ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರಿತ್ರಿಕ ಸತ್ಯಗಳೆಡೆಗೆ ತೋರುಬೆರಳು

ವಿಮರ್ಶೆ
Last Updated 16 ಜನವರಿ 2016, 19:40 IST
ಅಕ್ಷರ ಗಾತ್ರ

ಶೂದ್ರರಾಗೋಣ ಬನ್ನಿ
ಲೇ: ಪ್ರಸನ್ನ
ಪ್ರ: ಒಂಟಿದನಿ ಪ್ರಕಾಶನ,
ಕವಿಕಾವ್ಯ ಟ್ರಸ್ಟ್‌, ಹೊನ್ನೇಸರ,
ಹೆಗ್ಗೋಡು– 577 417, ಶಿವಮೊಗ್ಗ ಜಿಲ್ಲೆ.


ಶೂದ್ರ ಎಂಬ ಶಬ್ದಕ್ಕೆ ಮೈಲಿಗೆ ಅಂಟಿಕೊಂಡಿತ್ತು. ಅದನ್ನು ಕಳೆದು ಅದಕ್ಕೊಂದು ಘನತೆಯನ್ನು ತಂದುಕೊಟ್ಟವರು ವಚನಕಾರರು, ಸಂತರು, ಸಂತ ಕವಿಗಳು. ಆಧುನಿಕ ಕಾಲದಲ್ಲಿ ಫುಲೆ, ನಾರಾಯಣ ಗುರು, ಅಂಬೇಡ್ಕರ್, ಕುವೆಂಪು ಮುಂತಾದ ಮಹಾನುಭಾವರು.

ಕನ್ನಡದಲ್ಲೇ ಎಪ್ಪತ್ತರ ದಶಕದಲ್ಲಿ ಕಿರು ಪತ್ರಿಕೆಯೊಂದಕ್ಕೆ ‘ಶೂದ್ರ’ ಎಂಬ ಹೆಸರಿದ್ದುದರಿಂದ ಅನೇಕರಿಗೆ ಇರಿಸುಮುರಿಸುಂಟಾಯಿತು. ಅದರ ಸಂಪಾದಕರು ತಮಗಾದ ಹಲವು ಅನುಭವಗಳಲ್ಲಿ ಒಂದನ್ನು ಯಾವಾಗಲೂ ನೆನಪು ಮಾಡಿಕೊಳ್ಳುತ್ತಿರುತ್ತಾರೆ. ಹಿರಿಯರಾದ ಮಾಸ್ತಿ ಒಮ್ಮೆ ಸಂಪಾದಕರನ್ನು ‘ನಿಮ್ಮ ಹೆಸರೇನು?’ ಎಂದು ಕೇಳಿದರಂತೆ. ಇವರು ತಮ್ಮ ಹೆಸರಿನ ಜೊತೆಗೆ ಪತ್ರಿಕೆಯ ಹೆಸರನ್ನು ಜೋಡಿಸಿಕೊಂಡು ಹೇಳಿದರಂತೆ.

ಮಾಸ್ತಿಯವರಿಗೆ ಸಮಾಧಾನವಾಗಲಿಲ್ಲ. ಸಂಪಾದಕರ ಜಾತಿಯನ್ನು ಕೇಳಿ ತಿಳಿದುಕೊಂಡು, ‘ಹಾಗಿದ್ದರೆ ಇನ್ನುಮುಂದೆ ನಾನು ನಿಮ್ಮನ್ನ ಶ್ರೀನಿವಾಸ ರೆಡ್ಡಿ ಎಂದು ಕರೆಯುತ್ತೇನೆ’ ಎಂದು ಹೇಳಿ ತಮ್ಮ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರಂತೆ! ಮಾಸ್ತಿ ಶೂದ್ರನನ್ನು ಮಡಿ ಮಾಡಿದ ಪ್ರಸಂಗ ಇದು.

ಪ್ರಸನ್ನ ತಮ್ಮ ಹೊಸ ಪುಸ್ತಕಕ್ಕೆ ಈ ಹೆಸರಿಟ್ಟಿದ್ದಾರೆ. ‘ಶೂದ್ರ’ ಶಬ್ದದ ಅರ್ಥವಲಯವನ್ನು ವಿಸ್ತರಿಸುವ ಆಶಯವುಳ್ಳ ಕೃತಿ ಇದು.  ಈಗಾಗಲೇ ಅವರು ತಮ್ಮ ‘ಯಂತ್ರಗಳನ್ನು ಕಳಚೋಣ ಬನ್ನಿ’ ಕೃತಿಯ ಮೂಲಕ ಒಂದು ಕರೆಯನ್ನು ಕೊಟ್ಟಿದ್ದರು.

ಆ ಕೃತಿಯ ಕೆಲವು ವಿಚಾರಗಳು ಕೆಲವರಿಗೆ ಒಪ್ಪಿತವಾಗಿಲ್ಲ. ಆದರೂ ಅದರ ಆಶಯ ಈ ಕಾಲದ ಜೀವನ ಶೈಲಿಗೊಂದು ಉಪಯುಕ್ತ ಉಪಾಯಮಾರ್ಗ ಎನ್ನುವುದರಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿರಲಾರದು. ಈಗ ಪ್ರಸನ್ನ ನೀಡುತ್ತಿರುವ ಹೊಸ ಕರೆ ತಮ್ಮ ಈ ಹಿಂದಿನ ಕರೆಯ ಮುಂದುವರಿಕೆಯೇ ಆಗಿದೆ.

ಈ ಬಾರಿ ಮಾನವನ ಪ್ರಸ್ತುತ ಬದುಕಿನ ಹಲವು ಸಂಕಟಗಳನ್ನ, ವೈರುಧ್ಯಗಳನ್ನ ಪರಿಹರಿಸಿಕೊಳ್ಳುವ, ಎದುರಿಸುವ ದಿಸೆಯಲ್ಲಿ ತಮ್ಮ ಈಚಿನ ಜೀವನನುಭವಗಳ ಹಿನ್ನೆಲೆಯಲ್ಲಿ ಅನುಸಂಧಾನಕ್ಕೆ ತೊಡಗಿದ್ದಾರೆ. ಅವರ ‘ದೇಸೀ ಆಹಾರ ಪದ್ಧತಿ’ ಪುಸ್ತಕವೂ ಈ ಚಿಂತನಾ ವಲಯಕ್ಕೇ ಸೇರುವುದರಿಂದ ಪ್ರಸನ್ನ ಕಳೆದ ಒಂದೆರಡು ದಶಕಗಳಿಂದ ಸತತವಾಗಿ ಜೀವನ ವಿಧಾನದ ಪ್ರಯೋಗ ಶಾಲೆಯಲ್ಲಿರುವಂತಿದೆ.

ಪ್ರಸ್ತುತ ಪುಸ್ತಕವನ್ನು ಅವರು ‘ಶ್ರಮಸಹಿತ ಸರಳ ಬದುಕಿಗೊಂದು ಪ್ರಣಾಳಿಕೆ’ ಎಂದೇ ಕರೆದಿದ್ದಾರೆ. ಕೃತಿಯ ಮುನ್ನುಡಿಯಲ್ಲಿ ಪ್ರಸನ್ನ ಹೀಗೆ ಹೇಳುತ್ತಾರೆ, ‘‘ಪುಸ್ತಕದ ಪ್ರತಿಪಾದನೆ ಸರಳವಾಗಿದೆ. ಅಥವಾ ಹೀಗೂ ಹೇಳಬಹುದು, ಸರಳತೆಯೇ ಇಲ್ಲಿನ ಪ್ರತಿಪಾದನೆಯಾಗಿದೆ... ಶ್ರಮಸಹಿತ ಸರಳ ಬದುಕು ಕಾಣೆಯಾಗತೊಡಗಿದೆ.

ಸ್ವಯಂಚಾಲಿತ ಯಂತ್ರಗಳು ಕಾಲಿಟ್ಟ ನಂತರವಂತೂ, ಸುಲಭಬದುಕಿನ ಆಕರ್ಷಣೆ ಹಾಗೂ ಕೊಳ್ಳುಬಾಕತೆಗಳು ವಿಶ್ವವ್ಯಾಪಿಯಾಗಿ ಹರಡಿವೆ. ಕೈ ಕೆಸರು ಮಾಡಿಕೊಳ್ಳದಿರುವುದು, ಬುದ್ಧಿಯಮೇಲೆ ಹಾಗೂ ಯಂತ್ರಗಳ ಮೇಲೆ ಅತಿಯಾಗಿ ಅವಲಂಬಿಸುವುದು, ಅನುಭವಹೀನತೆ, ಅಸಹಜತೆ ಹಾಗೂ ಕೊಳ್ಳುಬಾಕತೆಗಳು ಆಧುನೀಕ ಮಾನವನ ಪ್ರಮುಖ ಲಕ್ಷಣಗಳಾಗಿವೆ’’.

ಈ ಹೊತ್ತಿಗೂ ಭಾರತೀಯ ಸಮಾಜ ವರ್ಣಾಶ್ರಮ ಪದ್ಧತಿಯಲ್ಲಿ ಬಂಧಿಯಾಗಿರುವ ಸಂದರ್ಭದಲ್ಲಿ, ಮಾನವನ ದುರಾಸೆಯ ಕಾರಣದಿಂದ ಭೂಗ್ರಹದಲ್ಲುಂಟಾಗುತ್ತಿರುವ ಏರುಪೇರುಗಳ ಸಂದರ್ಭದಲ್ಲಿ ನಮ್ಮ ಬದುಕನ್ನು ಸಹ್ಯ ಮಾಡಿಕೊಳ್ಳುವ ಉಪಾಯಗಳನ್ನು ಶೋಧಿಸುವ ಕೃತಿ ಇದಾಗಿದೆ. ಆಧುನಿಕ ಯಂತ್ರಗಳ ಮತ್ತು ಬುದ್ಧಿಯ ಬಳಕೆಯಿಂದಲೇ ಸುಲಭವಾಗಿ ಐಷಾರಾಮಿ ಜೀವನ ಸಾಗಿಸಿಬಿಡುವುದರ ಅಪಾಯ ಹೇಗೆ ಮನುಕುಲಕ್ಕೆ ಮಾರಕವಾಗಲಿದೆ ಮತ್ತು ಅಂಥ ಅಪಾಯವನ್ನು ದೂರಮಾಡಿಕೊಳ್ಳುವ ಪರಿಹಾರಗಳ ಬಗ್ಗೆ ಇಲ್ಲಿ ಪ್ರಸನ್ನ ಚಿಂತಿಸಿದ್ದಾರೆ.

ಯಂತ್ರ ನಾಗರೀಕತೆ ಎಲ್ಲರನ್ನೂ ಉನ್ನತ ಸ್ಥಿತಿಗೊಯ್ಯುವ, ಸಮಾನತೆಯ ನೆಲೆಗೆ ಒಯ್ಯುವ ರಾಜಕೀಯ ಸಿದ್ಧಾಂತಗಳು ಕೇವಲ ಭ್ರಮೆಗಳನ್ನು ಒಡ್ಡಿ ಸೋಲುಂಡ ಚಾರಿತ್ರಿಕ ಸತ್ಯಗಳ ಕಡೆಗೆ ಪ್ರಸನ್ನ ನಮ್ಮ ಗಮನ ಸೆಳೆಯುತ್ತಾರೆ. ಇದಕ್ಕೆ ಪರ್ಯಾಯವಾಗಿ ಹೊಸ ಜೀವನ ಶೈಲಿಯಾದ ಸರಳ ಬದುಕಿನ ಕ್ರಮವನ್ನು ರೂಢಿಸಿಕೊಳ್ಳುವ ಅಗತ್ಯವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಈ ಪುಸ್ತಕ ಮಾಡುತ್ತದೆ.

ಅಂಥ ಸಾಧ್ಯತೆ ಯಾವುದು? ಈಗಾಗಲೇ ನಮ್ಮ ಪರಂಪರೆಯಲ್ಲಿ ಅಂಥ ಪರಿಹಾರಗಳು ಲಭ್ಯವಿವೆ. ಪ್ರತಿಯೊಬ್ಬರೂ ಶ್ರಮದಾಯಕ ಕೆಲಸಗಳಲ್ಲಿ ತೊಡಗಿಕೊಳ್ಳುವುದರಲ್ಲಿ ಸಮಾನತೆಯನ್ನು, ಬದುಕಿನ ನೆಮ್ಮದಿಯನ್ನು ಕಂಡುಕೊಳ್ಳುವ ಮಾರ್ಗ ಇದು. ಅಂಥ ಜೀವನ ಪದ್ಧತಿ ಶೂದ್ರ ಸಮುದಾಯಕ್ಕೆ ಪರಿಚಯವಿತ್ತು ಮತ್ತು ಸೀಮಿತವಾಗಿತ್ತು. ಶೂದ್ರ ಸಮುದಾಯಗಳು ಒಂದಲ್ಲ ಒಂದು ಶ್ರಮದಾಯಕ ವೃತ್ತಿಗಳನ್ನು ಅವಲಂಬಿಸಿ ಸರಳವಾಗಿ ಬದುಕುತ್ತಿದ್ದುದನ್ನು ಓದುಗರ ಅರಿವಿಗೆ ತರುತ್ತಾರೆ. ಅದನ್ನು ಈಗ ಎಲ್ಲ ಸಮುದಾಯಗಳಿಗೂ ವಿಸ್ತರಿಸುವ ಕರೆಯನ್ನು ಪ್ರಸನ್ನ ಇಲ್ಲಿ ನೀಡುತ್ತಿದ್ದಾರೆ.

ಇಂಥ ಪ್ರಯತ್ನ ಕನ್ನಡನಾಡಿನಲ್ಲಿ ವಚನಕಾರರಿಂದ ಪ್ರಾರಂಭವಾಗಿತ್ತು ಎನ್ನುವುದನ್ನು ಒಪ್ಪಿ ತಮ್ಮ ವಿಚಾರಕ್ಕೆ ಬೆಂಬಲ ಪಡೆಯುತ್ತಾರೆ. ಆದರೆ ಕೆಲ ಸಂದರ್ಭಗಳಲ್ಲಿ ವಚನಕಾರರ ಆ ಪ್ರಯತ್ನ ಯಶಸ್ವಿಯಾಗಲಿಲ್ಲ ಎಂಬ ಅರ್ಥ ಬರುವ ಮಾತುಗಳನ್ನಾಡುತ್ತಾರೆ. ಅದನ್ನು ಒಪ್ಪಲಾಗುವುದಿಲ್ಲ.

ವಚನಕಾರರ ಅಂದಿನ ‘ಕಾಯಕ ಕ್ರಾಂತಿ’ ಸೈದ್ಧಾಂತಿಕ ನೆಲೆಯಲ್ಲಿ ಈ ಹೊತ್ತಿಗೂ ಬೇರೆಬೇರೆ ನೆಲೆಗಳಲ್ಲಿ ನಮ್ಮ ಸಮುದಾಯಗಳಲ್ಲಿ ಹರಿದು ಬರುತ್ತಲೇ ಇದೆಯೆಂಬುದನ್ನು ನಾವು ಗುರುತಿಸಬಹುದು. ಇಂಥ ಶ್ರಮಸಹಿತ ಸರಳ ಬದುಕಿಗೆ ಕೇವಲ ಬುದ್ಧಿಮತ್ತೆಯನ್ನೇ ಬಂಡವಾಳವಾಗಿಸಿಕೊಂಡು ಬದುಕುವವರೂ ಸಹ ತಮ್ಮನ್ನು ತಾವು ಒಡ್ಡಿಕೊಳ್ಳಬೇಕು. ಆ ಮೂಲಕ ಎಲ್ಲರೂ ಶೂದ್ರರಾಗಬೇಕು ಎಂಬುದು ಪ್ರಸನ್ನ ಅವರ ಆಕಾಂಕ್ಷೆ, ಆಶಯ. ಇದನ್ನು ಎಲರೂ ಸ್ವಾಗತಿಸಬೇಕು. ಆದರೆ ‘ಶೂದ್ರ’ ಎಂಬ ಶಬ್ದ ಕೇಳಿಯೇ ಬೆಚ್ಚಿ ಬೀಳುವವರಿಗೆ ಏನು ಮಾಡಬೇಕು? ಈ ಶಬ್ದ ಕೇಳಿ ಈಗ ಶೂದ್ರರೂ ಅಂಜಿ ಬೆಚ್ಚಿ ಬೀಳುವುದು ಬೇರೆ ಸಂಗತಿ!

ಪುಸ್ತಕ ನಾಲ್ಕು ಭಾಗಗಳಲ್ಲಿದೆ. ಮೇಲೆ ಚರ್ಚಿಸಿದ ಭಾಗದ ಜೊತೆಗೆ ‘ಗ್ರಾಮೋದ್ಯೋಗ ಆಂದೋಲನ’, ‘ಸಭ್ಯತೆ’ ಮತ್ತು ‘ಭೂಮಿ’ ಎಂಬ ಇತರ ಮೂರು ಭಾಗಗಳಲ್ಲಿ ಪ್ರಸನ್ನ ತಮ್ಮ ದೀರ್ಘ ಕಾಲದ ಕ್ಷೇತ್ರಾನುಭವ ಮತ್ತು ವೈಯಕ್ತಿಕ ಬದುಕಿನ ಹಿನ್ನಲೆಯಲ್ಲಿ ವಿಚಾರಗಳನ್ನು ಮಂಡಿಸುತ್ತಾರೆ. ಅವರು ಹೆಗ್ಗೋಡಿನಲ್ಲಿ ಸ್ಥಾಪಿಸಿದ ‘ಚರಕ ಮಹಿಳಾ ಸಹಕಾರ ಸಂಘ’ದ ಯಶಸ್ಸಿನ ಹಿನ್ನಲೆಯಲ್ಲಿ ಅವರ ವಿಚಾರಗಳಿಗೆ ಅಧಿಕೃತತೆ ದೊರೆಯುತ್ತದೆ. ಸಹಕಾರ ತತ್ವ, ಗಾಂಧಿ ಅರ್ಥಶಾಸ್ತ್ರ ಮತ್ತು ಗಾಂಧಿವಾದಿ ಉತ್ಪಾದನಾ ವಿಧಾನಗಳ ಚರ್ಚೆ ಮಾಡುತ್ತಾರೆ. 

ಇಂದು ಜಗತ್ತಿನಾದ್ಯಂತ ಚರ್ಚೆಗೊಳಗಾಗುತ್ತಿರುವ ಪರಿಸರ ಕಾಳಜಿ, ಅಪಾಯಕಾರಿ ತ್ಯಾಜ್ಯ ತಂದೊಡ್ಡಿರುವ ಸಮಸ್ಯೆ, ನಮಗಿರುವ ಒಂದೇ ಭೂಮಿಯ ರಕ್ಷಣೆ ಮುಂತಾದ ಹಲವು ವಿಷಯಗಳ ಬಗ್ಗೆ ತಮ್ಮ ನಿಲುವುಗಳನ್ನು ಪ್ರಕಟಿಸಿದ್ದಾರೆ. ಇಲ್ಲಿನ ಬರಹದ ಉದ್ದಕ್ಕೂ ನಮ್ಮ ಪರಂಪರೆಯ ರಾಮಾಯಣ, ಸೂಫಿ, ಝೆನ್ ಕತೆಗಳನ್ನು ಅಲ್ಲಲ್ಲಿ ಬಳಸಿ ತಮ್ಮ ವಿಚಾರಗಳನ್ನು ಕಟ್ಟುತ್ತಾರೆ.

 ಬ್ರಾಹ್ಮಣನಾಗಿದ್ದ ರಾವಣನು ಹೇಗೆ ರಾಕ್ಷಸನಾಗಿದ್ದನೆಂಬುದನ್ನು, ಅವನು ಪ್ರತಿನಿಧಿಸಿದ ಮೌಲ್ಯಗಳಾವುವು ಎಂಬುದನ್ನು ತಿಳಿಸುತ್ತಾ ಪುರಾಣಗಳ ಬಗ್ಗೆ ಹೊಸ ಹೊಳಹುಗಳನ್ನು ನೀಡುತ್ತಾರೆ. ಹಲವು ಆತ್ಮಕಥನಾತ್ಮಕ ವಿವರಗಳಲ್ಲಿ, ನೈತಿಕತೆಯ ನೆಲೆಯಲ್ಲಿ, ಆಧ್ಯಾತ್ಮಿಕ ಲೇಪವುಳ್ಳ ಧಾಟಿಯಲ್ಲಿರುವ ಇಲ್ಲಿನ ಬರಹ ಪ್ರಸನ್ನರ ವೈಯಕ್ತಿಕ ಬದುಕಿನಲ್ಲೂ ಆಗುತ್ತಿರುವ ತೀವ್ರ ತಿರುವುಗಳನ್ನು ಸೂಚಿಸುತ್ತದೆ.

ಪ್ರಸನ್ನ ಈಗ ತಮ್ಮನ್ನು ತೊಡಗಿಸಿಕೊಂಡಿರುವ ಸುಸ್ಥಿರ ಬದುಕಿನ ಆಂದೋಲನಕ್ಕೆ ಬಂದು ನಿಂತಿರುವುದು ನಾಟಕ ಕ್ಷೇತ್ರದ ಮೂಲಕ.  ನಮ್ಮ ದೇಶದ ಪ್ರಸಿದ್ಧ ನಾಟಕಕಾರರೂ ನಿರ್ದೇಶಕರೂ ಆಗಿರುವ ಅವರಿಗೆ ಅಲ್ಲಿನ ಅನುಭವವೂ ತಮ್ಮ ಪ್ರಸ್ತುತ ಕಾರ್ಯಕ್ಷೇತ್ರದಲ್ಲಿ ಸಹಕಾರಿಯಾಗಿದೆಯೆಂಬುದನ್ನು ಆಗಾಗ ನೆನಪು ಮಾಡಿಕೊಳ್ಳುತ್ತಾರೆ. ಅತ್ತ ಮತ್ತೆ ಬಂದು ತೊಡಗಿಕೊಳ್ಳುವ ಆಸೆ ಇದ್ದೀತು. ಆದರೆ ಈ ಪುಸ್ತಕದಲ್ಲಿ ಒಂದು ಕಡೆ ಹೀಗೆ ಬರೆಯುತ್ತಾರೆ, ‘‘ರಂಗಭೂಮಿಯವನು ನಾನು. ರಂಗಭೂಮಿಯ ಸೆಳೆತ ಈಗಲೂ ಇದೆ.

ಆದರೆ ರಂಗಭೂಮಿಗೇ ಸೆಳೆತ ಕಡಿಮೆಯಾಗಿದೆ. ಖಾಲಿಮನಗಳನ್ನು ರಂಜಿಸಲಿಕ್ಕೆ ಹೆಣಗಿ ಬಡವಾಗಿದೆ ರಂಗಭೂಮಿ’’.  ತಮ್ಮ ಆಂದೋಲನಗಳ ನಡುವೆಯೂ ಪುಸ್ತಕಗಳನ್ನು ರಚಿಸುತ್ತಾ ತಮ್ಮ ಓದುಗರನ್ನು ಕಾಯ್ದುಕೊಂಡಿರುವ ಪ್ರಸನ್ನ ಈ ಬಡ ರಂಗಭೂಮಿಯೆಡೆಗೂ ಧಾವಿಸಿ ಮತ್ತೆ ಖಾಲಿಮನಗಳಿಗೆ ಚೈತನ್ಯ ತುಂಬಿ ರಂಗಭೂಮಿಯನ್ನು ಶ್ರೀಮಂತಗೊಳಿಸಲಿ ಎಂಬುದು ಕೇವಲ ನನ್ನೊಬ್ಬನದೇ ಆಸೆಯಲ್ಲ ಎಂದು ತಿಳಿದಿದ್ದೇನೆ.

ಹಿಂದೊಮ್ಮೆ ಮಾತಿನ ನಡುವೆ ಮತ್ತೆ ನಾಟಕ ಮಾಡಿಸುವ ಯೋಚನೆಯ ಬಗ್ಗೆ ಪ್ರಶ್ನಿಸಿದ್ದಾಗ ‘ರಂಗಭೂಮಿಗೆ ಬೇಕಾದ ಹೊಸ ದ್ರವ್ಯವನ್ನು ಗ್ರಾಮೋದ್ಯೋಗದಲ್ಲಿಯೇ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದು ನೆನಪಾಗುತ್ತಿದೆ. ಅವರಿಗೆ ಅದು ಬೇಗ ದೊರಕಲಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT