ಲ’ ಎಂದವನೆ ತಾಟಿನಿಂದೆದ್ದು, ಎಂಜಲು ಕೈಯಿಂದಲೇ ಬೆಕ್ಕಿನ ಮರಿಗಳನ್ನು ಹಿಡಿದು ಚೀಲವೊಂದರಲ್ಲಿ ತುರುಕಿ, ಚೀಲದ ಬಾಯನ್ನು ಕಟ್ಟಿದ. ಆಮೇಲೆ ಕೈ ತೊಳೆದುಕೊಂಡು ಊಟಕ್ಕೆ ಕುಳಿತ. ಬೆಕ್ಕಿನ ಮರಿಗಳು ಮ್ಯಾಂವ್ ಮ್ಯಾಂವ್ ಎಂದು ಕೂಗತೊಡಗಿದವು. ನಾನು ‘ದೊಡ್ಡಪ್ಪ, ಬಿಟ್ಟು ಬಿಡು ಅವುಗಳನ್ನು’ ಎಂದೆ.

‘ಯಾಕೋ.... ಈ ಬೆಕ್ಕಿನ ಮರಿಗಳ ಕಾಟದಲ್ಲಿ ಸರಿಯಾಗಿ ಉಂಬುಕೇ ಆಗ್ತಿಲ್ಲ. ನೀನು ಸುಮ್ನುಳಿ. ಅವುಗಳನ್ನು ಇಂದು ಹೊಳೇಲಿ ಹೊತಾಕ್ತಿ’ ಎಂದ. ದೊಡ್ಡಪ್ಪನ ಈ ನಡವಳಿಕೆಯಿಂದ ದೊಡ್ಡಮ್ಮಗೆ ಕೋಪ ಬಂದಿತ್ತು. ‘ಬೆಕ್ಕು ಆಗುವುದಿಲ್ಲ ಎಂದರೆ ಚಟ್ಟಿ ಮೇಲೆ ಕುಳಿತು ಉಣ್ಣು’ ಎಂದಳು.

‘ನಾನೇಕೆ ಚಟ್ಟಿಯ ಮೇಲೆ ಉಣ್ಣಬೇಕು? ನೀನೆ ಹೋಗು’ ಎಂದ ದೊಡ್ಡಪ್ಪ ಗಡುಸಾಗಿ.

‘ಏಯ್! ಅಮ್ಮ ಸುಮ್ಮನುಳಿಯೇ’ ಎಂದು ಶಕು ದೊಡ್ಡಮ್ಮನ ಬಾಯಿ ಮುಚ್ಚಿಸಿದಳು.

ನಾನು ‘ಯಾಕ್ ದೊಡ್ಡಪ್ಪ ಅವುಗಳನ್ನು ಹೊಳೇಲಿ ಹಾಕ್ತಿ? ಬೇಡ ಪಾಪ’ ಎಂದೆ. ಆದರೆ ದೊಡ್ಡಪ್ಪ ಕೇಳಲಿಲ್ಲ. ನಾನು ಬೆಕ್ಕಿನ ಮರಿಗಳನ್ನು ಚೀಲದಿಂದ ಬಿಡಿಸಲು ಹೋದೆ. ಆದರೆ ದೊಡ್ಡಪ್ಪ ಬಿಡಲಿಲ್ಲ. ನನಗೆ ಬಯ್ದು ಸುಮ್ಮನಿರುವಂತೆ ಮಾಡಿದ. ಆ ಬೆಕ್ಕಿನ ಮರಿಗಳ ಮೇಲೆ ನನಗೆ ಕನಿಕರ ಮೂಡಿತ್ತು. ಆ ಪ್ರಾಣಿಗಳಿಗಾದ ಸ್ಥಿತಿಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಯಿತು.

ಊಟ ಮುಗಿದ ಕೂಡಲೆ ದೊಡ್ಡಪ್ಪ ಬೆಕ್ಕಿನ ಮರಿಗಳನ್ನು ಹಾಕಿಟ್ಟಿದ್ದ ಚೀಲವನ್ನು ಹಿಡಿದು ಹೊಳೆಯ ಕಡೆಗೆ ಹೊರಟ. ನಮ್ಮ ಊಟ ಮುಗಿದಿದ್ದರಿಂದ ದೊಡ್ಡಮ್ಮ ಊಟ ಮಾಡತೊಡಗಿದ್ದಳು. ಶಕುಂತಲ ಅವಳಿಗೆ ಬಡಿಸುತ್ತಿದ್ದಳು. ಇದೇ ಸಮಯವೆಂದುಕೊಂಡು ನಾನು ದೊಡ್ಡಪ್ಪನನ್ನು ಹಿಂಬಾಲಿಸಿದೆ. ಹೊಳೆಯನ್ನು ತಲುಪಿದ ಕೂಡಲೆ ದೊಡ್ಡಪ್ಪ ಬೆಕ್ಕಿನ ಮರಿಗಳನ್ನು ಚೀಲದ ಸಮೇತ ಹೊಳೆಯಲ್ಲಿ ಹಾಕಿ ಹಿಂದಿರುಗಿದ.

ನಾನು ಅಲ್ಲೇ ಒಂದು ಮರದ ಹಿಂದೆ ಅವಿತುಕೊಂಡವ ದೊಡ್ಡಪ್ಪ ಹೋದ ಮೇಲೆ ಬೆಕ್ಕಿನ ಮರಿಗಳನ್ನು ರಕ್ಷಿಸಲು ಹೊಳೆಯಲ್ಲಿ ಇಳಿದೆ. ಹೊಳೆಯ ನೀರು ತುಂಬಾ ತಂಪಾಗಿತ್ತು. ಕೂಗುತ್ತಿದ್ದ ಬೆಕ್ಕಿನ ಮರಿಗಳು ಕಡೆ ಕಡೆಗೆ ಶಬ್ದ ಮಾಡದೆ ಇದ್ದುದ್ದನ್ನು ನೋಡಿ ಸತ್ತವೇನೋ ಎಂದು ಭಯವಾಯಿತು. ಚಳಿ ಮೈಯನ್ನು ಕೊರೆಯತೊಡಗಿತು.

ಬೆಳದಿಂಗಳು ಇದ್ದುದರಿಂದ ಚೀಲ ಹತ್ತಿರದಲ್ಲೇ ತೇಲಾಡುತ್ತಿರುವುದು ಕಾಣಿಸಿತು. ಬೇಗ ಬೇಗ ಈಜಿ ಹೋಗಿ, ಚೀಲವನ್ನು ಹಿಡಿದು ದಂಡೆಗೆ ಬಂದೆ. ಚೀಲವನ್ನು ಬಿಚ್ಚಿ ನೋಡುತ್ತೇನೆ, ಎರಡೂ ಮರಿಗಳು ಅರ್ಧ ಜೀವವಾಗಿ ಬಿದ್ದಿದ್ದವು. ಬರೀ ಕಣ್ಣು ತೆರೆಯುವ ಶಕ್ತಿ ಮಾತ್ರ ಅವುಗಳಲ್ಲಿತ್ತು. ಅವುಗಳನ್ನು ನೋಡಿ ನನ್ನ ಹೃದಯ ಹಿಂಡಿದಂತಾಯಿತು. ದುಃಖ ಉಮ್ಮಳಿಸಿ ಬಂತು. ನನಗೆ ನಾನೇ ಸಮಾಧಾನ ಮಾಡಿಕೊಂಡು, ಬೆಕ್ಕಿನ ಮರಿಗಳನ್ನೆತ್ತಿಕೊಂಡು, ವೇಗವಾಗಿ ನಡೆಯುತ್ತ ದೊಡ್ಡಪ್ಪನ ಮನೆ ತಲುಪಿದೆ.

ಆದರೆ ಬೆಕ್ಕಿನ ಮರಿಗಳನ್ನು ಮನೆಯೊಳಗೆ ಒಯ್ಯುವುದು ಹೇಗೆ? ದೊಡ್ಡಪ್ಪ ನೋಡಿದರೆ ಸುಮ್ಮನುಳಿಯುತ್ತಾನೆಯೆ? ಮತ್ತೆ ಮಹಾಭಾರತ ಯುದ್ಧ ಶುರುವಾಗುತ್ತದೆ. ನಾನು ಅಳುಕುತ್ತಲೇ ಮನೆಯೊಳಗೆ ಅಡಿಯಿಡಲು ಅನುಮಾನಿಸುತ್ತ ನಿಂತೆ. ದೂರದಲ್ಲಿ ಊಳಿಡುತ್ತಿದ್ದ ನಾಯಿಗಳು ನನ್ನ ದುಗುಡವನ್ನು ಹೆಚ್ಚಿಸಿದ್ದವು. ಆಗಲೇ ದೊಡ್ಡಮ್ಮಂದು ಊಟ ಆಗಿತ್ತು. ದೊಡ್ಡಮ್ಮ ಮತ್ತು ಶಕುಂತಲ ಪಾತ್ರೆ ತೊಳೆಯಲು ಹೊರಗೆ ಬರುತ್ತಲಿದ್ದರು. ನನ್ನನ್ನು ನೋಡಿದ ಶಕು ‘ಅಣ್ಣಾ, ಎಲ್ಲಿಗೆ ಹೋಗಿದ್ದಿ?’ ಎಂದು ಕೇಳಿದಳು.

ನಾನು ‘ನಿಮ್ಮಪ್ಪ ಹೊಳೆಯಲ್ಲಿ ಹಾಕಿದ ಬೆಕ್ಕಿನ ಮರಿಗಳನ್ನು ರಕ್ಷಿಸಿ ತಂದಿದ್ದೇನೆ. ಪಾಪ, ಸ್ವಲ್ಪ ಜೀವವಿದೆ’ ಎಂದೆ. ‘ಈ ರಾತ್ರಿಯಲ್ಲಿ ಹೊಳೆಯಲ್ಲಿ ಇಳ್ದಿಯೇನೋ’ ಎಂದು ದೊಡ್ಡಮ್ಮ ಹೌಹಾರಿದಳು. ನಾನು ಹೆದರಿದೆ. ಆದರೂ ಸಾವರಿಸಿಕೊಂಡು, ‘ಏನಾಯ್ತು ಬಿಡು ದೊಡ್ಡಮ್ಮ.... ಪಾಪ, ಈ ಮರಿಗಳು ಸತ್ತೇ ಹೋಗುತ್ತಿದ್ದವು’ ಎಂದೆ.

‘ಶಕು, ಬಾ ಇವುಗಳನ್ನು ಒಲೆಯ ಹತ್ತಿರ ಬೆಚ್ಚಗೆ ಇಡೋಣ’ ಎಂದು ಒಳಗೆ ಹೋದೆ. ಶಕು ನನ್ನನ್ನು ಹಿಂಬಾಲಿಸಿದಳು. ದೊಡ್ಡಪ್ಪ ಆಗಲೇ ಮಲಗಿದ್ದ. ಬೆಕ್ಕಿನ ಮರಿಗಳನ್ನು ಬಟ್ಟೆಯಿಂದ ಒರೆಸಿ, ಒಲೆಯ ಹತ್ತಿರ ಬಟ್ಟೆ ಹಾಕಿ ಮಲಗಿಸಿದೆ. ಎರಡೂ ಮರಿಗಳು ನನ್ನನ್ನು ಕೃತಜ್ಞತಾ ದೃಷ್ಟಿಯಿಂದ ನೋಡಿದವು. ‘ಆರಾಮಾಗಿ ಮಲಗಿ.... ಬೆಳಿಗ್ಗೆ ಆಗೋದ್ರೊಳಗೆ ಎಲ್ಲ ಸರಿ ಹೋಗುತ್ತದೆ’ ಎಂದು ಬೆಕ್ಕಿನ ಮರಿಗಳ ಮೈಯನ್ನು ಸವರಿ, ನನ್ನ ಹಸಿಯಾಗಿದ್ದ ಬಟ್ಟೆಯನ್ನು ಬದಲಿಸಿ, ಚಾಪೆ ಹಾಸಿಕೊಂಡು ಮಲಗಿದೆ.

ಬೆಳಿಗ್ಗೆ ಶಕುಂತಲ ಎಬ್ಬಿಸಿದಾಗಲೇ ನನಗೆ ಎಚ್ಚರವಾದದ್ದು. ಅವಳ ಮುಖದಲ್ಲಿ ಗಾಬರಿ ಮೂಡಿತ್ತು. ಕಣ್ಣಿನಲ್ಲಿ ನೀರು ತುಂಬಿತ್ತು. ಅವಳು ಏನನ್ನೋ ಹೇಳಲು ತಿಣುಕಾಡುತ್ತಿದ್ದಳು. ‘ಏನು ಶಕು ಏನಾಯ್ತು?’ ಎಂದು ಕೇಳಿದೆ.

‘ಅಣ್ಣಾ, ಬೆಕ್ಕಿನ ಮರಿಗಳು ಸತ್ತಿವೆ’ ಎಂದಳು ಶಕು.ನನಗೆ ಒಮ್ಮೆಲೆ ಹೃದಯ ಬಾಯಿಗೆ ಬಂದಂತಾಯಿತು. ಕೂಡಲೇ ಎದ್ದು, ಬೆಕ್ಕಿನ ಮರಿಗಳನ್ನು ಮಲಗಿಸಿದ್ದ ಒಲೆಯ ಹತ್ತಿರ ಬಂದೆ. ಎರಡೂ ಮರಿಗಳು ಸತ್ತು ನೆಟ್ಟಗಾಗಿದ್ದವು. ನನಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ದುಃಖ ಉಮ್ಮಳಿಸಿ ಬಂತು. ಕಣ್ಣುಗಳಿಂದ ನೀರು ಹನಿದವು. ಮುಸು ಮುಸು ಅಳತೊಡಗಿದೆ.

ಇದನ್ನು ನೋಡಿದ ಶಕುಗೂ ದುಃಖ ಉಮ್ಮಳಿಸಿ ಬಂತು. ‘ಅಣ್ಣಾ, ಅಳಬೇಡ, ನೀನು ಅತ್ತರೆ ನನಗೂ ಅಳು ಬರುತ್ತದೆ’ ಎಂದು ನನ್ನನ್ನು ತಬ್ಬಿದಳು. ಅವಳ ಕಣ್ಣಿಂದಲೂ ಹನಿಗಳು ಉದುರತೊಡಗಿದವು. ಅಷ್ಟರಲ್ಲಿ ಯಾವುದೋ ಕೈಗಳು ನಮ್ಮನ್ನು ಸುತ್ತುವರೆಯುತ್ತಿರುವಂತೆ ಭಾಸವಾಯಿತು. ಕೈ ಬಂದತ್ತ ತಿರುಗಿ ನೋಡಿದರೆ ಅಚ್ಚರಿ ಕಾದಿತ್ತು. ನನಗೆ ನಂಬಲು ಸಾಧ್ಯವಾಗಲಿಲ್ಲ. ನಮ್ಮ ಗಲಾಟೆ ಕೇಳಿ ಬಂದಿದ್ದ ದೊಡ್ಡಪ್ಪ ನಮ್ಮನ್ನು ಸಾಂತ್ವನಗೊಳಿಸಲು ನಮ್ಮಿಬ್ಬರನ್ನು ತಬ್ಬಿ ಹಿಡಿದಿದ್ದ. ಅವನ ಕಣ್ಣುಗಳಲ್ಲೂ ನೀರು ತುಂಬಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT