ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಅಲೆಮಾರಿ ಬದುಕಿನ ಆತ್ಮಕಥನ

Published 1 ಜೂನ್ 2024, 23:30 IST
Last Updated 1 ಜೂನ್ 2024, 23:30 IST
ಅಕ್ಷರ ಗಾತ್ರ

ವಲಸೆ ಹಕ್ಕಿಗಳಂತೆ ಸಂಚರಿಸುವ ಲಂಬಾಣಿಗರದ್ದು ಮೂಲತಃ ಅಲೆಮಾರಿ ಸಮುದಾಯ. ಸಣ್ಣ ತಾಂಡಾಗಳಲ್ಲಿ ವಾಸಿಸುವ ಈ ಸಮುದಾಯ ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇಲ್ಲದಿದ್ದರೂ, ಸಾಂಸ್ಕೃತಿಕವಾಗಿ ಶ್ರೀಮಂತವಾದದ್ದು. ಅಂಥ ಸಮುದಾಯದಲ್ಲಿ ಹುಟ್ಟಿ ಬೆಳೆದ ಪ್ರೊ. ಕೃಷ್ಣ ನಾಯಕ ಅವರ ‘ವಲಸೆ ಹಕ್ಕಿಯ ಹಾಡು’ ಆತ್ಮಕಥನ ಹಲವು ಕಾರಣಗಳಿಗಾಗಿ ಮಹತ್ವದ್ದು.

ಆತ್ಮಕಥನವೆಂದರೆ ಆತ್ಮರತಿಯೇ ಹೆಚ್ಚಾಗಿ, ತಪ್ಪುಗಳನ್ನು ಮರೆಮಾಚುವವರ ಸಂಖ್ಯೆಯೇ ಅಧಿಕ. ಆದರೆ, ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದ ಕೃಷ್ಣ ನಾಯಕ ಅವರ ಈ ಕೃತಿ ಬಿಚ್ಚಿದ ಜೋಳಿಗೆಯಂಥದ್ದು. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಬದನಿಹಾಳದಂಥ ಕುಗ್ರಾಮದಲ್ಲಿ ಜನಿಸಿದ್ದರೂ ಶಿಕ್ಷಣ ಪ್ರೇಮಿ ಅಪ್ಪನ ಕಾರಣದಿಂದ ಕೃಷ್ಣ ನಾಯಕ ಅವರು ಅಕ್ಷರ ವಂಚಿತರಾಗಲಿಲ್ಲ. ಬ್ರಿಟಿಷರ ವಿರುದ್ಧ ಸಿಡಿದೆದ್ದ ತಾತಾ ಮಾನಸಿಂಗ ನಾಯಕ ಅವರಿಂದ ಶುರುವಾಗುವ ಆತ್ಮಕಥನ ಮೂರು ತಲೆಮಾರುಗಳ ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತದೆ. ತಾಂಡಾದ ಯುವಕನೊಬ್ಬ ಕಲಬುರಗಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಧ್ಯಾಪಕನಾಗಿ ಸೇರಿ, ಬದುಕನ್ನು ವೈಚಾರಿಕವಾಗಿ ಕಟ್ಟಿಕೊಳ್ಳುವ, ಅದಕ್ಕಾಗಿ ಪಡುವ ನೋವು–ನಲಿವುಗಳ ಚಿತ್ರಣ ಇಲ್ಲಿದೆ.

ತಮ್ಮ ಬದುಕಿನೊಂದಿಗೆ ಹಾಸುಹೊಕ್ಕಾಗಿರುವ ಗ್ರಾಮೀಣ ಜನಜೀವನದ ಸೊಗಡನ್ನು ಹೇಳುತ್ತಲೇ ಲೇಖಕರು, ತಾಂಡಾದೊಳಗಿನ ಸಂಪ್ರದಾಯ, ಮೌಢ್ಯವನ್ನೂ ತೆರೆದಿಡುತ್ತಾರೆ. ಕೃಷ್ಣ ನಾಯಕ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಮೌಢ್ಯವನ್ನು ಮೆಟ್ಟಿ ನಿಂತ ಹಲವು ಘಟನೆಗಳನ್ನು ಉಲ್ಲೇಖಿಸುತ್ತಾರೆ.

ಅಪ್ಪನ ಅಕ್ಷರ ಪ್ರೀತಿ, ಅವ್ವ–ಅಕ್ಕಂದಿರ ಮಮತೆಯ ಜತೆಗೆ ಲೇಖಕರು ಗ್ರಾಮ್ಯ ಜನ್ಯ ಬದುಕಿನ ಹಂತಿ ಪದಗಳು, ಗ್ರಾಮೀಣ ಕ್ರೀಡೆಗಳ ಸಡಗರವನ್ನೂ ನೆನಪಿಸಿಕೊಳ್ಳುತ್ತಾರೆ. ಗಂಡು ಮಕ್ಕಳೇ ಸಂಸಾರದ ಕಣ್ಣು ಎನ್ನುವ ಪರಿಸರದ ನಡುವೆಯೇ ತಮ್ಮಿಬ್ಬರು ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಸ್ವಾವಲಂಬಿ ಮಾಡಿ ಮಾದರಿಯಾಗುತ್ತಾರೆ. ಪ್ರಾಧ್ಯಾಪಕ ವೃತ್ತಿಯ ನಡುವೆಯೇ ತಮ್ಮೊಳಗಿನ ಜವಾರಿ ಕಥೆಗಾರನನ್ನೂ ಬೆಳಕಿಗೆ ತರುವ ಪ್ರಯತ್ನದಲ್ಲಿ ಕಂಡ ಯಶಸ್ಸು, ಬೆಳೆದು ದೊಡ್ಡವರಾದ ಮಕ್ಕಳು ತಮ್ಮ ಗೂಡು ಸೇರಿಕೊಂಡ ಬಳಿಕ ಮಡದಿಯೊಂದಿಗೆ ಕೈಗೊಂಡ ಪ್ರವಾಸಕಥನವನ್ನೂ ಹಿಡಿದಿಟ್ಟಿದ್ದಾರೆ.

ವಲಸೆ ಬಂದ ಹಕ್ಕಿಯೊಂದು ತನಗಾಗಿ ಪುಟ್ಟ ಗೂಡು ಕಟ್ಟಿಕೊಂಡು, ನೆಮ್ಮದಿಯ ನಾಳೆಗಳನ್ನು ಅರಸುತ್ತಲೇ, ತಾನು ಬೆಳೆದ ಪರಿಸರವನ್ನು ಜ್ಞಾಪಿಸಿಕೊಳ್ಳುತ್ತಾ ನೆನಪಿನ ಬುತ್ತಿ ಗಂಟನ್ನು ಬಿಚ್ಚುವಂತೆ ಇಲ್ಲಿನ ಸಂಗತಿಗಳು ಹಿಡಿದಿಡುತ್ತವೆ.

ವಲಸೆ ಹಕ್ಕಿಯ ಹಾಡು (ಆತ್ಮಕಥನ)

ಲೇ: ಪ್ರೊ. ಕೃಷ್ಣ ನಾಯಕ

ಪ್ರ: ವಿಶ್ವ ಪ್ರಕಾಶನ

ಸಂ: 99643 51655

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT