ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂನದಿಯ ಹಿನ್ನೀರಿನಲ್ಲಿ ದೋಣಿ ವಿಹಾರ

Last Updated 1 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ಪಶ್ಚಿಮ ಘಟ್ಟ ಹಾಗೂ ಅರಬ್ಬೀ ಸಮುದ್ರದ ನಡುವೆ ಹಬ್ಬಿರುವ ಕೇರಳದ ಕರಾವಳಿ ತೀರ ರಮಣೀಯ ತಾಣಗಳ ಕಣಜ. ಕೇರಳದ ರಾಜಧಾನಿ ತಿರುವನಂತಪುರದಿಂದ 32 ಕಿ.ಮೀ. ದೂರದಲ್ಲಿರುವ ‘ಪೂವಾರ್‌’ ಎಂಬ ಪುಟ್ಟ ಗ್ರಾಮದ ಹಿನ್ನೀರಿನ ಕಾಲುವೆಗಳ ಜಾಲ ಇಂತಹ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ನೆಯ್ಯಾರ್ ನದಿಯು ಸಮುದ್ರವನ್ನು ಸೇರುವ ಅಳಿವೆ ಪ್ರದೇಶದಲ್ಲಿ ವ್ಯಾಪಿಸಿರುವ ಹಿನ್ನೀರಿನ  ಕಾಲುವೆಗಳಲ್ಲಿ ದೋಣಿ ವಿಹಾರ ನಡೆಸುವುದು ಒಂದು ಮನೋಜ್ಞ ಅನುಭವ.

ಮಲಯಾಳದಲ್ಲಿ ‘ಪೂ’ ಎಂದರೆ ಹೂವು, ‘ಆರ್‌’ ಎಂದರೆ ನದಿ ಎಂದರ್ಥ. ಈ ಪ್ರದೇಶಕ್ಕೆ ‘ಪೂವಾರ್’ ಎಂಬ ಹೆಸರು ಇಟ್ಟಿದ್ದು 18ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದ ತಿರುವಾಯೂರಿನ ಅರಸ ಮಾರ್ತಾಂಡ ವರ್ಮ.

‘ಅಳಿಯಕಟ್ಟಿನ ಪ್ರಕಾರ ಅರಸೊತ್ತಿಗೆ ಪಡೆದ ಮಾರ್ತಾಂಡ ವರ್ಮನನ್ನು ಮುಗಿಸಲು ಮಾವನ ಮಕ್ಕಳು ಪಿತೂರಿ ನಡೆಸುತ್ತಾರೆ. ಇದರ ಸುಳಿವು ಪಡೆದ ಮಾರ್ತಾಂಡ ವರ್ಮ ತನ್ನ ವರ್ತಕ ಗೆಳೆಯನೊಬ್ಬನ ನೆರವಿನಿಂದ ಅರಮನೆಯಿಂದ ತಪ್ಪಿಸಿಕೊಳ್ಳುತ್ತಾನೆ. ‘ಮಾರ್ತಾಂಡ ವರ್ಮ ನೆಯ್ಯಾರ್ ನದಿಯಲ್ಲಿ ದೋಣಿಯಲ್ಲಿ ಸಾಗುತ್ತಿರುವಾಗ ನೀರಿನಲ್ಲಿ ಕೆಂಪು ಬಣ್ಣದ ಹೂಗಳು ತೇಲಿ ಬರುತ್ತವೆ. ಈ ಹೂಗಳಿಂದಾಗಿ ನೆಯ್ಯಾರ್ ಕೆಂಬಣ್ಣದ ನದಿಯಂತೆ ಕಾಣಿಸುತ್ತದೆ. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋದ ಆತ ಈ ಪ್ರದೇಶವನ್ನು ಪೂವಾರ್ ಎಂದು ಕರೆದ’ ಎನ್ನುತ್ತಾರೆ ಸ್ಥಳೀಯರು.

ಸಾಗುತ ದೂರ ದೂರ
ಒಂದು ಕಾಲದಲ್ಲಿ ನದಿಯನ್ನೇ ಕೆಂಬಣ್ಣಕ್ಕೆ ತಿರುಗಿಸಿದ್ದ ಹೂಗಳು ಈಗ ಕಾಣಸಿಗುವುದಿಲ್ಲ. ಆದರೆ, ಪೂವಾರ್ ಪ್ರದೇಶದಲ್ಲಿ ನೆಯ್ಯಾರ್ ನದಿ ಹಾಗೂ ಅದರ ಹಿನ್ನೀರಿನ ಕಾಲುವೆಗಳ ಸೊಬಗು ಈಗಲೂ ಹಾಗೆಯೇ ಉಳಿದುಕೊಂಡಿದೆ. ಉಬ್ಬರದ ಸಮಯದಲ್ಲಿ ನೆಯ್ಯಾರ್ ನದಿಯ ಹಿನ್ನೀರಿನ ಕಾಲುವೆಗಳಲ್ಲಿ ನೀರಿನ ಮಟ್ಟ ಐದಾರು ಅಡಿಗಳಷ್ಟು ಏರುತ್ತದೆ. ಈ ಸಮಯ ದೋಣಿ ವಿಹಾರಕ್ಕೆ ಪ್ರಶಸ್ತವಾದುದು. ಬದುಕಿನ ಜಂಜಡಗಳನ್ನು ಮರೆತು, ಅಜ್ಞಾತ ಕಾಲುವೆಗಳಲ್ಲಿ ವಿಹರಿಸುವ ಅನುಭವ ರೋಚಕವಾದುದು. ನೈಸರ್ಗಿಕವಾಗಿ ನಿರ್ಮಾಣವಾದ ಹಿನ್ನೀರಿನ ಕಾಲುವೆಗಳನ್ನು ಆವರಿಸಿರುವ ಗಿಡಗಂಟಿ, ಬಳ್ಳಿಗಳನ್ನು ಬದಿಗೆ ಸರಿಸುತ್ತಾ ದೋಣಿಯಲ್ಲಿ ಸಾಗುವಾಗ ಜಂಗಲ್ ಬುಕ್‌ನ ಸಾಹಸ ಸನ್ನಿವೇಶಗಳು ನೆನಪಾಗುತ್ತವೆ. ನಿತ್ಯ ನೂರಾರು ಪ್ರವಾಸಿಗರು ಈ ಕಾಲುವೆಗಳಲ್ಲಿ ದೋಣಿ ವಿಹಾರ ನಡೆಸುತ್ತಾರೆ.

ಮುಂಜಾನೆ ಹಾಗೂ ಮುಸ್ಸಂಜೆಯ ವೇಳೆ ದೋಣಿ ವಿಹಾರಕ್ಕೆ ತೆರಳಿದರೆ, ಹಿನ್ನೀರಿನ ಬಳಿ ಅಡಗಿ ಕುಳಿತು ಮೀನು ಹಿಡಿಯಲು ಹೊಂಚು ಹಾಕುವ ಮಿಂಚುಳ್ಳಿ, ನೀರಿನೊಳಗೆ ಮುಳುಗು ಹಾಕಿ ಕೊಕ್ಕಿನಲ್ಲಿ ಮೀನನ್ನು ಹಿಡಿದು ತರುವ ನೀರು ಕಾಗೆ, ಮಡಿವಾಳ ಹಕ್ಕಿ, ಕೊಕ್ಕರೆ, ಮೈನಾ ಮತ್ತಿತರ ಪಕ್ಷಿಗಳ ದರುಶನ ಭಾಗ್ಯವೂ  ಲಭ್ಯ. ದೋಣಿಯಲ್ಲಿ ಹಿನ್ನೀರಿನ ಕಾಲುವೆ ಹಾಗೂ ಅಳಿವೆ ಪ್ರದೇಶಗಳ ದ್ವೀಪಗಳನ್ನು ಸುತ್ತುತ್ತಾ ನೆಯ್ಯಾರ್ ನದಿಯು ಸಮುದ್ರ ಸೇರುವ ತಾಣವನ್ನು ತಲುಪಬಹುದು. ದಂಡೆಯುದ್ದಕ್ಕೂ ನೀರಿನತ್ತ ಬಾಗಿರುವ ತೆಂಗಿನ ಮರಗಳು, ಸಮುದ್ರ ಸೇರುವ ತವಕದಲ್ಲಿ ಹರಿದು ಬರುವ ನದಿಗೆ ಸ್ವಾಗತ ಕೋರಲು ನಿಂತಂತೆ ಭಾಸವಾಗುತ್ತದೆ. ನದಿಯ ಇಕ್ಕೆಲಗಳಲ್ಲಿ ಪಹರೆ ಕಾಯುವ ಸೈನಿಕರಂತೆ ಸಾಲಾಗಿ ನಿಂತ ಕಲ್ಪವೃಕ್ಷಗಳತ್ತ ದೃಷ್ಟಿ ಹಾಯಿಸುತ್ತಾ ಸಾಗುವಾಗ ಅರಬ್ಬೀ ಸಮುದ್ರದ ಅಲೆಗಳ ರುದ್ರನರ್ತನ ಸದ್ದು ಕಿವಿಗಡಚಿಕ್ಕುವಂತೆ ಕೇಳಿಸುತ್ತದೆ.

ಬಂಗಾರ ಬಣ್ಣದ ತೀರ
ನೆಯ್ಯಾರ್‌ ನದಿಯು ಸಮುದ್ರ ಸೇರುವ ತಾಣದಲ್ಲಿರುವ ಸುಂದರ ಕಡಲ ಕಿನಾರೆ ಇದೆ. ಇದನ್ನು ‘ಗೋಲ್ಡನ್ ಸ್ಯಾಂಡ್’ ಬೀಚ್ ಎಂದು ಕರೆಯುತ್ತಾರೆ. ಜಲರಾಶಿಯಲ್ಲಿ ನೇಸರ ವಿಶ್ರಮಿಸುವ ಮುಸ್ಸಂಜೆ ಹೊತ್ತಿನಲ್ಲಿ ಈ ಕಿನಾರೆಯಲ್ಲಿ ಮೇಳೈಸುವ ಬೆಳಕಿನಾಟದ ಸೊಬಗನ್ನು ಅಕ್ಷರಗಳಲ್ಲಿ ಕಟ್ಟಿಕೊಡುವುದು ಕಷ್ಟ. ಕಿತ್ತಳೆ ಬಣ್ಣದ ತಟ್ಟೆಯಂತಾಗುವ ಸೂರ್ಯ ಜಲಸಮಾಧಿಯಾಗಲು ಅಣಿಯಾಗುತ್ತಿದ್ದಂತೆಯೇ ಪಡುವಣದ ಬಾನು ರಂಗೇರುತ್ತದೆ. ಆಗ ಇಡೀ ಕಡಲ ಕಿನಾರೆ ಹೊಂಬಣ್ಣಕ್ಕೆ ತಿರುಗುತ್ತದೆ. ಬಹುಶಃ ಇದೇ ಕಾರಣದಿಂದ ಈ ಕಿನಾರೆಗೆ ‘ಗೋಲ್ಡನ್ ಸ್ಯಾಂಡ್‌ ಬೀಚ್‌’ ಎಂಬ ಹೆಸರು ಬಂದಿರಬೇಕು.

ಕಿನಾರೆ ನೋಡಲು ಬಲು ಸುಂದರವಾಗಿ ಕಂಡರೂ, ಇಲ್ಲಿ ಸಮುದ್ರದ ನೀರಿಗಿಳಿಯುವುದು ಅಷ್ಟೇ ಅಪಾಯಕಾರಿ. ಮಳೆಗಾಲದಲ್ಲಿ ಕಡಲ ಅಲೆಗಳ ಆರ್ಭಟ ಇನ್ನೂ ಜೋರಾಗಿರುತ್ತದೆ. ಒಂದರ ಹಿಂದೊಂದರಂತೆ ಏರಿ ಬರುವ ಗಜಗಾತ್ರದ ಅಲೆಗಳು ಕಡಲ ತಡಿಯ ಉಸುಕಿನಲ್ಲಿ ನೊರೆಗಳ ರಂಗವಲ್ಲಿ ಬಿಡಿಸಿ ಕಣ್ಮರೆ ಆಗುವ ಪರಿಯನ್ನು ವೀಕ್ಷಿಸುತ್ತಿದ್ದರೆ ಹೊತ್ತು ಕಳೆಯುವುದೇ ತಿಳಿಯದು. ಅಲೆಗಳ ಆರ್ಭಟವನ್ನು ತಣಿಸಲೇನೋ ಎಂಬಂತೆ ಪಡುವಣ ದಿಕ್ಕಿನಿಂದ ಬೀಸುವ ತಂಗಾಳಿ ಪ್ರವಾಸಿಗರ ಪಯಣದ ಆಯಾಸವನ್ನೆಲ್ಲ ಮರೆಸುವಂತೆ ಮಾಡುತ್ತದೆ.

ಈಗಲೂ ಕಾಲುವೆಗಳ ಆಸುಪಾಸಿನಲ್ಲಿ ಹಲವಾರು ರೆಸಾರ್ಟ್‌ಗಳು ತಲೆ ಎತ್ತಿವೆ. ಆದರೂ ಹಿನ್ನೀರು ಪ್ರದೇಶಗಳ ನಿಸರ್ಗ ಸಹಜ ಸೌಂದರ್ಯಕ್ಕೆ ಧಕ್ಕೆ ಆಗದಂತೆ ಸ್ಥಳಿಯ ಆಡಳಿತ ನೋಡಿಕೊಂಡಿದೆ. ಒಂದು ತಾಸಿನ ದೋಣಿ ವಿಹಾರಕ್ಕೆ ₹1 ಸಾವಿರ ಹಾಗೂ ಎರಡು ತಾಸಿನ ದೋಣಿ ವಿಹಾರಕ್ಕೆ ₹1750 ದರ ಇದೆ.

ನೂರೆಂಟು ನೋಟ
ಪೂವಾರ್‌ಗೆ ಮೂರು ಅಥವಾ ನಾಲ್ಕು ದಿನಗಳ ಪ್ರವಾಸವನ್ನು ಹಮ್ಮಿಕೊಂಡರೆ, ಸಮೀಪದ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನೂ ವೀಕ್ಷಿಸಬಹುದು. ಬಂಗಾಳ ಕೊಲ್ಲಿ, ಅರಬ್ಬೀ ಸಮುದ್ರ ಹಾಗೂ ಹಿಂದೂ ಮಹಾಸಾಗರದ ಸಂಗಮ ಸ್ಥಳವಾದ ಕನ್ಯಾಕುಮಾರಿ ಪೂವಾರ್‌ನಿಂದ 87 ಕಿ.ಮೀ. ದೂರದಲ್ಲಿದೆ. ಕನ್ಯಾಕುಮಾರಿಯ ಸಮುದ್ರ ಮಧ್ಯದಲ್ಲಿರುವ ಸ್ವಾಮಿ ವಿವೇಕಾನಂದ ರಾಕ್‌ನಲ್ಲಿರುವ ವಿವೇಕಾನಂದ ಸ್ಮಾರಕ ಹಾಗೂ ತಮಿಳಿನ ಮಹಾಕವಿ ತಿರುವಳ್ಳುವರ್‌ ಶಿಲಾಮೂರ್ತಿ ಮನೋಜ್ಞವಾಗಿದೆ. ಪೂವಾರ್‌ ಪ್ರವಾಸದ ಜತೆಗೇ ಕನ್ಯಾಕುಮಾರಿಗೂ ಭೇಟಿ ನೀಡಬಹುದು.

ಕನ್ಯಾಕುಮಾರಿಗೆ ಹೋಗುವ ದಾರಿಯ ಮಧ್ಯೆಯೇ ಸಿಗುವ ಪದ್ಮನಾಭಪುರದ ಮರದ ಅರಮನೆ ಕೇರಳದ ಕಾಷ್ಠಶಿಲ್ಪಕಲೆಯ ವೈಭವವನ್ನು  ಸಾರುತ್ತಿದೆ. ತಿರುವನಂತಪುರದ ಪದ್ಮನಾಭ ಸ್ವಾಮಿ ದೇವಸ್ಥಾನ, ನೇಪಿಯರ್ ವಸ್ತುಸಂಗ್ರಹಾಲಯ, ರಾಜಾ ರವಿವರ್ಮನ ಅಪೂರ್ವ ಕಲಾಕೃತಿಗಳನ್ನು ಹೊಂದಿರುವ ಶ್ರಿಚಿತ್ರ ಆರ್ಟ್ ಗ್ಯಾಲರಿ, ಪ್ರಾಣಿ ಸಂಗ್ರಹಾಲಯ, ಕೋವಳಂ ಬೀಚ್‌ ಗಳನ್ನೂ ಸಂದರ್ಶಿಸಬಹುದು.

ಪ್ರವಾಸಿಗರಿಗೆ ಆತಿಥ್ಯ ಒದಗಿಸುವ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ‘ಕ್ಲಬ್‌ ಮಹೀಂದ್ರ’ ಎರಡು ವರ್ಷಗಳ ಹಿಂದೆ ಪೂವಾರ್‌ನಲ್ಲಿ ಐಷಾರಾಮಿ ರೆಸಾರ್ಟ್ ಆರಂಭಿಸಿದೆ. ಪೂವಾರ್‌ನ ದೋಣಿ ವಿಹಾರದ ಸಹಿತ ಆಸುಪಾಸಿನ ಪ್ರವಾಸಿ ತಾಣಗಳಿಗೆ ಕ್ಲಬ್‌ ಮಹೀಂದ್ರ ವಿಶೇಷ ಪ್ಯಾಕೇಜ್‌ ಪ್ರವಾಸಗಳನ್ನು ಏರ್ಪಡಿಸುತ್ತದೆ.

ಏಳು ಎಕರೆಯಷ್ಟು ವಿಶಾಲ ಸ್ಥಳದಲ್ಲಿ ವ್ಯಾಪಿಸಿರುವ ಕ್ಲಬ್‌ ಮಹೀಂದ್ರ ರೆಸಾರ್ಟ್‌ನಲ್ಲಿ ಎಂಟು ‘ಪೂಲ್‌ ವಿಲ್ಲಾ’ಗಳು ಹಾಗೂ 71 ಕೊಠಡಿಗಳಿವೆ. ಪಕ್ಕದಲ್ಲೇ ಈಜುಕೊಳವೂ ಇದೆ.  ಮನರಂಜನೆಗಾಗಿಯೇ ಪ್ರತ್ಯೇಕ ವಿಭಾಗವಿದೆ. ಇಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಮನೋರಂಜನಾ ಚಟುವಟಿಕೆಯನ್ನೂ ಹಮ್ಮಿಕೊಳ್ಳಲಾಗುತ್ತದೆ. ರೆಸಾರ್ಟ್‌ನಲ್ಲಿ ಸಂಜೆ ಮೋಹಿನಿಯಾಟ್ಟಂ, ಕಥಕ್ಕಳಿ ಮತ್ತಿತರ ಕೇರಳದ ಸಾಂಪ್ರದಾಯಿಕ ಕಲೆಗಳ ಪ್ರದರ್ಶನವನ್ನೂ ಕ್ಲಬ್‌ ಮಹೀಂದ್ರ ಪ್ರವಾಸಿಗರಿಗಾಗಿ ಏರ್ಪಡಿಸುತ್ತದೆ.

‘ಸ್ವಸ್ಥ’ ಸ್ಪಾ, ಕ್ಲಬ್ ಮಹೀಂದ್ರದ ಇನ್ನೊಂದು ಆಕರ್ಷಣೆ. ಅನೇಕ ಪ್ರವಾಸಿಗರು ಮಸಾಜ್ ಥೆರಪಿಗಾಗಿಯೇ ಇಲ್ಲಿಗೆ ಬರುತ್ತಾರೆ. ನುರಿತ ಮಸಾಜ್‌ ಪಟುಗಳ ಜತೆ ತಜ್ಞ ಆಯುರ್ವೇದ ವೈದ್ಯರ ಸೇವೆಯೂ ಇಲ್ಲಿ ಲಭ್ಯ.
*
ಕೇರಳದ ಸ್ವಾದ
ಕ್ಲಬ್‌ ಮಹೀಂದ್ರ ಕೇರಳದ ಪಾರಂಪರಿಕ ಖಾದ್ಯಗಳ ಸ್ವಾದವನ್ನು ಸವಿಯುವ ಅವಕಾಶವನ್ನು ಸದಸ್ಯರಿಗೆ ಒದಗಿಸುತ್ತದೆ. ಅಕ್ಕಿ ಹಿಟ್ಟನ್ನು ತೆಂಗಿನ ಕಾಯಿ ತುರಿಯಲ್ಲಿ ಕಲಸಿ ಬಿಟ್ಟು, ಹಬೆಯಲ್ಲಿ ಬೇಯಿಸಿ ತಯಾರಿಸುವ ‘ಪುಟ್ಟು’ ಎಂಬ ಖಾದ್ಯದ ಸ್ವಾದದ ಗುಟ್ಟು ತಿಂದವರಿಗಷ್ಟೇ ಗೊತ್ತು. ‘ಸ್ಥಳಿಯವಾಗಿ ಲಭಿಸುವ ಕರಿಮೀನಿನಿಂದ ತಯಾರಿಸುವ ವಿವಿಧ ಖಾದ್ಯವನ್ನೂ ಪ್ರವಾಸಿಗರು ಬಲು ಇಷ್ಟಪಡುತ್ತಾರೆ’ ಎನ್ನುತ್ತಾರೆ ಇಲ್ಲಿನ ಬಾಣಸಿಗರು.

ದೇಶದಾದ್ಯಂತ 45 ರೆಸಾರ್ಟ್‌ಗಳನ್ನು ಹೊಂದಿರುವ ಕ್ಲಬ್ ಮಹೀಂದ್ರ ಶಾಶ್ವತ ಸದಸ್ಯ ರಿಗೆ ಮೊದಲ ಆದ್ಯತೆ ನೀಡುತ್ತದೆ. ಸದಸ್ಯರಾದವರು ವರ್ಷದಲ್ಲಿ ಏಳು ದಿನ ಪ್ರವಾಸಿ ತಾಣದಲ್ಲಿ ತಂಗುವ  ವ್ಯವಸ್ಥೆಯನ್ನು ಕ್ಲಬ್ ಮಹೀಂದ್ರ ಕಲ್ಪಿಸುತ್ತದೆ. ಸ್ಪಾ ಮತ್ತಿತರ ಸೇವೆಗಳಿಗೆ ಪ್ರವಾಸಿಗರು ಪ್ರತ್ಯೇಕ ಶುಲ್ಕ ಪಾವತಿಸಬೇಕು. ಪ್ರವಾಸಿಗರು ಬಯಸಿದರೆ, ಪ್ರವಾಸಿ ತಾಣಗಳಿಗೆ ಟ್ಯಾಕ್ಷಿ ಮತ್ತಿತರ ಸೇವೆಯನ್ನೂ ಒದಗಿಸಲಾಗುತ್ತದೆ.                                                              

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT