ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪು: ಗಂಧರ್ವ ಗಾನದ ನೆನಪಿನಂಗಳ

ಎಂ.ಎನ್. ಸುಂದರ ರಾಜ್
Published 6 ಜನವರಿ 2024, 23:38 IST
Last Updated 6 ಜನವರಿ 2024, 23:38 IST
ಅಕ್ಷರ ಗಾತ್ರ

ಐದು ವರ್ಷದ ತುಂಬುಗಲ್ಲದ ಬಾಲಕ ಬೆಳಗಾವಿಯ ವಿಶಾಲ ವೇದಿಕೆಯಲ್ಲಿ ಕುಳಿತು ತನ್ಮಯನಾಗಿ ಹಾಡುತ್ತಿದ್ದ. ಠುಮ್ರಿ, ಖಯಾಲ್, ಆಗ್ರಾ ಘರಾಣಾ ಶೈಲಿಯಲ್ಲಿ ಅತಿ ಮಧುರ ಧ್ವನಿಯಲ್ಲಿ ತೇಲಿ ಬರುತ್ತಿದ್ದುದನ್ನು ಸಂಗೀತಾಸಕ್ತರು ಕೇಳಿ ಭಾವಪರವಶರಾದರು. ಅಬ್ದುಲ್ ಕರೀಂ ಖಾನ್ ಮತ್ತು ಸವಾಯಿ ಗಂಧರ್ವರ ಗಾಯನದಲ್ಲಿನ ಸೂಕ್ಷ್ಮ ವ್ಯತ್ಯಾಸಗಳನ್ನು ಹಾಡಿ ತೋರಿಸಿದ. ಇದ್ದಕ್ಕಿದ್ದಂತೆ ಸಂಗೀತ ನಿಂತಿತು. ಶ್ರೋತೃಗಳಾಗಿ ಆಗಮಿಸಿದ್ದ ಕಲಬುರಗಿ ಗುರುಕಲ್ಮಠದ ಶಾಂತವೀರ ಸ್ವಾಮಿಗಳು ಆ ಬಾಲಕನನ್ನು ತಬ್ಬಿ ಹಿಡಿದು, ‘ಎಂತಹ ಪ್ರತಿಭೆ ನಿನ್ನದು ಮಗೂ, ನೀನು ನಿಜವಾಗಿಯೂ ಅಪ್ರತಿಮ ಗಾಯಕ, ನೀನು ಕುಮಾರ ಗಂಧರ್ವನೇ ಸರಿ’ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು. ಎಲ್ಲರ ಗಮನಸೆಳೆದ ಆ ಪುಟ್ಟ ಬಾಲಕ ಮುಂದೆ ‘ಕುಮಾರ ಗಂಧರ್ವ’ ಎಂಬ ಹೆಸರಿನಿಂದ ಪ್ರಖ್ಯಾತನಾದ. ಆತನೇ ಶಿವಪುತ್ರ ಸಿದ್ಧರಾಮಯ್ಯ ಕೊಂಕಲಿಮಠ; ಅಪ್ಪಟ ಕನ್ನಡದ ಪ್ರತಿಭೆ.

ಕುಮಾರ ಗಂಧರ್ವ ಜನಿಸಿದ್ದು 1924ರ ಏಪ್ರಿಲ್ 8ರಂದು, ಬೆಳಗಾವಿಯ ಸೂಳೇಭಾವಿಯಲ್ಲಿ. ಚಿಕ್ಕಂದಿನಿಂದಲೇ ಮರಾಠಿ ಕಾವ್ಯ ನಾಟಕಗಳನ್ನು ನೋಡಿ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಈ ಬಾಲಕ, ಉಸ್ತಾದ್ ಕರೀಂ ಖಾನರ ಮುದ್ರಿತ ಸಂಗೀತಕ್ಕೆ ಮಾರುಹೋಗಿದ್ದ. ಹಿಂದೂಸ್ತಾನಿ ಸಂಗೀತಾಸಕ್ತಿಯನ್ನು ಗಮನಿಸಿ ಈತನ ತಂದೆ ಮುಂಬೈನ ಡಾ.ಬಿ.ಆರ್.ದೇವಧರ್ ಬಳಿ ಕಳಿಸಿ ಸಂಗೀತ ಕಲಿಸಲು ನೆರವಾದರು.

ಹನ್ನೊಂದನೆಯ ವಯಸ್ಸಿಗೇ ಅಲಹಾಬಾದ್‌ನಲ್ಲಿ ನಡೆದ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಕುಮಾರ ಗಂಧರ್ವ ಸಂಗೀತ ಕಛೇರಿ ನಡೆಸಿಕೊಟ್ಟರು. ಕೊನೆಯ ಅರ್ಧ ಗಂಟೆ ಕಾಫಿ ರಾಗದಲ್ಲಿ ಹಾಡಿ ಎಲ್ಲರೂ ಅಚ್ಚರಿಪಡುವಂತೆ ಮಾಡಿದರು. ಈ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ತೇಜ ಬಹಾದ್ದೂರ್ ಸಪ್ರು ಚಿನ್ನದ ಪದಕವನ್ನಿತ್ತು ಗೌರವಿಸಿದರು. ಕೆ.ಎಲ್. ಸೈಗಾಲ್, ಪಂ. ಓಂಕಾರನಾಥ್, ಉಸ್ತಾದ್ ಫಯಾಜ್‌ ಖಾನ್ ಮುಂತಾದವರು ಈ ಸಂಗೀತ ಕಛೇರಿಯ ಮುಖ್ಯ ಶ್ರೋತೃಗಳಾಗಿದ್ದರು.

‌ಅಬ್ದುಲ್ ಫಯಾಜ್ ಖಾನರೂ ವೇದಿಕೆಗೆ ಪ್ರವೇಶಿಸಿ, ಬಾಲಕ ಕುಮಾರ ಗಂಧರ್ವರನ್ನು ಆಲಿಂಗಿಸಿಕೊಂಡು, ಹರಸಿದರು. ಅವರು ಸದಾ ಧರಿಸುತ್ತಿದ್ದ ಟೋಪಿಯನ್ನು ತೆಗೆದು ಬಾಲಕನ ತಲೆಗೆ ತೊಡಿಸಿದರು. ಅಂದಿನಿಂದ ಕುಮಾರ ಗಂಧರ್ವ ಮನೆಮಾತಾದರು.

ಕುಮಾರ ಗಂಧರ್ವ ಅವರು ಘರಾಣಾವನ್ನು ಪಾರಂಪರಿಕ ಶೈಲಿಯಲ್ಲಿ ಹಾಡದೆ, ತಮ್ಮದೇ ಧಾಟಿಯಲ್ಲಿ ಹಾಡಿದರು. ಅನೇಕ ಹೊಸ ರಾಗಗಳನ್ನು ಸಂಯೋಜಿಸಿದರು. ಅವುಗಳನ್ನು ‘ಧುನ್ ಉಗಮ್ ರಾಗಗಳು’ ಎಂದು ಕರೆದರು.

ಕ್ಷಯಕ್ಕೆ ಸಿಕ್ಕ ಔಷಧ: ಬದುಕಿನಲ್ಲಿ ಬಿರುಗಾಳಿಯಂತೆ ಬಂದಿದ್ದು ಕ್ಷಯರೋಗ. ಆಗ ರೋಗಕ್ಕೆ ಔಷಧ ಇರಲಿಲ್ಲ. ಸ್ವಲ್ಪ ಶುಷ್ಕ ಪ್ರದೇಶದಲ್ಲಿ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದರಿಂದ, ಅವರು ಆಯ್ಕೆ ಮಾಡಿದ ಸ್ಥಳ ಮಧ್ಯಪ್ರದೇಶ ರಾಜ್ಯದ ದೇವಾಸ್. ಅಲ್ಲಿ ಮನೆಯೊಂದನ್ನು ಕಟ್ಟಿ, ಅದಕ್ಕೆ ‘ಭಾನುಕುಲ್’ ಎಂದು ಹೆಸರಿಟ್ಟರು. ಸಂಪೂರ್ಣ ಗುಣಮುಖರಾಗುವವರೆಗೆ ಹಾಡಬಾರದೆಂದು ವೈದ್ಯರು ತಾಕೀತು ಮಾಡಿದರು. ಇಡೀ ದೇಶ 1947ರಲ್ಲಿ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸುತ್ತಿದ್ದರೆ, ಧ್ವನಿ ಅಡಗಿಹೋದ ಕುಮಾರ ಗಂಧರ್ವರು ಮೌನವಾಗಿ ನೋವು ಅನುಭವಿಸುತ್ತಿದ್ದರು.

ಅವರು ಕ್ಷಯರೋಗದಿಂದ ಮುಕ್ತರಾದ ಬಳಿಕ 1952ರಲ್ಲಿ ಮಾಂಡೋವಿನಲ್ಲಿ ಒಂದು ಸಂಗೀತ ಕಛೇರಿ ನಡೆಸಿದರು. ಅದಕ್ಕೆ ಪ್ರಧಾನಿ ಜವಾಹರಲಾಲ್ ನೆಹರೂ ಬಂದಿದ್ದುದು ವಿಶೇಷ.

ಮಿಂಚಿದ್ದು ಮರಾಠಿ ನೆಲದಲ್ಲಿ: ನಂತರ ದೇಶದಾದ್ಯಂತ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಹಾಡಲು ಪ್ರಾರಂಭಿಸಿದರು. ಅವರು ಮಿಂಚಿದ್ದು ಮರಾಠಿ ನೆಲದಲ್ಲಿ ಮತ್ತು ನೆಲೆಸಿದ್ದು ಹಿಂದಿ ಪ್ರದೇಶದಲ್ಲಿ. ಅವರನ್ನು ‘ಇಂಡಿಯನ್ ಮೊಜಾರ್ಟ್’ ಎಂದು ಕರೆಯಲಾಗುತ್ತಿತ್ತು. ಸತ್ಯಶೀಲ ದೇಶಪಾಂಡೆ, ಶುಭಾ ಮುದ್ಗಲ್, ವಿಜಯಾ ಸರದೇಶಮುಖ್ ಅವರ ಶಿಷ್ಯವರ್ಗದ ಪ್ರಮುಖರು. ಅವರಿಗೆ ಮಾಳ್ವಾದ ಮೇಲೆ ಅದೇನೋ ವಿಶೇಷ ಮಮತೆ ಮತ್ತು ಅಭಿಮಾನ. ಸದಾ ತಮ್ಮನ್ನು ‘ಮೈ ಮಾಳ್ವಾಕಾ, ಮಾಳ್ವಾ ಮೇರಾ’ ಎಂದು ಹೇಳಿಕೊಳ್ಳುತ್ತಿದ್ದರು. ಅವರನ್ನು ‘ಮಾಳ್ವಾದ ಮಹಾರಾಜ’ ಎಂದೂ ಕರೆಯುತ್ತಿದ್ದರು.

1965ರಲ್ಲಿ ತಮ್ಮ ಹತ್ತು ವರ್ಷದ ಸಂಶೋಧನೆಯ ಫಲವಾಗಿ ರಚಿಸಿದ ‘ಅನೂಪ ರಾಗ ವಿಲಾಸ’ ಎಂಬ ಪುಸ್ತಕವನ್ನು ಪ್ರಕಟಿಸಿದರು.

ಅವರ ಮೊದಲ ಪತ್ನಿ ಭಾನುಮತಿ ಅನಾರೋಗ್ಯದಿಂದ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡಿದ್ದರು. ತಮ್ಮ ಪುಟ್ಟ ಮಗ ಮುಕುಲ್ ಶಿವಪುತ್ರನಿಗಾಗಿ ವಸುಂಧರಾ ಶ್ರೀಖಂಡೆಯವರನ್ನು ಎರಡನೇ ವಿವಾಹವಾದರು. ಅವರಿಗೆ ಜನಿಸಿದ ಕಲಾಪಿನಿ ಕೊಂಕಾಲಿ ಕೂಡ ಪ್ರಸಿದ್ಧ ಗಾಯಕಿಯಾಗಿದ್ದಾರೆ.

1992ರ ಜನವರಿ 12ರಂದು ಕುಮಾರ ಗಂಧರ್ವರು ಅಸ್ತಂಗತರಾದರು. ಮಧ್ಯಪ್ರದೇಶ ಸರ್ಕಾರ 1992ರಿಂದ ಪ್ರತಿವರ್ಷ ಅವರ ಗೌರವಾರ್ಥ ಸಂಗೀತ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿದ ಒಬ್ಬರಿಗೆ ‘ಕುಮಾರ ಗಂಧರ್ವ ಪ್ರಶಸ್ತಿ’ ನೀಡಿ ಗೌರವಿಸುತ್ತಿದೆ. ‘ಭಾನುಕುಲ್’ ಮನೆ ಇಂದು ಕುಮಾರ ಗಂಧರ್ವರ ನೆನಪನ್ನು ಅಜರಾಮರಗೊಳಿಸುವ ವಸ್ತುಸಂಗ್ರಹಾಲಯವಾಗಿ ಮಾರ್ಪಟ್ಟಿದೆ.

ಐದು ದಿನಗಳ ಸಂಗೀತೋತ್ಸವ

ಧಾರವಾಡದ ಜಿ.ಬಿ. ಜೋಶಿ ಸ್ಮಾರಕ ಟ್ರಸ್ಟ್‌, ಹುಬ್ಬಳ್ಳಿಯ ‘ಕ್ಷಮತಾ’ ಜಂಟಿಯಾಗಿ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಜನವರಿ 9ರಿಂದ 13ರ ವರೆಗೆ ಐದು ದಿನಗಳ ‘ಪಂ. ಕುಮಾರ ಗಂಧರ್ವ ಜನ್ಮಶತಾಬ್ದಿ ಸಂಗೀತೋತ್ಸವ’ ಆಯೋಜಿಸಿವೆ. ಧಾರವಾಡದ ಕರ್ನಾಟಕ ಕಾಲೇಜು ಆವರಣದಲ್ಲಿರುವ ಡಾ. ಅಣ್ಣಾಜಿರಾವ್ ಸಿತೂರ್ ಸಭಾಂಗಣದಲ್ಲಿ ಈ ಸಂಗೀತೋತ್ಸವ ನಡೆಯಲಿದೆ. ಪಂ. ವಿಜಯ್ ಕೋಪಾರ್ಕರ್, ವಯೊಲಿನ್ ವಾದಕಿಯರಾದ ಎನ್‌. ರಾಜಂ ಹಾಗೂ ನಂದಿನಿ ಶಂಕರ್, ಪಂ. ಕೈವಲ್ಯಕುಮಾರ್ ಗುರವ್, ಸಿತಾರ್ ವಾದಕಿ ಸಸ್ಕಿಯಾ ರಾವ್, ಸೆಲ್ಲೊ ವಾದಕ ಶುಭೇಂದ್ರ ರಾವ್, ಸರೋದ್ ವಾದಕಿ ವಿದುಷಿ ದೇಬಸ್ಮಿತಾ ಭಟ್ಟಾಚಾರ್ಯ, ಜಯತೀರ್ಥ ಮೇವುಂಡಿ ಮೊದಲಾದ ದಿಗ್ಗಜರ ಸಂಗೀತ ಆಸ್ವಾದಿಸುವ ಅವಕಾಶ ಕಲಾ ರಸಿಕರಿಗೆ.

ಅನುಕರಣೆಯ ಅನುಭವ

ಒಮ್ಮೆ ಭೋಪಾಲ್‌ನಲ್ಲಿ ರಾಷ್ಟ್ರೀಯ ಸಂಗೀತೋತ್ಸವ ನಡೆಯಿತು. ಅಲ್ಲಿಗೆ ಕುಮಾರ ಗಂಧರ್ವರೂ ಹೋಗಿದ್ದರು. ಅವರು, ಗಂಗೂಬಾಯಿ ಹಾನಗಲ್, ಭೀಮಸೇನ ಜೋಷಿ ಮುಂತಾದ ಸಂಗೀತ ದಿಗ್ಗಜರೂ ಇದ್ದರು. ಅಂದು ಅವರೆಲ್ಲ ಪಂಡಿತ್ ಓಂಕಾರನಾಥರ ಸಂಗೀತ ಕಛೇರಿಗೆ ಹೊರಡುವ ಸಿದ್ಧತೆ ನಡೆಸಿದ್ದರು. ಅಷ್ಟರಲ್ಲಿ ಕುಮಾರ ಗಂಧರ್ವರು, ‘ಅಲ್ಲಿಗೆ ಯಾಕೇ ಹೋಗೋದು, ಇಲ್ಲಿಯೇ ಪಂ.ಓಂಕಾರನಾಥರ ಹಾಡು ಕೇಳಿಸುತ್ತೇನೆ’ ಎಂದವರೇ ಹಾಡತೊಡಗಿದರು. ಅದೆಷ್ಟು ಅದ್ಭುತವಾಗಿತ್ತೆಂದರೆ, ಪಂ.ಓಂಕಾರನಾಥರು ಇವರ ಕೊಠಡಿಯನ್ನು ಹಾದು ಹೋಗುವಾಗ ತಮ್ಮದೇ ಹಾಡನ್ನು ಕೇಳಿ, ಬಹುಶಃ ರೆಕಾರ್ಡ್ ಇರಬಹುದೆಂದು ಇಣುಕಿ ನೋಡಿದ್ದರು. ಒಳ ಬಂದವರೇ ಬರಸೆಳೆದು ಅಪ್ಪಿ, ಅವರೇ ಆಶೀರ್ವದಿಸಿದ್ದು ಒಂದು ಅಪೂರ್ವ ಸಂಗತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT