ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾತ್ಮನ ಮನೆ ಮುಂದೆ ಚಿನ್ನದ ರಂಗೋಲಿ

Last Updated 16 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಬೆಳಗಿನ ಕಿರಣಗಳು ಇನ್ನೂ ಭೂಮಿಗೆ ತಾಕಿರದ ಹೊತ್ತು. ಜುಳು ಜುಳು ನಿನಾದದೊಂದಿಗೆ ಸಬರಮತಿ ಎರಡೂ ತಡೆಗೋಡೆಗಳನ್ನು ಮೆಲ್ಲಗೆ ಮುಟ್ಟಿ ಸಾಗುತ್ತಿದ್ದಳು. ಹೊಸತಾಗಿ ಕಟ್ಟಿದ್ದ ಮೆಟ್ಟಿಲುಗಳನ್ನು ತೇವ ಮಾಡುವ ಉತ್ಸಾಹದಲ್ಲಿದ್ದಳು. ಅದು ಅಹಮದಾಬಾದಿನ ಸತ್ಯಾಗ್ರಹ ಆಶ್ರಮ.
ಜಗತ್ತಿನ ಬಹುತೇಕ ನಾಗರಿಕತೆಗಳು ಚಿಗುರೊಡೆದಿದ್ದು ಇಂಥ ನದಿ ದಂಡೆಗಳಲ್ಲೇ. ನಮ್ಮ ದೇಶವೂ ಇದಕ್ಕೆ ಹೊರತಲ್ಲ. ನದಿಗಳಿಗೆ ಮಾತು ಬರುವಂತಿದ್ದರೆ ಅವುಗಳ ಬಾಯಲ್ಲಿ ದೇಶದ ಚರಿತ್ರೆ ಬಿಟ್ಟರೆ ಬೇರೇನೂ ಬರುತ್ತಿರಲಿಲ್ಲವೇನೋ! ನದಿಗಳಿಗೂ ಮನುಷ್ಯ ಇತಿಹಾಸಕ್ಕೂ ಅಂಥ ನಂಟು. ಆದರೆ ಸಬರ್‌ಮತಿಯ ದಂಡೆಯಲ್ಲಿ ಬೆಳೆದ ಚರಿತ್ರೆ ಅಂತಿಂಥದ್ದಲ್ಲ. ಮಜ್ಜೆ ಮಾಂಸಗಳೇ ತುಂಬಿದ್ದ ಇತಿಹಾಸದ ಪುಟಗಳಲ್ಲಿ ಅಹಿಂಸೆಯ ಹಕ್ಕಿ, ಗೂಡು ಕಟ್ಟಿದ್ದಕ್ಕೆ ಇದೇ ಸಬರ್‌ಮತಿ ಸಾಕ್ಷಿ. `ಈಶ್ವರ್ ಅಲ್ಲಾ ತೇರೊ ನಾಮ್' ಎಂದ ಸಂತನೊಬ್ಬನ  ಸಖಿ ಇವಳು. ಈಗ ಆ ಸಂತ ದೈಹಿಕವಾಗಿ ಇಲ್ಲ. ಆದರೆ ಆತ ನಡೆದಾಡಿದ ಆಶ್ರಮವಿದೆ. ಅಲ್ಲಿ ಒಂದು ಮುಂಜಾವು ಕಳೆಯಲು ಮನಸ್ಸು ಬಹುದಿನಗಳಿಂದ ಕಾತರಿಸುತ್ತಿತ್ತು.

ಜನವರಿ 9, 1915. ಗಾಂಧೀಜಿ ದಕ್ಷಿಣ ಆಫ್ರಿಕೆಯ ಫೀನಿಕ್ಸ್ ಆಶ್ರಮ ತೊರೆದು ದೇಶಕ್ಕೆ ಬಂದರು. ಆಗ ಇಲ್ಲಿಯ ಸಂಗಾತಿಗಳು ಅನುಯಾಯಿಗಳಿಗಾಗಿ ಒಂದು ಆಶ್ರಮ ಕಟ್ಟಲು ಬಯಸಿದರು. ಮೂಲತಃ ಗುಜರಾತಿನವರಾದ ಅವರಿಗೆ ತಮ್ಮ ನಾಡಿನಲ್ಲಿಯೇ ಆಶ್ರಮ ಕಟ್ಟುವ ಬಯಕೆ. ಅದೇ ವರ್ಷ ಮೇ ತಿಂಗಳಲ್ಲಿ ಅಳಿಯ ಮಗನ್‌ಲಾಲ್ ಗಾಂಧಿಯ ಸಲಹೆ ಮೇರೆಗೆ ಕೋಚರಾಬ್‌ನಲ್ಲಿ ಆಶ್ರಮವೊಂದು ತಲೆ ಎತ್ತಿತು. ಸುಮಾರು ಎರಡು ವರ್ಷಗಳ ಬಳಿಕ ಅದು ಈಗಿನ ಸ್ಥಳಕ್ಕೆ ಬದಲಾಯಿತು. ಫೀನಿಕ್ಸ್ ಆಶ್ರಮದಲ್ಲೂ ಜೊತೆಯಾಗಿದ್ದ ಮಗನ್‌ಲಾಲ್ ಇಲ್ಲಿಯೂ ತಮ್ಮ ಸೃಜನಶೀಲತೆ ಬಳಸಿ ಚಂದದ ಆಶ್ರಮ ಕಟ್ಟಿದರು. ಹೀಗಾಗಿಯೇ ಮಗನ್ ಅವರನ್ನು ಗಾಂಧೀಜಿ `ಆಶ್ರಮದ ಆತ್ಮ' ಎಂದು ಕರೆಯುತ್ತಿದ್ದರು. ಆಶ್ರಮದಲ್ಲಿ ಗಾಂಧೀಜಿ ಚರಕದ ಮೂಲಕ ನೂಲು ತೆಗೆಯುತ್ತಿದ್ದರು ಎಂಬುದು ಅನೇಕರಿಗೆ ತಿಳಿದ ವಿಚಾರ. ಆದರೆ ಆಶ್ರಮಕ್ಕೆ ಅನೇಕ ಸುಧಾರಿತ ಚರಕಗಳನ್ನು ತಂದುಕೊಡುತ್ತಿದ್ದವರು ಇದೇ ಮಗನ್‌ಲಾಲ್ ಎಂಬುದು ಅನೇಕರಿಗೆ ಗೊತ್ತಿಲ್ಲ. 1928ರಲ್ಲಿ ಮಗನ್‌ಲಾಲ್ ಕೊನೆಯುಸಿರೆಳೆದರು. ಆಗ ಗಾಂಧಿ ವಿಷಾದದಿಂದ ಹೇಳಿದ್ದು: ನಾನು ಅಕ್ಷರಶಃ ವಿಧುರನಾದೆ... ಮಗನ್‌ಲಾಲ್ ತಯಾರಿಸಿದ ಚರಕವೊಂದು ಈಗಲೂ ಆಶ್ರಮದಲ್ಲಿದ್ದು ನೂಲು ತೆಗೆಯುತ್ತ ತನ್ನೊಡೆಯನ ಕತೆ ಹೇಳುತ್ತಿರುವಂತೆ ಭಾಸವಾಗುತ್ತದೆ.

ಪ್ರಾರ್ಥನೆ ಗಾಂಧೀಜಿಯವರ ಪಾಲಿಗೆ ಆತ್ಮದ ಆಹಾರವಾಗಿತ್ತು. ವೈಯಕ್ತಿಕ ಹಾಗೂ ರಾಷ್ಟ್ರದ ಹಿತಾಸಕ್ತಿಯ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಅವರು ತಪ್ಪದೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅವರ ಬೆಳಗು-ಬೈಗು  ಪ್ರಾರ್ಥನೆಯಿಂದಲೇ ತುಂಬಿರುತ್ತಿತ್ತು. ಅವರು ಇಲ್ಲಿಯ ಉಪಾಸನಾ ಮಂದಿರದಲ್ಲಿ ಕುಳಿತು ಪ್ರೀತಿಯ ಭಜನೆಗಳನ್ನು ಆಲಿಸುತ್ತ, ಗೀತೆ, ಕುರಾನ್, ಹಾಗೂ ಬೈಬಲ್‌ಗಳ ಸಾರ ಹಂಚಿಕೊಳ್ಳುತ್ತಿದ್ದರು. ಮಂದಿರದಲ್ಲಿ ಭೇಟಿ ನೀಡುವ ಪ್ರತಿಯೊಬ್ಬರೊಳಗೂ `ವೈಷ್ಣವ ಜನತೋ' ಅನುರಣಿಸುತ್ತದೆ.

ಆಶ್ರಮದ ಹೃದಯಭಾಗದಲ್ಲಿರುವುದು `ಹೃದಯ ಕುಂಜ'. ಅದು ಕಸ್ತೂರಬಾ ಹಾಗೂ ಗಾಂಧಿ ಹನ್ನೆರಡು ವರ್ಷಗಳ ಕಾಲ ಸಂಸಾರ ನಡೆಸಿದ ಸ್ಥಳ. ಗಾಂಧೀಜಿಯ ಸಮಕಾಲೀನರೂ, ಖ್ಯಾತ ಲೇಖಕರೂ, ಗುಜರಾತ್ ವಿದ್ಯಾಪೀಠದ ಕುಲಪತಿಗಳೂ ಆಗಿದ್ದ ಕಾಕಾ ಸಾಹೇಬ ಕಾಲೇಲ್ಕರ ಹಾಗೂ ಅವರ ಪತ್ನಿ ಈ ಸ್ಥಳಕ್ಕೆ `ಹೃದಯ ಕುಂಜ' ಎಂದು ನಾಮಕರಣ ಮಾಡಿದ್ದಾರೆ. ಇದು ಆಶ್ರಮದ ಹೃದಯ ಭಾಗ ಮಾತ್ರವಾಗಿರಲಿಲ್ಲ ಅನೇಕ ರಾಜಕೀಯ ಬೆಳವಣಿಗೆಗಳ ಕಾರಣಕ್ಕಾಗಿ ದೇಶದ ಹೃದಯವೂ ಆಗಿತ್ತು. ಅದನ್ನು ನೋಡುತ್ತಿದ್ದಂತೆ ನೆನಪು `ದಂಡಿ ಸತ್ಯಾಗ್ರಹ'ದತ್ತ ಜಾರುತ್ತದೆ. ಹೃದಯ ಕುಂಜವನ್ನು ತೊರೆದ ಗಾಂಧೀಜಿ 241 ಮೈಲು ದೂರದ ದಂಡಿ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಬ್ರಿಟಿಷರ ಉಪ್ಪಿನ ಕಾಯ್ದೆಯ ವಿರುದ್ಧ ದನಿ ಎತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ದೊರೆಯುವವರೆಗೆ ಆಶ್ರಮಕ್ಕೆ ಕಾಲಿಡಲಾರೆ ಎಂದು ಸಾರಿದರು. ಅದರಂತೆಯೇ ನಡೆದುಕೊಂಡರು.

ಹೃದಯ ಕುಂಜದಿಂದಾಚೆ ಬಲಗಡೆ ನಾಲ್ಕು ಹೆಜ್ಜೆ ಹಾಕಿದರೆ ಜೋಡಿ ಕೊಠಡಿಗಳಿರುವ ಪುಟ್ಟ ಆಶ್ರಮವಿದೆ. ಅದು ವಿನೋಬಾ - ಮೀರಾ ಕುಟೀರ. 1918ರಿಂದ 1921ರವರೆಗೆ ವಿನೋಬಾ ಭಾವೆ ಒಬ್ಬ ಮಾದರಿ ಸತ್ಯಾಗ್ರಹಿಯಾಗಿ ಈ ಕುಟೀರದಲ್ಲಿ ವಾಸಿಸಿದ್ದರು. ಅವರು ಭೂದಾನ ಚಳವಳಿ ಆರಂಭಿಸಿ ಆಶ್ರಮ ತೊರೆಯುವ ಮುನ್ನ ಇಲ್ಲಿ ಸತ್ಯಾಗ್ರಹಿಗಳು ಹೇಗಿರಬೇಕೆಂಬ ನೀಲನಕ್ಷೆ ತಯಾರಿಸಿದ್ದರು. ಬ್ರಿಟಿಷ್ ಅಡ್ಮಿರಲ್ ಒಬ್ಬರ ಮಗಳಾಗಿದ್ದ ಮ್ಯಾಡಿಲೀನ್ ಸ್ಲೇಡ್ ಗಾಂಧೀಜಿಯವರ ತತ್ವ ಆದರ್ಶಗಳಿಗೆ ಮನಸೋತು ಆಶ್ರಮಕ್ಕೆ ಸೇರಿಕೊಂಡರು. ಆಗ ಗಾಂಧಿ ಆಕೆಗೆ `ಮೀರಾ' ಎಂಬ ಹೊಸ ಹೆಸರಿಟ್ಟು ವಿನೋಬಾ ಅವರಿಂದ ತೆರವಾಗಿದ್ದ ಕುಟೀರದಲ್ಲಿ `ಮೀರಾ'ಳನ್ನು ಇರಲು ಸೂಚಿಸುತ್ತಾರೆ. ಅಲ್ಲಿಂದ ಮುಂದೆ ಅನೇಕ ವರ್ಷಗಳ ಕಾಲ ಮೀರಾ ಅಲ್ಲಿಯೇ ಬದುಕಿದರು.

ಆಶ್ರಮದ ಮತ್ತೊಂದು ಆಕರ್ಷಣೆ `ನಂದಿನಿ' ಅತಿಥಿ ಗೃಹ. ಇದು ಡಾ. ಬಾಬು ರಾಜೇಂದ್ರ ಪ್ರಸಾದ್, ಹೆನ್ರಿ ಪೊಲಾಕ್, ಕಾಲೆನ್ ಬ್ಯಾಕ್ ಹಾಗೂ ಬಾದ್‌ಷಾ ಖಾನ್‌ರಂತಹ ಘಟಾನುಘಟಿಗಳಿಗೆ ಸರಳತೆಯ ಪಾಠ ಹೇಳಿದ `ಶಾಲೆ' ಕೂಡ. ಇಲ್ಲಿಯ `ಸೋಮನಾಥ ಚತ್ರಾಲಯ' ಕುಟುಂಬ ವ್ಯವಸ್ಥೆಗೊಂದು ಉತ್ತಮ ಉದಾಹರಣೆ. ಗಾಂಧೀಜಿ ರೂಪಿಸಿದ್ದ ಈ ಆಲಯ ಗುಜರಾತಿನಲ್ಲಿ ಕೌಟುಂಬಿಕ ನೆಲೆ ಇಲ್ಲದವರಿಗೆ ನೆರಳೊದಗಿಸಿತ್ತು. ಆಪ್ತ ಕಾರ್ಯದರ್ಶಿ ಮಹಾದೇವಭಾಯ್ ದೇಸಾಯಿ, ಸಾಹಿತಿ ಕಾಕಾಸಾಹೇಬ ಕಾಲೇಲ್ಕರ, ತತ್ವಜ್ಞಾನಿ ಕಿಶೋರೆಲಾಲ ಮಶ್ರುವಾಲಾ, ಶಿಕ್ಷಣ ತಜ್ಞ ನರಹರಿ ಪಾರೀಖ, ಭಕ್ತಿಪಂಥದ ಖ್ಯಾತ ಗಾಯಕ ಪಂ.ನಾರಾಯಣ ಮೋರೇಶ್ವರ ಖಾರೆ ಹಾಗೂ ಗ್ರಾಮೋದ್ಯೋಗವನ್ನು ಜನಪ್ರಿಯಗೊಳಿಸಿದ ಲಕ್ಷ್ಮಿದಾಸ ಆಶಾರ ಮುಂತಾದವರು ಆಶ್ರಮದ `ಗುರು ಸದನ'ದಲ್ಲಿ ಬಾಪೂ ಅವರೊಡನೆ ಜೀವಿಸಿದ ಭಾಗ್ಯಶಾಲಿಗಳು.

ನಲವತ್ತೆಂಟು ವರ್ಷಗಳ ಕಾಲ ಸರಳತೆ, ಶಾಂತಿ ಮಂತ್ರ, ಸತ್ಯಾಗ್ರಹ, ಸ್ವಾವಲಂಬನೆ, ಹೃದಯ ಪರಿವರ್ತನೆ ಹಾಗೂ ಪ್ರಾರ್ಥನೆಗಳ ಸಂಗಮವಾಗಿದ್ದ ಆಶ್ರಮ 1963ರಲ್ಲಿ `ಗಾಂಧಿ ಸ್ಮಾರಕ ಸಂಗ್ರಹಾಲಯ'ವಾಗಿ ಬದಲಾಯಿತು. ಈಗ ಚಿನ್ನದ ವರ್ಷಕ್ಕೆ ಕಾಲಿಟ್ಟಿದೆ. ಜಗತ್ತಿನ ಶ್ರೇಷ್ಠ ವಾಸ್ತುಶಿಲ್ಪಿಗಳಲ್ಲೊಬ್ಬರಾದ ಚಾರ್ಲ್ಸ್ ಕೋರಿಯಾ ಸಂಗ್ರಹಾಲಯದ ರೂವಾರಿ. ಮೂಲ ಆಶ್ರಮಕ್ಕೆ ಎಲ್ಲಿಯೂ ಧಕ್ಕೆಯಾಗದಂತೆ ಎಚ್ಚರವಹಿಸಲಾಗಿದೆ. ಸುತ್ತ ಉಳಿದಿದ್ದ ಖಾಲಿ ಜಾಗದಲ್ಲಿ ಮೂರು ಬೃಹದಾಕಾರದ ಗ್ಯಾಲರಿಗಳು ನಿರ್ಮಾಣವಾಗಿವೆ. ಅಲ್ಲಿ ಗಾಂಧೀಜಿ ಅಹಮದಾಬಾದ್‌ನಲ್ಲಿ ಕಳೆದ ಮಹತ್ವದ ಕ್ಷಣಗಳನ್ನು ಕಟ್ಟಿಕೊಡಲಾಗಿದೆ. 1915ರಿಂದ 1930ರವರೆಗಿನ ಹದಿನೈದು ವರ್ಷಗಳ `ಗಾಂಧಿಯುಗ'ವೇ ಈ ಗ್ಯಾಲರಿಗಳಲ್ಲಿದೆ. ಇಲ್ಲಿಯ ಭಾವಚಿತ್ರಗಳು, ವರ್ಣಚಿತ್ರಗಳು, ಅವರ ಕೈ ಬರಹ ಹಾಗೂ ಲೇಖನಗಳಲ್ಲಿ ಆಶ್ರಮವಾಸಿ ಗಾಂಧೀಜಿ ಮೂರ್ತರೂಪ ಪಡೆಯುತ್ತಾರೆ. ಗಾಂಧೀಜಿ ಮುಂದಾಳತ್ವದಲ್ಲಿ ಮೇಲ್ಜಾತಿಯ ಯುವಕನೊಬ್ಬ ಅಸ್ಪೃಶ್ಯ ಯುವತಿಯನ್ನು ಕೈ ಹಿಡಿಯುತ್ತಿರುವ ತೈಲಚಿತ್ರ ಅದೇಕೋ ಬಸವಣ್ಣನನ್ನು ನೆನಪಿಗೆ ತರುತ್ತದೆ. `ನನ್ನ ಬದುಕೇ ನನ್ನ ಸಂದೇಶ' ಎಂಬ ಅವರ ಘೋಷ ವಾಕ್ಯ ಕಂಡಾಗ ಪುಳಕವಾಗುತ್ತದೆ.

34000 ಕೈ ಬರಹದ ಸಂಗ್ರಹಗಳು, 150 ಸತ್ಕಾರಗಳ ಮಾಹಿತಿಗಳು, 6000 ನೆಗೆಟಿವ್‌ಗಳು, 35000ಕ್ಕೂ ಅಧಿಕ ಪುಸ್ತಕಗಳು ಅಲ್ಲಿವೆ. ಗಾಂಧೀಜಿ ವಿಚಾರಧಾರೆಗೆ ಅತ್ಯಮೂಲ್ಯ ಕೊಡುಗೆ ನೀಡಿದ ಮಹದೇವಭಾಯ್ ದೇಸಾಯಿಯವರ 4500 ಪುಸ್ತಕಗಳ ಸಂಗ್ರಹವೂ ಇಲ್ಲುಂಟು. ಸಂಶೋಧನಾರ್ಥಿಗಳಿಗೆ, ಗಾಂಧಿ ಹಾದಿಯಲ್ಲಿ ನಡೆಯಬಯಸುವವರಿಗೆ ಇವೆಲ್ಲವೂ ಬೆಲೆ ಕಟ್ಟಲಾಗದ ಅಮೂಲ್ಯ ನಿಧಿಗಳು.

ಇಂದಿಗೂ ಸಬರಮತಿ ಆಶ್ರಮ ಚಟುವಟಿಕೆಗಳ ಆಗರ. ಹರಿಜನ ಆಶ್ರಮ ಟ್ರಸ್ಟ್ ನಡೆಸುತ್ತಿರುವ ಶಾಲೆ, ಹರಿಜನ ವಿದ್ಯಾರ್ಥಿನಿ ನಿಲಯ `ವಿನಯ ಮಂದಿರ', ಪ್ರಾಥಮಿಕ ಶಾಲಾ ಪ್ರಶಿಕ್ಷಕ ಅಧ್ಯಾಪಕಿಯರ `ಮಹಿಳಾ ಅಧ್ಯಾಪನ ಮಂದಿರ' ವಿದ್ಯೆಯ ಮಹತ್ವ ಸಾರುತ್ತಿವೆ. ಖಾದಿ ಗ್ರಾಮೋದ್ಯೋಗ ಕೇಂದ್ರ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಖಾದಿ, ಕೈಯಿಂದ ತಯಾರಿಸುವ ಹಾಳೆ, ಸಾಬೂನು ಹಾಗೂ ಎಣ್ಣೆ ತಯಾರಿಕೆಗೆ ಇದು ಪ್ರಸಿದ್ಧ. ಅಸ್ಪೃಶ್ಯತೆ ನಿವಾರಣೆಗಾಗಿ ನಿರಂತರವಾಗಿ ಇಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಹೈನುಗಾರಿಕೆ ಅಭಿವೃದ್ಧಿಯ ಹೊಸ ಗಾಳಿ ಆಶ್ರಮದಲ್ಲಿ ಬೀಸುತ್ತಿದ್ದರೂ ಪರಂಪರೆಯಿಂದ ಬಂದ ವೃತ್ತಿಗಳನ್ನು ಉಳಿಸಿ ಬೆಳೆಸಲಾಗುತ್ತಿದೆ.

ಆಶ್ರಮ ಅನುಭವಿಸಿದ ನೋವು...

ಗಾಂಧೀಜಿಯವರ ಆಪ್ತರಾಗಿದ್ದ ಅಮೃತಲಾಲ ಠಕ್ಕರ್ ಒಂದು ಪತ್ರ ಬರೆದು `ಅಸ್ಪೃಶ್ಯ ಕುಟುಂಬವೊಂದು ಆಶ್ರಮ ಸೇರಲು ಬಯಸುತ್ತಿದೆ. ನಿಮ್ಮ ಒಪ್ಪಿಗೆಯಿದೆಯೇ?' ಎಂದು ಕೇಳಿದ್ದರು. ಗಾಂಧೀಜಿ `ಆಶ್ರಮದ ನಿಯಮಾವಳಿಗಳನ್ನು ಸಂಪೂರ್ಣ ಒಪ್ಪಿಕೊಳ್ಳುವುದಾದರೆ ನಮ್ಮ ಅಭ್ಯಂತರವಿಲ್ಲ' ಎಂದು ಉತ್ತರಿಸಿದ್ದರು. ಅವರ ನಿಯಮಕ್ಕೆ ಬದ್ಧರಾಗಿ ಆ ಕುಟುಂಬ ಆಶ್ರಮದಲ್ಲಿ ಪ್ರವೇಶ ಪಡೆದ ಕೂಡಲೇ ಗಾಂಧೀಜಿಯವರ ಕೆಲವು ಮಿತ್ರರು ಆಶ್ರಮಕ್ಕೆ ನೆರವು ನಿಲ್ಲಿಸಿದರು. ಆಶ್ರಮದ ಅಂಗಳದಲ್ಲೇ ಇದ್ದ ಬಾವಿಯ ನೀರನ್ನು ತೆಗೆದುಕೊಳ್ಳಲೂ ಆ ಜಾಗದ ಮಾಲೀಕ ಆಕ್ಷೇಪಿಸತೊಡಗಿದ.

ಮೈಲಿಗೆಯ ನೆಪವೊಡ್ಡಿ ಬಂಗಲೆಯ ಮಾಲೀಕ ಕಿರುಕುಳ ನೀಡತೊಡಗಿದ. ಗಾಂಧೀಜಿ ಅತ್ಯಂತ ನಿರ್ಲಿಪ್ತತೆಯಿಂದಲೇ ಎಲ್ಲವನ್ನೂ ಸಹಿಸಿಕೊಂಡರು. ಜೊತೆಗೆ ಯಾರೂ ಆ ಮಾಲೀಕನ ಮಾತುಗಳಿಗೆ ಪ್ರತಿಕ್ರಿಯೆ ನೀಡದಿರಲು ಮನವಿ ಮಾಡಿದರು. ಆಗ ಮಾಲೀಕನೇ ನಾಚಿಕೊಂಡು ತೊಂದರೆ ಕೊಡುವುದನ್ನು ನಿಲ್ಲಿಸಿದ. ಇದು ಆಶ್ರಮದಲ್ಲಿ ಎದುರಾದ ಸತ್ವ ಪರೀಕ್ಷೆ ಎಂದು ಗಾಂಧೀಜಿ ಬಣ್ಣಿಸಿದ್ದಾರೆ. ಇಂತಹ ಕಾರಣಗಳಿಂದಾಗಿ ಆಶ್ರಮಕ್ಕೆ ಬರುತ್ತಿದ್ದ ಧನ ಸಹಾಯ ಪೂರ್ತಿ ನಿಂತು ಹೋಯಿತು. ಆಗ ಅನಾಮಿಕನೊಬ್ಬ ರಹಸ್ಯವಾಗಿ ತನ್ನಲ್ಲಿದ್ದ 13,000 ರೂಪಾಯಿಗಳ ದೇಣಿಗೆ ನೀಡಿದ. ಹೀಗಾಗಿ ಮುಂದಿನ ಒಂದು ವರ್ಷ ಕಾಲ ಆಶ್ರಮ ನಿರಾತಂಕವಾಗಿ ಹೆಜ್ಜೆ ಇರಿಸಿತು ಎಂದು ಅವರು ತಮ್ಮ ಬರಹದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT