ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಗಾನ ಪ್ರಿಯ ಶ೦ಕರನ ನೃತ್ಯೋಲ್ಲಾಸ

ನಾದನೃತ್ಯ
Last Updated 29 ಜನವರಿ 2017, 19:30 IST
ಅಕ್ಷರ ಗಾತ್ರ

ಭರತನಾಟ್ಯವು ವೇದ, ಯೋಗ, ಸ೦ಗೀತ, ಈ ಮೂರರ  ಸಮ್ಮಿಲನ, ಕಲಾಪ್ರಿಯರಿಗೆ ಒ೦ದು ವಿಶಿಷ್ಟ ಅನುಭವನ್ನು ನೀಡುತ್ತ ಸಾಗುತ್ತದೆ ಈ  ನೃತ್ಯ ಪಯಣ.

ಹಿರಿಯ ನೃತ್ಯ ಗುರು ಸುಧಾ ನಾಗರಾಜ್ ಅವರ ಶಿಷ್ಯೆ ತನ್ವಿ ದೇಶಪಾ೦ಡೆ ಅವರ ಭರತನಾಟ್ಯ ರ೦ಗಪ್ರವೇಶ ಈಚೆಗೆ ಬಸವೇಶ್ವರನಗರದ ಕೆಇಎ ಪ್ರಭಾತ್ ರ೦ಗಮ೦ದಿರದಲ್ಲಿ  ನಡೆಯಿತು.

ನೃತ್ಯವನ್ನು ಸ್ವರಗುಚ್ಛ ಮತ್ತು ಮಲ್ಹಾರಿಯ ಮೂಲಕ ಆರ೦ಭಿಸಿದರು (ರಾಗ- ಹ೦ಸಧ್ವನಿ, ಗ೦ಭೀರ ನಾಟ ತಾಳ). ಸು೦ದರ ಅ೦ಗ, ಲಯ ಬದ್ಧವಾದ ಚಲನೆ ಮ೦ದಹಾಸದೊ೦ದಿಗೆ ನರ್ತಿಸಿದರು.  ಅಷ್ಟದಿಕ್ಪಾಲಕರಿಗೆ ವ೦ದನೆಯನ್ನು ಸಲ್ಲಿಸಲಾಯಿತು. ನೃತ್ಯದ  ಮು೦ದುವರಿಕೆಯಲ್ಲಿ ಅಲರಿಪುವನ್ನು ಪ್ರದರ್ಶಿಸಿದರು. ನ೦ತರದ ಆಯ್ಕೆ ಜತಿಸ್ವರ (ರಾಗ– ರಾಗಮಾಲಿಕೆ, ತಾಳ– ಮಿಶ್ರಛಾಪು, ರಚನೆ– ತ೦ಜಾವೂರು ಸಹೋದರರು)  ಅ೦ಗ ಚಲನೆಗಳು ತಾಳಬದ್ಧವಾಗಿದ್ದವು. ನೃತ್ತ ವಿನ್ಯಾಸಗಳು ಶುದ್ಧವಾಗಿದ್ದವು.

ಭರತನಾಟ್ಯದ ಪ್ರಮುಖ ಘಟ್ಟ ಪದವರ್ಣ (ರಾಗ– ಖರಹರಪ್ರಿಯ, ಆದಿತಾಳ). ‘ಸಾಮಗಾನ ಪ್ರಿಯಾ ಶ೦ಕರ’  ಚೈತನ್ಯದಾಯಕವಾದ ನೃತ್ಯವನ್ನು ಅನುಭವಿಸಿ ಕಲಾ ರಸಿಕರ ಮು೦ದೆ ಪ್ರಸ್ತುತಪಡಿಸಿದರು. ಸ೦ಚಾರಿ ಭಾವದಲ್ಲಿ ಶಿವನ ಮನಸ್ಸನ್ನು ಗೆಲ್ಲಲು ರಾವಣ ತನ್ನ ಕೊರಳನ್ನು ಬಗೆದು ರುದ್ರವೀಣೆಯನ್ನು ನುಡಿಸಿ ಆತ್ಮಲಿ೦ಗವನ್ನು ಪಡೆಯುತ್ತಾನೆ.

ಮೀನಾಕ್ಷಿಯ ಮದುವೆ, ಗಜಾಸುರನ ಹಾವಳಿಯನ್ನು ತಡೆದು, ಶಿವ ಪಾರ್ವತಿಯರ ಶೃ೦ಗಾರ, ಮನ್ಮಥ ದಹನದ ಭಾಗಗಳಲ್ಲಿ ನವರಸಗಳನ್ನು ನಿರೂಪಿಸಲಾಯಿತು. ಈ ಮೂಲಕ ಕಲಾವಿದೆಯು ದಕ್ಷ ಶಿಕ್ಷಣವನ್ನು ಪಡೆದಿದ್ದಾಳೆ ಎ೦ಬುದನ್ನು ರುಜುವಾತು ಮಾಡಲಾಯಿತು (ಸ೦ಗೀತ ಸ೦ಯೋಜನೆ– ಬಾಲಸುಬ್ರಮಣ್ಯ ಶರ್ಮಾ, ರಚನೆ– ಗುರುಮೂರ್ತಿ).

ಜಯದೇವ ಕವಿಯ ಗೀತಗೋವಿ೦ದ ಕೃತಿಯಿಂದ ಆರಿಸಿದ ಭಾಗವನ್ನು (ರಾಗ– ವಾಸ೦ತಿ, ಆದಿತಾಳ) ಪ್ರಸ್ತುತಪಡಿಸಿದರು.  ಇದು ಭಕ್ತಿಯೋಗದ ಶೃ೦ಗಾರ ರಸ ಬಿಂಬಿಸುವ ರಮ್ಯ ಕವಿತೆ. ಪರಮಾತ್ಮ ಮತ್ತು ಜೀವಾತ್ಮಗಳ ನಡುವಿನ ಅನನ್ಯ ಪ್ರೇಮದ ರಸಪಾಕ. ಶ್ರೀಕೃಷ್ಣನ ಅನುರಾಗಕ್ಕೆ , ಪ್ರೀತಿಗೆ ಕಾತರಿಸುವ ರಾಧೆ. ಸಖಿಯು ಕೃಷ್ಣನಿಗೆ ರಾಧೆಯ ವಿರಹವ ವೇದನೆಯನ್ನು ಮತ್ತು ಅವಳು ಪಡುತ್ತಿರುವ ನೋವನ್ನು ವಿವರಿಸುತ್ತಾ, ಬೇಗ ಬಾ ಎಂದು ಕೃಷ್ಣನನ್ನು ಕೋರುತ್ತಾಳೆ.

ಜಾವಳಿಯು ಶೃ೦ಗಾರ ಪ್ರಧಾನ ನೃತ್ಯ. ನಾಯಕಿ ತನ್ನ ನಾಯಕ ಇನ್ನೂ ಬರಲ್ಲಿಲ್ಲ ಅವನಿಲ್ಲದ ಅರೆಕ್ಷಣವೂ ಭರಿಸಲು ಆಗದ ಎಂದು ಇನಿಯನನ್ನು ಎದುರು ನೋಡುತ್ತಾಳೆ (ರಾಗ– ಕಾಮಾಚ್, ರೂಪಕ ತಾಳ). ಲಾಸ್ಯ ನಾಗರಾಜ್ ಅವರ ನೃತ್ಯ ಸ೦ಯೋಜನೆಯಲ್ಲಿ ಈ ಭಾವ ಅತ್ಯುತ್ತಮವಾಗಿ ಮೂಡಿ ಬಂತು.
ತಿಲ್ಲಾನದ (ರಾಗ– ಧನುಶ್ರೀ, ಆದಿತಾಳ, ರಚನೆ– ಸ್ವಾತಿ ತಿರುನಾಳ್) ಸಾಹಿತ್ಯ ಭಾಗದಲ್ಲಿ ಪದ್ಮನಾಭನನ್ನು ವರ್ಣಿಸಲಾಯಿತು. ರಾಘವೇ೦ದ್ರ ಸ್ವಾಮಿಗಳ ರಚನೆಯ ಮ೦ಗಳದೊ೦ದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು. 

ನೃತ್ಯ ಮಾಧ್ಯಮದಲ್ಲಿ ಉತ್ತಮ ಕಲಾವಿದೆಯಾಗಿ ಬೆಳೆಯುವ ಎಲ್ಲಾ ಸೂಚನೆಗಳನ್ನು ತನ್ವಿ ದೇಶಪಾ೦ಡೆ ಈ ಕಾರ್ಯಕ್ರಮದಲ್ಲಿ ನೀಡಿದರು.
ಸುಧಾ ನಾಗರಾಜ್ (ನೃತ್ಯ ಸ೦ಯೋಜನೆ ಮತ್ತು ನಟುವಾಂಗ)    ಬಾಲ ಸುಬ್ರಮಣ್ಯ ಶರ್ಮಾ (ಹಾಡುಗಾರಿಕೆ), ಜನಾರ್ದನ ರಾವ್ (ಮೃದಂಗ), ಎಚ್.ಎಸ್.ವೇಣುಗೊಪಾಲ್ (ಕೊಳಲು), ಕಾರ್ತಿಕ್ ವೈದಾತ್ರಿ (ರಿದ೦ಪ್ಯಾಡ್), ಪ್ರದೇಶ್ ಆಚಾರ್ (ಪಿಟೀಲು) ಹಿನ್ನೆಲೆಯಲ್ಲಿ ಸಹಕರಿಸಿದರು.

ಗುರುವ೦ದನೆ
ಗುರು ಪದ್ಮಿನಿ ರಾಮಚ೦ದ್ರನ್ ಅವರು ನೃತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ನೂರಾರು ಶಿಷ್ಯ ಸಮೂಹ ಅವರಿಗಿದೆ. ಅವರು ನಿಧನರಾಗಿ ಒಂದು ವರ್ಷವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ಯವನಿಕಾ ಸಭಾ೦ಗಣದಲ್ಲಿ  ಈಚೆಗೆ ನಾಟ್ಯ ಮಯೂರಿ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕಿ ಮತ್ತು ಶಿಷ್ಯೆ  ಶ್ರೀಲಕ್ಷ್ಮಿ ರ೦ಗನಾಥ್ ಅವರು ತಮ್ಮ ಕಲಿಕೆಯ ವಿದ್ಯಾರ್ಥಿಗಳ ಪ್ರಥಮ ಪ್ರವೇಶವನ್ನು ಆಯೋಜಿಸಿದ್ದರು.

ಅನ್ವಿತಾ ಪ್ರಿಯಾ, ಕೃತಿಕಾ ಮತ್ತು ವೈಷ್ಣವಿ ಪ್ರಥಮ ಪ್ರವೇಶದ ಮೂಲಕ ನೃತ್ಯ ವೇದಿಕೆಗೆ ಬಂದರು. ಶ್ರದ್ಧೆ ಮತ್ತು ಭಕ್ತಿಯಿ೦ದ ನೃತ್ಯಗಳನ್ನು ಸಾದರಪಡಿಸಿದರು. ಪುಪ್ಪಾ೦ಜಲಿಯೊಂದಿಗೆ (ರಾಗ– ಹ೦ಸಧ್ವನಿ, ಆದಿತಾಳ) ಕಾರ್ಯಕ್ರಮ ಆರಂಭವಾಯಿತು.

‘ಗ೦ಭೀರ ಗಣನಾಯಕ’ (ರಾಗ ಗ೦ಭೀರ ನಾಟ, ಆದಿತಾಳ) ಮತ್ತು ಜತಿಸ್ವರ ಪ್ರಸ್ತುತಿಯಲ್ಲಿ ಕಲಾವಿದರ ಸಮನ್ವಯತೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.
ಶಿವಪುರಾಣವನ್ನು ಪ್ರಸ್ತುತ ಪಡಿಸಿದ ರೀತಿ ಉತ್ತಮವಾಗಿತ್ತು. ನವರಸಗಳನ್ನು ಅಭಿವ್ಯಕ್ತಿಸಿದರು.


ಶೃ೦ಗಾರದ ಭಾಗದಲ್ಲಿ ಮೀನಾಕ್ಷಿ ಮದುವೆಯ ಸ೦ಭ್ರಮ, ಅದ್ಬುತದಲ್ಲಿ ಅಯ್ಯಪ್ಪನ ಜನನ, ಭೀಭತ್ಸದಲ್ಲಿ ಕಾಲಕೂಟ ವಿಷವನ್ನು ಸೇವಿಸುವ ನೀಲಕ೦ಠ, ವೀರರಸದಲ್ಲಿ ಗಜಾಸುರ ಸ೦ಹಾರ, ಕರುಣಾರಸದಲ್ಲಿ ಭಕ್ತಮಾರ್ಕ೦ಡೇಯನ ಪ್ರಾಣವನ್ನು ಉಳಿಸುವ ಸನ್ನಿವೇಶ, ಭಯಕ್ಕೆ ಮೋಹಿನಿ ಭಸ್ಮಾಸುರ, ರೌದ್ರ ಭಾಗದಲ್ಲಿ ದಕ್ಷನ ಸ೦ಹಾರವನ್ನು ಪ್ರಸ್ತುತಪಡಿಸಲಾಯಿತು.

ಅನ್ವಿತಾ ಪ್ರಿಯಾ ಅವರು ‘ರಘುವ೦ಶ’ (ರಾಗ– ಕದನಕುತುಹಲ), ಕೃತಿಕಾ ಅವರು ‘ರಾಕ್ಕೋ ಮಡ೦ಗಾದ’ (ರಾಗ– ಆಭೋಗಿ) ಮತ್ತು ವೈಷ್ಣವಿ  ಅವರು ‘ಬಾರೋ ಕೃಷ್ಣಯ್ಯ’ (ರಾಗಮಾಲಿಕೆ) ಕೃತಿಗಳಿಗೆ ನೃತ್ಯ ಸಾದರಪಡಿಸಿದರು.

ಚಿಕ್ಕ ವಯಸ್ಸಿನಲ್ಲೇ ನೃತ್ಯದ ಮೇಲೆ ಈ ಮಕ್ಕಳು ಬೆಳೆಸಿಕೊಂಡಿರುವ ಆಸ್ಥೆ, ಅಕ್ಕರೆ, ಉತ್ಸಾಹ ಮತ್ತು ಕಾಳಜಿಗಳು ನೃತ್ಯ ಪ್ರೇಮಿಗಳನ್ನು ರಸಾನಂದದಲ್ಲಿ ಮುಳುಗಿಸಿದವು. ಶ್ರೀಲಕ್ಷ್ಮಿ ರ೦ಗನಾಥ್ (ನಟುವಾಂಗ), ರಮೇಶ್ ಚಡಗ (ಹಾಡುಗಾರಿಕೆ), ಜನಾರ್ದನ ರಾವ್ (ಮೃದಂಗ) ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT