ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯರು ಕಂಡಂತೆ ಅರಸು

Last Updated 15 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಕೆಲವರು ಅಧಿಕಾರಕ್ಕೆ ಏರಿದ್ದೂ ಗೊತ್ತಾಗುವುದಿಲ್ಲ ಇಳಿದಾಗಲೂ ಇಳಿದರು ಅಂತ ಅನಿಸುವುದಿಲ್ಲ. ಆದರೆ ಕೆಲವರು ಏರಿದಾಗ, ಇಳಿದಾಗ ತಮ್ಮ ಹೆಜ್ಜೆಗಳನ್ನು ಏರಿ ಇಳಿಯುವ ಮೆಟ್ಟಿಲುಗಳಲ್ಲಿ ಬಿಟ್ಟು ಹೋಗುತ್ತಾರೆ. ಹತ್ತಿದ ಅಥವಾ ಇಳಿದವನ ಹೆಜ್ಜೆ ಗಾತ್ರ– ನಿಜವಾದ ಅವನ ಹೆಜ್ಜೆಗಿಂತ ದೊಡ್ಡದು ಅಥವಾ ಸಣ್ಣದಾಗಿ ಆಮೇಲೆ ಜನರ ಮನದಲ್ಲಿ ನಿಲ್ಲುವುದುಂಟು. ಪೀಠಕ್ಕಿಂತಲೂ ಕೆಲವು ಸಲ ವ್ಯಕ್ತಿಯೇ ದೊಡ್ಡವರು ಅಂತ ಅನ್ನಿಸಿಕೊಳ್ಳುವುದೂ ಇದೆ. ಇಂತಹ ವಿಶಿಷ್ಟ ಹೆಜ್ಜೆಗಳನ್ನು ಭಾರತದ ಈಚೆಗಿನ ರಾಜಕೀಯ ಕ್ಷೇತ್ರದಲ್ಲಿ ಮೊದಲಿಗೆ ಗುರುತಿಸುವುದಾದರೆ ಹೆಸರಿಸಬೇಕಾದ ಎರಡು ದೊಡ್ಡ ಹೆಸರುಗಳು ಇಂದಿರಾ ಮತ್ತು ಅರಸು.

ಕಳಕಳಿ
ಅರಸರು ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು ಎಂಬ ರೇಡಿಯೋ ವಾರ್ತೆ ಕೇಳಿದಾಗ ನಮಗೆಲ್ಲಾ ‘ಶಾಕ್‌’ ಕೊಟ್ಟಂತಾಯಿತು. ಆಮೇಲಿನ ವಾರ್ತೆ ಕೇಳುವ ಉತ್ಸಾಹವೂ ನಮಗುಳಿಯಲಿಲ್ಲ. ರೇಡಿಯೋ ನಿಲ್ಲಿಸಿ ನಾವೆಲ್ಲ ಅರಸರ ಬಗ್ಗೆಯೇ ಮಾತಾಡಿದೆವು. ಅರಸರ ಬಗ್ಗೆ ಜನರ ಭಾವನೆ ಎಂಥದು ಎಂಬ ‘ಸರ್ವೆ’– ನಾನು ಪ್ರಯತ್ನಿಸದೇ ನನಗಾದದ್ದೆನ್ನುತ್ತಾ ಈ ಲೇಖನ.

ಅರಸು ಹೋದರೆ?
ನಾನು ರೋಗಿಗಳನ್ನು ಪರೀಕ್ಷಿಸಿ ಔಷಧ ಕೊಡುತ್ತಿದ್ದೆ. ಅರಸು ಅವರ ರಾಜೀನಾಮೆ ವಿಚಾರ ಹಿಂದಿನ ದಿನ ‘ಆಕಾಶವಾಣಿ’ಯಲ್ಲಿ ಕೇಳಿದ್ದೆ. ವಿವರ ತಿಳಿಯಲು ಔಷಧ ನೀಡುವ ಮಧ್ಯೆಯೂ ನನಗೆ ವಾರ್ತಾಪತ್ರಿಕೆ ನೋಡುವ ಕಾತುರ. ಹ್ಞ ಬಂದೇ ಬಂತು ಪತ್ರಿಕೆ. ಯಾವಾಗಲೂ ಎಲ್ಲಾ ರೋಗಿಗಳನ್ನು ಪರೀಕ್ಷಿಸಿ ಮುಗಿಸಿ ಆದ ಮೇಲೆಯೇ ಪತ್ರಿಕೆ ಬಿಡಿಸುವ ಪರಿಪಾಠ ನನಗೆ. ಆ ದಿನ ರೋಗಿಗಳನ್ನು ಕುಳ್ಳಿರಿಸಿಯೇ ಪತ್ರಿಕೆ ಬಿಡಿಸಿದೆ. ಆತುರದಲ್ಲಿದ್ದವರು, ನೋವು ತಿನ್ನುತ್ತಿದ್ದವರು ಸಹ ಮೌನವಾಗಿಯೇ ಕುಳಿತರು. ‘ನನ್ನನ್ನು ಕಳುಹಿಸುತ್ತೀರಾ’ ಎಂದು ಯಾರೂ ಕೇಳಲಿಲ್ಲ. ಒಬ್ಬರು ಯಾರೋ ‘ಅರಸು ರಾಜೀನಾಮೆ ಕೊಟ್ಟರಂತೆ, ಹೌದೇ?’ ಎಂದು ಪ್ರಶ್ನಿಸಿದರು.

‘ಹೌದು’ ಎಂದೆ. ‘ಛೆ! ಎಂತಹ ಮನುಷ್ಯ, ಇಂದಿರಾರೊಂದಿಗೆ ನಿಷ್ಠುರ ಕಟ್ಟಿಕೊಂಡು ಪಾಪ ಅಧಿಕಾರ ಕಳಕೊಂಡರು’ ಎಂದು ಅವರೊಳಗೆ ಅವರು ಮಾತನಾಡಿಕೊಂಡರು. ಅರಸು ಇನ್ನೂ ನಮಗೆ ಅರಸರಾಗಿಯೇ ಇರಬೇಕಿತ್ತು ಎಂಬ ಕಳಕಳಿ ಈ ಮಾತು ಆಡಿದವರ ಇಂಗಿತವಾಗಿತ್ತು. ಯಾರ ಮುಖದಲ್ಲೂ ಸಂತಸ ಇರಲಿಲ್ಲ. ‘ದುಡುಕಿದರು’ ಎಂದ ಒಬ್ಬ. ‘ಇಷ್ಟು ಮೆಜಾರಿಟಿ ಇಂದಿರಾಗೆ ಬರಬಾರದಿತ್ತು’ ಎಂದ ಇನ್ನೊಬ್ಬ. ‘ಇನ್ನು ಯಾರು ಬಂದರೂ ಅರಸರ ಹಾಗೆ ಆಗದು’ ಎಂದ ಮತ್ತೊಬ್ಬ; ‘ಹಾಗಾದರೆ ನೀವೆಲ್ಲ ಯಾಕೆ ಅರಸರಿಗೆ ಮತ ನೀಡಲಿಲ್ಲ?’ ಎಂದೆ. ‘ಮತ ನೀಡುವ ಪ್ರಶ್ನೆ ಬೇರೆ. ಆದರೆ ಅರಸು ಇಂದಿರಾ ಜೊತೆಗೆ ಇರಬೇಕಿತ್ತು ಎನ್ನುವವರು ನಾವು’ ಎಂದು ಅಲ್ಲಿದ್ದವರಲ್ಲಿ ಬಹುತೇಕ ಮಂದಿಯ ಆಶಯ.

ಭೂಮಿ ಕಳಕೊಂಡು, ಪರಿಹಾರ ಧನ ಇನ್ನೂ ಸಿಗದ ಆರ್ಥಿಕವಾಗಿ ಸೋತಿದ್ದ ಮಾಜಿ ಭೂಮಾಲೀಕರು ನನ್ನ ಕಾಯಂ ಗಿರಾಕಿ. ಅರಸು ಅಧಿಕಾರದಿಂದ ಇಳಿದ ಎರಡು ದಿನದ ಮೇಲೆ ಎದುರಾದರು. ‘ನೀವು ಯಾವಾಗಲೂ ಅರಸರಿಗೆ ಹಿಡಿಶಾಪ ಹಾಕುತ್ತಿದ್ದೀರಲ್ಲ. ಅರಸು ಇಳಿದುಬಿಟ್ಟರಲ್ಲ!’ ಎಂದೆ. ‘ಅವನ ಮನೆ ಹಾಳಾಗ’ ಎಂದು ಅರಸರಿಗೇ ಹಿಡಿಶಾಪ ಹಾಕುತ್ತಿದ್ದ ಆ ವ್ಯಕ್ತಿ ತೆಪ್ಪಗಾಗಿ– ‘ಪಾಪ, ಒಳ್ಳೆ ಮನುಷ್ಯ’ ಎಂದಷ್ಟೇ ಹೇಳಿ ಮೌನವಾದರು. ನನ್ನ ಮನೆಗೆ ಸಾಮಾನು ಸರಂಜಾಮು ಸಪ್ಲೈ ಮಾಡುವ ಒಬ್ಬ ಸಾಮಾನ್ಯ ಕೂಲಿ ‘ಇಂದಿರಾ ಮತ್ತೆ ಅಧಿಕಾರಕ್ಕೆ ಬಂದರೆ ಸಕ್ಕರೆ, ನೀರುಳ್ಳಿ, ಸೀಮೆಎಣ್ಣೆ ಅಗ್ಗವಾಗಿ ಧಾರಾಳ ಸಿಗುತ್ತೆ’ ಎಂದು ಪ್ರಚಾರ ಮಾಡುತ್ತಿದ್ದವ, ಬೆಳಗಾಗುವ ಮುಂಚೆಯೇ ಮತಗಟ್ಟೆಗೆ ಹೋಗಿ ‘ಕೈ’ಗೆ ಮತಕೊಟ್ಟು ಬಂದವ– ‘ಅರಸರು ಪೋಯರತ್ತ? ನನೆಂಚಿನನಾ ಮಾರಾಯ್ರೇ’ (ಅರಸರು ಹೋದರಂತಲ್ಲ ಇನ್ನೆಂಥಾದ್ದು ಮಾರಾಯ್ರೇ) ಎಂದು ಜೋಲುಮೋರೆ ಹಾಕಿದ.

ಈ ಸರಪಳಿ ಹೀಗೇ ಮುಂದುವರಿಯುತ್ತದೆ. ಕಾರ್ಕಳದ ಪೆಟ್ರೋಲ್‌ ಬಂಕ್‌ನ ಎದುರು ನಾನು ಬೈಕಿಗೆ ಪೆಟ್ರೋಲ್‌ ತುಂಬಿಸುತ್ತಿದ್ದಾಗ ಕಪ್ಪು ಕನ್ನಡಕಧಾರಿ ಸೂಟು ಬೂಟಿನವರಿಬ್ಬರು ಮಾತನಾಡುತ್ತಿದ್ದರು. ‘ಗುಂಡೂರಾಯರ ಸರಕಾರ ಇನ್ನೆರಡು ವರುಷ ನಡೆಯಲಿ. ಆಮೇಲೆ ಹೇಳ್ತೇನೆ. ಅರಸು ಬಂದೇ ಬರ್‍ತಾರೆ. ಯಾರಿದ್ದಾರೆ ಕರ್ನಾಟಕದಲ್ಲಿ ಅರಸರಂಥ ರಾಜಕಾರಣಿ? ಕರ್ನಾಟಕವನ್ನು ಆಳಿದ ಅರಸರು ಯಾರು ಅಂದರೆ ಅರಸರೇ ಅಂತ ಹೇಳುವ ಹಾಗೆ ಅವರಿದ್ದಾರೆ’ ಎಂದು ಅಭಿಮಾನದಿಂದ ಮಾತನಾಡುತ್ತಿದ್ದರು. ಅದೇ ಅನುಭವ ನಾನು ಔಷಧ ಪಡೆದುಕೊಳ್ಳುವ ಕೆಮಿಸ್ಟರರ ಅಂಗಡಿಯಲ್ಲೂ ಆಯ್ತು. ನನ್ನ ಇಂಡೆಂಟನ್ನು ಮೆತ್ತಗೆ ಬದಿಗಿಸಿರಿ ‘ಮೊನ್ನೆ ಅರಸರು ಕಾರ್ಕಳಕ್ಕೆ ಬಂದಾಗ ಎಂತಹ ಒಳ್ಳೆ ಸ್ಪೀಚ್‌ ಕೊಟ್ರೂ ಅಂತ ಗೊತ್ತಾ? ವಂಡರ್‌ಫುಲ್‌! ಗಂಡಸು ಅಂದ್ರೆ ಅವರೊಬ್ಬರೇ’ ಎಂದು ಅರಸರಿಗೆ ಶಿಫಾರಸ್ಸು ಕೊಟ್ಟರು.

ಜನತಾ ಅಭಿಮಾನಿ, ‘ಆರೆಸ್ಸೆಸ್‌ ಮನೋಧರ್ಮದ’ ಪ್ರೆಸ್‌ ಮಾಲೀಕರೊಬ್ಬರು ನಾನವರ ಅಂಗಡಿಗೆ ಹೋದಾಗ ‘ಪ್ರಜಾವಾಣಿ’ ಪತ್ರಿಕೆ ಬಿಡಿಸಿ ವಿಧಾನಸೌಧದಲ್ಲಿ ಅಧಿಕಾರಿಗಳಿಂದ ಬೀಳ್ಕೊಂಡ ‘ಅರಸು ವೈಖರಿ’ಯನ್ನು ಓದಿ ಹೇಳಿ, ಸಣ್ಣಗೆ ಕಣ್ಣಂಚಿನಲ್ಲಿ ಕಾಣಿಸಿಕೊಂಡ ಹನಿಗಳನ್ನು ಒರಸಿದರು. ಪ್ರಾಧ್ಯಾಪಕರೊಬ್ಬರು ‘ಕರ್ನಾಟಕದಲ್ಲಿ ಯಾರ ಹೆಸರನ್ನು ಅಳಿಸಿ ಹಾಕಿದರೂ ಅರಸರ ಹೆಸರು ಅಳಿಸಿಹಾಕಲು ಎಂದಿಗೂ ಅಸಾಧ್ಯ’ ಎಂದು ತೀರ್ಪು ನೀಡಿದರು. ತಾಲ್ಲೂಕ್‌ ಆಫೀಸಿನ ಒಬ್ಬ ಗುಮಾಸ್ತ, ಬಸ್‌ಗೆ ಟಿಕೇಟು ಕೊಡುವ ಏಜೆಂಟ್‌, ಹಣ್ಣು ಹಂಪಲು ಮಾರುವ ಮುದುಕ, ಗೂಡಂಗಡಿಯಲ್ಲಿ ಬೀಡ ಮಾರುವ ಯುವಕ, ಬಸ್ಸಿನ ಕ್ಲೀನರ್‌– ಯಾರ ಬಾಯಿಗೇ ನೀವು ಬೀಳಿ. ಇಂದಿರಾ ಗೆದ್ದದ್ದಕ್ಕಿಂತಲೂ ಅರಸು ಅಧಿಕಾರ ಬಿಟ್ಟಿಳಿದದ್ದುಕ್ಕೆ ಇವರ ‘ಸಹಾನುಭೂತಿ’ ಹೆಚ್ಚು ಪ್ರಾಮುಖ್ಯ ಪಡೆದುಕೊಂಡದ್ದು ನಾನು ಕಂಡ ವೈಶಿಷ್ಟ್ಯ.

ಸೋತದ್ದು ಹೇಗೆ?
ಎಲ್ಲರ ಬಾಯಲ್ಲೂ ‘ಅರಸ’ರಾಗಿ ಮರೆಯುವ ಅರಸು ಅವರು ಹಾಗಾದರೆ ಈ ಚುನಾವಣೆಯಲ್ಲಿ ಹೇಗೆ ಸೋತರು? ಸೋತದ್ದಕ್ಕೆ ಇದೊಂದು ಬಾಯಿ ಉಪಚಾರವೇ? ಅರಸರ ಸಾಧನೆಗಳು ಜನರಿಗೆ ಮುಟ್ಟಿದೆಯೇ? ಅರಸು ನಿಜವಾಗಿಯೂ ಜನ ಹಿತ ಸಾಧಿಸಿದರೆ?

ಇದಕ್ಕೆಲ್ಲ ಒಬ್ಬೊಬ್ಬರು ಒಂದೊಂದು ರೀತಿಯ ಸಮರ್ಪಕವೋ ಅಸಮರ್ಪಕವೋ ಉತ್ತರ ಕೊಟ್ಟಾರು, ಆದರೆ ಅರಸರೂ ಒಪ್ಪಿಕೊಂಡಂತೆ ಅವರು ತಮ್ಮೆಲ್ಲ ಸಾಧನೆಗಳನ್ನು ಕರ್ಣ ಕೃಷ್ಣನಿಗೆ ಧಾರೆ ಎರೆದಂತೆ ಇಂದಿರಾರಿಗೆ ಧಾರೆ ಎರೆದರು. ತಾವೇನು ಮಾಡಿದ್ದರೋ ಅದೆಲ್ಲಾ ‘ನಿಮ್ಮ ತಾಯಿ ಇಂದಿರಾ ಮಾಡಿದ್ದು’ ಎಂದು ಜನರೆದುರು ಆಡಿದರು. ಜೊತೆಗೆ ತಮ್ಮ ಬೆಂಬಲಕ್ಕೆ ನಿಂತವರೆಲ್ಲ ನಿಜವಾಗಿಯೂ ತಮ್ಮ ಆಪ್ತರೆಂದೇ ನಂಬಿದರು. ರಾಜಕೀಯವನ್ನೇ ಜೀವನೋಪಾಯವಾಗಿ ಮಾಡಿ ಉಳ್ಳ ಅನೇಕರು ಅರಸರ ಹಿಂದೆ ಶಂಖ ಜಾಗಟೆ ಬಡಿದು ‘ನೀವು ನಿಜವಾದ ಅರಸರು’ ಎಂದಾಗ ಅರಸರಿಗೆ ಮಣ್ಣವಾಸನೆ ಬರಲಿಲ್ಲ. ಬರೇ ಗುಡಿ ಗೋಪುರದ ಬಂಗಾರ ಶಿಖರದಲ್ಲಿ ಕಣ್ಣು ನೆಟ್ಟ ಅವರು, ಅನಿಮಿಷರಾಗಿ ನೆಟ್ಟ ಕಣ್ಣಲ್ಲೇ ಅಧಿಕಾರವನ್ನು ಬಿಟ್ಟುಕೊಡಬೇಕಾಯಿತು.

ಅರಸರು ಅಧಿಕಾರಕ್ಕೆ ಬಂದದ್ದು ಈಗ ಮುಖ್ಯಮಂತ್ರಿ ಗುಂಡೂರಾಯರು ಅಧಿಕಾರಕ್ಕೆ ‘ತೇಲಿ ಬಂದ’ ಹಾಗೆ! ಸ್ವತಃ ಅರಸರಿಗೇ ತಾನು ಮುಖ್ಯಮಂತ್ರಿ ಆಗ್ತೇನೆ ಎಂದು ತಿಳಿದಿರಲಿಕ್ಕಿಲ್ಲ. ಇಂದಿರಾ ಗಾಳಿಯಲ್ಲಿ ತೂರಿಬಂದ ಪಕ್ಷಾಂತರಿಗಳಿಂದ ಕಟ್ಟಿದ ಅರಸರ ಕೋಟೆ ಸುಮಾರು ಎಂಟು ವರುಷಕ್ಕೂ ಮೀರಿ ಮತ್ತೆ ಉಪ್ಪಿನ ಕೋಟೆಯಾಗಿ ಪಕ್ಷಾಂತರಿಗಳಿಂದಲೇ ಉರುಳಿಸಲ್ಪಟ್ಟಿದ್ದು ಅರಸು ವೈಶಿಷ್ಟ್ಯ. ಅರಸು ಅಧಿಕಾರಕ್ಕೆ ಏರಿದಾಗ ಮೂಗು ಮುರಿದವರೆಲ್ಲ ಈಗ ಅರಸರು ಹೋಗುತ್ತಿದ್ದಾರಲ್ಲ ಎಂದು ಮುಸಿ ಮುಸಿ ಅಳುವಂತಾದದ್ದು ಅರಸರ ‘ಗದೆ’ ಎಷ್ಟು ಆಪ್ತ ಎಂಬುದಕ್ಕೆ ಸಾಕ್ಷಿ.

ಅರಸರು ಏನಾಗಿದ್ದಾರೋ ಅದುವೇ ಆಗಿ ತಮ್ಮ ಅಧಿಕಾರಾವಧಿಯಲ್ಲಿ ನಮ್ಮ ಮುಂದೆ ಮೆರೆದಿದ್ದಾರೆ. ಅರಸರ ಬಗ್ಗೆ ಜಾನಪದ ಮಾದರಿಯ ಕತೆಗಳು ಹುಟ್ಟಿವೆ, ಕತೆಗಳಿಗೆ ಕತೆ ಹುಟ್ಟಿವೆ. ಮಹಾಲಂಚಕೋರ, ಗುಟ್ಟಿನಲ್ಲಿ ಆರ್‌ಎಸ್‌ಎಸ್ ಪ್ರೇಮಿ, ಒಳಗೊಂದು ಹೊರಗೊಂದು ಮುನುಷ್ಯ, ರಾಜಕಾರಣದಲ್ಲಿ ರಾಕ್ಷಸ– ಮೊದಲಾದವೆಲ್ಲ ಈ ಕತೆಗಳಲ್ಲಿ ಬರುತ್ತವೆ. ಆದರೆ ಇಡೀ ಇಂಡಿಯಾದಲ್ಲೇ ಕ್ರಾಂತಿಕಾರಕವಾದ ಭೂಮಸೂದೆ, ಹಿಂದುಳಿದವರಿಗಾಗಿ ಹಾವನೂರ್ ವರದಿ ಜಾರಿ, ನಾಡುನುಡಿಯ ಬೆಳವಣಿಗೆಗಾಗಿ ‘ತಮಿಳ’ರ ಹಾಗೆ ವಹಿಸಿಕೊಂಡ ಶ್ರದ್ಧೆ, ಇಂದಿರಾ ಅವರ ‘ಆಳಾ’ಗಲೂ ಗೊತ್ತು ಎಂದು ತೋರಿಸಿಕೊಂಡ ರೀತಿ, ಸೋತೂ ಗೆದ್ದುಕೊಂಡ ಯಶಸ್ಸು, ಮತ್ತೆ ಅರಸು ಆಡಳಿತ ಬರಬೇಕು ಎನ್ನುವ ಭಾವನೆ ಜನರಲ್ಲಿ ಬಿಟ್ಟು ಹೋದದ್ದು ಇದೇನು ಸಾಮಾನ್ಯವೇ? 

(‘ಪ್ರಜಾವಾಣಿ’ – ಫೆ. 5, 1980)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT