ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಫೆ ಪಾಸಿಟಿವ್'’ಆತ್ಮವಿಶ್ವಾಸದ ಗುಟುಕು 

Last Updated 25 ಮೇ 2019, 19:30 IST
ಅಕ್ಷರ ಗಾತ್ರ

‘ಸಂಜೆ ಐದು ಗಂಟೆ ನಂತರ ಒಂದೆರಡು ತಾಸು ಕೂತುಕೊಂಡು ಹರಟೆ ಹೊಡೆಯಲು ವಿಶೇಷ ಕೆಫೆಯೊಂದಿದೆ. ಅಲ್ಲೇ ಮಾತಾಡೋಣ’ ಎಂದು ಕೋಲ್ಕತ್ತದ ಮಿತ್ರ ಅನಿರ್ಬನ್ ಬ್ಯಾನರ್ಜಿ ಹೇಳಿದ್ದ.

ವಿಶಾಲವಾದ ಉದ್ಯಾನವೋ, ಸಾಂಪ್ರದಾಯಿಕ ಬಂಗಾಳಿ ಶೈಲಿಯ ಹೋಟೆಲ್ಲೋ ಅದಾಗಿರಬಹುದು ಎಂದುಕೊಂಡು ಜೋಧಪುರ ಪಾರ್ಕ್ ಪ್ರದೇಶದ ‘ಕೆಫೆ ಪಾಸಿಟಿವ್’ಗೆ ಹೋದಾಗ, ಮೇಲ್ನೋಟಕ್ಕೆ ತುಸು ಐಷಾರಾಮಿ ರೆಸ್ಟೊರೆಂಟ್‌ನಂತೆ ಭಾಸವಾಯಿತು. ಹವಾ ನಿಯಂತ್ರಿತ ಮತ್ತು ಅಲಂಕೃತ ಒಳಾವರಣ, ಕುಳಿತುಕೊಳ್ಳಲು ನಾಲ್ಕೈದು ಸೆಟ್ ಮೆತ್ತನೆಯ ಕುರ್ಚಿ, ಗೋಡೆಗೆ ಒರಗಲು ಸುಪ್ಪತ್ತಿಗೆ, ಬಿದಿರಿನ ಟೇಬಲ್, ಮೇಲೊಂದು ಚೆಂದದ ಮೆನು ಕಾರ್ಡ್. ಅದರಲ್ಲಿದ್ದ ತಿಂಡಿ ತಿನಿಸುಗಳ ದರ ಅತ್ತ ಅಗ್ಗವೂ ಅಲ್ಲ; ಇತ್ತ ತೀರಾ ದುಬಾರಿಯೂ ಅಲ್ಲ.

‘ಇಲ್ಲಿನ ಕೋಲ್ಡ್ ಕಾಫಿ ರುಚಿ ನೋಡಿ ಒಮ್ಮೆ’ ಎಂದು ಅನಿರ್ಬನ್ ಆರ್ಡರ್ ಮಾಡಿದ. ಕಾಫಿ ಕಪ್ ಜತೆಗೆ ಒಂದಷ್ಟು ಕುರುಕಲು ತಿಂಡಿಗಳನ್ನು ತಂದಿಟ್ಟ ಯುವತಿ, ಮುಗುಳ್ನಕ್ಕು ಮತ್ತೊಂದು ಟೇಬಲ್ ಕಡೆಗೆ ಸಾಗಿದಳು.

‘ಆಕೆಯ ಮುಖದಲ್ಲಿ ಆತ್ಮವಿಶ್ವಾಸ ಗಮನಿಸಿದಿರಾ’ ಎಂಬ ಅನಿರ್ಬನ್ ಪ್ರಶ್ನೆ ಅರ್ಥವಾಗಲಿಲ್ಲ. ‘ಆಕೆ ಎಚ್ಐವಿ ಪಾಸಿಟಿವ್’ ಎಂದು ಅಚ್ಚರಿಗೊಳಿಸಿದ. ಆಕೆಯೊಬ್ಬಳೇ ಅಲ್ಲ. ಅಲ್ಲಿ ಉಪಚರಿಸುತ್ತಿದ್ದ ನಾಲ್ಕೈದು ಯುವಕ- ಯುವತಿಯರು ಅದೇ ಪಟ್ಟಿಯಲ್ಲಿದ್ದವರು. ಲಗುಬಗೆಯಿಂದಲೂ ಉತ್ಸಾಹದಿಂದಲೂ ಓಡಾಡುತ್ತ ಈ ಯುವ ಸರ್ವರ್‌ಗಳು ಗ್ರಾಹಕರ ಕುಶಲೋಪರಿ ವಿಚಾರಿಸುತ್ತ ಸರ್ವ್ ಮಾಡುತ್ತಿದ್ದರು. ಎಚ್ಐವಿ ಪಾಸಿಟಿವ್ ಇದ್ದವರು ಮಾನಸಿಕವಾಗಿಯೂ, ದೈಹಿಕವಾಗಿಯೂ ಕುಗ್ಗುತ್ತ ಆತ್ಮವಿಶ್ವಾಸ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿ ಬದುಕುವುದನ್ನೇ ನೋಡಿರುವವರಿಗೆ ‘ಕೆಫೆ ಪಾಸಿಟಿವ್’ ಬೇರೊಂದು ಲೋಕವನ್ನು ಅನಾವರಣ ಮಾಡಿಸುತ್ತದೆ.

ಸಮಾಜದಲ್ಲಿ ಎಚ್ಐವಿ ಪೀಡಿತರ ಕುರಿತು ಬೇರೂರಿರುವ ನಕಾರಾತ್ಮಕ ಧೋರಣೆಯನ್ನು ದೂರ ಮಾಡಲೆಂದೇ ಆರಂಭವಾಗಿರುವ ‘ಕೆಫೆ ಪಾಸಿಟಿವ್’, ತನ್ನ ವಿಶಿಷ್ಟ ಪರಿಕಲ್ಪನೆಯಿಂದ ಗಮನಸೆಳೆಯುತ್ತಿದೆ. ಒಂದೊಮ್ಮೆ ಎಚ್ಐವಿ ಇದೆ ಎಂದು ಗೊತ್ತಾದ ಕೂಡಲೇ ಮಕ್ಕಳನ್ನು ಕುಟುಂಬದಿಂದ ಹೊರಹಾಕಿದ ನಿದರ್ಶನಗಳು ‘ಸಭ್ಯ ಸಮಾಜ’ದಲ್ಲಿ ಸಾಕಷ್ಟಿವೆ.

ಅಂಥ ಮಕ್ಕಳು ದಾರಿತಪ್ಪಿ, ಸಮಾಜದ ಮುಖ್ಯವಾಹಿನಿಗೆ ಬರದೇ ಇನ್ನೇನೋ ಆಗಿಬಿಡುತ್ತಾರೆ. ‘ಕಾರಣ ಏನೇ ಇರಲಿ; ಆ ಮಕ್ಕಳ ಭವಿಷ್ಯ ಹೀಗೆ ಹಾಳಾಗಬಾರದಲ್ಲವೇ’ ಎಂದು ಪ್ರಶ್ನಿಸುತ್ತಾರೆ ಎಚ್ಐವಿ ಪೀಡಿತ ಮಕ್ಕಳ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಕಲ್ಲೋಲ್ ಘೋಷ್. ‘ಕೆಫೆ ಪಾಸಿಟಿವ್’ ರೂವಾರಿಯೂ ಇವರೇ.

‘ಆಫರ್’ (ಆರ್ಗನೈಸೇಶನ್ ಆಫ್ ಫ್ರೆಂಡ್ಸ್ ಫಾರ್ ಎನರ್ಜೀಸ್ ಅಂಡ್ ರಿಸೋರ್ಸಸ್) ಎಂಬ ಸ್ವಯಂಸೇವಾ ಸಂಸ್ಥೆಯ ಸ್ಥಾಪಕರಾಗಿರುವ ಘೋಷ್, ವಿವಿಧ ಕಡೆಗಳಿಂದ ಧನಸಹಾಯ ಪಡೆದು ‘ಆನಂದಘರ್’ ಎಂಬ ಕೇಂದ್ರದಲ್ಲಿ ಎಚ್ಐವಿ ಪೀಡಿತ ಮಕ್ಕಳಿಗೆ ಆಶ್ರಯ ನೀಡಿದ್ದಾರೆ. ದಾನಿಗಳು ಹಾಗೂ ಸರ್ಕಾರದ ನೆರವಿನೊಂದಿಗೆ ವಿವಿಧ ಬಗೆಯ ವೃತ್ತಿಪರ ತರಬೇತಿ ನೀಡಿ, ಅವರನ್ನು ಸ್ವಾವಲಂಬಿಯನ್ನಾಗಿ ಮಾಡಲು ಯತ್ನಿಸಲಾಗುತ್ತಿದೆ. ಉದ್ದಿಮೆ, ಖಾಸಗಿ ಕಚೇರಿಗಳಲ್ಲಿ ಕೆಲಸ ಪಡೆಯುವ ಜತೆಗೆ ಸಣ್ಣಪುಟ್ಟ ಮಳಿಗೆಗಳನ್ನು ಶುರು ಮಾಡಿಕೊಂಡು ಜೀವನೋಪಾಯ ನಡೆಸಲು ಪ್ರೇರೇಪಣೆ ಕೊಡಲಾಗುತ್ತದೆ. ಅವೆಲ್ಲಕ್ಕಿಂತ ‘ಕೆಫೆ ಪಾಸಿಟಿವ್’ ಸ್ವರೂಪ ವಿಭಿನ್ನ.

ಜಪಾನ್ ಪ್ರಯತ್ನದ ಪ್ರೇರಣೆ

ಐದು ವರ್ಷಗಳ ಹಿಂದೆ ಜಪಾನ್ ಸರ್ಕಾರ ಅನಾಥ ಮಕ್ಕಳ ಕೇಂದ್ರದಲ್ಲಿ ಯೋಜನೆಯೊಂದನ್ನು ರೂಪಿಸಿತ್ತು. ಬೇಕರಿ ಘಟಕ ಸ್ಥಾಪಿಸಿ, ಅದನ್ನು ಮಕ್ಕಳೇ ನಿರ್ವಹಣೆ ಮಾಡುವಂತೆ ಪ್ರೇರೇಪಿಸಿತು. ಆದರೆ, ‘ಯುವಕರಿಗೆ ಆ ಕೆಲಸ ವಹಿಸಬೇಕೇ ಹೊರತು ಮಕ್ಕಳಿಗೆ ಅಲ್ಲ’ ಎಂಬ ಸಾರ್ವಜನಿಕರ ಆಕ್ಷೇಪದಿಂದಾಗಿ ಘಟಕವನ್ನು ಸ್ಥಗಿತಗೊಳಿಸಲಾಯಿತು. ಘೋಷ್ ಅವರಿಗೆ ಕಾಫಿ ಶಾಪ್ ಆರಂಭಿಸುವ ಯೋಚನೆ ಹೊಳೆಯಲು ಕಾರಣ ಈ ಪ್ರಕರಣ.

18 ವರ್ಷ ದಾಟಿದ ಆರು ಯುವಕರು ಹಾಗೂ ನಾಲ್ವರು ಯುವತಿಯರನ್ನು ಆಯ್ಕೆ ಮಾಡಿಕೊಂಡ ಘೋಷ್, ಎಲ್ಲರಿಗೂ ಹೋಟೆಲ್ ನಿರ್ವಹಣೆಯ ಕಿರು ತರಬೇತಿ ಕೊಡಿಸಿದರು. ಘೋಷ್ ಸ್ನೇಹಿತ ರತನ್ ದಾಸ್, ಕೋಲ್ಕತ್ತದಲ್ಲಿ ಕಾಫಿ ಮಳಿಗೆಗಳ ಮ್ಯಾನೇಜರ್ ಆಗಿದ್ದರು. ಅವರಿಂದ ರೆಸ್ಟೋರೆಂಟ್ ನಿರ್ವಹಣೆಯ ವಿವಿಧ ಹಂತಗಳನ್ನು ಈ ಹತ್ತು ಜನರಿಗೆ ಕಲಿಸಿದರು. ಸ್ಥಳಾವಕಾಶ ಸಿಕ್ಕ ತಕ್ಷಣವೇ ರೆಸ್ಟೋರೆಂಟ್ ಆರಂಭಿಸಲು ಸಿದ್ಧತೆ ನಡೆದವು. ಈ ಹಂತದಲ್ಲಿ ಎದುರಾಗಿದ್ದು ಬಹುದೊಡ್ಡ ಸಮಸ್ಯೆ.

‘ನಮ್ಮ ಉದ್ದೇಶ ಸ್ಪಷ್ಟವಾಗಿತ್ತು. ಅದರಲ್ಲಿ ಮುಚ್ಚುಮರೆ ಏನೂ ಇರಲಿಲ್ಲ. ಎಚ್ಐವಿ ಪೀಡಿತ ಯುವಕರೇ ನಿರ್ವಹಿಸುವ ಕಾಫಿ ಶಾಪ್‌ಗೆ ಜಾಗ ಕೊಡಲು ಯಾರೂ ಮುಂದೆ ಬರಲಿಲ್ಲ. ಕೇಳಿದಷ್ಟು ಬಾಡಿಗೆ ಕೊಡಲು ನಾವು ಸಿದ್ಧರಿದ್ದೆವು. ಆದರೆ, ಕೇಳಿದಲ್ಲೆಲ್ಲ ನಮಗೆ ನಕಾರಾತ್ಮಕ ಉತ್ತರ ಬಿಟ್ಟರೆ ಮತ್ತೇನೂ ಸಿಗಲಿಲ್ಲ’ ಎಂದು ಆ ಕಹಿ ಅನುಭವವನ್ನು ನೆನಪಿಸಿಕೊಳ್ಳುತ್ತಾರೆ ಘೋಷ್.

ರೋಟರಿ ಕ್ಲಬ್‌ನ ಸದಸ್ಯ ಹಾಗೂ ಔಷಧಿ ಕಂಪನಿಯೊಂದರಲ್ಲಿ ಹಿರಿಯ ಅಧಿಕಾರಿಯಾಗಿರುವ ಇಂದ್ರಜ್ಯೋತಿ ದಾಸಗುಪ್ತಾ ಅವರಿಗೆ ಈ ಸುದ್ದಿ ತಲುಪಿತು. ತಮ್ಮ ಮನೆ ಕೆಳಗೆ ಕಾರು ನಿಲ್ಲಿಸಲು ಬಳಸುತ್ತಿದ್ದ ಜಾಗ ಕೊಡಬಯಸಿದರೂ ಅದು ಸಾಕಾಗಲಿಕ್ಕಿಲ್ಲ ಎಂದುಕೊಂಡು ಸುಮ್ಮನಾದರು. ಆದರೆ, ಕಾಫಿ ಶಾಪ್‌ಗೆ ಎಲ್ಲೂ ಜಾಗ ಸಿಗದೇ ಹೋದಾಗ, ತಾವೇ ಈ ಸ್ಥಳ ಬಿಟ್ಟುಕೊಡಲು ನಿರ್ಧರಿಸಿದರು. ‘ಜೀವನವಿಡೀ ಕೀಳರಿಮೆಯಿಂದ ಕುಗ್ಗುತ್ತ ಹೋಗುವ ಬದಲಿಗೆ ತಮ್ಮ ಕನಸು ನನಸು ಮಾಡಿಕೊಳ್ಳಲು ಮುಂದಾಗುವ ಈ ಯುವಕ- ಯುವತಿಯರಿಗೆ ನನ್ನ ಪಾಲಿನ ಸಣ್ಣ ಕಾಣಿಕೆ ಕೊಟ್ಟಿದ್ದೇನೆ. ಇದು ನನಗೆ ಹೆಮ್ಮೆಯ ಸಂಗತಿಯೂ ಹೌದು’ ಎನ್ನುತ್ತಾರೆ ದಾಸಗುಪ್ತಾ. ಹೀಗೆ ಸ್ಥಾಪನೆಯಾಗಿದ್ದು ‘ಕೆಫೆ ಪಾಸಿಟಿವ್.’

ಘೋಷ್ ಅವರ ಕೆಲವು ಸ್ನೇಹಿತರು ನೀಡಿದ ದೇಣಿಗೆಯಿಂದ ಪೀಠೋಪಕರಣ ಖರೀದಿಸಲಾಯಿತು. ಮತ್ತೊಂದಷ್ಟು ಗೆಳೆಯರು ಒವನ್, ಫ್ರಿಡ್ಜ್, ಗಾಜಿನ ಕಪಾಟುಗಳನ್ನು ಕೊಡಿಸಿದರು. ರೆಸ್ಟೋರೆಂಟ್ ಆರಂಭಕ್ಕೆ ಅಗತ್ಯವಿರುವ ಪರವಾನಗಿ ಸುಲಭವಾಗಿ ಸಿಕ್ಕಿತು. ಹಿತಕರ ಅನುಭವ ನೀಡುವ ಒಳಾಂಗಣ, ಹವಾನಿಯಂತ್ರಿತ ವ್ಯವಸ್ಥೆ ಹಾಗೂ ವಿಶಿಷ್ಟ ವಿನ್ಯಾಸದ ಪೀಠೋಪಕರಣಗಳೊಂದಿಗೆ ಕಳೆದ ವರ್ಷ ಜುಲೈ 14ರಂದು ಜೋಧಪುರ ಪಾರ್ಕ್ ಪ್ರದೇಶದಲ್ಲಿ ‘ಕೆಫೆ ಪಾಸಿಟಿವ್’ ಕಾರ್ಯಾರಂಭ ಮಾಡಿತು.

ವಿವಿಧ ವರ್ಗದ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ‘ಮೆನು’ ಆಯ್ಕೆ ಮಾಡಲಾಯಿತು. ‘ದುಬಾರಿ ಅಲ್ಲದ, ಎಲ್ಲ ವರ್ಗದ ಗ್ರಾಹಕರೂ ಬಯಸುವಂಥ ಪೇಯ- ತಿನಿಸುಗಳನ್ನು ಆಯ್ದುಕೊಂಡೆವು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಚಿಂತನೆ ಹಾಗೂ ಗುರಿ- ಎರಡೂ ಜನರನ್ನು ಸೆಳೆಯುವಂತೆ ಇದ್ದವು. ಯಾವುದೇ ಜಾಹೀರಾತು ನೀಡಲಿಲ್ಲ. ಕೇವಲ ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿದ್ದರ ಫಲವಾಗಿ ಕೆಫೆ ಪಾಸಿಟಿವ್ ಜನರನ್ನು ಸೆಳೆಯತೊಡಗಿತು’ ಎಂದು ವಿವರ ಕೊಡುತ್ತಾರೆ ರತನ್ ದಾಸ್.

ಅಂದಹಾಗೆ ಕೆಫೆಯ ಮೆನುವಿನಲ್ಲಿ ಇವೆಲ್ಲ ಇವೆ: ಮಫಿನ್ಸ್, ವೆಜ್ ಹಾಗೂ ನಾನ್‌ ವೆಜ್ ಸ್ಯಾಂಡ್ವಿಚ್, ಬರ್ತ್‌ಡೇ ಕೇಕ್ಸ್, ಹತ್ತಾರು ಬಗೆಯ ಕಾಫಿ, ಚಹಾ, ಕುರುಕಲು ತಿನಿಸುಗಳು, ಬಿಸ್ಕಿಟ್ ಸೇರಿದಂತೆ ತರಹೇವಾರಿ ಪೇಯ- ತಿಂಡಿಗಳು.

‘ಪಾಸಿಟಿವ್’ ಪ್ರತಿಕ್ರಿಯೆ

ದೇಶದಲ್ಲೇ ಮೊದಲ ಬಾರಿಗೆ ನಡೆದ ಈ ಪ್ರಯತ್ನಕ್ಕೆ ಜನರ ಪ್ರತಿಕ್ರಿಯೆ ಹೇಗಿತ್ತು?

‘ಖಂಡಿತವಾಗಿಯೂ ನಾವು ಅಂದುಕೊಂಡಿರಲಿಲ್ಲ. ಇಷ್ಟೊಂದು ಜನಪ್ರಿಯತೆ ಪಡೆಯುತ್ತೇವೆ ಅಂತ’ ಎಂದು ಬೆರಗಿನಿಂದ ನುಡಿಯುತ್ತಾರೆ ಘೋಷ್. ‘ಎಚ್ಐವಿ ಪೀಡಿತರನ್ನು ಜನ ಕೀಳಾಗಿ ನೋಡುತ್ತಾರೆಂಬುದು ಸಾಮಾನ್ಯ ಭಾವನೆ. ಆದರೆ, ಅವರನ್ನು ಮಾನವೀಯ ದೃಷ್ಟಿಯಿಂದ ನೋಡುವವರೂ ಇದ್ದಾರೆ. ಈ ಸಂಗತಿ ಖಚಿತವಾಗಿದ್ದು ನಮ್ಮ ರೆಸ್ಟೋರೆಂಟ್ ಮೂಲಕ‘ ಎಂದೂ ಅವರು ಹೇಳುತ್ತಾರೆ.

‘ಕೆಫೆ ಪಾಸಿಟಿವ್’ ಕೇವಲ ಕಾಫಿ- ಚಹಾ ಹೀರುವ ತಾಣವಾಗಿ ಈಗ ಉಳಿದಿಲ್ಲ. ಒಂದು ವಿಶೇಷ ಪ್ರಯೋಗದಲ್ಲಿ ಭಾಗಿಯಾಗುವ ಆಸಕ್ತಿಯಿಂದಲೂ ಇಲ್ಲಿಗೆ ಬರುವವರು ಇದ್ದಾರೆ. ಒಬ್ಬ ಯುವಕ ತನ್ನ ಸರಳ ಮದುವೆಯನ್ನು ಆಯ್ದ ಸ್ನೇಹಿತರ ಜತೆ ಈ ರೆಸ್ಟೋರೆಂಟ್‌ನಲ್ಲೇ ಮಾಡಿಕೊಂಡ. ಮತ್ತೊಬ್ಬ ಯುವತಿ ತನ್ನ ಜನ್ಮದಿನವನ್ನು ಹೋಟೆಲಿನಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡ ನಂತರ ಇಲ್ಲಿಗೆ ಬಂದು ಸ್ನೇಹಿತರ ಜತೆ ಕೇಕ್ ಕತ್ತರಿಸಿ ಸಂಭ್ರಮಪಟ್ಟಳು. ‘ಇದನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡಲು ಸಾಧ್ಯವೇ ಇಲ್ಲ, ಅಲ್ಲವೇ’ ಎಂದು ಪ್ರಶ್ನಿಸುತ್ತಾರೆ ಘೋಷ್.

‘ನಾವು ಒಟ್ಟು ಹತ್ತು ಜನರಿದ್ದು, ಮೂರು ಪಾಳಿಗಳಲ್ಲಿ ರೆಸ್ಟೋರೆಂಟ್ ನಿರ್ವಹಿಸುತ್ತೇವೆ. ನಮಗೆ ಸ್ಟೈಪೆಂಡ್ ಕೊಡಲಾಗುತ್ತದೆ‘ ಎಂದು ಆಜ್ಮಿನ್ (ಹೆಸರು ಬದಲಿಸಲಾಗಿದೆ) ಹೇಳುತ್ತಾಳೆ.

‘ನಾವು ಎಚ್ಐವಿ ಪೀಡಿತರು. ಇದನ್ನು ಧೈರ್ಯವಾಗಿ ಹೇಳುತ್ತೇವೆ. ಹಾಗೆಂದು ಯಾರಿಗೂ ಕಾಣದಂತೆ ಮುಚ್ಚಿಟ್ಟುಕೊಂಡು ಜೀವನ ನಡೆಸಬೇಕಿಲ್ಲ. ಇಲ್ಲಿಗೆ ಬರುವವರ ಜತೆ ಯಾವುದೇ ಹಿಂಜರಿಕೆ ಇಲ್ಲದೇ ನಾವು ಮಾತಾಡುತ್ತೇವೆ. ನಮ್ಮ ಜತೆ ಅವರೂ ಹರಟೆ ಹೊಡೆಯುತ್ತಾರೆ’ ಎಂದು ಖುಷಿಯಿಂದ ಅನುಭವ ಹಂಚಿಕೊಳ್ಳುತ್ತಾನೆ ಸ್ವಪ್ನದಾಸ್ (ಹೆಸರು ಬದಲಿಸಲಾಗಿದೆ).

ಸಂಜೆ ಹೊತ್ತು ‘ಕೆಫೆ’ಗೆ ಬರುವ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆಯಾಗುತ್ತದೆ. ಕುತೂಹಲಕ್ಕೆಂದು ಇಲ್ಲಿಗೆ ಬರುವವರಿಗೂ ಕಡಿಮೆಯಿಲ್ಲ. ಹಾಗೆ ಬಂದವರು ಇಲ್ಲಿನ ‘ಸಿಬ್ಬಂದಿ’ಯ ಚಾಕಚಕ್ಯ ಹಾಗೂ ಮುಗುಳ್ನಗೆಯುಕ್ತ ಸೇವೆ ಕಂಡು ಖುಷಿಯಾಗುತ್ತಾರೆ. ಸ್ಥಳಾವಕಾಶ ಕಡಿಮೆ ಇರುವುದರಿಂದ ಹೊರಗೆ ಕಾಯುತ್ತ ನಿಲ್ಲುವ ಗ್ರಾಹಕರೂ ಕಾಣಸಿಗುತ್ತಾರೆ. ಅರ್ಧತಾಸು ಕಾಯ್ದ ಬಳಿಕ ಇಬ್ಬರು ಸ್ನೇಹಿತರ ಜತೆಗೂಡಿ ಒಳಬಂದ ಅಶುತೋಷ್ ‘ಬೇರೆ ಹೋಟೆಲಿನಲ್ಲಿ ಸ್ಥಳಾವಕಾಶ ಸಿಗದಿದ್ದರೆ ನಾನು ಕಾಯುವುದಿಲ್ಲ. ಆದರೆ, ಇಲ್ಲಿ ಮಾತ್ರ ಹಾಗಿಲ್ಲ. ಕಾಯ್ದು ಕಾಯ್ದು ಕಾಫಿ ಕುಡಿದರೂ ಅದು ಹೆಚ್ಚು ರುಚಿಯಾಗಿರುತ್ತದೆ’ ಎಂದು ನಗುತ್ತ ಪ್ರತಿಕ್ರಿಯೆ ನೀಡುತ್ತಾರೆ.

‘ಕೆಫೆ ಪಾಸಿಟಿವ್’ ಪ್ರಯೋಗದ ಕುರಿತು ಘೋಷ್ ಜತೆ ಮಾತುಕತೆ ನಡೆಸುತ್ತಿರುವಾಗ ಬಂಗಾಳಿ ಚಾಯ್ ತಂದಿಟ್ಟ ಭೂಷಣ್ ನಮ್ಮತ್ತ ಮುಗುಳ್ನಕ್ಕ. ಆತನನ್ನು ಪರಿಚಯಿಸಿದ ಘೋಷ್, ‘ಎಚ್ಐವಿ ಎಂಬುದು ಗೊತ್ತಾದ ಬಳಿಕ ಕುಟುಂಬವೇ ಈತನನ್ನು ಹೊರಹಾಕಿತ್ತು. ಈಗ ನೋಡಿ ಆತನಲ್ಲಿನ ಆತ್ಮವಿಶ್ವಾಸ‘ ಎಂದು ಸಾರ್ಥಕ್ಯದ ನೋಟ ಬೀರುತ್ತಾರೆ.

‘ನಮ್ಮ ಪ್ರಯತ್ನ ನೋಡಿ, ಹಲವು ಸಂಘ- ಸಂಸ್ಥೆಗಳು ತಾವೂ ಇಂಥ ರೆಸ್ಟೋರೆಂಟ್‌ ಶುರು ಮಾಡುವುದಾಗಿ ಹೇಳಿವೆ. ಎಚ್ಐವಿ ಪೀಡಿತರ ಬದುಕಿಗೆ ಬೆಳಕು ತುಂಬುವ ನಿಟ್ಟಿನಲ್ಲಿ ನಮ್ಮದೊಂದು ಸಣ್ಣ ಪ್ರಯತ್ನವಿದು’ ಎಂದು ಘೋಷ್ ಹೆಮ್ಮೆಯಿಂದ ಹೇಳುತ್ತಾರೆ. ಆ ಮಾತಿಗೆ ಭೂಷಣ್ ದನಿಗೂಡಿಸಿದ: ‘ಇಲ್ಲಿಗೆ ಬರುವ ಗ್ರಾಹಕರು ನಮ್ಮ ಜತೆ ಮಾತಾಡುವಾಗ ನಮಗೆಲ್ಲ ಅನಿಸುವುದು ಒಂದೇ- ಸಮಾಜದಲ್ಲಿ ಮಾನವೀಯತೆ ಉಳಿದುಕೊಂಡಿದೆ. ನಾವು ಅಂದುಕೊಂಡಷ್ಟೇನೂ ಕೆಟ್ಟುಹೋಗಿಲ್ಲ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT