ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ದೀಪಾವಳಿ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕವನ

ಕವನ: ಆತ್ಮ ಸಿಲುಬೆಯಲ್ಲಿ ಏಸು ಜನನವಾದರೆ
ಶೇಖರ ಎಂ.ಬಿ.
Published 2 ಡಿಸೆಂಬರ್ 2023, 23:31 IST
Last Updated 2 ಡಿಸೆಂಬರ್ 2023, 23:31 IST
ಅಕ್ಷರ ಗಾತ್ರ

ಕವನ: ಆತ್ಮ ಸಿಲುಬೆಯಲ್ಲಿ ಏಸು ಜನನವಾದರೆ

ಕವಿ: ಶೇಖರ ಎಂ.ಬಿ.

ಆಡಿದ ಮಾತು ಆಯುಧವಾಗಿ ಇರಿದಿದ್ದು ತಿಳಿಲಿಲ್ಲ;
ಕನಸು ಹೊರಳಿಸುವುದಲ್ಲದೆ, ಉರುಳಿಸುವುದಾಗಿರಲಿಲ್ಲ.
ಅವನೆಂದರೆ ಅಧಿಕಾರ ಮುದ್ರೆ:
ಮೌನವೂ ಸುಡುವ ಕೆಂಡ,
ನಾಲಗೆಗೆ ತಾಳಮದ್ದಳೆಯ ನುರಿತ ತರಬೇತಿ
ಯಾವ ಪಾತ್ರಕ್ಕೂ ಸೈಯೆಂದರೂ,
ವೇಸ್‌ಕೋಟಿನಲ್ಲಿ ಮುತ್ಸದ್ದಿಯ ವೇಷದ ನಾಜೂಕಿಗೆ
ಲೋಕ ಇಲ್ಲದ ತಲೆದೂಗಬೇಕು
ಚಂದ್ರಾಯುಧದ ನೋಟದಲ್ಲೇ ಸೀಳಿ ತನ್ನವರ ಅನ್ಯರ
ಕಿವಿಗೆ ನಸೆ ಸವರುವ ಇಬ್ಬಾಯ ಮಾತುಗಾರ
ಸೆಟೆದಂತೆ ಕುಗ್ಗಿ ಕುನಿದು ಕುನ್ನಿಯೇ ಆಗಿದ್ದ!
ಬಿದ್ದವನನ್ನು ನಿಲ್ಲಿಸುವೆನೆಂದು ಚಾಚಿದ್ದು ಹಸ್ತವನ್ನೇ;
ತಾಕಿದ್ದು ಮೊಳೆಯುಗುರು!
ಬಿದ್ದವನ ಹೊಕ್ಕಿರಿದು ರಕ್ತದ ಸಾಲ ಬರೆದಿತ್ತು!
ಸಿಟ್ಟಿನ ಅರ‍್ಥ ಸುಡುತ್ತಿತ್ತು, ಅನರ‍್ಥ ಧ್ವನಿ ಢಣಾಡಂಗುರ ಹೊಡೆದಿತ್ತು!
ಬಿದ್ದವನು ಏಳಲೊಲ್ಲನೆಂದು ತಿಳಿಯದೆ ಏಳಿಸಲೆಂದು
ಬೀಳಿಸಿದೆ ಮತ್ತೆ ಬೀಳಿಸಿದೆ ಇನ್ನೊಮ್ಮೆ ಬೀಳಿಸಿದೆ!
ಅವಮಾನ ಅಪಮಾನ ಅಣಕ ಕೆಣುಕು ಎಲ್ಲ ಉರಿಗೊಂಡು
ಕಟ್ಟಿ ಎಬ್ಬಿಸಲು ಹೊರಟು ಅವನ ಮೇಲೆತ್ತಿದೆ
ಹೆಣವಾಗಿದ್ದ ದೆವ್ವವಾಗಿದ್ದ ಅವನ ಪ್ರೇತ ಕಳೆಯಲ್ಲಿ
ನಾನೂ ಹಸಿಹಸಿ ಜ್ವಾಲೆಯಲ್ಲಿ ಬೆಂದು ಹೋಗಿದ್ದೆ
ಕನ್ನಡಿ ಹಿಡಿದಿದ್ದೆ ಎಂದೇ ಆ ತನಕ ತಿಳಿದಿದ್ದೆ
ಕಾಣಿಸದೆ ಕಾಣಿಸಿದೆ; ಕಳೆದು ಕಳೆದುಕೊಂಡೆ!
ಕಾಣಿಸುವ ಮುನ್ನ ಕಿಡಿಕಟ್ಟಿ ದೀಪವ ಮಾಡುವ ಕಲೆಯ ಕಲಿಯಬೇಕಿತ್ತು
ಮನೆಯೊಳಗೆ ಮನೆಯ ಕಾಣಬೇಕಿತ್ತು
ಮೈ-ಮನಸ್ಸಿನ ಕಾಯಿಲೆ ಕಣ್ಣು ಬಿಟ್ಟಾಗ ಜಗತ್ತು ನಗುತ್ತಿತ್ತು
ನಗುವ ಚಾಟಿಯೇಟಿಗೆ ಅಳುವ ಬಾಸುಂಡೆ
ನೋವ ಮುಳ್ಳ ಕಿರೀಟ
ಆತ್ಮ ಸಿಲುಬೆಯಲ್ಲಿ
ಕಾರುಣ್ಯದ ಏಸು ಜನನವಾದರೆ
ಮತ್ತೆ ಬದುಕಿ ಅವನ ಬದುಕಿಸೇನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT