ಹೊರಗಡೆ ಒಂದೇ ಸಮನೆ ಧೋ ಎಂದು ಸುರಿಯುವ ಮಳೆ. ಗುಡುಗು, ಮಿಂಚು, ಸಿಡಿಲಿನ ಅಬ್ಬರ. ನೋಡು ನೋಡುವುದರೊಳಗೆ ಮನೆಯ ಅಂಗಳದಲ್ಲಿ ತೇಲಾಡಿದ ನೀರು. ಅಂಗಳದ ನೀರ ಮೇಲೆ ಬಿದ್ದ ಮಳೆ ಹನಿ ಟಪ್ ಟಪ್ ಅಂತ ಶಬ್ದ ಮಾಡಿ ಗುಳ್ಳೆಗಳನ್ನೆಬ್ಬಿಸಿ ಅದರೊಳಗೆ ಲೀನವಾಗುತ್ತಲಿತ್ತು. ಎಡೆಬಿಡದೆ ಸುರಿದ ಮಳೆ ಕ್ಷಣಾರ್ಧದಲ್ಲಿಯೇ ನೆಲ ತಂಪಾಗಿಸಿತು. ಮಳೆ ನಿಂತರೂ ಆಗೊಮ್ಮೆ, ಈಗೊಮ್ಮೆ ಮಿಂಚು ಮಿಂಚಿ ಕತ್ತಲು ಬೆಳಕಿನಾಟವಾಡುತಲಿತ್ತು. ಇದೆಲ್ಲವನ್ನು ತದೇಕ ಚಿತ್ತದಿಂದ ನೋಡುತ್ತ ನಿಂತಿದ್ದ ರಾಜಕುಮಾರನಿಗೆ ಒಳ ಮನೆಯಲ್ಲಿ ಅಪ್ಪನ ನರಳಾಟ ಕಿವಿಗೆ ಬಿದ್ದು ಅತ್ತ ಓಡಿದ.

ರಾಜಕುಮಾರನ ಅಪ್ಪ ಸಾಹುಕಾರ ಸಿದ್ದಪ್ಪ ಹಾಸಿಗೆ ಹಿಡಿದು ಆರು ತಿಂಗಳಾಗಿತ್ತು. ಯಾವೊತ್ತು ಏನಾಗುವುದೋ ಎಂಬ ಆತಂಕ ಎಲ್ಲರ ಕಾಡುತಲಿತ್ತು. ಗಂಡನ ಕಾಯಿಲೆಯ ಚಿಂತೆಯಲ್ಲಿ ಸಾವಿತ್ರಿ ಕೊರಗುತ್ತಿದ್ದಳು. "ಈಗ ಹೇಗಿದೆ, ಏನಾದರು ಚೇತರಿಕೆ ಕಾಣುತ್ತಿದೆಯೇ?" ನೆರೆ-ಹೊರೆಯವರು ವಿಚಾರಿಸಿದಾಗಲೆಲ್ಲಾ ಅವಳು ಮಾತು ಹೊರಡದೆ ಕಣ್ಣೀರಾಗುತ್ತಿದ್ದಳು. " ಸಾವಿತ್ರಿ ಅವರಿಗೆ ಏನೂ ಆಗಲ್ಲ, ಎಲ್ಲಾ ಸರಿಯಾಗುತ್ತೆ ನೀ ಅದೇ ಚಿಂತೆಯೊಳಗೆ ಕೊರಗಬೇಡ. ಎಲ್ಲದಕ್ಕೂ ದೇವರಿದ್ದಾನೆ' ಜನರ ಸಮಾಧಾನದ ಮಾತು ಅವಳಲ್ಲಿ ಸ್ವಲ್ಪ ಧೈರ್ಯ ತಂದರೂ ಗಂಡ ಬದುಕುಳಿಯುವ ಭರವಸೆಯೇ ಇಲ್ಲವಾಗಿ ಅವಳ ಉಸಿರು ನಿಟ್ಟುಸಿರಾಗಿ ಹೊರ ಹೊಮ್ಮುತಿತ್ತು. ದೃಢಕಾಯನಾಗಿದ್ದ ಸಾಹುಕಾರ ಸಿದ್ದಪ್ಪ ಹಾಸಿಗೆ ಹಿಡಿದ ಆರು ತಿಂಗಳೊಳಗೆ ಬಾಡಿ ಬತ್ತಿ ಹೋಗಿದ್ದ. ರಕ್ತ, ಮಾಂಸ ಕರಗಿ ಕೈಕಾಲಲ್ಲಿ ಕಸುವು ಇಲ್ಲದೆ ಹಾಸಿಗೆಯಲ್ಲೆ ಎಲ್ಲ ಮಾಡತೊಡಗಿದ. "ಸಾವಿತ್ರಿ ನಾನಿನ್ನು ಉಳಿಯಲ್ಲ" ಎಂದು ಹಲವು ಬಾರಿ ಹಲುಬಿದ್ದ. ಹಾಗೆ ಅಂದಾಗಲೆಲ್ಲಾ ಅವಳು "ನಿಮಗೇನೂ ಆಗಲ್ಲ, ಎಲ್ಲ ಗುಣವಾಗುತ್ತೆ " ಎಂದು ಧೈರ್ಯ ಹೇಳಿದರೂ, ಯಾರೂ ಇಲ್ಲದ ವೇಳೆ ಒಬ್ಬಳೇ ಕುಳಿತು ಅಳುತ್ತಿದ್ದಳು.

ಅವತ್ತು ರಾತ್ರಿ ಸಾಹುಕಾರ ಸಿದ್ದಪ್ಪ ಎದೆಬೇನೆ ತಾಳದೆ ಒಂದೇ ಸಮನೆ ನರಳುತ್ತಲಿದ್ದ. ರಾಜಕುಮಾರ, ಸಾವಿತ್ರಿ ಎದೆಯೊಡೆದು ಹಾಸಿಗೆ ಪಕ್ಕದಲ್ಲೇ ಕುಳಿತಿದ್ದರು. ಮಧ್ಯರಾತ್ರಿ ಆಗಿರಬೇಕು, ರಾಜಕುಮಾರನಿಗೆ ಸ್ವಲ್ಪ ಜಂಪು ಹತ್ತಿತ್ತು. ಸಾವಿತ್ರಿ ಗಂಡ ಮಲಗಿದ್ದ ಮಂಚಕ್ಕೆ ತಲೆ ಇಟ್ಟು ಮಲಗಿದ್ದಳು. ಒಮ್ಮೆಲೆ ಸಿದ್ದಪ್ಪ ಕಿಟಾರನೆ ಕಿರುಚಿ "ಬಂತು, ಬಂತು ಎದೆಗೇ ಗುದ್ದಿತ್ತಲ್ಲೋ" ಎಂದವನೆ ಬಾಯಿ ತೆರೆದು ರಕ್ತಕಾರಿ ಜೀವಬಿಟ್ಟ. ಅವನ ಬಾಯಿ, ಕಣ್ಣು ತೆರೆದೇ ಇದ್ದವು. ಸಾವಿತ್ರಿ ದುಃಖ ತಡೆಯದೆ ಬಾಯಿಗೆ ಸೀರೆ ಸೆರಗು ಒತ್ತಿ ಹಿಡಿದು ಬಿಕ್ಕಳಿಸಿದಳು. ರಾಜಕುಮಾರನ ಕೈಕಾಲು ನಡುಗಿ ಅಪ್ಪನ ಕಾಲು ಹಿಡಿದು ಒಂದಿಷ್ಟು ಹೊತ್ತು ಅತ್ತ. ಎದೆಗಟ್ಟಿ ಮಾಡಿಕೊಂಡು ಮನೆಯ ಹೊರಗೆ ಜಗಲಿ ಮೇಲೆ ಮಲಗಿದ್ದ ಮನೆಯ ಕೆಲಸಗಾರ ಮರಗಪ್ಪನಿಗೆ ಅಪ್ಪ ಅಗಲಿದ ಸುದ್ದಿ ತಿಳಿಸಿದ. ಅವನು ಗಾಬರಿಯಾಗಿ "ಘಾತಾಯಿತಲ್ಲ ಸಾಹುಕಾರರೆ" ಎಂದು ಕಣ್ಣೀರು ಹಾಕಿದ. ಬೆಳಿಗ್ಗೆ ಊರಿಗೆಲ್ಲ ಸುದ್ದಿ ಮುಟ್ಟಿತ್ತು. ಬೀಗರು, ನೆಂಟರು ಬಂದರು.

" ಏನಾಗಿತ್ತು, ಹೇಗೆ ಸತ್ತ ?", " ಏನಾಗಿತ್ತೋ ಗೊತ್ತಿಲ್ಲ, ಕೊನೆಗೆ ರಕ್ತಕಾರಿ ಸತ್ತನಂತೆ". " ಹೌದಾ? ಅದೇ ಇರಬೇಕು," ಅದೇ ಅಂದರೆ ?" " ಓ ನಿನಗೆ ಗೊತ್ತಿಲ್ವ, ಇರಲಿ ಬಿಡು, ಮುಂದೆ ಗೊತ್ತಾಗುತ್ತೆ'- ಅಂತಿಮ ಸಂಸ್ಕಾರಕ್ಕೆ ಬಂದವರ ನಡುವೆ ನಡೆದ ಮಾತುಕತೆ ರಾಜಕುಮಾರನ ಕಿವಿಗೂ ಬಿದ್ದಿತ್ತು. "ಅದೇ ಅಂದರೆ ಏನು ?"-ಅವನ ಮನಸ್ಸನ್ನು ಕೊರೆಯತೊಡಗಿತು. ಅಪ್ಪನನ್ನು ಮಣ್ಣು ಮಾಡಬೇಕು. ಈ ದೊಡ್ಡ ಮನೆ ಕಟ್ಟಲು ಅವನು ಎಷ್ಟೆಲ್ಲ ಕಷ್ಟಪಟ್ಟ, ಒಬ್ಬನೇ ಮಗ ಅನ್ನೋ ಕಾರಣಕ್ಕೆ ನನಗೆ ಏನೆಲ್ಲ ಮಾಡಿಟ್ಟ. ವಯಸ್ಸಲ್ಲದ ವಯಸ್ಸಲ್ಲಿ ಲೋಕ ತೊರೆದು ನಮ್ಮನ್ನು ದಿಕ್ಕೆಡುವಂತೆ ಮಾಡಿದ. ಎಲ್ಲವೂ ನೆನಪಾಗಿ ಕಣ್ಣೀರು ಪಳಪಳನೆ ಉದುರಿದವು.

ಮನೆಯ ಜಗಲಿ ಮೇಲೆ ಬಂಗಾರದ ಹಂದಿ ಮತ್ತು ಹಂದಿಮರಿಯ ಮೂರ್ತಿ. ಅಪ್ಪ ದಿನಾ ಅವುಗಳಿಗೆ ಪೂಜೆ ಮಾಡುತ್ತಿದ್ದ. ರಾಜಕುಮಾರನಿಗೆ ಇದೊಂದು ಬಿಡಿಸಲಾಗದ ಒಗಟಾಗಿತ್ತು. ಒಂದಿನ ಅವನು ತನ್ನ ತಾಯಿಗೆ ಕೇಳಿದ "ಏನವ್ವ ಎಲ್ಲರ ಮನೆಯ ದೇವರ ಜಗಲಿ ಮೇಲೆ ಬೇರೆ ಬೇರೆ ದೇವರ ಚಿತ್ರ, ಮೂರ್ತಿ ಇವೆ. ನಮ್ಮ ಮನೆಯಲ್ಲಿ ಮಾತ್ರ ಬಂಗಾರದ ಹಂದಿ ಮತ್ತು ಹಂದಿಮರಿ ಮೂರ್ತಿ ಇದೆ. ಅಲ್ಲದೆ ಅಪ್ಪ, ನೀನು ದಿನಾ ಅದಕ್ಕೆ ಪೂಜೆ ಮಾಡುತ್ತೀರಲ್ಲ ಏನಿದು ? ನನಗೊಂದೂ ಅರ್ಥವಾಗುತ್ತಿಲ್ಲ" ಅಂದಿದ್ದ. " ಮಗ ನಿನಗೀಗ ಇದು ಅರ್ಥ ಆಗೊಲ್ಲ, ನಿನಗೆ ಮದುವೆಯಾಗಿ, ಮಕ್ಕಳಾಗಲಿ, ಆಗ ಎಲ್ಲ ತಿಳಿಯುತ್ತೆ" ಅಂದು ಸಾವಿತ್ರಿ ಮಗನಿಗೆ ಸಮಾಧಾನ ಹೇಳಿದ್ದಳು. ಆಕೆಯ ಒಗಟಿನಂತ ಮಾತುಗಳು ಅವನಿಗೆ ಅರ್ಥವೇ ಆಗಿರಲಿಲ್ಲ.

ಮನೆಯಲ್ಲಿ ಸಿರಿ, ಸಂಪತ್ತು ಇದ್ದರೂ ಸಾವಿತ್ರಿ ಸುಖದ ಸುಪ್ಪತ್ತಿಗೆಯಲ್ಲಿ ಮೈ ಮರೆಯಲಿಲ್ಲ. ಮಗನ ಓದಿಸಿದಳು, ಬೆಳೆಸಿದಳು. ಗಂಡ ಊರಲ್ಲಿ ಇರುವುದೇ ಅಪರೂಪವಾಗಿತ್ತು. ಇಂದು ಈ ಊರು, ಮರುದಿನ ಮತ್ತೊಂದು ಊರು. ಕುಡಿದ, ತಿಂದ, ಹೆಣ್ಣಿನ ಸಂಗ ಮಾಡಿದ. ಇದೆಲ್ಲ ಗೊತ್ತಿದ್ದರೂ ಅವಳು ತುಟಿ ಪಿಟಕ್ ಅನ್ನಲಿಲ್ಲ. ಗಂಡ ತನ್ನ ಬಗ್ಗೆ ಎಷ್ಟೇ ಕಾಳಜಿ ಮಾಡಿದರೂ ಸೀರೆ, ಒಡವೆ ತರುತ್ತಿದ್ದರೂ ಅದ್ಯಾವುದರ ಆಸೆಯೂ ಅವಳಿಗಿರಲಿಲ್ಲ. ಹೆಂಡತಿ, ಮಗನಿಗೆ ಯಾವ ಕೊರತೆಯಾಗದಂತೆ ಇಟ್ಟಿದ್ದ ಸಾಹುಕಾರ ಸಿದ್ದಪ್ಪ ಮಗ ಹರೆಯಕ್ಕೆ ಬಂದ ಮೇಲೆ ಅವನಿಗೆ ಬೈಕ್ ಕೊಡಿಸಿದ. ರಾಜಕುಮಾರ ಅಂತ ಹೆಸರಿಟ್ಟರೂ ಒಂದು ದಿನವೂ ಹೆಸರಿಡಿದು ಕರೆಯಲಿಲ್ಲ. ಯಾವಾಗಲಾದರೊಮ್ಮೆ ಹತ್ತಿರ ಕರೆದು ಬುದ್ಧಿ ಮಾತು ಹೇಳುತ್ತಿದ್ದ. " ಮಗ ಈ ಸಂಪತ್ತನ್ನು ಶೋಕಿಗಾಗಿ ಬಳಸಬೇಡ, ಜೂಜು ಆಡಬೇಡ, ನನಗಿರೋದು ನೀನೊಬ್ಬನೆ. ನಿನಗೇನು ಬೇಕೋ ತಗೋ, ಯಾರಿಗೂ ಏನನ್ನೂ ಕೇಳದೆಯೇ ಕೊಡಬೇಡ, ಬಡವರ ನಂಬು, ಅವರ ಬಗ್ಗೆ ಕಾಳಜಿ ಇರಲಿ, ಹಾಗಂತ ಯಾರನ್ನೂ ಹೆಚ್ಚಾಗಿ ನಂಬಬೇಡ. ಹಣ ಸುಮ್ಮನೆ ಬರಲ್ಲ ನೆನಪಿರಲಿ" ಎಂದಷ್ಟೇ ಹೇಳಿದ್ದ.

ತನ್ನಪ್ಪ ಶೋಕಿಲಾಲ ಅಂತ ರಾಜಕುಮಾರನಿಗೆ ಗೊತ್ತಿತ್ತು. ಅದಕ್ಕೆಂದೇ ಅವನ ಯಾವ ಗುಣವೂ ತನ್ನೊಳಗೆ ಬೆಳೆಯದಂತೆ ಅವ್ವ ನೋಡಿಕೊಂಡಳು. ಎಲ್ಲ ನೋವು ನುಂಗಿ ನಗುನಗುತ್ತ ಇರುತ್ತಿದ್ದ ಅವಳ ಗುಣ ಅವನಿಗೆ ಹಿಡಿಸಿತ್ತು. ಸಾಹುಕಾರ ಸಿದ್ದಪ್ಪನ ಶಕ್ತಿ ಕುಂದಿತು. ಎಲ್ಲಾ ಬಿಟ್ಟು ಮನೆ, ತೋಟದತ್ತ ನಿಗಾ ಮಾಡಿದ. ಕಳೆದು ಹೋಗುತ್ತಿದ್ದ ಸಂಪತ್ತನ್ನು ಉಳಿಸಿಕೊಳ್ಳಲು ಹೆಣಗಾಡುತ್ತಲಿದ್ದ.

ಮಗನಿಗೆ ಒಳ್ಳೆಯ ಕಡೆ ಸಂಬಂಧ ಹುಡುಕಿ ಮದುವೆ ಮಾಡಿದರೆ ನನ್ನ ಜವಾಬ್ದಾರಿ ಮುಗಿಯಿತು ಎಂದು ಅವನು ಹೆಂಡತಿ ಮುಂದೆ ಅಂದಿದ್ದ. ಗಂಡನ ಮಾತು ಕೇಳಿ ಸಾವಿತ್ರಿ ಖುಷಿಯಾಗಿದ್ದಳು. "ನಿನಗೆ ಎಂಥ ಹುಡುಗಿ ಬೇಕು ಹೇಳು, ಅವಳು ಎಲ್ಲೇ ಇರಲಿ ಹುಡುಕಿ ತಂದು ನಿನಗೆ ಜೋಡಿ ಮಾಡುವೆ" ಎಂದು ಮಗನಿಗೆ ಅಂದಳು. ತಾಯಿ ಆಡಿದ ಮಾತು ಕೇಳಿ ರಾಜಕುಮಾರನಿಗೆ ನಗು ಬಂತು. " ನನಗೆ ನಿನ್ನಂತ ಗುಣಗಳಿರುವ ಹೆಂಡತಿ ಸಿಕ್ಕರೆ ಸಾಕಮ್ಮ. ಅದಕ್ಕಿಂತ ಹೆಚ್ಚಿನದೇನೂ ಬೇಡ" ಅಂದಿದ್ದ. "ನನಗಿಂತಾ ಚೆನ್ನಾಗಿರುವವಳನ್ನೇ ಹುಡುಕಿ ನಿನ್ನ ಮದುವೆ ಮಾಡುವೆ. ನನ್ನ ರಾಜಕುಮಾರನಿಗೆ ಮಹಾರಾಣಿಯಂತ ಹೆಣ್ಣನ್ನೇ ಹುಡುಕುವೆ" ಎಂದು ಅವಳು ನಕ್ಕಳು.

ಗಂಡ ಸತ್ತು ಆರು ತಿಂಗಳಾಗಿತ್ತು. ಸಾವಿತ್ರಿ ಮುಖದಲ್ಲಿನ ಚೆಲುವು ಬಾಡಿತ್ತು. ಸುಮ್ಮನೆ ಮನೆ ಗೋಡೆ ದಿಟ್ಟಿಸುತ್ತ ದಿನವಿಡಿ ಕುಳಿತಿರುತ್ತಿದ್ದ ತಾಯಿಯನ್ನು ನೋಡಿ ರಾಜಕುಮಾರನ ಕರಳು ಕಿವುಚಿದಂತಾಗುತ್ತಿತ್ತು. ತನ್ನವ್ವ ನಗಬೇಕು, ಮೊದಲಿನ ಹಾಗೆ ಗೆಲುವಾಗಿರಬೇಕು ಎನ್ನೋದು ಅವನಾಸೆಯಾಗಿತ್ತು. ಸಾವಿತ್ರಿ ಯಾವುದೋ ಚಿಂತೆಯಲ್ಲಿ ಮುಳುಗಿದ್ದಳು. ರಾಜಕುಮಾರ "ಅವ್ವ" ಎಂದು ಕೂಗಿದ. ಅವಳು ಎಚ್ಚೆತ್ತು "ಏನು ಮಗ ಏನಾದರು ಬೇಕಿತ್ತ" ಎಂದಳು. "ನಿನಗೊಂದು ಮಾತು ಕೇಳುವುದಿದೆ ಅವ್ವ, ಬಹಳ ದಿನಗಳಿಂದ ಕೇಳಬೇಕು ಅನ್ನುತ್ತಿದ್ದೇನೆ, ಕೇಳಲು ಯಾಕೋ ಧೈರ್ಯ ಸಾಲುತ್ತಿಲ್ಲ" ಎಂದ. "ಏನು ಮಗ ಕೇಳು , ಯಾವುದೇ ವಿಷಯ ಬಹಳ ದಿನ ಮನಸಲ್ಲೇ ಇಟ್ಟುಕೊಂಡು ಕೊರಗಬಾರದಪ್ಪ. ಕೇಳು, ಅದೇನು ಕೇಳಬೇಕಾಗಿದಯೋ ಕೇಳಪ್ಪ" ಅಂದಳು. ಆಕೆಯ ಮಾತಿನಿಂದ ಸ್ವಲ್ಪ ಧೈರ್ಯ ಬಂದಂತಾಗಿ "ಅಪ್ಪನ ಶವ ಸಂಸ್ಕಾರಕ್ಕೆ ಬಂದವರಲ್ಲಿ ಕೆಲವರು ಅಪ್ಪನ ಸಾವಿಗೆ ಅದೇ ಕಾರಣವಿರಬೇಕು ಅಂದಿದ್ದು ಕಿವಿಗೆ ಬಿತ್ತು, ಏನಮ್ಮ ಅದು" ಅಂದ. ಅರೆಕ್ಷಣ ಅವಳು ಬೆಚ್ಚಿದಳು. "ಈ ವಿಷಯ ನಿನಗೆ ಹೇಳಬೇಕು ಅಂದಿದ್ದೆ, ಆದರೆ ಹೇಳಲೋ, ಬೇಡವೋ ಎಂಬ ಗೊಂದಲದಲ್ಲಿದೆ. ಈಗ ಸಮಯ ಬಂದಿದೆ ಹೇಳುವೆ. ನಿನ್ನ ಅಜ್ಜನಿಗೆ ಒಂದಿಷ್ಟು ಜಮೀನಿತ್ತು. ಹೊಲ ಊಳುವಾಗ ನಿಧಿ ಸಿಕ್ಕಿತ್ತು. ಅವರು ಅದನ್ನು ಸಾಯುವವರೆಗೂ ಹಾಗೇ ಕಾಪಾಡಿ ಸಾಯುವಾಗ ನಿನ್ನಪ್ಪನಿಗೆ ಒಪ್ಪಿಸಿ ಜೀವ ಬಿಟ್ರು. ನಿನ್ನಪ್ಪ ಅದನ್ನು ಯಾರ ಮುಂದೆಯೂ ಬಾಯಿ ಬಿಡದೆ ಇಷ್ಟಿಷ್ಟೇ ಕರಗಿಸಿ ಪೇಟೆಗೊಯ್ದು ಮಾರಿ ಈ ಜಾಗ ಕೊಂಡ, ಮನೆ ಕಟ್ಟಿದ, ಹೊಲ ಖರೀದಿಸಿದ. ಈ ದೊಡ್ಡ ಮನೆ ಕಟ್ಟುವಾಗ ಏನೆಲ್ಲಾ ಅವಾಂತರ ನಡೆದವು. ಮನೆ ಕಟ್ಟುತ್ತಿದ್ದ ಗೌಂಡಿ ಹಾಸಿಗೆ ಹಿಡಿದು ರಕ್ತಕಾರಿ ಸತ್ತ. ನಿಮ್ಮಪ್ಪ ದುಡ್ಡು ಕೊಟ್ಟು ಅವರ ಮನೆಯವರ ಬಾಯಿ ಮುಚ್ಚಿಸಿದ. ಇದಕ್ಕೇನಾದರು ಮಾಡಬೇಕು ಅಂತ ಮಂತ್ರವಾದಿಯ ಬಳಿ ಹೋಗಿ ಪರಿಹಾರ ಕೇಳಿದ. ಅವನು ಮನೆಯ ಪಾಯಾದೊಳಗೆ ಗಬ್ಬಾದ ಹಂದಿ ಹೂಳಿದರೆ ಎಲ್ಲ ಕಂಟಕ ದೂರಾಗಲಿದೆ ಎಂದು ಸಲಹೆ ನೀಡಿದ. ಅವನನ್ನು ಕರೆದುಕೊಂಡು ಬಂದು ಗಬ್ಬಾದ ಹಂದಿ ಹೂಳಿದ. ಆ ನಂತರ ಯಾವುದೇ ಅಡಚಣೆ ಇಲ್ಲದೆ ಮನೆ ಕಟ್ಟುವುದು ಸುಸೂತ್ರವಾಗಿ ಮುಗಿಯಿತು.

ಗಬ್ಬಾದ ಹಂದಿಯನ್ನು ಜೀವಂತವಾಗಿ ಮಣ್ಣಲ್ಲಿ ಹೂಳುವಾಗ ಅದರ ಕಿರುಚಾಟ ಕಂಡು ನನ್ನ ಕರಳು ಚುರ್ ಎಂದಿತ್ತು. ಇದೆಲ್ಲ ಬೇಡ ಪಾಪ ತಗುಲುತ್ತೆ ಅನ್ನಲು ನನಗೆ ಧೈರ್ಯವಿರಲಿಲ್ಲ. ಅವತ್ತು ರಾತ್ರಿ ಕಣ್ಣಿಗೆ ಕಣ್ಣು ಹಚ್ಚಿ ನಿದ್ದೆ ಮಾಡಲಿಲ್ಲ. ಕಣ್ಣು ಮುಚ್ಚಿದರೆ ಸಾಕು ಹಂದಿಯ ಕಿರುಚಾಟದ ಧ್ವನಿ ಕೇಳಿದಂತಾಗಿ ಎದೆ ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು. ಇಡೀ ರಾತ್ರಿ ನಿದ್ದೆ ಇಲ್ಲದೆ ಕಳೆಯಬೇಕಾಯ್ತು. ಈಗಲೂ ಅದರ ಕಿರುಚಾಟ ಮನಸ್ಸಿನೊಳಗೆ ಹಾಗೇ ಕುಳಿತಿದೆ. ಒಮ್ಮೊಮ್ಮೆ ನೆನಪಾಗಿ ನೋವಾಗುತ್ತೆ. ಅದು ಪ್ರಾಣಿಯಾದರೂ ಒಡಲಲ್ಲಿ ಮಗುವನ್ನಿಟ್ಟುಕೊಂಡಿದ್ದ ಅದರ ಯಾತನೆ ನನ್ನದೆಯನ್ನು ಈಗಲೂ ಕೊರೆಯುತ್ತಿದೆ.

ಒಮ್ಮೊಮ್ಮೆ ಭುವಿಯೇ ಬಿರಿದು ಮನೆ ಎರಡು ಹೋಳಾದಂತೆ, ಅದರೊಳಗಿಂದ ಗಬ್ಬಾದ ಹಂದಿ ಕಿರುಚುತ್ತ ಹೊರಬಂದು ಒದ್ದಾಡಿದಂತೆ, ಅದರ ಗರ್ಭದೊಳಗಿಂದ ಮರಿ, ರಕ್ತ , ಮಾಂಸ ಹೊರಚಿಮ್ಮಿ ಮನೆಯೇ ರಕ್ತದ ಮಡುವಿನಲ್ಲಿ ತೇಲಿದಂತೆ ಕೆಟ್ಟ ಕನಸು ಬೀಳುತ್ತದೆ. ಆ ಕನಸು ಬಿದ್ದಾಗಲೆಲ್ಲ ಮೈಯಲ್ಲ ಬೆವೆತು, ಕೈಕಾಲು ನಡುಗಿ ಉಸಿರೇ ನಿಂತು ಹೋದಂತಾಗುತ್ತದೆ. ಈಗಲೂ ಆಗಾಗ ಆ ಭಯಾನಕ ಕನಸು ಬಿದ್ದು ಬೆಚ್ಚಿ ಬೀಳುತ್ತೇನೆ. ಆ ಕನಸು ಬಿದ್ದ ದಿನ ಮನಸ್ಸಿಗೆ ಉಲ್ಲಾಸವೇ ಇಲ್ಲದಂತಾಗಿ ಇಡೀ ದಿನ ಆ ನೋವಲ್ಲೆ ಚಡಪಸುತ್ತೇನೆ. ದೇವರ ಮನೆಗೆ ಹೋಗಿ ಪೂಜೆ ಮಾಡಿದ ಮೇಲೆ ಒಂದಿಷ್ಟು ಹೊತ್ತು ಮನಸ್ಸಿಗೆ ಶಾಂತಿ ದೊರೆತಂತಾಗುತ್ತದೆ" ಎಂದು ತನ್ನ ಸಂಕಟವನ್ನು ತೋಡಿಕೊಂಡಳು.

ಮನೆ ಶಾಂತಿ ಮಾಡಿದ ದಿನವೇ ನಿಮ್ಮಪ್ಪ ಮಂತ್ರವಾದಿಯ ಸಲಹೆಯಂತೆ ಬಂಗಾರದ ಹಂದಿ, ಹಂದಿಮರಿ ಮೂರ್ತಿ ಮಾಡಿಸಿ ದೇವರ ಜಗಲಿ ಮೇಲೆ ಇರಿಸಿ ಪೂಜೆ ಮಾಡಿದ. ಅಮಾವಾಸ್ಯೆ, ಹುಣ್ಣಿಮೆ ದಿನ ಕಿರ್ ಕಿರ್ ಅಂತ ಕಿರುಚಿದಂತೆ, ಇಡೀ ಮನೆಯೇ ಅಲುಗಾಡಿದಂತೆ, ಮನೆ ತುಂಬ ಹಂದಿ ಕಿರುಚುತ್ತ ಓಡಾಡಿದಂತೆ ಕನಸುಗಳು ಬೀಳುತ್ತಿವೆ ಎಂದು ನಿಮ್ಮಪ್ಪ ಆಗಾಗ ಅನ್ನುತ್ತಿದ್ದ. ಗಬ್ಬಾದ ಜೀವಂತ ಹಂದಿ ಹೂಳಿ ಮನೆ ಕಟ್ಟಿದಕ್ಕೆ ಅವನು ಒಳಗೊಳಗೇ ಕೊರಗುತ್ತಿದ್ದ. ಅದನ್ನು ಮರೆಯಲು ಕುಡಿಯುತ್ತಿದ್ದ. ಸಿರಿ, ಸಂಪತ್ತು ಇದ್ದರೂ ಅವನ ಮನಸ್ಸಿಗೆ ನೆಮ್ಮದಿ ಇಲ್ಲದಂತಾಗಿತ್ತು. ಕೆಲವೊಮ್ಮೆ ತಾನು ಹಾಗೆ ಮಾಡಬಾರದಾಗಿತ್ತು ಅಂತ ಕೊರಗುತ್ತಿದ್ದ. ಅದೇ ಚಿಂತೆಯಲ್ಲಿಯೇ ಅವನು ಹಾಸಿಗೆ ಹಿಡಿದ. ಏನು ಮಾಡುವುದು, ಯಾರಿಗೆ ಹೇಳುವುದು ಈಗ ಎಲ್ಲ ಮುಗಿದು ಹೋಗಿದೆ" ಎಂದು ಅತ್ತಳು.

ತನ್ನವ್ವ ಹೇಳಿದ ಮನೆ ನಿರ್ಮಾಣದ ಹಿಂದಿನ ಕತೆ ಕೇಳಿ ರಾಜಕುಮಾರನ ಎದೆ ಝಲ್ ಅಂತು. ಅವತ್ತು ರಾತ್ರಿ ಅವನು ಕಣ್ಣಿಗೆ ಕಣ್ಣು ಹಚ್ಚಿ ನಿದ್ದೆ ಮಾಡಲಿಲ್ಲ. ಬೆಳಿಗ್ಗೆ ಜೋರಾದ ನಿದ್ದೆ ಹತ್ತಿತು. ಹಂದಿ, ಹಂದಿ ಮರಿ ಕನಸಲ್ಲಿ ಬಂದು ಜೋರಾಗಿ ಎದೆಗೆ ಗುದ್ದಿ ರಕ್ತಕಾರಿದಂತಾಗಿ "ಅವ್ವ" ಎಂದು ಕಿಟಾರನೆ ಕಿರುಚಿ ಹಾಸಿಗೆ ಮೇಲೆ ಎದ್ದು ಕುಳಿತ. ಅವನ ಮೈ ಸಂಪೂರ್ಣ ಬೆವೆತು ಹೋಗಿತ್ತು. ಕೈಕಾಲು ನಡುಗುತ್ತಿದ್ದವು. ಪಕ್ಕದ ಮಂಚದ ಮೇಲೆ ಅವ್ವ ನೆಮ್ಮದಿಯಿಂದ ನಿದ್ರಿಸುತ್ತಿದ್ದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.