ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹೃದಯರ ಸ್ಪಂದನ

Last Updated 14 ಜನವರಿ 2017, 19:30 IST
ಅಕ್ಷರ ಗಾತ್ರ
ಕಾವ್ಯಪ್ರೇಮದ ಮಾದರಿ
ನರೇಂದ್ರ ಪೈ ಅವರ ‘ಗಾಳಿ ಹೆಜ್ಜೆ ಹಿಡಿದ ಸುಗಂಧ’ (ಜ. 8) ಲೇಖನವು, ಕನ್ನಡ ಓದುಗರಿಗೆ ಕೊಂಕಣಿ ಮಕ್ಕಳು ರಚಿಸಿದ ಕೊಂಕಣಿ ಕವಿತೆಗಳ ಪರಿಚಯಮಾಡಿಕೊಡುವ ಉತ್ತಮ ಪ್ರಯತ್ನ. ಇದು ಕೊಂಕಣಿ ಭಾಷಿಕರಿಗೂ ಕೊಂಕಣಿ ಭಾಷೆಯ ಅಂತಃಸತ್ವವನ್ನು ತಿಳಿಸುವ ಪ್ರಯತ್ನ. ಕಾವ್ಯಪ್ರೀತಿಯ ಇಂಥ ಪ್ರಯತ್ನಗಳು ಹೆಚ್ಚಬೇಕು.
–ಲಕ್ಷ್ಮೀ ವಿ. ಕಿಣಿ 
 
**
ಚಿತ್ರಪಟಗಳ ಪಠ್ಯ
‘ಮುಕ್ತಛಂದ’ ಪುರವಣಿಯ ‘ಪಿಸುಗುಡುವ ಚಿತ್ರಪಟ’ ಮಾಲಿಕೆ ವಿಶೇಷವಾದುದು ಹಾಗೂ ಉಪಯುಕ್ತವಾದುದು. ಈ ಮಾಲಿಕೆ ಕಥನಗಳು ಯುವ ಛಾಯಾಗ್ರಾಹಕರಿಗೆ ಒಳನೋಟಗಳನ್ನು ನೀಡುವಂತಿವೆ. ಛಾಯಾಚಿತ್ರಗಳನ್ನು ನೋಡಲಿಕ್ಕೆ ಅಗತ್ಯವಾದ ಮನೋಧರ್ಮವನ್ನು ರೂಪಿಸುವಂತಿವೆ.
–ನಟರಾಜ್ ಸೋನಾರ್, ಕುಷ್ಟಗಿ
 
**
ಮರುಕಳಿಸಿದ ರೋಮಾಂಚನ
ಕವಿ ಎಚ್ಚೆಸ್ವಿ ಅವರು ಕನ್ನಡಕ್ಕೆ ತಂದಿರುವ ವಿಲಿಯಂ ಬ್ಲೇಕ್ ಕವನ ‘ವ್ಯಾಘ್ರ’ ಓದುತ್ತಿದ್ದಂತೆ ರೋಮಾಂಚನವಾಯಿತು. ಈ ಕವನದ ಕುರಿತ ಆಕರ್ಷಣೆ, 1970ರಲ್ಲಿ ಬಿ.ಎ. ತರಗತಿಯ ಇಂಗ್ಲಿಷ್ ಪಠ್ಯಪುಸ್ತಕದಿಂದ ಆರಂಭವಾದುದು ಇಂದಿಗೂ ಕಿಂಚಿತ್ತೂ ಮಾಸಿಲ್ಲ. ನಮ್ಮ ಇಂಗ್ಲಿಷ್ ಪ್ರಾಧ್ಯಾಪಕರಾದ ಎನ್. ಶ್ರೀನಿವಾಸ  ಉಡುಪರು ಈ ಪದ್ಯಬೋಧನೆ ಸಂದರ್ಭದಲ್ಲಿ  ಕಾವ್ಯರಸಾವೇಶಭರಿತರಾಗಿರುತ್ತಿದ್ದರು.
 
‘ಬರ್ನಿಂಗ್ ಬ್ರೈಟ್’ ಎನ್ನುವಾಗ ಅವರ ಕಣ್ಣುಗಳೇ ಪ್ರಕಾಶವನ್ನು ಹೊಮ್ಮಿಸುವಂತಿರುತ್ತಿದ್ದರೆ, ‘ವಾಟ್ಸ್ ದ ಹ್ಯಾಮರ್’, ‘ಚೈನ್’, ‘ಆನ್‌ವಿಲ್’ ಎಂದೆಲ್ಲಾ ತನ್ಮಯರಾಗಿ ಉಚ್ಚರಿಸುವಾಗ ನಮಗೆ ಮೈ ರೋಮ ನೆಟ್ಟಗಾಗುತ್ತಿತ್ತು. ಈ ಪದ್ಯ ನಮ್ಮನ್ನು ತರಗತಿ ಕೋಣೆಯಿಂದ ಸೆಳೆದೊಯ್ದು ಬ್ಲೇಕನ ಅನುಭಾವಿ ಲೋಕದಲ್ಲಿ ಸುತ್ತಾಡಿಸಿದ ಭಾವ ಮೂಡಿಸುತ್ತಿತ್ತು. ಬ್ಲೇಕ್ ಕವಿಯ ಈ ಕವನ ಮತ್ತವನ ಹಸ್ತಾಕ್ಷರ ಮತ್ತು ಅವನೇ ಬರೆದ ಚಿತ್ರ ನೋಡಿ ಇನ್ನೊಮ್ಮೆ ಅದೇ ವಿಧದ ರೋಮಾಂಚನವಾಯಿತು. ಬ್ಲೇಕ್ ಕೂಡ ತಲೆದೂಗುವಂತೆ ಕನ್ನಡಿಸಿದ ಕವಿಗೆ ಅಭಿನಂದನೆ.
–ಕೆ.ಆರ್‌. ಉಮಾದೇವಿ ಉರಾಳ್, ತೀರ್ಥಹಳ್ಳಿ
 
**
ಆಕರ್ಷಕ ಕಥೆಗಳು
‘ಕಥನ ಕಾಮನಬಿಲ್ಲು’ (ಜ. 1) ಶೀರ್ಷಿಕೆಯಲ್ಲಿನ ಕಿರುಗಥೆಗಳನ್ನು ಓದಿದೆ. ಎಂ.ಎಸ್‌. ಶ್ರೀರಾಮ್‌ ಅವರ ಕಥೆ ಅರ್ಥಪೂರ್ಣವಾಗಿದೆ. ದೇಶ ಬಯಸಿ ಆಯ್ಕೆ ಮಾಡಿದ ಪ್ರಧಾನಮಂತ್ರಿಯವರ ಆಡಳಿತವನ್ನು ತುಂಬ ಸೂಕ್ಷ್ಮವಾಗಿ ಅನುಭವಿಸಿ, ಕೇವಲ ಕಲಾತ್ಮಕತೆಯಲ್ಲಿ ಸಾಂಕೇತಿಕ ಅರ್ಥದಲ್ಲಿ ಕಥೆಯಾಗಿಸಿದ್ದಾರೆ. ಪ್ರಜಾಚಿಂತನೆ ಹಿನ್ನೆಲೆಯಲ್ಲಿ ಹುಟ್ಟಿದ ಅದ್ಭುತ ಕಥೆಯಿದು. ಶ್ರೀಧರ ಬಳಗಾರರ ಕಥೆಯೂ ಚೆನ್ನಾಗಿದೆ. ಈ ಕಥನಕ್ರಮ ಮುಂದುವರೆಯಲಿ.
–ಅರ್ಜುನ ಟಿ. ಕೋರಟಕರ, ಜಮಖಂಡಿ
 
**
ವಿಮರ್ಶಕರು?
‘ಸೊನ್ನೆಗಳು ಮತ್ತು ಗಾಂಧೀಜಿ’ ಕುರಿತು. ನನ್ನದು ನೋಟುಗಳ ಪ್ರಶ್ನೆಯಲ್ಲ. ನನ್ನ ವೈಯಕ್ತಿಕ ಗ್ರಂಥಭಂಡಾರದ ಎಷ್ಟೋ ಅಮೂಲ್ಯಭಾಗ ಗೆದ್ದಲು ಹುಳುಗಳಿಗೆ ಗ್ರಾಸವಾಗಿದೆ! (ಅವೇ ವಸ್ತುನಿಷ್ಠ ವಿಮರ್ಶಕರೆನ್ನಬಹುದೆ? ಕಣ್ಣುಗಳಲ್ಲ!)
–ಸಿಪಿಕೆ, ಮೈಸೂರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT