ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದ್ದನಾದ ಮುದ್ದುಮಗ

Last Updated 28 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಒಂದು ಊರಿನಲ್ಲಿ ಗೋಪಣ್ಣನೆಂಬ ಗೃಹಸ್ಥನಿದ್ದ. ಅವರಿಗೆ ಒಳ್ಳೆಯ ತೋಟವಿತ್ತು. ತಕ್ಕಮಟ್ಟಿಗೆ ಸಿರಿವಂತರಾದ ಅವರಿಗೆ ಮನೆಯಲ್ಲಿ ತಾಯಿ ಮಾತ್ರ ಇದ್ದರು. ಆಕೆಗೋ ತಮ್ಮ ಕುಟುಂಬ ಅಪಾರವಾದ ಶ್ರೀಮಂತಿಕೆಯದ್ದು ಎನ್ನುವ ಅಹಂಕಾರ.

ಆರ್ಥಿಕವಾಗಿ ಸಮಾನರಲ್ಲದವರನ್ನು ಮಾತಾಡಿಸುತ್ತಲೂ ಇರಲಿಲ್ಲ. ಒಮ್ಮೆ ಗೋಪಣ್ಣ ಪಕ್ಕದೂರಿಗೆ ಹೋದಾಗ ದಾಹವಾಗಿ ಪಕ್ಕದಲ್ಲಿದ್ದ ಮನೆಗೆ ಹೋಗಿ ನೀರು ಕೇಳಿದರು. ಅವರು ಉಪಚರಿಸಿ ನೀರು ಕೊಟ್ಟರು. ಅಲ್ಲಿ ಕಂಡ ಕುಲೀನ ಯುವತಿಯನ್ನು ಮದುವೆ ಮಾಡಿಕೊಳ್ಳುವ ಅಪೇಕ್ಷೆ ವ್ಯಕ್ತಪಡಿಸಿದರು.

‘ನಾವು ತುಂಬ ಬಡವರು. ಅನ್ಯರ ತೋಟದಲ್ಲಿ ದುಡಿಯುವ ಮಂದಿ. ನಮಗೂ ನಿಮಗೂ ಸಂಬಂಧ ಹೊಂದಿ ಬಾರದು’ ಎಂದು ಆ ಮನೆಯ ಯಜಮಾನ ತಿಳಿಸಿದ. ಆದರೆ ಈ ಮಾತಿಗೆ ಗೋಪಣ್ಣ ಒಪ್ಪಲಿಲ್ಲ. ‘ನಮ್ಮ ಮನೆಯಲ್ಲಿ ಯಾರೂ ಆಕ್ಷೇಪಿಸುವುದಿಲ್ಲ. ನಾನು ಅಮ್ಮ ಮಾತ್ರ ಇರುವುದು. ಅಮ್ಮನಿಗೆ ಸೊಸೆ ಬರಲಿ ಅಂತ ಹಂಬಲ’ ಎಂದನು. ಮನೆಗೆ ಹಿಂದಿರುಗಿದ ಗೋಪಣ್ಣ ಆ ಯುವತಿಯನ್ನು ವಿವಾಹವಾಗುವುದಾಗಿ ಅಮ್ಮನನ್ನು ಒಪ್ಪಿಸಿದನು.

ಮನಸ್ಸಿಲ್ಲವಾದರೂ ತಾಯಿ, ಮಗನ ಹಟಕ್ಕೆ ಒಪ್ಪಿದರು. ಮದುವೆಯಾಯಿತು. ಪತಿ, ಪತ್ನಿ ಪ್ರೀತಿಯಿಂದಲೇ ಇದ್ದರು. ಅತ್ತೆ ಹೊಸ ಸೊಸೆಗೆ ಮನೆಯ ರೀತಿ ನೀತಿ ಕಲಿಸಿಕೊಟ್ಟರು. ಆದರೂ ಆ ತಾಯಿಗೆ ಮಗ ಬಡ ಹುಡುಗಿಯನ್ನು ಮದುವೆಯಾಗಿದ್ದು ಸಮಾಧಾನ ತರಲಿಲ್ಲ. ಮಗನ ಕಾರಣಕ್ಕಾಗಿ ತೆಪ್ಪಗಿದ್ದರು.

ಹೀಗಿರಲು ವರ್ಷದಲ್ಲೇ ಮೊಮ್ಮಗ ಜನಿಸಿದ, ಅವನಿಗೆ ಪುಟ್ಟ ಎಂದು ಹೆಸರಿಟ್ಟರು. ಅಜ್ಜಿಗೆ ಮಹಾ ಸಂಭ್ರಮ. ಆಕೆ ಮೊಮ್ಮಗನ ಎಲ್ಲ ಉಸ್ತುವಾರಿ ವಹಿಸಿಕೊಂಡಳು. ಅತಿಯಾಗಿ ಮುದ್ದು ಮಾಡುತ್ತ ಬೆಳೆಸಿದಳು. ಮಗು ಸದಾ ತನ್ನ ಮಡಿಲಿನಲ್ಲೇ ಇರಬೇಕು.

ತಾಯಿಯ ಹತ್ತಿರ ಬಿಡುತ್ತಲೇ ಇರಲಿಲ್ಲ. ಕ್ರಮೇಣ ಮಗುವಿಗೆ ಅಮ್ಮನ ಸಾಮೀಪ್ಯದ ಆಸೆಯೇ ಇಲ್ಲವಾಯಿತು. ಗೋಪಣ್ಣ ಹೊರಗಡೆಯೇ ಹೆಚ್ಚಾಗಿ ಇರುತ್ತಿದ್ದ ಕಾರಣ ಅವನಿಗೆ ಇದು ತಿಳಿಯಲಿಲ್ಲ. ಆದರೆ ಇವೆಲ್ಲವನ್ನೂ ಮಡದಿ ಒಂದು ದಿನ ಅವನಲ್ಲಿ ಹೇಳಿದಳು.

‘ಹಾಗೋ! ಒಳ್ಳೆಯದೇ ಆಯಿತು. ಅಮ್ಮ ಮೊಮ್ಮಗುವಿಗಾಗಿ ಹಂಬಲಿಸಿದ್ದಳು. ಇರಲಿ. ಅದರಲ್ಲೇನಿದೆ?’ ಎಂದುತ್ತರಿಸಿದನು.

ಮುದ್ದಾಗಿ ಬೆಳೆಯುತ್ತಿದ್ದ ಕಂದ ಸದಾ ಅಜ್ಜಿಯ ಮಡಿಲಿನಲ್ಲೇ ಕೂತಿರುತ್ತಿದ್ದ. ಸೊಸೆಗೆ ಮಗುವನ್ನು ತನ್ನ ಬಳಿಗೆ ಕರೆದು ಅಕ್ಷರ ಕಲಿಸುವಾಸೆ. ಮಗ ಸೊಸೆಯ ಮಧ್ಯೆ ಜಗಳ ಹುಟ್ಟಿಸಲು ಗೋಪಣ್ಣನ ಅಮ್ಮ ಮಗನಲ್ಲಿ ಸೊಸೆಯ ಬಗ್ಗೆ ದೂರಿಕೊಂಡಳು.

‘ಆಕೆಗೆ ಕುಲೀನ ಮನೆತನದಲ್ಲಿ ಮಕ್ಕಳನ್ನು ಬೆಳೆಸುವ ಕ್ರಮ ಅರಿಯದು. ಬಡತನದಲ್ಲಿ ಬೆಳೆದ ಅವಳಿಗೆ ಶಿಶುವನ್ನು ಸಾಕುವುದೂ ತಿಳಿಯದು. ನಾನೆಲ್ಲ ನೋಡಿಕೊಳ್ಳುತ್ತೇನೆ. ನಮ್ಮ ಮನೆ ಮಗು ಚೆನ್ನಾಗಿ ಹಾಲು, ಮೊಸರು, ತುಪ್ಪ ಉಂಡು ತಿಂದು ಬೆಳೆಯಲಿ’ ಎಂದಳು.

ಸರಿ ಎನ್ನಿಸಿತು ಗೋಪಣ್ಣನಿಗೆ. ಮಗುವಿಗೆ ವರ್ಷ ನಾಲ್ಕು ಮುಗಿದರೂ ಅಜ್ಜಿಯ ಮುದ್ದಾಟ ಕಡಿಮೆಯಾಗಲೇ ಇಲ್ಲ. ಅಮ್ಮ ಮಗುವನ್ನು ಅಕ್ಷರ ಕಲಿಸಲು ಕರೆದರೆ ಆಕೆ ಅಲ್ಲಾಡಲೂ ಬಿಡದೆ ಅಪ್ಪಿಕೊಳ್ಳುತ್ತಿದ್ದಳು.

ಮಗುವನ್ನು ಶಾಲೆಗೆ ಸೇರಿಸಲು ತಾಯಿ ಹೇಳಿದರೆ, ಅಜ್ಜಿ ಬೈಯುತ್ತಿದ್ದಳು. ‘ನಮ್ಮನೆಯಲ್ಲಿ ಸಾಕಷ್ಟು ಸಂಪತ್ತಿದೆ. ಅವನು ಶಾಲೆಗೆ ಹೋಗದೆ ಇದ್ದರೂ ಹಾಯಾಗಿ ಉಂಡು ಮಲಗಲು ಸಾಕು. ನಡೆದು ಶಾಲೆಗೆ ಹೋಗಿ ಬೆರಳು ಬಗ್ಗಿಸಿ ಬರೆದು ಓದಿ ಮಾಡುವ ಅಗತ್ಯವಿಲ್ಲ’ ಎನ್ನುತ್ತಿದ್ದಳು ಅಜ್ಜಿ.

ಆಚೀಚೆ ಮನೆಯ ಮಕ್ಕಳೆಲ್ಲ ಚೀಲ ಹೆಗಲಿಗೆ ಹಾಕಿ, ಶಾಲೆಗೆ ಹೋಗಿಬಂದು ಮನೆಯಲ್ಲಿ ಲೆಕ್ಕ, ಅಂಕೆ, ಅ ಆ ಇ ಈ ಬರೆಯುತ್ತಿದ್ದರು. ಆದರೆ ತನ್ನ ಮಗ ಮಾತ್ರ ಹೀಗೆ ಇದ್ದಾನೆ ಎಂಬ ನೋವು ತಾಯಿಯನ್ನು ಕಾಡುತ್ತಿತ್ತು. ಮಗುವಿಗೆ ಅಂಕೆ, ಅಕ್ಷರ, ಮಕ್ಕಳ ಗೀತೆ, ಆಟ ಪಾಠ ಏನೂ ಅರಿಯದು.

ಶಿಕ್ಷಕರು ಒಮ್ಮೆ ಗೋಪಣ್ಣನ ಮನೆಗೆ ಬಂದು ಅವನ ಮಗನನ್ನು ಶಾಲೆಗೆ ಕಳಿಸಲು ಒತ್ತಾಯಿಸಿದರು. ‘ಮಗು ಮಧ್ಯಾಹ್ನ ತಣ್ಣಗಾದ ಅನ್ನಕ್ಕೆ ಉಪ್ಪು ಕಲೆಸಿ ಉಣ್ಣುವ ಗತಿ ನಮಗೆ ಬಂದಿಲ್ಲ. ಬಿಸಿಬಿಸಿಯಾಗಿ ಮೊಸರನ್ನ, ತುಪ್ಪ ಉಣಿಸುವ ಯೋಗ್ಯತೆ ನಮಗಿದೆ. ಎಂಟು ವರ್ಷಕ್ಕೆ ಮೊದಲು ಕಳಿಸುವುದಿಲ್ಲ’ ಎಂದೇ ಹೇಳಿದರು.

ಊರ ದೇವಸ್ಥಾನದ ಉತ್ಸವದಲ್ಲಿ ನೆರೆಹೊರೆಯ ಎಳೆಯ ಮಕ್ಕಳು ಭಾಗವಹಿಸಿ ರಾಗವಾಗಿ ಭಗವದ್ಗೀತೆಯ ಶ್ಲೋಕ, ದನದ ಹಾಡು, ಹಕ್ಕಿಯ ಕಥೆ, ಕೋಳಿಯ ಕಥೆ, ಒಗಟು, ಅಭಿನಯ ಗೀತೆ... ಇವನ್ನೆಲ್ಲ ಹೇಳಿ ಬಹುಮಾನ ಪಡೆದರು. ಆದರೆ ಪುಟ್ಟನಿಗೆ ಅವೆಲ್ಲ ಒಂಚೂರೂ ಬರುತ್ತಿರಲಿಲ್ಲ.

ಪುಟ್ಟನ ಅಮ್ಮ ತಲೆ ಕೆಳಗೆ ಹಾಕಿ ಅತ್ತಳು. ತನ್ನ ಮಗ ಉಳಿದೆಲ್ಲ ಮಕ್ಕಳಿಗಿಂತ ಹಿಂದುಳಿದಿರುವುದನ್ನು ನೋಡಿ ಅವಳಿಗೆ ದುಃಖ ಸಹಿಸಲಾಗಲಿಲ್ಲ. ಅದ್ಯಾವುದನ್ನೂ ಗಮನಿಸದ ಪುಟ್ಟ ‘ಅಜ್ಜೀ, ಹಸಿವು. ಉಂಡೆ, ಚಕ್ಕುಲಿ ತಾ’ ಎಂದು ಹೇಳಿದ. ಅತ್ತಿತ್ತ ಕೂತಿದ್ದ ತಾಯಂದಿರು ಕಿಸಕ್ಕನೆ ನಕ್ಕರು. ಆಗ ಗೋಪಣ್ಣನಿಗೆ ಎದೆಗೆ ಚುಚ್ಚಿದ ಹಾಗಾಯಿತು. 

ಅವನ ವಯಸ್ಸಿನವರು ಆಡುತ್ತ, ಕುಣಿಯುತ್ತ ಒಟ್ಟಾಗಿದ್ದಾರೆ; ತನ್ನ ಮಗ ಅವರೊಂದಿಗೆ ಸೇರುವುದಿಲ್ಲ; ಬದಲಿಗೆ ಅಜ್ಜಿಯ ಮಡಿಲಿನಲ್ಲಿ ಕೂತು ಉಂಡೆ, ಕಜ್ಜಾಯ ಗುಳುಂಕರಿಸುತ್ತಾನೆ; ಒಂದಕ್ಷರ ಬರೆಯಲು, ಓದಲು ತಿಳಿದಿಲ್ಲ. ಮನೆಗೆ ಬಂದ ನಂತರ ತಾಯಿಯಲ್ಲಿ ಗೋಪಣ್ಣ ವಿಚಾರಿಸಿದನು ‘ಅಮ್ಮ, ನಿನ್ನ ಮಗನನ್ನು ಯಾರಾದರೂ ಆಡಿಕೊಂಡು ನಕ್ಕರೆ, ಹೀಯಾಳಿಸಿದರೆ ನಿನಗೇನೆನಿಸುತ್ತದೆ?’ ಆಕೆಗೆ ಸಿಟ್ಟು ಉಕ್ಕಿತು.

‘ನನ್ನ ಮಗನನ್ನು ಅಪಹಾಸ್ಯ ಮಾಡುವವರು ಯಾರದು’ ಎಂದಳು. ‘ಅಮ್ಮ, ಹಾಗಿದ್ದಮೇಲೆ ಪುಟ್ಟನನ್ನು ಅವನಮ್ಮನ ಜೊತೆಗೆ ಬಿಡು. ಅತಿ ಮುದ್ದಿನ ಪರಿಣಾಮ ತಿಳಿಯಿತು ತಾನೇ? ಮಗುವಿಗೆ ಅಮ್ಮ ಎಲ್ಲರಿಗಿಂತ ಹೆಚ್ಚಿನವಳು. ಆಕೆ ವಿದ್ಯೆ ಬುದ್ಧಿ ಕಲಿಸುತ್ತೇನೆಂದರೆ ಅಡ್ದ ಬರಬಾರದು. ಇಂದು ನಮ್ಮ ಮಗು ಮೊದ್ದು ಮೊದ್ದಾಗಿ ಕೂತಾಗ ನನ್ನ ಮನಸ್ಸಿಗೆ ಬಹಳ ನೋವಾಯಿತು.

ಅವನ ವಯಸ್ಸಿನವರೆಲ್ಲರೂ ಶಾಲೆಗೆ ಹೋಗುವುದಿಲ್ಲವೇ? ಇವನಂತೆ ಮಡಿಲೇರಿ ಕೂತು ಊಟ, ತಿಂಡಿಗೆ ಬಾಯಿ ತೆಗೆಯುತ್ತ ಇದ್ದಾರೆಯೇನು? ಅವನು ಎಲ್ಲರ ಹಾಗೇ ಬೆಳೆಯಲಿ; ಕಲಿಯಲಿ. ನಾಳೆಯಿಂದ ಮಗುವನ್ನು ಅವನಮ್ಮ ನೋಡಿಕೊಳ್ಳಲಿ’ ಎಂದನು ಗೋಪಣ್ಣ.

ಹೆಂಡತಿ ಹೇಳಿದಾಗ ಕಿವಿಗೆ ಹಾಕಿಕೊಳ್ಳದೆ ತಪ್ಪು ಮಾಡಿದೆ ಎಂದು ಗೋಪಣ್ಣನಿಗೆ ಅರ್ಥವಾಯಿತು. ಅಂಗಡಿಯಿಂದ ಸ್ಲೇಟು, ಬಳಪ ತಂದನು. ಮಾರನೆಯ ದಿನ ಮುಸುಕು ಹೊದ್ದು ಅಜ್ಜಿಯ ಪಕ್ಕ ಮಲಗಿದ್ದ ಮಗನನ್ನು ಎಬ್ಬಿಸಿ, ಮೀಯಿಸಿದನು. ರಚ್ಚೆ ಹಿಡಿಯುವ ಮಗನಿಗೆ ಅಮ್ಮ ತಿಂಡಿ ಕೊಟ್ಟಳು. ಗೋಪಣ್ಣ ಮಗನ ಕೈಗೆ ಚೀಲ ಕೊಟ್ಟು ಒಲ್ಲೆ ಒಲ್ಲೆ ಎಂದು ಗೋಳಾಡುವ ಅವನನ್ನು ಗದರಿಸಿ ಶಾಲೆಗೆ ಕರೆತಂದನು. ಅಧ್ಯಾಪಕರು ಪುಟ್ಟನನ್ನು ಒಳಗೆ ಕರೆದು ಕೂರಿಸಿದರು.

‘ನೋಡಿ ಗೋಪಣ್ಣ, ಕಲಿಯುವ ವಯಸ್ಸು ಬಂದಾಗ ಶಾಲೆಗೆ ಕಳಿಸಬೇಕು. ಅಮ್ಮ, ಅಪ್ಪ, ಅಜ್ಜ, ಅಜ್ಜಿ ಮಕ್ಕಳನ್ನು ಪ್ರೀತಿ ಮಾಡಿ ಬೆಳೆಸುತ್ತಾರೆ. ಆದರೆ ವಿದ್ಯೆ, ಬುದ್ಧಿ ಕಲಿಯುವ ಸಮಯಕ್ಕೆ ಕಲಿಯಬೇಕು. ಶಿಕ್ಷಣ ಅವರನ್ನು ಯೋಗ್ಯ ಪ್ರಜೆಯಾಗಿ ರೂಪಿಸುತ್ತದೆ. ಇಲ್ಲಿ ಎಲ್ಲ ಮಕ್ಕಳೂ ಅವನ ವಯಸ್ಸಿನವರೇ. ಹೊಂದಿಕೊಳ್ಳುತ್ತಾನೆ’ ಎಂದರು ಅಧ್ಯಾಪಕರು. ಆಗ ಗೋಪಣ್ಣನಿಗೆ ತುಸು ಸಮಾಧಾನವಾಯಿತು. ಪುಟ್ಟನ ಅಮ್ಮನಿಗೆ ನೆಮ್ಮದಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT