ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಜ್ಜೆ

ಕಥೆ
Last Updated 31 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಅದು ಹೆಜ್ಜೆ. ಅದು ಹೆಜ್ಜೆಯ ಹೆಜ್ಜೆ. ಸಂತಸದ ಹೆಜ್ಜೆ. ಸಂಭ್ರಮದ ಹೆಜ್ಜೆ. ಮನೆ ತುಂಬ ಹೆಜ್ಜೆ. ಮನತುಂಬ ಹೆಜ್ಜೆ. ಮನೆ ಸುತ್ತ ಹೆಜ್ಜೆ. ಅದು ಹೆಜ್ಜೆಯ ಕಾಲ್ಗೆಜ್ಜೆ. ಗಲ್ ಗಲ್ ಗಲ್ ನಿನಾದ ಒಮ್ಮೆ. ಝಣ್ ಝಣ್ ಝಣ್ ಮತ್ತೊಮ್ಮೆ. ಕುಂಟಾಬಿಲ್ಲೆ ಆಡುತ್ತ ಕುಂಟು ಹೆಜ್ಜೆ ಮಗದೊಮ್ಮೆ. ಆರೋಹಣವಾಗ ಅವರೋಹಣವೀಗ.

ಅದು ಹೆಜ್ಜೆ. ಅದು ಕಾಲೇಜು ಉಪನ್ಯಾಸಕರಾಗಿದ್ದ ನಿತ್ಯಾನಂದರ ಮುದ್ದಿನ ಮಗಳು ಹೆಜ್ಜೆ. ಅದು ಎರಡನೇ ತರಗತಿಯ ಹೆಜ್ಜೆ. ಪುಟ್ಟ ಪಾದದ ಹೆಜ್ಜೆ. ಪುಟಪುಟನೆ ನಡೆಯುವ ಹಗುರ ಹೆಜ್ಜೆ. ಮೊಲದ ಗತಿ ಓಡುವ ವೇಗದ ಹೆಜ್ಜೆ. ಗಾಳಿಯಲ್ಲಿ ಹಾರಾಡುವ ಚಿಟ್ಟೆಯ ಹೆಜ್ಜೆ.  ಮನೆಯ ಹಿಂದಿರುವ ಪುಟ್ಟ ಕೊಳದಲ್ಲಿ ಈಗಾಗಲೇ ಈಜು ಕಲಿತಿರುವ ಹೆಜ್ಜೆಯ ಮೀನಿನ ಹೆಜ್ಜೆ.

ಹೆಜ್ಜೆಯ ಸ್ನೇಹಿತ ತ್ರಿಕಾಲ. ತ್ರಿಕಾಲನಿಗೆ ನಾಲ್ಕು ಕಾಲು, ಒಂದು ಬಾಲ, ಒಂದು ಸೂಕ್ಷ್ಮಗ್ರಾಹಿ ಮೂಗು. ಗೊತ್ತಾಯ್ತಲ್ಲ? ಅದೊಂದು ರೇಷ್ಮೆ ಚೆಂಡಿನಂಥ ಪುಟ್ಟ ನಾಯಿಮರಿ. ಒಂದೇ ಒಂದು ಬೇರೆ ಬಣ್ಣದ ಚುಕ್ಕಿ ಇಲ್ಲದಂಥ ಅಚ್ಚ ಬಿಳಿ ಬಣ್ಣದ್ದು. ಎದೆಯನ್ನೆತ್ತಿ, ಬಾಲವನ್ನು ಸುರುಳಿ ಸುತ್ತಿ, ಚಂಗ್ ಚಂಗ್ ಎಂದು ಪುಟಿಯುತ್ತ ಒಳಗೆ ಹೊರಗೆ ಎಲ್ಲ ಕಡೆ ಮುಲಾಜಿಲ್ಲದೆ ಮೂಸುತ್ತ, ಮನೆಯ ಸುತ್ತ ಗಸ್ತು ಸುತ್ತುತ್ತ, ಹೆಜ್ಜೆ ಮನೆಯ ಸದಸ್ಯನೇ ಆಗಿದ್ದ ತ್ರಿಕಾಲ. ತ್ರಿಕಾಲನನ್ನು ನಿತ್ಯಾನಂದರು ತಮ್ಮ ಮಿತ್ರ ಡಾ. ಕಮಾಲ್ ಪಾಷರಿಂದ ಬಹಳ ದಿನಗಳ ಹಿಂದೆಯೇ ಕಾಯ್ದಿರಿಸಿ ತಂದಿದ್ದರು. ನಿತ್ಯಾನಂದರೇ ‘ತ್ರಿಕಾಲ’ ಎಂದು ಹೆಸರಿಟ್ಟಿದ್ದರು.

ಆಗ ಹೆಜ್ಜೆ ಪ್ರಶ್ನಿಸಿದ್ದಳು. ‘ಎಲ್ಲಿಂದ ತಂದ್ಯಪ್ಪ ತ್ರಿಕಾಲನ್ನ?’. ನಿತ್ಯಾನಂದರು ‘ಮಗಳೇ, ಬಹಳ ಹಿಂದೆ ಸಿಂಬಾವಿ ಬರಮೈ ಹೆಗ್ಗಡೆಯವರ ಮನೆಯ ಜೀತದಾಳು ಗುತ್ತಿ ಎಂಬುವನ ಬಳಿ ಇತ್ತು, ಹುಲಿಯ ಎಂಬ ಹೆಸರು ಹೊತ್ತು. ಅದಕ್ಕೆ ಕರಿಯ ಎಂಬ ಹೆಸರೂ ಇತ್ತು. ನಂತರ ಕಾನೂರಿನಲ್ಲಿ ಪುಟ್ಟಣ್ಣ ಎಂಬುವನ ಬಳಿ ಇತ್ತು, ಟೈಗರ್ ಎಂಬ ಹೆಸರು ಹೊತ್ತು. ಅದಾದ ನಂತರ ತೇಜಸ್ವಿ ಎಂಬುವರ ಬಳಿ ಇತ್ತು, ಕಿವಿ ಎಂಬ ಹೆಸರು ಹೊತ್ತು. ಈಗ ಹೆಜ್ಜೆಯ ಬಳಿ ಇದೆ ‘ತ್ರಿಕಾಲ’ ಎಂಬ ಹೆಸರು ಹೊತ್ತು’ ಎಂದರು. ತ್ರಿಕಾಲನ ಪೂರ್ವಾಪರಗಳನ್ನು ತಿಳಿದು ಹೆಜ್ಜೆ ಹೆಮ್ಮೆಯಿಂದ, ಆನಂದದಿಂದ ತುಂಬಿಹೋದಳು. ಕೆನ್ನೆಗಳ ಉಬ್ಬಿಸಿ, ಉದ್ಗರಿಸಿದಳು ‘ಅಬ್ಬಬ್ಬಾ ! ಅಪ್ಪನಿಗೆ ಏನೆಲ್ಲ ಗೊತ್ತು!’.

ಹೆಜ್ಜೆಯ ತಾಯಿ ಆರತಿಯವರು ನಗುತ್ತ ‘ಮಲೆನಾಡಲ್ಲಿ ಕಾಡುಮೇಡು ಗುಡ್ಡ ಬೆಟ್ಟ ಅಬ್ಬರದ ತುಂಗೆಯ ಪ್ರವಾಹದಲ್ಲಿ ನುಗ್ಗಿ ಹೊತ್ತು ತಂದಿದ್ದಾರೆ ಕಣೆ ಹೆಜ್ಜೆ!’ ಎನ್ನುತ್ತಾರೆ. ‘ಗುತ್ತಿಯ ಬಳಿ ಕರಿಯನಾಗಿದ್ದದ್ದು ಈಗ ಬಿಳಿಯ ಆಗಿದೆಯಲ್ಲಾ? ಹೇಗೆ’ ಎನ್ನುತ್ತ ಅಪ್ಪನ ಕಡೆ ಪ್ರಶ್ನಾರ್ಥಕವಾಗಿ ತಿರುಗಿದಳು ಹೆಜ್ಜೆ. ‘ನದಿಯಲ್ಲಿ ಜಾಸ್ತಿ ಹೊತ್ತು ಈಜಿ ಕರಿಯ ಬಣ್ಣ ಹೋಗಿ ಬಿಳಿಯಾಗಿದೆ ಮಗಳೇ’ ಎನ್ನುತ್ತಾರೆ ನಿತ್ಯಾನಂದ. ಎಲ್ಲರಿಗೂ ನಗು ಉಕ್ಕುತ್ತದೆ. ಹೆಜ್ಜೆ ಉಸಿರು ಕಟ್ಟಿ ನಗುತ್ತಾಳೆ. ಅವಳ ತೊಡೆಯ ಮೇಲೆ ಮಲಗಿರುವ ತ್ರಿಕಾಲ ನಿದ್ದೆಯಲ್ಲಿಯೇ ಕಿವಿ ಪಟಪಟ ಅಲ್ಲಾಡಿಸಿ ಅಲ್ಲಿದ್ದ ನೊಣವನ್ನು ಓಡಿಸುತ್ತದೆ. ‘ಆಹಾ! ಎಂಥ ಅದ್ಭುತ ಕಿವಿಗಳಿವೆ ತ್ರಿಕಾಲನಿಗೆ.

ಆ ಥರದ ಕಿವಿಗೂ ನನಗೂ ಬೇಕು’ ಎಂದಳು ಹೆಜ್ಜೆ. ಆರತಿ, ನಿತ್ಯಾನಂದರ ನಗು ಮತ್ತೆ ಮುಂದುವರೆಯುತ್ತದೆ. ಆರತಿಯವರು ‘ತ್ರಿಕಾಲ  ಕುವೆಂಪುರವರನ್ನು ಕಂಡಿದ್ದೀಯೇನೋ ನೀನು?’ ಎಂದು ಪ್ರಶ್ನಿಸುತ್ತಾರೆ. ನಿಸರ್ಗಕ್ಕೆ ಕಾವ್ಯದಾರತಿ ಎತ್ತುತ್ತಿದ್ದ ಕುವೆಂಪುರವರನ್ನು ಕಂಡರೆ ಆರತಿಯವರಿಗೆ ಬಹು ಅಚ್ಚುಮೆಚ್ಚು. ನಿತ್ಯಾನಂದ ‘ತ್ರಿಕಾಲ ಕುವೆಂಪುರವರನ್ನು ಕಂಡಿಲ್ಲ. ಆದರೆ ಕುವೆಂಪು ತ್ರಿಕಾಲನನ್ನು ಹಿಂದೆಯೇ ಕಂಡಿದ್ದಾರೆ. ಆ ದರ್ಶನವಿತ್ತು ಅವರಲ್ಲಿ’ ಎನ್ನುತ್ತ ಗಂಭೀರವಾದರು. ಹೀಗೆಲ್ಲ ಮಾತು ಬೆಳೆದು ನಿಗೂಢವಾದದ್ದೇನೋ ತಮ್ಮ ಸುತ್ತ ಹುತ್ತಗಟ್ಟಿದಂತಾಯಿತವರಿಗೆ. ಆದರೆ ಇದನ್ನೆಲ್ಲ ಕೇಳುತ್ತಿದ್ದ ಜಾಣೆ ಹೆಜ್ಜೆಯಿಂದ ಮುಂದೊಂದು ದಿನ ತಾವು ಕಷ್ಟದಲ್ಲಿ ಸಿಕ್ಕಿಕೊಳ್ಳುವ ಊಹೆ ಸಹ ಆ ದಂಪತಿಗಿರಲಿಲ್ಲ.

ಮನೆಯ ಹೊರಗೆ ಈ ಮಾತಿನ ಹಂದರದಲ್ಲಿ ಅವರಿದ್ದರೆ, ಒಳಗೆ ತೊಟ್ಟಿಲಲ್ಲಿ ಮಲಗಿದ್ದ ಹೆಜ್ಜೆಯ ತಂಗಿ ‘ಕ್ಷಣ’ ಎದ್ದು ಕೂಗತೊಡಗಿದಳು. ಅವಳಿಗೆ ತ್ರಿಕಾಲನ ಜೊತೆಗೂಡಿ ಖುಷಿಪಡಬೇಕಿತ್ತು. ನಿತ್ಯಾನಂದರ ತಾಯಿ ಶಾಂತಮ್ಮನವರು ಕ್ಷಣಳನ್ನು ಎತ್ತಿಕೊಂಡು ಹೊರಬಂದರು. ಕ್ಷಣಳನ್ನು ನೋಡಿದ್ದೇ ತ್ರಿಕಾಲ ಅವಳೆಡೆಗೆ ಹಾರಿ ಬಂದ. ಹೆಜ್ಜೆ ಮತ್ತು ಕ್ಷಣರಿಬ್ಬರೂ ರಭಸದಿಂದ ಬಾಲ ಅಲ್ಲಾಡಿಸುವ ತ್ರಿಕಾಲನನ್ನು ಅಪ್ಪಿ ಹಿಡಿದರು. ತ್ರಿಕಾಲ ಎಷ್ಟು ಆವೇಶಕ್ಕೊಳಗಾಗಿದ್ದನೆಂದರೆ ಹಿಂದಕ್ಕೂ ಮುಂದಕ್ಕೂ ನುಗ್ಗಾಡುತ್ತ ಇಬ್ಬರು ಮಕ್ಕಳನ್ನು ಉರುಳಿಸಿಯೇ ಬಿಟ್ಟ.

ಒಬ್ಬರ ಮೇಲೆ ಒಬ್ಬರು ಬಿದ್ದ ಮಕ್ಕಳು ಗಹಗಹಿಸಿ ನಗತೊಡಗಿದರು. ಆ ಚಂದವನ್ನು ನೋಡಿ ಹಿರಿಯರೂ ನಗತೊಡಗಿದರು. ‘ನಿತ್ಯ, ಏನು ಅದ್ಭುತವಾದ ನಾಯಿಮರಿಯನ್ನು ತಂದುಕೊಟ್ಟಿದ್ದೀಯೋ ಮಕ್ಕಳಿಗೆ! ತ್ರಿಕಾಲ ಬಂದ ಮೇಲೆ ಮಕ್ಕಳು ಅತ್ತೇ ಇಲ್ಲ. ಬರಿ ನಗು ನಗು ನಗು! ನೀನು ಸಣ್ಣವನಿದ್ದಾಗ ನಿನ್ನ ತಂದೆಯೂ ನಿನಗೊಂದು ಬೆಕ್ಕಿನ ಮರಿ ತಂದಿದ್ದರು. ಏನು ಆಟ, ಏನು ಆಟ ನಿನ್ನವೂ ಸಹ!’ ಎಂದು ಶಾಂತಮ್ಮನವರು ಮಧುರ ನೆನಪುಗಳಲ್ಲಿ ಅದ್ದಿ ಹೋದವರಂತಾಗಿ ಕಣ್ತುಂಬ ನೀರು ತುಂಬಿಕೊಂಡರು. ನಿತ್ಯಾನಂದ ಮತ್ತು ಆರತಿಯವರ ಇದುವರೆಗಿನ ದಾಂಪತ್ಯ ಜೀವನವು ಇಂಥ ಅನೇಕ ಅಮೃತ ಕ್ಷಣಗಳಿಂದ ತುಂಬಿ ಹೋಗಿತ್ತು.

ಜಗತ್ತಿನ ಪರಿವೇ ಇಲ್ಲದಂತೆ ಮಕ್ಕಳು ತ್ರಿಕಾಲನ ಜೊತೆ ಆಟಕ್ಕಿಳಿದರು. ಒಂದು ಬಟ್ಟಲಲ್ಲಿ ಹಾಲು ತಂದರು. ತ್ರಿಕಾಲ ಕುಡಿದ. ಬ್ರೆಡ್ಡಿನ ತುಂಡು ಎಸೆದರು. ತ್ರಿಕಾಲ ಗಾಳಿಯಲ್ಲಿಯೇ ಹಾರಿ ಬಾಯಲ್ಲಿ ಕ್ಯಾಚ್ ಹಿಡಿದು ಗುಳುಂ ಮಾಡಿದ. ಇದನ್ನು ನೋಡಿ ಮಕ್ಕಳಿಬ್ಬರಿಗೂ ಆಶ್ಚರ್ಯ ಮತ್ತು ತಮಾಷೆ. ಚೆಂಡನ್ನು ದೂರ ಎಸೆದರು. ತ್ರಿಕಾಲ ಬಾಯಲ್ಲಿ ಹಿಡಿದು ತಂದು ಹೆಜ್ಜೆಗೆ ಕೊಟ್ಟ. ಎಷ್ಟು ದೂರ ಎಸೆದರೂ, ಎಷ್ಟು ಸಲ ಎಸೆದರೂ ತ್ರಿಕಾಲನಿಗೆ ಬೇಸರವಿಲ್ಲ, ಸುಸ್ತಿಲ್ಲ. ಮುರಿದು ಹೋಗುವಂತೆ ಬಾಲವನ್ನು ಅಲ್ಲಾಡಿಸುತ್ತಾನೆ. ‘ಎಷ್ಟು ವೇಗದಲ್ಲಿ ಬಾಲವನ್ನಾಡಿಸುತ್ತದೆಯಲ್ವೇನೇ ಕ್ಷಣ, ನಮಗೂ ಒಂದೊಂದು ಬಾಲವಿದ್ದಿದ್ದರೆ ಎಷ್ಟೊಂದು ಒಳ್ಳೆಯದಿತ್ತು’ ಎಂದು ಕೊರಗುತ್ತಾಳೆ ಹೆಜ್ಜೆ.

ಅದಕ್ಕೆ ಕ್ಷಣಳ ಸಹಮತಿ ಇದ್ದೇ ಇದೆ. ಆದರೆ ಅವಳಿಗೆ ಇನ್ನೂ ಮಾತು ಬರುವುದಿಲ್ಲ. ತಮಗೆ ಸಿಗುವ ಊಟ ತಿಂಡಿಯ ಎಲ್ಲಾ ಐಟಮ್ಮುಗಳು ತ್ರಿಕಾಲನಿಗೆ ಸಿಕ್ಕೇ ಸಿಗುವಂತೆ ನೋಡಿಕೊಳ್ಳುತ್ತಾಳೆ ಹೆಜ್ಜೆ. ಹೆಜ್ಜೆ ಈಗಾಗಲೇ ಕಟ್ಟಾ ಸಮತಾವಾದಿ!. ಮನೆಯಲ್ಲಿ ಮೂರ್ನಾಲ್ಕು ಕಡೆ ಹಾಸಿಗೆ ಇದೆ ತ್ರಿಕಾಲನಿಗೆ. ಅವನಿಗಿಷ್ಟ ಬಂದಲ್ಲಿ ಮಲಗಬಹುದು.

ಈ ಬಾರಿ ದೀಪಾವಳಿಗೆ ಬಟ್ಟೆ ಹೊಲಿಸಬೇಕಾದರೆ ನಿತ್ಯಾನಂದರಿಗೆ ಪೇಚಿಗಿಟ್ಟುಕೊಂಡಿತು. ತ್ರಿಕಾಲನಿಗೆ ಹೊಸ ಬಟ್ಟೆ ಕೊಡಿಸಬೇಕೆಂದು ಹಟಕ್ಕೆ ಬಿದ್ದಳು ಹೆಜ್ಜೆ. ‘ಆಯಿತು’ ಎಂದು ಊರಲ್ಲಿರುವ ಹಲವು ಸಿದ್ಧ ಉಡುಪುಗಳ ಅಂಗಡಿ ಅಲೆದದ್ದಾಯಿತು. ನಾಯಿಮರಿಗಿಲ್ಲ ಸಿದ್ಧ ಉಡುಪು ಎಂದರು ಮಾಲೀಕರು. ಹೆಜ್ಜೆ ಸುಲಭಕ್ಕೆ ಸೋಲುವವಳಲ್ಲ. ‘ಜಾತ್ರೆಯಲ್ಲಿ ಮಂಗನಾಡಿಸುವವ ಬಟ್ಟೆ ಹೊಲಿಸಿರಲಿಲ್ಲವೇ ಮಂಗಕ್ಕೆ’ ಎಂದು ಹೆಜ್ಜೆ ದಬಾಯಿಸಿದಳು. ಸಿಂಪಿಗನ ಹತ್ತಿರ ಹೋದರು. ಅವನು ‘ನಾಯಿಮರಿಗೆ ಬಟ್ಟೆ ಹೊಲಿಯುವುದೇ?’ ಎಂದು ಥಂಡಾ ಹೊಡೆದುಹೋದ.

ಬಟ್ಟೆ ಬರೆ ಏನೂ ಇಲ್ಲದೆ ಮನೆಗೆ ವಾಪಸು ಬಂದರು. ಮನೆಗೆ ಪಟಾಕಿ ತರಲೂ ಹೆಜ್ಜೆ ಬಿಡಲಿಲ್ಲ. ತ್ರಿಕಾಲ ಪಟಾಕಿಗೆ ಹೆದರುತ್ತಿದ್ದುದೇ ಅದಕ್ಕೆ ಕಾರಣವಾಗಿತ್ತು. ಬಹಳ ಬೇಸರದಲ್ಲಿದ್ದ ಹೆಜ್ಜೆಗೆ ಖುಷಿಪಡಿಸಲು ರಾತ್ರಿ ಊಟದ ನಂತರ ಮನೆಯವರೆಲ್ಲ ಮನೆಯ ಮುಂದೆ ಕುಳಿತಿದ್ದಾಗ ಹೆಜ್ಜೆಯನ್ನು ಕರೆದುಕೊಂಡು ನಿತ್ಯಾನಂದರು ಹಾಡು ಹೇಳುತ್ತ ಕುಣಿಯತೊಡಗಿದರು. ಹೆಜ್ಜೆ ಸಹ ಕಾಲು ಹಾಕಿದಳು. ಹೆಜ್ಜೆ ಹಾಕಲಾಗದ ಕ್ಷಣ ಚಪ್ಪಾಳೆ ತಟ್ಟುತ್ತ ಕುಳಿತಳು. ಇದಾವುದೋ ವಿಶೇಷ ಸಂದರ್ಭವೆಂದು ತ್ರಿಕಾಲ ಸಹ ಅವರೆಲ್ಲರ ಜೊತೆ ಕುಣಿಯತೊಡಗಿದ.

ನಾಯಿ ಪ್ಯಾಂಟಿಗೆ ಕಾಲುಗಳೆಷ್ಟು?
ಬಾಲವು ಪ್ಯಾಂಟಿನ ಒಳಗೋ ಹೊರಗೋ?
ಜಿಪ್ಪು ಬೆಲ್ಟು ಬಕಲ್ಲು ಎಲ್ಲಿ?
ಕೆರೆದನು ತಲೆಯನು ಸಿಂಪಿಗನು.

ಯಾವ ಭಂಗಿಯ ಅಂಗಿಯ ಹೊಲಿಯಲಿ?
ಅಂಗಿಗೆ ಜೇಬು ಹಾಕುವುದೆಲ್ಲಿ?
ಗುಂಡಿ ಖಾಜಾ ಕಾಲರ್ ಎಲ್ಲಿ?
ಕೆರೆದನು ತಲೆಯನು ಸಿಂಪಿಗನು.

ಉಲ್ಲನ್ ಟೆರಿಕಾಟ್ ಬಟ್ಟೆಯ ಒಳಗೆ
ಸಾಯಲೇ ನಾನು ಬರಿ ಬೆವರಿ?
ಉಚ್ಚೆ ಹೊಯ್ಯಲು ಕಾಲನು ಎತ್ತಿ
ಜಿಪ್ಪನು ಎಲ್ಲಿಂದೆಲ್ಲಿಗೆ ಎಳೆಯಲಿ
ಒಲ್ಲೆ ಎಂದಿತು ನಾಯಿಮರಿ.

ನೊಣಗಿಣ ಕೂತರೆ ಬೀಸಲು ಬಾಲ
ಆಗದು, ಬಂತೆಂತಹ ಕಾಲ
ಒಲ್ಲೆ ಎಂದಿತು ನಾಯಿಮರಿ.

ಆದರೂ ಗದರಿಸಿ ಸಿಂಪಿಗನು
ಟೇಪಲಿ ಅಳತೆ ತೆಗೆವಾಗ
ಹೊಸ ಬಟ್ಟೆಯ ಮೇಲೆ ಹೆದರಿ
ಉಚ್ಚೆಯ ಹೊಯ್ದಿತು ನಾಯಿಮರಿ

ವಿನಯದಿ ಹೆಜ್ಜೆಗೆ ಕೈಮುಗಿದು
‘ಕ್ಷಮಿಸಿ’ ಎಂದನು ಸಿಂಪಿಗನು.

ನಿತ್ಯಾನಂದರ ಹಾಡಿಗೆ ನಕ್ಕು ನಕ್ಕು ಸುಸ್ತಾದರು. ಕುಣಿ ಕುಣಿದು ಸುಸ್ತಾದರು. ಅವರೆಲ್ಲ ಹಾಡು ಕುಣಿತಗಳಲ್ಲಿ ಹೇಗೆ ಮೈ ಮರೆತಿದ್ದರೆಂದರೆ ಅಂದು ಊಟಕ್ಕೆ ತಿಂದದ್ದು ಏನು ಎಂಬುದು ಒಬ್ಬರಿಗೂ ನೆನಪಿರಲಿಲ್ಲ.

ಹೆಜ್ಜೆ ಶಾಲೆಗೆ ಹೋದರೆ ತ್ರಿಕಾಲನಿಗೆ ಬೇಸರ. ಅವಳು ಬರುವವರೆಗೆ ಅಸಹನೆಯಿಂದ ಕಾಯುತ್ತಾನೆ. ಸಿಟ್ಟು ಸೆಡೆಯಿಂದ ಕಾಯುತ್ತಾನೆ. ಕೊಟ್ಟ ಹಾಲು ಕುಡಿಯುವುದಿಲ್ಲ. ಇಟ್ಟ ತಿಂಡಿ ತಿರುಗಿ ನೋಡುವುದಿಲ್ಲ. ಕಿಟಕಿಯಿಂದ ಇಣುಕುತ್ತಾನೆ. ಬಾಗಿಲಿನಿಂದ ಇಣುಕುತ್ತಾನೆ. ರಸ್ತೆ ಕಡೆ ತಿರುಗಿ ಉಯಿಲಿಕ್ಕುತ್ತಾನೆ. ನಿತ್ಯಾನಂದರು ಸಂಜೆ ಹೆಜ್ಜೆಯನ್ನು ಕರೆತರಲು ಬೈಕಿನಲ್ಲಿ ಹೊರಟರೆ ತಾನೂ ಬರುವೆನೆಂದು ಚೈನು ಕಿತ್ತುಹೋಗುವ ಹಾಗೆ ಎಳೆದಾಡುತ್ತಾನೆ. ಹೆಜ್ಜೆ ಮನೆಯಲ್ಲಿದ್ದಾಗ ತ್ರಿಕಾಲನನ್ನು ಕಟ್ಟಿ ಹಾಕುವ ಹಾಗಿಲ್ಲ. ಹೆಜ್ಜೆಯ ಹಿಂದೆ ಮುಂದೆ ಓಡಾಡುತ್ತಿರುತ್ತಾನೆ. ಹೆಜ್ಜೆ ಜೊತೆಯಿದ್ದರೆ ತ್ರಿಕಾಲನಿಗೆ ಹೆಚ್ಚು ಧೈರ್ಯ, ಶಕ್ತಿ ಮತ್ತು ಜಂಭ.

ಹೆಜ್ಜೆ ಮನೆ ಮುಂದೊಂದು ನೂರಾರು ವರ್ಷದ ಅರಳಿ ಮರವಿದೆ. ಬಿಳಲುಗಳನ್ನು ಇಳಿ ಬಿಟ್ಟುಕೊಂಡು ಮರವೇ ಋಷಿಯಂತೆ ಕಾಣುತ್ತದೆ. ಎಷ್ಟು ತಲೆಮಾರುಗಳನ್ನು ಕಂಡಿತ್ತೋ! ಎಷ್ಟು ಸಾವಿರ ಪಕ್ಷಿಗಳಿಗೆ ಮನೆಯಾಗಿತ್ತೋ! ಎಷ್ಟು ಕೋಟಿ ಕೀಟಗಳು ಅಲ್ಲಿ ಮೊಟ್ಟೆಯಿಟ್ಟು ಮರಿ ಮಾಡಿದ್ದವೋ! ಎಷ್ಟು ದನಕರುಗಳಲ್ಲಿ ದಣಿವಾರಿಸಿಕೊಂಡಿದ್ದವೋ! ಹೇಳಲಸಾಧ್ಯ. ಆ ಮರದ ಕೆಳಗೆ ಹೆಜ್ಜೆ ತ್ರಿಕಾಲನೊಂದಿಗೆ ಹೋಗಿ ಸೇರಿದಳೆಂದರೆ ಅಲ್ಲಿಂದ ವಾಪಸು ಬರುವುದೇ ಇಲ್ಲ. ತ್ರಿಕಾಲ ಅವಳು ಆಡುವ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತಾನೆ. ಅವಳ ದೇಹಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತಾನೆ.

ಹೆಜ್ಜೆ ಟೀಚರ್ ಆದರೆ ತ್ರಿಕಾಲ ವಿಧೇಯ ವಿದ್ಯಾರ್ಥಿಯಾಗುತ್ತಾನೆ. ತಪ್ಪು ಮಾಡಿದರೆ ಬೈಸಿಕೊಳ್ಳುತ್ತಾನೆ. ಹೊಡೆದಂತೆ ನಟಿಸಿದರೆ ಹೊಡೆಸಿಕೊಂಡಂತೆ ನಟಿಸುತ್ತಾನೆ. ಕಳ್ಳ ಪೊಲೀಸ್ ಆಡಿದರೆ ಬಚ್ಚಿಟ್ಟುಕೊಂಡು ಹೆಜ್ಜೆಯಿಂದ ಶಹಬ್ಬಾಸ್ ಎನಿಸಿಕೊಳ್ಳುತ್ತಾನೆ. ಹೊತ್ತು ಹೋಗಿದ್ದೇ ಗೊತ್ತಾಗುವುದಿಲ್ಲ. ಮನೆಯಿಂದ ಕೂಗಿದಾಗಷ್ಟೇ ತಮ್ಮ ಲೋಕದಿಂದ ವಾಸ್ತವಕ್ಕಿಳಿಯುತ್ತಾರೆ. ಇಷ್ಟು ದಿನವಾದರೂ ಹೆಜ್ಜೆಗೆ ತ್ರಿಕಾಲನು ಮೂಕ ಪ್ರಾಣಿಯೆನಿಸಿಲ್ಲ. ಕನ್ನಡ, ಇಂಗ್ಲೀಷ್, ಹಿಂದಿ ಮೂರೂ ಭಾಷೆಗಳಲ್ಲವರು ವಿದ್ವಾಂಸರು. ಅವರಿಬ್ಬರೂ ಭಾಷೆಯ ಎಲ್ಲ ನಿಯಮಾವಳಿಗಳನ್ನು ಮೀರಿದವರು. ಯಾವ ಭಾಷೆಯೂ ಅವರಿಗೆ ತೊಡರಾಗುವುದಿಲ್ಲ.

ಒಮ್ಮೊಮ್ಮೆ ಅವರ ಸಂವಹನಕ್ಕೆ ಭಾಷೆಯೇ ಬೇಕಿಲ್ಲ. ಒಮ್ಮೊಮ್ಮೆ ಸಾಯಂಕಾಲದ ಕಾಫಿ ಬಿಸ್ಕತ್ತುಗಳು ಮರದ ನೆರಳಿಗೇ ಸರಬರಾಜಾಗುತ್ತವೆ. ಮತ್ತೆ ಗಂಟೆಗಟ್ಟಲೆ ಇವರಾಟಗಳು ಮುಂದುವರೆಯುತ್ತವೆ. ರಾತ್ರಿ ಉಂಡು ಆಟಗಳ ಶಿಲ್ಕು ಬಾಕಿ ಇಟ್ಟುಕೊಂಡು ಅಕ್ಕಪಕ್ಕ ಮಲಗಿ ನಿದ್ರಿಸುತ್ತಾರೆ. ಹೆಜ್ಜೆ ಕನಸಲ್ಲಿ ತ್ರಿಕಾಲನೂ, ತ್ರಿಕಾಲನ ಕನಸಿನಲ್ಲಿ ಹೆಜ್ಜೆಯೂ ಪ್ರವೇಶಿಸಿ ಆಟ ಮುಂದುವರೆಸಿ ಆನಂದದಲ್ಲಿ ತೇಲುತ್ತಾರೆ. ಆಟ ಆಡಿ ಕನಸಲ್ಲೂ ಸುಸ್ತಾಗುತ್ತಾರೆ.

ಹೀಗಿರುವಲ್ಲಿ ಊರಿನ ಕೆಲವಾರು ನಾಯಿಗಳಿಗೆ ‘ಕೆನೈನ್ ಡಿಸ್ಟೆಂಪರ್’ ಕಾಯಿಲೆ ಕಾಣಿಸಿಕೊಂಡಿತು. ಸುಮಾರು ನಾಯಿಗಳು ಸತ್ತೇ ಹೋದವು. ಈ ಮಾಹಿತಿ ನಿತ್ಯಾನಂದರಿಗೆ ತಿಳಿದದ್ದೇ ಓಡಿ ಹೋಗಿ ತ್ರಿಕಾಲನಿಗೆ ಡಿಸ್ಟೆಂಪರ್ ರೋಗದ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಿಸಿಕೊಂಡು ಬಂದರು. ಹೆಜ್ಜೆಯೂ ಆಸ್ಪತ್ರೆಗೆ ಹೋಗಿ ಬಂದಳು.

ಡಾ. ಕಮಾಲ್ ಪಾಶ ಊರಿನ ಪ್ರಸಿದ್ಧ ಪಶು ವೈದ್ಯ. ಊರಿನ ಅನೇಕ ಜನ ಅವರ ಬಳಿ ತಮ್ಮ ನಾಯಿಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಅಧ್ಯಕ್ಷತೆಯಲ್ಲಿ ‘ದಯಾ ಶ್ವಾನ ಪ್ರಿಯರ ಸಂಘ’ವೂ ಸಹ ಪ್ರಾರಂಭವಾಗಿತ್ತು. ಅವರೇ ನಿತ್ಯಾನಂದರಿಗೆ ಬಿಳಿಯ ಬಣ್ಣದ ಪಾಮರೇನಿಯನ್ ತಳಿಯ ತ್ರಿಕಾಲನನ್ನು ಕೊಡಿಸಿದ್ದು. ಅವರಿಗೂ ನಿತ್ಯಾನಂದರಿಗೂ ಗಳಸ್ಯ ಕಂಠಸ್ಯ.

ಡಿಸ್ಟೆಂಪರ್ ಬಹಳ ಅಪಾಯಕಾರಿ ರೋಗವೆಂದು ವೈದ್ಯರು ಹೇಳಿದ್ದು ಕೇಳಿ ಹೆಜ್ಜೆ ಮನೆಗೆ ಬಂದವಳೇ ತ್ರಿಕಾಲನನ್ನು ಮನೆಯ ಹೊರಗೆ ಬಿಡದಂತೆ ಒಳಗೇ ಕಟ್ಟಿ ಹಾಕಿದಳು. ಲಸಿಕೆ ಹಾಕಿದ ದಿನವನ್ನು ಕ್ಯಾಲೆಂಡರಿನಲ್ಲಿ ಗುರುತು ಮಾಡಿ ಒಂದೊಂದೇ ದಿನಗಳನ್ನು ತನ್ನ ಪುಟ್ಟ ಕೈ ಬೆರಳುಗಳಲ್ಲಿ ಎಣಿಕೆ ಮಾಡಿದಳು. 14 ದಿನದೊಳಗೆ ಕಾಯಿಲೆ ಬಂದರೂ ಬರಬಹುದು. ಆದರೆ 15ನೇ ದಿನದ ನಂತರ ಲಸಿಕೆಯ ಶಕ್ತಿಯಿಂದ ರೋಗ ಬರುವುದಿಲ್ಲವೆಂದು ವೈದ್ಯರು ಹೇಳಿದ್ದರು. ಹೆಜ್ಜೆ ಒಂದೊಂದು ದಿನ ಕಳೆದಂತೆಯೂ ಕಳೆಗಟ್ಟತೊಡಗಿದಳು. 13ನೇ ದಿನ ಶಾಲೆಯಿಂದ ಬಂದವಳೇ ‘ತ್ರಿಕಾಲ ಇನ್ನೊಂದು ದಿನ ಕಳೆದರೆ ನೀನು ಕ್ಷೇಮ’ ಎಂದು ಎಲ್ಲರಿಗೆ ಕೇಳಿಸುವಂತೆ ಪ್ರಕಟಪಡಿಸಿದಳು. 14ನೇ ದಿನ ಬೆಳಿಗ್ಗೆ ಹೆಜ್ಜೆ ಶಾಲೆಗೆ ಕುಣಿಯುತ್ತ ಹೊರಟಳು. ತಿಂಡಿಯನ್ನು ತ್ರಿಕಾಲನ ಜೊತೆ ಹಂಚಿ ತಿಂದಳು. ಬ್ರೆಡ್ಡಿನ ಚೂರನ್ನು ಎಸೆಯಲು ತ್ರಿಕಾಲ ಗಾಳಿಯಲ್ಲಿ ಹಾರಿ ಬಾಯಲ್ಲಿ ಕ್ಯಾಚ್ ಹಿಡಿದು ಗುಳುಂ ಮಾಡಿದ.

ಅತ್ತ ಹೆಜ್ಜೆ ಸ್ಕೂಲಿಗೆ ಹೋದಳು. ಇತ್ತ ಇದ್ದಕ್ಕಿದ್ದಂತೆ ತ್ರಿಕಾಲನಿಗೆ ಸುಸ್ತು ಕಾಣಿಸಿಕೊಂಡಿತು. ಮೂಲೆ ಹಿಡಿದು ಮಲಗಿದ. ಕೆಮ್ಮಿದ. ಯಾರು ಏನು ಕೊಟ್ಟರೂ ತಿನ್ನಲಿಲ್ಲ. ಮೈತಾಪ ಏರಿತು. ಕಣ್ಣು ಕೆಂಪಾದವು. ಮತ್ತೆ ಮತ್ತೆ ಕೆಮ್ಮಿದ. ಮೂಗಿನಲ್ಲಿ ಲೋಳೆಯಂಥ ದ್ರವ ತೊಟ್ಟಿಕ್ಕತೊಡಗಿತು. ನಿತ್ಯಾನಂದರು ಕೂಡಲೇ ತ್ರಿಕಾಲನನ್ನು ಡಾ. ಪಾಶರ ಬಳಿ ಒಯ್ದರು. ಅಲ್ಲಿ ಚಿಕಿತ್ಸೆ ನಡೆಯಿತು.

ಸಾಯಂಕಾಲ ಹೆಜ್ಜೆ ಹಿಂತಿರುಗಿಸುವಷ್ಟರಲ್ಲಿ ತ್ರಿಕಾಲ ಪೂರಾ ಸುಸ್ತಾಗಿದ್ದ. ಜ್ವರ ಬೆಂಕಿಯಂತೆ ಏರಿದ್ದವು. ಡಾ. ಪಾಶ ಮನೆಗೇ ಬಂದರು. ಬೆಳಿಗ್ಗೆಯಿಂದ ಉಪವಾಸವಿದ್ದ ತ್ರಿಕಾಲ ಕಣ್ಣು ಸಹ ಬಿಡದಂತಾಗಿದ್ದ. ಎಲ್ಲ ಕಡೆ ಡಿಸ್ಟೆಂಪರ್ ಕಾಯಿಲೆಯ ಹಾವಳಿ ಎಂದು ವೈದ್ಯರು ಸುದೀರ್ಘ ವಿವರಣೆ ನೀಡಿದರು. ತ್ರಿಕಾಲನ ರಕ್ತನಾಳಕ್ಕೆ ಗ್ಲೂಕೋಸ್ ಮತ್ತು ಆಂಟಿ ಬಯೋಟಿಕ್ ಔಷಧಗಳನ್ನು ನೀಡಿದರು. ಹೆಜ್ಜೆ ವ್ಯಕ್ತಪಡಿಸುತ್ತಿದ್ದ ಭಯ, ದುಃಖ ಮತ್ತು ಕಳವಳಗಳನ್ನು ಕಂಡು ವೈದ್ಯರಿಗೇ ಅಧೀರತೆ ಕಾಣಿಸಿಕೊಂಡಿತು. ಅಲ್ಲಿಂದ ತ್ರಿಕಾಲನ ಬಳಿಯೇ ಉಳಿದ ಹೆಜ್ಜೆ ಶಾಲೆಗೆ ಹೋಗಲಿಲ್ಲ. ತ್ರಿಕಾಲನಿಗೆ ಆರೋಗ್ಯ ಹಿಂತಿರುಗಲಿಲ್ಲ.

ವೈದ್ಯರ ಎಲ್ಲ ಪ್ರಯತ್ನಗಳೂ ವಿಫಲವಾದವು. ಕೊನೆಯ ದಿನ ಅಂದರೆ ತ್ರಿಕಾಲನ ಪ್ರಾಣ ಹೋದ ದಿನ ಹೆಜ್ಜೆ ಪಕ್ಕದಲ್ಲಿಯೇ ಕುಳಿತಿದ್ದಳು. ಕಾಯಿಲೆ ಕಾಣಿಸಿಕೊಂಡ ನಂತರ ಮೂರು ದಿನ ಮನೆ ದುಃಖದಿಂದ ತುಂಬಿ ಹೋಗಿತ್ತು. ಹಿರಿಯರಾದ ಶಾಂತಮ್ಮನವರಿಂದ ಎಳೆಯ ‘ಕ್ಷಣ’ಳವರೆಗೆ ಮೌನಕ್ಕೆ ಶರಣಾಗಿದ್ದರು. ‘ತ್ರಿಕಾಲ ಬದುಕಲ್ವೇನಪ್ಪ?’, ‘ಸತ್ತು ಎಲ್ಲಿ ಹೋಗ್ತಾನಪ್ಪ ?’, ‘ನಮ್ಮನ್ನು ಬಿಟ್ಟು ಯಾಕೆ ಸತ್ತು ಹೋಗ್ತಾನಪ್ಪ?’ ಮುಂತಾದ ಎದೆ ಬಿರಿಯುವಂತಹ ಹೆಜ್ಜೆಯ ಪ್ರಶ್ನೆಗಳಿಗೆ ಉತ್ತರಿಸಲಾಗದೆ ನಿತ್ಯಾನಂದ ಮತ್ತು ಆರತಿಯವರು ತತ್ತರಿಸಿಹೋದರು.

ತ್ರಿಕಾಲನನ್ನು ದುಃಖದಿಂದ ಸಿಡಿದು ಹೋಗುತ್ತಿದ್ದ ಹೃದಯ ಹೊತ್ತು ಎಲ್ಲರೂ ಮನೆಯ ಮುಂದಿನ ಅರಳಿಮರದ ಕೆಳಗೆ ಮಣ್ಣು ಮಾಡಿದರು. ಕೆಲವೇ ದಿನಗಳ ಕೆಳಗೆ ದೀಪಾವಳಿ ಹಬ್ಬದ ಸಮಯದಲ್ಲಿ ತ್ರಿಕಾಲ ಹಾಡು ನೃತ್ಯದಲ್ಲಿ ತೊಡಗಿದ್ದುದು ಎಲ್ಲರಿಗೂ ನೆನಪಾಯ್ತು. ಅವರ ಜೊತೆ ಅಂದು ಕುಣಿದಾಡುತ್ತಿದ್ದ ತ್ರಿಕಾಲ ಇಂದು ಎಲ್ಲರನ್ನೂ ದುಃಖದ ಕಡಲಲ್ಲಿ ಕೆಡವಿ ಹೋಗಿದ್ದ. ಎಷ್ಟೋ ಸಾವು ನೋವು ಕಂಡಿದ್ದ ಶಾಂತಮ್ಮನವರ ಕಣ್ಣಲ್ಲಿಯೂ ಕಣ್ಣೀರಧಾರೆ.

ಅನುಕಂಪ, ಕರುಣೆಯ ಆಗರವಾಗಿದ್ದ ಮೃದು ಹೃದಯಿ ಆರತಿಯವರು ಇತರೆಯವರ ದುಃಖ ಶಮನಗೊಳಿಸುವುದರ ಜೊತೆ ತಮ್ಮನ್ನು ತಾವು ತಹಬಂದಿಗೆ ತಂದುಕೊಳ್ಳುವುದರಲ್ಲಿ ಸೋತು ಹೋಗಿದ್ದರು. ನಿತ್ಯಾನಂದರಿಗೆ ‘ತ್ರಿಕಾಲ’ ಎಂದು ಹೆಸರಿಟ್ಟ ತಮ್ಮ ಬಗ್ಗೆಯೇ ವಿಷಾದವಾಯಿತು. ದುಃಖದಲ್ಲೂ ನಗು ಬಂತು. ಪ್ರತಿ ನಿಶ್ವಾಸದ ನಂತರ ಉಚ್ಚ್ವಾಸದ ಖಾತ್ರಿ ಇಲ್ಲದ ಬದುಕಿನ ನಶ್ವರತೆಯ ಬಗ್ಗೆ ಮಕ್ಕಳಿಗೆ ತಿಳಿಯ ಹೇಳುವುದು ಹೇಗೆಂದು ನಿತ್ಯಾನಂದರಿಗೆ ನಿಜಕ್ಕೂ ಭಯವಾಯಿತು. ಜಗತ್ತಿನ ಅತ್ಯಂತ ಕಹಿ ಕಣ್ಣೀರ ಹನಿಗಳು ಅಂದು ನೆಲಕ್ಕುರುಳಿ ಬಿದ್ದವು.

ಇದಾದ ನಂತರದ ನಾಲ್ಕು ದಿನಗಳು ನಿತ್ಯಾನಂದರ ಮನೆಯೆಂಬುದು ದುಃಖದ ಮಡುವಾಗಿತ್ತು. ಹೆಜ್ಜೆಗೆ ಜ್ವರ ಏರಿ ನಿದ್ದೆಯಲ್ಲಿ ಕನವರಿಸುತ್ತ ಎಚ್ಚರದಲ್ಲಿ ಭ್ರಮೆಗೊಳಗಾದವಳಂತೆ ಮನೆಯ ಮೂಲೆ ಮೂಲೆ ಹುಡುಕುತ್ತ ‘ಅಪ್ಪ ತ್ರಿಕಾಲನೇನಾದರೂ ಹುಲಿಯನಾಗಿ ಗುತ್ತಿಯ ಬಳಿ, ಟೈಗರ್ ಆಗಿ ಪುಟ್ಟಣ್ಣನ ಬಳಿ ಅಥವಾ ಕಿವಿಯಾಗಿ ತೇಜಸ್ವಿಯವರ ಬಳಿ ಹೋಗಿರಬಹುದೇ? ಅಥವ ತುಂಬಿದ ತುಂಗೆಯಲ್ಲಿ ಬದುಕಲು ಹೋರಾಡುತ್ತಿರಬಹುದೆ?’ ಮುಂತಾಗಿ ಪ್ರಶ್ನಿಸುತ್ತ ನಿತ್ಯಾನಂದರನ್ನು ಅಗ್ನಿಪರೀಕ್ಷೆಗೆ ಒಡ್ಡಿದಳು. ಒಮ್ಮೆಯಂತೂ ಮನೆಯ ಆವರಣದಲ್ಲಿದ್ದ ಬಾವಿಗೆ ಹೋಗಿ ಅದರಲ್ಲಿರುವ ತ್ರಿಕಾಲನನ್ನು ಎತ್ತಿಕೊಂಡು ಬರಲು ಹಟಕ್ಕೆ ಬಿದ್ದಳು.

ನಿತ್ಯಾನಂದರೊಮ್ಮೆ ಬಾವಿಯ ನೀರಿನಲ್ಲಿ ತ್ರಿಕಾಲನ ಬಿಂಬವನ್ನು ತೋರಿಸಿ ‘ಅದು ನೋಡು ತ್ರಿಕಾಲ ಅಲ್ಲಿದ್ದಾನೆ’ ಎಂದು ಹೆಜ್ಜೆಯ ಬಳಿ ತಮಾಷೆ ಮಾಡಿದ್ದರು. ಅದೀಗ ನೆನಪಾಗಿ ಹೆಜ್ಜೆ ತ್ರಿಕಾಲ ಬಾವಿಯ ನೀರಿನಲ್ಲಿದ್ದಾನೆಂದೂ ನಿತ್ಯಾನಂದರು ಬಾವಿಯಲ್ಲಿಳಿದು ತ್ರಿಕಾಲನನ್ನು ಎತ್ತಿಕೊಂಡು ಬರಲು ಆದೇಶಿಸಿ ಕಾತರಿಸತೊಡಗಿದ್ದಳು. ಎಷ್ಟು ಹೇಳಿದರೂ ಒಪ್ಪದ ಹೆಜ್ಜೆಯನ್ನು ಮನೆಗೆ ಕರೆತರಲು ನಿತ್ಯಾನಂದರಿಗೆ ತಮ್ಮ ಎಲ್ಲ ಬುದ್ಧಿ ಮತ್ತು ತಾಳ್ಮೆಯನ್ನು ಬಳಸಬೇಕಾಯಿತು.

ನಾಲ್ಕನೆಯ ದಿನದ ಸಂಜೆಯೂ ಹುಷಾರಿಲ್ಲದೆ ತ್ರಿಕಾಲನನ್ನು ಹೆಜ್ಜೆ ನಿದ್ದೆಯಲ್ಲಿ ಕನವರಿಸುತ್ತಿದ್ದಾಗ ತಲೆ ರೋಸಿದ ನಿತ್ಯಾನಂದರು ಅಡ್ಡಾಡುತ್ತ ಮನೆ ಬಿಟ್ಟು ಹೊರಗೆ ಹೊರಟರು. ಸರಿಯಾಗಿ ಊಟ ನಿದ್ದೆ ಇಲ್ಲದೆ ದುಃಖದ ಹೊಡೆತದಿಂದ ನಿತ್ಯಾನಂದರು ಹೈರಾಣಾಗಿ ಹೋಗಿದ್ದರು. ನಿದ್ರೆಯಲ್ಲಿ ನಡೆಯುತ್ತ ಹೊರಟಂತಿದ್ದ ಅವರಿಗೆ ಎಚ್ಚರವಾದದ್ದೇ ಕಾರೊಂದು ಅವರ ಬಳಿ ಬಂದು ನಿಂತಾಗ. ಅದು ಡಾ.ಕಮಾಲ್ ಪಾಶರ ಕಾರಾಗಿತ್ತು. ಕಾರಿನಿಂದಿಳಿದು ನಿತ್ಯಾನಂದರ ಬಳಿ ಬಂದು ಪಾಶ ಗಾಬರಿ ಬಿದ್ದರು. ನಿತ್ಯಾನಂದರು ಹೆಜ್ಜೆಯ ಪರಿಸ್ಥಿತಿ ವಿವರಿಸಿ ‘ಕಣ್ಣು ಕಟ್ಟಿ ಕಾಡಲ್ಲಿ ಬಿಟ್ಟಂತಾಗಿದೆ ಮಾರಾಯ. ಏನಾದರೂ ಮಾಡಿ ಈ ಬಿಕ್ಕಟ್ಟಿನಿಂದ ಪಾರು ಮಾಡು’ ಎಂದು ತಮ್ಮ ಸ್ನೇಹಿತನ ಬಳಿ ಗೋಗರೆದರು.

ಆಗ ಇದ್ದಕ್ಕಿದ್ದಂತೆ ಪಾಶರ ಮುಖ ಬೆಳಗತೊಡಗಿತು. ‘ನಿತ್ಯ, ಇದಕ್ಕೇ ಯೋಗಾಯೋಗ ಎನ್ನುವುದು. ತ್ರಿಕಾಲನ ಜೊತೆ ಜೊತೆಗೇ ಹುಟ್ಟಿದ ಮರಿಯೊಂದು ಇದೇ ಊರಿನ ಬ್ಯಾಂಕ್ ಮ್ಯಾನೇಜರರಾದ ಶಂಭು ಎಂಬುವರ ಮನೆಯಲ್ಲಿದೆ. ಅದಕ್ಕೂ ನಿಮ್ಮ ತ್ರಿಕಾಲನಿಗೂ ನೋಡಲು ವ್ಯತ್ಯಾಸವೇ ಇಲ್ಲ. ಫೋಟೋ ಹೊಡೆದಂತಿದೆ. ಶಂಭು ಅವರು ಈಗ ಅಂಡಮಾನಿಗೆ ವರ್ಗವಾಗಿ ಹೋಗುವವರಿದ್ದು ನಾಯಿಮರಿಯನ್ನು ಚೆನ್ನಾಗಿ ಸಾಕುವವರ ಬಳಿ ಬಿಟ್ಟು ಹೋಗುವವರಿದ್ದಾರೆ. ಇದೇ ತಾನೇ ಅವರ ಮನೆಯಿಂದ ಬಂದೆ. ನೀನೀಗ ಕೂಡಲೇ ಅವರ ಮನೆಗೋಗಿ ಆ ನಾಯಿಮರಿಯನ್ನು ತೆಗೆದುಕೊ. ಅವರು ನಿನಗಾದರೆ ಸಂತೋಷದಿಂದ ಕೊಡುತ್ತಾರೆ.

ಶಂಭು ಮನೆಯಿಂದ ನಿತ್ಯಾನಂದರು ತ್ರಿಕಾಲನ ಸಹೋದರ ‘ಆಕಾಶ’ನನ್ನು ಎತ್ತಿಕೊಂಡು ಮನೆಯನ್ನು ಪ್ರವೇಶಿಸಿದ್ದೇ ಹೆಜ್ಜೆ ಸ್ಪ್ರಿಂಗಿನಂತೆ ಎದ್ದು ನಿಂತಳು. ತಾವೇ ಕೈಯ್ಯಾರ ಮಣ್ಣು ಮಾಡಿದ್ದ ತ್ರಿಕಾಲನನ್ನು ಹಿಡಿದುಕೊಂಡು ಬಂದದ್ದೆಲ್ಲಿಂದ ಎಂದು ಸೋಜಿಗಪಡುತ್ತ ತಮ್ಮ ಕಣ್ಣುಗಳನ್ನು ತಾವೇ ನಂಬದೆ ಶಾಂತಮ್ಮನವರು ಓಡಿಯೇ ಬಂದರು. ಕ್ಷಣಳನ್ನು ಎತ್ತಿಕೊಂಡು ಬರುತ್ತಿದ್ದ ಆರತಿಯವರು ಮರಗಟ್ಟಿದಂತಾದರು. ಪುಟ್ಟ ಕ್ಷಣಳ ಮುಖದ ಮೇಲೆ ನಗು ಕುಣಿಯಲಾರಂಭಿಸಿತು.

ಹೆಜ್ಜೆ ನುಗ್ಗಿದಳು ಆಕಾಶನೆಡೆಗೆ ಬಾಣ ಬಿಟ್ಟಂತೆ. ಕ್ಷಣ ಅದೇ ಪ್ರಥಮ ಬಾರಿಗೆ ನೆಲದ ಮೇಲೆ ನಡೆದಳು ಹೂ ಹೆಜ್ಜೆ ಹಾಕುತ್ತ. ಹಿರಿಯರೆಲ್ಲರು ಆಕಾಶನ ಮೈ ಸವರಿದರು ಕಣ್ಣಲ್ಲಿ ಆನಂದಬಾಷ್ಪ ಸುರಿಸುತ್ತ. ಮಾತು ಹೊರಡದಂತಾಗಿದ್ದ ಹೆಜ್ಜೆ ಖುಷಿಯಲ್ಲಿ ‘ಅಪ್ಪ, ಈಗೆಲ್ಲಿಂದ ತಂದೆ ಇವನನ್ನು?’ ಎಂದಳು. ನಿತ್ಯಾನಂದರು ‘ಮಗಳೇ, ನಮ್ಮಿಂದ ನುಣುಚಿಕೊಂಡ ತ್ರಿಕಾಲ ಶಂಭುರವರ ಮನೆಯಲ್ಲಿದ್ದ ಆಕಾಶ ಎಂಬ ಹೆಸರು ಹೊತ್ತು. ತಂದಿದ್ದೇನೆ, ಸಂತೋಷದಲಿ ಸಾಕು’ ಎಂದರು. ಒಂದರೆಕ್ಷಣ ಜೂಗರಿಸಿದ ಬದುಕು ಮತ್ತೆ ಸಂಭ್ರಮದಲ್ಲಿ ಮುಂದಕ್ಕೆ ಹೆಜ್ಜೆ ಹಾಕಿತು. ಅದೊಂದು ದಿವ್ಯಕ್ಷಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT