ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಯುವುದು ಅವರ ಜನ್ಮಸಿದ್ಧ ಹಕ್ಕು!

ಮಂದಹಾಸ
Last Updated 3 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಶೀರ್ಷಿಕೆ ನೋಡಿ, ‘ಎಂಥಾ ಕಾಲ ಬಂತಪ್ಪಾ... ಈ ವಿಜ್ಞಾನಿಗಳಿಗೆ ಮಾಡಲು ಬೇರೆ ಏನೂ ಕೆಲಸ ಸಿಗಲಿಲ್ಲವೇ? ಇನ್ಮೇಲೆ ನಾವು ಯಂತ್ರಮಾನವರಿಂದ ಬೈಸಿಕೊಳ್ಳಬೇಕೇ’ ಅಂತನ್ನಬೇಡಿ. ‘ಕರ್ಮ ಕರ್ಮ’ ಅಂತ ಹಣೆ ಹಣೆ ಬಡಿದುಕೊಳ್ಳಲೂಬೇಡಿ, ‘ರಾಮ ರಾಮಾ…!’ ಅಂತಲೂ ಉದ್ಗರಿಸಬೇಡಿ.

ನಾನು ಹೇಳುತ್ತಿರುವುದು ಯಂತ್ರಮಾನವರ ಬಗ್ಗೆ ಅಲ್ಲ. ಒಮ್ಮೊಮ್ಮೆ ಯಂತ್ರಗಳಂತೆ, ಮತ್ತೊಮ್ಮೆ ಮಾನವರಂತೆ ಹಾಗೂ ಹೀಗೂ ಹೊತ್ತು ಕಳೆಯುತ್ತಿರುವ ಜೀವಂತ ಮಾನವರ ಬಗ್ಗೆ – ಅದೇ ಸ್ವಾಮಿ, ವಯೋವೃದ್ಧರ ಬಗ್ಗೆ!

ಅನಾದಿ ಕಾಲದಿಂದಲೂ ವಯೋವೃದ್ಧರು ಬೈಯುವ ಯಂತ್ರಮಾನವರೇ. ಬೈಯುವುದು ಅವರ ಜನ್ಮಸಿದ್ಧ ಹಕ್ಕು ಅಂತಲೇ ತಿಳಿದುಬಿಟ್ಟಿರುತ್ತಾರೆ. ಹಿಂದಿನ ಕಾಲದಲ್ಲಿ ನೇರವಾಗಿ ಬೈದೇಬಿಡುತ್ತಿದ್ದರು. ಈಗ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಮಗನೋ, ಮೊಮ್ಮಗನೋ ‘ಹೊರಗೆ ಹೋಗಿಬರುತ್ತೇನೆ’ ಅಂದಾಗ – ‘ಹೋಗಬೇಡ’ ಅಂದ್ರೆ ಅವರೇನು ಬಿಡುತ್ತಾರೆಯೇ? ಎಂದುಕೊಂಡು,  ‘ಬೇಡ’ ಅನ್ನಲಿಕ್ಕಾಗದೆ, ‘ಬೇಗ ಬನ್ನಿ’ ಎಂದು ಹೇಳಿಕಳಿಸುತ್ತಾರೆ. ಹೌದು, ಜನರೇಶನ್ನಿನಿಂದ ಜನರೇಶನ್ನಿಗೆ ನಾಗರಿಕತೆಯ ಗ್ರೇಡ್ ಬದಲಾಗಲೇಬೇಕಲ್ಲ? 1ಜಿ, 2ಜಿ, 3ಜಿ, 4ಜಿ…

ಪರದೇಶದವರ ಪರಿಸ್ಥಿತಿ ಹೇಗೋ ಏನೋ, ನಮ್ಮಲ್ಲಿ ಮಾತ್ರ ‘ವಯಸ್ಸಾಗಿದೆ’ ಎಂದು ತೋರಿಸಿಕೊಳ್ಳಲಿಕ್ಕಾಗಿಯಾದರೂ ಆಗಾಗ್ಗೆ ಬೈಯುತ್ತಿರಬೇಕಾಗುತ್ತದೆ, ಐಡೆಂಟಿಟಿ ಪ್ರಶ್ನೆ! ಅಜ್ಜಂದಿರು ಸುಮ್ಮನೆ ಬೈಯುತ್ತಿರುತ್ತಾರೆ – ಎಲ್ಲಿಯವರೆಗೆ ಅಂದರೆ ಅಜ್ಜಿ ಬಂದು, ಕಿವಿಯಲ್ಲಿ ಮೆಲ್ಲಗೆ ‘ಹಗ್ಗ ಹರಿಯೋದಿಲ್ಲ, ಕೋಲು ಮುರಿಯೋದಿಲ್ಲ, ಸಾಕಿನ್ನು.

ಸುಮ್ಮಸುಮ್ಮನೆ ಬೀಪಿ ಏರಿಸಿಕೊಳ್ಳಬೇಡಿ, ಎಲ್ಲಿಯಾದರೂ ಸುತ್ತಾಡಿಕೊಂಡು ಬನ್ನಿ’ ಎಂದು ಹೇಳಿ ಹೊರಗೆ ಕಳಿಸುವವರೆಗೆ! ಹೊರಗೆ ಸುತ್ತಾಡುತ್ತಿರುವ ವಯೋವೃದ್ಧರನ್ನು ನೋಡಿದಾಗ ಇವರೆಲ್ಲ ಹೀಗೇ ಹೊರಹಾಕಿಸಿಕೊಂಡು ಬಂದವರಂತೆ ಅನ್ನಿಸುತ್ತಾರೆ ನನಗೆ. ಹೋಗಲಿ ಬಿಡಿ, ವಿಷಯಕ್ಕೆ ಬರ್ತೇನೆ.

ತಲೆತುಂಬ ಬಿಳಿಗೂದಲು, ಕಣ್ಣಿಗೆ ದಪ್ಪ ಕನ್ನಡಕ, ಬೊಚ್ಚುಬಾಯಿಯ ನನ್ನನ್ನು ನೋಡಿ... ಈತ, ವಾಕಿಂಗ್ ಗೀಕಿಂಗ್ ಅಂತ ಸುಮ್ಮನೆ ಸುತ್ತಾಡುವವ ಅಂತ ಭಾವಿಸಿಯೋ ಏನೋ, ಕಿರಾಣಿ ಅಂಗಡಿಯ ಒಬ್ಬ ತರುಣ, ‘ಇಲ್ಲಿ ಬನ್ನಿ ಸರ್’ ಅಂತ ನನ್ನನ್ನು ಕರೆದ.

ವಾಕಿಂಗ್ ಮುಗಿಸಿಕೊಂಡು ತಿರುಗಿ ಮನೆಗೆ ಹೊರಟಿದ್ದೆ. ಯಾವಾಗಲಾದರೂ ಕಿರಾಣಿ ಸಾಮಾನು ತರಲಿಕ್ಕೆ ಅವನ ಅಂಗಡಿಗೂ ಹೋಗುತ್ತಿದ್ದೆ. ಅಷ್ಟು ಮಾತ್ರ ಗುರುತಿನಿಂದ ಇವನೇಕೆ ಕರೆಯುತ್ತಿದ್ದಾನೆ ನೋಡೋಣ ಅನ್ನಿಸಿ ಹೋದೆ. ಒಳಗಿನಿಂದ ಒಂದು ಕುರ್ಚಿ ತಂದು ಹೊರಗೆ ಹಾಕಿ, ‘ಕೂತ್ಕೊಳ್ಳಿ ಸರ್’ ಅಂದ. ಕುಳಿತೆ. ‘ಒಂದೈದು ನಿಮಿಷ ಕೂತಿರಿ, ನಾನು ಈಗ ಬರ್ತೇನೆ’ ಅನ್ನುತ್ತ ಸ್ಕೂಟರ್ ಏರಿ ಹೋಗೇಬಿಟ್ಟ. ಇಡೀ ಕಿರಾಣಿ ಅಂಗಡಿಗೆ ನಾನೇ ಮಾಲೀಕ!

ಕಿರಾಣಿ ಅಂಗಡಿ ಕೆಲಸ ಹೊಸದೇನಲ್ಲ ನನಗೆ. ಐವತ್ತು ವರ್ಷಗಳ ಹಿಂದೆ ಇದೇ ಕೆಲಸ ಮಾಡಿದವ ನಾನೂ. ನಮ್ಮೂರಲ್ಲಿ ನಮ್ಮದೂ ಒಂದು ಕಿರಾಣಿ ಅಂಗಡಿ ಇತ್ತು. ಖಾರ ಕುಟ್ಟಬೇಕಾದರೆ ಅದಕ್ಕೆ ಏನೇನು ಮಸಾಲೆ ಸಾಮಾನು ಹಾಕಬೇಕು ಗೊತ್ತಿತ್ತು ನನಗೆ. ‘ಕೂಟಾಳ ಮಸಾಲೆ’ ಅಂತ ಅದಕ್ಕೆ ಹೆಸರು. ಎಂಟ್ಹತ್ತು ಡಬ್ಬಿಗಳಲ್ಲಿಯ ಸ್ವಲ್ಪ ಸ್ವಲ್ಪ ಸಾಮಾನು ತೆಗೆದು ಕೂಡಿಸಿ ತೂಕ ಮಾಡಿಕೊಡಬೇಕು. ಚಿಕ್ಕವನಾಗಿದ್ದರೂ ಆ ಎಲ್ಲಾ ಹೆಸರುಗಳು ಬಾಯಿಪಾಠವಾಗಿದ್ದವು. ಈಗಿನದು ಬಿಡಿ, ರೆಡಿಮೇಡ್ ಜಮಾನಾ. ಮಸಾಲೆ ಹಾಕಿದ ಖಾರವೇ ರೆಡಿಮೇಡ್ ಸಿಗುತ್ತದೆ!

ಹಳೆಯದನ್ನು ನೆನಪಿಸಿಕೊಳ್ಳುತ್ತ ಕುಳಿತಿದ್ದೆ. ಬಂತು ಒಂದು ಗಿರಾಕಿ, ಒಬ್ಬ ತರುಣ. ಏನೋ ಒಂದು ಶಬ್ದ ಅಂದ. ಸರಿ ಕೇಳಿಸಲಿಲ್ಲ. ಯಾರದೋ ಹೆಸರಿದ್ದಂತಿತ್ತು. ಅಂಗಡಿಯ ಆ ತರುಣನ ಹೆಸರಿರಬಹುದೆಂದು ‘ಹೊರಗೆ ಹೋಗಿದ್ದಾನೆ, ಈಗ ಬರುತ್ತಾನೆ’ ಅಂದೆ. ಮತ್ತದೇ ಶಬ್ದ. ನಾನು ಹೇಳಿದ್ದು ಇವನಿಗೆ ಕೇಳಿಸುತ್ತಿಲ್ಲವೇ? ಕಿವುಡನೇ? ಅದೇ ಮಾತನ್ನು ಮತ್ತೆ ಹೇಳಿ, ನಿನಗೇನು ಬೇಕು ಹೇಳೋ ಪುಣ್ಯಾತ್ಮ ಎನ್ನುವಂತೆ ನೋಡಿದೆ.

ಸಾಲು ಸಾಲಾಗಿ ತೂಗಿಬಿಟ್ಟ ಚೀಟುಗಳತ್ತ ಬೆರಳುಮಾಡಿ ತೋರಿಸಿ ಮತ್ತೆ ಅದೇ ಶಬ್ದ ಉಸುರಿದ. ಗೊತ್ತಾಯ್ತು ಈಗ – ಅದು ವ್ಯಕ್ತಿಯ ಹೆಸರಲ್ಲ, ವಸ್ತುವಿನ ಹೆಸರು ಅಂತ.ಅಂಗಡಿಯ ಒಳಗೆ ಹೋಗಿ ಮಾಲಕರ ಹಾಗೆ ‘ತಗೋ’ ಅಂದೆ. ತೆಗೆದುಕೊಂಡ. ‘ಎಷ್ಟಿದಕ್ಕೆ?’ – ನಾನೇ ಅವನನ್ನು ಕೇಳಿದೆ. ‘ಐದು ರೂಪಾಯಿ’ ಎಂದು ಹೇಳಿ, ಕಿಸೆಯಿಂದ ಐದರ ನಾಣ್ಯ ಹೊರತೆಗೆದು ಇಟ್ಟ. ಮುಗಿಯಿತಲ್ಲ ವ್ಯವಹಾರ. ಹೋಗಬೇಕೋ ಇಲ್ಲೋ? ನನ್ನನ್ನೇ ನೋಡುತ್ತ ನಿಂತ.

ಹುಬ್ಬುಗಂಟಿಕ್ಕಿ ನೋಡಿದೆ. ‘ಕೊಡಿರಲ್ಲ?’ ಎಂದ. ಇನ್ನೇನು ಕೊಡುವುದು ಇವನಿಗೆ? ನನ್ನ ಮೌನ ಅವನಿಗೆ ಅರ್ಥವಾಯಿತು. ‘ಇದರ ಕೂಡ ಇನ್ನೂ ಒಂದು ಚೀಟು ಬೇಕಲ್ಲ? ಡ್ರಾದಲ್ಲಿ ಇಟ್ಟಿರತಾನೆ ನೋಡಿ’ ಎಂದು ಡ್ರಾ ತೋರಿಸಿದ. ಡ್ರಾ ಎಳೆದೆ. ಅವನೇ ಸಣ್ಣದೊಂದು ಚೀಟು ತೆಗೆದುಕೊಂಡ. ದೂರ ನಿಂತು ಮೊದಲಿನ ಚೀಟು ಬಿಚ್ಚಿದ.

ಬಹುಶಃ ನಾನೊಂದು ಅನ್ಯಗ್ರಹದ ಜೀವಿ, ಏಲಿಯನ್ – ಇರಬಹುದೆಂದುಕೊಂಡನೋ ಏನೋ. ಅಷ್ಟರಲ್ಲಿ ಅಂಗಡಿಯ ತರುಣ ಬಂದ. ಕಣ್ಣೋಟದಲ್ಲೇ ಎಲ್ಲವನ್ನೂ ಇಬ್ಬರೂ ಗ್ರಹಿಸಿಕೊಂಡರು. ನಾನು ಮಾಡಿದ್ದು ಒಂದು ಗುಟಖಾ ವ್ಯವಹಾರ ಅನ್ನೋದು ನನಗೆ ಆಮೇಲೆ ತಿಳಿಯಿತು. ಈಗ ಹೇಳಿ, ಯಾರು ಯಾರನ್ನು ಬೈಯೋದು? ಯಾರಿಂದ ಯಾರು ಬೈಸಿಕೊಳ್ಳೋದು? ಎಲ್ಲಾ ಕಲಸುಮೇಲೋಗರ! ವಯಸ್ಸಾದ ಮೇಲೆ ಎಂಥೆಂಥದನ್ನು ನೋಡಬೇಕಾಗುತ್ತದೆ, ಮಾಡಬೇಕಾಗುತ್ತದೆ... ರಾಮ ರಾಮ... 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT