ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂತುಂಡು ನೆನೆತೀವಿ ಬೆಳಗಿನ ಜಾವ...

ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ
Last Updated 24 ನವೆಂಬರ್ 2018, 19:46 IST
ಅಕ್ಷರ ಗಾತ್ರ

ಸಾಲು ಹುಂಚೆಮರಯೆಲ್ಲ ಶಾಮಿಯಾನ
ಗಿಳಿಗುಬ್ಬಿ ಗೊರವಂಕ ನಿಮ್ಮದೇನಾ
ಲೈಟಿನ ಕಂಬಕೆ ಹಬ್ಬಿರೆ ಬಳ್ಳಿ
ನೋಡ್ಯಾವ ಗುಲಗಂಜಿ ಹುಬ್ಬೇರಿ ಹೊಳ್ಳಿ

ಮುತ್ತುಗ ಚೊಂಚಿನ ಮುತ್ತೈದೆಯಾಗಿ
ಹೊತ್ತು ಮುಳುಗುವೊತ್ತು ತೇಲಿ ಮೀನಾಗಿ
ಉಣಕಲ್ಲು ಕೆರೆ ಮ್ಯಾಲೆ ನಿಂತ್ಹಂಗ ಮುಗಿಲು
ಚುಕ್ಕಿಯೆ ಮೂಡಿತ್ತು ನಟ್ಟ ನಡುಹಗಲು

ನೊರೆ ಹೊತ್ತಿ ಉರಿಯಾಲು ಕೆರೆನ್ಯಾಕ ಬೈಲಿ
ಸ್ವರಯೆತ್ತಿ ಕರೆಯಾಲು ಮರವ್ಯಾಕ ಕೊಯ್ಲಿ
ಕೊಳೆತಾಗ ಕೊಳ್ಳಾಗ ತಾಳಿಯೆ ಬಾಗಿನ
ತುಂತುರು ಕಣ್ಣಾಗ ತುಳಕಿದ್ದು ಕಂಡೆ ನಾ

ಹಳ್ಳದ ಒಡಲೆಲ್ಲ ಉಸುಕಾಗಿ ಮಾಯ
ಹಳ್ಳಿಯ ಹುಡುಗರು ಪಟ್ಟಣಕಾಯ
ಸುಗ್ಗಿಯ ತೆನೆಯೆಲ್ಲ ಸುಡುವಂತ ಕಂಟಿ
ಟಿಟ್ಟಿಭ ಅಳುತೀಯ ನೀನ್ಯಾಕ ಒಂಟಿ

ಚಿಗುರೆಲೆ ಬಾಳೆಯ ಚಿತ್ತಾರ ಬಿಡಿಸಿ
ತೊಗರಿಯ ಹೊಲದಾಗ ಕವಳಿಯ ಸೋಸಿ
ಕೊಟ್ಟ ಮಾತಿನ್ಹಂಗ ಇಡುತೀವಿ ಎಡೆಯ
ಮರಿಬ್ಯಾಡ ಮಾತಾಯಿ ನಡೆಸವ್ವ ನುಡಿಯ

ಕೂಸನು ಎಸೆದವರ ಕುನ್ನಿಯ ಮಾಡು
ಕುಂಕುಮ ಅರಿಶಿಣ ಕಾಪಿಟ್ಟು ನೋಡು
ಕೊಟ್ಟರೆ ಕೊಡು ತಾಯಿ ಬೀಜಕ್ಕೆ ಜೀವ
ಕೂತುಂಡು ನೆನೆತೀವಿ ಬೆಳಗಿನ ಜಾವ

ಗಿರಿಗಿಟ್ಲೆ ಹೊಡೆದಾವ ಬೂದು ಕವುಜುಗ
ಮಂದಾಗಿ ಕುಂತಾವ ಕಂದಿದ ಗಿಡುಗ
ಸದ್ದಿಲ್ಲದೆ ಮಲಿಗ್ಯಾವ ಗದ್ದೆಯ ಗೊರವ
ಸಣ್ಣಾಗಿ ಸವೆದಾವ ನಿದ್ದ್ಯಾಗಚಿಟವ

ಊರಾನ ಹುಡುಗ್ಯಾರು ಉಗುರೆತ್ತಿ ತೋರಿ
ಕಾಯುತ್ತ ಕುಂತಾರ ನಿನ್ನಯಾ ದಾರಿ
ಹಾಲುಂಡ ಕೊಕ್ಕರೆ ಹಾಯಿರೆ ಇತ್ತ
ಆಡ್ಯಾಡೊ ಹುಡುಗರು ಕಾದಾರ ಸುತ್ತ

ಹುಯ್ಯೀರಿ ಹುಯ್ಯೀರಿ ಹೂವೊಂದಾ...
ಉಸಿರೆತ್ತಿ ಹಾಡೀರಿ ಹಾಡೊಂದಾ...

***

ರಾಯಚೂರಿನ ಅಸ್ಕಿಹಾಳದವರು. ಓದಿದ್ದು ಪತ್ರಿಕೋದ್ಯಮ. ದೆಹಲಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕ. ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೆ ಇಟ್ಟುಕೊಳ್ಳಿ(೨೦೧೦),ಜುಲುಮೆ(೨೦೧೪) (ಕವಿತೆ). ಕರ್ನಾಟಕ ಸಂಘ ಶಿವಮೊಗ್ಗದ ಡಾ.ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ(೨೦೧೦), ಡಾ.ಪು.ತಿ.ನ. ಕಾವ್ಯ ನಾಟಕ ಪುರಸ್ಕಾರ (೨೦೧೪), ಮತ್ತು ಬಿಡಿಗವಿತೆಗಳಿಗೆ ಸಂಚಯ, ಸಂಕ್ರಮಣ, ಪ್ರಜಾವಾಣಿಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಲಭಿಸಿವೆ. ಲಯಗಾರಿಕೆಯಿಂದ ಕೂಡಿದ ಇವರ ಕವಿತೆ, ಕಾವ್ಯಾಸಕ್ತರ ಗಮನ ಸೆಳೆದಿವೆ. ಇದಿಮಾಯಿ ಸಂಕಲನ, ಮತ್ತು ರಾಯಚೂರಿನ ದಲಿತ- ಬಂಡಾಯ ಚಳವಳಿಯ ದಿ. ಬೋಳಬಂಡೆಪ್ಪನ ಕುರಿತಾದ ಬದುಕು- ಬರಹಬಂಡಾಯದ ಬೋಳಬಂಡೆಪ್ಪ ಪ್ರಕಟಣೆಗೆ ಸಿದ್ಧಗೊಂಡಿವೆ.

ರಮೇಶ ಅರೋಲಿ
ರಮೇಶ ಅರೋಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT