ಮಂ. ಆ. ರಾಮಾನುಜೈಯಂಗಾರ್ಯರ ‘ಪ್ರಬಂಧಾವಳಿ’ ಕೃತಿ 1904ರಲ್ಲಿ ಮೈಸೂರಿನ ‘ಗ್ರಾಜುಯೇಟ್ಟಸ್ ಟ್ರೇಡಿಂಗ್ ಅಸೋಸಿಯೇಷನ್ ಪ್ರೆಸ್’ನಲ್ಲಿ ಮುದ್ರಿಣಗೊಂಡಿತು. 126 ಪುಟಗಳ, 13 ಆಣೆ ಬೆಲೆಯ ಈ ಕೃತಿಯು ಅಯ್ಯಂಗಾರ್ಯರ ‘ಕರ್ಣಾಟಕ ಕಾವ್ಯಕಲಾನಿಧಿ ಪ್ರಕಟನ ಸಂಸ್ಥೆ’ಯ ‘ಕರ್ಣಾಟಕ ಗ್ರಂಥಮಾಲಾ ಸರಣಿ’ಯ 37ನೇ ಕೃತಿಯಾಗಿ ಪ್ರಕಟಗೊಂಡಿದೆ. ಹದಿನಾರು ಅಧ್ಯಾಯಗಳಿರುವ ಈ ಕೃತಿ, ಕೃತಿಕಾರರು ಹೇಳುವಂತೆ ಕನ್ನಡ ಭಾಷೆಯಲ್ಲಿ ಪ್ರಬಂಧಗಳ ರಚನೆಯೇ ಇಲ್ಲವೆಂಬ ಕೊರತೆಯನ್ನು ನಿವಾರಿಸಿದೆ. ಈ ಕೃತಿಗೆ ‘ಐಹಿಕಸುಖಸಾಧನಂ’ ಎನ್ನುವ ಮತ್ತೊಂದು ಹೆಸರಿರುವುದು ಕುತೂಹಲಕಾರಿ. ಇದಕ್ಕೆ ಕಾರಣ, ಈ ಪುಸ್ತಕದ ಎಲ್ಲ ಪ್ರಬಂಧಗಳ ವಿಷಯವೂ ಇಲ್ಲಿ ಸಲ್ಲುವ ಅಂಶಗಳನ್ನೇ ಒಳಗೊಂಡಿರುವುದು.

ರಾಮಾನುಜಯ್ಯಂಗಾರ್ಯರ ಹೆಸರು ಆಧುನಿಕ ಪೂರ್ವ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು. 1862–1937ರ ಕಾಲಮಾನದ ಅವರು, ಸಂಸ್ಕೃತದಲ್ಲಿ ಪ್ರೌಢಿಮೆಯನ್ನು ಹೊಂದಿದ್ದರು. ಮೈಸೂರಿನ ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಉಪಾಧ್ಯಾಯರಾಗಿದ್ದರು. ಮಹಾರಾಣಿ ಕಾಲೇಜಿನಲ್ಲಿಯೂ ಕೆಲ ಕಾಲ ಕನ್ನಡ ಪ್ರಾಧ್ಯಾಪಕರಾಗಿದ್ದು, ಮೈಸೂರು ಸರ್ಕಾರದ ಭಾಷಾಂತರಕಾರರಾಗಿ ನಿವೃತ್ತರಾದರು. 1894ರಲ್ಲಿ ‘ಆರ್ಯಮತ ಸಂಜೀವಿನೀ’ ಎನ್ನುವ ಮಾಸಪತ್ರಿಕೆಯನ್ನು ಕೆಲಕಾಲ ನಡೆಸಿ, ನಂತರ ‘ಕಾವ್ಯಮಂಜರಿ’ ಎನ್ನುವ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ನಂತರ, ಇದೇ ಪತ್ರಿಕೆ ‘ಕಾವ್ಯಕಲಾನಿಧಿ’ ಹೆಸರಿನಲ್ಲಿ ಸುಮಾರು 25 ವರ್ಷಗಳ ಕಾಲ ನಡೆದು, ಅದರ ಮೂಲಕ ಕನ್ನಡ ಪ್ರಾಚೀನ ಗ್ರಂಥಗಳ ಪ್ರಕಟಣೆಗಳಾದುವು. ತಮಿಳು ಭಾಷೆಯಲ್ಲಿಯೂ ನಿಷ್ಣಾತರಾಗಿದ್ದ ಅಯ್ಯಂಗಾರ್ಯರು ತಮ್ಮ ಬಂಧು ಎಸ್. ಜಿ. ನರಸಿಂಹಾಚಾರ್ ಅವರ ಜೊತೆಗೂಡಿ ಕನ್ನಡ ಸಾಹಿತ್ಯಕ್ಕೆ ಅಮೋಘ ಕಾಣಿಕೆ ಸಲ್ಲಿಸಿದರು.

‘ಕವಿಕಾರ್ಯಪ್ರಶಂಸೆ’, ‘ಕವಿಸಮಯಂ’, ‘ಪ್ರಬಂಧಾವಳಿ’, ‘ಪ್ರಮಾಣಪ್ರಮೇಯವಿವೇಕ’, ‘ಬಾಗಿಲು ಭದ್ರ’, ‘ಮಹಾಭಾರತ ಕಥಾಪ್ರಸಂಗ ಮತ್ತು ಇತರ ಕಥೆಗಳು’, ‘ಸುವ್ರತ’ – ಇವು ಅಯ್ಯಂಗಾರ್ಯರ ಸ್ವತಂತ್ರ ಕೃತಿಗಳು. ಅವರು ಗ್ರಂಥ ಸಂಪಾದನಾ ಶಾಸ್ತ್ರೀಯವಾಗಿ ಸಂಪಾದಿಸಿದ ಕೆಲವು ಕೃತಿಗಳೆಂದರೆ – ರನ್ನನ ‘ಅಜಿತ ಪುರಾಣ’ ಹಾಗೂ ‘ಗದಾಯುದ್ಧ’, ಕುಮಾರವ್ಯಾಸನ ‘ಆದಿ ಸಭಾ ಪರ್ವಗಳು’, ‘ಹರಿಶ್ಚಂದ್ರಕಾವ್ಯಂ’, ‘ಉತ್ತರರಾಮಚರಿತ್ರೆ ಕಥೆ’, ‘ಉತ್ತರ ರಾಮಾಯಣಂ’, ಹರಿಹರನ ‘ಪಂಪಾಶತಕಂ’, ‘ವಚನ ಕಾದಂಬರಿ’, ಕನಕದಾಸರ ‘ಮೋಹನತರಂಗಿಣೀ’, ಮಂಗರಸನ ‘ಜಯನೃಪ ಕಾವ್ಯ’, ಪಂಪಕವಿಯ ‘ಆದಿಪುರಾಣಂ’, ಇತ್ಯಾದಿ. ರಾಮಾನುಜೈಯಂಗಾರ್ಯರ ದತ್ತಕ ಪುತ್ರರಾದ (91 ವರ್ಷಗಳ) ಎಂ.ಎ. ವೆಂಕಟಾಚಾರ್ ಅವರು ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕ–ಪ್ರಿನ್ಸಿಪಾಲರಾಗಿ 1980ರಲ್ಲಿ ನಿವೃತ್ತರಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಮುದ್ದಣನ ‘ಶ್ರೀರಾಮ ಪಟ್ಟಾಭಿಷೇಕ’ ಕೃತಿಯನ್ನು ಮೊತ್ತಮೊದಲ ಬಾರಿಗೆ ಅಯ್ಯಂಗಾರ್ಯರು ‘ಶ್ರೀಮಹಾಲಕ್ಷ್ಮೀ’ ( ಮುದ್ದಣನ ತಾಯಿ) ಎನ್ನುವ ಹೆಸರಿನಲ್ಲಿ ಪ್ರಕಟಿಸಿದರು. ಅದಕ್ಕೆ ಕಾರಣ ಮುದ್ದಣ ಆ ಹೆಸರಿನಲ್ಲಿಯೇ ಆ ಕಾವ್ಯವನ್ನು ಕಳಿಸಿದ್ದು. ಮುದ್ದಣನ ‘ಶ್ರೀ ರಾಮಾಶ್ವಮೇಧಂ’ ಕೃತಿಯನ್ನೂ ಅವರೇ ಪ್ರಕಟಿಸಿದರು. ಮುದ್ದಣನ ಈ ಕೃತಿಯ ಸ್ವಹಸ್ತಾಕ್ಷರ ಹಸ್ತಪ್ರತಿಯನ್ನು ರಾಮಾನುಜಯ್ಯಂಗಾರ್ಯರ ಮಕ್ಕಳಾದ ವೆಂಕಟಾಚಾರ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಪ್ರಸ್ತುತ ‘ಪ್ರಬಂಧಾವಳಿ’ ಕೃತಿಯ ಮುಖಪುಟದಲ್ಲಿ ಧ್ಯೇಯಪದ್ಯವಾಗಿ ಸಂಸ್ಕೃತ ಸುಭಾಷಿತ ಶ್ಲೋಕವನ್ನು ನೀಡಲಾಗಿದೆ:

ಅಮಲೀಮಸಮಚ್ಛಿದ್ರ |

ಮಕ್ರೌರ್ಯಮತಿಸುಂದರಂ ||

ಅದೇಯಮಪ್ರತಿಗ್ರಾಹ್ಯ |

ಮಹೋಜ್ಞಾನಮಹಾಧನಂ ||

ಪ್ರಸ್ತುತ ಕೃತಿಯಲ್ಲಿ ಪ್ರಬಂಧ ರಚನೆ, ಸಾಲ, ಪ್ರಾಮಾಣಿಕತೆ, ದುಷ್ಕೃತ್ಯ ತ್ರಯ, ಕಾಲದ ಬೆಲೆ, ಪುಸ್ತಕ, ಸರಸ್ವತೀಭಂಡಾರ, ಪುಸ್ತಕಗಳ ಉಪಯೋಗಕ್ರಮ, ಸಂಭಾಷಣೆಯ ದೋಷಗಳು, ಗ್ರಂಥವ್ಯಾಸಂಗ ಕ್ರಮ, ಜ್ಞಾನಸಂಪಾದನಕ್ರಮ, ಕಾಲವಿನಿಯೋಗ, ಮೈತ್ರಿ, ತುಷ್ಟಿ, ಧರ್ಮಸರ್ವಸ್ವ ಹಾಗೂ ಸುಖಸಾಧನ ಎನ್ನುವ ಹದಿನಾರು ಪ್ರಬಂಧಗಳಿವೆ. ಇಲ್ಲಿನ ಪ್ರಬಂಧಗಳೆಲ್ಲವೂ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಅವರಲ್ಲಿ ಸತ್ಯ, ಅಹಿಂಸೆ, ಪ್ರಾಮಾಣಿಕತೆ ಮೊದಲಾದ ಜೀವನದ ಮೌಲ್ಯಗಳನ್ನು ಕುರಿತ ತಿಳಿವಳಿಕೆ ಹಾಗೂ ಅದನ್ನು ತಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಲೆಂಬ ಉದ್ದೇಶದಿಂದ ರಚಿಸಿದಂತಿದೆ. ಪರಿವಿಡಿಯಲ್ಲಿ ಪ್ರತಿಯೊಂದು ಪ್ರಬಂಧಕ್ಕೂ ವಾಕ್ಯವೃಂದವಿಂಗಡಣೆಗೆ ಅನುಕೂಲವಾಗುವಂತೆ ಪ್ರಬಂಧದೊಳಗಣ ವಿಚಾರಗಳ ವರ್ಗೀಕರಣವನ್ನು ನೀಡಿರುತ್ತಾರೆ. ಉದಾಹರಣೆಗೆ ‘ಸಾಲ’ ಎನ್ನುವ ಪ್ರಬಂಧಕ್ಕೆ ವಿಷಯವಾರು ವರ್ಗೀಕರಣ ಹೀಗಿದೆ: ಸಾಲವೆಂದರೇನು? ಮುಂದಣ ಆಲೋಚನೆಯಿಲ್ಲದಿರುವಿಕೆಯೂ, ಧೋರಣೆಯೂ, ಕಡ ಮಾಡುವುದರಲ್ಲಿ ಮುಖ್ಯ ಕಾರಣಗಳು, ಕಡ ಮಾಡಿದ ರೈತರೇ ಮೊದಲಾದವರ ಪಾಡು. ಅವಿವೇಕದ ಸಾಲದಿಂದ ಉಂಟಾಗುವ ಕೇಡುಗಳು: ನಷ್ಟ, ಊರು ಬಿಡಬೇಕಾಗುವುದು, ಪುತ್ರದ್ರೋಹ, ಆತ್ಮದ್ರೋಹ, ನಾನಾ ವಿಧವಾದ ಅವಮಾನ, ಪಾಪ ಸಂಭವ, ಅನುಭವಶಾಲಿಗಳ ಮಾತು, ಕಡಮಾಡದಿರುವುದು ಸಾಧ್ಯ. ಈ ರೀತಿಯ ವರ್ಗೀಕರಣ ಮಾಡಿಕೊಳ್ಳುವುದರಿಂದ ಒಂದು ಅಚ್ಚುಕಟ್ಟಾದ ಪ್ರಬಂಧ ರಚಿಸಲು ಸಾಧ್ಯ ಎನ್ನುವುದು ಪ್ರಬಂಧಕಾರರ ಇಂಗಿತ. ಹೇಳೀಕೇಳೀ ಪ್ರಬಂಧವೆಂದರೆ ಚೆನ್ನಾಗಿ ಕಟ್ಟಿದ್ದು (well built) ಎಂದರ್ಥ. ವಿದ್ಯಾರ್ಥಿಗಳು ಈ ವಿಷಯ ವಿಂಗಡಣೆಯ ವರ್ಗೀಕರಣವನ್ನು ನೋಡಿಕೊಂಡು ಒಳ್ಳೆಯ ಪ್ರಬಂಧಗಳನ್ನು ರಚಿಸಲು ಕಲಿತುಕೊಳ್ಳಬಹುದು.

‘ಪುಸ್ತಕ’ ಎನ್ನುವ ಪ್ರಬಂಧದಲ್ಲಿ ಅಯ್ಯಂಗಾರ್ಯರು ಅಚ್ಚಿನ (ಮುದ್ರಣದ) ಮಹಿಮೆಯನ್ನು ಕುರಿತು, ‘‘ಲೋಕಕ್ಕೆ ಹಿತಮಾಡಬೇಕೆಂಬ ಆಶೆಯುಳ್ಳ ಮಹಾಶಯರಿಗೆ ಒಂದು ದೊಡ್ಡ ಚಿಂತೆಯಿದ್ದಿತು. ಲೇಖನಿಯು ಅವರಿಗೆ ಬೆಂಬಲವಾಗಿ ನಿಂತು ಅವರ ಚಿಂತೆಯನ್ನು ಹೋಗಲಾಡಿಸಿ ಹೀಗೆ ಧೈರ್ಯ ಕೊಡುತ್ತಿದ್ದಿತು. ಅವರನ್ನು ಕುರಿತು – ಹೆದರಬೇಡಿ, ಮಿಂಚಿನಂತೆ ನಿಮ್ಮ ಶ್ರಮವು ಅಸ್ಥಿರವಾಗಿ ಹೋಗಿಬಿಡುವುದಿಲ್ಲ. ನೀವು ಬದುಕಿರುವಾಗಲೂ ನೀವು ಗತಿಸಿದ ಮೇಲೆಯೂ ಏಕರೀತಿಯಾಗಿ ನಿಮ್ಮ ಮಾತನ್ನು ಕೇಳಿ ಪ್ರಪಂಚವೇ ಆಶ್ಚರ್ಯದಿಂದ ಕುಣಿಯುತ್ತಿರುವ ಹಾಗೆ ಮಾಡುವೆನು ಎಂದು ಧೈರ್ಯ ಹೇಳಿತು. ಅಚ್ಚಿನ ಮಹಿಮೆ ಎಷ್ಟಿರುವುದು ನೋಡೋಣ? ಎಂಥವರಿಗಾದರೂ ಕೊರತೆ ಬರುವುದುಂಟು. ಇಷ್ಟು ಸಾಮರ್ಥ್ಯವಿದ್ದರೂ ಲೇಖನಿಗೂ ಒಂದು ಕೊರತೆಯುಂಟು. ಅಯ್ಯೋ! ನನ್ನ ಜೀವಾಶ್ರಯವನ್ನೇ ಮುಟ್ಟಿದರೆ ಸಾಯುವ ಗೆದ್ದಲು ಹುಳುವೂ ತಿಂದುಬಿಡುವುದು; ಬಡಿದರೆ ಚದುರುವ ನೀರೂ ತಾರಿಸಿಬಿಡುವುದು; ಉರುಬಿದರೆ ನಂದುವ ದೀಪವೂ ಸುಟ್ಟುಬಿಡುವುದು. ನಾನೆಷ್ಟು ಉಪಕಾರಿಯಾದರೂ ನನ್ನ ಬಾಳು ಇಷ್ಟೇ! ನನ್ನನ್ನು ಕಾಪಾಡುವವರಿಲ್ಲ! ಎಂದು ಗೋಳಾಡುವ ಲೇಖನಿಯನ್ನು ನೋಡಿ ಪರಿತಾಪ ಪಟ್ಟು ಅಚ್ಚು, ಏಕೆ ಈ ಗೋಳು? ಇದೆಷ್ಟರ ಕೆಲಸ! ನನ್ನ ಸಹಾಯವನ್ನು ನೀನೆಂದಿಗೂ ಮರೆಯಲಾರೆ. ರಾಜನನ್ನು ಭಟರು ಕಾಪಾಡುವಂತೆ, ನಿನಗೆ ಸದೃಶರಾದ ಹೊಸ ಭಟರನ್ನು ಸೃಷ್ಟಿಸಿ ನಿನ್ನನ್ನು ಕಾಪಾಡುತ್ತಿರುವೆನು. ಒಬ್ಬ ಭಟನು ಸತ್ತರೆ ಅನೇಕ ಭಟರು ನಿನಗೆ ಬೆಂಬಲವಾಗಿ ನಿಂತೇ ಇರುವರು. ಈ ಭಟರಿಂದ ಪ್ರಪಂಚವೆಲ್ಲಾ ನಿನ್ನ ರಾಜ್ಯ ಆಗುವುದು. ಅವರು ಜ್ಞಾನದ ಬೆಳಕು ಬೀಳುವ ಕಡೆಯಲ್ಲೆಲ್ಲಾ ನಿನ್ನ ಪ್ರಾಬಲ್ಯವನ್ನು ಹೊಗಳುತ್ತಾ ಬರುವರು. ನಿನ್ನ ಆಜ್ಞೆಗೆ ಎಲ್ಲಿಯೂ ತಡೆಯೇ ಇಲ್ಲದಂತೆ ಆಗುವುದು! ಎಂದು ಸಮಾಧಾನ ಪಡಿಸಿತು. ಹೀಗಿರಲು ಅಚ್ಚಿನ ಮಹಿಮೆಯನ್ನು ಎಷ್ಟು ಹೇಳಿದರೂ ತೀರುವುದಿಲ್ಲ’’. ಇಲ್ಲಿ ಲೆಟರ್ ಪ್ರೆಸ್ ಅಥವಾ ಅಕ್ಷರ ಮುದ್ರಣದಲ್ಲಿ ಉಪಯೋಗಿಸುತ್ತಿದ್ದ ಅಚ್ಚಿನ ಮೊಳೆಗಳನ್ನು ಸೈನ್ಯದ ಭಟರೊಂದಿಗೆ ಹೋಲಿಸಿರುವುದು ಔಚಿತ್ಯಪೂರ್ಣವಾಗಿದೆ. ಪ್ರಬಂಧರಚನೆಯು ವಾಡಿಕೆಯಲ್ಲಿಲ್ಲದ ಆ ಕಾಲಘಟ್ಟದಲ್ಲಿ ಅಯ್ಯಂಗಾರ್ಯರು ಈ ರೀತಿಯ ಬೋಧಪ್ರದವಾದ ಕೃತಿ ರಚನೆ ಮಾಡಿರುವುದು ಸ್ತುತ್ಯರ್ಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.