ಬಣ್ಣವೇ ಬದುಕಾಯ್ತು...

4

ಬಣ್ಣವೇ ಬದುಕಾಯ್ತು...

Published:
Updated:
ಮೇಕಪ್ ಮಾಡುತ್ತಿರುವ ರಾಮಕೃಷ್ಣ ಬೆಳ್ತೂರು

ಕ ರ್ನಾಟಕ ಮತ್ತು ಆಂಧ್ರದ ಗಡಿಭಾಗದಲ್ಲಿ ತೆಲುಗು ವೃತ್ತಿನಾಟಕಗಳ ಪ್ರಭಾವದಿಂದ ರಂಗಭೂಮಿಯತ್ತ ಆಕರ್ಷಿತರಾದವರು ಪ್ರಸಾಧನ ಕಲಾವಿದ ರಾಮಕೃಷ್ಣ ಬೆಳ್ತೂರು. ತಂದೆ ವೆಂಕಟೇಶಪ್ಪ ಆ ಕಾಲದಲ್ಲಿ ತೆಲುಗಿನ ಖ್ಯಾತ ರಂಗನಟ. ಪಕ್ಕಾ ಕಂಪನಿ ಶೈಲಿಯ ಪೌರಾಣಿಕ ನಾಟಕಗಳಲ್ಲಿ ಅಪ್ಪ ಮಾಡುತ್ತಿದ್ದ ಪಾತ್ರಗಳಿಂದ ಪ್ರಭಾವಿತರಾಗಿದ್ದ ರಾಮಕೃಷ್ಣ ತೊದಲು ನುಡಿಯಲ್ಲೇ ಬಾಲಕೃಷ್ಣನ ಪಾತ್ರದ ಮೂಲಕ ರಂಗಭೂಮಿಗೆ ಪದಾರ್ಪಣೆ ಮಾಡಿದರು.

ಅಂದು ಅಂಟಿದ ಬಣ್ಣದ ನಂಟು ಇಂದಿಗೂ ರಾಮಕೃಷ್ಣ ಅವರ ಕೈಹಿಡಿದಿರುವುದು ವಿಶೇಷ. ಮನೆಯಲ್ಲಿ ಬಡತನ. ಬೆಳಿಗ್ಗೆ ನಾಲ್ಕೂವರೆಗೇ ಎದ್ದು ಇಟ್ಟಿಗೆ ಬಟ್ಟಿಗಳ ಜನರಿಗೆ ಬಿಸಿಬಿಸಿ ಇಡ್ಲಿ ತಲುಪಿಸುವ ಕಾಯಕ. ಎಂಟೂವರೆಗೆ ಅಂಗಡಿಯಲ್ಲಿ ಬಳೆ ಮತ್ತು ಬೊಂಬೆ ಜೋಡಿಸುವಿಕೆ, ಹನ್ನೊಂದಕ್ಕೆ ಕಾಲೇಜಿಗೆ ಹಾಜರು, ಸಂಜೆ ಅಣ್ಣನ ಜತೆಗೆ ಕೈಮಗ್ಗ ನೇಯ್ಗೆಯ ತರಬೇತಿ... ಇದು ಚಿಕ್ಕವಯಸ್ಸಿನಲ್ಲೇ ರಾಮಕೃಷ್ಣ ಕಂಡುಕೊಂಡ ದುಡಿಮೆಯ ಹಾದಿ. ಕೈಮಗ್ಗ ನೇಯುತ್ತಿದ್ದ ಅಣ್ಣನಿಗೆ ಸಂಭಾಷಣೆ ಕಲಿಸುವ ಜವಾಬ್ದಾರಿ. ಇಡೀ ನಾಟಕದ ಸಂಭಾಷಣೆ ಕಂಠಪಾಠವಾದ್ದರಿಂದ ಕೃಷ್ಣ ನೋಡಲು ಚಿಕ್ಕವನಾಗಿದ್ದರೂ ಪರವಾಗಿಲ್ಲ ಅವನೇ ಪಾತ್ರ ಮಾಡಲಿ ಎಂದು ಗುರು ಶಿವಕುಮಾರ ಆರಾಧ್ಯ ನುಡಿದ ಮಾತಿಗೆ ತಪ್ಪದ ರಾಮಕೃಷ್ಣ ‘ದುಶ್ಯಾಸನ ವಧೆ’ ನಾಟಕದ ಮೊದಲ ಸೀನ್‌ನಲ್ಲೇ ಪ್ರೇಕ್ಷಕರ ಮನ ಕದ್ದುಬಿಟ್ಟರಂತೆ.

ಕಾಲೇಜಿನಲ್ಲಿ ಇಂಗ್ಲಿಷ್ ಮೇಡಂ ಚಂಪಾವತಿ ಅವರ ಸಲಹೆ ಮೇರೆಗೆ ‘ಕ್ಷಾಮ’ ನಾಟಕದಲ್ಲಿ ನಾಲ್ಕು ಪಾತ್ರಗಳನ್ನು ಮಾಡಿದ ರಾಮಕೃಷ್ಣ, ಅಂದು ಆ ನಾಟಕಕ್ಕೆ ಬೇಕಾದ ಗಡ್ಡಮೀಸೆ, ವಸ್ತ್ರವಿನ್ಯಾಸ ತಾವೇ ಮಾಡಿಕೊಳ್ಳುವಷ್ಟು ರಂಗಸಿದ್ಧಿ ಪಡೆದಿದ್ದರು. ಮುಂದೆ ಪದವಿಯಲ್ಲೂ ಈ ರಂಗಮೋಹ ಬಿಡಲಿಲ್ಲ. ಬೆಳ್ತೂರಿನಿಂದ ಬೆಂಗಳೂರಿನತ್ತ ಪದವಿ ಓದಲು ಬಂದ ಅವರಿಗೆ ಎ.ಎಸ್.ಮೂರ್ತಿ ಅವರ ‘ಅಭಿನಯತರಂಗ’ ಕೈಬೀಸಿ ಕರೆಯಿತು. ಅಲ್ಲಿಯೇ ಅವರು ಮೊದಲ ಬಾರಿಗೆ ಮೇಕಪ್ ನಾಣಿ ಅವರನ್ನು ಕಂಡದ್ದು. ಕಾರಿನಲ್ಲಿ ಠೀವಿಯಿಂದ ಬರುತ್ತಿದ್ದ ನಾಣಿ ಅವರಿಗೆ ಸಿಗುತ್ತಿದ್ದ ಗೌರವ ಕಂಡು ತಾನೂ ಮೇಕಪ್ ಮ್ಯಾನ್ ಆಗಬೇಕು ಎಂದು ಕನಸು ಕಂಡವರು ರಾಮಕೃಷ್ಣ. ಆದರೆ, ನಟನೆಯ ಚುಂಗು ಹಿಡಿದಿದ್ದ ಅವರು ಅಷ್ಟಾಗಿ ಅತ್ತ ಮನಸು ಮಾಡಿರಲಿಲ್ಲ. ಒಂದೆಡೆ ಓದು, ರಂಗಭೂಮಿ ಮತ್ತೊಂದೆಡೆ ಮನೆಯ ಬಡತನ. ‘ಮೇಕಪ್ ಮಾಡಿದ್ರೆ ತಿಂಗಳಿಗೆ ₹ 450 ಗಳಿಸಬಹುದು ಕಣ್ರಯ್ಯಾ’ ಅಂತ ಮೇಕಪ್ ನಾಣಿ ಅಭಿನಯತರಂಗದ ತರಗತಿಯಲ್ಲಿ ಹೇಳಿದ್ದ ಪಾಠ ಮನದಲ್ಲೇ ಗೂಡು ಕಟ್ಟಿತ್ತು.

ತಮ್ಮ ಮನೆಯ ಪರಿಸ್ಥಿತಿ, ರಂಗದ ಒಲವು ಕುರಿತು ನಾಣಿ ಅವರಿಗೆ ರಾಮಕೃಷ್ಣ ಬರೆದ ಪತ್ರ ನಾಣಿ–ರಾಮಕೃಷ್ಣ ಅವರನ್ನು ಗುರುಶಿಷ್ಯ ಸಂಬಂಧಕ್ಕೆ ನಾಂದಿ ಹಾಡಿತು. ನಾಣಿ ಅವರಿಂದ ಮೇಕಪ್‌ನ ಅ ಆ ಇ ಈ... ಕಲಿತ ಅವರು, ಮುಂದೆ ಅದನ್ನೇ ಗಂಭೀರವಾಗಿ ಪರಿಗಣಿಸಿ ಪ್ರಸಾಧನ ಕಲೆಯಲ್ಲಿ ಪರಿಣಿತಿ ಗಳಿಸಿದರು. ಇದರ ನಡುವೆಯೇ ನೀನಾಸಂಗೆ ಸೇರುವ ಕನಸು ಚಿಗುರೊಡೆಯಿತು. ಅಲ್ಲಿ ಪರಿಗಣಿಸಬಹುದಾದ ಪಟ್ಟಿಯಲ್ಲಿ ತಮ್ಮ ಹೆಸರಿದ್ದುದ್ದನ್ನು ಕಂಡ ರಾಮಕೃಷ್ಣ ಮತ್ತೆ ಅತ್ತ ಮುಖ ಮಾಡಲಿಲ್ಲ. ನಾಣಿ ಬಳಿಯೇ ಕೆಲಸ ಮುಂದುವರಿಸಿದ ಅವರು ಅಂದಿನಿಂದ ಇಂದಿನವರೆಗೆ ಬಣ್ಣಗಳ ಮೂಲಕವೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.

ಸಾವಿರಕ್ಕೂ ಹೆಚ್ಚು ನಾಟಕಗಳಿಗೆ ಪ್ರಸಾಧನ ಕಲಾವಿದನಾಗಿ ಕಾರ್ಯನಿರ್ವಹಿಸಿರುವ ರಾಮಕೃಷ್ಣ ಅವರಿಗೆ ನಟನೆಯ ಮೋಹ ಇನ್ನೂ ಬಿಟ್ಟಿಲ್ಲ. ಅದಕ್ಕೆ ಸಾಕ್ಷಿಯೆಂಬಂತೆ ಈಚೆಗಷ್ಟೇ ಹಿರಿಯ ರಂಗಕರ್ಮಿ ಬಿ. ಜಯಶ್ರೀ ಅವರೊಂದಿಗೆ ‘ಕರಿಮಾಯಿ’ ನಾಟಕದಲ್ಲಿ ಬಸವರಾಜ ಪಾತ್ರಕ್ಕೆ ಜೀವತುಂಬಿ ನಟಿಸಿದ್ದಾರೆ ಅವರು. ಮಕ್ಕಳ ರಂಗಭೂಮಿ, ಮೈಸೂರು ರಂಗಾಯಣ, ರಾಷ್ಟ್ರೀಯ ನಾಟಕ ಶಾಲೆಯ ದೊಡ್ಡ ಯೋಜನೆಗಳು ಹಾಗೂ ಕಿರುತೆರೆ, ಸಿನಿಮಾಗಳಿಗೂ ರಾಮಕೃಷ್ಣ ಅವರ ಪ್ರಸಾಧನ ಕಲೆಯ ಸ್ಪರ್ಶವಿದೆ. ಕನ್ನಡ ರಂಗಭೂಮಿಯ ಹಿರಿ–ಕಿರಿಯ ನಿರ್ದೇಶಕರ ಜತೆ ಕೆಲಸ ಮಾಡಿದ ಹೆಗ್ಗಳಿಕೆ ಅವರದು. ಸಿನಿಮಾಗಳಲ್ಲಿ ಅವಕಾಶ ಸಿಕ್ಕರೂ ನಯವಾಗಿಯೇ ಒಲ್ಲೆ ಎನ್ನುವ ರಾಮಕೃಷ್ಣ, ಪರಿಚಿತರ ಸಿನಿಮಾಗಳಿಗೆ ಮಾತ್ರ ಕೆಲಸ ಮಾಡಿಕೊಡುತ್ತಾರೆ. ‘ರಂಗಭೂಮಿಯಲ್ಲಿ ದೊರೆಯುವ ಗೌರವ ಅಲ್ಲಿಲ್ಲ. ಸಿನಿಮಾ ಲೋಕದ ವಾತಾವರಣ ನನಗೆ ಅಷ್ಟಾಗಿ ಒಗ್ಗದು’ ಅನ್ನುತ್ತಾರೆ ಅವರು.

ಪತ್ನಿ ರೂಪಾ ವಸ್ತ್ರವಿನ್ಯಾಸ ಮಾಡಿದರೆ, ಮಕ್ಕಳಾದ ಲೀಲಾಕೃಷ್ಣ ಮತ್ತು ಸ್ವಾತಿ ಈಗಲೇ ರಂಗಭೂಮಿಯ ಪದಾರ್ಪಣೆ ಮಾಡಿದ್ದಾರೆ. ಕುಟುಂಬವೇ ರಂಗಕುಟುಂಬವಾಗಿದ್ದರಿಂದ ಸಂಸಾರದಲ್ಲಿ ನಾಟಕದ ಬಗ್ಗೆ ಅಪಸ್ವರಗಳಿಲ್ಲ. ಬಣ್ಣವೇ ನನಗೆ ಬದುಕು ಕೊಟ್ಟಿತು. ಅದರಲ್ಲಿ ನನಗೆ ನೆಮ್ಮದಿ ಎಂದು ನಗೆ ಚೆಲ್ಲುತ್ತಾರೆ ರಾಮಕೃಷ್ಣ ಬೆಳ್ತೂರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !