ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಎಚ್.ಎಂ.ಕುಮಾರಸ್ವಾಮಿ ಅವರ ಕಥೆ: ಮನೆ

Published 27 ಜನವರಿ 2024, 23:30 IST
Last Updated 27 ಜನವರಿ 2024, 23:30 IST
ಅಕ್ಷರ ಗಾತ್ರ

ತನ್ನ ಘಾಸಿಗೊಂಡ ಮನಸ್ಸನ್ನು ಏಕಾಗ್ರಗೊಳಿಸಲು ಆತ ಎಲ್ಲಾ ಪ್ರಯತ್ನ ಮಾಡಿ ನೋಡಿದ. ಆದರೆ ಹೊರಗಿನಿಂದ ಒಳನುಗ್ಗಿ ಅಪ್ಪಳಿಸುತ್ತಿದ್ದ ಆ ಗರ್ರ್‌...ಗರ್ರ್‌...ಶಬ್ದ ಏಕಾಗ್ರತೆಯನ್ನು ತುಂಡರಿಸುತ್ತಿತ್ತು. ಆತ ಮನೆಯ ಮುಖ್ಯ ಬಾಗಿಲು, ಕಿಟಕಿಗಳನ್ನೆಲ್ಲಾ ಮುಚ್ಚಿಬಿಟ್ಟಿದ್ದ. ಆದರೂ ಆಕರ್ಷಕ ಶಬ್ದ ಒಳನುಸುಳುತ್ತ ಆತನನ್ನು ಅಶಾಂತಗೊಳಿಸುತ್ತಿತ್ತು. ಆ ಕೋಣೆಗೆ ಒಂದೇ ಒಂದು ಗವಾಕ್ಷಿ ಇತ್ತು. ಅದು ಎತ್ತರದಲ್ಲೇನೋ ಇತ್ತು. ಆದರೂ ಅದನ್ನೂ ಸಹ ಮುಚ್ಚಿಬಿಟ್ಟರೆ ಆ ಕರ್ಕಶ ಶಬ್ದ ಇನ್ನಷ್ಟು ಕಡಿಮೆಯಾಗಬಹುದೆಂದು ಯೋಚಿಸಿದ. ಅದರ ಕೆಳಗೆ ಇದ್ದ ಮೇಜಿನ ಮೇಲೆ ಒಂದು ಕುರ್ಚಿಯನ್ನು ತಂದಿಟ್ಟು ಬಹು ಪ್ರಯಾಸದಿಂದ ಮೇಲೆ ಹತ್ತಿ ಗವಾಕ್ಷಿಗೆ ಕೈಹಾಕಿದ. ಕೂಡಲೆ ಆ ಕಿಂಡಿಯೊಳಗೆ ಕಟ್ಟಿದ್ದ ಗೂಡಿನೊಳಗಿಂದ ಹಕ್ಕಿಯ ಪುಟ್ಟಮರಿಗಳು ಗಾಬರಿಯಿಂದ ಚೀಂವ್...ಚೀಂವ್ ಎಂದು ಕಿರುಚತೊಡಗಿದವು. ಮನುಷ್ಯನನ್ನು ಮೊದಲ ಬಾರಿಗೆ ಅವು ಎದುರಿಸುತ್ತಿದ್ದವು. ಬಹುಶಃ ಈತನ ಮುಖ, ಕಣ್ಣು ಅವುಗಳಿಗೆ ರಾಕ್ಷಸನ ಹಾಗೆ ಕಂಡಿರಬೇಕು. ಪಾಪ...! ಆ ಹಸಿಮರಿಗಳಿಗೆ ತೊಂದರೆ ಆಗಿ ಜೀವಹಾನಿ ಆಗಬಾರದೆಂಬ ಯೋಚನೆಯಿಂದ ಆತ ಗವಾಕ್ಷಿಯನ್ನು ಮುಚ್ಚದೆ ಕೆಳಗೆ ಇಳಿದ.

ಆತ ಕೊಠಡಿ ತುಂಬೆಲ್ಲ ಕಣ್ಣಾಡಿಸಿದ. ಮಂಚದ ಮೇಲೆ ಪುಸ್ತಕಗಳ ರಾಶಿಯೇ ಇತ್ತು. ಡೈನಿಂಗ್ ಟೇಬಲ್ ಮೇಲೆ ಎಂಜಲು ಲೋಟ-ತಟ್ಟೆ, ಬಾಳೆಹಣ್ಣಿನ ಸಿಪ್ಪೆ ಮತ್ತು ರಾತ್ರಿ ಆತ ತಿಂದಿದ್ದ ಕಬಾಬ್‌ನ ಸೀಕು, ಮೂಳೆಚೂರು ಬಿದ್ದಿದ್ದವು. ಮೂರುದಿನಗಳಿಂದ ಆತ ರೂಮಿನ ಸ್ವಚ್ಛತೆಯ ಕಡೆಗೆ ಗಮನಹರಿಸಿಯೇ ಇರಲಿಲ್ಲ. ತನ್ನ ಅಪೂರ್ಣ ಕತೆಯನ್ನು ಶಾಹಿದಾ ತವರಿನಿಂದ ಬರುವ ಮೊದಲು ಬರೆದು ಮುಗಿಸಿಬೇಕೆಂದಿದ್ದ ಆತ. ಆದರೆ ಮೂರು ದಿನಗಳಿಂದ ಹಾಳಾದ ಈ ಗರ‍್ರ್...ಶಬ್ದದಿಂದ ಆತನಿಗೆ ಒಂದು ಪ್ಯಾರಾವನ್ನೂ ಬರೆಯಲಾಗಿರಲಿಲ್ಲ.

ಸಂಜೆ ಟ್ರೈನ್‌ ಶಾಹಿದಾ ಮತ್ತು ಆಯತ್ ವಾಪಸು ಬರುವವರಿದ್ದರು. ಆತ ಯೋಚಿಸಿದ. ಟ್ರೈನ್‌ ಬರಲು ಇನ್ನೂ ನಾಲ್ಕು ಗಂಟೆ ಸಮಯವಿದೆ. ಮನಸ್ಸು ಶಾಂತವಾದರೆ ಒಂದೇ ಗಂಟೆಯಲ್ಲಿ ಕತೆಯನ್ನು ಬರೆದು ಮುಗಿಸಬಹುದು. ಆದರೆ ಈ ದರಿದ್ರ ಗರ್ರ್‌...ಗರ್ರ್‌...ಶಬ್ದ ಮನಸ್ಸನ್ನು ತಹಬದಿಗೆ ತರಲುಬಿಡುತ್ತಲೇ ಇಲ್ಲವಲ್ಲ...! ಸಿಡಿಮಿಡಿಗೊಂಡ ಆತ ಎರಡೂ ಕಿಟಕಿಗಳನ್ನು ತೆರೆದ. ಕೂಡಲೆ ಹೊಸ ಗಾಳಿಯ ಜೊತೆಜೊತೆಗೆ ಗರ್ರ್‌...ಗರ್ರ್‌...ಶಬ್ದವೂ ನುಗ್ಗಿಬಂದು ಆತನ ಕಿವಿಗೆ ಅಪ್ಪಳಿಸಿತು.

ಬಾಗಿಲು ತೆರೆದು ಆತ ಬಾಲ್ಕನಿಗೆ ಬಂದ. ಆಕಾಶದಲ್ಲಿ ಬಿಳಿಮೋಡಗಳು ಹರಡಿದ್ದವು. ಬೀಸುತ್ತಿದ್ದ ತಣ್ಣನೆಯ ಗಾಳಿಯಿಂದ ಮುದಗೊಂಡ ಆತ ಸ್ವಲ್ಪಹೊತ್ತು ಬಾಲ್ಕನಿಯಲ್ಲಿಯೇ ನಿಂತು ಎದುರಿನ ತೆರೆದ ಬಂಜರು ಮೈದಾನವನ್ನು ಗಮನಿಸಿದ. ಮೈದಾನದ ಬದಿಯಲ್ಲಿ ಮನೆಗಳ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದವರನ್ನು ನೋಡಿದ. ಹೆಣ್ಣಾಳುಗಳು ತಲೆಯ ಮೇಲೆ ಇಟ್ಟಿಗೆಯ ಬಾಂಡಲಿ ಹೊತ್ತು ಮೆಟ್ಟಿಲು ಹತ್ತುತ್ತಿದ್ದರು. ಆ ಕಡೆ ಕೆಲವರು ಗಾರೆ ಕಲಸುತ್ತಿದ್ದರು. ಆ ಬದಿಗೆ ಮತ್ತೊಂದೆರಡು ಮನೆಗಳ ಗಿಲಾವು ಕೆಲಸ ನಡೆದಿತ್ತು. ಮತ್ತೊಂದು ಮನೆಯ ಕೆಲಸ ಪೂರ್ಣಗೊಂಡು ಮನೆಯವರು ಖುಷಿಯಿಂದ ಆಚೆ-ಈಚೆ, ಒಳ-ಹೊರಗೆ ಸುತ್ತುತ್ತಿದ್ದರು. ಕೆಲಸಗಾರರು ಇಲ್ಲಿ ಕೆಲಸ ಮುಗಿದು ಬೇರೆ ಕಡೆಗೆ ಶಿಫ್ಟ್ ತಯಾರಿ ನಡೆಸಿದ್ದರು.

ಐದು ವರ್ಷಗಳ ಹಿಂದೆ ಆತ ಇಲ್ಲಿಗೆ ವಾಸ ಬಂದಾಗ ಇಲ್ಲಿ ಜನವಸತಿಯೇ ಇರಲಿಲ್ಲ. ಸುತ್ತಲೂ ಬೀಸಾದ ಮೈದಾನ, ಅಲ್ಲೊಂದು ಇಲ್ಲೊಂದು ದೂರ ದೂರದಲ್ಲಿ ಮನೆಗಳು ಅಷ್ಟೆ. ಹಾಶಿಮ್‌ನ ಜೇಬು ಸ್ವಲ್ಪ ಗಟ್ಟಿ ಇರುತ್ತಿದ್ದರೆ ಆತ ಈ ಬಡಾವಣೆಯನ್ನು ಬಿಟ್ಟು ಬೇರೆಯೇ ಪ್ರದೇಶದಲ್ಲಿ ಮನೆಯನ್ನು ಬಾಡಿಗೆಗೆ ಪಡೆಯುತ್ತಿದ್ದ. ಶಾಹಿದಾ ಕೂಡ ಕಿರಿಕಿರಿ ಮಾಡುತ್ತಿರಲಿಲ್ಲ. ಮನೆಯ ಈ ಲೊಕೇಷನ್ ನೋಡಿದ ತಕ್ಷಣ ಆಕೆ ಮೂಗು ಮುರಿದಿದ್ದಳು. ಹಾಶಿಮ್ ಹೇಗೋ ಆಕೆಯನ್ನು ಸಮಾಧಾನ ಪಡಿಸಿದ್ದ. ಗ್ರೌಂಡ್‌ಫ್ಲೋರ್‌ನಲ್ಲಿಯೇ ಮಾಲೀಕರ ಮನೆ, ಜೊತೆಗೆ ಇವರ ಬಾಡಿಗೆಯ ಮನೆಯೂ ಇದ್ದ ಕಾರಣ ಒಂದಿಷ್ಟು ಸಮಾಧಾನವೂ ಉಂಟಾಯಿತು.

ಒಂದು ಕಿರಿದಾದ ಕಿಚನ್, ಅಷ್ಟೇ ಸಣ್ಣದಾದ ವೆರಾಂಡ ಮತ್ತು ಒಂದು ಬೆಡ್‌ರೂಮ್ ಸೇರಿದಂತೆ ಮೂರು ಕೋಣೆಗಳಿದ್ದ ಆ ಮನೆಯ ಅತ್ಯಂತ ಆಹ್ಲಾದಕರ ತಾಣವೆಂದರೆ ಬಾಲ್ಕನಿ. ಹಾಶಿಮ್ ಅಲ್ಲದೆ ಶಾಹಿದಾ ಹಾಗೂ ಆಯತ್ ಕೂಡ ಈ ಬಾಲ್ಕನಿಯಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದರು. ತರಕಾರಿ ಕತ್ತಿರಿಸುವುದು, ಬಟ್ಟೆ ಕಟ್ ಮಾಡುವುದು, ಗುಂಡಿ ಹಚ್ಚುವುದು ಇತ್ಯಾದಿ ಕೆಲಸವನ್ನು ಶಾಹಿದಾ ಇಲ್ಲೇ ಮಾಡುತ್ತಿದ್ದಳು. ಜೊತೆಗೆ ಆಯತ್‌ಳನ್ನು ಹೊಂವರ್ಕ್ ಮಾಡಿಸಲು ಅಲ್ಲೇ ಕೂರಿಸಿಕೊಳ್ಳುತ್ತಿದ್ದಳು. ಆಯತ್ ಕೂಡ ಮೈದಾನದಲ್ಲಿ ಮೇಯುವ ಕುರಿಮಂದೆಯನ್ನು ನೋಡುತ್ತ ಸಮಯ ಕಳೆಯುತ್ತಿದ್ದಳು. ಹಾಶಿಮ್ ಸಂಜೆ ಆಫೀಸ್‌ನಿಂದ ಮನೆಗೆ ಬಂದ ಮೇಲೆ ರಾತ್ರಿ ಮಲಗುವಾಗ ಹಸು, ಕುರಿಗಳ ನೆಗೆದಾಟ, ಹಾಯ್ದಾಟ, ಚಿನ್ನಾಟದ ಕತೆಗಳನ್ನು ಹೇಳುತ್ತಿದ್ದಳು. ಕೆಲವು ಕರುಗಳಿಗೆ, ಕುರಿಮರಿಗಳಿಗೆ ಅವಳು ಹೆಸರನ್ನೇ ಇಟ್ಟುಬಿಟ್ಟಿದ್ದಳು. ಇವತ್ತು ಬ್ಲಾಕಿ ಮತ್ತು ಬ್ರೌನಿ ನಡುವೆ ದೊಡ್ಡ ಜಗಳವೇ ಆಯ್ತಪ್ಪ. ಓಗಿ ಹಾಗೂ ಲೂನಾ ಇಡೀ ದಿನ ಚಿನ್ನಾಟವಾಡಿದ್ದೇ ಆಡಿದ್ದು... ಆ ಶೌಂಕಿ ಮರದ ಮೇಲೆಯೇ ಹತ್ತಿಬಿಡ್ತು...” ಹೀಗೇ ಆಗಾಗ ಅವುಗಳ ಆಟದ ಕತೆಯನ್ನು ಹೇಳುತ್ತಿದ್ದಳು. ಒಂದು ದಿನ ಆಕೆ ಅಪ್ಪನಿಗೆ ಹೇಳಿದಳು... “ಅಪ್ಪಾ...ಅಪ್ಪಾ...ನಾನು ಇವತ್ತು ಆ ಮೈದಾನದಲ್ಲಿ ಒಂದು ಕಾರು ಬಂದು ನಿಂತದ್ದನ್ನು ನೋಡಿದೆ...”

ಆ ಬಂಜರು ಮೈದಾನದಲ್ಲಿ ಕಾರು ಬಂದುನಿಂತದ್ದು ವಿಶೇಷ ಸಂಗತಿಯೇ ಆಗಿತ್ತು. ಏಕೆಂದರೆ ಈ ಭಾಗ ನಗರದ ಕೊನೆಯ ತುದಿಗೆ ಹೊಂದಿಕೊಂಡಿದ್ದ ಕಾರಣ ಜನರ ಓಡಾಟ ವಿರಳವಾಗಿಯೇ ಇತ್ತು. ಹಾಶಿಮ್ ವಾಸವಾಗಿದ್ದ ಮನೆಯ ಮುಂದಿನ ಮೈದಾನದಲ್ಲಿ ದನಕರು, ಹಕ್ಕಿಪಕ್ಷಿಗಳೇ ಕಾಣಿಸಿಗುತ್ತಿದ್ದವು. ಈಗ ದನಕರುಗಳಿಗೆ ಬದಲಾಗಿ ಆಯತ್ ಈಗ ಕಾರನ್ನು ನೋಡಿದ್ದು ಆಶ್ಚರ್ಯಕ್ಕೆ ಕಾರಣವಾಗಿತ್ತು. ನಂತರ ಆಕೆ ಕಾರುಗಳ ಬಗ್ಗೆ ಹೇಳುತ್ತಿರುತ್ತಲೇ ಇದ್ದಳು. ಇವತ್ತು ಆಕೆ ಆಶ್ಚರ್ಯದಿಂದಲೇ ಹೇಳಿದಳು... “ಅಪ್ಪಾ...ಇವತ್ತು ನಾನು ಒಮ್ಮೆಲೆ ಆರು ಕಾರುಗಳನ್ನು ನೋಡಿದೆ. ಒಂದು ಬ್ಲೂ ಕಲರ್ ಕಾರು ಬಂದಿತ್ತು. ಅದ್ರಲ್ಲಿ ಒಬ್ಬರು ಬೈಯ್ಯಾ ತನ್ನ ಮಮ್ಮಿ ಜೊತೆ ಕಾರು ಇಳಿಯುತ್ತಿದುದ್ದನ್ನು ನಾನು ನೋಡಿದೆ...” ಕೂಡಲೆ ಆಕೆಯ ಮಾತಿನ ಮಧ್ಯೆ ಬಾಯಿಹಾಕಿದ ಹಾಶಿಮ್ ದನಕರುಗಳ ಬಗ್ಗೆ ಕುರಿಮರಿಗಳ ಚಿನ್ನಾಟದ ಬಗ್ಗೆ, ಬ್ಲಾಕಿ, ಬ್ರೌನಿ ಬಗ್ಗೆ ಕೇಳಿದ. ಆಗ ಬೇಸರದಿಂದ ಆಯತ್ ಹೇಳಿದಳು... “...ಇಲ್ಲ ಪಪ್ಪ., ಅವುಗಳಾವೂ ಈಗ ಇತ್ತಕಡೆ ಕಾಣಿಸಿಕೊಳ್ಳುವುದಿಲ್ಲ.

ಆಯತ್‌ಳ ಮಾತು ನಿಜವೇ ಆಗಿತ್ತು. ಆ ಬಂಜರು ಮೈದಾನದಲ್ಲಿ ಈಗೀಗ ದನಕರು, ಕುರಿಮಂದೆ ನಿಧಾನವಾಗಿ ಕಡಿಮೆಯಾಗುತ್ತಿವೆ. ಅವುಗಳ ಜಾಗದಲ್ಲಿ ಬಗೆಬಗೆಯ ವಾಹನಗಳು ಬಂದುಹೋಗುವುದು ನಡೆದಿದೆ. ಇದರ ಜೊತೆಗೆ ಮೈದಾನದಲ್ಲಿ ಅಲ್ಲಲ್ಲಿ ಸುಣ್ಣದ ಬಿಳಿ ಪಟ್ಟೆಗಳು ಕಾಣಿಸತೊಡಗಿವೆ. ನಂತರ ಟ್ರಕ್‌ಗಳ ಓಡಾಟ ಶುರುವಾಯಿತು. ಅದರೊಂದಿಗೆ ಅಲ್ಲಿ ಇಟ್ಟಿಗೆ, ಮರಳು, ಕಲ್ಲುಗಳ ರಾಶಿಗಳು ಬೀಳತೊಡಗಿದವು. ಮೈದಾನದ ಬೇರೆಬೇರೆ ಸ್ಥಳಗಳಲ್ಲಿ ಅಗೆಯುವ, ಗುಂಡಿಗಳನ್ನು ತೋಡುವ ಕೆಲಸ ಶುರುವಾಯಿತು. ಕ್ರಮೇಣ ಆ ಬರಡು ಮೈದಾನದಲ್ಲಿ ದೊಡ್ಡದೊಡ್ಡ ಮಶೀನುಗಳು ನಿರಂತರವಾಗಿ ಗಡಗಡಿಸಲಾರಂಭಿಸಿದವು. ನಿರ್ದಯವಾಗಿ ಭೂಮಿಯ ಎದೆಯನ್ನು ಬಗೆಯಲಾರಂಬಿಸಿದವು. ಮನುಷ್ಯ ತನ್ನ ಅವಶ್ಯಕತೆಯ ನೀರಿಗಾಗಿ ಆಧುನಿಕ ತಂತ್ರಜ್ಞಾನವನ್ನು ಹಣದ ಮೂಲಕ ತನ್ನದಾಗಿಸಿಕೊಳ್ಳುತ್ತ ಪುರಾತನಕಾಲದ ಬಾವಿಯ ನೀರನ್ನು ಸಾಮೂಹಿಕವಾಗಿ ಬಳಸುವ ಸೌಹಾರ್ದಯುತವಾದ ಆ ಸಾಂಘಿಕ ಪರಂಪರೆ ವಿಘಟಿತವಾಗುತ್ತ ಈ ಹಂತಕ್ಕೆ ಬಂದು ನಿಂತಿದೆ. ಸರಿಯಾಗಿ ಹೇಳಬೇಕೆಂದರೆ ಮನೆ ನಿರ್ಮಾಣದ ಪ್ರಥಮ ಹಂತ ಇಲ್ಲಿಂದ ನೀರು ತರುವ ಕ್ರಿಯೆಯಿಂದಲೇ ಪ್ರಾರಂಭವಾಗುತ್ತಿತ್ತು. ಆಗಲೂ ರಾಟೆಯ ಗರ್ರ್‌...ಗರ್ರ್..ಶಬ್ದ ಕೇಳಿಸುತ್ತಿತ್ತು. ಆದರೆ ಕರ್ಕಶವಾಗಿರಲಿಲ್ಲ.

ಆಯತ್‌ಳಿಗೆ ಈಗ ಬಾಲ್ಕನಿಯಲ್ಲಿ ಕುಳಿತು ವಿವಿಧ ಡಿಸೈನ್‌ಗಳ ಮನೆಗಳ ನಿರ್ಮಾಣ ಕೆಲಸವನ್ನು ನೋಡುವುದೇ ಒಂದು ಕೆಲಸವಾಗಿಬಿಟ್ಟಿತ್ತು. ದನಕರು, ಕುರಿ, ಮೇಕೆ ಹಾಗೂ ಅವುಗಳ ಮರಿಗಳ ಬಗ್ಗೆ ಮಾತಾಡುವ ಬದಲಿಗೆ ಆಯತ್ ಈಗ ವಿವಿಧ ಬಗೆಯ ಮನೆ ಹಾಗೂ ಡಿಸೈನ್‌ಗಳ ಕುರಿತಂತೆ ಮಾತನಾಡಲಾರಂಭಿಸಿದಳು. ಇಷ್ಟು ದೊಡ್ಡ ಮನೆಗೆ ಅಂಗಳವೇ ಇಲ್ಲ... ಆ ಮನೆಗೆ ಪೋರ್ಚ್ ಇಲ್ಲವೇ ಇಲ್ಲ. ಈ ಕಡೆ ಮನೆಗೆ ಜೋಕಾಲಿ ಹಾಕದಿದ್ದರೆ ಚೆನ್ನಾಗಿರುತ್ತಿತ್ತು...ಪಪ್ಪಾ., ನಾವು ಮನೆಕಟ್ಟಿಸಿದ ಮೇಲೆ ಅದಕ್ಕೆ ಬಿಳಿ ಬಣ್ಣವನ್ನೇ ಹೊಡೆಸುವಾ. ಬಿಳಿಬಣ್ಣ ತುಂಬಾ ಚೆನ್ನಾಗಿರುತ್ತೆ ಅಲ್ವಾ ಪಪ್ಪಾ...! “ಒಂದು ದಿನ ಆಕೆ ತನ್ನ ಅಪ್ಪನ ಎದುರಿಗೆ ಒಂದು ಯಕ್ಷಪ್ರಶ್ನೆಯನ್ನೇ ಹಾಕಿಬಿಟ್ಟಳು... “ಪಪ್ಪಾ., ನಾವು ಯಾವಾಗ ಮನೆ ಕಟ್ಟಿಸೋದು...?”

* * * * * *
ಟ್ರೈನ್ ನಿಗದಿತ ಸಮಯಕ್ಕೇನೇ ಬಂದಿತ್ತು. ಆಯತ್‌ಳ ಸ್ಕೂಲ್ ಫೀ, ಮನೆಕೆಲಸದವಳಿಗೆ ಸಂಬಳ, ಹಾಲಿನವನ ಬಾಕಿ ಮುಂತಾದ ಚಿಂತೆಗಳ ಸಭ್ಯ ಸವಾಲುಗಳ ಆತಂಕದ ನಡುವೆಯೂ ಆತ ಮುಖದ ಮೇಲೆ ಬಲವಂತದ ಖುಷಿಯನ್ನು ಆವಾಹಿಸಿಕೊಂಡು ನಗುತ್ತಲೇ ಅವರನ್ನು ಸ್ವಾಗತಿಸಿದ. ಆಯತ್ ಅಪ್ಪನನ್ನು ಕಂಡ ಕೂಡಲೇ ಓಡಿಬಂದು ಅಪ್ಪಿಕೊಂಡಿದ್ದಳು. ಶಾಹಿದಾಳ ಲಗೇಜ್‌ನೊಂದಿಗೆ ಈ ಸಾರಿ ಒಂದು ಪೋರ್ಟಬಲ್ ಟಿ.ವಿ.ಕೂಡ ಇತ್ತು. ಆಕೆ ಬಿಲಾಸ್‌ಪುರಕ್ಕೆ ಹೋದಾಗಲೆಲ್ಲಾ ಮನೆಗೆ ಬೇಕಾದ ಯಾವುದಾದರೊಂದು ವಸ್ತುವನ್ನು ತರುತ್ತಿದ್ದಳು. ಹಕ್ಕಿಯೊಂದು ಒಂದೊಂದೇ ಕಡ್ಡಿಯನ್ನು ತಂದು ಗೂಡು ಎಂಬ ಮನೆಯನ್ನು ಕಟ್ಟುವ ಹಾಗೆ ಶಾಹಿದಾ ತನ್ನ ಕುಟುಂಬಕ್ಕೆ ಬೇಕಾದ ಒಂದೊಂದೇ ಸಾಮಾನನ್ನು ಬಿಲಾಸ್‌ಪುರದಿಂದ ತಂದು ಜೋಡಿಸುತ್ತಿದ್ದಳು. ಅವರು ಅಲ್ಲಿಂದ ಇಲ್ಲಿಗೆ ಶಿಫ್ಟ್ ಆಗುವಾಗ ಅವರ ಬಳಿ ಬಟ್ಟೆಗಳನ್ನು ತುಂಬಿದ ಒಂದು ದೊಡ್ಡ ಬ್ಯಾಗ್ ಇತ್ತಷ್ಟೆ. ಅಡುಗೆಗೆ ಬೇಕಾದ ಕನಿಷ್ಟ ಆವಶ್ಯಕ ಪಾತ್ರೆ, ಪಗಡೆ, ಗ್ಯಾಸ್ ಒಲೆ, ಸ್ವಲ್ಪಮಟ್ಟಿನ ರೇಶನ್, ಫ್ಯಾನ್ ಇತ್ಯಾದಿಗಳನ್ನು ಆಕೆಯ ಅಕ್ಕ ವ್ಯವಸ್ಥೆ ಮಾಡಿದ್ದಳು.

ಒಂದು ದಿನ ಮಧ್ಯಾಹ್ನದ ಊಟದ ಹೊತ್ತಿನಲ್ಲಿ ಶಾಹಿದಾ ಗಂಡನನ್ನು ಕೇಳಿದಳು... “ನೀವು ಆಯತ್‌ಳಿಗೆ ಸುಳ್ಳು ಹೇಳುತ್ತ ಆಸೆಯನ್ನು ಏಕೆ ಹುಟ್ಟಿಸುತ್ತೀರಿ?”
“...ಸುಳ್ಳು ಆಸೆ...?”
“...ಹೌದು ಮತ್ತೆ...! ನಾವೂ ಮನೆ ಕಟ್ಟಿಸ್ತೇವೆ ಅಂತ ಹೇಳಿದ್ದೀರಲ್ಲ...! ನಮ್ಮಿಂದ ಮನೆ ಕಟ್ಟಸೋದಕ್ಕೆ ಆಗೋಲ್ಲ...ಅಂತ ನಿಜ ಹೇಳೋದಕ್ಕೆ ಆಗೋದಿಲ್ವಾ ನಿಮ್ಗೆ...?”
“...ಹಾಂ., ಹೇಳ್ದೆ. ಏನಾಯ್ತೀಗ...?” ನಮ್ಗೆ ಮನೆ ಕಟ್ಟಿಸೋದಕ್ಕೆ ಆಗೋದಿಲ್ಲ ಅಂತ ಹೇಳುತ್ತ ಅವಳ ಆಸೆಗೆ ತಣ್ಣೀರೆರಚಲು ನನ್ನಿಂದ ಸಾಧ್ಯವಿಲ್ಲ...”
ಆತ ಎದ್ದುಹೋಗಿ ಬಾಲ್ಕನಿಯಲ್ಲಿ ನಿಂತುಕೊಂಡಿದ್ದ. ಆತನ ಹಿಂದೆಯೇ ಶಾಹಿದಾ ಎಂಜಲು ಪಾತ್ರೆಗಳನ್ನು ತೆಗೆದುಕೊಂಡು ಒಂದು ಯಥಾಸ್ಥಾನದಲ್ಲಿ ಅವುಗಳನ್ನು ಇಟ್ಟು ದಾರದ ಮೇಲೆ ಒಣಹಾಕಿದ್ದ ಬಟ್ಟೆಗಳನ್ನು ತೆಗೆಯಲಾರಂಭಿಸಿದಳು.

ಹಾಶಿಮ್‌ನ ದೃಷ್ಟಿ ಯಾವಾಗಲೂ ಮೈದಾನದಲ್ಲೇ ನೆಟ್ಟಿರುತ್ತಿತ್ತು. ಬರಬರುತ್ತಾ ಅದು ಕಡಿಮೆಯಾಗುತ್ತಾ ಮಾಯಾವಾದಂತಾಗಿ ಬಿಟ್ಟಿತು. ದನಕರು, ಕುರಿ, ಮೇಕೆಗಳ ಮುಂದೆ ಹಾಗೂ ಸುತ್ತಮುತ್ತಲಿನ ಮರಗಿಡಗಳನ್ನು ಒಂದೋ ಭೂಮಿಯೇ ನುಂಗಿಹಾಕಿರುವ ಹಾಗೆ ಅಥವಾ ಆಕಾಶ ಆವಾಹನೆ ತೆಗೆದುಕೊಂಡ ಹಾಗೆ ಆಗಿಬಿಟ್ಟಿತ್ತು. ಆತ ಕಣ್ಣಂಚಿನಿಂದ ಶಾಹಿದಾಳ ಕಡೆಗೆ ನೋಡಿದ. ಅವಳು ಸಂಪೂರ್ಣವಾಗಿ ಭಾವಶೂನ್ಯಳಾಗಿಬಿಟ್ಟಿದ್ದಳು. ಆತ ದೀರ್ಘವಾಗಿ ಉಸಿರೆಳೆಯುತ್ತ ಯೋಚಿಸಿದ. ಅವಳೊಂದಿಗೆ ಏನಾದರೂ ಸ್ವಲ್ಪ ಮಾತಾಡಲೇ...! ನಿರಾಶೆಯ ಪಾಳುಬಾವಿಯಿಂದ ಅವಳನ್ನು ಮೇಲಕ್ಕೆತ್ತಿ ಧೈರ್ಯ ತುಂಬಲೇ...! ಅವಳು ನಗುನಗುತ್ತಾ ಹಾಡು ಗುನುಗಿಸುತ್ತಾ ಕನಸು ಕಾಣುವ ಹಾಗೆ ಏನಾದರೂ ಮಾಡಲೇ...! ಆದರೆ ಆತನಿಗೆ ಮಾತಾಡಲು ಆಗಲೇ ಇಲ್ಲ. ಇಬ್ಬರ ನಡುವೆ ಬಹಳ ಹೊತ್ತಿನ ತನಕ ಮೌನ ನೆಲೆಸಿತ್ತು. ಕೊನೆಗೆ ಹಗ್ಗದಿಂದ ತೆಗೆದ ಬಟ್ಟೆಗಳನ್ನು ಮಡಚುತ್ತಿದ್ದ ಶಾಹಿದಾಳೇ ಮೌನ ಮುರಿದು ಮಾತಾಡಿದ್ದಳು... “ಇಂದು ದಿವಾಕರ್‌ಜೀ ಬಂದಿದ್ದರು...”
“...ದಿವಾಕರ್‌ಜೀ...? ಏಕೆ?”
“...ಟೆರೇಸ್ ಮೇಲೆ ಮಳೆನೀರು ನಿಲ್ಲುತ್ತಿತ್ತಲ್ವಾ...ಪೈಪ್ ಕ್ಲೀನ್ ಮಾಡಿ ಡ್ರೈನೇಜ್‌ಗೆ ಹೋಗುವ ಹಾಗೆ ಮಾಡಲು...”
“...ಹೌದಾ...! ಆಮೇಲೆ...?”
“...ನಾನು ಬಾಗಿಲ ಬಳಿಯೇ ನಿಂತಿದ್ದೆ. ನನ್ನನ್ನು ನೋಡಿ ಅವರು ನಿಂತು ಮಾತು ಶುರುಮಾಡಿದರು...” ಈ ಪ್ರದೇಶ ಎಷ್ಟು ವೇಗವಾಗಿ ಬೆಳೆಯುತ್ತಿದೆ ನೋಡಿ. ಜಮೀನಿನ ಬೆಲೆ ಗಗನಕ್ಕೇರುತ್ತಿದೆ. ಮೇಲಾಗಿ ಇಲ್ಲಿ ಜಮೀನೇ ಸಿಗುತ್ತಿಲ್ಲ. ಬಾಡಿಗೆಗೆ ಮನೆ ಹುಡುಕುವವರೂ ಸಹ ಈ ಕಡೆಗೆ ಆಸಕ್ತಿ ತೋರಿಸುತ್ತಿದ್ದಾರೆ. ನಿಮ್ಗೆ ಹೇಳಲೇಬೇಕೆಂದರೆ ಕಳೆದೆರಡು ದಿನಗಳಿಂದ ಒಂದು ಡಜನ್‌ಗೂ ಹೆಚ್ಚು ಜನ ಮನೆ ಬಾಡಿಗೆಗೆ ಅಂತ ಕೇಳಿಕೊಂಡು ನನ್ನ ಹತ್ರ ಬಂದಿದ್ದಾರೆ...”
“...ಹಾಂ., ಅರ್ಥ ಆಯ್ತು...ಇಲ್ಲಿನ ಡೆವಲಪ್‌ಮೆಂಟ್ ನೋಡಿ ಅವ್ರಿಗೆ ತಡಕೊಳ್ಳೋದಕ್ಕೆ ಆಗ್ತಾ ಇಲ್ಲ ಅನ್ಸುತ್ತೆ. ಇದೆಲ್ಲಾ ಬಾಡಿಗೆ ಹೆಚ್ಚುಮಾಡುವ ಇರಾದೆ...” ಹಾಶಿಮ್ ಏರುದನಿಯಲ್ಲೇ ಹೇಳಿದ.

ಪೋರ್ಟಬಲ್ ಟಿ.ವಿ.ಯ ಆ ಕಿರಿದಾದ ಸ್ಕ್ರೀನ್‌ನಲ್ಲಿ ಮೂಡುತ್ತಿದ್ದ ಮಸುಮಸುಕಾದ ಚಿತ್ರಗಳೇ ಶಾಹಿದಾಳ ಸಮಯ ಕಳೆಯುವ ಸಾಧನವಾಗಿತ್ತು. ಹಾಶಿಮ್ ಅವಳಿಗೆ ಇಷ್ಟವಾದ ಸೀರಿಯಲ್‌ಗಳೇನು ಅದರಲ್ಲಿ ಬರುತ್ತಿರಲಿಲ್ಲ. ಆದರೂ ಅವಳು ಪುರುಸೊತ್ತು ಮಾಡಿಕೊಂಡು ಟಿ.ವಿ.ಮುಂದೆ ಕೂರುತ್ತಿದ್ದಳು. ಧಾನ್ಯಗಳಿಗೆ ಬೀಳುವ ಕೀಟ, ಹುಳುಗಳ ನಿವಾರಣೆ, ಕೃಷಿ ಮಾಹಿತಿ ಅಥವಾ ಶಾಸ್ತ್ರೀಯ ಸಂಗೀತದ ಅಡಿಯಲಿ ರಾಗ್ ಮಲ್ಹಾರ್ ಅಥವಾ ಬೇರಾವುದೋ ರಾಗ-ಆಲಾಪನೆ...ಇಷ್ಟವಿರದಿದ್ದರೂ ಕೇಳುತ್ತಿದ್ದಳು. ಆಗೆಲ್ಲ ಹಾಶಿಮ್ ಆಕೆಯನ್ನು ನೋಡಿದಾಗ ಅವನಿಗೆ ‘ಅಪ್ಪನ ಎದುರು ಮಕ್ಕಳು ಗೊಂಬೆಗಾಗಿ ಹಠ’ ಮಾಡುವ ಥರ ಅನ್ನಿಸುತ್ತಿತ್ತು. ಆತ ಹೇಗೋ ತಿಂಗಳ ಟಿ.ವಿ.ಚಾರ್ಜು ಇನ್ನೂರೈವತ್ತು ರೂಪಾಯಿ ಸಂದಾಯ ಮಾಡುತ್ತಿದ್ದ. ಆದರೆ ಸೆಕ್ಯೂರಿಟಿ ಡಿಪಾಸಿ಼ಟ್‌ಗೆ ಅಂತ ಒಂದುಸಾವಿರ ಜಮೆ ಮಾಡಲು ಆತನಿಂದ ಸಾಧ್ಯವೇ ಇರಲಿಲ್ಲ.

ಒಂದು ದಿನ ಟಿ.ವಿ.ಯಲ್ಲಿ ಸ್ಪಷ್ಟ ಚಿತ್ರಗಳು ಮೂಡುತ್ತಿದುದ್ದನ್ನು ನೋಡಿ ಹಾಶಿಮ್‌ಗೆ ಆಶ್ಚರ್ಯವೇ ಆಯಿತು. ಶಾಹಿದಾಳೇ ಆಂಟೆನಾ ತಿರುಗಿಸಿ ಸರಿಮಾಡಿರುವ ವಿಷಯ ಆಮೇಲೆ ತಿಳಿಯಿತು. ಅಮ್ಮ ಮತ್ತು ಮಗಳಿಗಂತೂ ಲಾಟರಿ ಹೊಡೆದಷ್ಟು ಖುಷಿಯಾಗಿತ್ತು.
ಅಂದು ಹಾಶಿಮ್ ಆಫೀಸಿನಿಂದ ಬಂದಾಗ ಟಿ.ವಿ.ಆಫ್ ಆಗಿತ್ತು. ಶಾಹಿದಾ ಹಾಸಿಗೆಯ ಮೇಲೆ ಬಿದ್ದುಕೊಂಡಿರುವುದನ್ನು ನೋಡಿದ. ಆತನಿಗೆ ಏನೋ ಅನಿಷ್ಟ ಕಾದಿದೆ ಎನಿಸಿತು. ಶಾಹಿದಾ ಎದ್ದು ಆತನಿಗೆ ಊಟ ಬಡಿಸುವಾಗ ಏನನ್ನೂ ಮಾತನಾಡಲಿಲ್ಲ. ಕೊನೆಗೆ ಆತನೇ ಕೇಳಿದ “...ಏನು ವಿಷಯ? ಇವತ್ತು ಟಿ.ವಿ.ಯನ್ನು ನೋಡುತ್ತಿಲ್ಲ ಯ್ಯಾಕೆ...?”
“...ಸುಮನ್ ಬಂದಿದ್ದಳು. ಜಗಳ ಮಾಡಿಹೋದಳು...?”
“...ಅರೇ ಯ್ಯಾಕೆ...?”
“...ನೀನು ಟಿ.ವಿ.ಕೇಬಲ್‌ಗೆ ಗುಂಡುಸೂಜಿ ಚುಚ್ಚಿದ್ದೀಯಾ...” ಎಂದಳು.
“...ಸರಿ., ಏನಾಯ್ತು ಈಗ?”
“...ಏನಾಯ್ತು ಅಂದ್ರೆ? ಕೇಬಲ್‌ಗೆ ನಾನು ಗುಂಡುಪಿನ್ ಚುಚ್ಚಿರೋದ್ರಿಂದ ಅವರ ಮನೆಯಲ್ಲಿ ಟಿ.ವಿ.ಸರಿಯಾಗಿ ಕಾಣಿಸ್ತಾ ಇಲ್ವಂತೆ. ಅವರ ಅಪ್ಪ ಕೇಬಲ್ ಆಪರೇಟರ್‌ಗೆ ಫೋನ್‌ಮಾಡಿ ಆತನನ್ನು ಕರೆಸಿದ್ರು. ಆಪರೇಟರ್ ಚೆಕ್‌ಮಾಡಿ ಆಲ್‌ಪಿನ್ ತೆಗೆದ. ಅವರ ಎದುರಿಗೇ ಸುಮನ್ ನನಗೆ ಏನೆಲ್ಲಾ ಕೆಟ್ಟದಾಗಿ ಹೇಳಿದಳು ಗೊತ್ತಾ...! ಮುಂದೆ ಮಾತಾಡಲಾರದೇ ಶಾಹಿದಾ ಬಿಕ್ಕಲಾರಂಭಿಸಿದ್ದಳು.
ಮಾರನೇ ದಿನ ಹಾಶಿಮ್‌ಗೆ ವಾರದ ರಜೆ ಇತ್ತು. ಹಿಂದಿನ ದಿನದ ಘಟನೆಯಿಂದ ಆತನ ಮೂಡ್ ಹಾಳಾಗಿ ಹೋಗಿತ್ತು. ವಾರದ ರಜೆ ಇದ್ದರೂ ಹಾಶಿಮ್ ಬೆಳಿಗ್ಗೆಯೇ ಮನೆಯಿಂದ ಹೊರಟಿದ್ದ. ಆಗ ಶಾಹಿದಾನೂ ಅವನನ್ನು ಕೇಳಲಿಲ್ಲ. ಆತ ಸಂಜೆ ಮನೆಗೆ ಬಂದಾಗ ಲವಲವಿಕೆಯಿಂದ ಇದ್ದ. ಬಂದವನೇ ಶಾಹಿದಾಗೆ ಹೇಳಿದ “...ಬೇಗ ರೆಡಿಯಾಗು ಇವತ್ತು ನಾವು ಹೊರಗೆ ಸುತ್ತಾಡಿಕೊಂಡು ಬರೋಣ...”

ಎಷ್ಟೋ ತಿಂಗಳುಗಳ ನಂತರ ಹಾಶಿಮ್ ನೀಡಿದ ಈ ಆಫರ್‌ನಿಂದ ಶಾಹಿದಾಗೆ ಖುಷಿಯಾದರೂ ಆಕೆ ಕೂಡಲೇ ತನ್ನ ಸಮ್ಮತಿಯನ್ನು ನೀಡಲಿಲ್ಲ. ಹಾಗಾಗಿ ಆಕೆಯನ್ನು ಒಪ್ಪಿಸಿ ತಯಾರಾಗುವಂತೆ ಮಾಡಲು ಹಾಶಿಮ್ ಸಾಕಷ್ಟು ಕಸರತ್ತು ಮಾಡಬೇಕಾಯಿತು. ಕೊನೆಗೂ ಶಾಹಿದಾ ರೆಡಿಯಾಗುತ್ತಾ ಕೇಳಿದ್ದಳು “...ಹೊರಗೆ ಹೋಗೋಣ ಅಂತಿದ್ದೀರಲ್ಲಾ...ಜೇಬಿನಲ್ಲಿ ದುಡ್ಡು ಇದೇ ತಾನೇ...!”

“...ಅರೇ., ನೀನು ಹೊರಡು ಅಷ್ಟೆ...!” ಹಾಶಿಮ್ ಶರ್ಟ್ ಬದಲಾಯಿಸುತ್ತ ಹೇಳಿದ “...ಇವತ್ತು ಜೈಂಟ್‌ವೀಲ್‌ನಲ್ಲಿ ಕೂರೋಣ. ಸ್ಪೆಷಲ್ ಬಿರಿಯಾನಿಗೆ ಹೋಗೋಣ. ಹಾಗೇನೇ ಆಯತ್‌ಳಿಗೆ ಶಾಪಿಂಗ್ ಕೂಡ ಮಾಡಿಸೋಣ...”
ಜೈಂಟ್‌ವೀಲ್, ಶಾಪಿಂಗ್ ಮುಗಿದಾಗ ಶಾಹಿದಾಳಿಗೆ ಹಿಂದಿನ ದಿನದ ಕಹಿ, ಕಿರಿಕಿರಿ ಮರೆತು ಹೋಗಿತ್ತು. ಹೋಟೆಲ್‌ನಲ್ಲಿ ಊಟಕ್ಕೆ ಕುಳಿತಿದ್ದಾಗ ಆಯತ್ ಜೊತೆಗೆ ತುಂಟಾಟ ಕೂಡ ಶುರುಮಾಡಿದ್ದಳು. ಎಷ್ಟೋ ಸಮಯದ ನಂತರ ಇಬ್ಬರೂ ಖುಷಿಯಾಗಿರುವುದನ್ನು ಕಂಡು ಹಾಶಿಮ್ ‘ಇದಕ್ಕಿಂತ ದೊಡ್ಡ ಇನಾಮು ಬೇರೊಂದಿಲ್ಲ’ ಎಂದುಕೊಂಡ. ಹೌದು., ಮೇಲಿನವನು ಬೆನ್ನು ನೋಡಿ ಬೆತ್ತ ಬೀಸುತ್ತಾನೆ. ಹಾಗೇನೇ ಸಮಯ, ಸಂದರ್ಭ ನೋಡಿಕೊಂಡು ಬೆನ್ನನ್ನು ನಯವಾಗಿ ತಡವುತ್ತಾನೆ ಕೂಡ’.

* * * * * *
ಬಹಳ ಸಮಯದಿಂದ ಪತ್ರಕರ್ತರಿಗೆ ವಸತಿಗಾಗಿ ಜಮೀನು ಮಂಜೂರು ಮಾಡಿಸುವ ಪ್ರಯತ್ನ ಸಾಗಿತ್ತು. ನಿರಂತರ ಪ್ರಯತ್ನದ ಫಲವಾಗಿ ಈಗ ಕಂದಾಯ ಮಂತ್ರಿಗಳು ತಮ್ಮ ಅನುಮೋದನೆ ನೀಡಿದ್ದರು. ಶಾಹಿದಾಗೆ ಈ ವಿಷಯ ಹೇಳಿದಾಗ ಆಕೆ ನಂಬಲೇ ಇಲ್ಲ. ಏಕೆಂದರೆ ಶಾಹಿದಾ ಇದರ ಆಸೆಯನ್ನು ಬಿಟ್ಟುಬಿಟ್ಟಿದ್ದಳು. “...ಮಂತ್ರಿ ಮತ್ತು ಅಧಿಕಾರಿಗಳು ಪತ್ರಕರ್ತರನ್ನು ಆಸೆ ಹುಟ್ಟಿಸಿ ಮಂಗಮಾಡುತ್ತಿದ್ದಾರೆ ಅಷ್ಟೆ...” ಎನ್ನುತ್ತ ಮುಖ ತಿರುಗಿಸಿದ್ದಳು. ಅವಳನ್ನು ನಂಬಿಸಲು ಹಾಶಿಮ್‌ಗೆ ಸಾಕು-ಬೇಕಾಯಿತು. ಆದರೆ ಆಯತ್ ಮಾತ್ರ ಖುಷಿಯಿಂದ ಕುಪ್ಪಳಿಸುತ್ತಾ ಹೇಳಿದಳು “...ಹೌದು ಮಗಳೆ...! ಹಾಶಿಮ್ ಪ್ರೀತಿಯಿಂದ ಮಗಳ ತಲೆಯನ್ನು ನೇವರಿಸತೊಡಗಿದ. ಶಾಹಿದಾ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸುವ ಹಾಗೆ ಅದೇನೋ ಗುನುಗುತ್ತಿದ್ದಳು.
“...ಅದೆಲ್ಲಾ ಸರಿ., ಇವತ್ತು ಇಷ್ಟೊಂದು ದಿಲ್‌ದಾರಾಗಿ ಖರ್ಚು ಮಾಡಿದಿರಲ್ಲ. ಅಷ್ಟೊಂದು ದುಡ್ಡು ಎಲ್ಲಿಂದ ಬಂತು...?” ಶಾಹಿದಾ ಮನೆಗೆ ತಲುಪಿದ ಕೂಡಲೆ ಕೇಳಿದಳು.

“...ನಾನು ಮೂರು ದಿನದಿಂದ ಕೆಲಸ ಮಾಡುತ್ತಿದ್ದ ಸುದ್ದಿಯನ್ನು ಇಂದು ನಾನು ಡ್ರಾಪ್ ಮಾಡಿದೆ. ನನ್ನ ನಾಲಾಯಕ್ ಬಾಸ್‌ಗೆ ಅದರಲ್ಲಿ ತಪ್ಪೇ ಕಾಣಿಸುತ್ತಿತ್ತು. ಒಮ್ಮೆ ಆತ ಇದರ ಪಂಚ್‌ಲೈನ್ ಸರಿಯಾಗಿಲ್ಲ ಎನ್ನುತ್ತಿದ್ದ. ಮತ್ತೊಮ್ಮೆ ಫೋಟೋ ಯ್ಯಾಂಗಲ್ ಹೀಗಲ್ಲ ಹಾಗೆ, ಅಧಿಕಾರಿಯ ಜೊತೆ ನೇರವಾಗಿ ಮಾತಾಡಬೇಕಾಗಿತ್ತು... ಹೀಗೆ ಒಂದಿಲ್ಲೊಂದು ಕೊಂಕು ತೆಗೀತಿದ್ದ...”
“...ಆಮೇಲೆ...”
“...ಆಮೇಲೆ ಏನು? ಬಾಸ್ ಸೂಚನೆಯಂತೆ ಪೂರ್ತಿ ಸ್ಟೋರಿಯನ್ನು ರೀರೈಟ್ ಮಾಡಿದೆ. ಅಧಿಕಾರಿಯ ಜೊತೆ ಮಾತಾಡಿದೆ ಕೂಡ. ಆದ್ರೆ ಬಾಸ್ ಇವತ್ತೂ ಕೂಡ ಅದನ್ನು ಪಬ್ಲಿಷ್ ಮಾಡಲಿಲ್ಲ...”
“...ಅಯ್ಯೋ ಯ್ಯಾಕೆ...?”
“...ಈಚೀಚೆಗೆ ಅವರಿಗೆ ನನ್ನ ಸುದ್ದಿಯಲ್ಲಿ ಸ್ವಾರ್ಥವೇ ಕಾಣಿಸುತ್ತಂತೆ.
ಈ ಸ್ಟೋರಿಯಂತೂ ಇನ್‌ಟೆನ್ಷನಲಿ ಮಾಡಿದ ಹಾಗಿದೆ ಎಂದು ನೆನ್ನೆ ಹೇಳುತ್ತಿದ್ದರು...”
“...ನೀವು ಹಾಗೆ ಮಾಡಿದ್ದೀರಾ...?” ಶಾಹಿದಾ ಪ್ರಶ್ನಿಸಿದಳು.
“...ಇಲ್ಲ., ಸರ್ಕಾರಿ ಯೋಜನೆಯ ಪ್ರಕಾರ ಬಡವರಿಗೆ ಮನೆಗಳನ್ನು ಕಟ್ಟಿಸಲಾಗುತ್ತಿದೆ ಈ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಅದಕ್ಕೇ ನಾನು ಮನೆಗಳ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡಿದ್ದೆ...”
“...ಹಾಂ., ಅಂತಹ ಸುದ್ದಿಗಳೇ ಪ್ರಕಟವಾಗಬೇಕು...”
“...ಆದ್ರೆ ಆ ಸುದ್ದಿ ಪ್ರಕಟವಾಗುವುದಿಲ್ಲ...”ಹಾಶಿಮ್ ಅನ್ಯಮನಸ್ಕನಾಗಿ ಮಾತು ಮುಂದುವರೆಸಿದ “...ಇವತ್ತೂ ಕೂಡ ಪತ್ರಿಕೆಯಲ್ಲಿ ಆ ಸುದ್ದಿ ಇಲ್ಲದ್ದನ್ನು ನೋಡಿ ನಾನು ಸೀದಾ ಗುತ್ತಿಗೆದಾರನ ಬಳಿಗೆ ಹೋದೆ. ನೆನ್ನೆಯೇ ಆತ ‘ಯಾವಾಗಲಾದ್ರೂ ಬನ್ನಿ. ಒಟ್ಟಿಗೆ ಚಹಾ ಕುಡಿಯೋಣ’ ಎಂದಿದ್ದ.
“...ಅಂದ್ರೆ., ನೀವು ಅವರಿಂದ ದುಡ್ಡು ಪಡೆದಿರಾ...?” ಶಾಹಿದಾ ತಕ್ಷಣ ಕೇಳಿದಳು.
“...ಹೌದು., ಬೇರೆ ಏನೂ ಮಾತಾಡಬೇಡ...” ಹತಾಶೆಭಾವದಿಂದ ಹೇಳಿದ ಹಾಶಿಮ್ ಜೇಬಿನಲ್ಲಿ ಉಳಿದಿದ್ದ ಬಾಕಿ ಹಣವನ್ನು ತೆಗೆದು ಆಕೆಯ ಕೈಗೆ ಇಡುತ್ತ “...ಮೂರುಸಾವಿರ ಇತ್ತು. ನೆನ್ನೆ ಒಂದು ಸಾವಿರ ಖರ್ಚಾಯಿತು. ಬಾಕಿ ಈ ಹಣ ತಗೊ. ಹಾಲಿನವನ ಬಾಕಿ ಹಾಗೂ ಕೆಲಸದವಳ ಲೆಖ್ಖ ಚುಕ್ತಾ ಮಾಡಿಬಿಡು. ಉಳಿದದ್ದರಲ್ಲಿ ಸ್ವಲ್ಪ ರೇಷನ್ ತಗೊಂಡು ಬಾ. ಅಷ್ಟರಲ್ಲಿ ಸಂಬಳ ಕೂಡ ಬಂದುಬಿಡುತ್ತೆ...”

“...ಆದ್ರೆ...?” ಶಾಹಿದಾ ಆತಂಕಗೊಂಡು ಕೇಳಿದಳು. ನಾಳೆ ಯಾವ ಸ್ಟೋರಿ ಮಾಡ್ತಿರಿ?
ನಿರ್ಲಿಪ್ತನಾಗಿ ಹಾಶಿಮ್ ಹೇಳಿದ “...ಏನಾದರೊಂದು ಮಾಡಿದರಾಯ್ತು...” ಆ ಕಾಲೋನಿಯಲ್ಲಿ ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿದೆ. ನಿವಾಸಿಗಳಿಂದ ದೂರು ಬರುತ್ತಿದೆ. ಹೀಗೇ ಯಾವುದಾದರೊಂದು ಸ್ಟೋರಿ ಸಿಗುತ್ತೆ...”
ಮಾರನೆದಿನ ಆಫೀಸ್‌ಗೆ ಹೋಗಲು ಹಾಶಿಮ್ ಕೆಳಗೆ ಇಳಿದಾಗ ಶಾಹಿದಾ ಆತನ ಹಿಂದೆಯೇ ಬಂದು ಹಾಶಿಮ್ ಕೈಗೆ ಇನ್ನೂರು ರೂಪಾಯಿಗಳನ್ನು ಇಟ್ಟು “...ನೋಡಿ., ಸ್ಕೂಟರ್ ಬ್ರೇಕ್ ಸರಿಯಿಲ್ಲ ಅಂತಾ ಬಹಳ ದಿನಗಳಿಂದ ಹೇಳ್ತಾ ಇದ್ದೀರಿ. ಯಾವುದು ಏನಾದ್ರೂ ಆಗಲಿ, ಇವತ್ತು ಸ್ಕೂಟರ್ ರಿಪೇರಿಮಾಡಿಸಿಕೊಂಡು ಬನ್ನಿ. ಹಾಂ., ಹೋಗ್ತಾ ಜಾಗ್ರತೇಲಿ ಹೋಗಿ...” ಎಂದು ಒಂದೇ ಉಸುರಿಗೆ ಹೇಳಿದ್ದಳು.

* * * * * *
ಸಂಜೆ ಶಾಹಿದಾ ಅಲಮೇರಾದಿಂದ ತನಗಿಷ್ಟವಾದ ಒಂದು ಸೀರೆಯನ್ನು ತೆಗೆದುಕೊಂಡು ಉಟ್ಟು ಕನ್ನಡಿ ಎದುರಿಗೆ ಬಹಳ ಹೊತ್ತು ತನ್ನನ್ನೇ ನೋಡುತ್ತಾ ನಿಂತಿದ್ದಳು. ಅದೇ ಹೊತ್ತಿಗೆ ಆಯತ್ ಸ್ಕೂಲ್‌ನಿಂದ ಬಂದು ಅಮ್ಮನನ್ನು ನೋಡಿ “...ಅರೇ., ವಾಹ್...! ಅಮ್ಮ ಇವತ್ತು ನೀನು ನಿಜವಾಗ್ಲೂ ಅಪ್ಸರೆಯ ಹಾಗೆ ಕಾಣಿಸ್ತಿದ್ದೀಯಾ...!” ಎಂದು ಹೇಳಿದಳು.

ಶಾಹಿದಾ ನಸುನಗುತ್ತಾ ಮಗಳನ್ನು ಮುದ್ದಾಡಿ ಆಕೆಯ ಯೂನಿಫಾರಂ ಬದಲಾಯಿಸಿ ತಿಂಡಿಕೊಟ್ಟು ಹೋಂವರ್ಕ್ ಮಾಡಲು ಇಬ್ಬರೂ ಬಾಲ್ಕನಿಗೆ ಬಂದರು. ಮನೆಗಳ ನಿರ್ಮಾಣ ಕೆಲಸ ನಿರಂತರವಾಗಿ ಸಾಗಿತ್ತು. ದಿವಾಕರ್‌ಜೀಯವರ ಮನೆಯ ಗೋಡೆಗೆ ಅಂಟಿಕೊಂಡ ಹಾಗೆ ಮನೆಗಳು ಮೇಲೇಳುತ್ತಿದ್ದವು. ಈಗ ಬಾಲ್ಕನಿಯಲ್ಲಿ ನಿಂತು ಮೊದಲಿನ ಹಾಗೆ ಸುತ್ತಲೂ ನೋಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಅವರು ಬಾಲ್ಕನಿಗೆ ಯಾವಾಗಲಾದರೊಮ್ಮೆ ಹೋಗುತ್ತಿದ್ದರು. ಅವರ ಸಮಯ ಹೆಚ್ಚಾಗಿ ಈಗ ಟಿ.ವಿ.ಮುಂದೆಯೇ ಕಳೆದುಹೋಗುತ್ತಿತ್ತು.

ಹಾಶಿಮ್ ಆಫೀಸ್‌ನಿಂದ ಬರುವ ವೇಳೆಗೆ ಸಾಮಾನ್ಯವಾಗಿ ಆಯತ್ ಮಲಗಿಬಿಡುತ್ತಿದ್ದಳು. ಆದರೆ ಅವತ್ತು ಶಾಹಿದಾಳೇ ಟಿ.ವಿ.ಆನ್ ಮಾಡಿದ್ದಳು. ಬರುತ್ತಿದ್ದ ಕಾರ್ಟೂನ್ ಸಿನಿಮಾ ಆಯತ್‌ಳಿಗೆ ಹಿಡಿಸಿದ್ದರಿಂದ ಆಕೆ ಅಮ್ಮ ಮಲಗಲು ಹೇಳಿದರೂ ಟಿ.ವಿ.ಮುಂದೆಯೇ ಕುಳಿತುಬಿಟ್ಟಿದ್ದಳು. ಯಾವುದಾದರೂ ಸ್ಕೂಟರ್ ಬಂದ ಶಬ್ದ ಕೇಳಿಸಿದಾಗ ಒಂದೆರಡು ಸಾರಿ ಶಾಹಿದಾ ಬಾಗಿಲ ಬಳಿ ಹೋಗಿ ನೋಡಿಬಂದಿದ್ದಳು. ಹಾಶಿಮ್ ಆಫೀಸ್‌ನಿಂದ ಬರೋದಕ್ಕೆ ನಿಶ್ಚಿತ ಸಮಯವೇನೂ ಇರಲಿಲ್ಲ. ಇದು ಶಾಹಿದಾಗೆ ಗೊತ್ತಿದ್ದರೂ ಇಂದೇಕೋ ಒಳಗೊಳಗೇ ಚಡಪಡಿಸುತ್ತಿದ್ದಳು. ಹಾಗಾಗಿ ಮತ್ತೆರಡು ಸಾರಿ ಆಕೆ ಬಾಗಿಲ ಬಳಿ ಹೋಗಿ ಬಂದಿದ್ದಳು. ಹಾಶಿಮ್‌ನ ಅಸಹಾಯಕತೆ ಆಕೆಗೆ ಅರ್ಥವಾಗಿತ್ತು. ಆದರೂ ಏನೋ ಒಂದು ವ್ಯವಸ್ಥೆ ಆಗಬಹುದೆಂಬ ಸಮಾಧಾನದಿಂದ ಹಿಂದಿನ ದಿನದ ಬೇಸರವನ್ನು ಮರೆತು ಶಾಹಿದಾ ಗಂಡನ ನಿರೀಕ್ಷೆಯಲ್ಲಿದ್ದಳು.

ಕಾರ್ಟೂನ್ ನೋಡುವುದರಲ್ಲಿಯೇ ತಲ್ಲೀನಳಾಗಿದ್ದ ಆಯತ್‌ನ ಪಕ್ಕದಲ್ಲಿಯೇ ಹೋಗಿ ಕುಳಿತ ಶಾಹಿದಾ ಮಗಳನ್ನು ಇನ್ನಾದರೂ ಮಲಗುವಂತೆ ಒತ್ತಾಯಿಸಿದಳು. ಆದರೆ ಆಯತ್ ಬಿಲ್‌ಕುಲ್ ಒಪ್ಪಲಿಲ್ಲ.
ಅಸ್ಪಷ್ಟವಾಗಿ ಮೂಡುತ್ತಿದ್ದ ಚಿತ್ರದ ನಡುವೆಯೇ ಇದ್ದಕ್ಕಿದ್ದ ಹಾಗೆ ಒಂದು ಬ್ರೇಕಿಂಗ್ ನ್ಯೂಸ್ ಬರಲಾರಂಭಿಸಿತು. ಇಬ್ಬರೂ ಕಣ್ಣಗಲಿಸಿ ನೋಡಲಾರಂಭಿಸಿದರು. ಚಿತ್ರ ಮತ್ತು ಶಬ್ದ ಸ್ಪಷ್ಟವಾಗಿ ಕಾಣಿಸದಿದ್ದರೂ ವಿಷಯ ಅವರಿಗೆ ಅರ್ಥವಾಗುತ್ತಾ ಹೋಯಿತು. ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯೊಂದು ಹಠಾತ್ತನೆ ಕುಸಿದುಬಿದ್ದಿದೆ. ಅದರ ಅಡಿಯಲ್ಲಿ ಸಿಲುಕಿ ಅಪಾರ ಜೀವಹಾನಿಯಾಗಿದೆ. ಗಾಯಗೊಂಡ ಅಸಂಖ್ಯ ಜನರನ್ನು ಅಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ...

ಶಾಹಿದಾ ಅಷ್ಟಾಗಿ ಆ ನ್ಯೂಸ್ ಕಡೆಗೆ ಗಮನಹರಿಸುತ್ತಿರಲಿಲ್ಲ. ಆದರೆ ಆಯತ್ ಕುತೂಹಲದಿಂದ ನೋಡುತ್ತಿದ್ದಳು. ಆಕೆ ಇದ್ದಕ್ಕಿದ್ದ ಹಾಗೆ ಜೋರಾಗಿ ಹೇಳಿದಳು “...ಮಮ್ಮಿ...ನೋಡು., ರಸ್ತೆಯ ಮೇಲೆ ಬಿದ್ದಿರುವ ಆ ಬ್ಯಾಗನ್ನು. ಅದು ಅಪ್ಪನ ಬ್ಯಾಗ್‌ನ ಹಾಗೆ ಕಾಣಿಸುತ್ತಿದೆ...” ಮತ್ತೆ ಕೆಲಕ್ಷಣದ ನಂತರ ಆಯತ್ ಕಿರುಚಿ ಹೇಳಿದಳು “...ಮಮ್ಮೀ ನೋಡು...ಆ ಸ್ಕೂಟರ್ ಅಪ್ಪನದ್ದೇ...ಮಮ್ಮಿ...ಮಮ್ಮೀ...ಶಾಹಿದಾ ಮಾತಾಡಲಿಲ್ಲ.
ಆಯತ್ ಮತ್ತೊಮ್ಮೆ ಅಮ್ಮನನ್ನು ಅಲ್ಲಾಡಿಸುತ್ತ ಅರುಚಿದಳು. ಮಮ್ಮೀ...ನೋಡು...ಆ ಸ್ಕೂಟರ್...
ಶಾಹಿದಾ ಮೂರ್ಚೆ ಹೋಗಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT