ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಅವಲೋಕನ ಸಭೆ; ಮತಗಳಿಕೆ ಲೆಕ್ಕ ಕಲೆಹಾಕುತ್ತಿರುವ ಸುಧಾಕರ್

Published 20 ಮೇ 2024, 8:33 IST
Last Updated 20 ಮೇ 2024, 8:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಫಲಿತಾಂಶ ಹೊರ ಬೀಳಲು 15 ದಿನಗಳ ಬಾಕಿ ಇದೆ. ಈ ನಡುವೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಕಾರ್ಯಕರ್ತರ ಸಭೆ ನಡೆಸುವ ಮೂಲಕ ಮತಗಳಿಕೆ ಮತ್ತು ಲೀಡ್ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಖುದ್ದು ಸುಧಾಕರ್ ಮುಖಂಡರು ಹೇಳುವ ಅಂಕಿ ಅಂಶಗಳನ್ನು ಬರೆದುಕೊಂಡು ಲೆಕ್ಕ ಮಾಡುತ್ತಿದ್ದಾರೆ.

ಮೊದಲಿಗೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಈ ಅವಲೋಕನ ಸಭೆ ಆರಂಭವಾಗಿದೆ. ಐದು ದಿನಗಳ ಹಿಂದೆ ಬಾಗೇಪಲ್ಲಿಯಲ್ಲಿ ಪಕ್ಷದ ಬೂತ್ ಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಕೃತಜ್ಞತೆ ಸಲ್ಲಿಸಿದ್ದಾರೆ.

ನಂತರ ಪೆರೇಸಂದ್ರದ ತಮ್ಮ ಮನೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅವಲೋನ ಸಭೆ ನಡೆಸಿದರು. ದೇವನಹಳ್ಳಿ ಮತ್ತು ನೆಲಮಂಗಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಈಗಾಗಲೇ ಅವಲೋಕನ ಸಭೆಗಳನ್ನು ನಡೆಸುವ ಮೂಲಕ ಈ ವಿಧಾನಸಭಾ ಕ್ಷೇತ್ರಗಳಲ್ಲಿ ಎಷ್ಟು ಮತಗಳನ್ನು ಪಡೆಯುತ್ತೇವೆ ಎನ್ನುವ ಕೂಡು ಕಳೆಯುವ ಲೆಕ್ಕಾಚಾರ ನಡೆಸಿದ್ದಾರೆ.‌

ಯಾವುದೇ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಗ್ರಾಮ ಪಂಚಾಯಿತಿಗಳು ಇವೆ. ಆ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟು ಬೂತ್‌ಗಳಿವೆ ಎನ್ನುವುದನ್ನು ಮೊದಲಿಗೆ ಸಭೆಯಲ್ಲಿ ಹೇಳಲಾಗುತ್ತದೆ.

ಆಯಾ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮುಖಂಡರು, ಬೂತ್ ಮಟ್ಟದ ಜೆಡಿಎಸ್ ಬಿಜೆಪಿ ಮುಖಂಡರು ಒಬ್ಬೊಬ್ಬರಾಗಿ ಇಂತಹ ಬೂತ್‌ನಲ್ಲಿ ಮೈತ್ರಿ  ಅಭ್ಯರ್ಥಿಗೆ ಇಷ್ಟು ಮತಗಳು ಬರಲಿವೆ, ಕಾಂಗ್ರೆಸ್ ಅಭ್ಯರ್ಥಿಗೆ ಇಷ್ಟು ಮತಗಳು ಬೀರಲಿವೆ ಎನ್ನುವ ಬಗ್ಗೆ ತಿಳಿಸುವರು. ಈ ಮತಗಳಿಕೆಯ ಲೆಕ್ಕಾಚಾರಕ್ಕೆ ತಮ್ಮದೇ ಆದ ಅಂಕಿ ಸಂಖ್ಯೆ, ಸಮುದಾಯ, ಪ್ರಭಾವ, ಮೈತ್ರಿ ಇತ್ಯಾದಿ ವಿಚಾರಗಳನ್ನು ಮುಂದಿಡುತ್ತಿದ್ದಾರೆ. 

ಲೀಡ್ ಎಲ್ಲಿ ದೊರೆಯುತ್ತದೆ. ಮತದ ಪ್ರಮಾಣ ಬಿಜೆಪಿಗೆ ಎಲ್ಲಿ ಕಡಿಮೆ ಆಗುತ್ತದೆ ಎನ್ನುವ ಬಗ್ಗೆ ಮುಖಂಡರ ಅಭಿಪ್ರಾಯಗಳನ್ನು ಡಾ.ಕೆ.ಸುಧಾಕರ್ ಆಲಿಸುವರು. ಬೂತ್ ಮಟ್ಟದ ಮುಖಂಡರು ಮತ್ತು ಬೂತ್ ಸಮಿತಿ ಅಧ್ಯಕ್ಷರು ಹೇಳುವ ಅಂಕಿ ಅಂಶಗಳನ್ನು ಕ್ರೋಡೀಕರಿಸಲಾಗುತ್ತದೆ. ನಂತರ ಎಲ್ಲವನ್ನೂ ಕೂಡಿ ಈ ವಿಧಾನಸಭಾ ಕ್ಷೇತ್ರದಿಂದ ಇಷ್ಟು ಲೀಡ್ ದೊರೆಯುತ್ತದೆ ಎನ್ನುವ ಅಂಕಿ ಸಂಖ್ಯೆಯನ್ನು ಸಭೆ ತಿಳಿಸಲಾಗುತ್ತದೆ.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಗಟ್ಟಿಯಾಗಿಯೇ ಇತ್ತು. ಈ ಅವಲೋಕನ ಸಭೆಯಲ್ಲಿಯೂ ಜೆಡಿಎಸ್ ಮುಖಂಡರು ಭಾಗಿ ಆಗುತ್ತಿದ್ದಾರೆ.

ಬಾಗೇಪಲ್ಲಿಯಲ್ಲಿ 13 ಸಾವಿರ ಲೀಡ್: ಬಾಗೇಪಲ್ಲಿ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಗೆ 13,500 ಮತಗಳ ಲೀಡ್ ದೊರೆಯುತ್ತದೆ ಎನ್ನುವ ಲೆಕ್ಕಾಚಾರವನ್ನು ಎರಡೂ ಪಕ್ಷಗಳ ಮುಖಂಡರು ಮಾಡಿದ್ದಾರೆ. ಅವಲೋಕನ ಸಭೆಯ ಅಂಕಿ ಅಂಶಗಳನ್ನು ಕ್ರೋಡೀಕರಿಸಿ ಈ ಲೀಡ್ ಲೆಕ್ಕ ಹಾಕಲಾಗಿದೆ. 

ಚಿಕ್ಕಬಳ್ಳಾಪುರದಲ್ಲಿ 18 ಸಾವಿರ ಲೀಡ್: ಡಾ.ಕೆ.ಸುಧಾಕರ್ ಅವರ ಸ್ವಕ್ಷೇತ್ರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಅವಲೋಕನಸಭೆಯ ಅಂಕಿ ಅಂಶಗಳ ಪ್ರಕಾರ 18,500 ಮತಗಳ ಲೀಡ್ ದೊರೆಯುತ್ತದೆಯಂತೆ. 

ನಂದಿ ಗ್ರಾಮ ಪಂಚಾಯಿತಿ, ಮಂಡಿಕಲ್ಲು ಪಂಚಾಯಿತಿಯ ಆಯ್ದ ಬೂತ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚು ಮತಗಳು ದೊರೆಯುತ್ತವೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಆ ಭಾಗದ ಮುಖಂಡರು ತಿಳಿಸಿದ್ದಾರೆ. ಅದಕ್ಕೆ ಕಾರಣಗಳನ್ನೂ ಮುಂದಿಟ್ಟಿದ್ದಾರೆ. ಹೀಗೆ ಬೂತ್‌ವಾರು ಕೂಡುವ ಮತ್ತು ಕಳೆಯುವ ಲೆಕ್ಕಾಚಾರದ ನಂತರ ₹ 18,500 ಮತಗಳು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ದೊರೆಯುತ್ತವೆ ಎಂದು ಮುಖಂಡರು ಸಭೆಯಲ್ಲಿ ತಿಳಿಸಿದರು.

ದೇವನಹಳ್ಳಿಯಲ್ಲಿ ನಡೆದ ಅವಲೋಕನ ಸಭೆಯಲ್ಲಿ ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಚಂದ್ರಣ್ಣ ಮತ್ತಿತರ ಮುಖಂಡರು ಭಾಗಿಯಾಗಿದ್ದರು. ವಿಜಯಪುರ ಮತ್ತು ದೇವನಹಳ್ಳಿ ಪಟ್ಟಣಗಳಿಂದ ಒಟ್ಟು ಆರು ಸಾವಿರ ಮತ್ತು ಉಳಿದ ಗ್ರಾಮಾಂತರ ಪ್ರದೇಶವೂ ಸೇರಿ ಒಟ್ಟು 10ರಿಂದ 15 ಸಾವಿರ ಲೀಡ್ ದೊರೆಯುತ್ತದೆ ಎನ್ನುವ ಲೆಕ್ಕಾಚಾರ ಮಾಡಲಾಗಿದೆ.

ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿಯೂ 10 ಸಾವಿರ ಲೀಡ್ ದೊರೆಯುತ್ತದೆ ಎಂದು ಅವಲೋಕನಸಭೆಯಲ್ಲಿ ಮುಖಂಡರು ತಿಳಿಸಿದರು. ಕೆಲವರು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇರುವ ಕಾರಣ ಮತಗಳಿಕೆ ಸಮಬಲವೂ ಆಗಬಹುದು ಎಂದು ‍ಪ್ರತಿಪಾದಿಸಿದರು.

ಚಿಕ್ಕಬಳ್ಳಾಪುರದಲ್ಲಿ 18 ಸಾವಿರ, ಬಾಗೇಪಲ್ಲಿಯಲ್ಲಿ 13 ಸಾವಿರ ಲೀಡ್ ಲೆಕ್ಕ ದೇವನಹಳ್ಳಿ ಕ್ಷೇತ್ರದಲ್ಲಿ 10ರಿಂದ 15 ಸಾವಿರ ಲೀಡ್ ಎಂದ ಮುಖಂಡರು ಬೂತ್‌ವಾರು ಮಾಹಿತಿ ಕಲೆ ಹಾಕುತ್ತಿರುವ ಅಭ್ಯರ್ಥಿ
ನಾಲ್ಕು ಕ್ಷೇತ್ರಗಳಲ್ಲಿ ಸಭೆ ಬಾಕಿ
ದೊಡ್ಡಬಳ್ಳಾಪುರ ಯಲಹಂಕ ಗೌರಿಬಿದನೂರು ಮತ್ತು ಹೊಸಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಇನ್ನೂ ಅವಲೋಕನ ಸಭೆಗಳು ನಡೆದಿಲ್ಲ. ಶೀಘ್ರದಲ್ಲಿಯೇ ಈ ಕ್ಷೇತ್ರಗಳಲ್ಲಿ ಅವಲೋಕನ ಸಭೆ ನಡೆಸಲಾಗುತ್ತದೆ ಎಂದು ಡಾ.ಕೆ.ಸುಧಾಕರ್ ಆಪ್ತ ಮೂಲಗಳು ತಿಳಿಸುತ್ತವೆ.
‘ತಪ್ಪು ಮಾಹಿತಿ ನೀಡದಿರಿ’
ಸಭೆಯಲ್ಲಿ ಕೆಲವು ಮುಖಂಡರು ತಮ್ಮ ಬೂತ್‌ನ ಮತಗಳಿಕೆಯನ್ನು ಬಿಟ್ಟು ಬೇರೆ ವಿಚಾರಗಳನ್ನು ಮಾತನಾಡಲು ಮುಂದಾದಾಗ ‘ನಿಮ್ಮ ಬೂತ್‌ನಲ್ಲಿ ನಮಗೆ ಎಷ್ಟು ಮತಗಳು ಬರುತ್ತವೆ ಎನ್ನುವ ವಿಚಾರ ಕೇಂದ್ರೀಕರಿಸಿ ಮಾತನಾಡಿ. ಯಾವುದೇ ಕಾರಣಕ್ಕೂ ತಪ್ಪು ಮಾಹಿತಿ ನೀಡಬಾರದು. ಮಾಹಿತಿ ವಿಶ್ವಾಸಾರ್ಹವಾಗಿರಲಿ’ ಎಂದು ಡಾ.ಕೆ.ಸುಧಾಕರ್ ತಿಳಿಸಿದ್ದಾರಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT