ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ರಾಯಲ್ಸ್‌ಗೆ ಸತತ ನಾಲ್ಕನೇ ಸೋಲು: ಕರಣ್‌ ಆಟಕ್ಕೆ ಒಲಿದ ಜಯ

Published 15 ಮೇ 2024, 18:55 IST
Last Updated 15 ಮೇ 2024, 18:55 IST
ಅಕ್ಷರ ಗಾತ್ರ

ಗುವಾಹಟಿ (ಪಿಟಿಐ): ನಾಯಕ ಸ್ಯಾಮ್‌ ಕರನ್‌ (ಔಟಾಗದೇ 63; 41ಎ ಮತ್ತು 24ಕ್ಕೆ 2) ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಪಂಜಾಬ್‌ ಕಿಂಗ್ಸ್‌ ತಂಡವು ಬುಧವಾರ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಐದು ವಿಕೆಟ್‌ಗಳಿಂದ ಜಯ ಸಾಧಿಸಿತು.

ರಾಯಲ್ಸ್‌ ತಂಡವು ಈ ಸೋಲಿನೊಂದಿಗೆ ಲೀಗ್‌ ಹಂತದ ಅಭಿಯಾನವನ್ನು ಮುಗಿಸಿತು. ಇದು ರಾಜಸ್ಥಾನ ತಂಡಕ್ಕೆ ಸತತ ನಾಲ್ಕನೇ ಸೋಲಾಗಿದೆ. ತಂಡವು 16 ಅಂಕಗಳೊಂದಿಗೆ ಈಗಾಗಲೇ ಪ್ಲೇಆಫ್‌ಗೆ ಮುನ್ನಡೆದಿದೆ.

ಪಂಜಾನ್‌ ತಂಡವು ಈ ಗೆಲುವಿನೊಂದಿಗೆ 10 ಅಂಕವನ್ನು ಕಲೆಹಾಕಿ, ಪಾಯಿಂಟ್‌ ಪಟ್ಟಿಯಲ್ಲಿ 10ನೇ ಸ್ಥಾನದಿಂದ 9ನೇ ಸ್ಥಾನಕ್ಕೇರಿದೆ. ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದಿರುವ ಕಿಂಗ್ಸ್‌, ಭಾನುವಾರ ಔಪಚಾರಿಕ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಎದುರಿಸಲಿದೆ.

ಮಂದಗತಿಯ ಪಿಚ್‌ನಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ ಪಂಜಾಬ್‌ ಕಿಂಗ್ಸ್‌ ಬೌಲರ್‌ಗಳು, ರಾಜಸ್ಥಾನ ರಾಯಲ್ಸ್ ತಂಡವನ್ನು 9 ವಿಕೆಟ್‌ಗೆ 144 ರನ್‌ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರು.

ಗುರಿಯನ್ನು ಬೆನ್ನತ್ತಿದ ಕಿಂಗ್ಸ್‌ ತಂಡಕ್ಕೆ ಟ್ರೆಂಟ್ ಬೌಲ್ಟ್ ಆರಂಭದಲ್ಲೇ ಪೆಟ್ಟು ನೀಡಿದರು. ಆರಂಭ ಆಟಗಾರ ಪ್ರಭಸಿಮ್ರನ್‌ ಸಿಂಗ್‌ (6) ಈ ಪಂದ್ಯದಲ್ಲೂ ನಿರಾಸೆ ಮೂಡಿಸಿದರು. ನಂತರದಲ್ಲಿ ಜಾನಿ ಬೆಸ್ಟೊ (14) ಮತ್ತು ರಿಲೀ ರೂಸೊ (22), ಶಶಾಂಕ್‌ ಸಿಂಗ್‌ (0) ಅವರೂ ಬೇಗನೆ ನಿರ್ಗಮಿಸಿದರು. ತಂಡವು 48 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ತಾಳ್ಮೆಯ ಆಟವಾಡಿದ ಕರಣ್‌, ಐದನೇ ವಿಕೆಟ್‌ಗೆ ಜಿತೇಶ್‌ ಶರ್ಮಾ (22) ಅವರೊಂದಿಗೆ 63 ರನ್‌ (46ಎ) ಸೇರಿಸಿ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದರು. ಗೆಲುವಿಗೆ 33 ರನ್‌ ಬೇಕಿದ್ದಾಗ ಜಿತೇಶ್‌ ಶರ್ಮಾ ಔಟಾದಾಗ ಮತ್ತೆ ಆತಂಕ ಮೂಡಿತು. ಆದರೆ ಐದು ಬೌಂಡರಿ, ಮೂರು ಸಿಕ್ಸರ್‌ಗಳೊಂದಿಗೆ ಏಕಾಂಗಿಯಾಗಿ ಹೋರಾಡಿದ ಕರಣ್‌, ಆರನೇ ವಿಕೆಟ್‌ಗೆ ಆಶುತೋಷ್‌ ಶರ್ಮಾ (ಔಟಾಗದೇ 17) ಅವರೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಇನ್ನೂ 7 ಎಸೆತ ಬಾಕಿ ಇರುವಂತೆ ಕಿಂಗ್ಸ್‌ ತಂಡವು ಐದು ವಿಕೆಟ್‌ಗೆ 145 ರನ್‌ ಗಳಿಸಿತು.

ಪರಾಗ್‌ ಮಿಂಚು: ಇದಕ್ಕೂ ಮೊದಲು ಟಾಸ್‌ ಗೆದ್ದ ರಾಜಸ್ಥಾನ ತಂಡವು ಬ್ಯಾಟ್ ಮಾಡಲು ನಿರ್ಧರಿಸಿತು. ಆದರೆ ಆರಂಭ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಮತ್ತೊಮ್ಮೆ ಬೇಗನೇ ಕಳೆದುಕೊಂಡಿತು. ಸ್ಯಾಮ್ ಕರನ್ ಬೌಲಿಂಗ್‌ನಲ್ಲಿ ಅವರು ಚೆಂಡನ್ನು ಸ್ಟಂಪ್ಸ್‌ಗೆ ಎಳೆದುಕೊಂಡರು.

ಮೊದಲ ಬಾರಿ ಒಂದೇ ಆವೃತ್ತಿಯಲ್ಲಿ 500 ರನ್ ದಾಟಿದ ನಾಯಕ ಸಂಜು ಸ್ಯಾಮ್ಸನ್ (18) ಮತ್ತು ಟಾಮ್ ಕೊಹ್ಲರ್ ಕ್ಯಾಡ್ಮೋರ್ (18, 23) ಎರಡನೇ ವಿಕೆಟ್‌ಗೆ ನಿಧಾನಗತಿಯಲ್ಲಿ 36 ರನ್ ಸೇರಿಸಿದರು. ಬಟ್ಲರ್ ಬದಲು ಕ್ಯಾಡ್ಮೋರ್ ಅವಕಾಶ ಪಡೆದಿದ್ದರು. ಕರನ್ ಬೌಲಿಂಗ್‌ನಲ್ಲಿ ಡೀಪ್ ಮಿಡ್‌ ವಿಕೆಟ್‌ಗೆ ಭರ್ಜರಿ ಸಿಕ್ಸರ್ ಎತ್ತಿದ್ದ ಕ್ಯಾಡ್ಮೋರ್ ಅದೇ ವೇಗದಲ್ಲಿ ಆಡಲಿಲ್ಲ.

ಕರನ್ ಮತ್ತು ಅರ್ಷದೀಪ್ ಕೊಂಚ ಸ್ವಿಂಗ್‌ನೊಡನೆ ಉತ್ತಮವಾಗಿ ಬೌಲಿಂಗ್ ಮಾಡಿದರು. ಹೀಗಾಗಿ ರನ್‌ವೇಗ ಹೆಚ್ಚಿಸಲು ರಾಯಲ್ಸ್ ಆಟಗಾರರಿಗೆ ಆಗಲಿಲ್ಲ. ಏಳನೇ ಓವರ್‌ನಲ್ಲಿ ಈ ಜೊತೆಯಾಟ ಮುರಿಯಿತು. ಸ್ಯಾಮ್ಸನ್‌, ವೇಗಿ ನಥಾನ್ ಎಲಿಸ್‌ ಬೌಲಿಂಗ್‌ನಲ್ಲಿ ಕಟ್‌ಗೆ ಯತ್ನಿಸಿ ರಾಹುಲ್ ಚಾಹರ್‌ಗೆ ಕ್ಯಾಚಿತ್ತರು. ಮುಂದಿನ ಓವರಿನಲ್ಲಿ ಕ್ಯಾಡ್ಮೋರ್‌, ಲೆಗ್‌ ಸ್ಪಿನ್ನರ್‌ ರಾಹುಲ್ ಚಾಹರ್‌ಗೆ (26ಕ್ಕೆ2) ವಿಕೆಟ್‌ ನೀಡಿದರು.

ಸ್ಥಳೀಯ ತಾರೆ ರಿಯಾನ್ ಪರಾಗ್ ಅವರು ತಂಡದ ಪರ ಅತ್ಯಧಿಕ 48 ರನ್‌ (34 ಎಸೆತ) ಗಳಿಸಿ ಗಮನ ಸೆಳೆದರು. ಆರ್‌.ಅಶ್ವಿನ್ (28, 19ಎ, 4x3, 6x1) ಮತ್ತು ಪರಾಗ್ ನಾಲ್ಕನೇ ವಿಕೆಟ್‌ಗೆ 50 ರನ್ ಸೇರಿಸಿ ರನ್‌ ವೇಗ ಹೆಚ್ಚಿಸುವ ಪ್ರಯತ್ನ ಮಾಡಿದರು. 

ಬೆನ್ನುಬೆನ್ನಿಗೆ ವಿಕೆಟ್‌ಗಳ ಪತನದ ನಂತರ ಅಶ್ವಿನ್–ಪರಾಗ್ ಜೋಡಿ ತಂಡದ ಕುಸಿತ ತಪ್ಪಿಸಿತು. ಕೊಂಚವೇಗದಲ್ಲಿ ರನ್‌ಗಳನ್ನು ಪೇರಿಸಿದರು. ಚಾಹರ್ ಮಾಡಿದ 12ನ ಓವರಿನಲ್ಲಿ ಅಶ್ವಿನ್‌ 17 ರನ್ ಬಾಚಿದರು. ಆದರೆ ಅರ್ಷದೀಪ್ ಸಿಂಗ್‌ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಹೋಗಿ ಶಶಾಂಕ್‌ಗೆ ಕ್ಯಾಚಿತ್ತರು. ಇನ್ನೊಂದೆಡೆ ವಿಕೆಟ್‌ಗಳು ಉರುಳಿದರೂ ಪರಾಗ್ ತವರು ನೆಲದಲ್ಲಿ ಬೇರೂರಿ ಆಡಿದರು. ಅವರೂ ಈ ಋತುವಿನಲ್ಲಿ 500 ರನ್ ದಾಟಿದರು. ಐಪಿಎಲ್‌ನಲ್ಲಿ ಎರಡನೇ ಬಾರಿ ಈ ಸಾಧನೆಗೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರು: ರಾಜಸ್ಥಾನ ರಾಯಲ್ಸ್‌: 20 ಓವರುಗಳಲ್ಲಿ 9ಕ್ಕೆ 144 (ಟಾಮ್ ಕೊಹ್ಲರ್‌ ಕ್ಯಾಡ್ಮೋರ್ 18, ಸಂಜು ಸ್ಯಾಮ್ಸನ್ 18, ರಿಯಾನ್ ಪರಾಗ್ 48, ರವಿಚಂದ್ರನ್ ಅಶ್ವಿನ್ 28; ಸ್ಯಾಮ್ ಕರನ್ 24ಕ್ಕೆ2, ಅರ್ಷದೀಪ್ 31ಕ್ಕೆ1, ನಥಾನ್ ಎಲ್ಲಿಸ್‌ 24ಕ್ಕೆ1, ಹರ್ಷಲ್ ಪಟೇಲ್ 28ಕ್ಕೆ2, ರಾಹುಲ್ ಚಾಹರ್ 26ಕ್ಕೆ2).

ಪಂಜಾಬ್‌ ಕಿಂಗ್ಸ್‌: 18.5 ಓವರ್‌ಗಳಲ್ಲಿ 5ಕ್ಕೆ 145 ((ರಿಲೀ ರೂಸೊ 22, ಸ್ಯಾಮ್‌ ಕರನ್‌ ಔಟಾಗದೇ 63, ಜಿತೇಶ್‌ ಶರ್ಮಾ 22, ಆಶುತೋಷ್‌ ಶರ್ಮಾ ಔಟಾಗದೇ 17; ಆವೇಶ್‌ ಖಾನ್‌ 28ಕ್ಕೆ 2, ಯಜುವೇಂದ್ರ ಚಾಹಲ್‌ 31ಕ್ಕೆ 2). ಪಂದ್ಯದ ಆಟಗಾರ: ಸ್ಯಾಮ್‌ ಕರಣ್‌. ಫಲಿತಾಂಶ: ಪಂಜಾಬ್‌ ಕಿಂಗ್ಸ್‌ಗೆ ಐದು ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT