ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಹಾಸಿನಲಿ ಮೇಘ ಶಯನ!

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೈಗೆಟಕುವಷ್ಟು ಹತ್ತಿರದಲ್ಲಿ ಸಾಗುವ ಮೋಡಗಳು ಕುಳಿರ್ಗಾಳಿಯ ಹಿತಾನುಭವ ತರುತ್ತದೆ. ದೂರಾತಿದೂರಕ್ಕೂ ಇರುವ ಹಸಿರು ಹಾಸಿನ ಮೇಲೆ ಮೈಮರೆತು ಮಲಗಿದಂತೆ ಕಾಣಿಸುತ್ತವೆ. ಪಶ್ಚಿಮ ಘಟ್ಟದ ಈ ಗಿರಿಸಾಲುಗಳಿಗೆ `ಮೇಘ ಮಲೈ~ ಎಂಬ ಹೆಸರಿದೆ. ಬೆಟ್ಟಗಳ ಮೇಲಿನ ಮೇಘಗಳ ಸಂಚಾರ ಕಂಡು ಈ ಹೆಸರು ಬಂದಿರಬೇಕು.

ತಮಿಳುನಾಡು ರಾಜ್ಯದ ಥೇಣಿ ಜಿಲ್ಲೆಯಲ್ಲಿ ಬರುವ ಈ ಬೆಟ್ಟಗಳದ್ದು ಅಪೂರ್ವ ಸೊಬಗು. ಸಮುದ್ರ ತೀರದಿಂದ 1,500 ಮೀಟರ್ ಎತ್ತರದಲ್ಲಿ ಇರುವ ಮೇಘಮಲೈಗೆ ತಲುಪಲು ಚಹಾ, ಕಾಫಿ, ಮೆಣಸು, ಏಲಕ್ಕಿ ತೋಟಗಳ ನಡುವೆ ಬಳಸಿ ಸಾಗಬೇಕು.
 
ಅಪರೂಪದ ಔಷಧೀಯ ಸಸ್ಯಗಳು, ವಿವಿಧ ಜಾತಿಯ ಮರಗಳ ಕಾಡಿನ ನಡುವೆ ಪಯಣಿಸಬೇಕು. ವರುಸನಾಡು ಬೆಟ್ಟದಿಂದ ಮೇಘ ಮಲೈ ಬೆಟ್ಟದ ಸಾಲುಗಳನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು. ಅಲ್ಲಿಂದ ಸಣ್ಣ ಬೆಳ್ಳಿಎಳೆಯಂತೆ ಕಾಣಿಸುವ ಸುರುಳಿ ಜಲಪಾತವನ್ನು ನೋಡಬಹುದು.

ಸುರುಳಿ ನದಿ ನಿರ್ಮಿಸಿರುವ ಸುರುಳಿ ತೀರ್ಥ ಎಂದೇ ಹೆಸರಾದ ಈ ಜಲಪಾತ 190 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಬಂಡೆಯ ಮೇಲಿಂದ ಸುರಿಯುವ ನೀರು ಸುರುಳಿ ಸುರುಳಿಯಾಗಿ ಸುತ್ತುತ್ತಾ ಕೆಳಗೆ ಉರುಳುವುದರಿಂದ ಸುರುಳಿ ಜಲಪಾತ ಎಂಬ ಹೆಸರು ಅದಕ್ಕೆ ಪ್ರಾಪ್ತವಾಗಿದೆ.

ಚಾರಣ ಪ್ರಿಯರಿಗೆ ಮೇಘಮಲೈ ಸೂಕ್ತ ಜಾಗ. ನೂರಾರು ಪ್ರಬೇಧದ ಪಕ್ಷಿಗಳು, ಸಸ್ತನಿಗಳು, ಸರೀಸೃಪಗಳು, ಚಿಟ್ಟೆಗಳು ಇಲ್ಲಿವೆ. ಬಲು ಅಪರೂಪದ ಇಂಡಿಯನ್ ಗ್ರೇಟ್ ಹಾರ್ನ್‌ಬಿಲ್, ಸಲೀಂ ಅಲಿ ಅವರ ಹಣ್ಣು ತಿನ್ನುವ ಬಾವಲಿ, ವಿಂಧ್ಯಾನ್ ಬೊಬ್ ಚಿಟ್ಟೆಗಳು ಈ ಪ್ರದೇಶದಲ್ಲಿ ಕಾಣಸಿಗುತ್ತವೆ. ಚುಕ್ಕೆ ಜಿಂಕೆ, ಆನೆಗಳು, ಬೊಗಳುವ ಜಿಂಕೆ, ಕರಡಿ, ಚಿರತೆ, ಲಂಗೂರ್ ಕೂಡ ಇಲ್ಲಿ ನೆಲೆ ಕಂಡುಕೊಂಡಿವೆ.

ಚೆಲುವಿನ ಸಿರಿ ವೆಳ್ಳಿಮಲೈ
ಮೇಘಮಲೈನ ಹೃದಯ ಭಾಗದಲ್ಲಿರುವ ಬೆಟ್ಟಕ್ಕೆ ವೆಳ್ಳಿ ಮಲೈ ಎಂಬ ಹೆಸರು. ತಮಿಳಿನಲ್ಲಿ ವೆಳ್ಳಿ ಎಂದರೆ ಬೆಳ್ಳಿ. ಮಲೈ ಎಂದರೆ ಬೆಟ್ಟ. ಬೆಳ್ಳಿ ಬೆಟ್ಟ ಎನಿಸಿಕೊಂಡಿರುವ ಈ ಗಿರಿಯಲ್ಲಿ ಮುರುಗನ್ ದೇವಸ್ಥಾನ ಇದೆ. ದೇವಾಲಯದ ಬಳಿ ವೈಗೈ ನದಿ ಹರಿಯುತ್ತದೆ. ವೆಳ್ಳಿ ಮಲೈ ಸಮುದ್ರ ತೀರದಿಂದ 1,650 ಮೀಟರ್ ಎತ್ತರದಲ್ಲಿದೆ. ಅಲ್ಲಿ ಅಪರೂಪದ ಕಪ್ಪು ಕೋತಿಗಳನ್ನು ನೋಡಬಹುದು.

ಮೇಘಮಲೈನಿಂದ ಅಲ್ಲಿಗೆ ತಲುಪಲು ಮತ್ತೆ ಕಾಫಿ, ಚಹಾ ತೋಟಗಳ ನಡುವೆ ಪಯಣಿಸಬೇಕು. ದಾರಿಯುದ್ದಕ್ಕೂ ಟ್ರೆಕ್ಕಿಂಗ್ ಶಿಬಿರಗಳು ಕಾಣಸಿಗುತ್ತವೆ. ವೆಳ್ಳಿಮಲೈ ಹತ್ತಿರದಲ್ಲಿಯೇ ಪದ್ಮನಾಭಪುರಂ ಅರಮನೆ, ಸಂಗುತುರೈಂ ಸಮುದ್ರ ತೀರ, ಕೊಲಾಚೆಲ್ ಬಂದರು, ನಾಗರಕೊಯಿಲ್ ದೇವಾಲಯ ಇದೆ. ಮಧುರೈನಿಂದ 130 ಕಿಮೀ ದೂರದಲ್ಲಿದೆ ಮೇಘಮಲೈ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT