ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ರಂಗದಲ್ಲಿ ‘ಬಲಿಪ’ ಎಂಬ ಸಾಂಪ್ರದಾಯಿಕ ನಡಿಗೆ...

Last Updated 14 ಮಾರ್ಚ್ 2019, 9:40 IST
ಅಕ್ಷರ ಗಾತ್ರ

ತೆಂಕುತಿಟ್ಟು ಯಕ್ಷಗಾನದ ಪ್ರಾತಿನಿಧಿಕ ಶೈಲಿಯ ಮೇರು ಭಾಗವತ ಬಲಿಪ ನಾರಾಯಣ ಭಾಗವತರಿಗೀಗ 82ರ ಹರೆಯ. ಇದೇ 18 ಅವರ 82ನೇ ಜನ್ಮದಿನ. ಭಾರತೀಯ ರಂಗಸಂಗೀತದ ಮೇರುಗಾಯಕನಾದ ಬಲಿಪರು ಪ್ರಸಕ್ತ ಮೂಡಬಿದಿರೆಯ ಮಾರೂರಿನ ಸ್ವಗೃಹದಲ್ಲಿ ವಿಶ್ರಾಂತ ಜೀವನದಲ್ಲಿದ್ದಾರೆ. ಇತ್ತೀಚಿನವರೆಗೂ ಗಾನಯಾನದಲ್ಲಿ ಸಕ್ರಿಯರಾಗಿದ್ದ ಅವರಿಗೆ ಮೊನ್ನೆ ಫೆ.23ರಂದು ಶಿವಮೊಗ್ಗದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಮತ್ತು ಅವರ ಪ್ರಸಂಗ ಸಂಪುಟಕ್ಕೆ ಪುಸ್ತಕ ಬಹುಮಾನ ಪ್ರಶಸ್ತಿ ಸಿಕ್ಕಿದೆ. ಒಂದೇ ವೇದಿಕೆಯಲ್ಲಿ ಅವಳಿ ಪ್ರಶಸ್ತಿ ಪಡೆದ ಮೊದಲಿಗನೆಂಬ ಸಂಭ್ರಮದೊಂದಿಗೆ 82ರ ಹರೆಯಕ್ಕೆ ಕಾಲೂರುತ್ತಿರುವ ಬಲಿಪ ಭಾಗವತರು ಯಕ್ಷಗಾನದ ಸಂಪ್ರದಾಯಿಕ ನಡೆಯ ಮೇರುಪುರುಷ....

***

ನಮ್ಮ ಈ ಕಾಲದ ಬಲಿಪ ಭಾಗವತರ ಅಜ್ಜಯ್ಯನ ಹೆಸರು ಕೂಡಾ ಬಲಿಪ ನಾರಾಯಣ ಭಾಗವತರೆಂದೇ. ಅವರು ಸ್ವಾತಂತ್ರ್ಯ ಪೂರ್ವದಲ್ಲೇ ಯಕ್ಷಗಾನದ ತಾರಾ ವರ್ಚಸ್ಸಿನ ಸುವಿಖ್ಯಾತ ಭಾಗವತರು. ರಂಗದ ಒಳ ಹೊರಗಿನ ವ್ಯವಹಾರ ಮತ್ತು ಜನ್ಮದಾತ ಸಿದ್ಧಿಯಿಂದ ಅಕ್ಷರಶಃ ‘ಹುಲಿ’ಯಂತೆ ಮೆರೆದು ಆ ಕಾಲದ ಕೀರ್ತಿ ಪಡೆದವರು.

ಅಂತಹಾ ಅಜ್ಜನ ಹಿನ್ನೆಲೆಯಲ್ಲಿ ಅದೇ ಶೈಲಿಯನ್ನು ಅನುಸರಿಸಿ, ಕೈದಾಟಿಸಿದ ಈಗಿನ ಬಲಿಪ ನಾರಾಯಣ ಭಾಗವತರು ಸುಮಾರು 63ವರ್ಷಗಳಷ್ಟು ಕಾಲ ಸಕ್ರಿಯವಾಗಿ ಹಾಡಿ ಯಕ್ಷರಾತ್ರಿಗಳನ್ನು ಬೆಳಗಿಸಿದ್ದಾರೆ! ಅನೇಕ ಕಲಾವಿದರನ್ನು ರೂಪಿಸಿದ್ದಾರೆ. ಸುಮಾರು 70ರಷ್ಟು ಪ್ರಸಂಗಕಾವ್ಯಗಳು ಮತ್ತದರ ಪ್ರಸ್ತುತಿಯ ರಂಗನಡೆ-ಮಾಹಿತಿ ಅವರಿಗೆ ಕಂಠಸ್ಥ.

ಸ್ವಾತಂತ್ರ್ಯಾನಂತರ ಭಾರತದ ಸಾಂಸ್ಕೃತಿಕ ಚಿಂತನೆಗಳಲ್ಲಿ ಅನೇಕಾನೇಕ ಪಲ್ಲಟಗಳು ನಡೆದು, ಹೊಸ ಆವಿಷ್ಕಾರಗಳ ಕ್ರಾಂತಿ ಸಂಗೀತ-ಸಾಹಿತ್ಯ ಇತ್ಯಾದಿಗಳೆಲ್ಲದರಲ್ಲಿ ನಡೆದು ಅದು ಇನ್ನಿತರ ಜನಪದ ರಂಗಕಲೆಗಳ ಮೇಲೆ ಪ್ರಭಾವ ಬೀರಿದರೂ, ತನ್ನ ಸಾಂಪ್ರದಾಯಿಕ ಭಾಗವತಿಕೆ ಮತ್ತದರ ಸಂಗೀತ ಶೈಲಿಯನ್ನು ಒಂದಿನಿತೂ ಅಲ್ಲಾಡಲು ಬಿಡದೆ, ಪರಿವರ್ತನಾ ಪ್ರಭಾವಗಳ ಎದುರು ಹೆಬ್ಬಂಡೆಯಂತೆ ನಿಂತು ತನ್ನ ಗಾನಶೈಲಿಯನ್ನು ಸ್ಥಾಪಿಸಿ, ತೋರಿಸಿದ ಬಲಿಪರಿಂದಾಗಿ ತೆಂಕಣ ಯಕ್ಷಗಾನದ ಸಹಜ ಶೈಲಿಯ ಸಾಂಪ್ರದಾಯಿಕ ಗಾನಕ್ರಮ ಉಳಿದಿದೆ ಎಂದು ಗಟ್ಟಿಯಾಗಿಯೇ ಹೇಳಬಹುದು. ದೇಶದ ಗಾನಪ್ರಬೇಧಗಳ ಸಾಂಸ್ಕೃತಿಕ ಹಿನ್ನೆಲೆ ರಕ್ಷಣೆಯಲ್ಲಿ ಇದು ದೊಡ್ಡ ಸಾಧನೆ. ಹೀಗಾಗಿ ಬಲಿಪರು ಕೇವಲ ಒಬ್ಬ ಭಾಗವತರಷ್ಟೇ ಆಗದೇ, ಯಕ್ಷಗಾನದ ಪಾಲಿಗೆ ಮುಖ್ಯರಾಗುತ್ತಾರೆ; ಮಹಾನ್ ಆಗುತ್ತಾರೆ.

ಅಭಿಮಾನಿಗಳು ಕಟ್ಟಿಸಿಕೊಟ್ಟ ಬಲಿಪ ಭವನದಲ್ಲಿ ಪ್ರಶಸ್ತಿಗಳೊಂದಿಗೆ ಬಲಿಪರು
ಅಭಿಮಾನಿಗಳು ಕಟ್ಟಿಸಿಕೊಟ್ಟ ಬಲಿಪ ಭವನದಲ್ಲಿ ಪ್ರಶಸ್ತಿಗಳೊಂದಿಗೆ ಬಲಿಪರು

ಭಾರತದ ಎಲ್ಲಾ ಜನಪದ ಕಲೆಗಳಿಗೂ ಅದರದ್ದೇ ಆದ ಸಾಂಪ್ರದಾಯಿಕ ರಂಗಸಂಗೀತವಿದೆ. ಹಾಗೆಯೇ ಯಕ್ಷಗಾನಕ್ಕೂ ನಿರ್ದಿಷ್ಟ ರಂಗಸಂಗೀತವಿದೆ. ಆದರೆ ಕಾಲ ಪ್ರವಾಹದ ಪಲ್ಲಟ-ಸ್ಥಿತ್ಯಂತರದಂತೆ ಒಬ್ಬೊಬ್ಬರು ಒಂದೊಂದು ಶೈಲಿಯಲ್ಲಿ ಹಾಡುತ್ತಾ, ಯಕ್ಷಗಾನ ಎಂಬ ಕಲೆಯಲ್ಲಿ ವೈವಿಧ್ಯ ‘ಗಾನೀಯತೆ’ ಮತ್ತು ತಮ್ಮದೇ ‘ವ್ಯಕ್ತಿ’ ಪ್ರಭಾವ ಬೀರಿದಾಗ ಬಲಿಪರು ಕದಲದೇ ತನ್ನಜ್ಜನ ಹಾದಿಯನ್ನು ಖಚಿತತೆಯಿಂದ ಹಿಡಿದವರು. ಒಂದು ಸಾಂಪ್ರದಾಯಿಕ ಗಾನಕ್ರಮವನ್ನು ಕಾಪಾಡುತ್ತಾ, ತಲೆಮಾರಿನಿಂದ ತಲೆಮಾರಿಗೆ ಕೈದಾಟಿಸುವ ಬದ್ಧತೆಯಿಂದ ಬಲಿಪರು ತೆಂಕಣ ಭಾಗವತಿಕೆಯ ಪ್ರಾತಿನಿಧಿಕ ಭಾಗವತರಾಗಿ ನಮ್ಮ ಮುಂದಿದ್ದಾರೆ.ತೆಂಕಣ ಯಕ್ಷಗಾನ ಹಿಮ್ಮೇಳ- ಮುಮ್ಮೇಳದಲ್ಲಿ ಕ್ರಾಂತಿಕಾರಕ ಪರಿಷ್ಕರಣೆ ತಂದ ಕೂಡ್ಲು ಸುಬ್ರಾಯ ಶ್ಯಾನುಭಾಗರ ಕೂಡ್ಲು ಮೇಳದಲ್ಲಿ ಭಾಗವತರಾಗಿ, ಶ್ಯಾನುಭಾಗರ ಗರಡಿಯಲ್ಲಿ ಸಂಗೀತ ಕಲಿತರೂ ಅಜ್ಜ ಬಲಿಪ ಭಾಗವತರು ಯಕ್ಷಗಾನದ ಹಾಡುಗಾರಿಕೆಗೆ ಸಂಗೀತ ಬಳಸಿರಲಿಲ್ಲ. ಅವರ ಮೊಮ್ಮಗ ಬಲಿಪ ನಾರಾಯಣ ಭಾಗವತರೂ ಸಂಗೀತದ ಬಾಲಪಾಠ ಆದವರೇ. ಆದರೂ ತನ್ನ ಗಾಯನಕ್ಕೆ ಸಂಗೀತ ಸ್ಪರ್ಶ ನೀಡಲಿಲ್ಲ. ಏಕೆಂದರೆ ಯಕ್ಷಗಾನಕ್ಕೆ ಅದರದ್ದೇ ಗಾನಕ್ರಮ, ರಂಗ ಧರ್ಮ ಇದೆ. ಅದನ್ನು ತನ್ನ ಮೂಲಕ ಸ್ಥಾಪಿಸಿ ತೋರಿಸಬೇಕೆಂಬ ಧ್ಯೇಯ ಬದ್ಧತೆ ಮತ್ತು ಸಂಪ್ರದಾಯದ ಕಾಳಜಿ ಬಲಿಪರಲ್ಲಿ ಎಳವೆಯಲ್ಲೇ ಇತ್ತು. ಅವರು ಯಾವುದೇ ಪ್ರಭಾವದ ಹೊಡೆತಕ್ಕೆ ಸಿಗದವರು.

ಜನಪ್ರಿಯತೆಗೆ ನಲುಗದವರು. ಬದಲಿಗೆ ತಾನೇ ಸ್ಫೂರ್ತಿಯಾಗುತ್ತಾ, ಒಂದು ತಲೆಮಾರನ್ನು ತಲೆದೂಗಿಸುತ್ತಾ, ತನ್ನ ಮಕ್ಕಳ ಸಹಿತ ಶಿಷ್ಯರ ಮೂಲಕ ತೆಂಕಣ ಭಾಗವತಿಕೆಯ ಸಂಪ್ರದಾಯ ಶೈಲಿಯನ್ನು ಹಸ್ತಾಂತರಿಸಿದವರು.

ಬಲಿಪರ ಶೈಲಿಗೆ ಸುದೀರ್ಘ ಪರಂಪರೆ ಇದೆ. ಇಷ್ಟು ದೀರ್ಘ ಪರಂಪರೆಯ ಗಾನಕ್ರಮ ನಮ್ಮ ಯಾವುದೇ ಯಕ್ಷಗಾನ ಪ್ರಕಾರದಲ್ಲಿಲ್ಲ. ಹೀಗಾಗಿ ಬಲಿಪರು ಮುಖ್ಯರಾಗುತ್ತಾರೆ. ಅವರನ್ನು ಮಾನಿಸಿದರೆ, ಮಾತುಗಳನ್ನು ಕೇಳಿಸಿಕೊಂಡರೆ ನಾವು ಯಕ್ಷಗಾನವನ್ನು ಗೌರವಿಸಿದಂತಾಗುತ್ತದೆ.

ಬಲಿಪರೇ ಹೇಳುವಂತೆ, ‘ಅಜ್ಜನಿಂದ ನನ್ನ ಕಾಲಕ್ಕೆ ಬರುವಾಗ ಮತ್ತು ನನ್ನಿಂದ ನನ್ನ ಮಕ್ಕಳ, ಶಿಷ್ಯರ ಕಾಲಕ್ಕೆ ಸಾಗುವಾಗ ನಮ್ಮ ಶೈಲಿಯ ಭಾಗವತಿಕೆಯಲ್ಲಿ ಸಣ್ಣಪುಟ್ಟ ಪಲ್ಲಟಗಳು ಸಂಭವಿಸಿರಬಹುದು. ಆದರೆ, ಅದರ ಮನೋಧರ್ಮ, ತಾಳಬದ್ಧತೆ, ಶಿಷ್ಟಾಚಾರಗಳಲ್ಲಿ ಬದಲಾವಣೆ ಆಗಿಲ್ಲ. ಹಿಂದೆ ಎಲ್ಲ ಭಾಗವತರೂ ಇದೇ ಶೈಲಿಯಲ್ಲಿ ಹಾಡುತ್ತಿದ್ದರು. ಆ ಬಳಿಕ ಅವರವರ ಅಸ್ತಿತ್ವಕ್ಕಾಗಿ ಭಿನ್ನ ದಾರಿ ಹಿಡಿದರು’ ಎಂದು.

ಹಾಗಂತ ಬಲಿಪರ ಭಾಗವತಿಕೆಯಲ್ಲೂ ಸಂಗೀತವಿದೆ. ಅದನ್ನು ಅವರೇ ಹೇಳುತ್ತಾರೆ. ರಾಗಗಳ ಬಳಕೆಯಿದ್ದರೂ ಅದನ್ನು ವಿಸ್ತರಿಸದೇ ಹಾಡುವ ಚಿಕ್ಕಚಿಕ್ಕ ಪದಗಳು. ಕಾವ್ಯದ ರಸಕ್ಕೆ ಅಧೀನವಾಗಿ ಅದು ಸೃಷ್ಟಿಸುವ ಹವಾ ಯಕ್ಷಗಾನೀಯತೆಗೆ ಪೂರಕ. ಕರಾವಳಿಯ ಗದ್ದೆ-ಬಯಲಿನ ಅಂಚಿನಲ್ಲಿ ನಟ್ಟಿರುಳಿಗೆ ಬಲಿಪರ ಕಂಠದಿಂದ ವೈವಿಧ್ಯ ರೀತಿಯ ಹಾಡುಗಳನ್ನು ಕೇಳಿದರೆ ಅದು ಅಲೌಕಿಕ ಭಾವಜಗತ್ತೊಂದು ನಿರ್ಮಿಸುತ್ತಲೇ ನಮ್ಮೆದೆಗಳಿಗೆ ಗಾಢವಾಗಿ ತಟ್ಟುತ್ತದೆ. ಅದು ನಿರ್ಮಿಸುವ ವಾತಾವರಣದ ಗುಂಗಿನಲ್ಲಿ ನಾವೂ ಅದರೊಳಗೊಂದಾಗುತ್ತೇವೆ. ಯಕ್ಷಗಾನೀಯತೆಯ ಒಳಮರ್ಮ ಅರಿತ, ನುರಿತ ಹಿರಿಯ ಪ್ರೇಕ್ಷಕರು ಯಾರೇ ಸಿಗಲಿ, ಅವರು ಹೇಳುತ್ತಾರೆ, ‘ಯೌವನದಲ್ಲಿ ಬಲಿಪರ ಕಂಚಿನಕಂಠದ ಪದ ಕೇಳಬೇಕಿತ್ತು, ಅದು ಕಿವಿಯ ತಮಟೆಗೆ ಬಡಿಯುತಿತ್ತು. ಅದಕ್ಕೊಂದು ಅದ್ಭುತ ಝೇಂಕಾರ’ ಎಂದು. ಹಾಗಂತ ಬಲಿಪರ ಗಾನ ಸಾಹಿತ್ಯ ಅಸ್ಪಷ್ಟತೆಯ ಗುಲ್ಲು ಸೃಷ್ಟಿಯಲ್ಲ. ಕವಿಯ ಕಾವ್ಯದ ಕಣ್ಣಾಗಿ ಹಾಡುವ ಮತಿತ್ವ ಅವರಲ್ಲಿತ್ತು. ಅವರಿಂದಿಗೂ ಹೇಳುತ್ತಾರೆ, ‘ಯಕ್ಷಗಾನದ ಭಾಗವತಿಕೆ ಎಂದರೆ ಬೀದಿ ಸಂಗೀತವಲ್ಲ, ಅದು ರಂಗಸಂಗೀತ’ ಎಂದು.

ಬಲಿಪ ನಾರಾಯಣ ಭಾಗವತರು
ಬಲಿಪ ನಾರಾಯಣ ಭಾಗವತರು

ಒಮ್ಮೆ ಪಾಂಡಿಚೇರಿಯ ರಂಗ ಅಧ್ಯಯನ ಕೇಂದ್ರದಲ್ಲಿ ಯಕ್ಷಗಾನದ ಹಾಡುಗಳನ್ನು ಆಲಿಸುತ್ತಾ, ಆ ಪೈಕಿ ಬಲಿಪರ ಗಾಯನವನ್ನು ಕೇಳಿದ ರಂಗಸಂಗೀತ ತಜ್ಞೆ ದಿ.ವೀಣಾಪಾಣಿ ಚಾವ್ಲಾ, ‘ಅಬ್ಬಾ ಎಂದು ಉದ್ಗರಿಸಿ ದೇಶದಲ್ಲೇ ಇದೊಂದು ಅಪ್ಪಟ ಗಾನಶೈಲಿ’ ಎಂದಿದ್ದರಂತೆ. ಈ ಮಾತೇ ಸಾಕಲ್ಲವೇ ಬಲಿಪರು ಯಕ್ಷಗಾನದ ರಾಷ್ಟ್ರೀಯ ಪ್ರತಿಭೆ ಎಂದು ಗುರುತಿಸುವುದಕ್ಕೆ!

ಬಲಿಪರಲ್ಲಿ ಮಾತಾಡುತ್ತಾ ಕುಳಿತರೆ ಅವರು ಪರಂಪರಾಗತ ಗಾನಕ್ರಮವೇ ಸರಿಯೆಂದು ಪ್ರತಿಪಾದಿಸುತ್ತಾರೆ. ಯಕ್ಷಗಾಯನ ರಾಗಪ್ರಧಾನವಲ್ಲ, ಅದು ರಂಗದಗೀತೆ. ಹಾಗಂತ ಸಂಗೀತ ಬೇಡವೋ ಬೇಕು, ಅದು ರಂಗನಿರ್ಮಾಣಕ್ಕಷ್ಟೇ ಸಾಕು. ಗಾನದಲ್ಲಿ ಸಾಹಿತ್ಯ ಸ್ಪಷ್ಟತೆ ಮತ್ತು ತಾಳಕೆಡದಂತೆ ಛಂದೋಬದ್ಧತೆಯಿಂದ ಹಾಡಿ ಯಕ್ಷಗಾನದ ಆವರಣ ನಿರ್ಮಾಣಕ್ಕೆ ಆದ್ಯತೆ ಕೊಡಬೇಕಲ್ಲದೇ, ಮತ್ಯಾವುದೋ ಗಾಯನಗಳನ್ನು ಆಲಿಸಿದ ಅನುಭವಗಳಂತೆ ಆಗಬಾರದು.

ಹಾಗಾದರೆ ರಂಗದಲ್ಲಿ ಪಾತ್ರಗಳು ಸೋಲುತ್ತವೆ ಎನ್ನುವ ಬಲಿಪರು, ಈ ಶ್ರದ್ಧೆಯನ್ನು ಅಜ್ಜನಿಂದಲೇ ಕಲಿತವರು. ಆದರೆ ಅಪ್ಪ ಮಾಧವ ಭಟ್ಟರೇ ಭಾಗವತಿಕೆ ಗುರು. ತನ್ನ 15ರ ಹರೆಯದಲ್ಲಿ ಭಾಗವತಿಕೆಗೆಂದು ಮೇಳಕ್ಕೆ ಬರುವ ಮೊದಲೇ 60ರಷ್ಟು ಪ್ರಸಂಗ ಅವರಿಗೆ ಕಂಠಸ್ಥವಾಗಿತ್ತು. ಅವರಜ್ಜನಿಗಂತೂ ನೂರು ಪ್ರಸಂಗ, ಭಾಗವತ, ಜೈಮಿನಿಭಾರತ, ಹತ್ತು ಹಲವು ಪುರಾಣಕಾವ್ಯಗಳು ಸಂಪೂರ್ಣ ಕಂಠಾಪಾಠವಿತ್ತಂತೆ! ಅವರೊಂದು ದೈತ್ಯ ಪ್ರತಿಭೆ. ಅವರಂತಾಗುವುದು ಕನಸಿನ ಮಾತು ಎನ್ನುತ್ತಾರೆ ಬಲಿಪರು.

ಯಕ್ಷಗಾನದಲ್ಲಿ ಬಲಿಪ ಶೈಲಿ ಪ್ರತಿಷ್ಠಾಪಿಸಿದ ಅಜ್ಜ ಬಲಿಪರು ಹಾಡುವ ಕಾಲಕ್ಕೆ ‘ಹುಲಿ’ಯಂತಿದ್ದವರು. ಅವರು ಕಲ್ಪಿಸಿದಂತೆಯೇ ಆಗಬೇಕು. ಅದಲ್ಲದಿದ್ದರೆ ರಂಗದಲ್ಲೇ ಹಿಮ್ಮೇಳ-ಮುಮ್ಮೇಳದವರಿಗೆ ಬೈಗುಳ! ಅಂತ ಅಜ್ಜನ ಹತ್ರ ದೊಡ್ಡ ಕಲಾವಿದರೇ ಹತ್ತಿರ ಹೋಗುವುದೋ, ಸಲುಗೆಯಲ್ಲಿ ಮಾತಾಡುವುದೋ ಮಾಡುತ್ತಿರಲಿಲ್ಲ. ಮೊಮ್ಮಗ ನಾರಾಯಣ ಭಾಗವತನಾಗುವ ಹುಚ್ಚಿನಲ್ಲಿ ಅಜ್ಜನದೇ ಶೈಲಿಗೆ ಮಾರುಹೋದಾಗ ಮತ್ತು ಹಾಗೆಯೇ ಹಾಡಲು ಪ್ರಯತ್ನಿಸುತ್ತಿದ್ದಾಗ, ‘ಇವ ನನ್ನನ್ನು ಲಗಾಡಿ ಕೊಡ್ತಾನೆ’ ಎಂದು ಬೈಯುತ್ತಿದ್ದರಂತೆ. ಆದರೆ ಅದೇ ಅಜ್ಜ ಕೊನೆಗಾಲದಲ್ಲೊಮ್ಮೆ ‘ಇವ ನನ್ನಷ್ಟು ಕಲಿಯದಿದ್ದರೂ, ನನಗಿಂತ ಹೆಸರು-ಮನ್ನಣೆ ಪಡೆದಾನು’ ಎಂದಿದ್ದರಂತೆ. ಆರು ದಶಕ ದಾಟಿದ ಬಲಿಪ ಗಾನಯಾನದಲ್ಲಿ ಅದು ನಿಜವಾಗಿದೆ, ಬಲಿಪ ಪರಂಪರೆ ಸ್ಥಾಯಿಯಾಗಿದೆ.

ಕರ್ನಾಟಕ ಸರ್ಕಾರ ಯಕ್ಷಗಾನಕ್ಕೆ ನೀಡುವ ಅತ್ಯಂತ ದೊಡ್ಡ ಪ್ರಶಸ್ತಿ ಪಾರ್ತಿಸುಬ್ಬ ಪ್ರಶಸ್ತಿ. ₹1 ಲಕ್ಷ ನಗದು ಮತ್ತು ಪದಕ, ಪಾರಿತೋಷಕ ಒಳಗೊಂಡ ಈ ಪ್ರಶಸ್ತಿ ಈಗಷ್ಟೇ ಬಲಿಪರ ಮುಡಿಗೇರುತ್ತಿದೆ. ಮೂರ್ನಾಲ್ಕು ವರ್ಷ ಹಿಂದೆಯೇ ಅವರಿದನ್ನು ಮುಡಿಯಬೇಕಾಗಿತ್ತು. ಆದರೆ, ಈಗಲಾದರೂ ಸಿಕ್ಕಿದೆಯಲ್ಲಾ ಎಂಬ ಸಂತೋಷವನ್ನು ಬಲಿಪರೂ ಹಂಚುತ್ತಾರೆ. ಪ್ರಶಸ್ತಿಯ ಖುಶಿಯಲ್ಲಿ ಪಾರ್ತಿಸುಬ್ಬ ಎಂದರೆ ಸಾಕು ಬಲಿಪರು ಭಾವುಕರಾಗುತ್ತಾರೆ. ಏಕೆಂದರೆ ಅವರ 14ರ ಹರೆಯದಲ್ಲಿ, ಮಾನ್ಯ ನಿವಾಸಿ ತಿಮ್ಮಯ್ಯ (ಈಗಲೂ ಇದ್ದಾರೆ) ಎಂಬುವರು ನಡೆಸುತ್ತಿದ್ದ ಭಗವತಿ ಮೇಳದ ಆಟ ಕಣಿಪುರ (ಕುಂಬಳೆ) ದೇವಸ್ಥಾನ ಬಳಿ ನಡೆದಿತ್ತಂತೆ. ಈ ಮೇಳದಲ್ಲಿ ಬಲಿಪರು ಪ್ರಪ್ರಥಮ ಜಾಗಟೆ ಹಿಡಿದು ಹಾಡಿದವರು. ಬಲಿಪರನ್ನು ಭಾಗವತಿಕೆಗೆ ಕುಳ್ಳಿರಿಸಿದ್ದೇ ಇದೇ ತಿಮ್ಮಯ್ಯನವರು. ಕುಂಬ್ಳೆಯ ಅಂದಿನ ಆಟದ ಜನಪ್ರಿಯತೆ ಹೇಗಿತ್ತೆಂದೆರೆ ಒಂದು ಆಟದ ಯಶಸ್ಸಿನಿಂದ ಒಂದೇ ಊರಿನಲ್ಲಿ 3 ರಾತ್ರಿ 3 ಕಡೆ ಆಟಗಳಾಗಿತ್ತು. ರಾತ್ರಿ ಇಡೀ ನಿದ್ದೆಗೆಟ್ಟ ಬಲಿಪರು ಕಣಿಪುರ ದೇಗುಲದ ಪಕ್ಕದಲ್ಲೇ ಇದ್ದ ಪಾರ್ತಿಸುಬ್ಬನ ಜೀರ್ಣಗೊಂಡಿದ್ದ ಮೂಲಮನೆಯಲ್ಲೇ ಹಗಲು ಮಲಗುತ್ತಿದ್ದರಂತೆ! ಆಗ ಅದು ಜನರಹಿತ ಮನೆ. ಈಗಲ್ಲಿ ಆ ಕುರುಹೇ ಇಲ್ಲ.

ಅಂದು ಪಾರ್ತಿಸುಬ್ಬನ ಮನೆಯಲ್ಲಿ ಮಲಗಿದ ಬಲಿಪರಿಗೀಗ ಪಾರ್ತಿಸುಬ್ಬ ಪ್ರಶಸ್ತಿ ಸಿಕ್ಕಿದೆ. ಪಾರ್ತಿಸುಬ್ಬನ ಪ್ರಸಂಗವೆಂದರೆ ಅದು ಸರಳ, ಸುಂದರ ಕಾವ್ಯ. ಎಂಥವರಿಗೂ ಅರ್ಥವಾಗುವ ಸ್ಪಷ್ಟತೆ. ಯಕ್ಷಗಾನಕ್ಕೆ ಅಂತ ಪ್ರಸಂಗಗಳು ಆ ಮೊದಲೂ ಇಲ್ಲ; ಆ ಬಳಿಕವೂ ಬರಲಿಲ್ಲ. ನಾವೆಲ್ಲಾ ಪ್ರಸಂಗ ಬರೆಯಲು ಆತನ ಪದ್ಯಗಳ ಚೆಲುವೇ ಸ್ಫೂರ್ತಿ ಎನ್ನುವ ಬಲಿಪರು ಸದ್ದು ಗದ್ದಲಗಳಿಲ್ಲದ ಬದುಕಿನ ಭಾವಜೀವಿ. ಮುಗ್ಧತೆಯೇ ಅವರ ಮುಖಮುದ್ರೆ. ಭಾಗವತಿಕೆ ಅವರ ಆರಾಧನೆ. ಆರಾಧನೆಯ ಬದುಕೀಗ 82ರ ಹರೆಯ. ಬಹುಶಃ ಭಾರತದ ಬೇರೆ ಗಾನ ಶಾಖೆಗಳ ಪ್ರತಿನಿಧಿಯೊಬ್ಬರು ಈ ಎತ್ತರಕ್ಕೇರಿ, ಈ ಹರೆಯದಲ್ಲಿರುತ್ತಿದ್ದರೆ ಪಡೆಯುತ್ತಿದ್ದ ಯಾವ ದೊಡ್ಡ ರಾಜ್ಯ-ರಾಷ್ಟ್ರೀಯ ಅನುಮೋದನೆಗಳು-ಅಭಿನಂದನೆಗಳೂ ಅವರಿಗೆ ಸಲ್ಲಲಿಲ್ಲ. ಅವರ ಜಾಯಮಾನ ಪ್ರಶಸ್ತಿ-ಕೀರ್ತಿ-ಪ್ರಚಾರಗಳ ಹಿಂದೆ ಹೋದದ್ದೂ ಅಲ್ಲ. ಅವರ ಧ್ಯೇಯ ಪರಂಪರೆಯ ನಡಿಗೆ ಅಷ್ಟೆ. ಆದರೆ, ಸುಮನಸುಗಳು ಆ ಪರಂಪರೆಗೆ ತಲೆಬಾಗುವ ಸಂಸ್ಕೃತಿ ಕಾಪಾಡಬೇಡವೇ?

ಚಿತ್ರಗಳು: ದೇವಾನಂದ ಭಟ್, ಬೆಳುವಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT