ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಂಗದ ಮೌನ, ನಿಜದ ಧ್ಯಾನ

Last Updated 15 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಬಯಲ ಧ್ಯಾನ (ಕವನ ಸಂಕಲನ) ಲೇ: ಸುಧಾ ಚಿದಾನಂದ ಗೌಡ ಪು: 100 ಬೆ: ರೂ. 125 ಪ್ರ: ಸುಯೋಧನ ಪ್ರಕಾಶನ
ಹಗರಿಬೊಮ್ಮನ ಹಳ್ಳಿ– 583 212, ಬಳ್ಳಾರಿ ಜಿಲ್ಲೆ

ಬಿಸಿಲು ನಾಡಿನ ಕವಯಿತ್ರಿ ಸುಧಾ ಚಿದಾನಂದ ಗೌಡ 30 ವರ್ಷಗಳಿಂದ ತಾವು ಬರೆದುಕೊಂಡು ಬಂದಿರುವ ಕವಿತೆಗಳನ್ನು ‘ಬಯಲ ಧ್ಯಾನ’ ಸಂಕಲನದಲ್ಲಿ  ಕಲೆಹಾಕಿದ್ದಾರೆ. ಕವಿತೆಯ ಗಾಢ ಧ್ಯಾನ, ಬದುಕಿನ ಕುರಿತ ಅಪಾರ ವಿನಯದಲ್ಲಿ ಬರೆದಿರುವ ಅವರ ಕವಿತೆಗಳು ದೇಹವನ್ನು ಮೀರಿ ಬದುಕಿನ ಮೋಹದಲ್ಲಿ, ದಾಹದಲ್ಲಿ ಬರೆದವುಗಳಾಗಿವೆ. ಈಗಾಗಲೇ ಕಥೆಗಳನ್ನು, ಪ್ರೌಢಪ್ರಬಂಧವನ್ನು ಬರೆದಿರುವ ಅವರು ಬರಹದ ಮಾಂತ್ರಿಕ ಜಾಡನ್ನು ಮೊದಲಿನಿಂದಲೂ ಹುಡುಕುತ್ತಿರುವವರು; ಅದರ ಕಾಯಕದಲ್ಲಿ ಮೊದಲಿನಿಂದ ನಿರಂತರವಾಗಿ ತೊಡಗಿಕೊಂಡಿರುವವರು.

ಈ ಸಂಕಲನದ ಕವಿತೆಗಳನ್ನು ಮೂರು ಭಾಗಗಳಲ್ಲಿ ವಿಂಗಡಿಸಿ ಕೊಡಲಾಗಿದೆ. ‘ನನ್ನೊಳಗಿನ ಗುಲಾಮಳಿಗೆ’, ‘ದೇಹಭಾಷೆ’, ‘ಬಯಲಧ್ಯಾನ’ ಎಂಬ ಮೂರು ಭಾಗಗಳಲ್ಲಿ ಕವಿತೆಗಳು ಪ್ರಕಟವಾಗಿವೆ. ಈ ವಿಂಗಡಣೆ ಕುತೂಹಲಕರವಾಗಿದೆ. ಜೊತೆಗೆ ಈ ವಿಂಗಡಣೆ ಏನೇ ಇದ್ದರೂ ಇವೆಲ್ಲವೂ ಅಲ್ಲಲ್ಲಿ ಮನಸ್ಸಿನ ಧ್ಯಾನವಾಗಿ ಬಂದಿವೆ.

ದೇಟು, ದಳ, ಕೇಸರ, ಬಣ್ಣ/ ಗಳಷ್ಟೇ ಹೂವಾಗಿ ಬಿಡುವುದಿಲ್ಲ./ ಪರಿಮಳ, ಕೋಮಲಾರ್ದ್ರತೆಯ ಮುಗುದೆ/ ಗಡಿಮುಟ್ಟದೆ ಗದ್ಯಂತರವಿಲ್ಲ (ಒಂದು ಹೂವಿನ ಸಾನೆಟ್‌), ಒಂಟಿ ಹೂವ ಕೆನ್ನೆಪಕಳೆ ಒದ್ದೆ/ ಕಂಬನಿಯ ಹಿಮಬಿಂದುವಿನ/ ಹೊಳಪು ಅಪಾರ (ಹಿಮಗೆನ್ನೆ)– ಹೀಗೆ ರಮ್ಯವಾಗಿ ತಮ್ಮ ಒಳಗಿನ ಧ್ಯಾನದ ಚಿತ್ರಗಳನ್ನು ಕೊಡುತ್ತ ಹೋಗುತ್ತಾರೆ. ಹೀಗಾಗಿ ಮೊದಲ ಭಾಗದ ರಚನೆಗಳು ಹೆಣ್ಣೊಬ್ಬಳು ತನ್ನ ಅಂತರಂಗದ ಹಾಗೂ ಇಹದ ಸಂಗತಿಗಳಿಗೆ ಧ್ವನಿ ನೀಡಲು ಮಾಡಿದ ಪ್ರಯತ್ನಗಳಾಗಿವೆ. ಈ ಭಾಗದಲ್ಲೇ ಇರುವ ‘ವಾಸ್ತವ’ ಎಂಬ ಕವಿತೆ ಗಂಡು ಹೆಣ್ಣಿನ ಸಂಬಂಧದ ಸಂಕೀರ್ಣತೆಯನ್ನು ಅದರ ವಂಚನೆ, ದ್ವೇಷ, ಅಸಮಾನತೆಯ ಮುಖವನ್ನು ಪ್ರಾಮಾಣಿಕವಾಗಿ ಹಿಡಿಯಲು ಪ್ರಯತ್ನಿಸುತ್ತದೆ. ಇಂಥ ಪುಟ್ಟ ಕವಿತೆಗಳಲ್ಲಿ ಸುಧಾ ಅವರು ತೋರುವ ಕಲೆಗಾರಿಕೆ ಅವರ ದೀರ್ಘ ಕವಿತೆಗಳಲ್ಲಿ ಕಾಣುವುದಿಲ್ಲ ಮತ್ತು ಅವುಗಳ ನೀಳ ಆಕಾರವಷ್ಟೆ ಅವುಗಳ ಮುಖ್ಯ ಲಕ್ಷಣವಾಗಿದೆ.

ಲೋಕದ ಸುತ್ತಮುತ್ತ ನಡೆಯುವ ನೋವು, ಸಂಕಟ, ಸಾವು ಮನುಷ್ಯ ಸಹಜ ಕ್ರೌರ್ಯ, ದೌರ್ಜನ್ಯ ಇವೆಲ್ಲ ಸುಧಾ ಅವರ ಕವಿತೆಗಳ ವಸ್ತು. ಇನ್ನೊಂದು ಹೆಣ್ಣಿಗೆ ‘ಸಾಯಬೇಡ ಪ್ಲೀಸ್’ ಎಂದು ಕೇಳಿಕೊಳ್ಳುತ್ತಾರೆ. ‘ನೀನು ಸತ್ತರೆ ನಾನೇ ಸತ್ತಂತೆ’ ಎಂದೂ ಹೇಳುತ್ತಾರೆ. ಇಂತಹ ಒಂದು ಸಂಗತಿ ಕವಿಯನ್ನು ಕಾಡುವುದು ಮಾತ್ರವಲ್ಲ ಅದಕ್ಕೆ ತಕ್ಕ ಉತ್ತರವನ್ನು ಶೋಧಿಸುವ ಪ್ರಯತ್ನವನ್ನೂ ಅವರು ಮಾಡುತ್ತಾರೆ. ಜಗತ್ತಿನ ಸಾಮಾನ್ಯ ಅನ್ನಿಸುವ ಘಟನೆಗೆ ಕವಿತೆಯಲ್ಲಿ ಸ್ಪಂದಿಸಬೇಕಾದ ತುರ್ತು ಅವರಿಗಿದೆ. ಆದ್ದರಿಂದಲೇ ಈ ಬಗೆಯ ಕವಿತೆಗಳು ಭಾವಜೀವಿಯ ತಕ್ಷಣದ ಪ್ರತಿಕ್ರಿಯೆಯಂತೆ ಇವೆ.

ಎಲ್ಲ ಖುಷಿ, ನೋವುಗಳಿಗೆ ಮೂಲವಾದ ದೇಹವನ್ನು ಮೀರಿ ಹೋಗಬೇಕು ಎನ್ನುವುದು ಇಲ್ಲಿನ ಬಹುಪಾಲು ಕವಿತೆಗಳ ವಸ್ತು. ಇದು ಅವರ ‘ದೇಹಭಾಷೆ’ ಎಂಬ ಕವಿತೆಯಲ್ಲಿ ಪ್ರಖರವಾಗಿದೆ. ‘ದೇಹದ ಹಂಗಿನರಮನೆಯಲ್ಲಿ/ ಮೈಮನಸಿನ ಅಂಬಲಿಯ ದಿರಿಸು/ ಆ–ಈ ಬೈಗುಳಗಳ ಮರೆಯಲು/ ಚರ್ಮದ ಹೊರಗೊಂದು ಹೊಸದಾದ ಧರ್ಮವ ಹೊದ್ದುಕೊಂಡೆ/ ಸೀರೆಯಾಯ್ತು/ ಚೂಡಿಯಾಯ್ತು ಮತ್ತೇನೂ ಆಗಬಹುದು’ ಎನ್ನುವ ಇಲ್ಲಿನ ಹೆಣ್ಣು ಹೀಗೆ ಹಲವು ಸಿಕ್ಕುಗಳಲ್ಲಿ ಸಿಕ್ಕುಬಿದ್ದಿರುವ ನನ್ನ ತಪ್ಪಾದರೂ ಏನು ಎಂಬುದನ್ನು ಕೇಳುತ್ತಿದ್ದಾಳೆ. ಇದೇ ಕವನದ ಕೊನೆಯಲ್ಲಿ ‘... ನಿನ್ನಷ್ಟಕ್ಕೆ ನೀ ತೀರ್ಪುಗಾರ/ ಸಾಕ್ಷಿ ನಿನ್ನದೆ, ದಾವೆ ನಿನ್ನದೆ,/ ಚಾಟಿ, ನೇಣುಕುಣಿಕೆ ನಿನ್ನದೇ/ ಮತ್ತೆ ಹೇಳು ತಪ್ಪು ನನ್ನದೇ...?’ ಎಂದು ಕೇಳುತ್ತಿದ್ದಾಳೆ.

ಬದುಕಿನಲ್ಲಿ ನಿಜವಾದ ತಪ್ಪುಗಾರ ಗಂಡು ಎನ್ನುವುದನ್ನು ಈ ಕವಿತೆ ಸೂಚಿಸುತ್ತಿದೆ. ಆದರೆ, ಹೆಣ್ಣಿಗೆ ನಿಜಕ್ಕೂ ಬೇಕಾದ ಮುಕ್ತತೆ, ಸ್ವಾತಂತ್ರ್ಯದ ಬಗ್ಗೆ ಯಾವುದೇ ಸೊಲ್ಲನ್ನು ಎತ್ತುವುದಿಲ್ಲ ಎಂಬುದು ಗಮನಕ್ಕೆ ಅರ್ಹವಾದ ಸಂಗತಿಯಾಗಿದೆ. ಯಾವುದೇ ಆಕ್ರೋಶ, ಆರೋಪ, ಪ್ರಶ್ನೆಗಳಿಲ್ಲದೆ ತಮ್ಮದೇ ದನಿಯೊಂದನ್ನು ಸ್ಥಾಪಿಸುವ, ಎಂದಿನ ನೋಟದ ಕ್ರಮದ ಸ್ಥಾನಪಲ್ಲಟಗೊಳಿಸಲು ತಮ್ಮ ಕವಿತೆಗಳಲ್ಲಿ ಪ್ರಯತ್ನಿಸಿದ್ದಾರೆ. ತಮ್ಮ ಅಂತರಂಗದ ಮೌನದಲ್ಲಿ ಅದರ ನಿಜದ ಧ್ಯಾನದಲ್ಲಿ ಕಾಣುವ ಹೆಣ್ಣಿನ ಭಿನ್ನ ಲೋಕವೊಂದನ್ನು ತೆರೆದಿಟ್ಟಿದ್ದಾರೆ ಎನ್ನುವುದು ಈ ಕವಿತೆಗಳ ಪ್ರಮುಖ ಲಕ್ಷಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT